ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಕಛ್ ನ ಧೋರ್ಡೊದಲ್ಲಿರುವ ಮಹಿಳಾ ಸಂತರ ಶಿಬಿರದಲ್ಲಿ ಸಂಜೆ 6 ಗಂಟೆಗೆ ವಾಸ್ತವೋಪಮ (ವಿಡಿಯೋ ಕಾನ್ಫರೆನ್ಸಿಂಗ್) ದ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನದ ವಿಚಾರ ಸಂಕಿರಣವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸಮಾಜದಲ್ಲಿ ಮಹಿಳಾ ಸಂತರ ಪಾತ್ರ ಮತ್ತು ಮಹಿಳಾ ಸಬಲೀಕರಣಕ್ಕೆ ಅವರ ಕೊಡುಗೆಯನ್ನು ಗುರುತಿಸಲು ಈ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ. ಧೋರ್ಡೊದಲ್ಲಿ ನಡೆಯುವ ವಿಚಾರ ಸಂಕಿರಣದಲ್ಲಿ 500 ಕ್ಕೂ ಹೆಚ್ಚು ಮಹಿಳಾ ಸಂತರು ಭಾಗವಹಿಸಲಿದ್ದಾರೆ.
ವಿಚಾರ ಸಂಕಿರಣವು ಸಂಸ್ಕೃತಿ, ಧರ್ಮ, ಸ್ತ್ರೀಯರ ಉನ್ನತಿ, ಭದ್ರತೆ, ಸಾಮಾಜಿಕ ಸ್ಥಾನಮಾನ ಮತ್ತು ಭಾರತ ಸಂಸ್ಕೃತಿಯಲ್ಲಿ ಮಹಿಳೆಯರ ಪಾತ್ರದ ಕುರಿತು ಕಾರ್ಯಕ್ರಮಗಳನ್ನು ಒಳಗೊಂಡಿರುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಕಲ್ಯಾಣ ಯೋಜನೆಗಳ ಜೊತೆಗೆ ಮಹಿಳೆಯರ ಸಾಧನೆಗಳ ಬಗ್ಗೆಯೂ ಚರ್ಚಿಸಲಾಗುವುದು.
ವಿಚಾರ ಸಂಕಿರಣದಲ್ಲಿ ಕೇಂದ್ರ ಸಚಿವರಾದ ಶ್ರೀಮತಿ ಸ್ಮೃತಿ ಜುಬಿನ್ ಇರಾನಿ, ಕೇಂದ್ರ ರಾಜ್ಯ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ, ಡಾ. ಭಾರತಿ ಪ್ರವೀಣ್ ಪವಾರ್ ಅವರು ಭಾಗವಹಿಸುವರು. ಸಮಾರಂಭದಲ್ಲಿ ಸಾಧ್ವಿ ಋತಂಬರ, ಮಹಾ ಮಂಡಳೇಶ್ವರ ಕನಕೇಶ್ವರಿ ದೇವಿ ಮತ್ತಿತರರು ಭಾಗವಹಿಸಲಿದ್ದಾರೆ.