ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನ ಭವನದಲ್ಲಿ ನವೆಂಬರ್ 3ರಂದು ಬೆಳಗ್ಗೆ 11 ಗಂಟೆಗೆ ಕೇಂದ್ರ ಜಾಗೃತ ಆಯೋಗದ (ಸಿವಿಸಿ) ವಿಚಕ್ಷಣಾ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಈ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಸಿವಿಸಿಯ ದೂರು ನಿರ್ವಹಣಾ ವ್ಯವಸ್ಥೆಯ ಹೊಸ ಪೋರ್ಟಲ್ ಅನಾವರಣಗೊಳಿಸಲಿದ್ದಾರೆ. ಈ ಪೋರ್ಟಲ್, ಸಾರ್ವಜನಿಕರ ದೂರುಗಳ ಸ್ಥಿತಿಗತಿಯನ್ನು ನಿಯಮಿತವಾಗಿ ಪರಿಷ್ಕರಿಸಿ, ಸಮಗ್ರ ಮಾಹಿತಿ ಒದಗಿಸುತ್ತದೆ. ಅಲ್ಲದೆ, ಪ್ರಧಾನ ಮಂತ್ರಿ ಅವರು "ನೈತಿಕತೆ ಮತ್ತು ಉತ್ತಮ ಅಭ್ಯಾಸಗಳು" ಕುರಿತು ಚಿತ್ರಾತ್ಮಕ ಕಿರುಪುಸ್ತಕಗಳ ಸರಣಿ, ಸಾರ್ವಜನಿಕ ಖರೀದಿ ಪ್ರಕ್ರಿಯೆಯಲ್ಲಿ ಉತ್ತಮ ಅಭ್ಯಾಸಗಳ ಸಂಕಲನ "ಪ್ರಿವೆಂಟೀವ್ ವಿಜಿಲೆನ್ಸ್" ಮತ್ತು ವಿಶೇಷ ಸಂಚಿಕೆ "ವಿಜೆಯೆ ವಾಣಿ (VIGEYE-VANI)" ಲೋಕಾರ್ಪಣೆ ಮಾಡಲಿದ್ದಾರೆ.
ಎಲ್ಲಾ ಕ್ಷೇತ್ರಗಳಲ್ಲಿ ಏಕತೆ ಮತ್ತು ಸಮಗ್ರತೆಯ ಸಂದೇಶ ಸಾರುವ ಉದ್ದೇಶದಿಂದ ಸಿವಿಸಿ, ಎಲ್ಲಾ ಪಾಲುದಾರರನ್ನು ಒಟ್ಟುಗೂಡಿಸಲು ಪ್ರತಿ ವರ್ಷ ವಿಚಕ್ಷಣಾ ಜಾಗೃತಿ ಸಪ್ತಾಹ ಆಚರಿಸುತ್ತಾ ಬಂದಿದೆ. ಈ ವರ್ಷ "ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ" ಎಂಬ ಘೋಷವಾಕ್ಯದೊಂದಿಗೆ ಅಕ್ಟೋಬರ್ 31ರಿಂದ ನವೆಂಬರ್ 6ರ ವರೆಗೆ ಸಪ್ತಾಹ ಆಚರಿಸಲಾಗುತ್ತಿದೆ. "ಅಭಿವೃದ್ಧಿ ಹೊಂದಿದ ರಾಷ್ಟ್ರಕ್ಕಾಗಿ ಭ್ರಷ್ಟಾಚಾರ ಮುಕ್ತ ಭಾರತ" ಎಂಬ ಘೋಷವಾಕ್ಯದ ಮೇಲೆ ಸಿವಿಸಿ, ರಾಷ್ಟ್ರವ್ಯಾಪಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರಬಂಧಗಳನ್ನು ಬರೆದ 5 ವಿದ್ಯಾರ್ಥಿಗಳಿಗೆ ಪ್ರಧಾನ ಮಂತ್ರಿ ಮೋದಿ ಅವರು ಬಹುಮಾನಗಳನ್ನು ನೀಡಲಿದ್ದಾರೆ.