ಫಿಜಿಯಲ್ಲಿ ಶ್ರೀ ಸತ್ಯ ಸಾಯಿ ಸಂಜೀವಿನಿ ಆಸ್ಪತ್ರೆ ಆರಂಭವಾಗಿದ್ದು, ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಸಂದೇಶ ನೀಡಿದರು.
ಸಮಾರಂಭದಲ್ಲಿ ಫಿಜಿ ಪ್ರಧಾನಿ ಹಾಗೂ ಆಸ್ಪತ್ರೆಯ ಸೌಲಭ್ಯ ಪಡೆಯುತ್ತಿರುವ ಅಲ್ಲಿನ ಜನರಿಗೆ ಧನ್ಯವಾದ ಅರ್ಪಿಸಿದರು ಮತ್ತು ಈ ಆಸ್ಪತ್ರೆ ಉಭಯ ದೇಶಗಳ ನಡುವಿನ ಬಾಂಧವ್ಯದ ಸಂಕೇತ: ಭಾರತ ಮತ್ತು ಫಿಜಿ ರಾಷ್ಟ್ರಗಳ ಪಯಣದ ಹಾದಿಯಲ್ಲಿ ಇದು ಮತ್ತೊಂದು ಹೊಸ ಅಧ್ಯಾಯವಾಗಿದೆ. ಮಕ್ಕಳ ಹೃದ್ರೋಗ ಆಸ್ಪತ್ರೆ ಫಿಜಿಯಲ್ಲಿ ಮಾತ್ರವಲ್ಲದೇ ಇಡೀ ದಕ್ಷಿಣ ಫೆಸಿಫಿಕ್ ಪ್ರದೇಶಗಳಿಗೆ ಅನುಕೂಲವಾಗಲಿದೆ. ಈ ವಲಯದಲ್ಲಿ ಹೃದ್ರೋಗ ಸಮಸ್ಯೆ ದೊಡ್ಡ ಸವಾಲಾಗಿದೆ. ಇಲ್ಲಿನ ಆಸ್ಪತ್ರೆ ಸಹಸ್ರಾರು ಮಕ್ಕಳಿಗೆ ಹೊಸ ಜೀವನ ನೀಡಲಿದೆ. ಮಕ್ಕಳಿಗೆ ಇಲ್ಲಿ ವಿಶ್ವದರ್ಜೆಯ ಚಿಕಿತ್ಸೆಯಷ್ಟೇ ದೊರೆಯುವುದಿಲ್ಲ ಉಚಿತವಾಗಿ ಶಸ್ತ್ರಚಿಕಿತ್ಸೆ ಸೌಲಭ್ಯವೂ ಲಭಿಸಲಿದೆ ಮತ್ತು ಇದಕ್ಕಾಗಿ ಸಾಯಿ ಪ್ರೇಮ್ ಪ್ರತಿಷ್ಠಾನ, ಫಿಜಿ ಸರ್ಕಾರ ಹಾಗೂ ಭಾರತದ ಶ್ರೀ ಸತ್ಯ ಸಾಯಿ ಸಂಜೀವಿನಿ ಮಕ್ಕಳ ಹೃದ್ರೋಗ ಆಸ್ಪತ್ರೆಯನ್ನು ಅಭಿನಂದಿಸಿದರು.
ಶ್ರೀ ಸತ್ಯ ಸಾಯಿ ಬಾಬ ಅವರ ಮಾನವೀಯ ಸೇವೆಯ ಸಸಿ ಬೃಹತ್ ಆಲದ ಮರವಾಗಿ ಬೆಳೆದು ಇಡೀ ಮನುಕುಲಕ್ಕೆ ಸೇವೆ ಸಲ್ಲಿಸುತ್ತಿದ್ದು, ಇದಕ್ಕಾಗಿ ಬಾಬ ಅವರಿಗೆ ಪ್ರಧಾನಮಂತ್ರಿ ಅವರು ನಮನ ಸಲ್ಲಿಸಿದರು. ಸತ್ಯ ಸಾಯಿ ಬಾಬ ಅವರು ಆಧ್ಯಾತ್ಮವನ್ನು ಆಚರಣೆಗಳಿಂದ ಮುಕ್ತಗೊಳಿಸಿದರು ಮತ್ತು ಅದನ್ನು ಜನರ ಕಲ್ಯಾಣದೊಂದಿಗೆ ಜೋಡಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ಶಿಕ್ಷಣ, ಆರೋಗ್ಯ, ಬಡವರ ಪರವಾಗಿ ಮತ್ತು ವಂಚಿತರಿಗಾಗಿ ಅವರು ಸಲ್ಲಿಸಿದ ಸೇವೆ ಇಂದಿಗೂ ನಮಗೆ ಸ್ಫೂರ್ತಿ ನೀಡುತ್ತದೆ. ಗುಜರಾತ್ ಭೂಕಂಪ ಸಂದರ್ಭದಲ್ಲಿ ಸಾಯಿ ಭಕ್ತರು ಮಾಡಿದ ಸೇವೆಯನ್ನು ಸ್ಮರಿಸಿಕೊಳ್ಳುತ್ತೇನೆ. ಸತ್ಯ ಸಾಯಿಬಾಬ ಅವರಿಂದ ನಿರಂತರ ಆಶಿರ್ವಾದ ಪಡೆದುಕೊಂಡಿರುವುದು ಮತ್ತು ಅದನ್ನು ಇಂದಿಗೂ ಪಡೆಯುತ್ತಿರುವುದು ತಮ್ಮ ದೊಡ್ಡ ಅದೃಷ್ಟವೆಂದು ಭಾವಿಸಿರುವುದಾಗಿ ಪ್ರಧಾನಮಂತ್ರಿ ತಿಳಿಸಿದರು.
ಭಾರತ – ಫಿಜಿ ನಡುವೆ ಜೊತೆಯಾಗಿ ಸಾಗಿದ ಪರಂಪರೆ, ಎರಡೂ ದೇಶಗಳ ನಡುವಿನ ಮಾನವೀಯ ಬಾಂಧವ್ಯ ಅಲ್ಲದೆ ಸೇವಾ ಪ್ರಜ್ಞೆಯನ್ನು ಆಧರಿಸಿದೆ. ಸಾಂಕ್ರಾಮಿಕ ಸಂದರ್ಭದಲ್ಲಿ ನಾವು 150 ದೇಶಗಳಿಗೆ ಔಷಧಿಗಳನ್ನು ಮತ್ತು 100 ದೇಶಗಳಿಗೆ 100 ದಶಲಕ್ಷ ಲಸಿಕೆಗಳನ್ನು ಒದಗಿಸಿದ್ದೇವೆ. ಈ ಮೌಲ್ಯಗಳ ಆಧಾರದ ಮೇಲೆ ಸಾಂಕ್ರಾಮಿಕ ಸಮಯದಲ್ಲಿ ಭಾರತ ತನ್ನ ಜವಾಬ್ದಾರಿಗಳನ್ನು ಪೂರೈಸುತ್ತಿದೆ. ಇಂತಹ ಪ್ರಯತ್ನಗಳ ಸಂದರ್ಭದಲ್ಲಿ ಫಿಜಿಗೆ ಸದಾ ಕಾಲ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಉಭಯ ದೇಶಗಳ ಆಳವಾದ ಬಾಂಧವ್ಯ ಕುರಿತು ಪ್ರಧಾನಮಂತ್ರಿ ಅವರು ತಮ್ಮ ಅಭಿಪ್ರಾಯ ಮುಂದುವರಿಸಿ ಮಾತನಾಡಿ, ಎರಡು ದೇಶಗಳನ್ನು ಬೇರ್ಪಡಿಸುವ ವಿಶಾಲ ಸಾಗರದ ಹೊರತಾಗಿಯೂ ನಮ್ಮ ಸಂಸ್ಕೃತಿ ನಮ್ಮನ್ನು ಬೆಸೆದಿದೆ ಹಾಗೂ ನಮ್ಮ ಸಂಬಂಧಗಳು ಪರಸ್ಪರ ಗೌರವ ಮತ್ತು ಜನರ ನಡುವೆ ಬಲಿಷ್ಠವಾದ ಸಂಬಂಧವನ್ನು ಒಳಗೊಂಡಿದೆ. ಫಿಜಿಯ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಭಾರತ ಕೊಡುಗೆ ನೀಡುವ ವಿಶೇಷ ಮಹತ್ವವನ್ನು ಹೊಂದಿದೆ ಎಂದು ಹೇಳಿದರು.
ಇಂದು ಜನ್ಮ ದಿನ ಆಚರಿಸಿಕೊಳ್ಳುತ್ತಿರುವ ಫಿಜಿ ಪ್ರಧಾನಿ ಶ್ರೀ ಬೈನಿಮಾರಾಮ ಅವರಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಶುಭಾಶಯ ಕೋರಿದರು ಮತ್ತು ಅವರ ನಾಯಕತ್ವದಲ್ಲಿ ಎರಡು ರಾಷ್ಟ್ರಗಳ ಸಂಬಂಧ ಬಲಿಷ್ಠವಾಗಿ ಮುಂದುವರಿಯಲಿದೆ ಎಂದು ಆಶಿಸಿದರು.