#MannKiBaat: PM Modi shares an interesting conversation he had with Lata Mangeshkar Ji ahead of her birthday
Not only 'delivery in', think about 'delivery out' also. Share your joy with those in need: PM #MannKiBaat
On this Diwali, let us organise public programmes to honour our daughters, let us celebrate their achievements: PM Modi #MannKiBaat #BharatKiLaxmi
#MannKiBaat: e-cigarettes became a fashion statement, banned to protect youth from it's ill effects, says PM
It is a matter of great joy for India that the Pope will declare Sister Mariam Thresia a saint on October 13: PM during #MannKiBaat
Let us shun single-use plastic as a tribute to Mahatma Gandhi: PM Modi during #MannKiBaat

ನನ್ನ ಪ್ರೀತಿಯ ದೇಶಬಾಂಧವರೇ, ನಮಸ್ಕಾರ. ಸ್ನೇಹಿತರೇ, ಇಂದು ನಾನು ಮನ್ ಕಿ ಬಾತ್ ನಲ್ಲಿ ದೇಶದ ಓರ್ವ ಮಹಾನ್ ವ್ಯಕ್ತಿತ್ವದ ಬಗ್ಗೆ ಮಾತನಾಡುತ್ತೇನೆ. ಭಾರತೀಯರಾದ ನಮ್ಮೆಲ್ಲರ ಮನದಲ್ಲಿ ಆ ವ್ಯಕ್ತಿಯ ಬಗ್ಗೆ ಬಹಳ ಗೌರವವಿದೆ, ಬಹಳ ಅಭಿಮಾನವಿದೆ. ಬಹುಶಃ ಆ ವ್ಯಕ್ತಿಯ ಬಗ್ಗೆ ಆದರಾಭಿಮಾನ, ಪ್ರೀತಿ ಗೌರವ ಇರದ ಯಾವುದೇ ನಾಗರೀಕ. . .  ಭಾರತದಲ್ಲಿ ಇಲ್ಲ. ಅವರು ವಯಸ್ಸಿನಲ್ಲಿ ನಮ್ಮೆಲ್ಲರಗಿಂತ ಬಹಳ ಹಿರಿಯರು, ದೇಶದ ವಿವಿಧ ಹಂತಗಳಿಗೆ, ವಿಭಿನ್ನ ಸಮಯಗಳಿಗೆ ಅವರು ಸಾಕ್ಷಿಯಾಗಿದ್ದಾರೆ. ನಾವು ಅವರನ್ನು ದೀದಿ ಎಂದು ಕರೆಯುತ್ತೇವೆ. – ಲತಾ ದೀದಿ.

ಈ ತಿಂಗಳ 28 ನೇ ತಾರೀಖಿನಂದು ಅವರು 90ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳುವುದಕ್ಕೆ ಮುನ್ನ ದೀದಿಯೊಂದಿಗೆ ದೂರವಾಣಿಯಲ್ಲಿ ಮತನಾಡುವ ಸೌಭಾಗ್ಯ ನನಗೆ ದೊರೆತಿತ್ತು. ಈ ಸಂಭಾಷಣೆ ಕಿರಿಯ ಸೋದರನೊಬ್ಬ ತನ್ನ ಅಕ್ಕನೊಂದಿಗೆ ಪ್ರೀತಿ ವಾತ್ಸಲ್ಯದಿಂದ ಮಾತನಾಡುವ ರೀತಿಯಲ್ಲಿತ್ತು. ಈ ರೀತಿಯ ವೈಯಕ್ತಿಕ ಸಂಭಾಷಣೆಯ ಬಗ್ಗೆ ನಾನು ಯಾವತ್ತೂ ಮಾತನಾಡುವುದಿಲ್ಲ ಆದರೆ, ಇಂದು ನೀವು ಕೂಡಾ ಲತಾ ದೀದಿಯ ಮಾತುಗಳನ್ನು ಕೇಳಬೇಕೆಂದು, ಆ ಸಂಭಾಷಣೆಯನ್ನು ಆಲಿಸಬೇಕೆಂದು ನಾನು ಬಯಸುತ್ತೇನೆ. ದೇಶಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಅರಿಯಲು ಲತಾ ದೀದಿ ಈ ವಯಸ್ಸಿನಲ್ಲಿ ಕೂಡಾ ಎಷ್ಟೊಂದು ಉತ್ಸುಕತೆ, ಕಾತುರ  ಹೊಂದಿದ್ದಾರೆ, ಭಾರತದ ಪ್ರಗತಿಯಲ್ಲಿ, ಬದಲಾಗುತ್ತಿರುವ ಭಾರತದಲ್ಲಿ, ಉತ್ತುಂಗಕ್ಕೇರುತ್ತಿರುವ ಭಾರತದಲ್ಲಿ ಜೀವನದ ಸಂತೋಷ ಕಾಣುತ್ತಿದ್ದಾರೆ ಎನ್ನುವುದನ್ನು ಕೇಳಿಸಿಕೊಳ್ಳಿ.

 

ಮೋದಿ ಜೀ – ಲತಾ ದೀದಿ , ನಮಸ್ಕಾರ. ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ.

 

ಲತಾ ಜೀ – ನಮಸ್ಕಾರ

 

ಮೋದಿ ಜೀ – ನಾನು ಫೋನ್ ಮಾಡಿದ ಕಾರಣ ಏನೆಂದರೆ, ಈ ವರ್ಷ ನಿಮ್ಮ ಜನ್ಮದಿನದಂದು….

 

ಲತಾ ಜೀ – ಹೇಳಿ ಹೇಳಿ

 

ಮೋದಿ ಜೀ- ನಾನು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದೇನೆ.

 

ಲತಾ ಜೀ – ಹೌದಾ. ಒಳ್ಳೆಯದು.

 

ಮೋದಿ ಜೀ – ಹೊರಡುವುದಕ್ಕೆ ಮುನ್ನವೇ ನಾನು ನಿಮಗೆ…..

 

ಲತಾ ಜೀ – ಹೇಳಿ ಹೇಳಿ

 

ಮೋದಿ ಜೀ – ಜನ್ಮದಿನದ ಹಾರ್ದಿಕ ಶುಭಾಶಯಗಳನ್ನು ಮತ್ತು ಅಭಿನಂದನೆಗಳನ್ನು ಮುಂಚಿತವಾಗಿಯೇ ತಿಳಿಸಬೇಕೆಂದು ಯೋಚಿಸಿದೆ. ಉತ್ತಮ ಆರೋಗ್ಯ ನಿಮ್ಮದಾಗಿರಲಿ, ನಿಮ್ಮ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎನ್ನುವುದೇ ನನ್ನ ಪ್ರಾರ್ಥನೆ. ನಿಮಗೆ ವಂದನೆಗಳನ್ನು ಅರ್ಪಿಸಲು ನಾನು ಅಮೆರಿಕಾಗೆ ತೆರಳುವುದಕ್ಕೆ ಮುನ್ನವೇ ಕರೆ ಮಾಡಿದ್ದೇನೆ.

 

ಲತಾ ಜೀ – ನಿಮ್ಮ ಫೋನ್ ಬರುತ್ತದೆ ಎಂದು ತಿಳಿದೇ ನನಗೆ ಬಹಳ ಆನಂದವಾಗಿತ್ತು. ನೀವು ಯಾವಾಗ ಹಿಂದಿರುಗಿ ಬರುತ್ತೀರಿ

 

ಮೋದಿ ಜೀ – ನಾನು 28ರ ತಡರಾತ್ರಿ ಮತ್ತು 29 ಬೆಳಗಿನಜಾವ ಬರುತ್ತೇನೆ ಮತ್ತು ಆ ವೇಳೆಗೆ ನಿಮ್ಮ ಜನ್ಮದಿನ ಆಚರಿಸಿ ಆಗಿರುತ್ತದೆ

 

ಲತಾ ಜೀ- ಸರಿ ಸರಿ. ಜನ್ಮದಿನ ಏನು ಆಚರಿಸುವುದು, ಮನೆಯಲ್ಲೇ ಎಲ್ಲರೂ…..

 

ಮೋದಿ ಜೀ – ದೀದಿ ನೋಡಿ ನನಗೆ……..

 

ಲತಾ ಜೀ – ನಿಮ್ಮ ಆಶೀರ್ವಾದ ನನಗೆ ದೊರೆತರೆ…..

 

ಮೋದಿ ಜೀ – ಅರೇ, ನಾವು ನಿಮ್ಮ ಆಶೀರ್ವಾದ ಕೋರುತ್ತೇವೆ, ನೀವು ನಮಗಿಂತ ಹಿರಿಯರು.

 

ಲತಾ ಜೀ – ವಯಸ್ಸಿನಲ್ಲಿ ಹಿರಿಯರು ಬಹಳಷ್ಟು ಜನ ಇರುತ್ತಾರೆ, ಆದರೆ ಕೆಲಸದಿಂದ ಯಾರು ಹಿರಿಯರೆನಿಸುತ್ತಾರೋ ಅವರಿಂದ ಆಶೀರ್ವಾದ ದೊರೆಯುವುದು ಬಹಳ ದೊಡ್ಡ ಸಂಗತಿ.

 

ಮೋದಿ ಜೀ – ದೀದಿ ನೀವು ವಯಸ್ಸಿನಲ್ಲೂ ಹಿರಿಯರು, ಕೆಲಸದಲ್ಲೂ ಹಿರಿಯರು, ಮತ್ತು ನೀವು ಸಾಧಿಸಿರುವ ಈ ಸಿದ್ಧಿ, ನಿಮ್ಮ ಸಾಧನೆ ಮತ್ತು ತಪಸ್ಸಿನಿಂದ ಪಡೆದಿರುವುದು.

 

ಲತಾ ಜೀ – ಇದು ನನ್ನ ತಾಯಿ – ತಂದೆಯರ ಆಶೀರ್ವಾದ, ಮತ್ತು ಕೇಳುಗರ ಆಶೀರ್ವಾದ ಎಂದು ನಾನು ಭಾವಿಸುತ್ತೇನೆ. ನಾನು ಏನೂ ಅಲ್ಲ.

 

ಮೋದಿ ಜೀ – ಇದು ನಿಮ್ಮ ವಿನಯವಾಗಿದೆ. ಜೀವನದಲ್ಲಿ ಇಷ್ಟೊಂದು ಸಾಧಿಸಿದ ನಂತರವೂ ನಿಮ್ಮ ತಾಯಿ ತಂದೆ ನೀಡಿರುವ ಸಂಸ್ಕಾರಕ್ಕೆ ಮತ್ತು ವಿನಯಕ್ಕೆ ಪ್ರಾಧಾನ್ಯತೆ ನೀಡುವ ನಿಮ್ಮ ನಮ್ರತೆ ನಮ್ಮ ಹೊಸ ಪೀಳಿಗೆಗೆ ಅತಿ ದೊಡ್ಡ ಶಿಕ್ಷಣವಾಗಿದೆ, ನಮಗೆ ಅತಿ ದೊಡ್ಡ ಪ್ರೇರಣೆಯಾಗಿದೆ.

 

ಲತಾ ಜೀ – ಹೇಳಿ

 

ಮೋದಿ ಜೀ – ನಿಮ್ಮ ತಾಯಿ ಗುಜರಾತಿನವರೆಂದು ನೀವು ಹೆಮ್ಮೆಯಿಂದ ಹೇಳುವಾಗ ನನಗೆ ಬಹಳ ಆನಂದವಾಗುತ್ತದೆ.

 

ಲತಾ ಜೀ – ಹೇಳಿ

 

ಮೋದಿ ಜೀ – ನಾನು ನಿಮ್ಮ ಬಳಿಗೆ ಬಂದಾಗಲೆಲ್ಲಾ…..

 

ಲತಾ ಜೀ – ಹೇಳಿ

 

ಮೋದಿ ಜೀ – ನೀವು ನನಗೆ ಯಾವುದಾದರೊಂದು ಗುಜರಾತಿ ತಿಂಡಿ ತಿನ್ನಿಸಿದ್ದೀರಿ

 

ಲತಾ ಜೀ –ತಾವು ಏನೆಂದು ತಮಗೇ ಗೊತ್ತಿಲ್ಲ. ನೀವು ಬಂದ ನಂತರ ಭಾರತದ ಚಿತ್ರಣವೇ ಬದಲಾಗುತ್ತಿದೆ ಎನ್ನುವುದು ನನಗೆ ಗೊತ್ತು ಆದ್ದರಿಂದಲೇ ನನಗೆ ಬಹಳ ಸಂತೋಷವಾಗುತ್ತದೆ. ಖುಷಿ ಎನಿಸುತ್ತದೆ.

 

ಮೋದಿ ಜೀ –ಹಾಂ ದೀದಿ. ನಿಮ್ಮ ಆಶೀರ್ವಾದ ಸದಾ ಇರಲಿ, ಸಂಪೂರ್ಣ ದೇಶಕ್ಕೆ ನಿಮ್ಮ ಆಶೀರ್ವಾದವಿರಲಿ, ನಮ್ಮಂತಹವರು ಏನಾದರೊಂದು ಒಳ್ಳೆಯ ಕೆಲಸ ಮಾಡುತ್ತಿರುವಂತಾಗಲಿ, ನೀವು ನನಗೆ ಯಾವಾಗಲೂ ಪ್ರೇರಣೆ ನೀಡಿದ್ದೀರಿ. ನಿಮ್ಮ ಪತ್ರಗಳೂ ನನಗೆ ತಲುಪುತ್ತಿರುತ್ತವೆ. ಹಾಗೇ ಆಗಿಂದಾಗ್ಗೆ ಉಡುಗೊರೆಗಳೂ ನಿಮ್ಮಿಂದ ನನಗೆ ದೊರೆಯುತ್ತಿರುತ್ತವೆ.  ಆಗೆಲ್ಲಾ ನಮ್ಮವರೆನ್ನುವ… ಕುಟುಂಬದ ಬಾಂಧವ್ಯದ ವಿಶೇಷ ಆನಂದ ನನಗಾಗುತ್ತದೆ.

