ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ 80ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ವಿಡಿಯೋ ಸಂದೇಶವನ್ನು ನೀಡಿದರು. ಈ ಶುಭ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿ ಜೀ ಮತ್ತು ಅವರ ಅನುಯಾಯಿಗಳಿಗೆ ಶುಭ ಕೋರಿದರು. ಸಂತರು ಮತ್ತು ವಿಶೇಷ ಅತಿಥಿಗಳು ‘ಹನುಮಂತ ದ್ವಾರ’ ಪ್ರವೇಶ ಕಮಾನಿನ ಉದ್ಘಾಟನೆ ಮಾಡಿದ್ದನ್ನೂ ಶ್ರೀ ನರೇಂದ್ರ ಮೋದಿ ಉಲ್ಲೇಖಿಸಿದರು.
ಧರ್ಮಗ್ರಂಥಗಳನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಮಾನವೀಯತೆಯ ಕಲ್ಯಾಣಕ್ಕಾಗಿ ಸಂತರು ಹೊರಹೊಮ್ಮುತ್ತಾರೆ ಮತ್ತು ಅವರ ಜೀವನವು ಸಾಮಾಜಿಕ ಉನ್ನತಿ ಮತ್ತು ಮನುಕುಲದ ಕಲ್ಯಾಣದೊಂದಿಗೆ ಬೆಸೆದುಕೊಂಡಿದೆ ಎಂಬುದಕ್ಕೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜೀವನವು ಅವರ ಜ್ವಲಂತ ಉದಾಹರಣೆಯಾಗಿದೆ ಎಂದು ಹೇಳಿದರು. ದತ್ತಪೀಠದಲ್ಲಿ ಆಧ್ಯಾತ್ಮದ ಜೊತೆಗೆ ಆಧುನಿಕತೆಯೂ ಪೋಷಿಸಲ್ಪಟ್ಟಿದೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. ಆ ನಿಟ್ಟಿನಲ್ಲಿ ಆಧುನಿಕ ನಿರ್ವಹಣೆಯೊಂದಿಗೆ 3ಡಿ ಮ್ಯಾಪಿಂಗ್ ಮತ್ತು ಬೆಳಕು ಮತ್ತು ಧ್ವನಿ ಪ್ರದರ್ಶನ ಹಾಗು ಪಕ್ಷಿ ವನ(ಬರ್ಡ್ ಪಾರ್ಕ್)ನೊಂದಿಗೆ ಭವ್ಯವಾದ ಹನುಮಾನ್ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ಉಲ್ಲೇಖಿಸಿದರು. ದತ್ತಪೀಠವು ವೇದಗಳ ಅಧ್ಯಯನದ ಶ್ರೇಷ್ಠ ಕೇಂದ್ರವಾಗಿರುವುದು ಮಾತ್ರವಲ್ಲದೆ, ಸಂಗೀತವನ್ನು ಆರೋಗ್ಯದ ಉದ್ದೇಶಗಳಿಗಾಗಿ ಬಳಸುವುದಕ್ಕಾಗಿ ಪರಿಣಾಮಕಾರಿ ಆವಿಷ್ಕಾರವನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.
“ಪಕೃತಿಗಾಗಿ ವಿಜ್ಞಾನದ ಈ ಬಳಕೆ, ಆಧ್ಯಾತ್ಮಿಕತೆಯೊಂದಿಗೆ ತಂತ್ರಜ್ಞಾನದ ಈ ಸಂಯೋಜನೆಯು ಸಕ್ರಿಯ ಭಾರತದ ಆತ್ಮವಾಗಿದೆ. ಸ್ವಾಮೀಜಿಯಂತಹ ಸಂತರ ಪ್ರಯತ್ನದಿಂದ ಇಂದು ದೇಶದ ಯುವಜನತೆ ಅವರ ಸಂಪ್ರದಾಯಗಳ ಶಕ್ತಿ ಅರಿತುಕೊಂಡು ಅವುಗಳನ್ನು ಮುಂದೆ ಕೊಂಡೊಯ್ಯುತ್ತಿರುವುದು ನನಗೆ ಸಂತಸ ತಂದಿದೆ” ಎಂದು ಶ್ರೀ ನರೇಂದ್ರ ಮೋದಿ ಹೇಳಿದರು.
