ನನ್ನ ಪ್ರೀತಿಯ ದೇಶವಾಸಿಗಳೇ,
ನಮಸ್ಕಾರ!
ಕಳೆದ ಕೆಲವು ದಿನಗಳಲ್ಲಿ ನಮ್ಮ ಗಮನ ಸೆಳೆದ ವಿಷಯವೆಂದರೆ ಚೀತಾ. ಚೀತಾಗಳ ಬಗ್ಗೆ ಮಾತನಾಡುವಂತೆ ಸಾಕಷ್ಟು ಸಂದೇಶಗಳು ಬಂದಿವೆ. ಉತ್ತರ ಪ್ರದೇಶದ ಅರುಣ್ ಕುಮಾರ್ ಗುಪ್ತಾ ಅಥವಾ ತೆಲಂಗಾಣದ ಎನ್. ರಾಮಚಂದ್ರನ್ ರಘುರಾಮ್, ಗುಜರಾತ್ನ ರಾಜನ್ ಅಥವಾ ದೆಹಲಿಯ ಸುಬ್ರತಾ ಹೀಗೆ ದೇಶದ ಮೂಲೆ ಮೂಲೆಗಳಿಂದ ಚೀತಾಗಳು ಭಾರತಕ್ಕೆ ಮರಳಿದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. 130 ಕೋಟಿ ಭಾರತೀಯರು ಸಂತೋಷದಿಂದ, ಹೆಮ್ಮೆಯಿಂದ ಬೀಗಿದ್ದಾರೆ; ಇದು ಪ್ರಕೃತಿಯ ಬಗೆಗಿನ ಭಾರತದ ಪ್ರೀತಿ. ಈ ಬಗ್ಗೆ ಜನರು ಕೇಳುವ ಸಾಮಾನ್ಯ ಪ್ರಶ್ನೆಯೆಂದರೆ "ಮೋದಿ ಜೀ, ಚೀತಾಗಳನ್ನು ನೋಡಲು ನಮಗೆ ಯಾವಾಗ ಅವಕಾಶ ಸಿಗುತ್ತದೆ?"
ಸ್ನೇಹಿತರೇ, ಒಂದು ಕಾರ್ಯಪಡೆ ರಚಿಸಲಾಗಿದೆ. ಈ ಕಾರ್ಯಪಡೆಯು ಚೀತಾಗಳ ಮೇಲೆ ನಿಗಾ ವಹಿಸುತ್ತದೆ ಮತ್ತು ಅವು ಇಲ್ಲಿನ ಪರಿಸರಕ್ಕೆ ಹೊಂದಿಕೊಳ್ಳಲು ಎಷ್ಟು ಸಮರ್ಥವಾಗಿವೆ ಎಂಬುದನ್ನು ನೋಡಿಕೊಳ್ಳುತ್ತದೆ. ಇದರ ಆಧಾರದ ಮೇಲೆ ಕೆಲವು ತಿಂಗಳ ನಂತರ ನಿರ್ಧಾರ ತೆಗೆದುಕೊಳ್ಳಲಾಗುವುದು, ನಂತರ ನೀವು ಚೀತಾಗಳನ್ನು ನೋಡಲು ಸಾಧ್ಯವಾಗುತ್ತದೆ. ಆದರೆ ಅಲ್ಲಿಯವರೆಗೆ ನಿಮ್ಮೆಲ್ಲರಿಗೂ ಒಂದಿಷ್ಟು ಕೆಲಸವನ್ನು ನಿಯೋಜಿಸುತ್ತಿದ್ದೇನೆ. ಇದಕ್ಕಾಗಿ, MyGov ವೇದಿಕೆಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುವುದು, ಅದರಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುವಂತೆ ನಾನು ಜನರನ್ನು ಕೇಳಿಕೊಳ್ಳುತ್ತೇನೆ. ನಾವು ಚೀತಾಗಳ ಬಗ್ಗೆ ನಡೆಸುತ್ತಿರುವ ಅಭಿಯಾನಕ್ಕೆ ಯಾವ ಹೆಸರಿಡಬಹುದು? ಈ ಎಲ್ಲಾ ಚೀತಾಗಳಿಗೆ ನಾವು ಹೆಸರಿಡುವ ಬಗ್ಗೆ ಯೋಚಿಸಬಹುದೇ ... ಪ್ರತಿಯೊಂದನ್ನೂ ಯಾವ ಹೆಸರಿನಿಂದ ಕರೆಯಬೇಕು? ಅಂದಹಾಗೆ, ಈ ನಾಮಕರಣವು ಸಾಂಪ್ರದಾಯಿಕ ಸ್ವರೂಪದ್ದಾಗಿದ್ದರೆ, ಅದು ತುಂಬಾ ಚೆನ್ನಾಗಿರುತ್ತದೆ, ಏಕೆಂದರೆ ನಮ್ಮ ಸಮಾಜ ಮತ್ತು ಸಂಸ್ಕೃತಿ, ಸಂಪ್ರದಾಯ ಮತ್ತು ಪರಂಪರೆಗೆ ಸಂಬಂಧಿಸಿದ ಯಾವುದಾದರೂ ನಮ್ಮನ್ನು ಸುಲಭವಾಗಿ ಸೆಳೆಯುತ್ತದೆ. ಅಷ್ಟೇ ಅಲ್ಲ, ಮನುಷ್ಯರು ಪ್ರಾಣಿಗಳೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ಸಹ ನೀವು ಹಂಚಿಕೊಳ್ಳಬೇಕು! ನಮ್ಮ ಮೂಲಭೂತ ಕರ್ತವ್ಯಗಳಲ್ಲಿಯೂ ಸಹ ಪ್ರಾಣಿಗಳಿಗೆ ಗೌರವ ನೀಡುವ ಬಗ್ಗೆ ಒತ್ತು ನೀಡಲಾಗಿದೆ. ಈ ಸ್ಪರ್ಧೆಯಲ್ಲಿ ನೀವೆಲ್ಲರೂ ಭಾಗವಹಿಸಬೇಕೆಂದು ನಾನು ಮನವಿ ಮಾಡುತ್ತೇನೆ. ಯಾರಿಗೆ ಗೊತ್ತು… ಚಿರತೆಯನ್ನು ನೋಡುವ ಅವಕಾಶವನ್ನು ಬಹುಮಾನವಾಗಿ ಪಡೆಯುವ ಮೊದಲಿಗರು ನೀವಾಗಬಹುದು!
ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಸೆಪ್ಟೆಂಬರ್ 25 ರಂದು ದೇಶದ ಅದ್ಭುತ ಮಾನವತಾವಾದಿ, ಚಿಂತಕ ಮತ್ತು ಮಹಾನ್ ಪುತ್ರ ದೀನದಯಾಳ್ ಉಪಾಧ್ಯಾಯ ಅವರ ಜನ್ಮದಿನವನ್ನು ಆಚರಿಸಲಾಗುತ್ತದೆ. ಯಾವುದೇ ದೇಶದ ಯುವಕರು ತಮ್ಮ ಗುರುತು ಮತ್ತು ಗೌರವದ ಬಗ್ಗೆ ಹೆಚ್ಚು ಹೆಮ್ಮೆಪಡುತ್ತಾರೆ, ಅವರ ಮೂಲ ಕಲ್ಪನೆಗಳು ಮತ್ತು ತತ್ವಗಳು ಅವರನ್ನು ಹೆಚ್ಚು ಆಕರ್ಷಿಸುತ್ತವೆ. ದೀನದಯಾಳ್ ಅವರ ಆಲೋಚನೆಗಳ ದೊಡ್ಡ ವೈಶಿಷ್ಟ್ಯವೆಂದರೆ ಅವರ ತಮ್ಮ ಜೀವಿತಾವಧಿಯಲ್ಲಿ ಪ್ರಪಂಚದ ದೊಡ್ಡ ಕ್ರಾಂತಿಗಳನ್ನು ಕಂಡಿದ್ದಾರೆ. ಅವರು ಸಿದ್ಧಾಂತಗಳ ಹೋರಾಟಗಳಿಗೆ ಸಾಕ್ಷಿಯಾಗಿದ್ದರು. ಆದುದರಿಂದಲೇ ಅವರು ದೇಶದ ಮುಂದೆ ಸಂಪೂರ್ಣ ಭಾರತೀಯವಾಗಿದ್ದ ‘ಏಕಾತ್ಮ ಮಾನವದರ್ಶನ’ ಮತ್ತು ‘ಅಂತ್ಯೋದಯ’ದ ಕಲ್ಪನೆಯನ್ನು ಮುಂದಿಟ್ಟರು. ದೀನದಯಾಳ್ ಅವರ 'ಏಕಾತ್ಮ ಮಾನವದರ್ಶನ'ವು ಸಿದ್ಧಾಂತದ ಕ್ಷೇತ್ರದಲ್ಲಿ ಸಂಘರ್ಷ ಮತ್ತು ಪೂರ್ವಾಗ್ರಹದಿಂದ ಮುಕಿಯನ್ನು ನೀಡುವ ಒಂದು ಕಲ್ಪನೆಯಾಗಿದೆ. ಎಲ್ಲ ಮನುಷ್ಯರನ್ನು ಸಮಾನವಾಗಿ ಕಾಣುವ ಭಾರತೀಯ ತತ್ವವನ್ನು ಅವರು ಮತ್ತೊಮ್ಮೆ ಜಗತ್ತಿಗೆ ಸಾರಿದರು. ನಮ್ಮ ಧರ್ಮಗ್ರಂಥಗಳಲ್ಲಿ 'ಆತ್ಮವತ್ ಸರ್ವಭೂತೇಷು' ಎಂದು ಹೇಳಲಾಗಿದೆ. ಅಂದರೆ, ನಾವು ಜೀವಿಗಳನ್ನು ನಮ್ಮಂತೆಯೇ ಪರಿಗಣಿಸಬೇಕು ಮತ್ತು ಅದೇ ರೀತಿ ನಡೆಸಿಕೊಳ್ಳಬೇಕು. ಆಧುನಿಕ, ಸಾಮಾಜಿಕ ಮತ್ತು ರಾಜಕೀಯ ದೃಷ್ಟಿಕೋನದಲ್ಲಿಯೂ ಸಹ ಭಾರತೀಯ ತತ್ವಶಾಸ್ತ್ರವು ಜಗತ್ತನ್ನು ಹೇಗೆ ಮಾರ್ಗದರ್ಶಿಸುತ್ತದೆ ಎಂಬುದನ್ನು ದೀನದಯಾಳ್ ಜಿ ನಮಗೆ ಕಲಿಸಿದರು. ಒಂದು ರೀತಿಯಲ್ಲಿ ಸ್ವಾತಂತ್ರ್ಯಾನಂತರ ದೇಶದಲ್ಲಿ ತಲೆದೋರಿದ್ದ ಕೀಳರಿಮೆಯಿಂದ ನಮ್ಮನ್ನು ಮುಕ್ತಗೊಳಿಸಿ ನಮ್ಮ ಬೌದ್ಧಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದರು. 'ನಮ್ಮ ಸ್ವಾತಂತ್ರ್ಯವು ನಮ್ಮ ಸಂಸ್ಕೃತಿ ಮತ್ತು ಅಸ್ಮಿತೆಯನ್ನು ವ್ಯಕ್ತಪಡಿಸಿದಾಗ ಮಾತ್ರ ಅರ್ಥಪೂರ್ಣವಾಗಿರುತ್ತದೆ' ಎಂದು ಅವರು ಹೇಳುತ್ತಿದ್ದರು. ಈ ಚಿಂತನೆಯ ಆಧಾರದ ಮೇಲೆ, ಅವರು ದೇಶದ ಅಭಿವೃದ್ಧಿಗೆ ದೃಷ್ಟಿಕೋನವನ್ನು ನೀಡಿದರು. ದೇಶದ ಪ್ರಗತಿಯ ಅಳತೆಗೋಲು ಅತ್ಯಂತ ಕೆಳಸ್ತರದಲ್ಲಿರುವ ವ್ಯಕ್ತಿಯಾಗಿರುತ್ತಾನೆ ಎಂದು ದೀನದಯಾಳ್ ಉಪಾಧ್ಯಾಯ ಅವರು ಹೇಳುತ್ತಿದ್ದರು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ, ದೀನದಯಾಳ್ ಅವರನ್ನು ನಾವು ಹೆಚ್ಚು ತಿಳಿಯುತ್ತೇವೆ, ಅವರಿಂದ ನಾವು ಹೆಚ್ಚು ಕಲಿಯುತ್ತೇವೆ, ದೇಶವನ್ನು ಮುನ್ನಡೆಸಲು ನಾವು ಹೆಚ್ಚು ಸ್ಫೂರ್ತಿ ಪಡೆಯುತ್ತೇವೆ.
