ನಮಸ್ತೆ.
ದುಬೈ 2020 ಎಕ್ಸ್ ಪೋ ದ ಭಾರತೀಯ ಪೆವಿಲಿಯನ್ ಗೆ ನಿಮಗೆ ಸ್ವಾಗತ. ಇದು ಐತಿಹಾಸಿಕ ಎಕ್ಸ್ ಪೋ. ಇದು ಮಧ್ಯ ಪೂರ್ವ, ಆಫ್ರಿಕಾ ಮತ್ತು ದಕ್ಷಿಣ ಏಷ್ಯಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಮೊದಲನೇಯದ್ದಾಗಿದೆ. ಭಾರತ ಅತಿ ದೊಡ್ಡ ಪೆವಿಲಿಯನ್ ನೊಂದಿಗೆ ಎಕ್ಸ್ ಪೋದಲ್ಲಿ ಭಾಗವಹಿಸುತ್ತಿದೆ. ಈ ಎಕ್ಸ್ ಪೋ ಸಂಯುಕ್ತ ಅರಬ್ ಎಮಿರೇಟ್ಸ್ ಮತ್ತು ದುಬೈ ನಡುವಿನ ನಮ್ಮ ಆಳವಾದ ಮತ್ತು ಐತಿಹಾಸಿಕ ಸಂಬಂಧಗಳನ್ನು ಮತ್ತಷ್ಟು ಬಲಪಡಿಸಲು ದೀರ್ಘ ಕಾಲದಲ್ಲಿ ನೆರವಾಗಲಿದೆ. ಯುಎಇ ಅಧ್ಯಕ್ಷರು ಮತ್ತು ಅಬು ಧಾಬಿಯ ದೊರೆ ಗೌರವಾನ್ವಿತ ಷೇಕ್ ಖಾಲೀಫಾ ಬಿನ್ ಜೈಯದ್ ಬಿನ್ ಅಲ್ ನಹ್ಯಾನ್ ಅವರಿಗೆ ಭಾರತದ ಜನತೆ ಮತ್ತು ಸರ್ಕಾರದ ಪರವಾಗಿ ಶುಭಾಶಯಗಳೊಂದಿಗೆ ಮಾತು ಆರಂಭಿಸೋಣ.
ಯುಎಇಯ ಘನತೆವೆತ್ತ ಪ್ರಧಾನಮಂತ್ರಿ ಮತ್ತು ಉಪಾಧ್ಯಕ್ಷ ಹಾಗೂ ದುಬೈ ದೊರೆ ಷೇಕ್ ಮೊಹಮ್ಮದ್ ಬಿನ್ ರಷೀದ್ ಅಲ್ ಮಕ್ತೋಮ್ ಅವರಿಗೆ ನನ್ನ ಹಾರ್ದಿಕ ಶುಭಾಶಯಗಳು. ಅಬುಧಾಬಿಯ ಯುವರಾಜ ಮತ್ತು ನನ್ನ ಸಹೋದರ ಗೌರವಾನ್ವಿತ ಷೇಕ್ ಮೊಹಮ್ಮದ್ ಬಿನ್ ಜೈಯದ್ ಅಲ್ ನಹ್ಯಾನ್ ಅವರಿಗೆ ನನ್ನ ಶುಭ ಕಾಮನೆಗಳು. ನಮ್ಮ ಕಾರ್ಯತಂತ್ರ ಪಾಲುದಾರಿಕೆಯಲ್ಲಿ ಸಾಧಿಸಿರುವ ಪ್ರಗತಿಯಲ್ಲಿ ಅವರು ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಉಭಯ ದೇಶಗಳ ಪ್ರಗತಿ ಮತ್ತು ಸಮೃದ್ಧಿಗಾಗಿ ನಮ್ಮಕಾರ್ಯ ಮುಂದುವರಿಸುವುದನ್ನು ನಾನು ಎದುರು ನೋಡುತ್ತಿದ್ದೇನೆ.
ಮಿತ್ರರೇ.
