ಅಸ್ಸಾಂನ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮೇ 29 ರಂದು ಮಧ್ಯಾಹ್ನ 12 ಗಂಟೆಗೆ ವಿಡಿಯೊ ಸಮಾವೇಶ ಮೂಲಕ ಚಾಲನೆ ನೀಡಲಿದ್ದಾರೆ.
ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ ಈ ಪ್ರದೇಶದ ಜನರಿಗೆ ವೇಗ ಮತ್ತು ಉತ್ತಮ ಸೌಕರ್ಯದೊಂದಿಗೆ ಸಂಚರಿಸಲು ರೈಲು ಮಾರ್ಗವನ್ನು ಒದಗಿಸುತ್ತದೆ. ಇದು ಈ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುತ್ತದೆ. ನ್ಯೂ ಜಲ್ಪೈಗುರಿ ಹಾಗು ಗುವಾಹಟಿಯ ನಡುವೆ ಸಂಪರ್ಕ ಕಲ್ಪಿಸುವ ರೈಲು , ಈ ಎರಡು ಸ್ಥಳಗಳನ್ನು ಸಂಪರ್ಕಿಸುವ ಪ್ರಸ್ತುತ ವೇಗದ ರೈಲಿಗೆ ಹೋಲಿಸಿದರೆ ಸುಮಾರು ಒಂದು ಗಂಟೆ ಪ್ರಯಾಣದ ಸಮಯವನ್ನು ಉಳಿಸುತ್ತದೆ. ವಂದೇ ಭಾರತ್ ರೈಲು 5 ಗಂಟೆ 30 ನಿಮಿಷಗಳಲ್ಲಿ ಪ್ರಯಾಣವನ್ನು ಪೂರ್ತಿಗೊಳಿಸುತ್ತದೆ, ಆದರೆ ಪ್ರಸ್ತುತ ಇರುವ ವೇಗದ ರೈಲು ಅದೇ ಸಂಚಾರಕ್ಕಾಗಿ 6 ಗಂಟೆ 30 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಪ್ರಧಾನಮಂತ್ರಿಯವರು ಹೊಸದಾಗಿ ವಿದ್ಯುದ್ದೀಕರಣಗೊಂಡ ವಿಭಾಗಗಳ 182 ರೂಟ್ ಕಿಲೋಮೀಟರ್‌ಗಳನ್ನು ದೇಶಕ್ಕೆ ಸಮರ್ಪಿಸಲಿದ್ದಾರೆ. ಇದು ಹೆಚ್ಚಿನ ವೇಗದಲ್ಲಿ ಚಲಿಸುವ ರೈಲುಗಳೊಂದಿಗೆ ಮಾಲಿನ್ಯ ಮುಕ್ತ ಸಾರಿಗೆಯನ್ನು ಒದಗಿಸಲು ಮತ್ತು ರೈಲುಗಳ ಸಂಚಾರದ ಸಮಯವನ್ನು ಕಡಿಮೆ ಮಾಡಲು ಸಹಾಯ ಮಾಡಲಿವೆ. ಇದು ವಿದ್ಯುತ್ ಮೂಲಕ ಚಲಿಸುವ ರೈಲುಗಳಿಗೆ ಮೇಘಾಲಯದೊಂದಿಗೆ ಸಂಪರ್ಕ ಕಲ್ಪಿಸುವ ಅವಕಾಶವನ್ನು ಕೂಡ ಒದಗಿಸುತ್ತದೆ.
ಪ್ರಧಾನಮಂತ್ರಿಯವರು ಅಸ್ಸಾಂನ ಲುಮ್‌ಡಿಂಗ್‌ನಲ್ಲಿ ಹೊಸದಾಗಿ ನಿರ್ಮಿಸಲಾದ ಡೆಮು/ ಮೆಮು ಶೆಡ್ ಅನ್ನು ಕೂಡ ಉದ್ಘಾಟಿಸಲಿದ್ದಾರೆ. ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಡೆಮು ಬೋಗಿಗಳನ್ನು ನಿರ್ವಹಿಸಲು ಈ ಹೊಸ ಸೌಲಭ್ಯವು ಸಹಾಯಕವಾಗಲಿದೆ, ಇದು ಈ ಪ್ರದೇಶದ ರೈಲಿನ ಉತ್ತಮ ಸಂಚಾರ ಕಾರ್ಯಾಚರಣೆಯ ಕಾರ್ಯಸಾಧ್ಯತೆಗೆ ಕಾರಣವಾಗುತ್ತದೆ.