ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಹೊಸ ದಶಕದ ಮತ್ತು ಹೊಸ ವರ್ಷದ ತಮ್ಮ ಮೊದಲ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿಂದು ಬ್ರೂ ರಿಯಾಂಗ್ ಒಪ್ಪಂದವು ಎರಡು ದಶಕಗಳಷ್ಟು ಹಳೆಯದಾದ ನಿರಾಶ್ರಿತರ ಬಿಕ್ಕಟ್ಟಿಗೆ ಅಂತ್ಯ ಹಾಡುತ್ತಿದ್ದು, ಮಿಜೋರಾಂನಲ್ಲಿರುವ 34 ಸಾವಿರಕ್ಕೂ ಹೆಚ್ಚು ನಿರಾಶ್ರಿತರಿಗೆ ಒತ್ತಾಸೆಯಾಗಿದ್ದು ಪರಿಹಾರ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಸಮಸ್ಯೆಯ ಕುರಿತಂತೆ ಸವಿಸ್ತಾರವಾಗಿ ವಿವರಿಸಿದ ಶ್ರೀ ಮೋದಿ ಅವರು, “ಈ ಸಮಸ್ಯೆ 90ರ ದಶಕಕ್ಕೆ ಸಂಬಂಧಿಸಿದ್ದು. 1997ರಲ್ಲಿ ಜನಾಂಗೀಯ ಉದ್ವಿಗ್ನತೆ ಬ್ರೂ ರಿಯಾಂಗ್ ಬುಡಕಟ್ಟು ಜನರಿಗೆ ಮಿಜೋರಾಂ ತೊರೆಯುವಂತೆ ಮತ್ತು ತ್ರಿಪುರಾದಲ್ಲಿ ನಿರಾಶ್ರಿತರಾಗಿ ಆಶ್ರಯ ಪಡೆಯುವಂತೆ ಮಾಡಿತ್ತು. ಈ ನಿರಾಶ್ರಿತರಿಗೆ ಉತ್ತರ ತ್ರಿಪುರಾದ ಕಾಂಚಿಪುರ ತಾತ್ಕಾಲಿಕ ಶಿಬಿರದಲ್ಲಿ ನೆಲೆ ಕಲ್ಪಿಸಲಾಗಿತ್ತು. ಬ್ರೂ ರಿಯಾಂಗ್ ಸಮುದಾಯ ತಮ್ಮ ಬದುಕಿನ ಮಹತ್ವದ ಭಾಗವನ್ನು ನಿರಾಶ್ರಿತರಾಗಿ ಕಳೆದರು ಎಂಬುದು ನೋವಿನ ಸಂಗತಿ. ಶಿಬಿರಗಳಲ್ಲಿ ಜೀವನ ಕಳೆಯುವುದೆಂದರೆ ಅದು ಎಲ್ಲ ಮೂಲಭೂತ ಸೌಕರ್ಯಗಳಿಂದ ವಂಚಿತವಾದಂತೆ. 23 ವರ್ಷಗಳಿಂದ -ಮನೆ ಇಲ್ಲ, ಭೂಮಿ ಇಲ್ಲ, ಕುಟುಂಬದವರಿಗೆ ವೈದ್ಯಕೀಯ ಚಿಕಿತ್ಸೆ ಇಲ್ಲ, ಮಕ್ಕಳಿಗೆ ಶಿಕ್ಷಣ ಸೌಲಭ್ಯವಿಲ್ಲ”ದಂತಾಗಿತ್ತು.
ಹಲವು ಸರ್ಕಾರಗಳು ನಿರಾಶ್ರಿತರ ನೋವು ಮತ್ತು ಸಮಸ್ಯೆಗೆ ಪರಿಹಾರ ಹುಡುಕಲಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಸಂವಿಧಾನದ ಬಗ್ಗೆ ನಿರಾಶ್ರಿತರು ಇಟ್ಟಿರುವ ನಂಬಿಕೆಯನ್ನು ಅವರು ಪ್ರಶಂಸಿಸಿದರು.
ಅವರ ನಂಬಿಕೆಯಂತೆ ಇಂದು ಒಂದು ಐತಿಹಾಸಿಕ ಒಪ್ಪಂದಕ್ಕೆ ಕಾರಣವಾಗಿದೆ, ಇದಕ್ಕೆ ದೆಹಲಿಯಲ್ಲಿ ಈ ತಿಂಗಳು ಅಂಕಿತ ಹಾಕಲಾಗಿದೆ ಎಂದರು.