ನನ್ನ ಪ್ರೀತಿಯ ದೇಶವಾಸಿಗಳೇ, ಮೂರು ದಿನಗಳ ನಂತರ, ಅಂದರೆ ಸೆಪ್ಟೆಂಬರ್ 28 ರಂದು ಅಮೃತ ಮಹೋತ್ಸವದ ವಿಶೇಷ ದಿನ. ಈ ದಿನ ನಾವು ಭಾರತಮಾತೆಯ ವೀರ ಪುತ್ರ ಭಗತ್ ಸಿಂಗ್ ಅವರ ಜಯಂತಿಯನ್ನು ಆಚರಿಸುತ್ತೇವೆ. ಭಗತ್ ಸಿಂಗ್ ಅವರ ಜನ್ಮದಿನದ ಮುನ್ನವೇ ಅವರಿಗೆ ಗೌರವ ಸಲ್ಲಿಸಲು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಇದೀಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಹೆಸರಿಡಲು ನಿರ್ಧರಿಸಲಾಗಿದೆ. ಇದು ಬಹಳ ಸಮಯದಿಂದ ಬಾಕಿಯಿತ್ತು. ಈ ನಿರ್ಧಾರಕ್ಕಾಗಿ ನಾನು ಚಂಡೀಗಢ, ಪಂಜಾಬ್ ಮತ್ತು ಹರಿಯಾಣ ಮತ್ತು ಇಡೀ ದೇಶದ ಜನರನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, ನಾವು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಂದ ಸ್ಫೂರ್ತಿ ಪಡೆದು, ಅವರ ಆದರ್ಶಗಳನ್ನು ಅನುಸರಿಸೋಣ ಮತ್ತು ಅವರ ಕನಸಿನ ಭಾರತವನ್ನು ನಿರ್ಮಿಸೋಣ… ಇದು ಅವರಿಗೆ ನಾವು ನೀಡುವ ಗೌರವವಾಗಿದೆ. ಹುತಾತ್ಮರ ಹೆಸರಿನ ಸ್ಮಾರಕಗಳು, ಸ್ಥಳಗಳು ಮತ್ತು ಸಂಸ್ಥೆಗಳು ನಮ್ಮಲ್ಲಿ ಕರ್ತವ್ಯ ಪ್ರಜ್ಞೆಯನ್ನು ಪ್ರೇರೇಪಿಸುತ್ತವೆ. ಕೆಲವೇ ದಿನಗಳ ಹಿಂದೆ, ಕರ್ತವ್ಯ ಪಥದಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ದೇಶವು ಇದೇ ರೀತಿಯ ಪ್ರಯತ್ನವನ್ನು ಮಾಡಿದೆ ಮತ್ತು ಈಗ ಚಂಡೀಗಢ ವಿಮಾನ ನಿಲ್ದಾಣಕ್ಕೆ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಇಡುತ್ತಿರುವುದು ಆ ನಿಟ್ಟಿನಲ್ಲಿ ಮತ್ತೊಂದು ಹೆಜ್ಜೆಯಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ನಾವು ಸ್ವಾತಂತ್ರ್ಯ ಹೋರಾಟಗಾರರಿಗೆ ಸಂಬಂಧಿಸಿದ ವಿಶೇಷ ಸಂದರ್ಭಗಳನ್ನು ಹೇಗೆ ಆಚರಿಸುತ್ತೇವೆಯೋ ಅದೇ ರೀತಿ ಸೆಪ್ಟೆಂಬರ್ 28 ರಂದು ಪ್ರತಿಯೊಬ್ಬ ಯುವಕರು ಏನಾದೂ ಹೊಸದನ್ನು ಪ್ರಯತ್ನಿಸಬೇಕು ಎಂದು ನಾನು ಬಯಸುತ್ತೇನೆ.
ಅಂದಹಾಗೆ, ನನ್ನ ಪ್ರೀತಿಯ ದೇಶವಾಸಿಗಳೇ, ನೀವೆಲ್ಲರೂ ಸೆಪ್ಟೆಂಬರ್ 28 ಅನ್ನು ಸಂಭ್ರಮಿಸಲು ಇನ್ನೊಂದು ಕಾರಣವಿದೆ. ಅದು ಏನು ಗೊತ್ತಾ? ನಾನು ಕೇವಲ ಎರಡು ಪದಗಳನ್ನು ಹೇಳುತ್ತೇನೆ ಮತ್ತು ನಿಮ್ಮ ಉತ್ಸಾಹವು ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ನನಗೆ ಗೊತ್ತು. ಈ ಎರಡು ಪದಗಳೆಂದರೆ - ಸರ್ಜಿಕಲ್ ಸ್ಟ್ರೈಕ್!
ಜೋಶ್ ಹೆಚ್ಚಾಯಿತು ಅಲ್ಲವೇ!! ನಮ್ಮ ದೇಶದಲ್ಲಿ ನಡೆಯುತ್ತಿರುವ ಅಮೃತ ಮಹೋತ್ಸವದ ಪ್ರಚಾರವನ್ನು ತುಂಬ ಉತ್ಸಾಹದಿಂದ ಆಚರಿಸೋಣ, ನಮ್ಮ ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಳ್ಳೋಣ.
ನನ್ನ ಪ್ರೀತಿಯ ದೇಶವಾಸಿಗಳೇ,ಜೀವನದಲ್ಲಿ ಹೋರಾಟದಿಂದ ಬಂದ ವ್ಯಕ್ತಿಯ ದಾರಿಯಲ್ಲಿ ಯಾವುದೇ ಅಡೆತಡೆಗಳು ನಿಲ್ಲುವುದಿಲ್ಲ ಎಂದು ಹೇಳಲಾಗುತ್ತದೆ. ನಮ್ಮ ದೈನಂದಿನ ಜೀವನದಲ್ಲಿ, ದೈಹಿಕ ಸವಾಲುಗಳನ್ನು ಎದುರಿಸುತ್ತಿರುವ ಕೆಲವು ಸ್ನೇಹಿತರನ್ನು ಸಹ ನಾವು ನೋಡುತ್ತೇವೆ. ಕೇಳಲು ಸಾಧ್ಯವಾಗದ ಅಥವಾ ಮಾತಿನ ಮೂಲಕ ವ್ಯಕ್ತಪಡಿಸಲು ಸಾಧ್ಯವಾಗದ ಅನೇಕ ಜನರಿದ್ದಾರೆ. ಅಂತಹ ಸ್ನೇಹಿತರಿಗೆ ದೊಡ್ಡ ಬೆಂಬಲವೆಂದರೆ ಸಂಜ್ಞೆ ಭಾಷೆ. ಆದರೆ ಭಾರತದಲ್ಲಿ ಹಲವು ವರ್ಷಗಳಿಂದ ಒಂದು ದೊಡ್ಡ ಸಮಸ್ಯೆಯೆಂದರೆ, ಯಾವುದೇ ಸ್ಪಷ್ಟ ಸನ್ನೆಗಳಿಲ್ಲ, ಸಂಜ್ಞೆ ಭಾಷೆಗೆ ಯಾವುದೇ ಮಾನದಂಡಗಳಿಲ್ಲ. ಈ ತೊಂದರೆಗಳನ್ನು ನಿವಾರಿಸಲು, 2015 ರಲ್ಲಿ ಭಾರತೀಯ ಸಂಜ್ಞೆ ಭಾಷಾ ಸಂಶೋಧನೆ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಯಿತು. ಈ ಸಂಸ್ಥೆಯು ಇದುವರೆಗೆ ಹತ್ತು ಸಾವಿರ ಪದಗಳು ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿರುವ ನಿಘಂಟನ್ನು ಸಿದ್ಧಪಡಿಸಿದೆ ಎಂದು ತಿಳಿದು ನನಗೆ ಸಂತೋಷವಾಗಿದೆ. ಎರಡು ದಿನಗಳ ಹಿಂದೆ ಅಂದರೆ ಸೆಪ್ಟಂಬರ್ 23 ರಂದು, ಸಂಜ್ಞೆ ಭಾಷೆಯ ದಿನದಂದು, ಅನೇಕ ಶಾಲಾ ಕೋರ್ಸ್ಗಳನ್ನು ಸಹ ಸಂಜ್ಞೆ ಭಾಷೆಯಲ್ಲಿ ಪ್ರಾರಂಭಿಸಲಾಗಿದೆ. ಸಂಜ್ಞೆ ಭಾಷೆಗೆ ನಿಗದಿತ ಗುಣಮಟ್ಟವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಹೆಚ್ಚಿನ ಒತ್ತು ನೀಡಲಾಗಿದೆ. ಸಂಜ್ಞೆ ಭಾಷೆಯ ನಿಘಂಟಿನ ವೀಡಿಯೋಗಳನ್ನು ಮಾಡುವ ಮೂಲಕವೂ ಅದನ್ನು ಮತ್ತಷ್ಟು ಪ್ರಸಾರ ಮಾಡಲಾಗುತ್ತಿದೆ. ಯೂಟ್ಯೂಬ್ನಲ್ಲಿ, ಅನೇಕ ಜನರು, ಅನೇಕ ಸಂಸ್ಥೆಗಳು, ಭಾರತೀಯ ಸಂಜ್ಞೆ ಭಾಷೆಯಲ್ಲಿ ತಮ್ಮ ಚಾನೆಲ್ಗಳನ್ನು ಪ್ರಾರಂಭಿಸಿದ್ದಾರೆ, ಅಂದರೆ, 7-8 ವರ್ಷಗಳ ಹಿಂದೆ ಸಂಜ್ಞೆ ಭಾಷೆಯ ಕುರಿತು ದೇಶದಲ್ಲಿ ಪ್ರಾರಂಭವಾದ ಅಭಿಯಾನವು ಈಗ ನನ್ನ ಲಕ್ಷಾಂತರ ವಿಶೇಷ ಸಾಮರ್ಥ್ಯದ ಸಹೋದರ ಸಹೋದರಿಯರಿಗೆ ಪ್ರಯೋಜನವನ್ನು ನೀಡುತ್ತಿದೆ. ಹರಿಯಾಣದ ಪೂಜಾ ಅವರು ಭಾರತೀಯ ಸಂಜ್ಞೆ ಭಾಷೆಯಿಂದ ತುಂಬಾ ಸಂತೋಷವಾಗಿದ್ದಾರೆ. ಈ ಮೊದಲು ಅವರಿಗೆ ತನ್ನ ಮಗನೊಂದಿಗೆ ಸಂವಹನ ನಡೆಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ 2018 ರಲ್ಲಿ ಸಂಜ್ಞೆ ಭಾಷೆ ತರಬೇತಿಯನ್ನು ಪಡೆದ ನಂತರ, ತಾಯಿ ಮತ್ತು ಮಗನ ಜೀವನವು ಸುಲಭವಾಗಿದೆ. ಪೂಜಾ ಅವರ ಮಗನೂ ಸಹ ಸಂಜ್ಞೆ ಭಾಷೆಯನ್ನು ಕಲಿತಿದ್ದಾನೆ ಮತ್ತು ಅವನು ಶಾಲೆಯಲ್ಲಿ ಕಥೆ ಹೇಳುವುದರಲ್ಲಿಯೂ ಬಹುಮಾನವನ್ನು ಗೆದ್ದಿದ್ದಾನೆ. ಅದೇ ರೀತಿ ಟಿಂಕಾಜಿಗೆ ಆರು ವರ್ಷದ ಮಗಳಿದ್ದು ಅವಳಿಗೆ ಕಿವಿ ಕೇಳುವುದಿಲ್ಲ. ಟಿಂಕಾಜಿ ತನ್ನ ಮಗಳನ್ನು ಸಂಜ್ಞೆ ಭಾಷೆಯ ಕೋರ್ಸ್ಗೆ ಸೇರಿಸಿದರು. ಆದರೆ ಅವರಿಗೂ ಸಂಜ್ಞೆ ಭಾಷೆ ತಿಳಿದಿರಲಿಲ್ಲ, ಆದ್ದರಿಂದ ಅವರು ತನ್ನ ಮಗಳೊಂದಿಗೆ ಸಂವಹನ ನಡೆಸಲು ಸಾಧ್ಯವಾಗಲಿಲ್ಲ. ಈಗ ಟಿಂಕಾಜಿ ಸಹ ಸಂಜ್ಞೆ ಭಾಷೆಯ ತರಬೇತಿಯನ್ನು ಪಡೆದಿದ್ದಾರೆ. ಈಗ ತಾಯಿ ಮತ್ತು ಮಗಳು ಇಬ್ಬರೂ ಪರಸ್ಪರ ಬಹಳಷ್ಟು ಮಾತನಾಡುತ್ತಾರೆ. ಈ ಪ್ರಯತ್ನಗಳಿಂದ ಕೇರಳದ ಮಂಜು ಅವರು ಕೂಡ ಸಾಕಷ್ಟು ಪ್ರಯೋಜನ ಪಡೆದಿದ್ದಾರೆ. ಮಂಜುಗೆ ಹುಟ್ಟಿನಿಂದಲೇ ಕಿವಿ ಕೇಳಿಸುವುದಿಲ್ಲ. ಅಷ್ಟೇ ಅಲ್ಲ ಆಕೆಯ ತಂದೆ ತಾಯಿಯರ ಜೀವನದಲ್ಲೂ ಇದೇ ಪರಿಸ್ಥಿತಿ ಇತ್ತು. ಅಂತಹ ಪರಿಸ್ಥಿತಿಯಲ್ಲಿ, ಸಂಜ್ಞೆ ಭಾಷೆ ಇಡೀ ಕುಟುಂಬಕ್ಕೆ ಸಂವಹನ ಸಾಧನವಾಗಿದೆ. ಈಗ ಸ್ವತಃ ಮಂಜು ಅವರು ಸಂಜ್ಞೆ ಭಾಷಾ ಶಿಕ್ಷಕರಾಗಲು ನಿರ್ಧರಿಸಿದ್ದಾರೆ.
ಸ್ನೇಹಿತರೇ, ಭಾರತೀಯ ಸಂಜ್ಞೆ ಭಾಷೆಯ ಬಗ್ಗೆ ಅರಿವು ಹೆಚ್ಚಾಗಲಿ ಎಂದೂ ಸಹ ನಾನು 'ಮನ್ ಕಿ ಬಾತ್' ನಲ್ಲೂ ಈ ಬಗ್ಗೆ ಚರ್ಚಿಸುತ್ತಿದ್ದೇನೆ. ಇದರೊಂದಿಗೆ, ನಮ್ಮ ವಿಶೇಷ ಚೇತನ ಸ್ನೇಹಿತರಿಗೆ ನಾವು ಹೆಚ್ಚು ಹೆಚ್ಚು ಸಹಾಯ ಮಾಡಲು ಸಾಧ್ಯವಾಗುತ್ತದೆ. ಸಹೋದರ ಸಹೋದರಿಯರೇ, ಕೆಲವು ದಿನಗಳ ಹಿಂದೆ, ಬ್ರೈಲ್ ಲಿಪಿಯಲ್ಲಿ ಬರೆದ ಹೇಮಕೋಶ್ನ ಪ್ರತಿ ನನಗೆ ಸಿಕ್ಕಿತು. ಹೇಮಕೋಶ್ ಅಸ್ಸಾಮಿ ಭಾಷೆಯ ಅತ್ಯಂತ ಹಳೆಯ ನಿಘಂಟುಗಳಲ್ಲಿ ಒಂದಾಗಿದೆ. ಇದನ್ನು 19 ನೇ ಶತಮಾನದಲ್ಲಿ ಸಿದ್ಧಪಡಿಸಲಾಯಿತು. ಇದನ್ನು ಖ್ಯಾತ ಭಾಷಾಶಾಸ್ತ್ರಜ್ಞ ಹೇಮಚಂದ್ರ ಬರುವಾ ಅವರು ಸಂಪಾದಿಸಿದ್ದಾರೆ. ಹೇಮಕೋಶ್ನ ಬ್ರೈಲ್ ಆವೃತ್ತಿಯು ಸುಮಾರು 10,000 ಪುಟಗಳನ್ನು ಹೊಂದಿದೆ ಮತ್ತು 15 ಕ್ಕೂ ಹೆಚ್ಚು ಸಂಪುಟಗಳಲ್ಲಿ ಪ್ರಕಟವಾಗಲಿದೆ. ಇದರಲ್ಲಿ 1 ಲಕ್ಷಕ್ಕೂ ಹೆಚ್ಚು ಪದಗಳನ್ನು ಅನುವಾದಿಸಲಾಗಿದೆ. ಈ ಕಠಿಣ ಪ್ರಯತ್ನವನ್ನು ನಾನು ತುಂಬಾ ಪ್ರಶಂಸಿಸುತ್ತೇನೆ. ಅಂತಹ ಪ್ರತಿಯೊಂದು ಪ್ರಯತ್ನವು ನಮ್ಮ ವಿಶೇಷ ಚೇತನ ಸ್ನೇಹಿತರ ಕೌಶಲ್ಯ ಮತ್ತು ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಬಹಳ ಪ್ರಯೋಜನವಾಗುತ್ತದೆ. ಇಂದು ಭಾರತವೂ ಪ್ಯಾರಾ ಸ್ಪೋರ್ಟ್ಸ್ನಲ್ಲಿ ಯಶಸ್ಸಿನ ಪತಾಕೆಯನ್ನು ಹಾರಿಸುತ್ತಿದೆ. ಅನೇಕ ಕ್ರೀಡಾಕೂಟಗಳಲ್ಲಿ ನಾವೆಲ್ಲರೂ ಇದಕ್ಕೆ ಸಾಕ್ಷಿಯಾಗಿದ್ದೇವೆ. ಇಂದು ತಳಮಟ್ಟದಲ್ಲಿರುವ ವಿಶೇಷ ಸಾಮರ್ಥ್ಯವುಳ್ಳವರಲ್ಲಿ ಫಿಟ್ನೆಸ್ ಸಂಸ್ಕೃತಿಯನ್ನು ಉತ್ತೇಜಿಸಲು ತೊಡಗಿರುವ ಅನೇಕ ಜನರಿದ್ದಾರೆ. ಇದು ವಿಶೇಷ ಚೇತನರ ಆತ್ಮಸ್ಥೈರ್ಯಕ್ಕೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ.
