ನಮಸ್ಕಾರ!
ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಗಾಗಿ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು!
ಬೆಂಗಳೂರು ನಗರವೇ ದೇಶದ ಯುವಕರ ಅಸ್ಮಿತೆಯಾಗಿದೆ. ಬೆಂಗಳೂರು ವೃತ್ತಿಪರರ ಹೆಮ್ಮೆಯಾಗಿದೆ. ಡಿಜಿಟಲ್ ಇಂಡಿಯಾ ಕೇಂದ್ರವಾದ ಬೆಂಗಳೂರಿನಲ್ಲಿ ಖೇಲೋ ಇಂಡಿಯಾವನ್ನು ಸಂಘಟಿಸುವುದು ಬಹಳ ಮಹತ್ವದ್ದಾಗಿದೆ. ನವೋದ್ಯಮಗಳ ಜಗತ್ತಿನಲ್ಲಿ ಕ್ರೀಡೆಗಳ ಈ ಸಮ್ಮಿಳನವು ನಿಜವಾಗಿಯೂ ಅದ್ಭುತವಾಗಿದೆ! ಬೆಂಗಳೂರಿನಲ್ಲಿ ನಡೆಯುವ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಈ ಸುಂದರ ನಗರದ ಶಕ್ತಿಯನ್ನು ಆಗಾಧಗೊಳಿಸುತ್ತದೆ ಮತ್ತು ದೇಶದ ಯುವಕರು ಸಹ ಹೊಸ ಉತ್ಸಾಹದೊಂದಿಗೆ ಮರಳಲಿದ್ದಾರೆ. ಈ ಆಟಗಳನ್ನು ಆಯೋಜಿಸಿದ್ದಕ್ಕಾಗಿ ನಾನು ಕರ್ನಾಟಕ ಸರ್ಕಾರವನ್ನು ಅಭಿನಂದಿಸುತ್ತೇನೆ. ಜಾಗತಿಕ ಸಾಂಕ್ರಾಮಿಕ ರೋಗದ ಎಲ್ಲಾ ಸವಾಲುಗಳ ನಡುವೆ, ಈ ಆಟವು ಭಾರತದ ಯುವಕರ ದೃಢ ನಿರ್ಧಾರ ಮತ್ತು ಉತ್ಸಾಹಕ್ಕೆ ಉದಾಹರಣೆಯಾಗಿದೆ. ನಿಮ್ಮ ಪ್ರಯತ್ನ ಮತ್ತು ಧೈರ್ಯಕ್ಕೆ ನಾನು ವಂದಿಸುತ್ತೇನೆ. ಇಂದು ಈ ಯೌವ್ವನದ ಮನೋಭಾವವು ದೇಶವನ್ನು ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ವೇಗದಲ್ಲಿ ಮುನ್ನಡೆಸುತ್ತಿದೆ.
ನನ್ನ ಯುವ ಸ್ನೇಹಿತರೇ,
ಯಶಸ್ವಿಯಾಗುವ ಮೊದಲ ಮಂತ್ರವೆಂದರೆ -
ತಂಡದ ಸ್ಫೂರ್ತಿ!
ಕ್ರೀಡೆಗಳ ಮೂಲಕ ನಾವು ಈ 'ತಂಡದ ಸ್ಫೂರ್ತಿ' ಬಗ್ಗೆ ಕಲಿಯುತ್ತೇವೆ. ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ನಲ್ಲಿ ನೀವು ಅದನ್ನು ಅನುಭವಿಸುತ್ತೀರಿ. ಈ ತಂಡದ ಮನೋಭಾವವು ತಮಗೆ ಜೀವನವನ್ನು ನೋಡುವ ಹೊಸ ಮಾರ್ಗವನ್ನು ಸಹ ನೀಡುತ್ತದೆ.
ಆಟವನ್ನು ಗೆಲ್ಲುವುದು ಎಂದರೆ- ಸಮಗ್ರ ವಿಧಾನ! 100ರಷ್ಟು ಸಮರ್ಪಣೆ!
ನಿಮ್ಮಲ್ಲಿ ಅನೇಕ ಆಟಗಾರರು ಭವಿಷ್ಯದಲ್ಲಿ ರಾಜ್ಯ ಮಟ್ಟದಲ್ಲಿ ಆಡುತ್ತಾರೆ. ನಿಮ್ಮಲ್ಲಿ ಅನೇಕರು ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶವನ್ನು ಮತ್ತಷ್ಟು ಪ್ರತಿನಿಧಿಸುತ್ತೀರಿ. ನಿಮ್ಮ ಕ್ರೀಡಾ ಕ್ಷೇತ್ರದ ಈ ಅನುಭವವು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ನಿಮಗೆ ಸಹಾಯ ಮಾಡುತ್ತದೆ. ಕ್ರೀಡಾ ಕ್ಷೇತ್ರವು ನಿಜವಾದ ಅರ್ಥದಲ್ಲಿ ಜೀವನದ ನಿಜವಾದ ಬೆಂಬಲ ವ್ಯವಸ್ಥೆಯಾಗಿದೆ. ಕ್ರೀಡೆಗಳಲ್ಲಿ ನಿಮ್ಮನ್ನು ಮುನ್ನಡೆಸುವ ಶಕ್ತಿ ಮತ್ತು ಜ್ಞಾನವು ನಿಮ್ಮನ್ನು ಜೀವನದಲ್ಲಿ ಮುಂದೆ ಕೊಂಡೊಯ್ಯುತ್ತದೆ. ಕ್ರೀಡೆ ಮತ್ತು ಜೀವನ ಎರಡರಲ್ಲೂ ಉತ್ಸಾಹದ ಪ್ರಾಮುಖ್ಯ ಇದೆ. ಕ್ರೀಡೆ ಮತ್ತು ಜೀವನ ಎರಡರಲ್ಲೂ ಸವಾಲುಗಳನ್ನು ಸ್ವೀಕರಿಸುವವರು ವಿಜೇತರಾಗುತ್ತಾರೆ. ಕ್ರೀಡೆ ಮತ್ತು ಜೀವನ ಎರಡರಲ್ಲೂ, ಸೋಲು ಅಂದ ಹಾಗೆಯೇ ಅದೇ ಗೆಲುವೂ ಆಗಿರುತ್ತದೆ; ಸೋಲು ಎಂದರೆ ಒಂದು ಪಾಠವೂ ಹೌದು. ಪ್ರಾಮಾಣಿಕತೆ ನಿಮ್ಮನ್ನು ಕ್ರೀಡೆ ಮತ್ತು ಜೀವನದಲ್ಲಿ ಮುಂಚೂಣಿಗೆ ಕರೆದೊಯ್ಯುತ್ತದೆ. ಕ್ರೀಡೆ ಮತ್ತು ಜೀವನ ಎರಡರಲ್ಲೂ ಪ್ರತಿಯೊಂದು ಕ್ಷಣವೂ ಪ್ರಾಮುಖ್ಯವನ್ನು ಹೊಂದಿದೆ. ಪ್ರಸ್ತುತ ಕ್ಷಣಕ್ಕೆ ಹೆಚ್ಚಿನ ಮಹತ್ವವಿದೆ. ಈ ಕ್ಷಣದಲ್ಲಿ ಬದುಕುವುದು ಮತ್ತು ಈ ಕ್ಷಣದಲ್ಲಿ ಏನನ್ನಾದರೂ ಮಾಡುವುದು ಮುಖ್ಯ.
ವಿಜಯದಲ್ಲಿ ವಿನಮ್ರರಾಗಿರುವ ಕೌಶಲ್ಯ ಮತ್ತು ಸೋಲಿನಿಂದ ಕಲಿಯುವ ಕಲೆಯು ಜೀವನದ ಪ್ರಗತಿಯ ಅತ್ಯಂತ ಮೌಲ್ಯಯುತ ಭಾಗಗಳಾಗಿವೆ ಮತ್ತು ಮೈದಾನದಲ್ಲಿ ಆಡುವ ಮೂಲಕ ನಾವು ಇದನ್ನು ಕಲಿಯುತ್ತೇವೆ. ಕ್ರೀಡೆಗಳಲ್ಲಿ, ದೇಹವು ಶಕ್ತಿಯಿಂದ ತುಂಬಿದಾಗ, ಆಟಗಾರನ ಕ್ರಿಯೆಗಳ ತೀವ್ರತೆಯು ಮೇಲುಗೈ ಸಾಧಿಸುತ್ತದೆ. ಆ ಸಮಯದಲ್ಲಿ ಉತ್ತಮ ಆಟಗಾರನ ಮನಸ್ಸು ಶಾಂತವಾಗಿರುತ್ತದೆ ಮತ್ತು ತಾಳ್ಮೆಯಿಂದ ತುಂಬಿರುತ್ತದೆ. ಇದು ಜೀವನವನ್ನು ಬದುಕುವ ಒಂದು ಮಹಾನ್ ಕಲೆಯೂ ಆಗಿದೆ.
