ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಗುಜರಾತಿನ ಬೆಚರಾಜಿಯಲ್ಲಿ ಶ್ರೀ ಪ್ರಹ್ಲಾದ್ ಜೀ ಪಟೇಲ್ ಅವರ 115ನೇ ಜಯಂತಿ ಮತ್ತು ಜೀವನ ಚರಿತ್ರೆ ಕೃತಿ ಬಿಡುಗಡೆ ಕಾರ್ಯಕ್ರಮವನ್ನು ವೀಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ, ಮಾತನಾಡಿದರು. ಈ ಸಂದರ್ಭದಲ್ಲಿ ಗುಜರಾತ್ ಮುಖ್ಯಮಂತ್ರಿ ಶ್ರೀ ಭೂಪೇಂದ್ರಭಾಯಿ ಪಟೇಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಪ್ರಧಾನಮಂತ್ರಿ ಅವರು ಬೇಚರಾಜಿಯ ಪುಣ್ಯ ಭೂಮಿಗೆ ನಮನ ಸಲ್ಲಿಸಿದರು. ಸ್ವಾತಂತ್ರ್ಯ ಹೋರಾಟಗಾರ, ಸಮಾಜ ಸೇವಕ ಶ್ರೀ ಪ್ರಹ್ಲಾದ್ ಜೀ ಪಟೇಲ್ ಅವರ ಸ್ಮರಣಾರ್ಥ ನಮನ ಸಲ್ಲಿಸಿದರು. ಪ್ರಧಾನಮಂತ್ರಿಯವರು ಶ್ರೀ ಪ್ರಹ್ಲಾದಜೀ ಪಟೇಲ್ ಅವರ ಸಮಾಜ ಸೇವೆ, ತ್ಯಾಗವನ್ನು ಸ್ಮರಿಸಿದರು. ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಕರೆಗೆ ಓಗೊಟ್ಟು ಪಟೇಲ್ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡರು. ಸಾಬರಮತಿ ಮತ್ತು ಯೆರವಾಡ ಜೈಲುವಾಸ ಅನುಭವಿಸಿದರು ಎಂದು ಪ್ರಧಾನ ಮಂತ್ರಿ ನೆನಪಿಸಿ ಕೊಂಡರು.
ಶ್ರೀ ಪ್ರಹ್ಲಾದ್‌ಜೀ ಪಟೇಲ್ ಅವರಲ್ಲಿದ್ದ ‘ರಾಷ್ಟ್ರ ಮೊದಲು’ ಎಂಬ ಮನೋಭಾವ ಮತ್ತು ಪರಕಲ್ಪನೆಯನ್ನು ಸ್ಮರಿಸಿದ ಪ್ರಧಾನಮಂತ್ರಿ ಅವರು, ಶ್ರೀ ಪಟೇಲ್ ಅವರು ಸೆರೆವಾಸದಲ್ಲಿದ್ದಾಗ ಅವರ ತಂದೆ ನಿಧನರಾದರು ಆದರೆ ಶ್ರೀ ಪ್ರಹ್ಲಾದ್ ಜೀ ಪಟೇಲ್ ಅವರು ತಂದೆಯ ಅಂತ್ಯಕ್ರಿಯೆ ನೆರವೇರಿಸಬೇಕಾಗಿ ಬಂದ ಸಮಯದಲ್ಲಿ ಬ್ರಿಟಿಷ್ ವಸಾಹತುಶಾಹಿ ಆಡಳಿತ, ಅವರಿಗೆ ಕ್ಷಮಾಯಾಚನೆ ಸೇರಿದಂತೆ ಕೆಲವೊಂದು ಷರತ್ತುಗಳನ್ನು ವಿಧಿಸಿತು. ಆದರೆ ಪಟೇಲ್ ಅವರು ಅವುಗಳಿಗೆ ಒಪ್ಪಿಗೆ ನೀಡಲಿಲ್ಲ. ಅಂತಹ ಮಹಾನ್ ದೇಶಭಕ್ತರಾಗಿದ್ದರು ಪಟೇಲ್. ಅಲ್ಲದೆ, ಅವರು ಭೂಗತರಾಗಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಅನೇಕ ಸ್ವಾತಂತ್ರ್ಯ ಹೋರಾಟಗಾರರಿಗೆ ಬೆಂಬಲ ನೀಡಿದರು ಎಂದು ಪ್ರಧಾನಿ ಮೆಲುಕು ಹಾಕಿದರು.
ದೇಶ ಸ್ವಾತಂತ್ರ್ಯ ಗಳಿಸಿದ ನಂತರ ರಾಜಪ್ರಭುತ್ವ ಆಡಳಿತವಿದ್ದ ರಾಜ್ಯಗಳ ವಿಲೀನದಲ್ಲಿ ಸರ್ದಾರ್ ಪಟೇಲ್ ಅವರಿಗೆ ಸಹಾಯ ಮಾಡುವಲ್ಲಿ ಶ್ರೀ ಪ್ರಹ್ಲಾದ್ ಜೀ ಪಟೇಲ್ ಅವರ ಪಾತ್ರ ಬುಹುದೊಡ್ಡದು ಎಂದು ಪ್ರಧಾನ ಮಂತ್ರಿ ತಿಳಿಸಿದರು. ಇಂತಹ ಅನೇಕ ಮಹಾನ್ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಇತಿಹಾಸ ಪುಸ್ತಕಗಳಲ್ಲಿ ಯಾವುದೇ ಉಲ್ಲೇಖವಿಲ್ಲ. ಇದು ವಿಷಾದನೀಯ ಸಂಗತಿ. ಪ್ರಹ್ಲಾದ್ ಜೀ ಪಟೇಲ್ ಅವರ ಪತ್ನಿ ಕಾಶಿ ಬಾ ಅವರಿಗೆ ಪ್ರಧಾನ ಮಂತ್ರಿ ಗೌರವ ನಮನ ಸಲ್ಲಿಸಿದರು. ಮಹಾನ್ ವ್ಯಕ್ತಿಗಳ ಜೀವನ ಮತ್ತು ಕಾರ್ಯಶೈಲಿಯ ದಾಖಲೀಕರಣವು ಯುವ ಪೀಳಿಗೆಯನ್ನು ಪ್ರೇರೇಪಿಸುತ್ತದೆ ಎಂದು ನರೇಂದ್ರ ಮೋದಿ ಹೇಳಿದರು.
ಸ್ವಾತಂತ್ರ್ಯ ಹೋರಾಟಗಾರರ ಬದುಕು ಮತ್ತು ಹೋರಾಟಗಳ ಅಜ್ಞಾತ ವಿಚಾರಗಳನ್ನು ಸಂಶೋಧಿಸಿ ಪ್ರಕಟಿಸಬೇಕು ಎಂದು ದೇಶದ ಎಲ್ಲಾ ವಿಶ್ವವಿದ್ಯಾಲಯಗಳಿಗೆ ಪ್ರಧಾನಿ ಕರೆ ನೀಡಿದರು. ನವ ಭಾರತ ನಿರ್ಮಾಣದ ಸಂಕಲ್ಪದಲ್ಲಿ ಶ್ರೀ ಪ್ರಹ್ಲಾದ್ ಜೀ ಪಟೇಲ್ ಅವರಂತಹ ಸ್ವಾತಂತ್ರ್ಯ ಹೋರಾಟಗಾರರನ್ನು ನಾವು ಸ್ಮರಿಸಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು.