ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಅಮೆರಿಕ ಅಧ್ಯಕ್ಷ ಜೋಸೆಫ್ ಆರ್. ಬೈಡೆನ್ ಜೂನಿಯರ್ ಅವರ ಆಹ್ವಾನದ ಮೇರೆಗೆ ನಡೆದ ಎರಡನೇ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಶೃಂಗಸಭೆಯ ಉದ್ಘಾಟನಾ ಅಧಿವೇಶನದಲ್ಲಿ 'ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವುದು ಮತ್ತು ಸನ್ನದ್ಧತೆಗೆ ಆದ್ಯತೆ ನೀಡುವುದು' ಎಂಬ ವಿಷಯದ ಮೇಲೆ ಪ್ರಧಾನಮಂತ್ರಿ ಅವರು ಮಾತನಾಡಿದರು.
ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಭಾರತವು ಜನ ಕೇಂದ್ರಿತ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ ಮತ್ತು ಈ ವರ್ಷ ತನ್ನ ಆರೋಗ್ಯ ಬಜೆಟ್ ಗಾಗಿ ಅತ್ಯಧಿಕ ಹಂಚಿಕೆಯನ್ನು ಮಾಡಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಭಾರತವು ವಿಶ್ವದ ಅತಿದೊಡ್ಡ ಲಸಿಕಾ ಅಭಿಯಾನವನ್ನು ನಡೆಸುತ್ತಿದೆ ಮತ್ತು ಅದರ ವಯಸ್ಕ ಜನಸಂಖ್ಯೆಯ ಸುಮಾರು ಶೇಕಡ 90ಷ್ಟು ಮತ್ತು 50 ದಶಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ಲಸಿಕೆ ನೀಡಿದೆ ಎಂದು ಪ್ರಧಾನಿ ಹೇಳಿದರು.
ಜಾಗತಿಕ ಸಮುದಾಯದ ಜವಾಬ್ದಾರಿಯುತ ಸದಸ್ಯ ರಾಷ್ಟ್ರವಾಗಿ, ಭಾರತವು ತನ್ನ ಕಡಿಮೆ ವೆಚ್ಚದ ದೇಶೀಯ ಕೋವಿಡ್ ತಗ್ಗಿಸುವ ತಂತ್ರಜ್ಞಾನಗಳು, ಲಸಿಕೆಗಳು ಮತ್ತು ಚಿಕಿತ್ಸಕಗಳನ್ನು ಇತರ ರಾಷ್ಟ್ರಗಳೊಂದಿಗೆ ಹಂಚಿಕೊಳ್ಳುವ ಮೂಲಕ ಸಕ್ರಿಯ ಪಾತ್ರವನ್ನು ಮುಂದುವರಿಸಲಿದೆ ಎಂದು ಪ್ರಧಾನಿ ಪ್ರತಿಪಾದಿಸಿದರು. ಭಾರತವು ತನ್ನ ಜೀನೋಮಿಕ್ ಕಣ್ಗಾವಲು ಒಕ್ಕೂಟವನ್ನು ವಿಸ್ತರಿಸಲು ಕೆಲಸ ಮಾಡುತ್ತಿದೆ. ಭಾರತವು ಸಾಂಪ್ರದಾಯಿಕ ಔಷಧಿಯನ್ನು ವ್ಯಾಪಕವಾಗಿ ಬಳಸಿದೆ ಮತ್ತು ಈ ಜ್ಞಾನವನ್ನು ವಿಶ್ವಕ್ಕೆ ಲಭ್ಯವಾಗುವಂತೆ ಮಾಡಲು ಭಾರತದಲ್ಲಿ ಡಬ್ಲ್ಯುಎಚ್ಒ ಸಾಂಪ್ರದಾಯಿಕ ಔಷಧ ಕೇಂದ್ರಕ್ಕಾಗಿ ಅಡಿಪಾಯ ಹಾಕಿದೆ ಎಂದರು.
ಬಲವಾದ ಮತ್ತು ಹೆಚ್ಚು ಕ್ಷಮತೆಯ ಜಾಗತಿಕ ಆರೋಗ್ಯ ಭದ್ರತಾ ತಳಹದಿಯನ್ನು ಸೃಷ್ಟಿಸಲು ಹಾಗು ವಿಶ್ವ ಆರೋಗ್ಯ ಸಂಸ್ಥೆಯನ್ನು ಬಲಪಡಿಸಲು ಮತ್ತು ಸುಧಾರಿಸಲು ಪ್ರಧಾನಮಂತ್ರಿ ಅವರು ಕರೆ ನೀಡಿದರು.
ಕ್ಯಾರಿಕಾಮ್ ನ ಅಧ್ಯಕ್ಷರಾಗಿ ರಾಜ್ಯ / ಬೆಲಿಜ್ ನ ಸರ್ಕಾರದ ಮುಖ್ಯಸ್ಥರು,ಆಫ್ರಿಕನ್ ಯೂನಿಯನ್ ನ ಅಧ್ಯಕ್ಷರಾಗಿ ಸೆನೆಗಲ್, ಜಿ-20 ಅಧ್ಯಕ್ಷರಾಗಿ ಇಂಡೋನೇಷ್ಯಾ ಮತ್ತು ಜಿ 7 ರ ಅಧ್ಯಕ್ಷರಾಗಿ ಜರ್ಮನಿ ಈ ಕಾರ್ಯಕ್ರಮದ ಸಹ-ಆತಿಥೇಯರಾಗಿ ಭಾಗವಹಿಸಿದ್ದರು. ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ, ವಿಶ್ವ ಆರೋಗ್ಯ ಸಂಸ್ಥೆಯ ಮಹಾನಿರ್ದೇಶಕರು ಮತ್ತು ಇತರ ಗಣ್ಯರು ಸಹ ಭಾಗವಹಿಸಿದ್ದರು.
2021 ರ ಸೆಪ್ಟೆಂಬರ್ 22 ರಂದು ಅಧ್ಯಕ್ಷ ಬೈಡನ್ ಆಯೋಜಿಸಿದ್ದ ಮೊದಲ ಜಾಗತಿಕ ಕೋವಿಡ್ ವರ್ಚುವಲ್ ಶೃಂಗಸಭೆಯಲ್ಲಿ ಪ್ರಧಾನಿ ಭಾಗವಹಿಸಿದ್ದರು.