ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2022 ರ ಅಕ್ಟೋಬರ್ 28 ರಂದು ಬೆಳಿಗ್ಗೆ 10:30 ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ರಾಜ್ಯಗಳ ಗೃಹ ಸಚಿವರ ಚಿಂತನ್ ಶಿವರ್ (ಚಿಂತನ ಶಿಬಿರ) ಉದ್ದೇಶಿಸಿ ಮಾತನಾಡಲಿದ್ದಾರೆ. 2022 ರ ಅಕ್ಟೋಬರ್ 27 ಮತ್ತು 28 ರಂದು ಹರಿಯಾಣದ ಸೂರಜ್ ಕುಂಡದಲ್ಲಿ ಚಿಂತನ್ ಶಿಬಿರವನ್ನು ಆಯೋಜಿಸಲಾಗಿದೆ. ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮಹಾನಿರ್ದೇಶಕರು (ಡಿಜಿಪಿಗಳು) ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (ಸಿಎಪಿಎಫ್) ಮತ್ತು ಕೇಂದ್ರ ಪೊಲೀಸ್ ಸಂಸ್ಥೆಗಳ (ಸಿಪಿಒ) ಮಹಾನಿರ್ದೇಶಕರು ಚಿಂತನ್ ಶಿವರ್ ನಲ್ಲಿ ಭಾಗವಹಿಸಲಿದ್ದಾರೆ.
ಗೃಹ ಸಚಿವರ ಚಿಂತನ್ ಶಿವರ್ ಎಂಬುದು ಆಂತರಿಕ ಭದ್ರತೆಗೆ ಸಂಬಂಧಿಸಿದ ವಿಷಯಗಳಲ್ಲಿ ನೀತಿ ನಿರೂಪಣೆಗೆ ರಾಷ್ಟ್ರೀಯ ದೃಷ್ಟಿಕೋನವನ್ನು ಒದಗಿಸುವ ಪ್ರಯತ್ನವಾಗಿದೆ, ಇದು ಪ್ರಧಾನಮಂತ್ರಿಯವರು ತಮ್ಮ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ ಪಂಚ ಪ್ರಾಣ್ ಗೆ ಅನುಗುಣವಾಗಿದೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯಲ್ಲಿ ಆಯೋಜನೆಯಾಗಿರುವ ಈ ಶಿಬಿರವು, ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಭಾಗೀದಾರರ ನಡುವೆ ಯೋಜನೆ ಮತ್ತು ಸಮನ್ವಯದಲ್ಲಿ ಹೆಚ್ಚಿನ ಸಂಯೋಜನೆಯನ್ನು ತರುತ್ತದೆ.
ಪೊಲೀಸ್ ಪಡೆಗಳ ಆಧುನೀಕರಣ, ಸೈಬರ್ ಅಪರಾಧ ನಿರ್ವಹಣೆ, ಅಪರಾಧ ನ್ಯಾಯ ವ್ಯವಸ್ಥೆಯಲ್ಲಿ ಮಾಹಿತಿ ತಂತ್ರಜ್ಞಾನದ ಬಳಕೆ ಹೆಚ್ಚಳ, ಭೂ ಗಡಿ ನಿರ್ವಹಣೆ, ಕರಾವಳಿ ಭದ್ರತೆ, ಮಹಿಳಾ ಸುರಕ್ಷತೆ, ಮಾದಕ ದ್ರವ್ಯ ಕಳ್ಳಸಾಗಣೆ ಮುಂತಾದ ವಿಷಯಗಳ ಬಗ್ಗೆ ಶಿಬಿರದಲ್ಲಿ ಚರ್ಚೆಯಾಗಲಿದೆ.