ಘನತೆವೆತ್ತರೆ,
ನಮಸ್ಕಾರ!
ನಿಮ್ಮ ಹೇಳಿಕೆಗೆ ಧನ್ಯವಾದಗಳು.
ಘನತೆವೆತ್ತರೇ,
ಕೋವಿಡ್ -19ರಿಂದ ಫಿನ್ ಲ್ಯಾಂಡ್ ನಲ್ಲಿ ಸಂಭವಿಸಿದ ಜೀವಹಾನಿಗೆ ಭಾರತದ ಪರವಾಗಿ ನಾನು ಸಂತಾಪ ಸೂಚಿಸುತ್ತೇನೆ. ನಿಮ್ಮ ನೇತೃತ್ವದಲ್ಲಿ, ಫಿನ್ ಲ್ಯಾಂಡ್ ಈ ಸಾಂಕ್ರಾಮಿಕವನ್ನು ಸಮರ್ಥವಾಗಿ ನಿರ್ವಹಿಸಿದೆ. ಅದಕ್ಕಾಗಿ ನಾನು ನಿಮ್ಮನ್ನು ಅಭಿನಂದಿಸುತ್ತೇನೆ.
ಘನತೆವೆತ್ತರೇ,
ಸಾಂಕ್ರಾಮಿಕದ ವೇಳೆ, ಭಾರತ ತನ್ನ ದೇಶೀಯ ಕಾಳಜಿಯನ್ನು ತೆಗೆದುಕೊಂಡಿದ್ದಷ್ಟೇ ಅಲ್ಲ, ವಿಶ್ವದ ಅಗತ್ಯವನ್ನೂ ಪೂರೈಸಿತು. ಕಳೆದ ವರ್ಷ ನಾವು, ಔಷಧ ಮತ್ತು ಇತರ ಅಗತ್ಯ ವಸ್ತುಗಳನ್ನು 150 ರಾಷ್ಟ್ರಗಳಿಗೆ ಪೂರೈಕೆ ಮಾಡಿದ್ದೇವೆ. ಇತ್ತೀಚೆಗೆ ನಾವು ಭಾರತದಲ್ಲಿ ತಯಾರಿಸಲಾದ 58 ದಶಲಕ್ಷ ಡೋಸ್ ಲಸಿಕೆಯನ್ನು 70 ದೇಶಗಳಿಗೆ ಪೂರೈಸಿದ್ದೇವೆ. ನಾವು ನಮ್ಮ ದಕ್ಷತೆಗೆ ಅನುಗುಣವಾಗಿ ಮಾನವತೆಗೆ ಬೆಂಬಲ ನೀಡುತ್ತೇವೆ ಎಂಬ ಭರವಸೆಯನ್ನು ನೀಡುತ್ತೇನೆ.
ಘನತೆವೆತ್ತರೆ,
ಫಿನ್ ಲ್ಯಾಂಡ್ ಮತ್ತು ಭಾರತ ಎರಡೂ ನಿಯಮ ಆಧಾರಿತ, ಪಾರದರ್ಶಿ, ಮಾನವೀಯತೆಯ ರಾಷ್ಟ್ರವಾಗಿದ್ದು ಲೋಕತಂತ್ರದ ಮೇಲೆ ನಂಬಿಕೆ ಇಟ್ಟಿವೆ. ಎರಡೂ ದೇಶಗಳು ತಂತ್ರಜ್ಞಾನ, ನಾವಿನ್ಯ, ಶುದ್ಧ ಇಂಧನ, ಪರಿಸರ, ಶಿಕ್ಷಣ ಇತ್ಯಾದಿ ಕ್ಷೇತ್ರಗಳಲ್ಲಿ ಬಲವಾದ ಸಹಕಾರ ಹೊಂದಿವೆ. ಎಲ್ಲ ವಲಯಗಳೂ ಕೋವಿಡ್ ನಂತರದ ಕಾಲದಲ್ಲಿ ಜಾಗತಿಕ ಆರ್ಥಿಕ ಚೇತರಿಕೆಗೆ ತುಂಬಾ ಮಹತ್ವದ್ದಾಗಿವೆ. ಫಿನ್ ಲ್ಯಾಂಡ್ ಶುದ್ಧ ಇಂಧನ ಕ್ಷೇತ್ರದಲ್ಲಿ ಜಾಗತಿಕ ನಾಯಕನಾಗಿದೆ, ಮತ್ತು ಭಾರತದ ಮಹತ್ವದ ಪಾಲುದಾರ ರಾಷ್ಟ್ರವಾಗಿದೆ. ನೀವು ಯಾವಾಗೆಲ್ಲ ಹವಾಮಾನದ ಬಗ್ಗೆ ಕಾಳಜಿ ವ್ಯಕ್ತಪಡಿಸುತ್ತೀರಿ, ನಾನು ಕೆಲವೊಮ್ಮೆ ಸ್ನೇಹಿತರ ಬಳಿ ತಮಾಷೆಯಾಗಿ ಹೇಳುತ್ತಿರುತ್ತೇನೆ, ನಾವು ಪ್ರಕೃತಿಯ ಮೇಲೆ ತುಂಬಾ ದೌರ್ಜನ್ಯ ಮಾಡಿದ್ದೇವೆ, ಹೀಗಾಗಿಯೇ ಅದು ಮುನಿದಿದೆ, ಇದರಿಂದ ನಾವು ಇಂದು ಮುಖ ಮುಚ್ಚಿಕೊಂಡು ತಿರುಗಾಡುವಂತಾಗಿದೆ ಎಂದು. ಭಾರತದಲ್ಲಿ ನಾವು ಹವಾಮಾನ ಉದ್ದೇಶಗಳನ್ನು ಸಾಧಿಸಲು ಮಹತ್ವಾಕಾಂಕ್ಷೆಯ ಗುರಿಗಳನ್ನು ಹಾಕಿಕೊಂಡಿದ್ದೇವೆ. ನವೀಕರಿಸಬಹುದಾದ ಇಂಧನದಲ್ಲಿ ನಾವು 2030ರಹೊತ್ತಿಗೆ 450 ಗಿ.ವ್ಯಾ. ಸಾಮರ್ಥ್ಯ ಸ್ಥಾಪನೆಯ ಗುರಿ ಹಾಕಿಕೊಂಡಿದ್ದೇವೆ. ನಾವು ಅಂತಾರಾಷ್ಟ್ರೀಯ ಸೌರ ಸಹಯೋಗ (ಐ.ಎಸ್.ಎ.)ದಂತಹ ಉಪಕ್ರಮಗಳನ್ನೂ ಕೈಗೊಂಡಿದ್ದೇವೆ. ಮತ್ತು ಅಂತಾರಾಷ್ಟ್ರೀಯ ಸಹಕಾರವನ್ನು ಹೆಚ್ಚಿಸಲು ವಿಪತ್ತು ತಾಳಿಕೊಳ್ಳುವ ಮೂಲಸೌಕರ್ಯ (ಸಿಡಿಆರ್.ಐ ಒಕ್ಕೂಟ. ಫಿನ ಲ್ಯಾಂಡ್ ಐ.ಎಸ್.ಎ. ಮತ್ತು ಸಿ.ಡಿ.ಆರ್.ಐಗೆ ಸೇರಲು ನಾನು ಒತ್ತಾಯಿಸುತ್ತೇನೆ. ಈ ಅಂತಾರಾಷ್ಟ್ರೀಯ ಸಂಸ್ಥೆಗಳು ಫಿನ್ ಲ್ಯಾಂಡ್ ನ ಪರಿಣತಿಯಿಂದ ಹೆಚ್ಚಿನ ಪ್ರಯೋಜನವನ್ನು ಪಡೆಯುತ್ತವೆ.
