ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಮಧ್ಯಪ್ರದೇಶಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ, ನವೆಂಬರ್ 15ರ ಮಧ್ಯಾಹ್ನ ಸುಮಾರು 3 ಗಂಟೆಯ ಹೊತ್ತಿಗೆ ಮರು ಅಭಿವೃದ್ಧಿಗೊಂಡಿರುವ ರಾಣಿ ಕಮಲಾಪತಿ ರೈಲು ನಿಲ್ದಾಣವನ್ನು ಉದ್ಘಾಟಿಸಲಿದ್ದಾರೆ.
ಮಧ್ಯಪ್ರದೇಶದಲ್ಲಿ ಮರು ಅಭಿವೃದ್ಧಿಗೊಂಡಿರುವ ಪ್ರಥಮ ವಿಶ್ವದರ್ಜೆಯ ರೈಲು ನಿಲ್ದಾಣಕ್ಕೆ ಗೋಂಡ್ ಸಂಸ್ಥಾನದ ಶೌರ್ಯಶಾಲಿ ಮತ್ತು ನಿರ್ಭೀತ ರಾಣಿ ಕಮಲಾಪತಿ ಅವರ ಹೆಸರಿಟ್ಟು ರಾಣಿ ಕಮಲಾಪತಿ ರೈಲು ನಿಲ್ದಾಣ ಎಂದು ನಾಮಕರಣ ಮಾಡಲಾಗಿದೆ. ಖಾಸಗಿ ಸಾರ್ವಜನಿಕ ಪಾಲುದಾರಿಕೆ (ಪಿಪಿಪಿ) ಮಾದರಿಯಲ್ಲಿ ಮರು ಅಭಿವೃದ್ಧಿಹೊಂದಿರುವ ನಿಲ್ದಾಣವನ್ನು ಹಸಿರು ಕಟ್ಟಡವಾಗಿ ವಿನ್ಯಾಸಗೊಳಿಸಲಾಗಿದ್ದು, ದಿವ್ಯಾಂಗ ಜನರಿಗೆ ಸುಗಮ ಸಂಚಾರದ ಸೌಲಭ್ಯ ಸೇರಿದಂತೆ ಅತ್ಯಾಧುನಿಕ ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡಿದೆ. ಈ ನಿಲ್ದಾಣವನ್ನು ಬಹು ಮಾದರಿ ಸಾರಿಗೆ ತಾಣವಾಗಿ ಅಭಿವೃದ್ಧಿಪಡಿಸಲಾಗಿದೆ.
ಈ ಕಾರ್ಯಕ್ರಮದ ವೇಳೆ ಪ್ರಧಾನಮಂತ್ರಿಯವರು ಗೇಜ್ ಪರಿವರ್ತಿತ ಮತ್ತು ವಿದ್ಯುದ್ದೀಕರಣಗೊಂಡ ಉಜ್ಜಯಿನಿ ಫತೇಹಾಬಾದ್ ಚಂದ್ರವತಿಗಂಜ್ ಬ್ರಾಡ್ ಗೇಜ್ ವಿಭಾಗ, ಭೋಪಾಲ್ – ಬರ್ಖೇರಾ ವಿಭಾಗದಲ್ಲಿನ ಮೂರನೇ ಮಾರ್ಗ, ಗೇಜ್ ಪರಿವರ್ತಿತ ಮತ್ತು ವಿದ್ಯುದ್ದೀಕರಣಗೊಂಡ ಮತ್ಹೇಲಾ – ನಿಮರ್ ಖೇರಿ ಬ್ರಾಡ್ ಗೇಜ್ ವಿಭಾಗ ಮತ್ತು ವಿದ್ಯುದ್ದೀಕರಣಗೊಂಡ ಗುನಾ – ಗ್ವಾಲಿಯಾರ್ ವಿಭಾಗ ಸೇರಿದಂತೆ ಮಧ್ಯಪ್ರದೇಶ ರೈಲ್ವೆಯ ಹಲವು ಉಪಕ್ರಮಗಳನ್ನೂ ದೇಶಕ್ಕೆ ಸಮರ್ಪಿಸಲಿದ್ದಾರೆ. ಇದೇ ವೇಳೆ ಪ್ರಧಾನಮಂತ್ರಿಯವರು ಉಜ್ಜಯಿನಿ – ಇಂದೋರ್ ಮತ್ತು ಇಂದೋರ್ – ಉಜ್ಜಯಿನಿ ನಡುವೆ ಎರಡು ಮೆಮು ರೈಲುಗಳಿಗೂ ಹಸಿರು ನಿಶಾನೆ ತೋರಲಿದ್ದಾರೆ.