ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿಯವರು ಇಂದು ಪ್ಯಾಲೆಸ್ಟೈನ್ ಅಧ್ಯಕ್ಷರಾದ ಘನತೆವೆತ್ತ ಶ್ರೀ ಮಹಮೂದ್ ಅಬ್ಬಾಸ್ ಅವರೊಂದಿಗೆ ದೂರವಾಣಿಯಲ್ಲಿ ಮಾತುಕತೆ ನಡೆಸಿದರು.
ಗಾಝಾದ ಅಲ್-ಅಹ್ಲಿ ಆಸ್ಪತ್ರೆಯಲ್ಲಿ ಸಂಭವಿಸಿದ ನಾಗರಿಕ ಜೀವಹಾನಿಗೆ ಪ್ರಧಾನಮಂತ್ರಿಯವರು ತೀವ್ರ ಸಂತಾಪ ವ್ಯಕ್ತಪಡಿಸಿದರು.
ಭಾರತ ಮತ್ತು ಪ್ಯಾಲೆಸ್ಟೈನ್ ನಡುವಿನ ಸಾಂಪ್ರದಾಯಿಕ ನಿಕಟ ಮತ್ತು ಐತಿಹಾಸಿಕ ಸಂಬಂಧಗಳನ್ನು ಎತ್ತಿ ತೋರಿಸಿದ ಪ್ರಧಾನಮಂತ್ರಿಯವರು, ಭಯೋತ್ಪಾದನೆ, ಹಿಂಸಾಚಾರ ಮತ್ತು ಪ್ಯಾಲೆಸ್ಟೈನ್ ನ ಹದಗೆಡುತ್ತಿರುವ ಭದ್ರತಾ ಪರಿಸ್ಥಿತಿಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು.
ಇಸ್ರೇಲ್-ಪ್ಯಾಲೆಸ್ಟೈನ್ ವಿಷಯದಲ್ಲಿ ಭಾರತದ ದೀರ್ಘಕಾಲೀನ ಮತ್ತು ತತ್ವಬದ್ಧ ನಿಲುವನ್ನು ಅವರು ಪುನರುಚ್ಚರಿಸಿದರು.
ಅಧ್ಯಕ್ಷ ಮಹಮೂದ್ ಅಬ್ಬಾಸ್ ಅವರು ಪ್ಯಾಲೆಸ್ಟೈನ್ ಪರಿಸ್ಥಿತಿಯ ಬಗ್ಗೆ ತಮ್ಮ ಮೌಲ್ಯಮಾಪನವನ್ನು ಹಂಚಿಕೊಂಡರು. ಭಾರತದ ಬೆಂಬಲಕ್ಕಾಗಿ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿ, ಭಾರತದ ನಿಲುವನ್ನು ಶ್ಲಾಘಿಸಿದರು.
ಭಾರತವು ಪ್ಯಾಲೆಸ್ಟೈನ್ ಜನತೆಗೆ ಮಾನವೀಯ ನೆರವನ್ನು ಮುಂ ದುವರಿಸುತ್ತದೆ ಎಂದು ಪ್ರಧಾನಿಯವರು ಸ್ಪಷ್ಟಪಡಿಸಿದರು.
ಉಭಯ ನಾಯಕರು ಪರಸ್ಪರ ಸಂಪರ್ಕದಲ್ಲಿರಲು ಒಪ್ಪಿಕೊಂಡರು.