ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ಅಮೇರಿಕಾ ಅಧ್ಯಕ್ಷ ಶ್ರೀ ಜೋಸೆಫ್ ಆರ್. ಬೈಡನ್, ಇಂದು ವಾಷಿಂಗ್ಟನ್ ಡಿಸಿಯ ಶ್ವೇತಭವನದಲ್ಲಿ ಭಾರತ-ಅಮೇರಿಕಾ ಹೈಟೆಕ್ ಹ್ಯಾಂಡ್‌ಶೇಕ್ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಅಮೇರಿಕಾ ವಾಣಿಜ್ಯ ಕಾರ್ಯದರ್ಶಿ ಶ್ರೀಮತಿ ಗಿನಾ ರೈಮಂಡೊ ನಿರ್ವಹಿಸಿದರು. ಟೆಕ್ ಕಂಪನಿಗಳು ಮತ್ತು ಸ್ಟಾರ್ಟ್‌ಅಪ್‌ಗಳ ಪ್ರಮುಖ ಭಾರತೀಯ ಮತ್ತು ಅಮೇರಿಕನ್ ಸಿಇಒಗಳು ಇದರಲ್ಲಿ ಭಾಗವಹಿಸಿದರು. ಕಾರ್ಯಕ್ರಮವು ‘ಎಲ್ಲರಿಗೂ ಎಐ’ ಮತ್ತು ‘ಮನುಕುಲಕ್ಕಾಗಿ ತಯಾರಿಕೆʼ (ಮ್ಯಾನುಫ್ಯಾಕ್ಚರಿಂಗ್ ಫಾರ್ ಮ್ಯಾನ್‌ಕೈಂಡ್) ಕುರಿತು ಕೇಂದ್ರೀಕೃತವಾಗಿತ್ತು.
ಭಾರತ ಮತ್ತು ಅಮೇರಿಕಾ ನಡುವಿನ ಗಾಢವಾದ ತಂತ್ರಜ್ಞಾನದ ಸಹಯೋಗವನ್ನು ಪರಿಶೀಲಿಸಲು ಉಭಯ ನಾಯಕರಿಗೆ ಈ ಕಾರ್ಯಕ್ರಮವು ಒಂದು ಅವಕಾಶವಾಗಿತ್ತು. ತಮ್ಮ ನಾಗರಿಕರು ಮತ್ತು ಜಗತ್ತಿನ ಅಗತ್ಯಗಳನ್ನು ಪೂರೈಸಲು ಎಐ (ಕೃತಕ ಬುದ್ಧಿಮತ್ತೆ) ಆಧಾರಿತ ಅಂತರ್ಗತ ಆರ್ಥಿಕತೆಯನ್ನು ಅಳವಡಿಸಿಕೊಳ್ಳುವಲ್ಲಿ ಭಾರತ-ಅಮೇರಿಕಾ ತಂತ್ರಜ್ಞಾನ ಪಾಲುದಾರಿಕೆಯ ಪಾತ್ರ ಮತ್ತು ಸಾಮರ್ಥ್ಯವನ್ನು ಕುರಿತು ಚರ್ಚೆಗಳು ನಡೆದವು. ಎರಡೂ ತಂತ್ರಜ್ಞಾನ ಪರಿಸರ ವ್ಯವಸ್ಥೆಗಳ ನಡುವೆ ಅಸ್ತಿತ್ವದಲ್ಲಿರುವ ಸಂಪರ್ಕಗಳು, ಭಾರತದ ಪ್ರತಿಭಾನ್ವಿತ ಕಾರ್ಯಪಡೆ ಮತ್ತು ಜಾಗತಿಕ ಸಹಯೋಗಗಳನ್ನು ನಿರ್ಮಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದಲ್ಲಿ ಭಾರತವು ಮಾಡಿರುವ ಪ್ರಗತಿಗಳನ್ನು ಬಳಸಿಕೊಳ್ಳುವ ಮಾರ್ಗಗಳನ್ನು ಸಿಇಒಗಳು ಅನ್ವೇಷಿಸಿದರು. ಕಾರ್ಯತಂತ್ರದ ಸಹಯೋಗಗಳನ್ನು ಆರಂಭಿಸಲು, ಮಾನದಂಡಗಳ ಮೇಲೆ ಸಹಕರಿಸಲು ಮತ್ತು ನಾವೀನ್ಯತೆಯನ್ನು ಉತ್ತೇಜಿಸಲು ಆಯಾ ಉದ್ಯಮಗಳ ನಡುವೆ ನಿಯಮಿತ ತೊಡಗಿಸಿಕೊಳ್ಳುವಿಕೆಗೆ ಅವರು ಕರೆ ನೀಡಿದರು.
ಪ್ರಧಾನಮಂತ್ರಿಯವರು ಮಾತನಾಡಿ, ಸಾಮಾಜಿಕ-ಆರ್ಥಿಕ ಬೆಳವಣಿಗೆಗೆ ಭಾರತ-ಅಮೇರಿಕಾ ತಂತ್ರಜ್ಞಾನ ಸಹಕಾರವನ್ನು ಬಳಸಿಕೊಳ್ಳುವ ಅಪಾರ ಸಾಮರ್ಥ್ಯವನ್ನು ಒತ್ತಿ ಹೇಳಿದರು. ನಾವೀನ್ಯತೆ ಸಂಸ್ಕೃತಿಯನ್ನು ಬೆಳೆಸುವಲ್ಲಿ ಭಾರತದ ಪ್ರತಿಭಾವಂತ ಯುವಕರ ಕೊಡುಗೆಯನ್ನು ಅವರು ಶ್ಲಾಘಿಸಿದರು. ಬಯೋಟೆಕ್ನಾಲಜಿ ಮತ್ತು ಕ್ವಾಂಟಮ್ ಸೇರಿದಂತೆ ಹೊಸ ಕ್ಷೇತ್ರಗಳಿಗೆ ಭಾರತ-ಯುಎಸ್ ಟೆಕ್ ಪಾಲುದಾರಿಕೆಯನ್ನು ವಿಸ್ತರಿಸಲು ಸಹಾಯ ಮಾಡುವಂತೆ ಅಧ್ಯಕ್ಷ ಬೈಡನ್ ಸಿಇಒಗಳಿಗೆ ಕರೆ ನೀಡಿದರು. ನಮ್ಮ ನಾಗರಿಕರಿಗೆ ಮತ್ತು ಜಗತ್ತಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸುವಲ್ಲಿ ಭಾರತ-ಅಮೇರಿಕಾ ಪಾಲುದಾರಿಕೆ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಇಬ್ಬರೂ ನಾಯಕರು ಒತ್ತಿ ಹೇಳಿದರು.
ಈ ಸಂದರ್ಭದಲ್ಲಿ ಕೆಳಕಂಡ ಉದ್ಯಮಿಗಳು ಭಾಗವಹಿಸಿದ್ದರು:
ಅಮೇರಿಕಾದಿಂದ:
1. ರೇವತಿ ಅದ್ವೈತಿ, ಸಿಇಒ, ಫ್ಲೆಕ್ಸ್
2. ಸ್ಯಾಮ್ ಆಲ್ಟ್‌ಮನ್, ಸಿಇಒ, ಓಪನ್ ಎಐAI
3. ಮಾರ್ಕ್ ಡೌಗ್ಲಾಸ್, ಅಧ್ಯಕ್ಷ ಮತ್ತು ಸಿಇಒ, ಎಫ್ ಎಂ ಸಿ ಕಾರ್ಪೊರೇಷನ್
4. ಲಿಸಾ ಸು, ಸಿಇಒ, ಎಎಂಡಿ
5. ವಿಲ್ ಮಾರ್ಷಲ್, ಸಿಇಒ, ಪ್ಲಾನೆಟ್ ಲ್ಯಾಬ್ಸ್
6. ಸತ್ಯ ನಾದೆಲ್ಲಾ, ಸಿಇಒ, ಮೈಕ್ರೋಸಾಫ್ಟ್
7. ಸುಂದರ್ ಪಿಚೈ, ಸಿಇಒ, ಗೂಗಲ್
8. ಹೇಮಂತ್ ತನೇಜಾ, ಸಿಇಒ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್, ಜನರಲ್ ಕ್ಯಾಟಲಿಸ್ಟ್
9. ಥಾಮಸ್ ಟುಲ್, ಸ್ಥಾಪಕ, ತುಲ್ಕೊ ಎಲ್ ಎಲ್ ಸಿ
10.ಸುನೀತಾ ವಿಲಿಯಮ್ಸ್, ನಾಸಾ ಗಗನಯಾತ್ರಿ
ಭಾರತದಿಂದ:
1. ಶ್ರೀ ಆನಂದ್ ಮಹೀಂದ್ರಾ, ಮಹೀಂದ್ರಾ ಸಮೂಹದ ಅಧ್ಯಕ್ಷರು
2. ಶ್ರೀ ಮುಖೇಶ್ ಅಂಬಾನಿ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮತ್ತು ಎಂಡಿ
3. ಶ್ರೀ ನಿಖಿಲ್ ಕಾಮತ್, ಸಹ-ಸಂಸ್ಥಾಪಕರು, ಝೆರೋಧಾ & ಟ್ರೂ ಬೀಕನ್
4. ಶ್ರೀಮತಿ ವೃಂದಾ ಕಪೂರ್, ಸಹ-ಸಂಸ್ಥಾಪಕಿ, 3rdiTech