“ಅವರ ನಂಬಿಕೆಯ ಫಲವಾಗಿ ಇಂದು ಅವರ ಜೀವನವು ಹೊಸ ಮುಂಜಾನೆಯ ಹೊಸ್ತಿಲಲ್ಲಿದೆ. ಒಪ್ಪಂದದ ಪ್ರಕಾರ, ಅವರಿಗೆ ಘನತೆಯ ಜೀವನದ ಹಾದಿಯನ್ನು ತೆರೆಯಲಾಗುತ್ತಿದೆ. ಅಂತಿಮವಾಗಿ 2020 ರ ಹೊಸ ದಶಕವು ಬ್ರೂ-ರಿಯಾಂಗ್ ಸಮುದಾಯದವರ ಬದುಕಿನಲ್ಲಿ ಹೊಸ ಭರವಸೆಯ ಕಿರಣವನ್ನು ಮೂಡಿಸಿದೆ”, ಎಂದು ಅವರು ಹೇಳಿದರು.
ಒಪ್ಪಂದದ ಪ್ರಯೋಜನಗಳ ಕುರಿತು ವಿವರಿಸಿದ ಪ್ರಧಾನಮಂತ್ರಿಯವರು “ಸುಮಾರು 34000 ಬ್ರೂ ನಿರಾಶ್ರಿತರಿಗೆ ತ್ರಿಪುರಾದಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಸರ್ಕಾರ ಅವರ ಪುನರ್ವಸತಿ ಮತ್ತು ಸರ್ವಾಂಗೀಣ ಅಭಿವೃದ್ಧಿಗಾಗಿ ಸುಮಾರು 600 ಕೋಟಿ ರೂಪಾಯಿ ನೆರವು ಒದಗಿಸುತ್ತಿರುವುದಷ್ಟೇ ಅಲ್ಲ, ಪ್ರತಿಯೊಂದು ಸ್ಥಳಾಂತರಗೊಂಡ ಕುಟುಂಬಗಳಿಗೆ ತಲಾ ಒಂದು ನಿವೇಶನ ಅಥವಾ ಜಮೀನು ಒದಗಿಸಲಾಗುವುದು. ಈಗ ಅವರು ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಕಲ್ಯಾಣ ಯೋಜನೆಗಳ ಪ್ರಯೋಜನವನ್ನೂ ಪಡೆಯಬಹುದು’’ ಎಂದರು.
ಈ ಒಪ್ಪಂದವು, ವಿಶೇಷವಾದುದಾಗಿದ್ದು, ಒಕ್ಕೂಟ ವ್ಯವಸ್ಥೆಯ ಸ್ಫೂರ್ತಿಯನ್ನು ಸಂಕೇತಿಸುತ್ತದೆ ಎಂದು ಪ್ರಧಾನಮಂತ್ರಿ ಬಣ್ಣಿಸಿದರು.
“ಈ ಒಪ್ಪಂದವು ಭಾರತೀಯ ಸಂಸ್ಕೃತಿಯ ಅಂತರ್ಗತ ಸಹಾನುಭೂತಿ ಮತ್ತು ಸೂಕ್ಷ್ಮತೆಯನ್ನು ಸಹ ನಿರೂಪಿಸುತ್ತದೆ.” ಎಂದು ಅವರು ಹೇಳಿದರು.
ಹಿಂಸೆ ನಿಲ್ಲಿಸಿ ಮುಖ್ಯ ವಾಹಿನಿಗೆ ಮರಳಿ
ಹಿಂಸಾಚಾರ ಯಾವುದೇ ಸಮಸ್ಯೆಗೆ ಪರಿಹಾರ ಒದಗಿಸುವುದಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ಅಸ್ಸಾಂನಲ್ಲಿ 8 ಗುಂಪುಗಳ 644 ಬಂಡುಕೋರರು ಶಸ್ತ್ರ ತ್ಯಜಿಸಿ ಶರಣಾಗಿದ್ದು ಮುಖ್ಯವಾಹಿನಿಗೆ ಮರಳುವ ನಿರ್ಧಾರ ಮಾಡಿರುವುದನ್ನು ಅವರು ಪ್ರಶಂಸಿಸಿದರು.