ಘನತೆವೆತ್ತರೆ,
ಹೊಸ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಡಿಜಿಟಲ್ ಮೂಲಸೌಕರ್ಯ, ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಫಿನ್ ಲ್ಯಾಂಡ್ ಪ್ರಮುಖ ಸ್ಥಾನವನ್ನು ಹೊಂದಿದೆ. ಈ ಎಲ್ಲ ಕ್ಷೇತ್ರಗಳಲ್ಲಿ ನಮಗೆ ಸಹಕಾರದ ಸಾಮರ್ಥ್ಯವಿದೆ. ಇಂದು ನಾವು ಐಸಿಟಿ, ಮೊಬೈಲ್ ತಂತ್ರಜ್ಞಾನ ಮತ್ತು ಡಿಜಿಟಲ್ ಶಿಕ್ಷಣ ಕ್ಷೇತ್ರಗಳಲ್ಲಿ ಹೊಸ ಪಾಲುದಾರಿಕೆಯನ್ನು ಘೋಷಿಸುತ್ತಿರುವುದಕ್ಕೆ ನನಗೆ ಸಂತೋಷವಾಗಿದೆ. ನಮ್ಮ ಶಿಕ್ಷಣ ಸಚಿವಾಲಯವೂ ಉನ್ನತ ಮಟ್ಟದ ಸಂವಾದವನ್ನು ಪ್ರಾರಂಭಿಸುತ್ತಿದೆ. ಇಂದಿನ ಶೃಂಗಸಭೆಯು ಭಾರತ- ಫಿನ್ ಲ್ಯಾಂಡ್ ಸಂಬಂಧಗಳ ಅಭಿವೃದ್ಧಿಯನ್ನು ಇನ್ನಷ್ಟು ವೇಗಗೊಳಿಸುತ್ತದೆ ಎಂದು ನಾನು ಭಾವಿಸುತ್ತೇನೆ.
ಘನತೆವೆತ್ತರೆ,
ಇದು ಇಂದು ನಮ್ಮ ಮೊದಲ ಸಭೆ. ನಾವು ವೈಯಕ್ತಿಕವಾಗಿ ಭೇಟಿಯಾಗೋಣ ಎಂದು ಹಾರೈಸುತ್ತೇನೆ. ಆದರೆ ಕಳೆದ ಒಂದು ವರ್ಷದಿಂದ, ನಾವೆಲ್ಲರೂ ತಂತ್ರಜ್ಞಾನದ ಸಹಾಯದಿಂದ ವರ್ಚುವಲ್ ಮೂಲಕ ಭೇಟಿಯಾಗುವುದಕ್ಕೆ ಒಗ್ಗಿಕೊಳ್ಳುತ್ತಿದ್ದೇವೆ. ಆದರೆ ಪೋರ್ಚುಗಲ್ ನಲ್ಲಿ ನಡೆಯಲಿರುವ ಭಾರತ-ಇಯು ಶೃಂಗಸಭೆ ಮತ್ತು ಡೆನ್ಮಾರ್ಕ್ ನಲ್ಲಿ ನಡೆಯಲಿರುವ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಶೀಘ್ರದಲ್ಲೇ ನಾವು ಭೇಟಿಯಾಗಲು ಅವಕಾಶವಿದೆ ಎಂಬುದು ನನಗೆ ಹರ್ಷವೆನಿಸುತ್ತದೆ. ಭಾರತಕ್ಕೆ ಭೇಟಿ ನೀಡಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ನಿಮಗೆ ಅನುಕೂಲಕರವಾದ ದಿನದಲ್ಲಿ ದಯವಿಟ್ಟು ಭಾರತಕ್ಕೆ ಬನ್ನಿ. ನನ್ನ ಪ್ರಾಸ್ತಾವಿಕ ಹೇಳಿಕೆಗಳನ್ನು ಪರಿಸಮಾಪ್ತಿಗೊಳಿಸುತ್ತೇನೆ. ಮುಂದಿನ ಅಧಿವೇಶನದಲ್ಲಿ ನಾವು ಹೆಚ್ಚು ಚರ್ಚಿಸೋಣ.
ತುಂಬಾ ಧನ್ಯವಾದಗಳು.
ಘೋಷಣೆ: ಇದು ಪ್ರಧಾನಮಂತ್ರಿಯವರ ಭಾಷಣದ ಅಂದಾಜು ಅನುವಾದ. ಮೂಲ ಭಾಷಣವನ್ನು ಹಿಂದಿಯಲ್ಲಿ ಮಾಡಲಾಗಿದೆ.