ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ನ ಆನಂದ್ ನಲ್ಲಿ 2021ರ ಡಿಸೆಂಬರ್ 16ರಂದು ಬೆಳಗ್ಗೆ 11 ಗಂಟೆಗೆ ಕೃಷಿ ಮತ್ತು ಆಹಾರ ಸಂಸ್ಕರಣೆ ಕುರಿತ ರಾಷ್ಟ್ರೀಯ ಶೃಂಗಸಭೆಯ ಸಮಾರೋಪ ಸಮಾರಂಭದಲ್ಲಿ ರೈತರನ್ನುದ್ದೇಶಿಸಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಭಾಷಣ ಮಾಡಲಿದ್ದಾರೆ. ಶೃಂಗಸಭೆಯು ನೈಸರ್ಗಿಕ ಕೃಷಿಯ ಮೇಲೆ ಗಮನ ಹರಿಸಲಿದೆ. ನೈಸರ್ಗಿಕ ಕೃಷಿ ವಿಧಾನಗಳನ್ನು ಅಳವಡಿಸಿಕೊಳ್ಳುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ರೈತರಿಗೆ ಅಗತ್ಯ ಮಾಹಿತಿಯನ್ನು ಒದಗಿಸಲಾಗುತ್ತದೆ.
ರೈತರ ಕಲ್ಯಾಣದ ಬಗ್ಗೆ ಪ್ರಧಾನಮಂತ್ರಿಯವರ ದೃಷ್ಟಿಕೋನದಿಂದ ಸರ್ಕಾರ ಚಾಲಿತವಾಗಿದೆ. ಉತ್ಪಾದಕತೆಯಲ್ಲಿ ಹೆಚ್ಚಳವನ್ನು ಖಾತ್ರಿಪಡಿಸಿಕೊಳ್ಳಲು ಬದ್ಧವಾಗಿದ್ದು, ಇದರಿಂದ ರೈತರು ತಮ್ಮ ಕೃಷಿ-ಸಾಮರ್ಥ್ಯವನ್ನು ಗರಿಷ್ಠಗೊಳಿಸಲು ಸಾಧ್ಯವಾಗುತ್ತದೆ. ಕೃಷಿಯನ್ನು ಪರಿವರ್ತಿಸಲು ಮತ್ತು ರೈತರ ಆದಾಯವನ್ನು ಹೆಚ್ಚಿಸಲು ಸರ್ಕಾರ ಹಲವಾರು ಕ್ರಮಗಳನ್ನು ಪ್ರಾರಂಭಿಸಿದೆ. ವ್ಯವಸ್ಥೆಯ ಸುಸ್ಥಿರತೆ, ವೆಚ್ಚ ಕಡಿತ, ಮಾರುಕಟ್ಟೆ ಪ್ರವೇಶ ಮತ್ತು ರೈತರಿಗೆ ಉತ್ತಮ ಮೌಲ್ಯ ಸಾಕಾರಕ್ಕೆ ಕಾರಣವಾಗುವ ಉಪಕ್ರಮಗಳನ್ನು ಉತ್ತೇಜಿಸಲು ಮತ್ತು ಬೆಂಬಲಿಸಲು ಪ್ರಯತ್ನಗಳು ನಡೆಯುತ್ತಿವೆ.
ಶೂನ್ಯ ಆಯವ್ಯಯದ ನೈಸರ್ಗಿಕ ಕೃಷಿಯು, ರೈತರ ಕೃಷಿ ಅಗತ್ಯ ವಸ್ತುಗಳ ಖರೀದಿಯ ಅವಲಂಬನೆಯನ್ನು ತಗ್ಗಿಸಲು ಮತ್ತು ಸುಧಾರಿತ ಮಣ್ಣಿನ ಆರೋಗ್ಯ ಸುಧಾರಣೆಗೆ ಕಾರಣವಾಗುವ ಸಾಂಪ್ರದಾಯಿಕ ಕ್ಷೇತ್ರ ಆಧಾರಿತ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿಯ ವೆಚ್ಚವನ್ನು ತಗ್ಗಿಸಲು ಒಂದು ಭರವಸೆಯ ಸಾಧನವಾಗಿದೆ. ಇದರಲ್ಲಿ ದೇಸಿ ಹಸು, ಅವುಗಳ ಸಗಣಿ ಮತ್ತು ಗಂಜಲ ಪ್ರಮುಖ ಪಾತ್ರ ವಹಿಸುತ್ತದೆ, ಅದರಿಂದ ಜಮೀನಿನಲ್ಲಿ ವಿವಿಧ ಕೃಷಿಗೆ ಬೇಕಾದ ವಸ್ತುಗಳನ್ನು ತಯಾರಿಸಲಾಗುತ್ತದೆ ಮತ್ತು ಮಣ್ಣಿಗೆ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇತರ ಸಾಂಪ್ರದಾಯಿಕ ಅಭ್ಯಾಸಗಳೆಂದರೆ ಮಣ್ಣನ್ನು ಜೈವಿಕ ರಾಶಿಯಿಂದ ಮುಚ್ಚುವುದು ಅಥವಾ ಮಣ್ಣನ್ನು ವರ್ಷವಿಡೀ ಹಸಿರು ಹೊದಿಕೆಯಿಂದ ಮುಚ್ಚುವುದು, ಅತ್ಯಂತ ಕಡಿಮೆ ನೀರಿನ ಲಭ್ಯತೆಯ ಸಂದರ್ಭಗಳಲ್ಲಿಯೂ ಸಹ, ಅಳವಡಿಸಿಕೊಂಡ ಮೊದಲ ವರ್ಷದಿಂದಲೇ ನಿರಂತರ ಉತ್ಪಾದಕತೆಯನ್ನು ಖಾತ್ರಿಪಡಿಸುತ್ತದೆ.
ಅಂತಹ ಕಾರ್ಯತಂತ್ರಗಳಿಗೆ ಒತ್ತು ನೀಡಲು ಮತ್ತು ದೇಶಾದ್ಯಂತ ರೈತರಿಗೆ ಸಂದೇಶವನ್ನು ತಲುಪಿಸಲು, ಗುಜರಾತ್ ಸರ್ಕಾರವು ನೈಸರ್ಗಿಕ ಕೃಷಿಯ ಮೇಲೆ ಗಮನ ಕೇಂದ್ರೀಕರಿಸಿ ಕೃಷಿ ಮತ್ತು ಆಹಾರ ಸಂಸ್ಕರಣೆ ಕುರಿತ ರಾಷ್ಟ್ರೀಯ ಶೃಂಗಸಭೆಯನ್ನು ಆಯೋಜಿಸುತ್ತಿದೆ. 2021ರ ಡಿಸೆಂಬರ್ 14 ರಿಂದ 16 ರವರೆಗೆ ಮೂರು ದಿನಗಳ ಶೃಂಗಸಭೆಯನ್ನು ಆಯೋಜಿಸಲಾಗಿದೆ. ಈ ಶೃಂಗಸಭೆಯಲ್ಲಿ 5000ಕ್ಕೂ ಹೆಚ್ಚು ರೈತರು ಭಾಗವಹಿಸುತ್ತಿದ್ದು, ಇದರ ಜೊತೆಗೆ ರೈತರು ಐಸಿಎಆರ್ ನ ಕೇಂದ್ರೀಯ ಸಂಸ್ಥೆಗಳು, ಕೃಷಿ ವಿಜ್ಞಾನ ಕೇಂದ್ರಗಳು ಮತ್ತು ರಾಜ್ಯಗಳ ಎಟಿಎಂಎ (ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ) ಜಾಲದ ಮೂಲಕ ನೇರ ಪ್ರಸಾರದಲ್ಲಿ ಸಂಪರ್ಕಿತರಾಗಲಿದ್ದಾರೆ.