 

ಲತಾ ಜೀ – ಹೇಳಿ ಹೇಳಿ. ಇಲ್ಲ, ನಾನು ನಿಮಗೆ ಹೆಚ್ಚು ತೊಂದರೆ ಕೊಡಲು ಬಯಸುವುದಿಲ್ಲ, ಏಕೆಂದರೆ ನೀವು ಎಷ್ಟು ಬ್ಯುಸಿ ಎಂದು, ನಿಮಗೆ ಎಷ್ಟು ಕೆಲಸ ಕಾರ್ಯಗಳಿರುತ್ತವೆ, ಏನೆಲ್ಲಾ ಯೋಚಿಸಬೇಕಾಗುತ್ತದೆ ಎಂದು ನಾನು ನೋಡಿದ್ದೇನೆ, ತಿಳಿದುಕೊಂಡಿದ್ದೇನೆ. ನೀವು ನಿಮ್ಮ ತಾಯಿಯವರ ಬಳಿ ಹೋಗಿ ಅವರ ಪಾದಸ್ಪರ್ಶ ಮಾಡಿ ಬಂದಿದ್ದನ್ನು ನೋಡಿದಾಗ, ನಾನು ಕೂಡಾ ಒಬ್ಬರನ್ನು ಅವರ ಬಳಿ ಕಳಿಸಿದೆ ಮತ್ತು ಅವರ ಆಶೀರ್ವಾದ ಪಡೆದುಕೊಂಡೆ.

 

 ಮೋದಿ ಜೀ – ಹೌದು. ನಮ್ಮ ತಾಯಿಗೆ ಅದು ನೆನಪಿತ್ತು ಮತ್ತು ಅವರು ಆ ವಿಷಯ ನನಗೆ ಹೇಳಿದರು.

 

ಲತಾ ಜೀ – ಹೌದಾ

 

ಮೋದಿ ಜೀ – ಹೌದು

 

ಲತಾ ಜೀ – ಅವರು ನನಗೆ ಕರೆ ಮಾಡಿ ಆಶೀರ್ವಾದ ನೀಡಿದಾಗ ನನಗೆ ತುಂಬಾ ತುಂಬಾ ಸಂತೋಷವಾಯಿತು.

 

ಮೋದಿ ಜೀ – ನಿಮ್ಮ ಈ ಪ್ರೀತಿಯಿಂದಾಗಿ ನನ್ನ ತಾಯಿ ಬಹಳ ಸಂತೋಷಗೊಂಡಿದ್ದರು.

 

ಲತಾ ಜೀ- ಸರಿ ಸರಿ

 

ಮೋದಿ ಜೀ – ನೀವು ಯಾವಾಗಲೂ ನನ್ನ ಬಗ್ಗೆ ಯೋಚಿಸುತ್ತಿರುತ್ತೀರಿ ಅದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ. ನಾನು ಮತ್ತೊಮ್ಮೆ ನಿಮಗೆ ಜನ್ಮದಿನದ ಶುಭಾಶಯ ಕೋರುತ್ತಿದ್ದೇನೆ.

 

ಲತಾ ಜೀ – ಸರಿ

 

ಮೋದಿ ಜೀ –ಕಳೆದ ಬಾರಿ ಮುಂಬಯಿಗೆ ಬಂದಿದ್ದಾಗ ನಿಮ್ಮನ್ನು ಭೇಟಿಯಾಗಲು ಖಂಡಿತಾ ಬರಬೇಕೆಂದುಕೊಂಡಿದ್ದೆ

 

ಲತಾ ಜೀ – ಸರಿ ಸರಿ ಖಂಡಿತಾ

 

ಮೋದಿ ಜೀ – ಆದರೆ ಸಮಯದ ಅಭಾವದಿಂದಾಗಿ ಬರಲು ಸಾಧ್ಯವಾಗಲಿಲ್ಲ.

 

ಲತಾ ಜೀ – ಸರಿ

 

ಮೋದಿ ಜೀ –ಆದರೆ ನಾನು ಶೀಘ್ರದಲ್ಲೇ ಬರುತ್ತೇನೆ

 

ಲತಾ ಜೀ – ಸರಿ

 

ಮೋದಿ ಜೀ – ಮನೆಗೆ ಬಂದು ಕೆಲವು ಗುಜರಾತಿ ತಿನಿಸುಗಳನ್ನು ನಿಮ್ಮ ಕೈಯಿಂದಲೇ ತಿನ್ನುತ್ತೇನೆ

 

ಲತಾ ಜೀ – ಖಂಡಿತಾ ಖಂಡಿತಾ. ಇದು ನನ್ನ ಸೌಭಾಗ್ಯ

 

ಮೋದಿ ಜೀ – ವಂದನೆ ದೀದಿ

 

ಲತಾ ಜೀ – ವಂದನೆ

 

ಮೋದಿ ಜೀ – ನಿಮಗೆ ಶುಭ ಹಾರೈಕೆಗಳು

 

ಲತಾ ಜೀ – ನಿಮಗೆ ವಂದನೆಗಳು

 

ಮೋದಿ ಜೀ- ವಂದನೆ

 

ನನ್ನ ಪ್ರೀತಿಯ ದೇಶಬಾಂಧವರೇ, ನವರಾತ್ರಿಯ ಜೊತೆಜೊತೆಯಲ್ಲೇ, ಇಂದಿನಿಂದ ಹಬ್ಬಗಳ ವಾತಾವರಣವು ಮತ್ತೊಮ್ಮೆ ಹೊಸ ಭರವಸೆ, ಹೊಸ ಶಕ್ತಿ, ಹೊಸ ಉತ್ಸಾಹ, ಹೊಸ ಸಂಕಲ್ಪ ತುಂಬುತ್ತದೆ. ಹಬ್ಬಗಳಋತುವಲ್ಲವೇ …. ಮುಂದಿನ ಹಲವು ವಾರಗಳ ಕಾಲ ದೇಶಾದ್ಯಂತ ಹಬ್ಬದ ಶೋಭೆ ತುಂಬಿರುತ್ತದೆ. ನಾವೆಲ್ಲರೂ ನವರಾತ್ರಿ ಮಹೋತ್ಸವ, ಗರ್ಬಾ, ದುರ್ಗಾ ಪೂಜೆ, ದಸರಾ, ದೀಪಾವಳಿ, ಭೈಯ್ಯಾ ದೂಜ್, ಛಟ್ ಪೂಜಾ ಹೀಗೇ ಅನೇಕ ಹಬ್ಬಗಳನ್ನು ಆಚರಿಸೋಣ. ಮುಂಬರುವ ಹಬ್ಬಗಳಿಗಾಗಿ ನಿಮ್ಮೆಲ್ಲರಿಗೂ ಅನೇಕಾನೇಕ ಶುಭ ಹಾರೈಕೆಗಳು. ಹಬ್ಬಗಳಲ್ಲಿ ಕುಟುಂಬದವರೆಲ್ಲರೂ ಒಟ್ಟಿಗೆ ಸೇರುತ್ತಾರೆ. ಮನೆಗಳಲ್ಲಿ ಸಂತೋಷ ತುಂಬಿರುತ್ತದೆ, ಆದರೆ, ನಮ್ಮ ಸುತ್ತಲೂ ಈ ಹಬ್ಬಗಳ ಸಂತೋಷದಿಂದ ವಂಚಿತರಾದ ಅನೇಕ ಜನರಿದ್ದಾರೆ ಎನ್ನುವುದನ್ನು ನೀವು ಗಮನಿಸಿರಬಹುದು. ಆದ್ದರಿಂದಲೇ ಹೇಳುತ್ತಾರೆ ದೀಪದ ಕೆಳಗೇ ಕತ್ತಲು ಎಂದು….ಬಹುಶಃ ಈ ಗಾದೆ ಕೇವಲ ಮಾತು ಮಾತ್ರವಲ್ಲ, ನಮಗೆಲ್ಲರಿಗೂ ಆದೇಶ, ದರ್ಶನ ಮತ್ತು ಪ್ರೇರಣೆಯಾಗಿದೆ. ಯೋಚಿಸಿ ನೋಡಿ, ಒಂದೆಡೆ ಕೆಲವು ಮನೆಗಳಲ್ಲಿ ಬೆಳಕು ಝಗಮಗಿಸುತ್ತಿದ್ದರೆ, ಮತ್ತೊಂದೆಡೆ ಸುತ್ತ ಮುತ್ತಲಿನ ಕೆಲವು ಮನೆಗಳಲ್ಲಿ ಕತ್ತಲು ಹರಡಿರುತ್ತದೆ. ಕೆಲವು ಮನೆಗಳಲ್ಲಿ ಸಿಹಿ ತಿಂಡಿ ಕೆಟ್ಟು ಹೋಗುತ್ತಿದ್ದರೆ, ಇನ್ನು ಕೆಲವು ಮನೆಗಳಲ್ಲಿ ಮಕ್ಕಳು ಸಿಹಿತಿಂಡಿಗಾಗಿ ಹಂಬಲಿಸುತ್ತಿರುತ್ತಾರೆ. ಕೆಲವು ಅಲಮಾರುಗಳಲ್ಲಿ ಬಟ್ಟೆ ಇಡಲು ಸ್ಥಳವೇ ಇರುವುದಿಲ್ಲ, ಕೆಲವು ಮನೆಗಳಲ್ಲಿ ಮೈ ಮುಚ್ಚಿಕೊಳ್ಳುವುದಕ್ಕೆ ಬಟ್ಟೆಗಾಗಿ ಪರದಾಡುತ್ತಾರೆ. ಇದನ್ನು ತಾನೇ ದೀಪದ ಕೆಳಗೆ ಕತ್ತಲೆ ಎನ್ನುವುದು?… ಇದೇ ದೀಪದ ಕೆಳಗಿನ ಕತ್ತಲೆ. ಈ ಕತ್ತಲೆ ದೂರವಾದಾಗ, ಕಡಿಮೆಯಾಗಿ – ಬೆಳಕು ಹರಡಿದಾಗಲೇ ಈ ಹಬ್ಬಗಳ ನಿಜವಾದ ಸಂತೋಷ. ಅಭಾವ ಇರುವಲ್ಲಿ ಕೂಡಾ ನಾವು ಸಂತೋಷವನ್ನು ಹಂಚಿಕೊಳ್ಳಬೇಕು, ಇದು ನಮ್ಮ ಸ್ವಭಾವವಾಗಬೇಕು. ನಮ್ಮ ಮನೆಗೆ ಸಿಹಿತಿಂಡಿಗಳು, ಬಟ್ಟೆಗಳು, ಉಡುಗೊರೆಗಳು ಬಂದಾಗ, ಅವುಗಳನ್ನು ಕೊಡುವ ಬಗ್ಗೆಯೂ ಒಂದು ಕ್ಷಣ ಯೋಚಿಸಿ. ಕನಿಷ್ಠ ಪಕ್ಷ ನಮ್ಮ ಮನೆಯಲ್ಲಿ ಹೆಚ್ಚಾಗಿರುವುದನ್ನು, ನಾವು ಉಪಯೋಗಿಸದೇ ಇರುವಂತಹ ವಸ್ತುಗಳನ್ನಾದರೂ ಖಂಡಿತಾ ಕೊಟ್ಟುಬಿಡಿ. ಹಲವು ನಗರಗಳಲ್ಲಿ ಅನೇಕ ಎನ್ ಜಿ ಓಗಳು, ಯುವ ಮಿತ್ರರ ಸ್ಟಾರ್ಟ್ ಅಪ್ ಗಳು ಇಂತಹ ಕೆಲಸ ಮಾಡುತ್ತವೆ. ಅವು ಜನರ ಮನೆಗಳಿಂದ, ಬಟ್ಟೆಗಳು, ಸಿಹಿತಿಂಡಿಗಳು, ಊಟ ಎಲ್ಲವನ್ನೂ ಸಂಗ್ರಹಿಸಿ, ಅಗತ್ಯ ಇರುವವರನ್ನು ಹುಡುಕಿ ಅವರುಗಳಿಗೆ ತಲುಪಿಸುತ್ತವೆ….ತಮ್ಮಷ್ಟಕ್ಕೆ ತಾವು ಕೆಲಸ ನಿರ್ವಹಿಸುತ್ತವೆ. ಈ ಸಲ, ಈ ಹಬ್ಬದ ಋತುವಿನಲ್ಲಿ ಸಂಪೂರ್ಣ ಅರಿವು ಮತ್ತು ಸಂಕಲ್ಪದೊಂದಿಗೆ ನಾವು ಈ ದೀಪದ ಕೆಳಗಿನ ಕತ್ತಲೆಯನ್ನು ಹೋಗಲಾಡಿಸಬಲ್ಲೆವೆ? ಅನೇಕ ಬಡ ಪರಿವಾರಗಳ ಮೊಗದಲ್ಲಿ ಮೂಡುವ ಮುಗುಳ್ನಗೆ ನಿಮ್ಮ ಹಬ್ಬದ  ಸಂತೋಷವನ್ನು ದ್ವಿಗುಣಗೊಳಿಸುತ್ತದೆ. ನಿಮ್ಮ ಮುಖ ಮತ್ತಷ್ಟು ಹೊಳೆಯುತ್ತದೆ, ನಿಮ್ಮ ದೀಪ ಮತ್ತಷ್ಟು ದೇದೀಪ್ಯಮಾನವಾಗಿ ಬೆಳಗುತ್ತದೆ. ನಿಮ್ಮ ದೀಪಾವಳಿ ಮತ್ತಷ್ಟು ಉಜ್ವಲವಾಗುತ್ತದೆ.