ಸ್ನೇಹಿತರೆ, ನೀವು ನವ ಭಾರತದ ಯುವಕರು. ನೀವು 'ಏಕ್ ಭಾರತ್ ಶ್ರೇಷ್ಠ ಭಾರತ'ದ ಧ್ವಜಧಾರಿಯೂ ಹೌದು. ನಿಮ್ಮ ಯೌವ್ವನದ ಚಿಂತನೆ ಮತ್ತು ನಿಮ್ಮ ಯೌವನದ ವಿಧಾನವು ಇಂದು ರಾಷ್ಟ್ರದ ನೀತಿಗಳನ್ನು ನಿರ್ಧರಿಸುತ್ತಿದೆ. ಇಂದು ಯುವಕರು ಫಿಟ್ನೆಸ್ ಅನ್ನು ದೇಶದ ಅಭಿವೃದ್ಧಿಯ ಮಂತ್ರವನ್ನಾಗಿ ಮಾಡಿದ್ದಾರೆ. ಇಂದು ಯುವಕರು ಹಳೆಯ ಚಿಂತನೆಯ ಸಂಕೋಲೆಗಳಿಂದ ಕ್ರೀಡೆಗಳನ್ನು ಮುಕ್ತಗೊಳಿಸಿದ್ದಾರೆ.
ಹೊಸ ಶಿಕ್ಷಣ ನೀತಿಯಲ್ಲಿ ಕ್ರೀಡೆಗೆ ಒತ್ತು ನೀಡಿರುವುದು ಅಥವಾ ಆಧುನಿಕ ಕ್ರೀಡಾ ಮೂಲಸೌಕರ್ಯಗಳ ಸೃಷ್ಟಿಯಾಗಲಿ, ಆಟಗಾರರ ಆಯ್ಕೆಯಲ್ಲಿ ಪಾರದರ್ಶಕತೆ ಇರಲಿ ಅಥವಾ ಕ್ರೀಡೆಗಳಲ್ಲಿ ಆಧುನಿಕ ತಂತ್ರಜ್ಞಾನದ ಹೆಚ್ಚುತ್ತಿರುವ ಬಳಕೆಯಾಗಲಿ, ಇದು ನವ ಭಾರತದ ಹೆಗ್ಗುರುತಾಗಿದೆ.
ಭಾರತದ ಯುವಜನರ ಆಶೋತ್ತರಗಳು ಮತ್ತು ಆಕಾಂಕ್ಷೆಗಳು ನವ ಭಾರತದ ನಿರ್ಧಾರಗಳನ್ನು ರೂಪಿಸುತ್ತಿವೆ. ಈಗ ದೇಶದಲ್ಲಿ ಹೊಸ ಕ್ರೀಡಾ ವಿಜ್ಞಾನ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಈಗ ದೇಶದಲ್ಲಿ ಕ್ರೀಡೆಗೆಂದೇ ಮೀಸಲಾದ ವಿಶ್ವವಿದ್ಯಾಲಯಗಳನ್ನು ಸ್ಥಾಪಿಸಲಾಗುತ್ತಿದೆ. ಇದು ನಿಮ್ಮ ಅನುಕೂಲಕ್ಕಾಗಿ ಮತ್ತು ನಿಮ್ಮ ಕನಸುಗಳನ್ನು ಈಡೇರಿಸುವ ಗುರಿ ಹೊಂದಲಾಗಿದೆ.
