ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ 2020 ರ ಜನವರಿ 22 ರಂದು PRAGATI- ಐಸಿಟಿ ಆಧಾರಿತ, ಸಕ್ರಿಯ ಆಡಳಿತ ಮತ್ತು ಸಮಯೋಚಿತ ಅನುಷ್ಠಾನಕ್ಕಾಗಿ ಬಹು-ಮಾದರಿ ವೇದಿಕೆ-ಯ 32 ನೇ ಸಂವಾದ ಸಭೆ ಡೆಯಲಿದೆ.
ಪ್ರಗತಿಯ ಹಿಂದಿನ ಮೂವತ್ತೊಂದನೇ ಸಂವಾದದಲ್ಲಿ, ಹನ್ನೆರಡು ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಪ್ರಧಾನಿಯವರು ಪರಿಶೀಲಿಸಿದ್ದರು. 2019 ರ ಕೊನೆಯ ಪ್ರಗತಿ ಸಭೆಯಲ್ಲಿ, 16 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ 61,000 ಕೋಟಿ ರೂ. ಗಳ ಒಂಭತ್ತು ಯೋಜನೆಗಳನ್ನು ಚರ್ಚೆಗೆ ತೆಗೆದುಕೊಳ್ಳಲಾಗಿತ್ತು. ವಿದೇಶದಲ್ಲಿ ಕೆಲಸ ಮಾಡುವ ಭಾರತೀಯ ನಾಗರಿಕರ ಕುಂದುಕೊರತೆ, ರಾಷ್ಟ್ರೀಯ ಕೃಷಿ ಮಾರುಕಟ್ಟೆ, ಮಹತ್ವಾಕಾಂಕ್ಷಿ ಜಿಲ್ಲೆಗಳ ಕಾರ್ಯಕ್ರಮ ಮತ್ತು ಮೂಲಸೌಕರ್ಯ ಅಭಿವೃದ್ಧಿ ಕಾರ್ಯಕ್ರಮಗಳಂತಹ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆದವು.
2015 ರ ಮಾರ್ಚ್ 25 ರಂದು ಪ್ರಧಾನ ಮಂತ್ರಿಯವರು ಬಹುಪಯೋಗಿ ಮತ್ತು ಬಹು-ಮಾದರಿ ಆಡಳಿತ ವೇದಿಕೆಯಾದ PRAGATI ಗೆ ಚಾಲನೆ ನೀಡಿದ್ದರು. ‘ಪ್ರಗತಿ’ ಜನಸಾಮಾನ್ಯರ ಕುಂದುಕೊರತೆಗಳನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ಒಂದು ಸಂಯೋಜಕ ಮತ್ತು ಸಂವಾದಾತ್ಮಕ ವೇದಿಕೆಯಾಗಿದೆ. ಭಾರತ ಸರ್ಕಾರದ ಪ್ರಮುಖ ಕಾರ್ಯಕ್ರಮಗಳು ಮತ್ತು ಯೋಜನೆಗಳು, ಹಾಗೆಯೇ ವಿವಿಧ ರಾಜ್ಯ ಸರ್ಕಾರಗಳು ಆರಂಭಿಸಿರುವ ಯೋಜನೆಗಳನ್ನು ಏಕಕಾಲದಲ್ಲಿ ಮೇಲ್ವಿಚಾರಣೆ ಮಾಡಲು ಮತ್ತು ಪರಿಶೀಲಿಸಲು ‘ಪ್ರಗತಿ’ ನೆರವಾಗುತ್ತದೆ.