ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು 2023 ಮೇ 20ರಂದು ಜಪಾನ್‌ನ ಹಿರೋಷಿಮಾದಲ್ಲಿ ನಡೆದ 3ನೇ ಕ್ವಾಡ್ ನಾಯಕರ ಶೃಂಗಸಭೆಯಲ್ಲಿ ಭಾಗವಹಿಸಿದ್ದರು. ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್, ಜಪಾನ್ ಪ್ರಧಾನಿ ಫ್ಯೂಮಿಯೊ ಕಿಶಿಡಾ ಮತ್ತು ಅಮೆರಿಕ ಅಧ್ಯಕ್ಷ ಜೋಸೆಫ್ ಬೈಡೆನ್ ಸಹ ಪಾಲ್ಗೊಂಡಿದ್ದರು.
ಈ ಎಲ್ಲಾ ನಾಯಕರು ಇಂಡೋ-ಪೆಸಿಫಿಕ್ ವಲಯದ ಬೆಳವಣಿಗೆಗಳ ಬಗ್ಗೆ ಫಲಪ್ರದ ಸಂವಾದ ನಡೆಸಿದರು, ಇದು ಅವರ ಹಂಚಿತ ಪ್ರಜಾಪ್ರಭುತ್ವ ಮೌಲ್ಯಗಳು ಮತ್ತು ಕಾರ್ಯತಂತ್ರ ಹಿತಾಸಕ್ತಿಗಳನ್ನು ದೃಢಪಡಿಸಿತು. ಮುಕ್ತ, ನ್ಯಾಯಸಮ್ಮತ ಮತ್ತು ಎಲ್ಲರನ್ನೂ ಒಳಗೊಂಡ ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಯ ದೃಷ್ಟಿಕೋನದಿಂದ ಮಾರ್ಗದರ್ಶಿಸಲ್ಪಟ್ಟ ಸಂವಾದ ಅದಾಗಿತ್ತು. ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ವಿವಾದಗಳ ಶಾಂತಿಯುತ ಪರಿಹಾರದ ತತ್ವಗಳನ್ನು ಎತ್ತಿಹಿಡಿಯುವ ಪ್ರಾಮುಖ್ಯತೆಯನ್ನು ಈ ನಾಯಕರು ಪುನರುಚ್ಚರಿಸಿದರು. ಈ ಸಂದರ್ಭದಲ್ಲಿ, ನಾಯಕರು “ಇಂಡೋ-ಪೆಸಿಫಿಕ್ ವಲಯದ ಅಭಿವೃದ್ಧಿಗಾಗಿ ಅಸ್ತಿತ್ವದಲ್ಲಿರುವ ಪಾಲುದಾರಿಕೆ - ಕ್ವಾಡ್ ನಾಯಕರ ಮುನ್ನೋಟ ಹೇಳಿಕೆ” ಬಿಡುಗಡೆ ಮಾಡಿದರು, ಇದು ಅವರ ತತ್ವದ ಕಾರ್ಯವಿಧಾನವನ್ನು ಸ್ಪಷ್ಟಪಡಿಸುತ್ತದೆ.
ಇಂಡೋ-ಪೆಸಿಫಿಕ್ ವಲಯದ ಸದೃಢತೆ ಮತ್ತು ಸಮೃದ್ಧಿಯನ್ನು ಬಲಪಡಿಸಲು ನಾಯಕರು ಈ ಕೆಳಗಿನ ಉಪಕ್ರಮಗಳನ್ನು ಘೋಷಿಸಿದರು. ಅದು ಈ ಪ್ರದೇಶದ ಅಭಿವೃದ್ಧಿ ಆದ್ಯತೆಗಳಿಗೆ ಪೂರಕವಾಗಿದೆ:
ಎ. ಸ್ವಚ್ಛ ಇಂಧನ ಪೂರೈಕೆ ಸರಪಳಿಯ ಉಪಕ್ರಮ: ಇದು ಇಂಡೋ-ಪೆಸಿಫಿಕ್ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯನ್ನು ಸುಲಭಗೊಳಿಸುತ್ತದೆ, ಇಂಡೋ-ಪೆಸಿಫಿಕ್ ವಲಯದ ಇಂಧನ ಪರಿವರ್ತನೆಯನ್ನು ಬೆಂಬಲಿಸುತ್ತದೆ. ಜತೆಗೆ, ಸ್ವಚ್ಛ ಇಂಧನ ಪೂರೈಕೆ ಸರಪಳಿಯ ಕ್ವಾಡ್ ತತ್ವಗಳನ್ನು ಸ್ವಚ್ಛ ಇಂಧನ ಪೂರೈಕೆ ಸರಪಳಿಯ ಅಭಿವೃದ್ಧಿಯಲ್ಲಿ ಈ ಪ್ರದೇಶದ ಜತೆಗಿನ ತೊಡಗಿಸಿಕೊಳ್ಳುವಿಕೆಗೆ ಇದು ಮಾರ್ಗದರ್ಶನ ಮಾಡುತ್ತದೆ.