 

ನನ್ನ ಪ್ರೀತಿಯ ಸೋದರ ಸೋದರಿಯರೇ, ದೀಪಾವಳಿಯಂದು ಸೌಭಾಗ್ಯ ಮತ್ತು ಸಮೃದ್ಧಿಯ ರೂಪದಲ್ಲಿ ಮನೆ ಮನೆಗಳಲ್ಲಿ ಲಕ್ಷ್ಮಿಯ ಆಗಮನವಾಗುತ್ತದೆ. ಸಾಂಪ್ರದಾಯಿಕ ರೀತಿಯಲ್ಲಿ ಲಕ್ಷ್ಮಿಯನ್ನು ಸ್ವಾಗತಿಸಲಾಗುತ್ತದೆ. ನಾವು ಈ ಬಾರಿ ಹೊಸದೊಂದು ರೀತಿಯಲ್ಲಿ ಲಕ್ಷ್ಮಿಯನ್ನು ಸ್ವಾಗತಿಸಬಹುದೇ? ನಮ್ಮ ಸಂಸ್ಕೃತಿಯಲ್ಲಿ ಹೆಣ್ಣು ಮಕ್ಕಳನ್ನು ಲಕ್ಷ್ಮಿಯೆಂದು ಭಾವಿಸಲಾಗುತ್ತದೆ …. ಮಗಳು ಸೌಭಾಗ್ಯ ಮತ್ತು ಸಮೃದ್ಧಿಯನ್ನು ತರುತ್ತಾಳೆ. ಈ ಬಾರಿ ನಾವು ನಮ್ಮ ಸಮಾಜದಲ್ಲಿ, ಹಳ್ಳಿಗಳಲ್ಲಿ, ನಗರಗಳಲ್ಲಿ ಹೆಣ್ಣುಮಕ್ಕಳನ್ನು ಸನ್ಮಾನಿಸುವ ಕಾರ್ಯಕ್ರಮಗಳನ್ನು ಆಯೋಜಿಸಬಹುದೇ?ಸಾರ್ವಜನಿಕ ಕಾರ್ಯಕ್ರಮಗಳನ್ನು ಏರ್ಪಡಿಸಬಹುದು. ತಮ್ಮ ಪರಿಶ್ರಮ ಮತ್ತು ಬದ್ಧತೆಯಿಂದ, ನೈಪುಣ್ಯತೆಯಿಂದ ಕುಟುಂಬದ, ಸಮಾಜದ, ದೇಶದ ಹೆಸರನ್ನು ಉಜ್ವಲಗೊಳಿಸುತ್ತಿರುವ ಅನೇಕ ಹೆಣ್ಣುಮಕ್ಕಳು ನಮ್ಮ ನಡುವೆ ಇದ್ದಾರೆ. ಈ ದೀಪಾವಳಿಯಂದು ಭಾರತದ ಈ ಲಕ್ಷ್ಮಿಯರನ್ನು ಗೌರವಿಸುವ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳಬಹುದೇ? ನಮ್ಮ ಸುತ್ತಮುತ್ತ ಅಸಾಧಾರಣ ಕೆಲಸ ಕಾರ್ಯ ಮಾಡುತ್ತಿರುವ ಅನೇಕ ಹೆಣ್ಣುಮಕ್ಕಳು, ಸೊಸೆಯಂದಿರು ಇದ್ದಾರೆ. ಕೆಲವರು ಬಡಮಕ್ಕಳಿಗೆ ಪಾಠ ಹೇಳಿಕೊಡುವ ಕೆಲಸ ಮಾಡುತ್ತಿರಬಹುದು, ಕೆಲವರು ಆರೋಗ್ಯ ಮತ್ತು ಸ್ವಚ್ಛತೆಗೆ ಸಂಬಂಧಿಸಿದಂತೆ ಜಾಗರೂಕತೆ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರಬಹುದು, ಮತ್ತೆ ಕೆಲವರು ವೈದ್ಯರಾಗಿ, ಇಂಜಿನಿಯರ್ ಗಳಾಗಿ ಸಮಾಜಕ್ಕೆ ಸೇವೆ ಸಲ್ಲಿಸುತ್ತಿರಬಹುದು. ವಕೀಲರಾಗಿ ಯಾರಿಗಾದರೂ ನ್ಯಾಯ ದೊರಕಿಸಿಕೊಡುವ ಪ್ರಯತ್ನ ಮಾಡುತ್ತಿರಬಹುದು. ನಮ್ಮ ಸಮಾಜ ಇಂತಹ ಹೆಣ್ಣುಮಕ್ಕಳನ್ನು ಗುರುತಿಸಬೇಕು, ಗೌರವಿಸಬೇಕು ಮತ್ತು ಈ ಬಗ್ಗೆ ಹೆಮ್ಮೆ ಪಡಬೇಕು. ಇವರನ್ನು ಗೌರವಿಸುವ ಕಾರ್ಯಕ್ರಮ ದೇಶಾದ್ಯಂತ ನಡೆಯಬೇಕು. ನಾವು ಮಾಡಬಹುದಾದ ಮತ್ತೊಂದು ಕೆಲಸವೆಂದರೆ, ಇಂತಹ ಹೆಣ್ಣುಮಕ್ಕಳನ್ನು ಗುರುತಿಸಿ  ಅವರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಶೇರ್ ಮಾಡಿಕೊಳ್ಳಬೇಕು. ಮತ್ತು ಇದಕ್ಕಾಗಿ hash tagbharatkilaxmiಬಳಸಿ.

 

ನಾವೆಲ್ಲರೂ ಸೇರಿ “ಸೆಲ್ಫಿ ವಿದ್ ಡಾಟರ್” ಮಹಾ ಅಭಿಯಾನ ಆರಂಭಿಸಿದ್ದೆವು. ಅದು ವಿಶ್ವಾದ್ಯಂತ ಹರಡಿಬಿಟ್ಟಿತ್ತು. ಅದೇ ರೀತಿ ಈ ಬಾರಿ “ಭಾರತ್ ಕಿ ಲಕ್ಷ್ಮಿ” ಅಭಿಯಾನವನ್ನು ನಾವು ನಡೆಸೋಣ. “ಭಾರತ್ ಕಿ ಲಕ್ಷ್ಮಿ” ಗೆ ಪ್ರೋತ್ಸಾಹ ನೀಡುವುದರ ಅರ್ಥ… ದೇಶ ಮತ್ತು ದೇಶವಾಸಿಗಳನ್ನು ಸಮೃದ್ಧಿಯ ಹಾದಿಯಲ್ಲಿ ಸದೃಢಗೊಳಿಸುವುದಾಗಿದೆ.

 

ನನ್ನ ಪ್ರೀತಿಯ ದೇಶಬಾಂಧವರೇ, ನಾನು ಮೊದಲೇ ಹೇಳಿದಂತೆ, ಮನ್ ಕಿ ಬಾತ್ ನ ಬಹಳ ದೊಡ್ಡ ಪ್ರಯೋಜನವೆಂದರೆ ನನಗೆ ಪರಿಚಯವಿರುವ ಮತ್ತು ಪರಿಚಯವಿಲ್ಲದಿರುವ ಅನೇಕರೊಂದಿಗೆ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಮಾತನಾಡುವ ಸೌಭಾಗ್ಯ ದೊರೆಯುತ್ತದೆ. ಕೆಲ ದಿನಗಳ ಹಿಂದೆ ದೂರದ ಅರುಣಾಚಲದಿಂದ ಅಲೀನಾ ತಾಯಂಗ್ ಎಂಬ ವಿದ್ಯಾರ್ಥಿನಿ ನನಗೆ ಬಹಳ ಆಸಕ್ತಿಕರ ಪತ್ರವೊಂದನ್ನು ಕಳುಹಿಸಿದ್ದರು. ಅದರಲ್ಲಿ ಹೀಗಿತ್ತು. ನಾನು ಆ ಪತ್ರವನ್ನು ನಿಮಗಾಗಿ ಓದುತ್ತೇನೆ

 

ಮಾನ್ಯ ಪ್ರಧಾನ ಮಂತ್ರಿಗಳೇ

 

ನನ್ನ ಹೆಸರು ಅಲೀನಾ ತಾಯಂಗ್. ನಾನು ಅರುಣಾಚಲ ಪ್ರದೇಶದ ರೋಯಿಂಗ್ ನಿವಾಸಿ. ಈ ಬಾರಿ ನನ್ನ ಪರೀಕ್ಷೆಯ ಫಲಿತಾಂಶ ಬಂದಾಗ, ನೀನು “ಎಕ್ಸಾಮ್ ವಾರಿಯರ್ಸ್” ಪುಸ್ತಕ ಓದಿದ್ದೀಯಾ ಎಂದು ಕೆಲವರು ನನ್ನನ್ನು ಪ್ರಶ್ನಿಸಿದರು. ನಾನು ಈ ಪುಸ್ತಕವನ್ನು ಓದಿಲ್ಲ ಎಂದು ನಾನು ಅವರಿಗೆ ಹೇಳಿದೆ. ಆದರೆ ನಾನು ಹಿಂದಿರುಗಿ ಬಂದನಂತರ ಈ ಪುಸ್ತಕವನ್ನು ನಾನು ಖರೀದಿಸಿದೆ ಮತ್ತು ಎರಡು, ಮೂರು ಬಾರಿ ಓದಿದೆ… ಇಷ್ಟವಾಯಿತು.  ನಾನು ಈ ಪುಸ್ತಕವನ್ನು ಪರೀಕ್ಷೆಗೆ ಮೊದಲೇ ಓದಿದ್ದರೆ ನನಗೆ ಬಹಳ ಹೆಚ್ಚಿನ ಪ್ರಯೋಜನ ದೊರೆಯುತ್ತಿತ್ತೆಂದು ನನಗನಿಸಿತು. ಈ ಪುಸ್ತಕದಲ್ಲಿರುವ ಅನೇಕ ಅಂಶಗಳು ನನಗೆ ಬಹಳ ಇಷ್ಟವಾದವು, ಆದರೆ ಇದರಲ್ಲಿ ವಿದ್ಯಾರ್ಥಿಗಳಿಗಾಗಿ ಅನೇಕ ಸಲಹೆ ಸೂಚನೆಗಳಿವೆಯಾದರೂ ಪಾಲಕರು ಮತ್ತು ಪೋಷಕರು ಹಾಗೂ ಶಿಕ್ಷಕರಿಗಾಗಿ ಹೆಚ್ಚಿನ ಅಂಶಗಳೇನೂ ಇದರಲ್ಲಿ ಇಲ್ಲ ಎನ್ನುವುದನ್ನು ನಾನು ಗಮನಿಸಿದೆ. ನೀವು ಪುಸ್ತಕದ ಹೊಸ ಆವೃತ್ತಿಯ ಬಗ್ಗೆ ಚಿಂತನೆ ನಡೆಸುತ್ತಿದ್ದರೆ, ಅದರಲ್ಲಿ ತಾಯಿತಂದೆಯರಿಗಾಗಿ ಹಾಗೂ ಶಿಕ್ಷಕರಿಗಾಗಿ ಕೆಲವು ಸಲಹೆಗಳನ್ನು ಮತ್ತು ಕೆಲವು ಅಂಶಗಳನ್ನು ಖಂಡಿತವಾಗಿಯೂ ಸೇರಿಸಬೇಕೆಂದು ನಾನು ಇಚ್ಛಿಸುತ್ತೇನೆ.

 

ನೋಡಿ, ದೇಶದ ಪ್ರಧಾನ ಸೇವಕರಿಗೆ ಕೆಲಸ ಹೇಳಿದರೆ ಸಾಕು ಅದು ಖಂಡಿತಾ ಆಗಿಯೇ ಬಿಡುತ್ತದೆ ಎನ್ನುವ ಭರವಸೆ ನನ್ನ  ಯುವ ಮಿತ್ರರಿಗೆ ಕೂಡಾ ಇದೆ.

 

ನನ್ನ ಪುಟ್ಟ ವಿದ್ಯಾರ್ಥಿ ಸ್ನೇಹಿತೆಯೇ, ಪತ್ರ ಬರೆದಿದ್ದಕ್ಕಾಗಿ ಮೊದಲಿಗೆ ಧನ್ಯವಾದ ಹೇಳುತ್ತಿದ್ದೇನೆ. “ಎಕ್ಸಾಮ್ ವಾರಿಯರ್ಸ್” ಎರಡು ಮೂರು ಬಾರಿ ಓದಿದ್ದಕ್ಕಾಗಿ ಧನ್ಯವಾದ. ಮತ್ತು ಓದುತ್ತಿರುವ ಸಮಯದಲ್ಲಿ ಅದರಲ್ಲಿ ಯಾವ ಅಂಶದ ಕೊರತೆಯಿದೆ ಎಂದು ನನಗೆ ತಿಳಿಯಪಡಿಸಿದ್ದಕ್ಕಾಗಿ ಧನ್ಯವಾದ. ಇದರೊಂದಿಗೆ ನನ್ನ ಈ ಪುಟ್ಟ ಸ್ನೇಹಿತೆ ನನಗೆ ಕೆಲಸವೊಂದನ್ನು ಕೂಡಾ ಒಪ್ಪಿಸಿದ್ದಾಳೆ. ಕೆಲಸವೊಂದನ್ನು ಮಾಡುವುದಕ್ಕೆ ಆದೇಶ ನೀಡಿದ್ದಾಳೆ. ನಾನು ನಿಮ್ಮ ಆದೇಶದ ಪಾಲನೆಯನ್ನು ಖಂಡಿತವಾಗಿಯೂ ಮಾಡುತ್ತೇನೆ. ನೀವು ಹೇಳಿದಂತೆ ಪುಸ್ತಕದ ಹೊಸ ಆವೃತ್ತಿಯನ್ನು ತರುವುದಕ್ಕೆ ನನಗೆ ಸಮಯ ದೊರೆತಿದ್ದೇ ಆದಲ್ಲಿ, ಅದರಲ್ಲಿ ಪಾಲಕರು, ಪೋಷಕರು ಮತ್ತು ಶಿಕ್ಷಕರಿಗಾಗಿ ಕೆಲವು ಅಂಶಗಳನ್ನು ಬರೆಯುವ ಪ್ರಯತ್ನವನ್ನು  ಮಾಡುತ್ತೇನೆ. ಆದರೆ ನೀವು ನನಗೆ ಸಹಾಯ ಮಾಡುವುದಕ್ಕೆ ಸಾಧ್ಯವೇ ಎಂದು ನಾನು ನಿಮ್ಮನ್ನು ಕೇಳ ಬಯಸುತ್ತೇನೆ. ನಿತ್ಯ ಜೀವನದಲ್ಲಿ ನಿಮಗಾಗುವ ಅನುಭವಗಳೇನು, ದೇಶದ ಎಲ್ಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು, ಶಿಕ್ಷಕರು ಮತ್ತು ತಾಯಿತಂದೆಯರು ಒತ್ತಡ ಮುಕ್ತ ಪರೀಕ್ಷೆಸಂಬಂಧಿತ ವಿಷಯಗಳು,  ನಿಮ್ಮ ಅನುಭವಗಳು, ಮತ್ತು ಸಮಸ್ಯೆಗಳಿಗೆ ಪರಿಹಾರಗಳನ್ನು ನನಗೆ ತಿಳಿಸಬೇಕೆಂದು ನಾನು ಮನವಿ ಮಾಡುತ್ತಿದ್ದೇನೆ. ನಾನು ಖಂಡಿತವಾಗಿಯೂ ಅವುಗಳನ್ನು ಅಧ್ಯಯನ ಮಾಡುತ್ತೇನೆ. ಅವುಗಳ ಕುರಿತು ಆಲೋಚಿಸುತ್ತೇನೆ, ಮತ್ತು ಅವು ನನಗೆ ಸರಿ ಎನಿಸಿದಲ್ಲಿ, ಅವುಗಳನ್ನು ನನ್ನ ಮಾತುಗಳಲ್ಲಿ, ನನ್ನದೇ ಆದ ರೀತಿಯಲ್ಲಿ ಬರೆಯುವ ಪ್ರಯತ್ನ ಖಂಡಿತಾ ಮಾಡುತ್ತೇನೆ. ಒಂದು ವೇಳೆ ನಿಮ್ಮಿಂದ ಸಲಹೆ ಸೂಚನೆಗಳು ಹೆಚ್ಚಿನ ಸಂಖ್ಯೆಯಲ್ಲಿ ಬಂದಲ್ಲಿ, ನನ್ನ ಹೊಸ ಆವೃತ್ತಿ ತರುವ ಮಾತು ಖಂಡಿತಾ ಖಚಿತವಾಗುತ್ತದೆ. ನಿಮ್ಮ ವಿಚಾರಗಳಿಗಾಗಿ ನಾನು ನಿರೀಕ್ಷಿಸುತ್ತೇನೆ. ಅರುಣಾಚಲದ ನನ್ನ ಪುಟ್ಟ ಸ್ನೇಹಿತೆ, ಅಲೀನಾ ತಾಯಂಗ್ ಗೆ ನಾನು ಮತ್ತೊಮ್ಮೆ ನನ್ನ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದೇನೆ.

