ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ನವೆಂಬರ್ 26 ರಂದು 80 ನೇ ಅಖಿಲ ಭಾರತ ಸಭಾಧ್ಯಕ್ಷರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದಾರೆ.
ಅಖಿಲ ಭಾರತ ಸಭಾಧ್ಯಕ್ಷರ ಸಮ್ಮೇಳನ 1921 ರಲ್ಲಿ ಪ್ರಾರಂಭವಾಯಿತು. ಈ ವರ್ಷವನ್ನು ಸಭಾಧ್ಯಕ್ಷರ ಸಮ್ಮೇಳನದ ಶತಮಾನೋತ್ಸವವಾಗಿಯೂ ಆಚರಿಸಲಾಗುತ್ತಿದೆ. ಶತಮಾನೋತ್ಸವವನ್ನು ಆಚರಿಸಲು, ಎರಡು ದಿನಗಳ ಸಮ್ಮೇಳನವನ್ನು ನವೆಂಬರ್ 25-26ರಂದು ಗುಜರಾತ್ನ ಕೆವಾಡಿಯಾದಲ್ಲಿ ಆಯೋಜಿಸಲಾಗಿದೆ. ಈ ವರ್ಷದ ಸಮ್ಮೇಳನದ ವಿಷಯ "ರೋಮಾಂಚಕ ಪ್ರಜಾಪ್ರಭುತ್ವಕ್ಕೆ ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ನಡುವಿನ ಸಾಮರಸ್ಯದ ಸಮನ್ವಯ".
ಸಮ್ಮೇಳನವನ್ನು ನವೆಂಬರ್ 25 ರಂದು ರಾಷ್ಟ್ರಪತಿ ಶ್ರೀ ರಾಮನಾಥ್ ಕೋವಿಂದ್ ಅವರು ಉದ್ಘಾಟಿಸಲಿದ್ದಾರೆ. ಸಮ್ಮೇಳನದಲ್ಲಿ ಉಪ ರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷರಾದ ಶ್ರೀ ಎಂ.ವೆಂಕಯ್ಯ ನಾಯ್ಡು, ಲೋಕಸಭಾಧ್ಯಕ್ಷರು ಮತ್ತು ಸಮ್ಮೇಳನದ ಅಧ್ಯಕ್ಷರಾದ ಶ್ರೀ ಓಂ ಬಿರ್ಲಾ, ಗುಜರಾತ್ ರಾಜ್ಯಪಾಲರಾದ ಶ್ರೀ ಆಚಾರ್ಯ ದೇವವ್ರತ್, ಗುಜರಾತ್ ಮುಖ್ಯಮಂತ್ರಿ ಶ್ರೀ ವಿಜಯ್ ರೂಪಾನಿ ಮತ್ತಿತರ ಗಣ್ಯರು ಭಾಗವಹಿಸಲಿದ್ದಾರೆ.