ನನ್ನ ಪ್ರೀತಿಯ ದೇಶವಾಸಿಗಳೇ, ಕೆಲವು ದಿನಗಳ ಹಿಂದೆ ನಾನು ಸೂರತ್ನ ಅನ್ವಿ ಎಂಬ ಬಾಲಕಿಯನ್ನು ಭೇಟಿಯಾಗಿದ್ದೆ. ಅನ್ವಿ ಮತ್ತು ಅನ್ವಿಯ ಯೋಗದೊಂದಿಗಿನ ನನ್ನ ಭೇಟಿಯು ಎಷ್ಟು ಸ್ಮರಣೀಯವಾಗಿದೆ ಎಂದರೆ 'ಮನ್ ಕಿ ಬಾತ್' ನ ಎಲ್ಲಾ ಕೇಳುಗರಿಗೆ ನಾನು ಅದರ ಬಗ್ಗೆ ಹೇಳಲು ಬಯಸುತ್ತೇನೆ. ಸ್ನೇಹಿತರೇ, ಅನ್ವಿ ಹುಟ್ಟಿನಿಂದಲೇ ಡೌನ್ ಸಿಂಡ್ರೋಮ್ನಿಂದ ಬಳಲುತ್ತಿದ್ದಾಳೆ ಮತ್ತು ಅವಳು ಬಾಲ್ಯದಿಂದಲೂ ಗಂಭೀರ ಹೃದಯ ಕಾಯಿಲೆಯೊಂದಿಗೆ ಹೋರಾಡುತ್ತಿದ್ದಾಳೆ. ಅವಳು ಕೇವಲ ಮೂರು ತಿಂಗಳ ಮಗುವಾಗಿದ್ದಾಗ ತೆರೆದ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಇಷ್ಟೆಲ್ಲಾ ಕಷ್ಟಗಳಿದ್ದರೂ ಅನ್ವಿಯಾಗಲಿ, ಆಕೆಯ ತಂದೆ ತಾಯಿಯಾಗಲಿ ಹತಾಶರಾಗಲಿಲ್ಲ. ಅನ್ವಿಯ ಪೋಷಕರು ಡೌನ್ ಸಿಂಡ್ರೋಮ್ ಬಗ್ಗೆ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿದರು ಮತ್ತು ನಂತರ ಅನ್ವಿ ಇತರರ ಮೇಲೆ ಅವಲಂಬಿತಳಾಗುವುದನ್ನು ಕಡಿಮೆ ಮಾಡುವ ಮಾರ್ಗವನ್ನು ಹುಡುಕಿದರು. ಅವರು ಅನ್ವಿಗೆ ನೀರಿನ ಲೋಟ ಎತ್ತುವುದು ಹೇಗೆ, ಶೂ ಲೇಸ್ ಕಟ್ಟುವುದು ಹೇಗೆ, ಬಟ್ಟೆಗಳ ಗುಂಡಿ ಹಾಕುವುದು ಹೇಗೆ ಎಂಬಂತಹ ಸಣ್ಣ ವಿಷಯಗಳ ಬಗ್ಗೆ ಕಲಿಸಲು ಪ್ರಾರಂಭಿಸಿದರು. ಯಾವ ವಸ್ತುವಿಗೆ ಯಾವುದು ಸೂಕ್ತವಾದ ಸ್ಥಳ, ಒಳ್ಳೆಯ ಅಭ್ಯಾಸಗಳು ಯಾವುವು, ಇವೆಲ್ಲವನ್ನೂ ಅನ್ವಿಗೆ ಬಹಳ ತಾಳ್ಮೆಯಿಂದ ಕಲಿಸಲು ಪ್ರಯತ್ನಿಸಿದರು. ಮಗಳು ಅನ್ವಿ ಕಲಿಯುವ ಇಚ್ಛಾಶಕ್ತಿ ತೋರಿದ ರೀತಿ, ಪ್ರತಿಭೆ ಪ್ರದರ್ಶಿಸಿದ ರೀತಿಗೆ ಪೋಷಕರ ಪ್ರೋತ್ಸಾಹವೂ ಸಿಕ್ಕಿತು. ಅವರು ಅನ್ವಿಗೆ ಯೋಗ ಕಲಿಯಲು ಪ್ರೇರೇಪಿಸಿದರು. ಸಮಸ್ಯೆ ತುಂಬಾ ಗಂಭೀರವಾಗಿತ್ತು, ಅನ್ವಿಗೆ ತನ್ನ ಕಾಲಿನ ಮೇಲೆ ನಿಲ್ಲಲು ಸಹ ಸಾಧ್ಯವಾಗಲಿಲ್ಲ... ಅಂತಹ ಪರಿಸ್ಥಿತಿಯಲ್ಲಿ, ಆಕೆಯ ಪೋಷಕರು ಅನ್ವಿಗೆ ಯೋಗವನ್ನು ಕಲಿಯಲು ಪ್ರೇರೇಪಿಸಿದರು. ಮೊಟ್ಟಮೊದಲ ಬಾರಿಗೆ ಯೋಗ ತರಬೇತುದಾರನ ಬಳಿಗೆ ಹೋದಾಗ, ಈ ಮುಗ್ಧ ಹುಡುಗಿ ಯೋಗ ಮಾಡಲು ಸಾಧ್ಯವೇ ಎಂಬ ಪ್ರಶ್ನೆ ತರಬೇತುದಾರರಿಗೂ ಇತ್ತು! ಆದರೆ ಆ ತರಬೇತುದಾರರಿಗೂ ಬಹುಶಃ ಅನ್ವಿಯ ದೃಢತೆ ಬಗ್ಗೆ ತಿಳಿದಿರಲಿಲ್ಲ. ತನ್ನ ತಾಯಿಯೊಂದಿಗೆ ಯೋಗಾಭ್ಯಾಸ ಮಾಡಲು ಪ್ರಾರಂಭಿಸಿದ ಆಕೆ ಈಗ ಯೋಗದಲ್ಲಿ ಪರಿಣತಳಾಗಿದ್ದಾಳೆ. ಇಂದು ಅನ್ವಿ ದೇಶಾದ್ಯಂತ ಸ್ಪರ್ಧೆಗಳಲ್ಲಿ ಭಾಗವಹಿಸಿ ಪದಕಗಳನ್ನು ಗೆದ್ದಿದ್ದಾಳೆ. ಅನ್ವಿಗೆ ಯೋಗ ಹೊಸ ಜೀವನ ನೀಡಿದೆ. ಅನ್ವಿ ಯೋಗವನ್ನು ಮೈಗೂಡಿಸಿಕೊಂಡರು ಮತ್ತು ಅದನ್ನು ಜೀವನದಲ್ಲಿ ಅಳವಡಿಸಿಕೊಂಡರು. ಯೋಗವು ಅನ್ವಿಯ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ತಂದಿದೆ ಎಂದು ಅನ್ವಿಯ ಪೋಷಕರು ನನಗೆ ಹೇಳಿದರು. ಈಗ ಅವರ ಆತ್ಮವಿಶ್ವಾಸವು ಹೆಚ್ಚಾಗಿದೆ. ಯೋಗವು ಅನ್ವಿಯ ದೈಹಿಕ ಆರೋಗ್ಯವನ್ನು ಸುಧಾರಿಸಿದೆ ಮತ್ತು ಔಷಧಿಗಳ ಅಗತ್ಯವನ್ನೂ ಕಡಿಮೆ ಮಾಡಿದೆ. ದೇಶ-ವಿದೇಶಗಳಲ್ಲಿ 'ಮನ್ ಕಿ ಬಾತ್' ಕೇಳುಗರು ಯೋಗದಿಂದ ಅನ್ವಿಗೆ ಆಗಿರುವ ಪ್ರಯೋಜನಗಳ ಬಗ್ಗೆ ವೈಜ್ಞಾನಿಕ ಅಧ್ಯಯನವನ್ನು ಮಾಡಬೇಕೆಂದು ನಾನು ಬಯಸುತ್ತೇನೆ. ಯೋಗದ ಶಕ್ತಿಯನ್ನು ಪರೀಕ್ಷಿಸಲು ಬಯಸುವವರಿಗೆ ಅನ್ವಿ ಉತ್ತಮ ಕೇಸ್ ಸ್ಟಡಿ ಎಂದು ನಾನು ಭಾವಿಸುತ್ತೇನೆ. ಅಂತಹ ವಿಜ್ಞಾನಿಗಳು ಅನ್ವಿಯ ಯಶಸ್ಸಿನ ಆಧಾರದ ಮೇಲೆ ಅಧ್ಯಯನಗಳಿಗೆ ಮುಂದಾಗಬೇಕು ಮತ್ತು ಯೋಗದ ಶಕ್ತಿಯನ್ನು ಜಗತ್ತಿಗೆ ಪರಿಚಯಿಸಬೇಕು. ಅಂತಹ ಯಾವುದೇ ಸಂಶೋಧನೆಯು ಪ್ರಪಂಚದಾದ್ಯಂತ ಡೌನ್ ಸಿಂಡ್ರೋಮ್ನಿಂದ ಪೀಡಿತ ಮಕ್ಕಳಿಗೆ ಉತ್ತಮ ಪ್ರಯೋಜನ ನೀಡಬಹುದು. ಈಗ, ಯೋಗವು ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ಬಹಳ ಪರಿಣಾಮಕಾರಿ ಎಂದು ಜಗತ್ತು ಒಪ್ಪಿಕೊಂಡಿದೆ. ವಿಶೇಷವಾಗಿ ಮಧುಮೇಹ ಮತ್ತು ರಕ್ತದೊತ್ತಡಕ್ಕೆ ಸಂಬಂಧಿಸಿದ ಸಮಸ್ಯೆಗಳಲ್ಲಿ ಯೋಗವು ಬಹಳಷ್ಟು ಸಹಾಯ ಮಾಡುತ್ತದೆ. ಯೋಗದ ಅಂತಹ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ವಿಶ್ವಸಂಸ್ಥೆಯು ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನವನ್ನು ಆಚರಿಸಲು ನಿರ್ಧರಿಸಿತು. ಇದೀಗ ವಿಶ್ವಸಂಸ್ಥೆಯು ಭಾರತದ ಮತ್ತೊಂದು ಪ್ರಯತ್ನವನ್ನು ಗುರುತಿಸಿ ಗೌರವಿಸಿದೆ. ಇದು 2017 ರಲ್ಲಿ ಪ್ರಾರಂಭವಾದ ಪ್ರಯತ್ನವಾಗಿದೆ, ಅದುವೇ "ಭಾರತದ ಅಧಿಕ ರಕ್ತದೊತ್ತಡ ನಿಯಂತ್ರಣ ಉಪಕ್ರಮ". ಇದರ ಅಡಿಯಲ್ಲಿ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿರುವ ಲಕ್ಷಾಂತರ ಜನರು ಸರ್ಕಾರಿ ಕ್ಷೇಮ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಉಪಕ್ರಮವು ಅಂತರರಾಷ್ಟ್ರೀಯ ಸಂಸ್ಥೆಗಳ ಗಮನ ಸೆಳೆದ ರೀತಿ ಅಭೂತಪೂರ್ವವಾಗಿದೆ. ಚಿಕಿತ್ಸೆ ಪಡೆದ ಅರ್ಧದಷ್ಟು ಮಂದಿಯಲ್ಲಿ ರಕ್ತದೊತ್ತಡ ನಿಯಂತ್ರಣದಲ್ಲಿರುವುದು ನಮಗೆಲ್ಲರಿಗೂ ಉತ್ತೇಜನದ ಸಂಗತಿಯಾಗಿದೆ. ಈ ಉಪಕ್ರಮಕ್ಕಾಗಿ ಶ್ರಮಿಸುತ್ತಿರುವ ಎಲ್ಲರನ್ನು ನಾನು ಅಭಿನಂದಿಸುತ್ತೇನೆ, ಅವರು ತಮ್ಮ ಅವಿರತ ಪರಿಶ್ರಮದಿಂದ ಇದನ್ನು ಯಶಸ್ವಿಗೊಳಿಸಿದ್ದಾರೆ.
ಸ್ನೇಹಿತರೇ, ಮಾನವ ಜೀವನದ ವಿಕಾಸದ ಪ್ರಯಾಣವು ನಿರಂತರವಾಗಿ ನೀರಿನೊಂದಿಗೆ ಸಂಪರ್ಕ ಹೊಂದಿದೆ - ಅದು ಸಮುದ್ರಗಳಾಗಿರಬಹುದು, ನದಿ ಅಥವಾ ಕೆರೆಕಟ್ಟೆಗಳಾಗಿರಬಹುದು. ಏಳೂವರೆ ಸಾವಿರ ಕಿಲೋಮೀಟರ್ (7500 ಕಿ.ಮೀ) ಗಿಂತ ಹೆಚ್ಚು ಉದ್ದದ ಕಡಲತೀರದ ಕಾರಣದಿಂದಾಗಿ ಸಮುದ್ರದೊಂದಿಗಿನ ನಮ್ಮ ಬಾಂಧವ್ಯವು ಅವಿನಾಭಾವವಾಗಿ ಉಳಿದುಕೊಂಡಿರುವುದು ಭಾರತದ ಅದೃಷ್ಟವಾಗಿದೆ. ಈ ಕರಾವಳಿಯು ಅನೇಕ ರಾಜ್ಯಗಳು ಮತ್ತು ದ್ವೀಪಗಳ ಮೂಲಕ ಹಾದುಹೋಗುತ್ತದೆ. ವಿವಿಧ ಸಮುದಾಯಗಳು ಮತ್ತು ವೈವಿಧ್ಯತೆಯಿಂದ ಕೂಡಿರುವ ಇಲ್ಲಿ ಭಾರತದ ಸಂಸ್ಕೃತಿಯು ಪ್ರವರ್ಧಮಾನಕ್ಕೆ ಬಂದಿರುವುದನ್ನು ಕಾಣಬಹುದು. ಅಷ್ಟೇ ಅಲ್ಲ ಈ ಕರಾವಳಿ ಪ್ರದೇಶಗಳ ತಿನಿಸುಗಳು ಜನರನ್ನು ಆಕರ್ಷಿಸುತ್ತವೆ. ಆದರೆ ಈ ಆಸಕ್ತಿದಾಯಕ ಸಂಗತಿಗಳ ಜೊತೆಗೆ, ಬೇಸರದ ವಿಷಯವೂ ಇದೆ. ನಮ್ಮ ಈ ಕರಾವಳಿ ಪ್ರದೇಶಗಳು ಪರಿಸರಕ್ಕೆ ಸಂಬಂಧಿಸಿದಂತೆ ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಹವಾಮಾನ ಬದಲಾವಣೆಯು ಸಾಗರ ಪರಿಸರ ವ್ಯವಸ್ಥೆಗಳಿಗೆ ಪ್ರಮುಖ ಬೆದರಿಕೆಯಾಗಿದೆ. ಮತ್ತೊಂದೆಡೆ, ನಮ್ಮ ಕಡಲತೀರಗಳಲ್ಲಿ ಹರಡಿರುವ ಕಸವು ಆತಂಕವನ್ನುಂಟುಮಾಡುತ್ತದೆ. ಈ ಸವಾಲುಗಳಿಗೆ ಗಂಭೀರ ಮತ್ತು ನಿರಂತರ ಪ್ರಯತ್ನಗಳನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ಇಲ್ಲಿ ನಾನು ದೇಶದ ಕರಾವಳಿ ಪ್ರದೇಶಗಳಲ್ಲಿ ಕಡಲತೀರದ ಸ್ವಚ್ಛತೆಯ ಬಗ್ಗೆ ಮಾತನಾಡಲು ಬಯಸುತ್ತೇನೆ 'ಸ್ವಚ್ಛ ಸಾಗರ-ಸುರಕ್ಷಿತ ಸಾಗರ'. ಜುಲೈ 5 ರಂದು ಪ್ರಾರಂಭವಾದ ಈ ಅಭಿಯಾನವು ವಿಶ್ವಕರ್ಮ ಜಯಂತಿಯ ದಿನವಾದ ಸೆಪ್ಟೆಂಬರ್ 17 ರಂದು ಮುಕ್ತಾಯಗೊಂಡಿತು. ಅಂದು ಕರಾವಳಿ ಸ್ವಚ್ಛತಾ ದಿನವೂ ಆಗಿತ್ತು. ಆಜಾದಿ ಕಾ ಅಮೃತ ಮಹೋತ್ಸವದಲ್ಲಿ ಆರಂಭವಾದ ಈ ಅಭಿಯಾನ 75 ದಿನಗಳ ಕಾಲ ನಡೆಯಿತು. ಇದರಲ್ಲಿ ಸಾರ್ವಜನಿಕರು ಭಾಗವಹಿಸಿದ್ದು ಕಣ್ಮನ ಸೆಳೆಯುವಂತಿತ್ತು. ಈ ಪ್ರಯತ್ನದ ಸಮಯದಲ್ಲಿ, ಇಡೀ ಎರಡೂವರೆ ತಿಂಗಳ ಕಾಲ ಅನೇಕ ಸ್ವಚ್ಛತೆಗೆ ಸಂಬಂಧಿಸಿದ ಕಾರ್ಯಕ್ರಮಗಳು ಕಂಡುಬಂದವು. ಗೋವಾದಲ್ಲಿ ಸುದೀರ್ಘ ಮಾನವ ಸರಪಳಿ ನಿರ್ಮಿಸಲಾಯಿತು. ಕಾಕಿನಾಡದಲ್ಲಿ ಗಣಪತಿ ವಿಸರ್ಜನೆಯ ವೇಳೆ ಪ್ಲಾಸ್ಟಿಕ್ನಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ಜನರಿಗೆ ತಿಳಿಸಲಾಯಿತು. ಎನ್ಎಸ್ಎಸ್ನ ಸುಮಾರು 5000 ಯುವ ಸ್ನೇಹಿತರು 30 ಟನ್ಗಳಿಗಿಂತ ಹೆಚ್ಚು ಪ್ಲಾಸ್ಟಿಕ್ ಅನ್ನು ಸಂಗ್ರಹಿಸಿದರು. ಒಡಿಶಾದಲ್ಲಿ ಮೂರು ದಿನಗಳಲ್ಲಿ, 20 ಸಾವಿರಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿಗಳು ಸ್ವಚ್ಛ ಸಾಗರ-ಸುರಕ್ಷಿತ ಸಾಗರ ಉಪಕ್ರಮಕ್ಕಾಗಿ ತಮ್ಮ ಕುಟುಂಬ ಮತ್ತು ಇತರರನ್ನು ಪ್ರೇರೇಪಿಸುವುದಾಗಿ ಪ್ರತಿಜ್ಞೆ ಮಾಡಿದರು. ಈ ಅಭಿಯಾನದಲ್ಲಿ ಭಾಗವಹಿಸಿದ ಎಲ್ಲರನ್ನು ನಾನು ಅಭಿನಂದಿಸುತ್ತೇನೆ.
