ಗೋವಾ ರಾಜ್ಯದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ಶ್ರೀ.ನರೇಂದ್ರ ಮೋದಿ ಅವರು ಮಡಗಾಂವ್ ರೈಲು ನಿಲ್ದಾಣದಿಂದ ನಾಳೆ, ಜೂನ್ 3 ರಂದು ಬೆಳಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಲಿದ್ದಾರೆ.
ಪ್ರಧಾನಮಂತ್ರಿಯವರ 'ಮೇಕ್ ಇನ್ ಇಂಡಿಯಾ' ಮತ್ತು ಆತ್ಮನಿರ್ಭರ ಭಾರತ್ ಪರಿಕಲ್ಪನೆಯಡಿ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಮುಂಬೈ-ಗೋವಾ ಮಾರ್ಗದಲ್ಲಿ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಈ ಭಾಗದ ಜನರಿಗೆ ವೇಗ ಮತ್ತು ಸೌಕರ್ಯದೊಂದಿಗೆ ಪ್ರಯಾಣಿಸಲು ಅನುಕೂಲವಾಗಲಿದೆ. ಈ ರೈಲು ದೇಶದ 19ನೇ ವಂದೇ ಭಾರತ್ ರೈಲು ಆಗಲಿದೆ.
ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್ ಮತ್ತು ಗೋವಾದ ಮಡಗಾಂವ್ ನಿಲ್ದಾಣದ ನಡುವೆ ರೈಲು ಸಂಚರಿಸಲಿದೆ. ಇದು ಸರಿಸುಮಾರು ಏಳೂವರೆ ಗಂಟೆಗಳ ಪ್ರಯಾಣವನ್ನು ಒಳಗೊಂಡಿದ್ದು. ಎರಡು ಸ್ಥಳಗಳ ಮಧ್ಯೆ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಸುಮಾರು ಒಂದು ಗಂಟೆ ಪ್ರಯಾಣದ ಅವಧಿಯನ್ನು ಉಳಿಸಲು ಸಹಾಯ ಮಾಡುತ್ತದೆ.
ಸ್ಥಳೀಯವಾಗಿ ತಯಾರಿಸಲಾದ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲು ವಿಶ್ವ ದರ್ಜೆಯ ಸೌಕರ್ಯಗಳು ಮತ್ತು ಕವಚ್ ತಂತ್ರಜ್ಞಾನ ಸೇರಿದಂತೆ ಸುಧಾರಿತ ಅತ್ಯಾಧುನಿಕ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿದೆ. ಎರಡೂ ರಾಜ್ಯಗಳಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಇದು ಸಹಾಯ ಮಾಡುತ್ತದೆ.