ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್‌ನ ಗಾಂಧಿನಗರದಲ್ಲಿ 3 ನೇ ಜಾಗತಿಕ ಆಲೂಗಡ್ಡೆ ಸಮಾವೇಶವನ್ನು ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ನಾಳೆ ಅಂದರೆ ಜನವರಿ 28 ರಂದು ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಯವರು ಈ ಸಂದರ್ಭದಲ್ಲಿ ಆಲೂಗಡ್ಡೆ ಸಂಶೋಧನೆ, ವ್ಯಾಪಾರ ಮತ್ತು ಕೈಗಾರಿಕೆ ಮತ್ತು ಮೌಲ್ಯ ಸರಪಳಿ ನಿರ್ವಹಣೆ ಕ್ಷೇತ್ರದಲ್ಲಿ ಸಾಧನೆಗಳು ಮತ್ತು ಅವಕಾಶಗಳ ಬಗೆಗಿನ ಒಟ್ಟಾರೆ ದೃಷ್ಟಿಕೋನ ಮತ್ತು ಈ ದಶಕಕ್ಕೆ ಒಂದು ಮಾರ್ಗಸೂಚಿಯನ್ನು ನಿಗದಿಪಡಿಸುವ ನಿರೀಕ್ಷೆಯಿದೆ.
ಪ್ರಸ್ತುತ ಸಮಾವೇಶವು ಸರಣಿಯಲ್ಲಿ ಮೂರನೆಯದಾಗಿದೆ. ಪ್ರತಿ ಹತ್ತು ವರ್ಷಗಳ ಅಂತರದಲ್ಲಿ ಆಲೂಗೆಡ್ಡೆ ಕ್ಷೇತ್ರದ ಸಾಧನೆಗಳನ್ನು ರೂಪಿಸುವುದು ಮತ್ತು ಮುಂಬರುವ ದಶಕಕ್ಕೆ ಮಾರ್ಗಸೂಚಿಯನ್ನು ರೂಪಿಸುವುದು ಅವಶ್ಯಕವಾಗಿದೆ. ಈ ದಿಕ್ಕಿನಲ್ಲಿ, ಕಳೆದ ಎರಡು ದಶಕಗಳಲ್ಲಿ 1999 ಮತ್ತು 2008 ರ ಅವಧಿಯಲ್ಲಿ ಎರಡು ಜಾಗತಿಕ ಆಲೂಗಡ್ಡೆ ಸಮ್ಮೇಳನಗಳನ್ನು ಆಯೋಜಿಸಲಾಗಿದೆ.
ಎಲ್ಲಾ ಪಾಲುದಾರರನ್ನು ಒಂದೇ ವೇದಿಕೆಯಲ್ಲಿ ತರಲು ಸಮಾವೇಶ ಅವಕಾಶವನ್ನು ಒದಗಿಸುತ್ತದೆ. ಸಮಾವೇಶದಲ್ಲಿ ಎಲ್ಲಾ ಸಮಸ್ಯೆಗಳ ಬಗ್ಗೆ ಚರ್ಚಿಸಲಾಗುತ್ತದೆ ಮತ್ತು ಆಲೂಗೆಡ್ಡೆ ವಲಯಕ್ಕೆ ಸಂಬಂಧಿಸಿದ ಪ್ರತಿಯೊಬ್ಬರನ್ನು ಒಳಗೊಂಡ ಭವಿಷ್ಯದ ಯೋಜನೆಗಳನ್ನು ರೂಪಿಸಲಾಗುತ್ತದೆ. ದೇಶದ ವಿವಿಧ ಪಾಲುದಾರರನ್ನು ಆಲೂಗೆಡ್ಡೆ ಸಂಶೋಧನೆಯಲ್ಲಿನ ಜ್ಞಾನ ಮತ್ತು ನಾವೀನ್ಯತೆಗಳಿಗೆ ಒಡ್ಡಲು ಇದೊಂದು ವಿಶಿಷ್ಟ ಕಾರ್ಯಕ್ರಮವಾಗಿದೆ.
