ನ. 25ರಂದು ನವದೆಹಲಿಯ ವಿಜ್ಞಾನ ಭವನದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಲಚಿತ್ ಬರ್ಫುಕನ್‌ನ 400ನೇ ಜನ್ಮ ದಿನಾಚರಣೆ ವರ್ಷಾಚರಣೆಯ ಸಮಾರೋಪ ಸಮಾರಂಭದಲ್ಲಿ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಭಾಷಣ ಮಾಡಲಿದ್ದಾರೆ.
ಅಜ್ಞಾತವಾಗಿ ಉಳಿದ ಸಾಧಕರು, ಹೋರಾಟಗಾರರ ಕೊಡುಗೆಯನ್ನು ಸ್ಮರಿಸಿ ಗೌರವಿಸುವ ಕಾರ್ಯವನ್ನು ಪ್ರಧಾನ ಮಂತ್ರಿಯವರು ನಿರಂತರವಾಗಿ ನಡೆಸಿಕೊಂಡು ಬಂದಿದ್ದಾರೆ. ಅದರಂತೆ 2022ನೇ ಸಾಲಿನಲ್ಲಿ ದೇವು ಲಚಿತ್ ಬರ್ಫುಕನ್ ಅವರ 400ನೇ ಜನ್ಮ ದಿನವನ್ನು ವರ್ಷವಿಡೀ ಆಚರಿಸಲಾಗುತ್ತಿದೆ. ಈ ಜನ್ಮದಿನಾಚರಣೆಯ ವಾರ್ಷಿಕ ಆಚರಣೆಯನ್ನು ಕಳೆದ ಫೆಬ್ರವರಿಯಲ್ಲಿ ನಿಟಕಪೂರ್ವ ರಾಷ್ಟ್ರಪತಿಗಳಾದ ರಾಮನಾಥ್ ಕೋವಿಂದ್ ಅವರು ಗುವಾಹಟಿಯಲ್ಲಿ ಉದ್ಘಾಟಿಸಿದ್ದನ್ನು ಸ್ಮರಿಸಬಹುದು.
ಲಚಿತ್ ಬರ್ಫುಕನ್ (1622ರ ನ. 24ರಿಂದ 1672 ಏ. 25) ಅಸ್ಸಾಂನ ಅಹೋಮ್ ಸಾಮ್ರಾಜ್ಯದ ಜನಪ್ರಿಯ ಸೇನಾ ಮುಖ್ಯಸ್ಥರಾಗಿದ್ದರು. ಮುಘಲರನ್ನು ಸೋಲಿಸುವ ಮೂಲಕ ಮೊಘಲರ ಸಾಮ್ರಾಟ ಔರಂಗಜೇಬನ ಸಾಮ್ರಾಜ್ಯ ವಿಸ್ತರಣೆಗೆ ತಡೆಯೊಡ್ಡುವಲ್ಲಿ ಯಶಸ್ವಿಯಾದ ಮಹಾನ್ ಯೋಧ. 1671ರಲ್ಲಿ ನಡೆದ ಸರೈಘಾಟ್ ಯುದ್ದದಲ್ಲಿ ಅಸ್ಸಾಮಿ ಸೈನಿಕರಿಗೆ ಸ್ಫೂರ್ತಿ ತುಂಬಿ ಹೋರಾಟ ನಡೆಸಿದ ಲಚಿತ್ ಬರ್ಫುಕನ್ ಮೊಘಲರ ಹೀನಾಯ, ಅವಮಾನಕರ ಸೋಲಿಗೆ ಕಾರಣರಾಗಿದ್ದರು. ಲಚಿತ್ ಬರ್ಫುಕನ್ ಹಾಗೂ ಅವನ ಸೈನ್ಯದ ವಿರೋಚಿತ ಹೋರಾಟವು ದೇಶದ ಪ್ರತಿರೋಧದ ಹೋರಾಟದಲ್ಲಿ ಸ್ಫೂರ್ತಿದಾಯಕ ಸೇನಾ ಸಾಹಸಗಾಥೆಯಾಗಿ ಇತಿಹಾಸದಲ್ಲಿ ಉಳಿದಿದೆ.