2020 ಎಕ್ಸ್ ಪೋ ಮುಖ್ಯ ಘೋಷವಾಕ್ಯವೆಂದರೆ, ಭವಿಷ್ಯದ ನಿರ್ಮಾಣಕ್ಕಾಗಿ ಮನಸುಗಳ ಸಂಪರ್ಕ ಎಂಬುದಾಗಿದೆ. ಇದರ ಹಿಂದಿನ ಸ್ಪೂರ್ತಿ ಎಂದರೆ ಭಾರತ ಕೂಡ ನವ ಭಾರತ ನಿರ್ಮಾಣಕ್ಕೆ ಪ್ರಯತ್ನಿಸುತ್ತಿರುವುದಾಗಿದೆ. ಅದ್ದೂರಿಯಾಗಿ ಎಕ್ಸ್ ಪೋ 2020 ಅಯೋಜಿಸಿರುವುದಕ್ಕೆ ನಾನು ಯುಎಇ ಸರ್ಕಾರವನ್ನು ಅಭಿನಂದಿಸುತ್ತೇನೆ.ಈ ಎಕ್ಸ್ ಪೋ ಶತಮಾನದ ಸಾಂಕ್ರಾಮಿಕದ ವಿರುದ್ದ ಮನುಕುಲದ ಸ್ಥಿತಿಸ್ಥಾಪಕತ್ವದ ಸಂಕೇತವಾಗಿದೆ.
ಮಿತ್ರರೇ
ಭಾರತದ ಪೆವಿಲಿಯನ್ ಘೋಷ ವಾಕ್ಯ: ಮುಕ್ತ ವಾತಾವರಣ, ಅವಕಾಶ ಮತ್ತು ಪ್ರಗತಿ ಎಂಬುದಾಗಿದೆ. ಇಂದಿನ ಭಾರತ ಜಗತ್ತಿನಲ್ಲಿಯೇ ಅತ್ಯಂತ ಮುಕ್ತ ರಾಷ್ಟ್ರಗಳಲ್ಲಿ ಒಂದಾಗಿದೆ. ಕಲಿಕೆಯಲ್ಲಿ ಮುಕ್ತತೆ, ದೃಷ್ಟಿಕೋನದಲ್ಲಿ ಮುಕ್ತತೆ, ನಾವೀನ್ಯ ಮತ್ತು ಹೂಡಿಕೆಯಲ್ಲಿ ಮುಕ್ತತೆ. ಹಾಗಾಗಿ ನಾನು ಭಾರತಕ್ಕೆ ಬನ್ನಿ ಮತ್ತು ಹೂಡಿಕೆ ಮಾಡಿ ಎಂದು ಆಹ್ವಾನ ನೀಡುತ್ತಿದ್ದೇನೆ. ಇಂದಿನ ಭಾರತ ಅವಕಾಶಗಳ ತಾಣ.ಅದು ಕಲೆ ಅಥವಾ ವಾಣಿಜ್ಯ, ಕೈಗಾರಿಕೆ , ಶೈಕ್ಷಣಿಕ ಕ್ಷೇತ್ರದಲ್ಲಾಗಿರಬಹುದು. ಮರು ಸಂಶೋಧನೆಗೆ ಅವಕಾಶವಿದೆ, ಪಾಲುದಾರಿಕೆಗೆ ಅವಕಾಶವಿದೆ ಮತ್ತು ಪ್ರಗತಿಗೆ ಅವಕಾಶವಿದೆ. ಭಾರತಕ್ಕೆ ಬನ್ನಿ ಈ ಅವಕಾಶಗಳನ್ನು ಅನ್ವೇಷಿಸಿ. ಭಾರತ ಕೂಡ ನಿಮಗೆ ಗರಿಷ್ಠ ಪ್ರಗತಿಗೆ ಅವಕಾಶ ಒದಗಿಸುತ್ತದೆ. ದೊಡ್ಡ ಪ್ರಮಾಣದಲ್ಲಿ ಬೆಳವಣಿಗೆ, ಮಹತ್ವಾಕಾಂಕ್ಷೆಯ ಬೆಳವಣಿಗೆ ಮತ್ತು ಫಲಿತಾಂಶ ಆಧರಿತ ಬೆಳವಣಿಗೆ ಸಾಧಿಸಬಹುದು. ಅದಕ್ಕಾಗಿ ಭಾರತಕ್ಕೆ ಬನ್ನಿ ಮತ್ತು ನಮ್ಮ ಪ್ರಗತಿಗಾಥೆಯ ಭಾಗವಾಗಿ.