ಸ್ನೇಹಿತರೇ,
ಕ್ರೀಡೆಯ ಶಕ್ತಿಯು ದೇಶದ ಶಕ್ತಿಯನ್ನು ವಿಸ್ತರಿಸುತ್ತದೆ. ಕ್ರೀಡೆಯಲ್ಲಿ ಛಾಪು ಮೂಡಿಸುವುದು ದೇಶದ ಅಸ್ಮಿತೆಯನ್ನು ಹೆಚ್ಚಿಸುತ್ತದೆ. ಟೋಕಿಯೋ ಒಲಿಂಪಿಕ್ಸ್ ನಿಂದ ಹಿಂದಿರುಗಿದ ಆಟಗಾರರನ್ನು ಭೇಟಿಯಾದಾಗಿನ ಸಂದರ್ಭ ಇನ್ನೂ ನೆನಪಿದೆ. ಅವರ ವೈಯಕ್ತಿಕ ವಿಜಯಕ್ಕಿಂತ ಹೆಚ್ಚಾಗಿ, ಅವರ ಮುಖಗಳು ದೇಶಕ್ಕಾಗಿ ಗೆಲ್ಲುವ ಹೆಮ್ಮೆಯನ್ನು ಪ್ರತಿಬಿಂಬಿಸುತ್ತವೆ. ದೇಶಕ್ಕಾಗಿ ಗೆಲ್ಲುವುದರಿಂದ ಬರುವ ಸಂತೋಷಕ್ಕೆ ಸರಿಸಾಟಿಯೇ ಇಲ್ಲ.
ನೀವೂ ಸಹ ಇಂದು ನಿಮಗಾಗಿ ಅಥವಾ ನಿಮ್ಮ ಕುಟುಂಬಕ್ಕಾಗಿ ಮಾತ್ರ ಆಡುತ್ತಿಲ್ಲ. ಇವು ವಿಶ್ವವಿದ್ಯಾಲಯದ ಆಟಗಳಾಗಿರಬಹುದು. ಆದರೆ ನೀವು ದೇಶಕ್ಕಾಗಿ ಆಡುತ್ತಿದ್ದೀರಿ ಮತ್ತು ನೀವು ದೇಶಕ್ಕಾಗಿ ನಿಮ್ಮೊಳಗೆ ಭರವಸೆಯ ಆಟಗಾರನನ್ನು ಸಜ್ಜುಗೊಳಿಸುತ್ತಿದ್ದೀರಿ ಎಂದು ಭಾವಿಸಿ. ಈ ಚೈತನ್ಯವು ನಿಮ್ಮನ್ನು ಮುಂದೆ ಕರೆದೊಯ್ಯುತ್ತದೆ. ಈ ಉತ್ಸಾಹವು ಮೈದಾನದಲ್ಲಿ ಗೆಲ್ಲಲು ನಿಮಗೆ ಸಹಾಯ ಮಾಡುವುದು ಮಾತ್ರವಲ್ಲದೆ, ನಿಮಗೆ ಪದಕವನ್ನು ಸಹ ನೀಡುತ್ತದೆ. ನೀವೆಲ್ಲರೂ, ನನ್ನ ಯುವ ಸ್ನೇಹಿತರೇ, ಸಾಕಷ್ಟು ಆಡುತ್ತೀರಿ ಮತ್ತು ಸಾಕಷ್ಟು ಅರಳುತ್ತೀರಿ ಎಂದು ನನಗೆ ಖಾತ್ರಿಯಿದೆ!
ಈ ನಂಬಿಕೆಯೊಂದಿಗೆ, ದೇಶವ್ಯಾಪಿಯ ನನ್ನ ಎಲ್ಲಾ ಯುವ ಸ್ನೇಹಿತರಿಗೆ ಮತ್ತೊಮ್ಮೆ ನನ್ನ ಹೃತ್ಪೂರ್ವಕ ಶುಭಾಶಯಗಳು ! ಧನ್ಯವಾದಗಳು !
ಹಕ್ಕು ನಿರಾಕರಣೆ: ಇದು ಪ್ರಧಾನಮಂತ್ರಿ ಅವರ ಭಾಷಣದ ಅಂದಾಜು ಅನುವಾದವಾಗಿದೆ. ಮೂಲ ಭಾಷಣವನ್ನು ಹಿಂದಿಯಲ್ಲಿ ನೀಡಲಾಗಿದೆ.