35 ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪಿಎಂ ಕೇರ್ಸ್ ನಿಂದ ನಿರ್ಮಿಸಿರುವ ಒತ್ತಡ ಹೀರಿಕೊಳ್ಳುವ [ಪಿಎಸ್ಎ] ಆಮ್ಲಜನಕ ಘಟಕಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. 2021 ರ ಅಕ್ಟೋಬರ್ 7 ರಂದು ಪ್ರಧಾನಮಂತ್ರಿ ಅವರು ಉತ್ತರಾಖಂಡದ ರಿಷಿಕೇಶ್ ದಲ್ಲಿ ಆಯೋಜಿಸಿರುವ ಸಮಾರಂಭದಲ್ಲಿ ಇವುಗಳನ್ನು ಉದ್ಘಾಟಿಸಲಿದ್ದಾರೆ. ಈ ಮೂಲಕ ದೇಶದ ಎಲ್ಲಾ ಜಿಲ್ಲೆಗಳಲ್ಲಿ ಪಿಎಸ್ಎ ಆಮ್ಲಜನಕ ಘಟಕಗಳನ್ನು ಹೊಂದಿದಂತಾಗಲಿದೆ. ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಮಾರಂಭವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ದೇಶಾದ್ಯಂತ 1224 ಪಿಎಸ್ಎ ಆಮ್ಲಜನಕ ಘಟಕಗಳನ್ನು ಪಿಎಂ ಕೇರ್ಸ್ ನಿಂದ ನಿರ್ಮಿಸಲಾಗಿದೆ. ಈ ಪೈಕಿ 1100 ಘಟಕಗಳು ಈಗಾಗಲೇ ಕಾರ್ಯಾರಂಭಮಾಡಿವೆ. ಇವುಗಳಿಂದ 1750 ಮೆಟ್ರಿಕ್ ಟನ್ ಆಮ್ಲಜನಕವನ್ನು ಪ್ರತಿದಿನ ಉದ್ಘಾಟಿಸಲಾಗುತ್ತಿದೆ. ಕೋವಿಡ್ – 19 ಸಾಂಕ್ರಾಮಿಕ ಕಂಡು ಬಂದ ನಂತರ ಭಾರತದ ವೈದ್ಯಕೀಯ ಆಮ್ಲಜನಕ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಲು ಸರ್ಕಾರ ಕೈಗೊಂಡ ಕ್ರಮಗಳಿಗೆ ಇದು ಸಾಕ್ಷಿಯಾಗಿದೆ.
ಗುಡ್ಡಗಾಡು ಪ್ರದೇಶಗಳು, ದ್ವೀಪಗಳು ಮತ್ತು ದುರ್ಗಮ ಭೂ ಪ್ರದೇಶಗಳನ್ನೊಳಗೊಂಡ ಸಂಕಿರ್ಣ ಸವಾಲುಗಳಿರುವ ಪ್ರದೇಶಗಳನ್ನು ಒಳಗೊಂಡಂತೆ ಎಲ್ಲಾ ಜಿಲ್ಲೆಗಳಲ್ಲೂ ವೈದ್ಯಕೀಯ ಆಮ್ಲಜನಕ ಘಟಕಗಳನ್ನು ಕಾರ್ಯಗತಗೊಳಿಸಲಾಗಿದೆ.
ಈ ಘಟಕಗಳಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಗಾಗಿ 7,000 ಕ್ಕೂ ಹೆಚ್ಚು ಜನರಿಗೆ ತರಬೇತಿ ನೀಡಲಾಗಿದೆ. ಸಂಯೋಜಿತ ವೆಬ್ ಪೋರ್ಟಲ್ ಮೂಲಕ ನೈಜ ಸಮಯದಲ್ಲಿ ತಮ್ಮ ಕಾರ್ಯ ಹಾಗೂ ಕಾರ್ಯಕ್ಷಮತೆಯ ಮೇಲ್ವಿಚಾರಣೆಗಾಗಿ ಅಂತರ್ಗತವಾಗಿರುವ ಇಂಟರ್ ನೆಟ್ ಆಫ್ ಥಿಂಗ್ಸ್ [ಐಒಟಿ] ಸಾಧನವನ್ನು ಸಹ ಅಳವಡಿಸಲಾಗಿದೆ.
ಈ ಸಮಾರಂಭದಲ್ಲಿ ಉತ್ತರಾಖಂಡದ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಅವರ ಜತೆ ಕೇಂದ್ರ ಆರೋಗ್ಯ ಸಚಿವರು ಸಹ ಉಪಸ್ಥಿತರಿರಲಿದ್ದಾರೆ.