 

ನನ್ನ ಪ್ರೀತಿಯ ದೇಶಬಾಂಧವರೇ, ನೀವು ದಿನಪತ್ರಿಕೆಗಳ ಮೂಲಕ, ಟಿವಿ ಮೂಲಕ ದೇಶದ ಪ್ರದಾನಮಂತ್ರಿಯವರ ಬಿಡುವಿಲ್ಲದ ಕಾರ್ಯಕ್ರಮಗಳ ಬಗ್ಗೆ ತಿಳಿದೇ ಇರುತ್ತೀರಿ ಮತ್ತು ಅದರ ಬಗ್ಗೆ ಚರ್ಚೆ ಕೂಡಾ ಮಾಡುತ್ತಿರುತ್ತೀರಿ. ಆದರೆ ನಾನು ಕೂಡಾ ನಿಮ್ಮ ಹಾಗೆಯೇ ಓರ್ವ ಸಾಧಾರಣ ಮನುಷ್ಯ ಎನ್ನುವುದು ನಿಮಗೆ ಗೊತ್ತಲ್ಲವೇ. ಒಬ್ಬ ಸಾಮಾನ್ಯ ನಾಗರಿಕನಾಗಿದ್ದೇನೆ ಆದ್ದರಿಂದಲೇ ಸಾಮಾನ್ಯ ಜೀವನದಲ್ಲಿ ಯಾವ ಯಾವ ಅಂಶಗಳು ಪ್ರಭಾವ ಉಂಟುಮಾಡುತ್ತವೆಯೇ ಅಂತಹ ಪ್ರಭಾವಗಳು ನನ್ನ ಜೀವನದಲ್ಲಿ ಮತ್ತು ನನ್ನ ಮನದ ಮೇಲೆ ಪ್ರಭಾವ ಬೀರುತ್ತವೆ ಏಕೆಂದರೆ ನಾನು ಕೂಡಾ ನಿಮ್ಮ ನಡುವಿನಿಂದಲೇ ಬಂದಿದ್ದೇನೆ. ನೋಡಿ, ಈ ಬಾರಿ “ಯುಎಸ್ ಓಪನ್” ನಲ್ಲಿ ಗೆಲುವಿನ ಬಗ್ಗೆ ಎಷ್ಟು ಚರ್ಚೆಯಾಗಿತ್ತೋ ಅಷ್ಟೇ ಚರ್ಚೆ ರನ್ನರ್ ಅಪ್ ದೇನಿಲ್ ಮೆದ್ವೆದೇವ್ಭಾಷಣದ ಬಗ್ಗೆ ಕೂಡಾ ನಡೆದಿತ್ತು. ಸೋಷಿಯಲ್ ಮೀಡಿಯಾದಲ್ಲಿ ಇದು ಬಹಳ ಹೆಚ್ಚು ನಡೆಯುತ್ತಿದ್ದುದರಿಂದ ನಾನು ಕೂಡಾ ಆ ಭಾಷಣ ಕೇಳಿದೆ ಮತ್ತು  ಮ್ಯಾಚ್ ಕೂಡಾ ನೋಡಿದೆ. 23 ವರ್ಷದ ದೇನಿಲ್ ಮೆದ್ವೆದೇವ್ ಅವರ ಸರಳತೆ, ಅವರ ಪ್ರಬುದ್ಧತೆ, ಪ್ರತಿಯೊಬ್ಬರನ್ನೂ ಪ್ರಭಾವಿತರನ್ನಾಗಿ ಮಾಡುತ್ತದೆ. ನಾನು ಖಂಡಿತವಾಗಿಯೂ ಪ್ರಭಾವಿತನಾದೆ. ಈ ಭಾಷಣದಸ್ವಲ್ಪ ಸಮಯದ ಮುಂಚೆ ಅವರು 19 ಬಾರಿ ಗ್ರ್ಯಾಂಡ್ ಸ್ಲ್ಯಾಮ್ ವಿಜೇತ ಮತ್ತು ಟೆನ್ನಿಸ್ ಲೆಜೆಂಡ್ ರಾಫಲ್ ನಡಾಲ್ ಅವರ ಎದುರು ಫೈನಲ್ ನಲ್ಲಿ ಪರಾಭವಗೊಂಡಿದ್ದರು. ಈ ಸಮಯದಲ್ಲಿ ಬೇರೆ ಯಾರಾದರೂ ಆಗಿದ್ದಲ್ಲಿ ಅವರು ಬೇಸರ ಮತ್ತು ನಿರಾಶೆ ಹೊಂದುತ್ತಿದ್ದರು, ಆದರೆ ಅವರ ಮುಖ ಬಾಡಿರಲಿಲ್ಲ, ಬದಲಾಗಿ ಅವರು ತಮ್ಮ ಮಾತಿನಿಂದ ಎಲ್ಲರ ಮುಖಗಳಲ್ಲಿ ಮಂದಹಾಸ ಮೂಡಿಸಿದರು. ಅವರ ವಿನಯ, ಸರಳತೆ, ನಿಜವಾದ ಅರ್ಥದಲ್ಲಿ, ಲೆಟರ್ ಅಂಡ್ ಸ್ಪಿರಿಟ್ ನಲ್ಲಿ ಸ್ಪೋರ್ಟ್ಸ್ ಮನ್ ಸ್ಪಿರಿಟ್ ನಮಗೆ ನೋಡಲು ದೊರೆಯಿತು. ಅದನ್ನು ನೋಡಿದ ಪ್ರತಿಯೊಬ್ಬರೂ ಮಂತ್ರಮುಗ್ಧರಾದರು. ಅಲ್ಲಿ ನೆರೆದಿದ್ದ ಪ್ರೇಕ್ಷಕರು ಅವರ ಮಾತುಗಳನ್ನು  ಆಪ್ಯಾಯತೆಯಿಂದ ಸ್ವಾಗತಿಸಿದರು. ದೇನಿಲ್ ಅವರು ಚಾಂಪಿಯನ್ ನಡಾಲ್ ಅವರನ್ನು ಕೂಡಾ ಮುಕ್ತ ಕಂಠದಿಂದ ಪ್ರಶಂಸಿಸಿದರು. ನಡಾಲ್ ಅವರು ಲಕ್ಷಾಂತರ ಯುವಕರನ್ನು ಯಾವ ರೀತಿ ಟೆನ್ನಿಸ್ ನತ್ತ ಪ್ರೇರೇಪಿಸಿದರು ಎಂದು ಕೂಡಾ ಹೇಳಿದರು. ಅಲ್ಲದೇ ಅವರೊಂದಿಗೆ ಆಟವಾಡುವುದು ಎಷ್ಟು ಕಷ್ಟಕರವಾಗಿತ್ತು ಎಂದು ಕೂಡಾ ಹೇಳಿದರು. ತೀವ್ರ ಸ್ಪರ್ಧೆಯಲ್ಲಿ ಪರಾಭವದ ನಂತರ ಕೂಡಾ ತಮ್ಮ ಪ್ರತಿಸ್ಪರ್ಧಿ ನಡಾಲ್ ಅವರನ್ನು ಪ್ರಶಂಸೆ ಮಾಡುವ ಮೂಲಕ ಸ್ಪೋರ್ಟ್ಸ್ ಮನ್ ಸ್ಪಿರಿಟ್ ನ ಜೀವಂತ ರುಜುವಾತು ನೀಡಿಬಿಟ್ಟರು. ಮತ್ತೊಂದೆಡೆ ಚಾಂಪಿಯನ್ ನಡಾಲ್ ಕೂಡಾ ದೇನಿಲ್ ಅವರ ಆಟವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಒಂದೇ ಪಂದ್ಯದಲ್ಲಿ  ಸೋತವರ ಉತ್ಸಾಹ ಮತ್ತು ಗೆದ್ದವರ ವಿನಯ ನೋಡಲು ಅದ್ಬುತವಾಗಿತ್ತು. ನೀವೇನಾದರೂ ದೇನಿಲ್ ಮೇದ್ವೆದೇವ್ ಅವರ ಭಾಷಣ ಕೇಳಿರದೇ ಇದ್ದಲ್ಲಿ, ನಾನು ನಿಮ್ಮಲ್ಲಿ ಅದರಲ್ಲೂ ವಿಶೇಷವಾಗಿ ಯುವ ಜನತೆಯಲ್ಲಿ ಈ ವಿಡಿಯೋ ಖಂಡಿತವಾಗಿಯೂ ವೀಕ್ಷಿಸಿ ಎಂದು ಹೇಳುತ್ತೇನೆ. ಇದರಲ್ಲಿ ಪ್ರತಿಯೊಂದು ವರ್ಗಕ್ಕೂ ಎಲ್ಲಾ ವಯಸ್ಸಿನವರಿಗೂ ಕಲಿತುಕೊಳ್ಳುವುದಕ್ಕೆ ಬಹಳಷ್ಟು ಇದೆ. ಸೋಲು ಗೆಲುವಿನ ಪರಿಕಲ್ಪನೆಯನ್ನು ಮೀರಿದ ಕ್ಷಣ ಇದಾಗಿತ್ತು. ಸೋಲು-ಗೆಲುವಿಗೆ ಪ್ರಾಮುಖ್ಯತೆ ಇಲ್ಲ, ಜೀವನ ಗೆದ್ದು ಬಿಡುತ್ತದೆ. ಇದನ್ನು ನಮ್ಮ ಶಾಸ್ತ್ರಗಳಲ್ಲಿ ಬಹಳ ಉತ್ತಮ ರೀತಿಯಲ್ಲಿ ಹೇಳಲಾಗಿದೆ. ನಮ್ಮ ಪೂರ್ವಜರ ಚಿಂತನೆ ನಿಜಕ್ಕೂ ಬಹಳ ಪ್ರಶಂಸನೀಯವಾದದ್ದು. ನಮ್ಮ ಶಾಸ್ತ್ರಗಳಲ್ಲಿ ಹೀಗೆಂದು ಹೇಳಲಾಗುತ್ತದೆ

 

ವಿದ್ಯಾ ವಿನಯ ಉಪೇತಾ ಹರತಿ

ನ ಚೆತಾಂಸೀ ಕಸ್ಯ ಮನುಜಸ್ಯ

ಮಣಿ ಕಾಂಚನ ಸಂಯೋಗಃ

ಜನಯತಿ ಲೋಕಸ್ಯ ಲೋಚನ ಆನಂದಮ್

 

ಅಂದರೆ, ವ್ಯಕ್ತಿಯೊಬ್ಬನಲ್ಲಿ ಯೋಗ್ಯತೆ ಹಾಗೂ ವಿನಯ ಎರಡೂ ಸಮ್ಮಿಳಿತವಾದಲ್ಲಿ, ಅವರು ಯಾರ ಮನಸ್ಸನ್ನು ಗೆಲ್ಲಲಾರರು? ವಾಸ್ತವದಲ್ಲಿ ಈ ಯುವ ಕ್ರೀಡಾಪಟು ಪ್ರಪಂಚದಾದ್ಯಂತ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ.

 

