ನನ್ನ ಪ್ರೀತಿಯ ಸ್ನೇಹಿತರಾದ ಸ್ಕಾಟ್ ಅವರಿಗೆ ನಮಸ್ಕಾರ!
ಹೋಳಿ ಹಬ್ಬ ಮತ್ತು ಚುನಾವಣಾ ಗೆಲುವಿಗಾಗಿ ನಿಮ್ಮ ಶುಭಾಶಯಗಳಿಗಾಗಿ ನಾನು ನಿಮಗೆ ಆಭಾರಿಯಾಗಿದ್ದೇನೆ.
ಕ್ವೀನ್ಸ್ ಲ್ಯಾಂಡ್ ಮತ್ತು ನ್ಯೂ ಸೌತ್ ವೇಲ್ಸ್ ನಲ್ಲಿ ಸಂಭವಿಸಿದ ಪ್ರವಾಹದಿಂದ ಉಂಟಾದ ಜೀವಹಾನಿ ಮತ್ತು ಆಸ್ತಿಪಾಸ್ತಿ ಹಾನಿಗೆ ನಾನು ಎಲ್ಲ ಭಾರತೀಯರ ಪರವಾಗಿ ಸಂತಾಪ ಸೂಚಿಸುತ್ತೇನೆ.
ನಮ್ಮ ಹಿಂದಿನ ವರ್ಚುವಲ್ ಶೃಂಗಸಭೆಯಲ್ಲಿ, ನಾವು ನಮ್ಮ ಬಾಂಧವ್ಯವನ್ನು ಸಮಗ್ರ ವ್ಯೂಹಾತ್ಮಕ ಸಹಭಾಗಿತ್ವಕ್ಕೆ ಏರಿಸಿದ್ದೇವೆ. ಇಂದು, ನಾವು ಎರಡೂ ದೇಶಗಳ ನಡುವೆ ವಾರ್ಷಿಕ ಶೃಂಗಸಭೆಗಳ ಕಾರ್ಯವಿಧಾನವನ್ನು ಸ್ಥಾಪಿಸುತ್ತಿದ್ದೇವೆ ಎಂಬುದು ನನಗೆ ಸಂತಸ ತಂದಿದೆ. ಇದು ನಮ್ಮ ಬಾಂಧವ್ಯದ ನಿಯಮಿತ ಪರಾಮರ್ಶೆಯ ರಚನಾತ್ಮಕ ಕಾರ್ಯವಿಧಾನವನ್ನು ಸೃಷ್ಟಿಸುತ್ತದೆ.
ಮಾನ್ಯರೇ,
ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಬಾಂಧವ್ಯ ಗಮನಾರ್ಹ ಪ್ರಗತಿ ಸಾಧಿಸಿದೆ. ವ್ಯಾಪಾರ ಮತ್ತು ಹೂಡಿಕೆ, ರಕ್ಷಣೆ ಮತ್ತು ಭದ್ರತೆ, ಶಿಕ್ಷಣ ಮತ್ತು ನಾವೀನ್ಯತೆ, ವಿಜ್ಞಾನ ಮತ್ತು ತಂತ್ರಜ್ಞಾನ - ಈ ಎಲ್ಲಾ ಕ್ಷೇತ್ರಗಳಲ್ಲಿ ನಾವು ಬಹಳ ನಿಕಟ ಸಹಕಾರವನ್ನು ಹೊಂದಿದ್ದೇವೆ. ನಿರ್ಣಾಯಕ ಖನಿಜಗಳು, ಜಲ ನಿರ್ವಹಣೆ, ನವೀಕರಿಸಬಹುದಾದ ಇಂಧನ ಮತ್ತು ಕೋವಿಡ್ -19 ಸಂಶೋಧನೆಯಂತಹ ಇತರ ಅನೇಕ ಕ್ಷೇತ್ರಗಳಲ್ಲೂ ನಮ್ಮ ಸಹಯೋಗವು ವೇಗವಾಗಿ ಬೆಳೆದಿದೆ.