ಬಿ. ತಮ್ಮ ದೇಶಗಳಲ್ಲಿ ಸಮರ್ಥನೀಯ ಮತ್ತು ಕಾರ್ಯಸಾಧ್ಯವಾದ ಮೂಲಸೌಕರ್ಯವನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ನಿರ್ವಹಿಸಲು ಹಾಗೂ ಈ ಪ್ರದೇಶದ ನೀತಿ ನಿರೂಪಕರು ಮತ್ತು ಪಾಲುದಾರರನ್ನು ಬೆಂಬಲಿಸಲು 'ಕ್ವಾಡ್ ಮೂಲಸೌಕರ್ಯ ಫೆಲೋಶಿಪ್ ಕಾರ್ಯಕ್ರಮ ಜಾರಿಗೆ ಒಪ್ಪಿಗೆ.
ಸಿ. ಈ ನಿರ್ಣಾಯಕ ಜಾಲಗಳನ್ನು ಸುರಕ್ಷಿತವಾಗಿ ವೈವಿಧ್ಯಗೊಳಿಸಲು ನೀರೊಳಗೆ ಕೇಬಲ್‌ಗಳ ವಿನ್ಯಾಸ, ಉತ್ಪಾದನೆ, ಅಳವಡಿಕೆ ಮತ್ತು ನಿರ್ವಹಣೆಯಲ್ಲಿ ಕ್ವಾಡ್‌ನ ಸಾಮೂಹಿಕ ಪರಿಣತಿಯನ್ನು ಹತೋಟಿಗೆ ತರಲು 'ಕೇಬಲ್ ಸಂಪರ್ಕ ಮತ್ತು ನಿರೋಧಕ ಕ್ರಮಗಳಲ್ಲಿ ಪಾಲುದಾರಿಕೆ'.
ಡಿ. ಪೆಸಿಫಿಕ್ ಪ್ರದೇಶದಲ್ಲಿ ಮೊದಲನೆಯದಾದ ಪಲಾವ್‌ನಲ್ಲಿ ಸಣ್ಣ ಪ್ರಮಾಣದ ORAN(Open Radio Access Network) ನಿಯೋಜನೆಗೆ ಕ್ವಾಡ್ ಬೆಂಬಲ. ಮುಕ್ತ, ಅಂತರ್ ಕಾರ್ಯಾಚರಣೆ ಮತ್ತು ಸುರಕ್ಷಿತ ಟೆಲಿಕಾಂ ಪ್ಲಾಟ್‌ಫಾರ್ಮ್‌ಗಳಲ್ಲಿ ಉದ್ಯಮ ಹೂಡಿಕೆ ಬೆಂಬಲಿಸಲು ನಾಯಕರು ORAN ಭದ್ರತಾ ವರದಿ ಬಿಡುಗಡೆ ಮಾಡಿದರು.
ಇ. ಕ್ವಾಡ್ ಹೂಡಿಕೆದಾರರ ಜಾಲ ಆರಂಭ: ಖಾಸಗಿ ವಲಯದ ನೇತೃತ್ವದ ವೇದಿಕೆಯಾಗಿ ಕಾರ್ಯತಂತ್ರ ತಂತ್ರಜ್ಞಾನಗಳಲ್ಲಿ ಹೂಡಿಕೆ ಸುಲಭಗೊಳಿಸಲು ಪ್ರಾರಂಭಿಸಲಾಗಿದೆ.