ನಾನು ಚುನಾಯಿತ ಪ್ರತಿನಿಧಿಗಳೊಂದಿಗೆ, ವಿಶೇಷವಾಗಿ ನಗರಗಳ ಮೇಯರ್ಗಳು ಮತ್ತು ಗ್ರಾಮಗಳ ಸರಪಂಚರೊಂದಿಗೆ ಸಂವಾದ ನಡೆಸಿದಾಗ, ಸ್ಥಳೀಯ ಸಮುದಾಯಗಳು ಮತ್ತು ಸ್ಥಳೀಯ ಸಂಸ್ಥೆಗಳನ್ನು ಸ್ವಚ್ಛತೆಯಂತಹ ಪ್ರಯತ್ನಗಳಲ್ಲಿ ಸೇರಿಸಿಕೊಳ್ಳುವಂತೆ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಅವರನ್ನು ಒತ್ತಾಯಿಸುತ್ತೇನೆ.
ಬೆಂಗಳೂರಿನಲ್ಲಿ ಯೂತ್ ಫಾರ್ ಪರಿವರ್ತನ್ ಎಂಬ ಒಂದು ತಂಡವಿದೆ. ಕಳೆದ ಎಂಟು ವರ್ಷಗಳಿಂದ ಈ ತಂಡವು ಸ್ವಚ್ಛತೆ ಮತ್ತು ಇತರ ಸಮುದಾಯ ಚಟುವಟಿಕೆಗಳಲ್ಲಿ ಕೆಲಸ ಮಾಡುತ್ತಿದೆ. ಅವರ ಧ್ಯೇಯವಾಕ್ಯವು ತುಂಬಾ ಸ್ಪಷ್ಟವಾಗಿದೆ - 'ದೂರುವುದನ್ನು ನಿಲ್ಲಿಸಿ, ಕೆಲಸ ಆರಂಭಿಸಿ'. ಈ ತಂಡ ಇದುವರೆಗೆ ನಗರದಾದ್ಯಂತ 370ಕ್ಕೂ ಹೆಚ್ಚು ಸ್ಥಳಗಳನ್ನು ಸುಂದರಗೊಳಿಸಿದೆ. ಯೂತ್ ಫಾರ್ ಪರಿವರ್ತನ್ ಅಭಿಯಾನವು ಪ್ರತಿ ಸ್ಥಳದಲ್ಲಿ 100 ರಿಂದ 150 ನಾಗರಿಕರನ್ನು ಸಂಪರ್ಕಿಸಿದೆ. ಪ್ರತಿ ಭಾನುವಾರ ಈ ಕಾರ್ಯಕ್ರಮವು ಬೆಳಿಗ್ಗೆ ಪ್ರಾರಂಭವಾಗಿ ಮಧ್ಯಾಹ್ನದವರೆಗೆ ಮುಂದುವರಿಯುತ್ತದೆ. ಈ ಕಾರ್ಯದಲ್ಲಿ ಕಸ ಎತ್ತುವುದಷ್ಟೇ ಅಲ್ಲ, ಗೋಡೆಗಳಿಗೆ ಬಣ್ಣ ಬಳಿಯುವ, ಕಲಾತ್ಮಕ ರೇಖಾಚಿತ್ರಗಳನ್ನು ಬಿಡಿಸುವ ಕೆಲಸವೂ ನಡೆಯುತ್ತದೆ. ಅನೇಕ ಸ್ಥಳಗಳಲ್ಲಿ, ನೀವು ಪ್ರಸಿದ್ಧ ವ್ಯಕ್ತಿಗಳ ರೇಖಾಚಿತ್ರಗಳನ್ನು ಮತ್ತು ಅವರ ಸ್ಫೂರ್ತಿದಾಯಕ ಉಲ್ಲೇಖಗಳನ್ನು ಸಹ ನೋಡಬಹುದು. ಬೆಂಗಳೂರಿನ ಯೂತ್ ಫಾರ್ ಪರಿವರ್ತನ್ ಪ್ರಯತ್ನದ ನಂತರ, ಮೀರತ್ನ 'ಕಬಾದ್ ಸೆ ಜುಗಾದ್' ಅಭಿಯಾನದ ಬಗ್ಗೆಯೂ ಹೇಳಬೇಕು. ಈ ಅಭಿಯಾನವು ಪರಿಸರ ಸಂರಕ್ಷಣೆ ಹಾಗೂ ನಗರದ ಸುಂದರೀಕರಣಕ್ಕೆ ಸಂಬಂಧಿಸಿದ್ದು. ಈ ಅಭಿಯಾನದ ವಿಶೇಷವೆಂದರೆ, ಇದರಲ್ಲಿ ಕಬ್ಬಿಣದ ಗುಜರಿ ವಸ್ತು, ಪ್ಲಾಸ್ಟಿಕ್ ತ್ಯಾಜ್ಯ, ಹಳೆಯ ಟೈರ್ ಮತ್ತು ಡ್ರಮ್ಗಳಂತಹ ತ್ಯಾಜ್ಯವನ್ನು ಬಳಸಲಾಗುತ್ತದೆ. ಕಡಿಮೆ ವೆಚ್ಚದಲ್ಲಿ ಸಾರ್ವಜನಿಕ ಸ್ಥಳಗಳನ್ನು ಹೇಗೆ ಸುಂದರಗೊಳಿಸಬಹುದು ಎಂಬುದಕ್ಕೆ ಈ ಅಭಿಯಾನವೂ ಒಂದು ಉದಾಹರಣೆಯಾಗಿದೆ. ಈ ಅಭಿಯಾನದಲ್ಲಿ ತೊಡಗಿಸಿಕೊಂಡಿರುವ ಎಲ್ಲರಿಗೂ ನನ್ನ ಹೃದಯಾಂತರಾಳದ ಅಭಿನಂದನೆಗಳು.
ನನ್ನ ಪ್ರೀತಿಯ ದೇಶವಾಸಿಗಳೇ, ಈಗ ದೇಶದಾದ್ಯಂತ ಹಬ್ಬದ ಉತ್ಸಾಹವಿದೆ. ನಾಳೆ ನವರಾತ್ರಿಯ ಮೊದಲ ದಿನ. ಇದರಲ್ಲಿ ದೇವಿಯ ಮೊದಲ ಅವತಾರ 'ಮಾತೆ ಶೈಲಪುತ್ರಿ'ಯನ್ನು ಪೂಜಿಸುತ್ತೇವೆ. ಇಲ್ಲಿಂದ ಒಂಬತ್ತು ದಿನ ಸ್ವಯಂ ಶಿಸ್ತು, ಸಂಯಮ, ಉಪವಾಸವಿರುತ್ತದೆ, ನಂತರ ವಿಜಯದಶಮಿ ಹಬ್ಬವೂ ಇರುತ್ತದೆ. ಒಂದು ರೀತಿಯಲ್ಲಿ ನೋಡಿದರೆ ನಮ್ಮ ಹಬ್ಬಗಳಲ್ಲಿ ನಂಬಿಕೆ ಮತ್ತು ಅಧ್ಯಾತ್ಮದ ಜೊತೆಗೆ ಗಹನವಾದ ಸಂದೇಶ ಅಡಗಿರುವುದೂ ತಿಳಿಯುತ್ತದೆ. ಶಿಸ್ತು ಮತ್ತು ಸಂಯಮದ ಮೂಲಕ ‘ಸಿದ್ಧಿ’ಯನ್ನು ಸಾಧಿಸಿ, ನಂತರ ವಿಜಯೋತ್ಸವದ ಹಬ್ಬ, ಅದು ಜೀವನದಲ್ಲಿ ಯಾವುದೇ ಗುರಿಯನ್ನು ಸಾಧಿಸುವ ಮಾರ್ಗವಾಗಿದೆ. ದಸರಾ ನಂತರ, ಧನ್ತೆರೇಸ್ ಮತ್ತು ದೀಪಾವಳಿ ಹಬ್ಬಗಳು ಬರುತ್ತವೆ.
ಸ್ನೇಹಿತರೇ, ಕಳೆದ ಕೆಲವು ವರ್ಷಗಳಲ್ಲಿ, ದೇಶದ ಹೊಸ ಸಂಕಲ್ಪವೂ ನಮ್ಮ ಹಬ್ಬಗಳೊಂದಿಗೆ ಸಂಬಂಧ ಹೊಂದಿದೆ. ನಿಮಗೆಲ್ಲ ಗೊತ್ತೇ ಇದೆ, ಇದು 'ವೋಕಲ್ ಫಾರ್ ಲೋಕಲ್'ನ ಸಂಕಲ್ಪ. ನಾವು ಈಗ ನಮ್ಮ ದೇಶೀಯ ಕುಶಲಕರ್ಮಿಗಳು, ಕಸುಬುದಾರರು ಮತ್ತು ವ್ಯಾಪಾರಿಗಳನ್ನು ಹಬ್ಬದ ಸಂತೋಷದಲ್ಲಿ ಸೇರಿಸಿಕೊಳ್ಳುತ್ತೇವೆ. ಅಕ್ಟೋಬರ್ 2 ರಂದು ಬಾಪು ಅವರ ಜನ್ಮದಿನದ ಸಂದರ್ಭದಲ್ಲಿ ನಾವು ಈ ಅಭಿಯಾನವನ್ನು ತೀವ್ರಗೊಳಿಸುವ ಪ್ರತಿಜ್ಞೆಯನ್ನು ಮಾಡಬೇಕಾಗಿದೆ. ಖಾದಿ, ಕೈಮಗ್ಗ, ಕರಕುಶಲ ವಸ್ತುಗಳು...ಈ ಎಲ್ಲಾ ಉತ್ಪನ್ನಗಳ ಜೊತೆಗೆ, ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಬೇಕು. ಅಷ್ಟಕ್ಕೂ, ಈ ಹಬ್ಬದ ನಿಜವಾದ ಸಂತೋಷವಿರುವುದು ಎಲ್ಲರೂ ಅದರ ಭಾಗವಾದಾಗ ಮಾತ್ರ. ಆದ್ದರಿಂದ, ಸ್ಥಳೀಯ ಉತ್ಪನ್ನಗಳ ಕೆಲಸಕ್ಕೆ ಸಂಬಂಧಿಸಿದ ಜನರನ್ನು ನಾವು ಬೆಂಬಲಿಸಬೇಕು. ಹಬ್ಬದ ಸಮಯದಲ್ಲಿ ನಾವು ನೀಡುವ ಯಾವುದೇ ಉಡುಗೊರೆಗಳಲ್ಲಿ ಈ ರೀತಿಯ ಉತ್ಪನ್ನಗಳು ಇರುವಂತೆ ನೋಡಿಕೊಳ್ಳುವುದು ಉತ್ತಮ ಮಾರ್ಗವಾಗಿದೆ.
ಈಗ, ಈ ಅಭಿಯಾನವು ವಿಶೇಷವಾಗಿದೆ ಏಕೆಂದರೆ ಆಜಾದಿ ಕಾ ಅಮೃತ ಮಹೋತ್ಸವದ ಸಮಯದಲ್ಲಿ, ನಾವು ಸಹ ಸ್ವಾವಲಂಬಿ ಭಾರತದ ಗುರಿಯೊಂದಿಗೆ ಮುಂದುವರಿಯುತ್ತೇವೆ. ಇದು ನಿಜವಾದ ಅರ್ಥದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ನಿಜವಾದ ಗೌರವವಾಗಿದೆ. ಅದಕ್ಕಾಗಿಯೇ ಖಾದಿ, ಕೈಮಗ್ಗ ಅಥವಾ ಕರಕುಶಲ ಉತ್ಪನ್ನಗಳ ಖರೀದಿಯಲ್ಲಿ ಈ ಬಾರಿ ಎಲ್ಲಾ ದಾಖಲೆಗಳನ್ನು ಮುರಿಯಬೇಕೆಂದು ನಿಮ್ಮಲ್ಲಿ ವಿನಂತಿಸುತ್ತೇನೆ. ಹಬ್ಬ ಹರಿದಿನಗಳಲ್ಲಿ ಪ್ಯಾಕಿಂಗ್ ಮತ್ತು ಪ್ಯಾಕೇಜಿಂಗ್ಗೆ ಪಾಲಿಥಿನ್ ಚೀಲಗಳನ್ನು ಹೆಚ್ಚಾಗಿ ಬಳಸುವುದನ್ನು ನಾವು ನೋಡಿದ್ದೇವೆ. ಶುಚಿತ್ವ ಕಾಪಾಡಬೇಕಾದ ಹಬ್ಬ ಹರಿದಿನಗಳಲ್ಲಿ ಪಾಲಿಥಿನ್ನಂತಹ ಹಾನಿಕಾರಕ ಕಸ ನಮ್ಮ ಹಬ್ಬಗಳ ಆಶಯಕ್ಕೆ ವಿರುದ್ಧವಾಗಿದೆ. ಆದ್ದರಿಂದ, ನಾವು ಸ್ಥಳೀಯವಾಗಿ ತಯಾರಿಸಿದ ಪ್ಲಾಸ್ಟಿಕ್ಯೇತರ ಚೀಲಗಳನ್ನು ಮಾತ್ರ ಬಳಸಬೇಕು. ಸೆಣಬು, ಹತ್ತಿ, ಬಾಳೆ ನಾರಿನಿಂದ ಮಾಡಿದ ಹಲವು ಸಾಂಪ್ರದಾಯಿಕ ಚೀಲಗಳ ಟ್ರೆಂಡ್ ಮತ್ತೊಮ್ಮೆ ಹೆಚ್ಚುತ್ತಿದೆ. ಹಬ್ಬ ಹರಿದಿನಗಳಲ್ಲಿ ಅವುಗಳನ್ನು ಪ್ರೋತ್ಸಾಹಿಸುವುದು, ಸ್ವಚ್ಛತೆಯ ಜೊತೆಗೆ ನಮ್ಮ ಆರೋಗ್ಯ ಮತ್ತು ಪರಿಸರದ ಬಗ್ಗೆ ಕಾಳಜಿ ವಹಿಸುವುದು ನಮ್ಮ ಕರ್ತವ್ಯವಾಗಿದೆ.
ನನ್ನ ಪ್ರೀತಿಯ ದೇಶವಾಸಿಗಳೇ, 'ಪರಹಿತ್ ಸರಿಸ್ ಧರಮ್ ನಹೀ ಭಾಯಿ' ಎಂದು ನಮ್ಮ ಧರ್ಮಗ್ರಂಥಗಳಲ್ಲಿ ಹೇಳಲಾಗಿದೆ.
ಅಂದರೆ ಇತರರಿಗೆ ಉಪಕಾರ ಮಾಡುವುದು, ಪರರ ಸೇವೆ ಮಾಡುವುದು, ದಾನ ಮಾಡುವುದಕ್ಕಿಂತ ಬೇರೆ ಧರ್ಮ ಇನ್ನೊಂದಿಲ್ಲ. ಇತ್ತೀಚಿಗೆ ದೇಶದಲ್ಲಿ ಈ ಸಮಾಜ ಸೇವಾ ಮನೋಭಾವದ ಮತ್ತೊಂದು ಝಲಕ್ ಕಾಣಿಸಿದೆ. ಜನರು ಮುಂದೆ ಬಂದು ಟಿಬಿ ರೋಗಿಯನ್ನು ದತ್ತು ತೆಗೆದುಕೊಳ್ಳುತ್ತಿರುವುದನ್ನು ಮತ್ತು ಪೌಷ್ಟಿಕಾಂಶದ ಆಹಾರವನ್ನು ಖಾತ್ರಿಪಡಿಸಿಕೊಳ್ಳುವಲ್ಲಿ ಮುಂದಾಳತ್ವ ವಹಿಸುತ್ತಿರುವುದನ್ನು ನೀವು ನೋಡಿರಬೇಕು ವಾಸ್ತವವಾಗಿ, ಇದು ಕ್ಷಯ ಮುಕ್ತ ಭಾರತ ಅಭಿಯಾನದ ಒಂದು ಭಾಗವಾಗಿದೆ, ಇದರ ಆಧಾರವೇ ಸಾರ್ವಜನಿಕ ಭಾಗವಹಿಸುವಿಕೆಯಾಗಿದೆ; ಕರ್ತವ್ಯ ಪ್ರಜ್ಞೆ. ಸರಿಯಾದ ಪೋಷಣೆಯೊಂದಿಗೆ, ಸರಿಯಾದ ಸಮಯದಲ್ಲಿ ಸರಿಯಾದ ಔಷಧಿಗಳೊಂದಿಗೆ ಕ್ಷಯಯನ್ನು ಗುಣಪಡಿಸಲು ಸಾಧ್ಯವಿದೆ. ಸಾರ್ವಜನಿಕ ಸಹಭಾಗಿತ್ವದ ಈ ಶಕ್ತಿಯಿಂದ ಭಾರತವು 2025 ರ ವೇಳೆಗೆ ಖಂಡಿತವಾಗಿಯೂ ಕ್ಷಯ ರೋಗದಿಂದ ಮುಕ್ತವಾಗಲಿದೆ ಎಂದು ನನಗೆ ನಂಬಿಕೆಯಿದೆ.
ಸ್ನೇಹಿತರೇ, ದಾದ್ರಾ-ನಗರ ಹವೇಲಿ ಮತ್ತು ದಮನ್-ದಿಯು ಕೇಂದ್ರಾಡಳಿತ ಪ್ರದೇಶಗಳಲ್ಲೂ ಇಂತಹ ಹೃದಯಸ್ಪರ್ಶಿ ಉದಾಹರಣೆಗಳ ಬಗ್ಗೆ ನಾನು ತಿಳಿದುಕೊಂಡಿದ್ದೇನೆ. ಇಲ್ಲಿನ ಬುಡಕಟ್ಟು ಪ್ರದೇಶದಲ್ಲಿ ವಾಸಿಸುತ್ತಿರುವ ಜಿನು ರಾವತಿಯಾ ಅವರು, ಗ್ರಾಮ ದತ್ತು ಕಾರ್ಯಕ್ರಮದ ಅಡಿಯಲ್ಲಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು 50 ಹಳ್ಳಿಗಳನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ಬರೆದಿದ್ದಾರೆ. ಇದು ಜಿನು ಅವರ ಗ್ರಾಮವನ್ನು ಸಹ ಒಳಗೊಂಡಿದೆ. ಈ ವೈದ್ಯಕೀಯ ವಿದ್ಯಾರ್ಥಿಗಳು ಅನಾರೋಗ್ಯದಿಂದ ದೂರವಿರುವ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸುತ್ತಾರೆ, ಚೇತರಿಸಿಕೊಳ್ಳಲು ಸಹಾಯ ಮಾಡುತ್ತಾರೆ ಮತ್ತು ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಈ ಪರೋಪಕಾರದ ಮನೋಭಾವವು ಹಳ್ಳಿಗಳಲ್ಲಿ ವಾಸಿಸುವ ಜನರ ಜೀವನದಲ್ಲಿ ಹೊಸ ಸಂತೋಷವನ್ನು ತಂದಿದೆ. ಈ ಪ್ರಯತ್ನಕ್ಕಾಗಿ ನಾನು ವೈದ್ಯಕೀಯ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸುತ್ತೇನೆ.
ಸ್ನೇಹಿತರೇ, 'ಮನ್ ಕಿ ಬಾತ್' ನಲ್ಲಿ ವಿವಿಧ ಹೊಸ ವಿಷಯಗಳು ಚರ್ಚೆಯಾಗುತ್ತಿವೆ. ಅನೇಕ ಬಾರಿ, ಈ ಕಾರ್ಯಕ್ರಮದ ಮೂಲಕ, ಕೆಲವು ಹಳೆಯ ವಿಷಯಗಳ ಆಳವನ್ನು ತಿಳಿಯುವ ಅವಕಾಶವೂ ನಮಗೆ ಸಿಗುತ್ತದೆ. ಕಳೆದ ತಿಂಗಳು 'ಮನ್ ಕಿ ಬಾತ್' ನಲ್ಲಿ, ನಾನು ಸಿರಿಧಾನ್ಯಗಳ ಬಗ್ಗೆ ಮತ್ತು 2023 ರ ವರ್ಷವನ್ನು 'ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ' ಎಂದು ಆಚರಿಸುವ ಬಗ್ಗೆ ಚರ್ಚಿಸಿದ್ದೆ. ಜನರು ಈ ವಿಷಯದ ಬಗ್ಗೆ ಬಹಳ ಕುತೂಹಲಿಗಳಾಗಿದ್ದಾರೆ. ಅಂತಹ ಹಲವಾರು ಪತ್ರಗಳು ನನಗೆ ಬಂದಿವೆ, ಅದರಲ್ಲಿ ಜನರು ಸಿರಿಧಾನ್ಯವನ್ನು ತಮ್ಮ ದೈನಂದಿನ ಆಹಾರದ ಭಾಗವಾಗಿ ಮಾಡಿಕೊಂಡಿರುವ ಬಗ್ಗೆ ಬರೆದಿದ್ದಾರೆ. ಕೆಲವರು ಸಿರಿಧಾನ್ಯದಿಂದ ಮಾಡಿದ ಸಾಂಪ್ರದಾಯಿಕ ತಿನಿಸುಗಳ ಬಗ್ಗೆಯೂ ಹೇಳಿದ್ದಾರೆ. ಇವು ದೊಡ್ಡ ಬದಲಾವಣೆಯ ಲಕ್ಷಣಗಳಾಗಿವೆ. ಜನರ ಈ ಉತ್ಸಾಹವನ್ನು ನೋಡಿ, ನಾವು ಒಟ್ಟಾಗಿ ಇ-ಪುಸ್ತಕವೊಂದನ್ನು ಸಿದ್ಧಪಡಿಸಬೇಕು ಎಂದು ನಾನು ಭಾವಿಸುತ್ತೇನೆ, ಅದರಲ್ಲಿ ಜನರು ತಮ್ಮ ಅನುಭವಗಳನ್ನು ಮತ್ತು ಸಿರಿಧಾನ್ಯಗಳಿಂದ ಮಾಡಿದ ತಿನಿಸುಗಳ ಬಗ್ಗೆ ಮಾಹಿತಿ ಹಂಚಿಕೊಳ್ಳಬಹುದು, ಆದ್ದರಿಂದ, ಅಂತರರಾಷ್ಟ್ರೀಯ ಸಿರಿಧಾನ್ಯ ವರ್ಷ ಪ್ರಾರಂಭವಾಗುವ ಮೊದಲು, ನಾವು ಸಾರ್ವಜನಿಕ ವಿಶ್ವಕೋಶವನ್ನು ಹೊಂದಿರುತ್ತೇವೆ. ಅದನ್ನು MyGov ಪೋರ್ಟಲ್ನಲ್ಲಿ ಪ್ರಕಟಿಸಬಹುದಾಗಿದೆ.
ಸ್ನೇಹಿತರೇ, ಈ ಬಾರಿಯ 'ಮನ್ ಕಿ ಬಾತ್' ಇಲ್ಲಿಗೆ ಮಗಿಯಿತು. ಆದರೆ ನಾನು ಹೊರಡುವ ಮೊದಲು, ರಾಷ್ಟ್ರೀಯ ಕ್ರೀಡಾಕೂಟದ ಬಗ್ಗೆಯೂ ಹೇಳಲು ಬಯಸುತ್ತೇನೆ. ಸೆಪ್ಟೆಂಬರ್ 29 ರಿಂದ ಗುಜರಾತ್ನಲ್ಲಿ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಇದು ಬಹಳ ವಿಶೇಷವಾದ ಸಂದರ್ಭ, ಏಕೆಂದರೆ ಹಲವು ವರ್ಷಗಳ ನಂತರ ರಾಷ್ಟ್ರೀಯ ಕ್ರೀಡಾಕೂಟವನ್ನು ಆಯೋಜಿಸಲಾಗುತ್ತಿದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಹಿಂದಿನ ಕ್ರೀಡಾಕೂಟಗಳನ್ನು ರದ್ದುಗೊಳಿಸಬೇಕಾಯಿತು. ಈ ಕ್ರೀಡಾಕೂಟದಲ್ಲಿ ಭಾಗವಹಿಸುವ ಪ್ರತಿಯೊಬ್ಬ ಕ್ರೀಡಾಪಟುವಿಗೂ ನನ್ನ ಶುಭಾಶಯಗಳು. ಆಟಗಾರರ ಉತ್ಸಾಹವನ್ನು ಹೆಚ್ಚಿಸಲು, ಅಂದು ನಾನು ಅವರ ಮಧ್ಯೆ ಇರುತ್ತೇನೆ. ನೀವೆಲ್ಲರೂ ರಾಷ್ಟ್ರೀಯ ಕ್ರೀಡಾಕೂಟವನ್ನು ನೋಡಬೇಕು ಮತ್ತು ನಮ್ಮ ಆಟಗಾರರನ್ನು ಪ್ರೋತ್ಸಾಹಿಸಬೇಕು. ನಾನೀಗ ತೆರಳುತ್ತಿದ್ದೇನೆ. ಮುಂದಿನ ತಿಂಗಳು 'ಮನ್ ಕಿ ಬಾತ್' ನಲ್ಲಿ ಹೊಸ ವಿಷಯಗಳೊಂದಿಗೆ ನಾವು ಮತ್ತೆ ಭೇಟಿಯಾಗೋಣ.
ಧನ್ಯವಾದಗಳು,
ನಮಸ್ಕಾರ!
A lot of suggestions received for this month's #MannKiBaat are about the cheetahs. People from across the country have written to the PM about it. pic.twitter.com/wH4TLi2bGX
— PMO India (@PMOIndia) September 25, 2022
India is paying homage to Pt. Deendayal Upadhyaya today. He was a profound thinker and a great son of the country. #MannKiBaat pic.twitter.com/lLm6Fo4C5K
— PMO India (@PMOIndia) September 25, 2022
As a tribute to the great freedom fighter, it has been decided that the Chandigarh airport will now be named after Shaheed Bhagat Singh. #MannKiBaat pic.twitter.com/v3gk0pcIhw
— PMO India (@PMOIndia) September 25, 2022
For years, there were no clear standards for Sign Language.
— PMO India (@PMOIndia) September 25, 2022
To overcome these difficulties, Indian Sign Language Research and Training Center was established in 2015.
Since then numerous efforts have been taken to spread awareness about Indian Sign Language. #MannKiBaat pic.twitter.com/mxagfbZLkg
During #MannKiBaat, PM @narendramodi enumerates about 'Hemkosh', which is one of the oldest dictionaries of Assamese language. pic.twitter.com/CUHBde5SPP
— PMO India (@PMOIndia) September 25, 2022
PM @narendramodi recollects a special meeting with young Anvi, who suffers from down syndrome and how Yoga brought about a positive difference in her life. #MannKiBaat pic.twitter.com/CrsqxSKj86
— PMO India (@PMOIndia) September 25, 2022
The world has accepted that Yoga is very effective for physical and mental wellness. #MannKiBaat pic.twitter.com/Y67rT3E2QZ
— PMO India (@PMOIndia) September 25, 2022
Climate change is a major threat to marine ecosystems.
— PMO India (@PMOIndia) September 25, 2022
On the other hand, the litter on our beaches is disturbing.
It becomes our responsibility to make serious and continuous efforts to tackle these challenges. #MannKiBaat pic.twitter.com/dSUWfuAdJO
Inspiring efforts from Bengaluru and Meerut to further cleanliness. #MannKiBaat pic.twitter.com/cyQcFyVVLT
— PMO India (@PMOIndia) September 25, 2022
On Bapu's birth anniversary, let us pledge to intensify the 'vocal for local' campaign. #MannKiBaat pic.twitter.com/RnxWQwama0
— PMO India (@PMOIndia) September 25, 2022
Let us discourage the use of polythene bags.
— PMO India (@PMOIndia) September 25, 2022
The trend of jute, cotton, banana fibre and traditional bags is on the rise. It also helps protect the environment. #MannKiBaat pic.twitter.com/CrUq7e8kxF
With public participation, India will eradicate TB by the year 2025. pic.twitter.com/FyYeDdmu46
— PMO India (@PMOIndia) September 25, 2022
A praiseworthy effort by medical college students in Daman and Diu. #MannKiBaat pic.twitter.com/qKEJ0L9EEB
— PMO India (@PMOIndia) September 25, 2022
2023 is the 'International Millet Year'.
— PMO India (@PMOIndia) September 25, 2022
People all over the world are curious about benefits of millets.
Can we prepare an e-book or public encyclopedia based on millets? #MannKiBaat pic.twitter.com/y22mlZInRu