ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು, 17ನೇ ಪ್ರವಾಸಿ ಭಾರತೀಯ ದಿವಸ್ ಅಂಗವಾಗಿ ಗಯಾನ ಅಧ್ಯಕ್ಷ ಡಾ. ಎಚ್.ಇ. ಮೊಹಮದ್ ಇರ್ಫಾನ್ ಅಲಿ ಅವರನ್ನು ಸೋಮವಾರ ಇಂದೋರ್‌ನಲ್ಲಿ ಭೇಟಿಯಾದರು. ಇಂಧನ, ಮೂಲಸೌಕರ್ಯ ಅಭಿವೃದ್ಧಿ, ಔಷಧ, ಆರೋಗ್ಯ, ರಕ್ಷಣೆ, ತಂತ್ರಜ್ಞಾನ, ಸಂಶೋದನೆ ಮತ್ತು ರಕ್ಷಣಾ ಸಹಕಾರ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಭಯ ನಾಯಕರು ಸಮಗ್ರ ಚರ್ಚೆ ನಡೆಸಿದರು.
ಪ್ರವಾಸಿ ಭಾರತೀಯ ದಿವಸ್ ಕಾರ್ಯಕ್ರಮದ ಅಂಗವಾಗಿ, ಭಾರತದ ಅಧಿಕೃತ ಭೇಟಿಯಲ್ಲಿರುವ ಅಲಿ ಅವರು, ಉಭಯ ರಾಷ್ಟ್ರದ ಜನರ ನಡುವಿನ 180 ವರ್ಷಗಳ ಐತಿಹಾಸಿಕ ಸ್ನೇಹ– ಸಂಬಂಧಗಳನ್ನು ಮೆಲುಕು ಹಾಕಿದರು. ಉಭಯರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಇನ್ನಷ್ಟು ಗಟ್ಟಿಗೊಳಿಸುವ ಕುರಿತು ಪ್ರಧಾನಮಂತ್ರಿ ಅವರೊಂದಿಗೆ ಮಾತುಕತೆ ನಡೆಸಿದರು.
ಅಲ್ಲದೆ ಅಧ್ಯಕ್ಷ ಇರ್ಫಾನ್ ಅಲಿ ಅವರು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರೊಂದಿಗೆ ಪ್ರವಾಸಿ ದಿನದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಜನವರಿ 10ರಂದು ಪ್ರವಾಸಿ ಭಾರತೀಯ ಸಮ್ಮಾನ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಜನವರಿ 11ರಂದು ಇಂದೋರ್‌ನಲ್ಲಿ 2023ರ ಜಾಗತಿಕ ಹೂಡಿಕೆದಾರರ ಶೃಂಗಸಭೆ, ದೆಹಲಿ, ಕಾನ್ಪುರ, ಬೆಂಗಳೂರು ಹಾಗೂ ಮುಂಬೈಗೆ ಅಲಿ ಅವರು ಭೇಟಿ ನೀಡಲಿದ್ದಾರೆ.