ನಿರ್ಣಾಯಕ ಮತ್ತು ಹೊರಹೊಮ್ಮುವ ತಂತ್ರಜ್ಞಾನ ನೀತಿಗಾಗಿ ಬೆಂಗಳೂರಿನಲ್ಲಿ ಉತ್ಕೃಷ್ಟತೆಯ ಕೇಂದ್ರ ಸ್ಥಾಪಿಸುವ ಘೋಷಣೆಯನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ. ಸೈಬರ್ ಮತ್ತು ವಿಮರ್ಶಾತ್ಮಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳಲ್ಲಿ ನಮ್ಮ ನಡುವೆ ಉತ್ತಮ ಸಹಕಾರ ಇರುವುದು ಅತ್ಯಗತ್ಯ. ಈ ಹೊರಹೊಮ್ಮುವ ತಂತ್ರಜ್ಞಾನಗಳಲ್ಲಿ ಸೂಕ್ತ ಜಾಗತಿಕ ಮಾನದಂಡಗಳನ್ನು ಅಳವಡಿಸಿಕೊಳ್ಳುವುದು ನಮ್ಮಂತಹ ಸಮಾನ ಮೌಲ್ಯಗಳನ್ನು ಹೊಂದಿರುವ ರಾಷ್ಟ್ರಗಳ ಜವಾಬ್ದಾರಿಯೂ ಆಗಿದೆ.
ಮಾನ್ಯರೇ,
ನಮ್ಮ ಸಮಗ್ರ ಆರ್ಥಿಕ ಸಹಕಾರ ಒಪ್ಪಂದ - "ಸಿಇಸಿಎ", ಈ ಬಗ್ಗೆ, ನೀವು ಹೇಳಿದಂತೆ, ಬಹಳ ಕಡಿಮೆ ಸಮಯದಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದೆ ಎಂದು ನಾನು ಹೇಳಲು ಬಯಸುತ್ತೇನೆ. ಉಳಿದ ವಿಷಯಗಳನ್ನೂ ಶೀಘ್ರದಲ್ಲೇ ಒಪ್ಪಿಕೊಳ್ಳಲಾಗುವುದು ಎಂಬ ವಿಶ್ವಾಸ ನನಗಿದೆ. "ಸಿಇಸಿಎ" ಯನ್ನು ಬೇಗನೆ ಪೂರ್ಣಗೊಳಿಸುವುದು ನಮ್ಮ ಆರ್ಥಿಕ ಬಾಂಧವ್ಯಗಳು, ಆರ್ಥಿಕ ಪುನಶ್ಚೇತನ ಮತ್ತು ಆರ್ಥಿಕ ಭದ್ರತೆಗೆ ನಿರ್ಣಾಯಕವಾಗಿರುತ್ತದೆ.
ಕ್ವಾಡ್ ನಲ್ಲಿ ನಮ್ಮ ನಡುವೆ ಉತ್ತಮ ಸಹಕಾರವೂ ಇದೆ. ನಮ್ಮ ಸಹಕಾರವು ಮುಕ್ತ ಮತ್ತು ಎಲ್ಲರನ್ನೂ ಒಳಗೊಳ್ಳುವ ಭಾರತ-ಪೆಸಿಫಿಕ್ ಗೆ ನಮ್ಮ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ. ಕ್ವಾಡ್ ನ ಯಶಸ್ಸು ಪ್ರಾದೇಶಿಕ ಮತ್ತು ಜಾಗತಿಕ ಸ್ಥಿರತೆಗೆ ಬಹಳ ಮುಖ್ಯವಾಗಿದೆ.