ಎಫ್. ಕಳೆದ ವರ್ಷ ಟೋಕಿಯೊದಲ್ಲಿ ನಡೆದ ಕ್ವಾಡ್ ಶೃಂಗಸಭೆಯಲ್ಲಿ ಘೋಷಿಸಲಾದ ಸಾಗರ ವಲಯದ ಜಾಗೃತಿಗಾಗಿ ಇಂಡೋ-ಪೆಸಿಫಿಕ್ ಪಾಲುದಾರಿಕೆಯ ಪ್ರಗತಿಯನ್ನು ನಾಯಕರು ಸ್ವಾಗತಿಸಿದರು. ಈ ಕಾರ್ಯಕ್ರಮದ ಅಡಿ, ಆಗ್ನೇಯ ಮತ್ತು ಪೆಸಿಫಿಕ್ ವಲಯದ ಪಾಲುದಾರರೊಂದಿಗೆ ದತ್ತಾಂಶ ಹಂಚಿಕೆ ಪ್ರಗತಿಯಲ್ಲಿದ್ದು, ಶೀಘ್ರದಲ್ಲೇ ಹಿಂದೂ ಮಹಾಸಾಗರ ಪ್ರದೇಶದಲ್ಲಿ ಪಾಲುದಾರರನ್ನು ಒಳಗೊಳ್ಳಲಿದೆ ಎಂದು ಅವರು ಪ್ರಸ್ತಾಪಿಸಿದರು. ಇಂಡೋ-ಪೆಸಿಫಿಕ್ ವಲಯದಲ್ಲಿ ಬೇಡಿಕೆ-ಚಾಲಿತ ಅಭಿವೃದ್ಧಿ ಸಹಕಾರಕ್ಕೆ ಭಾರತದ ಕಾರ್ಯವಿಧಾನವು ಈ ಪ್ರಯತ್ನಗಳಿಗೆ ಹೇಗೆ ಕೊಡುಗೆ ನೀಡುತ್ತಿದೆ ಎಂಬುದನ್ನು ಪ್ರಧಾನಿ ಶ್ರೀ ಮೋದಿ ಅವರು ಬೆಳಕು ಚೆಲ್ಲಿದರು.
ವಿಶ್ವಸಂಸ್ಥೆ, ಅದರ ನಾಗರೀಕ ಸನ್ನದು ಮತ್ತು ಅದರ ಏಜೆನ್ಸಿಗಳ ಸಮಗ್ರತೆ ಕಾಪಾಡುವ ಅಗತ್ಯವನ್ನು ನಾಯಕರು ಒಪ್ಪಿಕೊಂಡರು. ಶಾಶ್ವತ ಮತ್ತು ಶಾಶ್ವತವಲ್ಲದ ಎರಡೂ ವಿಭಾಗಗಳಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವದ ವಿಸ್ತರಣೆ ಸೇರಿದಂತೆ ಬಹುಪಕ್ಷೀಯ ವ್ಯವಸ್ಥೆ ಬಲಪಡಿಸಲು ಮತ್ತು ಸುಧಾರಿಸಲು ತಮ್ಮೆಲ್ಲಾ ಪ್ರಯತ್ನಗಳನ್ನು ಮುಂದುವರಿಸಲು ನಾಯಕರು ಒಪ್ಪಿಕೊಂಡರು.
ಕ್ವಾಡ್‌ನ ರಚನಾತ್ಮಕ ಕಾರ್ಯಸೂಚಿ ಕ್ರೋಢೀಕರಿಸುವ ಮತ್ತು ಪ್ರದೇಶಕ್ಕೆ ಸ್ಪಷ್ಟವಾದ ಫಲಿತಾಂಶಗಳನ್ನು ನೀಡುವ ಮಹತ್ವಕ್ಕೆ ಪ್ರಧಾನಮಂತ್ರಿ ಒತ್ತು ನೀಡಿದರು. ನಾಯಕರು ತಮ್ಮ ನಿಯಮಿತ ಸಂವಾದ ಮುಂದುವರಿಸಲು ಮತ್ತು ಕ್ವಾಡ್ ತೊಡಗಿಸಿಕೊಳ್ಳುವಿಕೆಯ ವೇಗ ಕಾಪಾಡಿಕೊಳ್ಳಲು ಒಪ್ಪಿಕೊಂಡರು. 2024ರಲ್ಲಿ ಭಾರತದಲ್ಲಿ ಜರುಗಲಿರುವ ಮುಂದಿನ ಕ್ವಾಡ್ ಶೃಂಗಸಭೆಗೆ ಕ್ವಾಡ್ ನಾಯಕರನ್ನು ಭಾರತಕ್ಕೆ ಆಗಮಿಸುವಂತೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಆಹ್ವಾನ ನೀಡಿದರು.