ಆಜಾದಿ ಕಾ ಅಮೃತ್ ಮಹೋತ್ಸವದ ಅವಧಿಯಲ್ಲಿ ಬರುವ ಶುಭ ಸಂದರ್ಭದಲ್ಲಿ, ಸ್ವಯಂಗೂ ಮೊದಲು ಸಾರ್ವತ್ರಿಕವೆಂದು ಪರಿಗಣಿಸಲು ಸಂತರ ಬೋಧನೆಯನ್ನು ಪ್ರಧಾನಮಂತ್ರಿ ನೆನಪಿಸಿಕೊಂಡರು. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್’ ಎಂಬ ಮಂತ್ರದೊಂದಿಗೆ ದೇಶವು ಸಾಮೂಹಿಕವಾಗಿ ಪಣ ತೊಡಲು ಕರೆ ನೀಡುತ್ತಿದೆ ಎಂದು ಅವರು ಹೇಳಿದರು.
ದೇಶವು ಇಂದು ತನ್ನ ಪ್ರಾಚೀನತೆಯನ್ನು ಸಂರಕ್ಷಿಸುತ್ತಿದೆ ಮತ್ತು ಅದನ್ನು ಉತ್ತೇಜಿಸುತ್ತಿದೆ ಮತ್ತು ಅದೇ ವೇಳೆ ಅದರ ನಾವೀನ್ಯತೆ ಮತ್ತು ಆಧುನಿಕತೆಗೆ ಶಕ್ತಿ ನೀಡುತ್ತಿದೆ ಎಂದರು. “ಇಂದು ಭಾರತದ ಗುರುತು ಯೋಗ ಮತ್ತು ಯುವಕರಾಗಿದ್ದಾರೆ. ಜಗತ್ತು ಇಂದು ನಮ್ಮ ನವೋದ್ಯಮಗಳನ್ನು ತನ್ನ ಭವಿಷ್ಯದಂತೆ ನೋಡುತ್ತಿದೆ. ನಮ್ಮ ಉದ್ಯಮ ಮತ್ತು ನಮ್ಮ 'ಮೇಕ್ ಇನ್ ಇಂಡಿಯಾ' ಜಾಗತಿಕ ಪ್ರಗತಿಯ ಭರವಸೆಯ ಆಶಾಕಿರಣವಾಗಿ ಹೊರಹೊಮ್ಮುತ್ತಿದೆ. ಈ ನಿರ್ಣಯಗಳನ್ನು ಸಾಧಿಸುವ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು ಮತ್ತು ನಮ್ಮ ಆಧ್ಯಾತ್ಮಿಕ ಕೇಂದ್ರಗಳು ಆ ನಿಟ್ಟಿನಲ್ಲಿಯೂ ಸ್ಫೂರ್ತಿಯ ಕೇಂದ್ರಗಳಾಗಬೇಕೆಂದು ನಾನು ಬಯಸುತ್ತೇನೆ’’ ಎಂದರು.
ಪ್ರಕೃತಿ ಸಂರಕ್ಷಣೆ ಮತ್ತು ಪಕ್ಷಿಗಳ ಸೇವೆಯಲ್ಲಿ ಸ್ವಾಮೀಜೀ ಅವರ ಕಾರ್ಯವನ್ನು ಉಲ್ಲೇಖಿಸಿದ ಪ್ರಧಾನಮಂತ್ರಿ ಅವರು, ದತ್ತ ಪೀಠವು ನೀರು ಮತ್ತು ನದಿ ಸಂರಕ್ಷಣೆಗಾಗಿ ಕೆಲಸ ಮಾಡಬೇಕೆಂದು ಮನವಿ ಮಾಡಿದರು. ಪ್ರತಿ ಜಿಲ್ಲೆಗಳಲ್ಲಿ 75 ಅಮೃತ ಸರೋವರಗಳ ಅಭಿಯಾನಕ್ಕೆ ತಮ್ಮ ಕೊಡುಗೆ ನೀಡುವಂತೆ ಪ್ರಧಾನಿ ಅವರು ಮನವಿ ಮಾಡಿದರು. ಸ್ವಚ್ಛ ಭಾರತ್ ಮಿಷನ್‌ನಲ್ಲಿ ಅವರ ಕೊಡುಗೆಯನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.