ಮಿತ್ರರೇ
ಭಾರತ ತನ್ನ ಚೈತನ್ಯ ಮತ್ತು ವೈವಿಧ್ಯತೆಗೆ ಪ್ರಸಿದ್ಧಿಯಾಗಿದೆ ನಮ್ಮಲ್ಲಿ ಭಿನ್ನ ಸಂಸ್ಕೃತಿ, ಭಾಷೆ, ಆಹಾರ, ಕಲೆ, ಸಂಗೀತ ಮತ್ತು ನೃತ್ಯದ ನಾನಾ ಪ್ರಾಕಾರಗಳಿವೆ. ಆ ವೈವಿಧ್ಯ ಪೆವಿಲಿಯನ್ ನಲ್ಲಿ ಪ್ರತಿಫಲನಗೊಳ್ಳುತ್ತಿದೆ. ಅಂತೆಯೇ ಭಾರತ ಪ್ರತಿಭೆಯ ಶಕ್ತಿ ಕೇಂದ್ರ. ನಮ್ಮ ದೇಶ ತಂತ್ರಜ್ಞಾನ, ಸಂಶೋಧನೆ ಮತ್ತು ಆವಿಷ್ಕಾರ ಜಗತ್ತಿನಲ್ಲಿ ಹಲವು ವಿಧದಲ್ಲಿ ಮುನ್ನಡೆ ಸಾಧಿಸಿದೆ. ನಮ್ಮ ಆರ್ಥಿಕ ಪ್ರಗತಿಯನ್ನು ಕೈಗಾರಿಕಾ ಪರಂಪರೆ ಮತ್ತು ನವೋದ್ಯಮಗಳ ಸಂಯೋಜನೆಯಿಂದ ನಡೆಸಲ್ಪಡುತ್ತದೆ.ಭಾರತದ ಪೆವಿಲಿಯನ್ ನಲ್ಲಿ ಈ ಹಲವು ವಲಯಗಳಲ್ಲಿ ಭಾರತದ ಅತ್ಯುತ್ತಮವಾದುದನ್ನು ಪ್ರದರ್ಶಿಸಲಾಗುವುದು. ಇದು ಆರೋಗ್ಯ, ಜವಳಿ, ಮೂಲಸೌಕರ್ಯ, ಸೇವೆಗಳು ಮತ್ತು ಇತರೆ ವಲಯಗಳ ಸೇರಿ ಹಲವು ವಲಯಗಳಲ್ಲಿ ಹೂಡಿಕೆ ಅವಕಾಶಗಳ ಪ್ರದರ್ಶಿಸುತ್ತದೆ. ಕಳೆದ 7 ವರ್ಷಗಳಲ್ಲಿ, ಆರ್ಥಿಕ ಪ್ರಗತಿ ಉತ್ತೇಜನಕ್ಕೆ ಭಾರತ ಸರ್ಕಾರ ಹಲವು ಕ್ರಮಗಳನ್ನು ಕೈಗೊಂಡಿದೆ. ನಾವು ಇದೇ ಪ್ರವೃತ್ತಿಯನ್ನು ಮುಂದುವರಿಸಲು ಹೆಚ್ಚಿನ ಕೆಲಸ ಮಾಡುತ್ತೇವೆ.
ಮಿತ್ರರೇ,
ಭಾರತ ತನ್ನ 75 ನೇ ಸ್ವಾತಂತ್ರ್ಯೊತ್ಸವವನ್ನು ಆಜಾ಼ದಿ ಕಾ ಅಮೃತ ಮಹೋತ್ಸವ ರೂಪದಲ್ಲಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ನಾನು ಪ್ರತಿಯೊಬ್ಬರನ್ನೂ ಭಾರತದ ಪೆವಿಲಿಯನ್ ಗೆ ಆಹ್ವಾನಿಸುತ್ತೇನೆ ಮತ್ತು ಪುನರುಜ್ಜೀವಗೊಳ್ಳುತ್ತಿರುವ ನವ ಭಾರತದಲ್ಲಿ ಅವಕಾಶಗಳ ಲಾಭ ಪಡೆದುಕೊಳ್ಳಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಸಬ್ ಕಾ ಪ್ರಯಾಸ್ ನೊಂದಿಗೆ ಜಗತ್ತನ್ನು ಜೀವಿಸಲು ಅತ್ಯುತ್ತಮ ತಾಣವನ್ನಾಗಿ ಮಾಡೋಣ.
ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು.