ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಸಂಯುಕ್ತ ಅರಬ್ ಎಮಿರೇಟ್ಸ್( ಯುಎಇ) ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದರು.
ಉಭಯ ನಾಯಕರು ಪಶ್ಚಿಮ ಏಷ್ಯಾ ವಲಯದ ಇತ್ತೀಚಿನ ಬೆಳವಣಿಗೆಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಂಡರು.
ಭಯೋತ್ಪಾದನೆ, ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿ ಮತ್ತು ನಾಗರಿಕರ ಜೀವಹಾನಿಯ ಬಗ್ಗೆ ಇಬ್ಬರೂ ನಾಯಕರು ತೀವ್ರ ಕಳವಳ ವ್ಯಕ್ತಪಡಿಸಿದರು.
ಭದ್ರತೆ ಮತ್ತು ಮಾನವೀಯ ಪರಿಸ್ಥಿತಿಯ ಶೀಘ್ರ ಪರಿಹಾರಕ್ಕಾಗಿ ಉಭಯ ನಾಯಕರು ಕರೆ ನೀಡಿದರು. ಈ ಪ್ರದೇಶದಲ್ಲಿ ಬಾಳಿಕೆ ಬರುವ ಶಾಂತಿ, ಭದ್ರತೆ ಮತ್ತು ಸ್ಥಿರತೆಯ ಮಹತ್ವ ಅತ್ಯಗತ್ಯ ಎಂದು ಅವರು ಒತ್ತಿ ಹೇಳಿದರು.
ಭಾರತ-ಯುಎಇ ಸಮಗ್ರ ಕಾರ್ಯತಂತ್ರದ ಸಹಭಾಗಿತ್ವದ ಮಾರ್ಗಸೂಚಿಯೊಳಗೆ ವಿವಿಧ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಸಹಕಾರ ಬಲಪಡಿಸುವುದನ್ನು ಮುಂದುವರಿಸಲು ಇಬ್ಬರೂ ನಾಯಕರು ತಮ್ಮ ಬದ್ಧತೆಯನ್ನು ಪುನರುಚ್ಚರಿಸಿದರು.