ನನ್ನ ಪ್ರಿಯ ದೇಶ ಬಾಂಧವರೇ ಅದರಲ್ಲೂ ವಿಶೇಷವಾಗಿ ನನ್ನ ಯುವ ಮಿತ್ರರೇ, ಈಗ ನಾನು ಏನು ಮಾತನಾಡಲಿದ್ದೇನೆಯೋ ಅದು ನಿಮ್ಮ ಒಳ್ಳೆಯದಕ್ಕೇ ಆಗಿದೆ. ವಾದ ವಿವಾದ ನಡೆಯುತ್ತಲೇ ಇರುತ್ತದೆ. ಪರ – ವಿರೋಧ ನಡೆಯುತ್ತಲೇ ಇರುತ್ತದೆ. ಆದರೆ ಕೆಲ ವಿಷಯಗಳು ಉಲ್ಬಣಗೊಳ್ಳುವ ಮೊದಲೇ ತಡೆದರೆ ತುಂಬಾ ಲಾಭ  ದಾಯಕವಾಗಿರುತ್ತದೆ. ಯಾವುದು ಅತಿರೇಕಕ್ಕೆ ಹೋಗುತ್ತದೋ ಅದು ಅಷ್ಟೇ ವಿಶಾಲವಾಗಿ ಪಸರಿಸುತ್ತದೆ. ನಂತರ  ಅದನ್ನು ತಡೆಯುವುದು ಬಹಳ ಕಠಿಣವಾಗುತ್ತದೆ. ಆದರೆ, ಒಂದು ವೇಳೆ ಆರಂಭದಲ್ಲೇ ನಾವು ಜಾಗೃತರಾಗಿ ಅದನ್ನು ತಡೆದರೆ ಬಹಳಷ್ಟು ಹಾನಿಯಿಂದ ಬಚಾವಾಗಬಹುದು. ಇದೇ ಭಾವದಿಂದ ಇಂದು ಯುವಕರಿಗಾಗಿ ಖಂಡಿತ ಒಂದೆರಡು ಮಾತು ಹೇಳಬೇಕೆಂದು ನನ್ನ ಮನಸ್ಸು ಹೇಳುತ್ತಿದೆ. ತಂಬಾಕುವಿನ ವ್ಯಸನ ಆರೋಗ್ಯಕ್ಕೆ ಹಾನಿಕಾರಕ ಎಂದು ನಮ್ಮೆಲ್ಲರಿಗೂ ತಿಳಿದಿದೆ ಮತ್ತು ಆ ದುಶ್ಚಟದಿಂದ ಹೊರಬರುವುದು ಬಹಳ ಕಷ್ಟದಾಯಕವಾಗುತ್ತದೆ. ತಂಬಾಕು ಸೇವನೆ ಮಾಡುವವರಿಗೆ ಕ್ಯಾನ್ಸರ್, ಮಧುಮೇಹ, ರಕ್ತದೊತ್ತಡದಂತಹ ರೋಗಗಳು ಬರುವಂತಹ ಆತಂಕವೂ ಬಹಳ ಇರುತ್ತದೆ. ಹೀಗೆಂದು ಎಲ್ಲರೂ ಹೇಳುತ್ತಾರೆ. ತಂಬಾಕುವಿನಲ್ಲಿರುವ ನಿಕೋಟಿನ್ ನಿಂದ ಮತ್ತು ಬರುತ್ತದೆ. ಬಾಲ್ಯದಲ್ಲಿ ಇದರ ಸೇವನೆ ಮಾಡುವುದರಿಂದ ಮೆದುಳಿನ ಅಭಿವೃದ್ಧಿಯ ಮೇಲೂ ಪರಿಣಾಮಗಳಾಗುತ್ತವೆ. ಆದರೆ, ಇಂದು ನಾನು ನಿಮ್ಮೊಂದಿಗೆ ಒಂದು ಹೊಸ ವಿಷಯದ ಕುರಿತು ಮಾತನಾಡಬಯಸುತ್ತೇನೆ. ಭಾರತದಲ್ಲಿ ಇತ್ತೀಚೆಗೆ E – ಸಿಗರೇಟ್ ನಿಷೇಧದ ಬಗ್ಗೆ ನಿಮಗೆ ಗೊತ್ತಿರಬಹುದು.  ಸಾಮಾನ್ಯ ಸಿಗರೇಟ್ ಗಿಂತ ಭಿನ್ನವಾದ E – ಸಿಗರೇಟ್ ಒಂದು ಬಗೆಯ ಎಲಾಕ್ಟ್ರಾನಿಕ್ ಉಪಕರಣವಾಗಿದೆ.  E – ಸಿಗರೇಟ್ ನಲ್ಲಿ ನಿಕೋಟಿನ್ ಯುಕ್ತ ದ್ರವಗಳನ್ನು ಬಿಸಿ ಮಾಡುವುದರಿಂದ ಒಂದು ರೀತಿಯ ರಾಸಾಯನಿಕ ಹೊಗೆ ಉತ್ಪತ್ತಿಯಾಗುತ್ತದೆ. ಇದರ ಮೂಲಕ ನಿಕೋಟಿನ್ ಸೇವಿಸಲಾಗುತ್ತದೆ. ಸಾಮಾನ್ಯ ಸಿಗರೇಟ್ ನಿಂದಾಗುವ ಹಾನಿಯ ಬಗ್ಗೆ ಎಲ್ಲರಿಗೂ ಚೆನ್ನಾಗಿ ಗೊತ್ತಿದೆ,  ಹಾಗೆಯೇ E – ಸಿಗರೇಟ್ ಬಗ್ಗೆಯೂ ತಪ್ಪು ಕಲ್ಪನೆಯನ್ನು ಸೃಷ್ಟಿಸಲಾಗಿದೆ. E ಸಿಗರೇಟ್ ನಿಂದ ಯಾವುದೇ ಹಾನಿಯಾಗುವುದಿಲ್ಲ ಎಂಬ ಭ್ರಮೆಯಿದೆ. ಇನ್ನುಳಿದ ಸಿಗರೇಟ್ ಗಳಂತೆ ಇದರಲ್ಲಿ ದುರ್ವಾಸನೆ ಬರದಿರಲಿ ಎಂದು ಸುಗಂಧ ದ್ರವ್ಯಗಳನ್ನೂ ಬೆರೆಸಲಾಗುತ್ತಿತ್ತು. ಮನೆಯಲ್ಲಿ ತಂದೆ ನಿರಂತರ ಸಿಗರೇಟು ಸೇದುವವರಾಗಿದ್ದರೂ ಅವರು ಮನೆಯ ಇತರ ಸದಸ್ಯರಿಗೆ ಧೂಮಪಾನ ಮಾಡದಂತೆ ತಡೆಯುತ್ತಾರೆ ಮತ್ತು ಕಟ್ಟು ನಿಟ್ಟು ವಹಿಸುತ್ತಾರೆ ಎಂಬುದನ್ನು ನಮ್ಮ ನೆರೆಹೊರೆಯಲ್ಲಿ ನಾವು ನೋಡಿದ್ದೇವೆ. ಮತ್ತು ತಮ್ಮ ಮಕ್ಕಳಿಗೆ ಬೀಡಿ ಸಿಗರೇಟ್ ನ ದುರಭ್ಯಾಸವಾಗದಂತೆ ನೋಡಿಕೊಳ್ಳುತ್ತಾರೆ. ಕುಟುಂಬದ ಯಾವುದೇ ಸದಸ್ಯರು ಧೂಮಪಾನ ಮಾಡದಿರಲಿ ಎಂಬುದೇ ಅವರ ಪ್ರಯತ್ನವಾಗಿರುತ್ತದೆ. ಧೂಮಪಾನ ಮಾಡುವುದರಿಂದ ಮತ್ತು ತಂಬಾಕಿನಿಂದ ಶರೀರಕ್ಕೆ ಬಹಳ ಹಾನಿಯಾಗುವುದೆಂದು ಅವರಿಗೆ ಗೊತ್ತು. ಸಿಗರೇಟ್ ನಿಂದಾಗುವ ಹಾನಿಯ ಕುರಿತು ಅವರಿಗೆ ಯಾವುದೇ ಭ್ರಮೆಯಿಲ್ಲ. ಅದರಿಂದ ನಷ್ಟವಾಗುತ್ತದೆ ಎಂಬುದು ಮಾರುವವರಿಗೂ, ಸೇದುವವರಿಗೂ ಮತ್ತು ನೋಡುವವರಿಗೂ ತಿಳಿದಿದೆ. ಆದರೆ E – ಸಿಗರೇಟ್ ವಿಷಯ ಬಹಳ ಭಿನ್ನವಾದದ್ದು. E – ಸಿಗರೇಟ್ ಬಗ್ಗೆ ಜನರಲ್ಲಿ ಜಾಗೃತಿಯಿಲ್ಲ. ಅವರಿಗೆ ಇದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ. ಹಾಗಾಗಿ ಕೆಲವೊಮ್ಮೆ ಕುತೂಹಲಕ್ಕಾಗಿ ಕದ್ದುಮುಚ್ಚಿ E – ಸಿಗರೇಟ್ ಮನೆಯನ್ನು ಪ್ರವೇಶಿಸುತ್ತದೆ. ಅಲ್ಲದೆ ಜಾದೂ ತೋರಿಸುತ್ತೇನೆ ಎಂದು ಮಕ್ಕಳು ಒಬ್ಬರಿಗೊಬ್ಬರು ಇದನ್ನು ತೋರಿಸುತ್ತಿರುತ್ತಾರೆ. ಕುಟುಂಬದಲ್ಲಿ ತಂದೆ ತಾಯಿಯರ ಎದುರು ಕೂಡಾ ನಿಮಗೆ ಮ್ಯಾಜಿಕ್ ತೋರಿಸುವೆ. ನೋಡಿ ನನ್ನ ಬಾಯಿಂದ ಹೊಗೆ ಬಿಡುತ್ತೇನೆ. ನೋಡಿ ನಾನು ಬೆಂಕಿ ಅಂಟಿಸದೇ, ಯಾವುದೇ ದೀಪ ಬೆಳಗದೇ ಹೊಗೆಯನ್ನು ಬಿಡುತ್ತೇನೆ ಎಂದು ಪ್ರದರ್ಶಿಸುತ್ತಾರೆ. ಮಾಯಾಜಾಲದ ಪಟ್ಟುಗಳನ್ನು ತೋರಿಸುತ್ತಿರುವಂತೆ ಕುಟುಂಬದವರೆಲ್ಲ ಚಪ್ಪಾಳೆ ತಟ್ಟುತ್ತಾರೆ. ಒಮ್ಮೆ ಮಕ್ಕಳು ಮತ್ತು ಯುವಕರು ಈ ವ್ಯಸನದ ಕರಾಳ ಮುಷ್ಟಿಯಲ್ಲಿ ಸಿಲುಕಿದರೆ ಕ್ರಮೇಣ ಅವರು ಅರಿವಿಲ್ಲದೇ ಅದರ ದಾಸರಾಗಿಬಿಡುತ್ತಾರೆ ಎಂಬುದು ತಿಳಿಯುವುದೇ ಇಲ್ಲ. ಆ ದುಶ್ಚಟಕ್ಕೆ ಬಲಿಯಾಗಿಬಿಡುತ್ತಾರೆ. ನಮ್ಮ ಯುವಶಕ್ತಿ ವಿನಾಶದ ಹಾದಿಯಲ್ಲಿ ನಡೆದುಬಿಡುತ್ತದೆ.  ತಿಳಿಯದೇ ನಡೆದುಬಿಡುತ್ತದೆ. ವಾಸ್ತವದಲ್ಲಿ E – ಸಿಗರೇಟ್ ನಲ್ಲಿ ಹಲವಾರು ಹಾನಿಕಾರಕ ರಾಸಾಯನಿಕಗಳನ್ನು ಸೇರಿಸಲಾಗುತ್ತದೆ. ಅವು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ನಮ್ಮ ಸುತ್ತಮುತ್ತ ಯಾರಾದರೂ ಧೂಮಪಾನ ಮಾಡಿದರೆ ಅದರ ದುರ್ಗಂಧದಿಂದಲೇ ನಮಗೆ ಅದರ ಅರಿವಾಗುತ್ತದೆ ಎಂದು ನಿಮಗೆಲ್ಲ ಗೊತ್ತು. ಅವರ ಜೇಬಿನಲ್ಲಿ ಸಿಗರೇಟ್ ಪ್ಯಾಕೆಟ್ ಇದೆಯೆಂಬುದು ಕೂಡಾ ದುರ್ಗಂಧದಿಂದಲೇ ತಿಳಿಯುತ್ತದೆ. ಆದರೆ E – ಸಿಗರೇಟ್ ನಲ್ಲಿ ಈ ಪ್ರಮೇಯವಿಲ್ಲ. ಇಂಥ ಪರಿಸ್ಥಿತಿಯಲ್ಲಿ ಮಕ್ಕಳು ಇಲ್ಲವೆ ಯುವಕರು ಅರಿಯದೇ ಕೆಲವೊಮ್ಮೆ ಫ್ಯಾಶನ್ ಪ್ರತೀಕವೆಂದು ಹೆಮ್ಮೆಯಿಂದ ತಮ್ಮ ಪುಸ್ತಕಗಳ ಜೊತೆಗೆ, ಕಛೇರಿಯಲ್ಲಿ, ಜೇಬಿನಲ್ಲಿ, ಕೆಲವೊಮ್ಮೆ ಕೈಯಲ್ಲಿ ಹಿಡಿದು ತಿರುಗಾಡುವುದು ಕಂಡುಬರುತ್ತಿದೆ. ಹೀಗೆ ಅವರು ಅದಕ್ಕೆ ಬಲಿಯಾಗುತ್ತಿದ್ದಾರೆ. ಯುವಜನತೆ ದೇಶದ ಭವಿಷ್ಯ. ವ್ಯಸನದ ಈ ಹೊಸ ಮಾರ್ಗ ನಮ್ಮ ಯುವ ರಾಷ್ಟ್ರವನ್ನು ನಾಶ ಮಾಡುವುದನ್ನು ತಡೆಯಲು, ಪ್ರತಿ ಕುಟುಂಬದ ಕನಸುಗಳನ್ನು ತುಳಿದುಹಾಕಬಾರದು ಎಂದು, ಮಕ್ಕಳ ಜೀವನ ಹಾಳಾಗಬಾರದೆಂದು, ಈ ರೋಗ, ಈ ದುಶ್ಚಟ ಸಮಾಜದಲ್ಲಿ ಬೇರು ಬಿಡದಿರಲಿ ಎಂದು  E – ಸಿಗರೇಟ್ ಮೇಲೆ ನಿರ್ಭಂಧ ಹೇರಲಾಗಿದೆ.    

 

ನಾನು ನಿಮ್ಮೆಲ್ಲರನ್ನು ಆಗ್ರಹಿಸುತ್ತೇನೆ. ತಂಬಾಕು ವ್ಯಸನವನ್ನು ಬಿಟ್ಟುಬಿಡಿ ಮತ್ತು E – ಸಿಗರೇಟ್  ಕುರಿತು ತಪ್ಪು ಕಲ್ಪನೆ ಬೆಳೆಸಿಕೊಳ್ಳಬೇಡಿ. ಬನ್ನಿ ನಾವೆಲ್ಲ ಸೇರಿ ಒಂದು ಆರೋಗ್ಯವಂತ ಭಾರತವನ್ನು ಕಟ್ಟೋಣ.

 

ಹಾಂ! ನಿಮಗೆ ಫಿಟ್ ಇಂಡಿಯಾ ನೆನಪಿದೆ ಅಲ್ಲವೆ? ಬೆಳಿಗ್ಗೆ ಸಂಜೆ ಕೈಕಾಲಿಗೆ ಕಸರತ್ತು ನೀಡುತ್ತಾ ಎರಡೆರಡು ಗಂಟೆ ಜಿಮ್ ಗೆ ಹೋದರೆ ಫಿಟ್ ಇಂಡಿಯಾ ನಿರ್ಮಾಣವಾಗುತ್ತದೆ ಎಂದರ್ಥವಲ್ಲ. ಫಿಟ್ ಇಂಡಿಯಾಗಾಗಿ ಈ ದುಶ್ಚಟಗಳಿಂದಲೂ ದೂರ ಇರಬೇಕಾಗುತ್ತದೆ. ನನ್ನ ಮಾತುಗಳು ನಿಮ್ಮ ಮನ ನೋಯಿಸುವುದಿಲ್ಲ, ನಿಮಗೆ ಹಿತವಾಗಿಯೇ ಇವೆ ಎಂದು ನನಗೆ ವಿಶ್ವಾಸವಿದೆ.

