ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜನವರಿ 17ರಂದು ರಾತ್ರಿ 8.30ಕ್ಕೆ ವೀಡಿಯೊ ಕಾನ್ಫರೆನ್ಸ್ ಮೂಲಕ ‘ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಕಾರ್ಯಸೂಚಿ’ಯ ಸಮಾವೇಶ ಉದ್ದೇಶಿಸಿ “ವಿಶ್ವದ ಸ್ಥಿತಿಗತಿ” ಕುರಿತು ವಿಶೇಷ ಭಾಷಣ ಮಾಡಲಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ ದಾವೋಸ್ ಕಾರ್ಯಸೂಚಿಯ ವರ್ಚುವಲ್ ಸಮಾವೇಶವು ಜನವರಿ 17ರಿಂದ 21ರ ವರೆಗೆ ಜರುಗಲಿದೆ. ಈ ಕಾರ್ಯಕ್ರಮ ಉದ್ದೇಶಿಸಿ ಹಲವು ರಾಷ್ಟ್ರಗಳ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಭಾಷಣ ಮಾಡಲಿದ್ದಾರೆ. ಜಪಾನ್ ಪ್ರಧಾನ ಮಂತ್ರಿ ಕಿಶಿದಾ ಫುಮಿಯೊ, ಐರೋಪ್ಯ ಆಯೋಗದ ಅಧ್ಯಕ್ಷ ಉರ್ಸುವಾ ವೊನ್ ಡೆರ್ ಲೆಹೆನ್, ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಸ್ಕಾಟ್ ಮಾರಿಸನ್, ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೊಡೊ, ಇಸ್ರೋಲ್ ಪ್ರಧಾನ ಮಂತ್ರಿ ನಫ್ತಾಲಿ ಬೆನೆಟ್, ಚೀನಾ ಅಧ್ಯಕ್ಷ ಜ್ಹಿ ಜಿನ್ ಪಿಂಗ್ ಮತ್ತು ಇತರೆ ಗಣ್ಯರು ಭಾಷಣ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಜಾಗತಿಕ ಉದ್ಯಮ ರಂಗ, ಅಂತಾರಾಷ್ಟ್ರೀಯ ಸಂಘಟನೆಗಳು ಮತ್ತು ಸಿವಿಲ್ ಸೊಸೈಟಿಯ ಉನ್ನತ ನಾಯಕರು ಮತ್ತು ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದು, ಇಡೀ ವಿಶ್ವ ಇದೀಗ ಎದುರಿಸುತ್ತಿರುವ ಗಂಭೀರ ಸವಾಲುಗಳನ್ನು ಪರಿಹರಿಸುವ ಮಾರ್ಗೋಪಾಯಗಳ ಕುರಿತು ಸಮಾಲೋಚನೆ, ಚರ್ಚೆ ಮತ್ತು ಸಂವಾದ ನಡೆಸಲಿದ್ದಾರೆ.