ಗುಜರಾತ್ ದೇಶದ ಆಲೂಗಡ್ಡೆ ಉತ್ಪಾದನೆಯ ಪ್ರಮುಖ ರಾಜ್ಯಗಳಲ್ಲೊಂದಾಗಿದೆ. ಕಳೆದ ಹನ್ನೊಂದು ವರ್ಷಗಳಲ್ಲಿ, ಭಾರತದಲ್ಲಿ ಆಲೂಗೆಡ್ಡೆ ಬೆಳೆಯುವ ಪ್ರದೇಶವು ಶೇ.19 ರಷ್ಟು ಹೆಚ್ಚಾಗಿದ್ದರೆ, ಇದು ಗುಜರಾತ್‌ನಲ್ಲಿ ಸುಮಾರು ಶೇ.170 ರಷ್ಟು ಹೆಚ್ಚಾಗಿದೆ (2006-07ರಲ್ಲಿ 49.7 ಸಾವಿರ ಹೆಕ್ಟೇರ್ 2017-18ರಲ್ಲಿ 133 ಸಾವಿರ ಹೆಕ್ಟೇರ್‌ಗೆ). ಹೆಕ್ಟೇರಿಗೆ 30 ಟನ್ ಗಿಂತ ಹೆಚ್ಚಿನ ಉತ್ಪಾದನೆಯೊಂದಿಗೆ ಗುಜರಾತ್ ಕಳೆದ ಒಂದು ದಶಕದಿಂದ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಆಲೂಗಡ್ಡೆ ಕೃಷಿಯಲ್ಲಿ ಸಿಂಪಡಣೆ ಮತ್ತು ಹನಿ ನೀರಾವರಿಯಂತಹ ಆಧುನಿಕ ಕೃಷಿ ವಿಧಾನಗಳನ್ನು ರಾಜ್ಯವು ಅಳವಡಿಸಿಕೊಂಡಿದೆ.
ಶೀಥಲೀಕರಣ ಸೌಲಭ್ಯಗಳು ಮತ್ತು ಸಂಪರ್ಕಗಳನ್ನು ಹೊಂದಿರುವ ಗುಜರಾತ್, ದೇಶದ ಪ್ರಮುಖ ಆಲೂಗೆಡ್ಡೆ ಸಂಸ್ಕರಣಾ ಕೈಗಾರಿಕೆಗಳಿಗೆ ಕೇಂದ್ರವಾಗಿದೆ.
ಇದಲ್ಲದೆ ಆಲೂಗೆಡ್ಡೆ ರಫ್ತುದಾರರಲ್ಲಿ ಹೆಚ್ಚಿನವರು ಗುಜರಾತ್ ಮೂಲದವರಾಗಿದ್ದಾರೆ. ಈ ಎಲ್ಲ ಅಂಶಗಳು ದೇಶದ ಪ್ರಮುಖ ಆಲೂಗೆಡ್ಡೆ ಕೇಂದ್ರವಾಗಿ ಈ ರಾಜ್ಯ ಹೊರಹೊಮ್ಮಲು ಕಾರಣವಾಗಿವೆ.
ಈ ಹಿನ್ನೆಲೆಯಲ್ಲಿಯೇ ಗುಜರಾತ್‌ನಲ್ಲಿ 3 ನೇ ಜಾಗತಿಕ ಆಲೂಗಡ್ಡೆ ಸಮಾವೇಶ ನಡೆಯುತ್ತಿದೆ.
ನವದೆಹಲಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಮತ್ತು ಶಿಮ್ಲಾದ ಐಸಿಎಆರ್-ಕೇಂದ್ರೀಯ ಆಲೂಗಡ್ಡೆ ಸಂಶೋಧನಾ ಸಂಸ್ಥೆ ಹಾಗೂ ಪೆರುವಿನ ಲಿಮಾದ, ಅಂತಾರಾಷ್ಟ್ರೀಯ ಆಲೂಗಡ್ಡೆ ಕೇಂದ್ರ (ಸಿಐಪಿ) ಗಳ ಸಹಯೋಗದೊಂದಿಗೆ ಸಮಾವೇಶವನ್ನು ಭಾರತೀಯ ಆಲೂಗಡ್ಡೆ ಸಂಘ (ಐಪಿಎ) ಆಯೋಜಿಸುತ್ತಿದೆ.