 

ನನ್ನ ಪ್ರಿಯ ಸೋದರ ಸೋದರಿಯರೇ, ನಮ್ಮ ಭಾರತ ದೇಶ ಸ್ವಾರ್ಥವನ್ನು ತೊರೆದು ಬೇರೆಯವರ ಹಿತಕ್ಕಾಗಿಯೇ ತಮ್ಮ ಸಂಪೂರ್ಣ ಜೀವನವನ್ನು ಮುಡಿಪಾಗಿಟ್ಟಂತಹ ಹಲವಾರು ಜನರ ಜನ್ಮಭೂಮಿಯಾಗಿದೆ ಮತ್ತು ಕರ್ಮಭೂಮಿಯೂ ಆಗಿದೆ ಎಂಬುದು ನಮ್ಮೆಲ್ಲರ ಸೌಭಾಗ್ಯ,     

 

ನಮ್ಮ ಭಾರತ ಮಾತೆ, ನಮ್ಮ ದೇಶ ಬಹುರತ್ನ ವಸುಂಧರೆ. ಬಹಳಷ್ಟು ಮಾನವ ರತ್ನಗಳು ಈ ಭೂಮಿಯ ಮೇಲೆ ಜನ್ಮತಾಳಿವೆ.  ಭಾರತ ಇಂಥ ಅಸಾಧಾರಾಣ ವ್ಯಕ್ತಿಗಳ ಜನ್ಮಭೂಮಿಯಾಗಿದೆ ಮತ್ತು ಕರ್ಮಭೂಮಿಯೂ ಆಗಿದೆ. ಅವರೆಲ್ಲ ತಮಗಾಗಿ ಅಲ್ಲದೇ ಬೇರೆಯವರಿಗಾಗಿ ಜೀವನ ಸವೆಸಿದವರು. ಇಂಥ ಮಹಾನ್ ವ್ಯಕ್ತಿತ್ವವನ್ನು ಅಕ್ಟೋಬರ್ 13 ರಂದು ವ್ಯಾಟಿಕನ್ ಸಿಟಿಯಲ್ಲಿ ಸನ್ಮಾನಿಸಲಾಗುತ್ತಿದೆ. ಮುಂಬರುವ  ಅಕ್ಟೋಬರ್ 13 ರಂದು ಪೋಪ್ ಫ್ರಾನ್ಸಿಸ್ ಅವರು ಮರಿಯಮ್ ಥ್ರೆಸಿಯಾ ಅವರನ್ನು ಸಂತರೆಂದು ಘೋಷಿಸಲಿದ್ದಾರೆ ಎಂಬುದು ಪ್ರತಿ ಭಾರತೀಯನಿಗೂ ಹೆಮ್ಮೆಯ ವಿಷಯವಾಗಿದೆ. ಸಿಸ್ಟರ್  ಮರಿಯಮ್ ಥ್ರೆಸಿಯಾ ತನ್ನ 50 ವರ್ಷಗಳ ಜೀವಿತಾವಧಿಯಲ್ಲಿ ಮಾನವ ಕುಲಕ್ಕಾಗಿ ಮಾಡಿದ ಸೇವೆ ಸಂಪೂರ್ಣ ವಿಶ್ವಕ್ಕೆ ಮಾದರಿಯಾಗಿದೆ. ಸಮಾಜ ಸೇವೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅವರಿಗೆ ಬಹಳ ಆಸಕ್ತಿಯಿತ್ತು. ಅವರು ಹಲವಾರು ಶಾಲೆಗಳು, ವಿದ್ಯಾರ್ಥಿ ನಿಲಯ, ಅನಾಥಾಲಯ ನಿರ್ಮಾಣ ಮಾಡಿದ್ದಾರೆ ಮತ್ತು ಜೀವನಪೂರ್ತಿ ಈ ದಿಕ್ಕಿನಲ್ಲೇ ಸಾಗುತ್ತಿದ್ದರು.  ಸಿಸ್ಟರ್  ಥ್ರೆಸಿಯಾ ಯಾವುದೇ ಕೆಲಸವಿರಲಿ ಅದನ್ನು ನಿಷ್ಠೆಯಿಂದ, ಶೃದ್ಧೆಯಿಂದ, ಸಂಪೂರ್ಣ ಸಮರ್ಪಣಾ ಭಾವದೊಂದಿಗೆ ಪೂರ್ಣಗೊಳಿಸಿದ್ದಾರೆ. ಅವರು  Congregation of the Sisters of the Holy Family  ಸ್ಥಾಪಿಸಿದ್ದಾರೆ. ಇಂದಿಗೂ ಅದು ಅವರ ಜೀವನದರ್ಶನ ಮತ್ತು ಗುರಿಯನ್ನು ಮುನ್ನಡೆಸಿಕೊಂಡು ಸಾಗಿದೆ. ನಾನು ಮತ್ತೊಮ್ಮೆ ಸಿಸ್ಟರ್  ಮರಿಯಮ್ ಥ್ರೆಸಿಯಾ ಅವರಿಗೆ ಶೃದ್ಧಾಂಜಲಿ ಸಮರ್ಪಿಸುತ್ತೇನೆ. ಮತ್ತು ಎಲ್ಲ ಭಾರತೀಯರಿಗೆ, ವಿಶೇಷವಾಗಿ ಕ್ರಿಶ್ಚಿಯನ್ ಸೋದರ ಸೋದರಿಯರಿಗೆ ಈ ಸಾಧನೆಗೆ ಅಭಿನಂದನೆ ಸಲ್ಲಿಸುತ್ತೇನೆ.   

 

ನನ್ನ ಪ್ರಿಯ ದೇಶ ಬಾಂಧವರೇ, ಇಂದು ನಾವು ಗಾಂಧೀ – 150 ಆಚರಿಸುತ್ತಿರುವ ಸಂದರ್ಭದಲ್ಲಿ 130 ಕೋಟಿ ದೇಶಬಾಂಧವರು Single Use Plastic  ನಿಂದ ಮುಕ್ತರಾಗುವ ಪಣ ತೊಟ್ಟಿರುವುದು ಕೇವಲ ಭಾರತ ದೇಶಕ್ಕಲ್ಲ ಸಂಪೂರ್ಣ ವಿಶ್ವಕ್ಕೆ ಹೆಮ್ಮೆಯ ವಿಷಯವಾಗಿದೆ. ಪರಿಸರ ಸಂರಕ್ಷಣೆಯಲ್ಲಿ ಭಾರತ ಸಂಪೂರ್ಣ ವಿಶ್ವದಲ್ಲೇ ಯಾವ ರೀತಿ ನಾಯಕತ್ವವಹಿಸಿದೆ ಎಂಬುದನ್ನು ನೋಡಿ ಎಲ್ಲ ದೇಶಗಳ ದೃಷ್ಟಿ ಭಾರತದ ಮೇಲೆ ನೆಟ್ಟಿದೆ.  ನೀವೆಲ್ಲರೂ ಅಕ್ಟೋಬರ್ 2 ರಂದು ಒಮ್ಮೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ನಿಂದ ಮುಕ್ತಿಗಾಗಿ ನಡೆಯಲಿರುವ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದೀರಿ ಎಂಬ ವಿಶ್ವಾಸ ನನಗಿದೆ. ಅಲ್ಲಲ್ಲಿ ಜನರು ತಮ್ಮದೇ ರೀತಿಯಲ್ಲಿ ಈ ಆಂದೋಲನಕ್ಕೆ ಕೊಡುಗೆ ನೀಡುತ್ತಿದ್ದಾರೆ. ಆದರೆ ನಮ್ಮ ದೇಶದ ಯುವಕನೊಬ್ಬ ಬಹಳ ವಿಶಿಷ್ಟ ರೀತಿಯಲ್ಲಿ ಒಂದು ಬಹುದೊಡ್ಡ ಪ್ರಚಾರಾಂದೋಲನ ಆರಂಭಿಸಿದ್ದಾನೆ. ಅವರ ಕೆಲಸದತ್ತ ನನ್ನ ಗಮನ ಹರಿದಾಗ ಅವರಿಗೆ ದೂರವಾಣಿ ಕರೆ ಮಾಡಿ ಅವರ ಕೆಲಸದ ಬಗ್ಗೆ ತಿಳಿಯುವ ಪ್ರಯತ್ನ ಮಾಡಿದೆ. ಅವರ ಈ ಮಾತುಗಳು ದೇಶದ ಇತರರಿಗೂ ಉಪಯುಕ್ತವಾಗಬಹುದು. ಶ್ರೀಯುತ ರಿಪುದಮನ್ ಬೆಲ್ವಿಯವರು ಒಂದು ವಿನೂತನ ಪ್ರಯತ್ನ ಮಾಡುತ್ತಿದ್ದಾರೆ. ಅವರು Plogging ಮಾಡುತ್ತಾರೆ. ಮೊದಲ ಬಾರಿಗೆ ನಾನು Plogging ಶಬ್ದ ಕೇಳಿದಾಗ ನನಗೂ ಹೊಸದೆನಿಸಿತು. ವಿದೇಶಗಳಲ್ಲಿ ಸ್ವಲ್ಪಮಟ್ಟಿಗೆ ಈ ಪದದ ಬಳಕೆಯಿದೆ. ಆದರೆ ಭಾರತದಲ್ಲಿ ರಿಪುದಮನ್ ಬೆಲ್ವಿಯವರು ಇದರ ಪ್ರಚಾರವನ್ನು ಬಹಳಷ್ಟು ಮಾಡಿದ್ದಾರೆ. ಬನ್ನಿ ಅವರೊಂದಿಗೆ ಒಂದಿಷ್ಟು ಮಾತನಾಡೋಣ.  

 

ಮೋದಿಜಿ:  ಹಲ್ಲೋ ರಿಪುದಮನ್ ಅವರೇ ನಮಸ್ಕಾರ. ನಾನು ನರೇಂದ್ರ ಮೋದಿ ಮಾತನಾಡುತ್ತಿದ್ದೇನೆ. 

 

ರಿಪುದಮನ್ :   ಹೇಳಿ ಸರ್ ತುಂಬಾ ಧನ್ಯವಾದಗಳು ಸರ್. ..  

 

ಮೋದಿಜಿ: ರಿಪುದಮನ್ ಅವರೇ

 

ರಿಪುದಮನ್ : ಹಾಂ ಹೇಳಿ ಸರ್

 

ಮೋದಿಜಿ: ನೀವು Plogging ಬಗ್ಗೆ ಇಷ್ಟೊಂದು ಸಮರ್ಪಣಾಭಾವದಿಂದ ಕೆಲಸ ಮಾಡುತ್ತಿದ್ದೀರಿ

 

ರಿಪುದಮನ್ : ಹೌದು ಸರ್

 

ಮೋದಿಜಿ: ನನ್ನ ಮನದಲ್ಲೂ ಕುತೂಹಲವಿತ್ತು. ಹಾಗಾಗಿ ನಾನೇ ಸ್ವತಃ ಫೋನ್ ಮಾಡಿ ನಿಮ್ಮನ್ನು ಕೇಳೋಣ ಎಂದುಕೊಂಡೆ. 

 

ರಿಪುದಮನ್ : ಓಕೆ . .

 

ಮೋದಿಜಿ: ನಿಮ್ಮ ಮನದಲ್ಲಿ ಈ ಆಲೋಚನೆ ಹೇಗೆ ಬಂತು. .

 

ರಿಪುದಮನ್: ಹಾಂ ಹೇಳಿ ಸರ್. . .

 

ಮೋದಿಜಿ: ಈ ಶಬ್ದ, ಈ ರೀತಿ ಪದ್ಧತಿ ಹೇಗೆ ಮನದಲ್ಲಿ ಮೂಡಿತು. 

 

ರಿಪುದಮನ್ : ಸರ್, ಯುವಕರಿಗೆ ಸ್ಫೂರ್ತಿ ತುಂಬಲು ಇಂದು ಕೂಲ್ ಆಗಿರುವಂಥದ್ದು, ಆಸಕ್ತಿಕರವಾಗಿರುವಂಥದ್ದು ಬೇಕು. ನಾನು ಸ್ಫೂರ್ತಿ ಪಡೆದಿದ್ದೇನೆ. ನನಗೆ 130 ಕೋಟಿ ಭಾರತೀಯರಿಗೆ ಈ ಅಭಿಯಾನದಲ್ಲಿ ಜೋಡಿಸಬೇಕಾದರೆ ಏನಾದರೂ ಕೂಲ್ ಮತ್ತು ಆಸಕ್ತಿದಾಯಕವಾದದ್ದನ್ನು ಮಾಡಬೇಕಿತ್ತು. ನಾನು ಸ್ವತಃ ಒಬ್ಬ ರನ್ನರ್ ಆಗಿದ್ದೇನೆ. ನಾವು ಬೆಳಿಗ್ಗೆ ಓಡುವಾಗ ವಾಹನ ದಟ್ಟಣೆ ಕಡಿಮೆ ಇರುತ್ತದೆ. ಜನರು ಕಡಿಮೆ ಇರುತ್ತಾರೆ. ಹಾಗಾಗಿ ಕಸ, ಕಡ್ಡಿ ಪ್ಲಾಸ್ಟಿಕ್ ಹೆಚ್ಚು ಕಂಡುಬರುತ್ತದೆ. ಹಾಗಾಗಿ ಕಿರಿ ಕಿರಿ ಮಾಡಿಕೊಂಡು ಗೊಣಗುವ ಬದಲು ಏನನ್ನಾದರೂ ಪರಿಹಾರ ಹುಡುಕುವ ಬಗ್ಗೆ ಯೋಚಿಸಿದೆ. ಆದ್ದರಿಂದ ನನ್ನ ರನ್ನಿಂಗ್ ತಂಡದೊಂದಿಗೆ ದೆಹಲಿಯಲ್ಲಿ ಇದನ್ನು ಆರಂಭಿಸಿದೆ. ನಂತರ ಸಂಪೂರ್ಣ ಭಾರತದಲ್ಲಿ ಇದನ್ನು ಪಸರಿಸಿದೆ. ಎಲ್ಲೆಡೆಯಿಂದ ಬಹಳ ಪ್ರಶಂಸೆ ದೊರೆಯಿತು. . . 

 

ಮೋದಿಜಿ: ಸರಿಯಾಗಿ ನೀವು ಏನು ಮಾಡುತ್ತಿದ್ದಿರಿ? ಸ್ವಲ್ಪ ವಿವರಿಸಿ.. ನನಗೂ ಅರ್ಥವಾಗಲಿ ಮತ್ತು ‘ಮನದ ಮಾತಿನ’ ಮೂಲಕ ದೇಶ ಬಾಂಧವರಿಗೂ ತಿಳಿಯಲಿ . .