ಖೇಲೋ ಇಂಡಿಯಾದ ಯಶಸ್ವೀ ಆತಿಥ್ಯ ವಹಿಸಿದ್ದ ಅಸ್ಸಾಂ, ಮತ್ತೊಂದು ಶ್ರೇಷ್ಠ ಸಾಧನೆ ಮಾಡಿದೆ. ಕೆಲವೇ ದಿನಗಳ ಹಿಂದೆ 8 ಗುಂಪುಗಳಿಗೆ ಸೇರಿದ 644 ಬಂಡುಕೋರರು ಶಸ್ತ್ರಾಸ್ತ್ರಗಳೊಂದಿಗೆ ಶರಣಾಗಿದ್ದಾರೆ. ಯಾರು ಹಿಂಸಾಚಾರದ ಹಾದಿ ತುಳಿದಿದ್ದರೋ ಅವರು ಈಗ ಶಾಂತಿಯಲ್ಲಿ ನಂಬಿಕೆ ವ್ಯಕ್ತಪಡಿಸಿದ್ದಾರೆ ಮತ್ತು ದೇಶದ ಪ್ರಗತಿಯಲ್ಲಿ ಪಾಲುದಾರರಾಗಲು ಬಯಸಿದ್ದಾರೆ ಹಾಗೂ ಮುಖ್ಯವಾಹಿನಿಗೆ ಮರಳಿದ್ದಾರೆ.” ಎಂದರು.
ಅದೇ ರೀತಿ ತ್ರಿಪುರಾದಲ್ಲಿ 80ಕ್ಕೂ ಹೆಚ್ಚು ಜನರು ಹಿಂಸಾಚಾರದ ಮಾರ್ಗಬಿಟ್ಟು ಮುಖ್ಯವಾಹಿನಿಗೆ ಮರಳಿದ್ದಾರೆ ಮತ್ತು ಈಶಾನ್ಯದಲ್ಲಿ ಬಂಡಾಯ ಗಣನೀಯವಾಗಿ ತಗ್ಗಿದೆ ಎಂದರು.
ಈ ವಲಯದ ಪ್ರತಿಯೊಂದು ಸಮಸ್ಯೆಯನ್ನೂ ಪ್ರಾಮಾಣಿಕವಾಗಿ ಹಾಗೂ ಶಾಂತಿಯುತವಾಗಿ ಮಾತುಕತೆಯ ಮೂಲಕ ಪರಿಹರಿಸಲಾಗುತ್ತಿರುವುದೇ ಇದಕ್ಕೆ ಕಾರಣ ಎಂದು ಅವರು ಹೇಳಿದರು.
ಇನ್ನೂ ಹಿಂಸಾ ಮಾರ್ಗದಲ್ಲೇ ಸಾಗಿರುವವರು ಹಿಂಸೆ ಕೈಬಿಟ್ಟು ಮುಖ್ಯವಾಹಿನಿಗೆ ಮರಳಬೇಕು ಎಂದು ಆಗ್ರಹಿಸಿದರು.
“ಗಣರಾಜ್ಯೋತ್ಸವದ ಶುಭ ಸಂದರ್ಭದಲ್ಲಿ ನಾನು ದೇಶದ ಯಾವುದೇ ಭಾಗದಲ್ಲಿರುವವರಿಗೆ ಮನವಿ ಮಾಡುವುದೇನೆಂದರೆ, ಯಾರು ಶಸ್ತ್ರಗಳು ಮತ್ತು ಹಿಂಸಾಚಾರದ ಮೂಲಕ ತಮ್ಮ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತಿದ್ದಾರೋ ಅಂಥವರು, ಮುಖ್ಯವಾಹಿನಿಗೆ ಮರಳಬೇಕು ಎಂದು ನಾನು ಮನವಿ ಮಾಡುತ್ತೇನೆ. ಅವರು ತಮ್ಮ ಸ್ವಂತ ಸಾಮರ್ಥ್ಯದ ಮೇಲೆ ಮತ್ತು ಸಮಸ್ಯೆಗಳನ್ನು ಶಾಂತಿಯುತವಾಗಿ ಪರಿಹರಿಸುವ ದೇಶದ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು”, ಎಂದು ಹೇಳಿದರು.