ಮಾನ್ಯರೇ,
ಪ್ರಾಚೀನ ಭಾರತೀಯ ಕಲಾಕೃತಿಗಳನ್ನು ಹಿಂದಿರುಗಿಸಲು ತಾವು ಕೈಗೊಂಡ ಉಪಕ್ರಮಕ್ಕಾಗಿ ನಾನು ನಿಮಗೆ ವಿಶೇಷವಾಗಿ ಧನ್ಯವಾದಗಳನ್ನು ಅರ್ಪಿಸಲು ಬಯಸುತ್ತೇನೆ. ರಾಜಸ್ಥಾನ , ಪಶ್ಚಿಮ ಬಂಗಾಳ, ಗುಜರಾತ್, ಹಿಮಾಚಲ ಪ್ರದೇಶ ಮತ್ತು ಇತರ ಅನೇಕ ಭಾರತೀಯ ರಾಜ್ಯಗಳಿಂದ ಅಕ್ರಮವಾಗಿ ಕಳ್ಳಸಾಗಣೆ ಮಾಡಲಾದ ನೂರಾರು ವರ್ಷಗಳ ಹಳೆಯ ವಿಗ್ರಹಗಳು ಮತ್ತು ವರ್ಣಚಿತ್ರಗಳು ನೀವು ಕಳುಹಿಸಿದ ಕಲಾಕೃತಿಗಳಲ್ಲಿ ಸೇರಿವೆ. ಇದಕ್ಕಾಗಿ ನಾನು ನಿಮಗೆ ಎಲ್ಲಾ ಭಾರತೀಯರ ಪರವಾಗಿ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಈಗ ನೀವು ನಮಗೆ ಹಿಂದಿರುಗಿಸಿರುವ ಎಲ್ಲಾ ವಿಗ್ರಹಗಳು ಮತ್ತು ಇತರ ವಸ್ತುಗಳನ್ನು ಅವುಗಳ ಮೂಲ ಸ್ಥಳಕ್ಕೆ ಕಳುಹಿಸಲಾಗುವುದು. ಎಲ್ಲಾ ಭಾರತೀಯ ನಾಗರಿಕರ ಪರವಾಗಿ, ಈ ಉಪಕ್ರಮಕ್ಕಾಗಿ ನಾನು ಮತ್ತೊಮ್ಮೆ ನಿಮಗೆ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ.
ಕ್ರಿಕೆಟ್ ವಿಶ್ವಕಪ್ ನಲ್ಲಿ ಆಸ್ಟ್ರೇಲಿಯಾದ ಮಹಿಳಾ ಕ್ರಿಕೆಟ್ ತಂಡದ ಅತ್ಯುತ್ತಮ ಪ್ರದರ್ಶನಕ್ಕಾಗಿ ನಿಮಗೆ ಅಭಿನಂದನೆಗಳು. ಶನಿವಾರದ ಪಂದ್ಯದಲ್ಲಿ, ಆಸ್ಟ್ರೇಲಿಯಾ ಗೆದ್ದಿದೆ, ಆದರೆ ಪಂದ್ಯಾವಳಿ ಇನ್ನೂ ಮುಗಿದಿಲ್ಲ. ಎರಡೂ ದೇಶಗಳ ತಂಡಗಳಿಗೆ ನನ್ನ ಶುಭ ಹಾರೈಕೆಗಳು.
ಮಾನ್ಯರೇ,
ಮತ್ತೊಮ್ಮೆ, ಇಂದು ನಿಮ್ಮೊಂದಿಗೆ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಳ್ಳುವ ಅವಕಾಶ ಸಿಕ್ಕಿದ್ದಕ್ಕಾಗಿ ನಾನು ನನ್ನ ಸಂತಸವನ್ನು ವ್ಯಕ್ತಪಡಿಸುತ್ತೇನೆ.
ಈಗ ನಾನು ಮಾಧ್ಯಮದ ಸ್ನೇಹಿತರಿಗೆ ಧನ್ಯವಾದ ಹೇಳುವ ಮೂಲಕ ಮುಕ್ತ ಅಧಿವೇಶನವನ್ನು ಸಮಾರೋಪಗೊಳಿಸಲು ಬಯಸುತ್ತೇನೆ. ಇದರ ಬಳಿಕ, ಕೆಲವು ಕ್ಷಣಗಳ ವಿರಾಮದ ನಂತರ, ಮುಂದಿನ ಕಾರ್ಯಸೂಚಿಯಂತೆ ವಿಷಯದ ಬಗ್ಗೆ ನನ್ನ ಅಭಿಪ್ರಾಯಗಳನ್ನು ಮಂಡಿಸಲು ನಾನು ಬಯಸುತ್ತೇನೆ.