 

ರಿಪುದಮನ್ : ಸರ್ ನಾವಿದನ್ನು ಆರಂಭಿಸಿದೆವು, ‘Run & Clean-up Movement’. ನಾವು ರನ್ನಿಂಗ್ ತಂಡಗಳಿಗೆ ಅವರ ಓಟದ ಅವಧಿಯ ನಂತರ ವಿರಾಮದ ವೇಳೆ ಕಸ ಆಯುವುದನ್ನು, ಪ್ಲಾಸ್ಟಿಕ್ ಆಯುವುದನ್ನು ಆರಂಭಿಸುವಂತೆ ಹೇಳಿದೆವು. ನೀವು ಓಟದಲ್ಲಿ ಭಾಗಿಯಾಗುತ್ತಿದ್ದೀರಿ ಎಂದಾದರೆ ನೀವು ಸ್ವಚ್ಛತೆಯನ್ನೂ ಮಾಡುತ್ತಿದ್ದೀರಿ. ಈಗ ಬಹಳಷ್ಟು ವ್ಯಾಯಾಮವೂ ಇದರೊಟ್ಟಿಗೆ ಸೇರಿದೆ.  ನೀವು ಕೇವಲ ಓಡುತ್ತಿಲ್ಲ ನೀವು ಕುಳಿತುಕೊಳ್ಳುತ್ತಿದ್ದೀರಿ, ಬಸ್ಕಿ ಹೊಡೆಯುತ್ತಿದ್ದೀರಿ, ಶ್ವಾಸಕೋಶಕ್ಕೆ ಕೆಲಸ ನೀಡುತ್ತಿದ್ದೀರಿ, ಮುಂದೆ ಬಾಗುತ್ತಿದ್ದೀರಿ. ಹೀಗೆ ಇದೊಂದು ಸಮಗ್ರ ವ್ಯಾಯಾಮವಾಗಿದೆ. ಕಳೆದ ವರ್ಷ ಹಲವಾರು ಪತ್ರಿಕೆಗಳಲ್ಲಿ ಭಾರತದ ಟಾಪ್ ಫಿಟ್ ನೆಸ್ ಟ್ರೆಂಡ್ ಗಳಲ್ಲಿ ಈ ಮೋಜಿನ ಕೆಲಸವನ್ನು ಹೆಸರಿಸಲಾಗಿದೆ ಎಂದು ತಿಳಿದು  ನಿಮಗೆ  ಸಂತೋಷವಾಗಬಹುದು.

 

ಮೋದಿಜಿ: ಈ ಕುರಿತು ನಿಮಗೆ ಅಭಿನಂದನೆಗಳು.

 

ರಿಪುದಮನ್ : ಧನ್ಯವಾದ ಸರ್. . .

 

ಮೋದಿಜಿ: ಅಂದರೆ ನೀವು ಸೆಪ್ಟೆಂಬರ್ 5 ರಿಂದ ಕೊಚ್ಚಿಯಿಂದ ಆರಂಭಿಸಿದ್ದೀರಿ. ..

 

ರಿಪುದಮನ್ : ಹೌದು ಸರ್, ಈ ಧ್ಯೇಯದ ಹೆಸರು ‘R|Elan – Run to make India Litter Free’ ಎಂದಾಗಿದೆ. ನೀವು ಅಕ್ಟೋಬರ್ 2 ರಂದು ಒಂದು ಐತಿಹಾಸಿಕ ಹೇಳಿಕೆ ನೀಡಲಿದ್ದೀರಿ. ಕಸ ಮುಕ್ತವಾಗುತ್ತದೆ ಎಂದಾದರೆ ಪ್ಲಾಸ್ಟಿಕ್ ಮುಕ್ತವೂ ಆಗಲಿದೆ ಎಂಬ ವಿಶ್ವಾಸ ನನಗಿದೆ. ಮತ್ತು ಅದು ವೈಯಕ್ತಿಕ ಜವಾಬ್ದಾರಿಯನ್ನೂ ನೀಡಿದಂತಾಗುತ್ತದೆ. ಓಟದ ಜೊತೆಗೆ ನಾನು 50 ನಗರಗಳಲ್ಲಿ 1000 ಕೀಲೋ ಮೀಟರ್ ವ್ಯಾಪ್ತಿಯನ್ನು ಸ್ವಚ್ಛಗೊಳಿಸುವ ಗುರಿ ಹೊಂದಿದ್ದೇನೆ. ಇದು ಬಹುಶಃ ವಿಶ್ವದ ಬಹುದೊಡ್ಡ ಕ್ಲೀನ್ ಅಪ್ ಡ್ರೈವ್ ಅಂದರೆ ಸ್ವಚ್ಛತಾ ಅಭಿಯಾನ ಆಗಲಿದೆ ಎಂದು ಬಹಳಷ್ಟು ಜನರು ಹೇಳಿದ್ದಾರೆ. ಸರ್, ಇದರ ಜೊತೆಗೆ ನಾವು ಸಾಮಾಜಿಕ ಜಾಲತಾಣಗಳಲ್ಲಿ ಇದಕ್ಕಾಗಿ ಒಂದು ಕೂಲ್ ಹ್ಯಾಶ್ ಟ್ಯಾಗ್ ಬಳಸಿದ್ದೇವೆ #PlasticUpvaas.  ಇದರಲ್ಲಿ ನೀವು ನಿಮ್ಮ ಜೀವನದಿಂದ ಒಮ್ಮೆ ಬಳಸಿ ಬಿಸಾಡುವ ವಸ್ತು – ಅದು ಪ್ಲಾಸ್ಟಿಕ್ ಆಗಿರಬಹುದು ಅಥವಾ ಇನ್ನಾವುದೇ ಆಗಿರಬಹುದು ಅದನ್ನು ಸಂಪೂರ್ಣವಾಗಿ ದೂರ ಮಾಡಲಿದ್ದೀರಿ ತಿಳಿಸಿ ಎಂದು ಜನರಿಗೆ ಕೇಳಿದ್ದೇವೆ.   

 

ಮೋದಿಜಿ : ಅದ್ಭುತ, ನೀವು ಸೆಪ್ಟೆಂಬರ್ 5 ರಿಂದ ಆರಂಭಿಸಿದ್ದೀರಿ. .  ಇಲ್ಲಿವರೆಗೆ ನಿಮ್ಮ ಅನುಭವವೇನು?  

 

ರಿಪುದಮನ್ : ಸರ್, ಇಲ್ಲಿವರೆಗೆ ಬಹಳ ಉತ್ತಮ ಅನುಭವ ದೊರೆತಿದೆ. ಕಳೆದ 2 ವರ್ಷಗಳಲ್ಲಿ ನಾವು ಭಾರತದಾದ್ಯಂತ ಸುಮಾರು 300 ರಷ್ಟು Plogging drives ಆಯೋಜಿಸಿದ್ದೇವೆ. ನಾವು ಕೊಚ್ಚಿಯಿಂದ ಆರಂಭ ಮಾಡಿದಾಗ ರನ್ನಿಂಗ್ ತಂಡಗಳು ಸೇರ್ಪಡೆಯಾಗುತ್ತಾ ಹೋದವು. ಸ್ಥಳೀಯವಾಗಿ ನಡೆಯುತ್ತಿದ್ದ ಕ್ಲೀನ್ ಅಪ್ ಗಳನ್ನು ನನ್ನ ಜೊತೆ ಸೇರಿಸಿಕೊಂಡೆ. ಕೊಚ್ಚಿ ನಂರತ ಮಧುರೈ, ಕೋಯಂಬತ್ತೂರ್, ಸೇಲಂ, ಇದೀಗ ನಾವು ಉಡುಪಿಯಲ್ಲಿಯೂ ಮಾಡಿದ್ದೇವೆ. ಅಲ್ಲಿ ಒಂದು ಶಾಲೆಯಿಂದ ಆಮಂತ್ರಣ ಬಂದಿತ್ತು. ಅಲ್ಲಿ 3 ರಿಂದ 6 ನೇ ತರಗತಿ ಓದುವ ವಿದ್ಯಾರ್ಥಿಗಳಿಗೆ ಕಾರ್ಯಾಗಾರ ಆಯೋಜನೆಗೆ ನಮ್ಮನ್ನು ಆಹ್ವಾನಿಸಲಾಗಿತ್ತು. ಅರ್ಧ ಗಂಟೆ ಸಮಯದ ಆ ಕಾರ್ಯಾಗಾರ 3 ಗಂಟೆಯ Plogging drive ಆಗಿ ಮಾರ್ಪಾಡಾಯಿತು. ಸರ್ ಮಕ್ಕಳು ಎಷ್ಟು ಉತ್ಸುಕರಾಗಿದ್ದರು ಎಂದರೆ ಅವರು ಇವೆಲ್ಲವನ್ನು ಮಾಡಲು ಆಸಕ್ತಿ ತೋರುತ್ತಿದ್ದರು. ತಮ್ಮ ತಂದೆ ತಾಯಿಗೆ ತಿಳಿಸುವುದು, ನೆರೆ ಹೊರೆಯವರಿಗೆ ಹೇಳುವುದು, ತಮ್ಮ ಗೆಳೆಯರಲ್ಲಿ ಹಂಚಿಕೊಳ್ಳುವುದು ಎಲ್ಲಕ್ಕಿಂತ ದೊಡ್ಡ ಪ್ರೇರಣೆಯಾಗಿದೆ. ಇದೇ ನಮ್ಮನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ.

 

ಮೋದಿಜಿ : ರಿಪು ಅವರೇ ಇದು ಪರಿಶ್ರಮವಲ್ಲ.. ಒಂದು ಸಾಧನೆ. ನಿಜವಾಗಿಯೂ ನೀವು ಸಾಧನೆಯನ್ನು ಮಾಡುತ್ತಿದ್ದೀರಿ.

 

ರಿಪುದಮನ್ : ಹೌದು ಸರ್. . .

 

ಮೋದಿಜಿ :  ನಿಮಗೆ ಅನಂತ ಅಭಿನಂದನೆಗಳು. ನೀವು ದೇಶಬಾಂಧವರಿಗೆ 3 ಮಾತುಗಳನ್ನು ಹೇಳಬೇಕೆಂದಾದಲ್ಲಿ ನೀವು ಯಾವ 3 ನಿರ್ದಿಷ್ಟ ಮಾತುಗಳನ್ನು ಹೇಳಬಯಸುತ್ತೀರಿ.

 

ರಿಪುದಮನ್ : ನಾನು ಕಸ ಮುಕ್ತ ಭಾರತಕ್ಕೆ 3 ಹಂತಗಳನ್ನು ನೀಡಬಯಸುತ್ತೇನೆ. ಮೊದಲ ಹಂತ, ಕಸವನ್ನು ಕಸದ ಬುಟ್ಟಿಯಲ್ಲಿಯೇ ಹಾಕಿರಿ. 2 ನೇ ಹಂತ, ನೆಲದ ಮೇಲೆ ಬಿದ್ದ ಕಸ ನಿಮ್ಮ ಕಣ್ಣಿಗೆ ಬಿದ್ದರೆ ಅದನ್ನೆತ್ತಿ ಕಸದ ಬುಟ್ಟಿಗೆ ಹಾಕಿ. 3 ನೇ ಹಂತ, ಕಸದ ಬುಟ್ಟಿ ಅಲ್ಲಿ ಇಲ್ಲದಿದ್ದರೆ ಕಸವನ್ನು ನಿಮ್ಮ ಜೇಬಿನಲ್ಲಿಟ್ಟುಕೊಂಡು ಅಥವಾ ಗಾಡಿಯಲ್ಲಿಟ್ಟುಕೊಂಡು ಮನೆಗೆ ಕೊಂಡೊಯ್ದು ಹಸಿ ಮತ್ತು ಒಣ ಕಸ ಬೇರ್ಪಡಿಸಿ ಬೆಳಿಗ್ಗೆ ನಗರ ಪಾಲಿಕೆ ಗಾಡಿ ಬಂದಾಗ ಅವರಿಗೆ ಕೊಟ್ಟುಬಿಡಿ. ನಾವು ಈ ಮೂರು ಹಂತಗಳನ್ನು ಅನುಸರಿಸಿದರೆ ನಮಗೆ ಕಸಮುಕ್ತ ಭಾರತ ದೊರೆಯುತ್ತದೆ. 

 

ಮೋದಿಜಿ : ನೋಡಿ ರಿಪು ಅವರೇ ಎಷ್ಟು ಸರಳ ಭಾಷೆಯಲ್ಲಿ ಸಾಮಾನ್ಯ ಮನುಷ್ಯ ಮಾಡಬಹುದಾದಂತಹ ಕೆಲಸಗಳನ್ನು ಹೇಳಿದ್ದೀರಿ. ಗಾಂಧೀಜಿಯವರ ಕನಸುಗಳನ್ನು ಹೊತ್ತು ಮುನ್ನಡೆಯುತ್ತಿದ್ದೀರಿ. ಜೊತೆಗೆ ಸರಳ ಶಬ್ದಗಳಲ್ಲಿ ತಿಳಿ ಹೇಳುವಂತಹ ಗಾಂಧೀಜಿಯವರ ರೀತಿಯನ್ನು ನೀವು ಅಳವಡಿಸಿಕೊಂಡಿದ್ದೀರಿ.

