ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಅಕ್ಟೋಬರ್ 19ರಂದು ಬೆಳಗ್ಗೆ 11.15ಕ್ಕೆ ಮೈಸೂರು ವಿಶ್ವವಿದ್ಯಾಲಯದ 100ನೇ ಘಟಿಕೋತ್ಸವ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಲಿದ್ದಾರೆ. ಕರ್ನಾಟಕದ ರಾಜ್ಯಪಾಲರು ಮತ್ತು ವಿಶ್ವವಿದ್ಯಾಲಯದ ಇತರೆ ಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿರಲಿದ್ದಾರೆ. ವಿಶ್ವವಿದ್ಯಾಲಯದ ಶೈಕ್ಷಣಿಕ ಮತ್ತು ಸಿಂಡಿಕೇಟ್ ಮಂಡಳಿಯ ಸದಸ್ಯರು, ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು, ಸಕ್ಷಮ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ವಿಶ್ವವಿದ್ಯಾಲಯದ ಮಾಜಿ ಉಪಕುಲಪತಿಗಳು ಮತ್ತು ವಿದ್ಯಾರ್ಥಿಗಳು ಹಾಗೂ ಪೋಷಕರು ಘಟಿಕೋತ್ಸವಕ್ಕೆ ಆನ್ ಲೈನ್ ಮೂಲಕ ಸಾಕ್ಷಿಯಾಗಲಿದ್ದಾರೆ.
ವಿಶ್ವವಿದ್ಯಾಲಯದ ಕುರಿತು
ಮೈಸೂರು ವಿಶ್ವವಿದ್ಯಾಲಯ 1916ರ ಜುಲೈ 27ರಂದು ಸ್ಥಾಪನೆಯಾಯಿತು. ಅದು ದೇಶದ ಆರನೇ ಹಾಗೂ ಕರ್ನಾಟಕ ರಾಜ್ಯದ ಮೊದಲನೇ ವಿಶ್ವವಿದ್ಯಾಲಯವಾಗಿತ್ತು. ಈ ವಿಶ್ವವಿದ್ಯಾಲಯದ ಧ್ಯೇಯ ವಾಕ್ಯ ‘ನಹಿ ಜ್ಞಾನೇನ ಸದೃಶಂ’ ಅಂದರೆ ‘ಜ್ಞಾನಕ್ಕೆ ಸಮನಾದುದು ಯಾವುದು ಇಲ್ಲ’ ಎಂಬುದು. ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾದ ಗೌರವಾನ್ವಿತ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅಂದಿನ ದಿವಾನರಾಗಿದ್ದ ಸರ್ ಎಂ. ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯಿಂದಾಗಿ ಈ ವಿಶ್ವವಿದ್ಯಾಲಯ ಸ್ಥಾಪನೆಯಾಯಿತು.