ಈ ಬೃಹತ್ ಸಮಾವೇಶ ಮೂರು ಪ್ರಮುಖ ಅಂಶಗಳನ್ನು ಹೊಂದಿದೆ;
(i) ಆಲೂಗಡ್ಡೆ ಸಮ್ಮೇಳನ
(ii) ಕೃಷಿ ಎಕ್ಸ್‌ಪೋ
(iii) ಆಲೂಗಡ್ಡೆ ಕ್ಷೇತ್ರ ದಿನ
ಆಲೂಗಡ್ಡೆ ಸಮ್ಮೇಳನವನ್ನು 2020 ರ ಜನವರಿ 28 ರಿಂದ 30ರವರೆಗೆ 3 ದಿನಗಳವರೆಗೆ ನಡೆಸಲಾಗುವುದು. ಇದು 10 ವಿಷಯಗಳನ್ನು ಹೊಂದಿರುತ್ತದೆ, ಅದರಲ್ಲಿ 8 ವಿಷಯಗಳು ಮೂಲ ಮತ್ತು ಅನ್ವಯಿಕ ಸಂಶೋಧನೆಗಳನ್ನು ಆಧರಿಸಿವೆ. ಉಳಿದ ಎರಡು ವಿಷಯಗಳು ಆಲೂಗೆಡ್ಡೆ ವ್ಯಾಪಾರ, ಮೌಲ್ಯಸರಪಳಿ ನಿರ್ವಹಣೆ ಮತ್ತು ನೀತಿ ವಿಷಯಗಳಿಗೆ ವಿಶೇಷ ಒತ್ತು ನೀಡುತ್ತವೆ.
ಆಲೂಗಡ್ಡೆ ಆಧಾರಿತ ಕೈಗಾರಿಕೆಗಳ ಸ್ಥಿತಿ ಮತ್ತು ವ್ಯಾಪಾರ, ಸಂಸ್ಕರಣೆ, ಆಲೂಗಡ್ಡೆ ಬೀಜ ಉತ್ಪಾದನೆ, ಜೈವಿಕ ತಂತ್ರಜ್ಞಾನ, ತಂತ್ರಜ್ಞಾನ ವರ್ಗಾವಣೆಯಲ್ಲಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮತ್ತು ರೈತರಿಗೆ ಸಂಬಂಧಿಸಿದ ಉತ್ಪನ್ನಗಳು ಇತ್ಯಾದಿಗಳನ್ನು ಪ್ರದರ್ಶಿಸುವ ಕೃಷಿ ಎಕ್ಸ್‌ಪೋವನ್ನು ಜನವರಿ 28 ರಿಂದ 30 ರವರೆಗೆ ಆಯೋಜಿಸಲಾಗಿದೆ.
ಆಲೂಗಡ್ಡೆ ಕ್ಷೇತ್ರ ದಿನವನ್ನು ಜನವರಿ 31, 2020 ರಂದು ಆಯೋಜಿಸಲಾಗುವುದು. ಇದರಲ್ಲಿ ಆಲೂಗಡ್ಡೆ ಯಾಂತ್ರೀಕರಣ, ಆಲೂಗಡ್ಡೆ ಪ್ರಭೇದಗಳು ಮತ್ತು ಇತ್ತೀಚಿನ ತಂತ್ರಜ್ಞಾನಗಳಲ್ಲಿನ ಪ್ರಗತಿಯ ಪ್ರದರ್ಶನ ಇರುತ್ತದೆ.
ನಾಟಿ ಮಾಡುವ ಸಾಮಗ್ರಿಗಳ ಕೊರತೆ, ಸರಬರಾಜು ಸರಪಳಿಗಳು, ಕೊಯ್ಲಿನ ನಂತರದ ನಷ್ಟಗಳು, ವರ್ಧಿತ ಸಂಸ್ಕರಣೆಯ ಅಗತ್ಯತೆಗಳು, ರಫ್ತು ಮತ್ತು ವೈವಿಧ್ಯಮಯ ಬಳಕೆ ಮತ್ತು ಪ್ರಮಾಣೀಕೃತ ಬೀಜದ ಉತ್ಪಾದನೆ ಮತ್ತು ಬಳಕೆ, ದೂರದ ಸಾಗಣೆ ಮತ್ತು ರಫ್ತು ಪ್ರಚಾರ ದಂತಹ ವಿಷಯಗಳಿಗೆ ಅಗತ್ಯ ನೀತಿಯ ಬೆಂಬಲ ಮುಂತಾದ ಪ್ರಮುಖ ವಿಷಯಗಳು ಇಲ್ಲಿ ಚರ್ಚೆಯಾಗಲಿವೆ.