 

ರಿಪುದಮನ್ : ಧನ್ಯವಾದಗಳು

 

ಮೋದಿಜಿ : ಹಾಗಾಗಿ ನೀವು ಅಭಿನಂದನೆಗೆ ಪಾತ್ರರಾಗಿದ್ದೀರಿ. ರಿಪುದಮನ್ ಅವರೇ ನಿಮ್ಮೊಂದಿಗೆ ಮಾತಾಡಿ ನನಗೆ ಬಹಳ ಸಂತೋಷವಾಗಿದೆ. ನೀವು ಬಹಳ ವಿನೂತನ ರೀತಿಯಲ್ಲಿ ವಿಶೇಷವಾಗಿ ಯುವಜನತೆಗೆ ಇಷ್ಟವಾಗುವ ರೀತಿಯಲ್ಲಿ ಈ ಸಂಪೂರ್ಣ ಯೋಜನೆಯನ್ನು ಹಮ್ಮಿಕೊಂಡಿದ್ದೀರಿ. ನಿಮಗೆ ಅನಂತ ಅನಂತ ಅಭಿನಂದನೆಗಳು. ಸ್ನೇಹಿತರೇ ಈ ಬಾರಿ ಬಾಪೂಜಿಯವರ ಜಯಂತಿ ಪ್ರಯುಕ್ತ ಕ್ರೀಡಾ ಸಚಿವಾಲಯವೂ ‘Fit India Plogging Run’ ಆಯೋಜಿಸಲಿದೆ. ಅಕ್ಟೋಬರ್ 2 ರಂದು ದೇಶಾದ್ಯಂತ  2 ಕೀ ಮೀಟರ್ Plogging ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮ ಹೇಗಿರಬೇಕು, ಕಾರ್ಯಕ್ರಮದಲ್ಲಿ ಏನಿರಬೇಕು ಎಂಬುದನ್ನು  ರಿಪುದಮನ್ ಅವರ ಅನುಭವದಿಂದ ನಾವು ತಿಳಿದಿದ್ದೇವೆ.  ಅಕ್ಟೋಬರ್ 2 ರಂದು ಆರಂಭವಾಗಲಿರುವ ಈ ಆಂದೋಲನದಲ್ಲಿ  ನಾವು 2 ಕೀ ಮೀಟರ್ ಓಡುವುದರ ಜೊತೆಗೆ ರಸ್ತೆಯಲ್ಲಿ ಬಿದ್ದ ಪ್ಲಾಸ್ಟಿಕ್ ಕಸವನ್ನೂ ಸಂಗ್ರಹಿಸೋಣ. ಇದರಿಂದ ನಾವು  ನಮ್ಮ ಆರೋಗ್ಯ ರಕ್ಷಿಸಿಕೊಳ್ಳುವುದು ಮಾತ್ರವಲ್ಲ ಭೂಮಿ ತಾಯಿಯ ರಕ್ಷಣೆಯನ್ನೂ ಮಾಡಿದಂತಾಗುತ್ತದೆ. ಈ ಆಂದೋಲನದಿಂದ ಜನರಲ್ಲಿ ಆರೋಗ್ಯದ ಜೊತೆಗೆ ಸ್ವಚ್ಛತೆಯ ಕುರಿತು ಜಾಗರೂಕತೆ ಹೆಚ್ಚುತ್ತಿದೆ. 130 ಕೋಟಿ ದೇಶಬಾಂಧವರು ಈ ನಿಟ್ಟಿನಲ್ಲಿ ಮುಂದಡಿಯಿಟ್ಟರೆ  single use plastic ನಿಂದ ಮುಕ್ತವಾಗುವ ದಿಸೆಯಲ್ಲಿ ಭಾರತ 130 ಕೋಟಿ ಹೆಜ್ಜೆ ಮುಂದೆ ಸಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ರಿಪುದಮನ್ ಅವರೇ ನಿಮಗೆ ಮತ್ತೊಮ್ಮೆ ಅನಂತ ಧನ್ಯವಾದಗಳು. ನಿಮಗೆ ನಿಮ್ಮ ತಂಡಕ್ಕೆ ಈ ಹೊಸ ಪ್ರಯೋಗಕ್ಕೆ ನನ್ನ ವತಿಯಿಂದ ಅನಂತ ಅನಂತ ಅಭಿನಂದನೆಗಳು.  ಧನ್ಯವಾದಗಳು

ನನ್ನ ಪ್ರಿಯ ದೇಶಬಾಂಧವರೇ, ಅಕ್ಟೋಬರ್ 2 ರ ಸಿದ್ಧತೆಗಳು ಸಂಪೂರ್ಣ ದೇಶ ಮತ್ತು ವಿಶ್ವದೆಲ್ಲೆಡೆ ಭರದಿಂದ ಸಾಗಿದೆ.  ಆದರೆ “ಗಾಂಧಿ 150” ನ್ನು ನಾವು ಕರ್ತವ್ಯ ಪಥದತ್ತ ಕೊಂಡೊಯ್ಯಬಯಸುತ್ತೇವೆ. ನಮ್ಮ ಜಿವನವನ್ನು ದೇಶದ ಹಿತಕ್ಕಾಗಿ ಮುಡಿಪಾಗಿಟ್ಟು ಮುನ್ನಡೆಸುವಂತಾಗಲು ಬಯಸುತ್ತೇನೆ. ಮುಂಚಿತವಾಗಿಯೇ ಒಂದು ಮಾತನ್ನು ನೆನಪಿಸಿಕೊಳ್ಳುವ ಇಚ್ಛೆಯಾಗುತ್ತಿದೆ. ಮುಂದಿನ ಮನದ ಮಾತಿನಲ್ಲಿ ಈ ಕುರಿತು ವಿಸ್ತೃತವಾಗಿ ತಿಳಿಸುತ್ತೇನೆ ಆದರೆ ಅದಕ್ಕೆ ಸಂಬಂಧಿಸಿದ ಸಿದ್ಧತೆಗಳನ್ನು ನೀವು ಮಾಡಿಕೊಳ್ಳಲು ಈ ಬಾರಿ ಮನದ ಮಾತಿನಲ್ಲಿ ಆ ಕುರಿತು ಪ್ರಸ್ತಾಪಿಸುತ್ತಿದ್ದೇನೆ. ಅಕ್ಟೋಬರ್ 31 ರಂದು ಸರ್ದಾರ್ ವಲ್ಲಭ್ ಭಾಯ್ ಪಟೇಲರ ಜಯಂತಿ ಎಂದು ನಿಮಗೆ ನೆನಪಿದೆ. “ ಏಕ್ ಭಾರತ್ ಶ್ರೇಷ್ಠ ಭಾರತ್”  ಎಂಬುದು ನಮ್ಮೆಲ್ಲರ ಕನಸು. ಇದರ ಪ್ರಯುಕ್ತ ಪ್ರತಿ ವರ್ಷವೂ ಅಕ್ಟೋಬರ್ 31 ರಂದು ನಾವು ದೇಶಾದ್ಯಂತ “ರನ್ ಫಾರ್ ಯುನಿಟಿ” ದೇಶದ ಒಗ್ಗಟ್ಟಿಗಾಗಿ ಓಟ ಹಮ್ಮಿಕೊಳ್ಳುತ್ತೇವೆ. ಮಕ್ಕಳು ವೃದ್ಧರು, ಯುವಕರು, ಶಾಲಾ ಕಾಲೇಜುಗಳು ಸಾವಿರಾರು ಸಂಖ್ಯೆಯಲ್ಲಿ ಭಾರತದ ಲಕ್ಷಾಂತರ ಗ್ರಾಮಗಳಲ್ಲಿ ಆ ದಿನದಂದು ದೇಶದ ಒಗ್ಗಟ್ಟಿಗಾಗಿ ಓಡಬೇಕಿದೆ. ಹಾಗಾಗಿ ನೀವೂ ಈಗಲೇ ಇದರ ಸಿದ್ಧತೆ ಮಾಡಿಕೊಳ್ಳಿ. ವಿಸ್ತೃತವಾಗಿ ಮುಂದೆ ಈ ಬಗ್ಗೆ ಮಾತಾಡುವೆ. ಆದರೆ ಇನ್ನೂ ಸಮಯ ಇರುವುದರಿಂದ ಕೆಲವರು ಅಭ್ಯಾಸ ಆರಂಭಿಸಬಹುದು ಮತ್ತು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು.

ನನ್ನ ಪ್ರಿಯ ದೇಶಬಾಂಧವರೇ, 2022 ರ ಒಳಗೆ ಭಾರತದ 15 ಸ್ಥಳಗಳಿಗೆ ಭೇಟಿ ನೀಡಿ ಎಂದು ಅಗಸ್ಟ್ 15 ರಂದು ನಾನು ಕೆಂಪು ಕೋಟೆಯಿಂದ ಕರೆ ನೀಡಿದ್ದೆ ಎಂಬುದು ನಿಮಗೆ ನೆನಪಿರಬಹುದು. ಕನಿಷ್ಟ 15 ಸ್ಥಳಗಳಿಗೆ ಭೇಟಿ ನೀಡಿ, ಸಾಧ್ಯವಾದರೆ ಒಂದೆರಡು ದಿನ ಅಲ್ಲಿ ತಂಗುವಂತೆ ಪ್ರವಾಸ ಮಾಡಿ. ಭಾರತವನ್ನು ನೋಡಿ, ತಿಳಿಯಿರಿ ಮತ್ತು ಅನುಭವಿಸಿ. ನಮ್ಮಲ್ಲಿ ಎಷ್ಟೊಂದು ವಿವಧತೆಯಿದೆ. ದೀಪಾವಳಿ ಹಬ್ಬದ ರಜೆಗಳಲ್ಲಿ ಜನರು ಖಂಡಿತ ಪ್ರವಾಸಗೈಯ್ಯುತ್ತಾರೆ. ಆದ್ದರಿಂದ ಮತ್ತೊಮ್ಮೆ  ಭಾರತದ 15 ಸ್ಥಳಗಳಿಗೆ ಪ್ರವಾಸಕ್ಕೆ ತೆರಳಿ ಎಂದು ನಾನು ಆಗ್ರಹಿಸುತ್ತೇನೆ.

ನನ್ನ ಪ್ರಿಯ ದೇಶಬಾಂಧವರೇ, ಮೊನ್ನೆಯಷ್ಟೇ 27 ಸೆಪ್ಟೆಂಬರ್ ದಂದು ವಿಶ್ವ ಪ್ರವಾಸಿ ದಿನವನ್ನು ಆಚರಿಸಲಾಯಿತು. ವಿಶ್ವದ ಕೆಲ ಜವಾಬ್ದಾರಿಯುತ ಏಜನ್ಸಿಗಳು ಪ್ರವಾಸೋದ್ಯಮದ ಗುಣಮಟ್ಟವನ್ನು ಅಳೆಯುತ್ತವೆ. ಪ್ರವಾಸ ಮತ್ತು ಪ್ರವಾಸೋದ್ಯಮದ ಸ್ಪರ್ಧಾ ಕೋಷ್ಟಕದಲ್ಲಿ ಭಾರತ ಬಹಳ ಸುಧಾರಣೆಗೈದಿದೆ ಎಂಬುದನ್ನು ತಿಳಿದು ನಿಮಗೆ ಹರ್ಷವೆನ್ನಿಸಬಹುದು. ಇದೆಲ್ಲವೂ ನಿಮ್ಮೆಲ್ಲರ ಸಹಯೋಗದಿಂದಲೇ ಸಾಧ್ಯವಾಗಿದೆ. ಪ್ರವಾಸದ ಮಹತ್ವವನ್ನು ಅರಿತಿರುವುದರಿಂದ ಈ ಸಾಧನೆ ಆಗಿದೆ ಎಂಬುದು ವಿಶೇಷ. ಸ್ವಚ್ಛತಾ ಆಂದೋಲನದ ಪಾಲು ಇದರಲ್ಲಿ ಹಿರಿದಾದುದು.  ಎಷ್ಟು ಸುಧಾರಣೆ ಆಗಿದೆ ಎಂಬುದನ್ನು ನಾನು ನಿಮಗೆ ಹೇಳಲೇ? ನಿಮಗೆ ಖಂಡಿತ ಸಂತೋಷವಾಗುತ್ತದೆ. ಇಂದು ನಮ್ಮ ಸ್ಥಾನ 34 ರಲ್ಲಿದೆ. 5 ವರ್ಷಗಳ ಹಿಂದೆ ಇದು 65 ನೇ ಸ್ಥಾನದಲ್ಲಿತ್ತು. ಅಂದರೆ ಒಂದು ರೀತಿಯಲ್ಲಿ ನಾವು ಬಹುದೊಡ್ಡ ಅಂತರವನ್ನು ಕ್ರಮಿಸಿದ್ದೇವೆ.  ನಾವು ಮತ್ತಷ್ಟು ಪ್ರಯತ್ನ ಮಾಡಿದರೆ ಸ್ವಾತಂತ್ರ್ಯದ  75 ನೇ ಸಂಭ್ರಮಾಚರಣೆ ವೇಳೆಗೆ ಪ್ರವಾಸೋದ್ಯಮದಲ್ಲಿ ವಿಶ್ವದ ಪ್ರಮುಖ ಸ್ಥಾನಗಳಲ್ಲಿ ಸ್ಥಳಾವಕಾಶ ಪಡೆಯಲಿದ್ದೇವೆ.

 

ನನ್ನ ಪ್ರಿಯ ದೇಶಬಾಂಧವರೇ, ನಿಮ್ಮೆಲ್ಲರಿಗೂ ಮತ್ತೊಮ್ಮೆ ವೈವಿಧ್ಯತೆಯಿಂದ ಕೂಡಿದ ಭಾರತದ ವಿವಿಧ ಹಬ್ಬಗಳ ಅನಂತ ಅನಂತ ಶುಭಹಾರೈಕೆಗಳು. ಹಾಂ, ಇದರ ಜೊತೆಗೆ ದೀಪಾವಳಿ ಆಚರಣೆಯಲ್ಲಿ ಪಟಾಕಿ ಹಾರಿಸುವಾಗ ಅಗ್ನಿ ಅನಾಹುತಗಳಾಗದಂತೆ, ಯಾವುದೇ ವ್ಯಕ್ತಿಗೆ ಹಾನಿಯಾಗದಂತೆ ನೋಡಿಕೊಳ್ಳಿ. ಇದಕ್ಕಾಗಿ ಖಂಡಿತ ಮುನ್ನೆಚ್ಚರಿಕೆ ವಹಿಸಿ. ಸಂತೋಷವೂ ಇರಬೇಕು, ಸಂಭ್ರಮವೂ ಇರಬೇಕು, ಉತ್ಸಾಹವೂ ಇರಬೇಕು ಮತ್ತು ನಮ್ಮ ಹಬ್ಬಗಳು ಸಾಮೂಹಿಕತೆಯ ಸುಗಂಧವನ್ನೂ ಸೂಸುತ್ತವೆ. ಸಾಮೂಹಿಕತೆಯ ಸಂಸ್ಕಾರವನ್ನೂ ತರುತ್ತವೆ. ಸಾಮೂಹಿಕ ಜೀವನ ಹೊಸದೊಂದು ಸಾಮರ್ಥ್ಯವನ್ನು ನೀಡುತ್ತದೆ. ಹಬ್ಬಗಳು ಆ ಹೊಸ ಸಾಮರ್ಥ್ಯದ ಸಾಧನವಾಗಿರುತ್ತವೆ. ಬನ್ನಿ ಜೊತೆಗೂಡಿ, ಹುರುಪಿನಿಂದ, ಉತ್ಸಾಹದಿಂದ, ಹೊಸ ಕನಸುಗಳೊಂದಿಗೆ, ಹೊಸ ಸಂಕಲ್ಪದೊಂದಿಗೆ ಹಬ್ಬಗಳನ್ನೂ ಆಚರಿಸೋಣ. ಮತ್ತೊಮ್ಮೆ ಅನಂತ ಅನಂತ ಶುಭಾಷಯಗಳು. ಧನ್ಯವಾದ.    

 

 

 

 

 

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Snacks, Laughter And More, PM Modi's Candid Moments With Indian Workers In Kuwait

Media Coverage

Snacks, Laughter And More, PM Modi's Candid Moments With Indian Workers In Kuwait
NM on the go

Nm on the go

Always be the first to hear from the PM. Get the App Now!
...
Prime Minister meets with Crown Prince of Kuwait
December 22, 2024

​Prime Minister Shri Narendra Modi met today with His Highness Sheikh Sabah Al-Khaled Al-Hamad Al-Mubarak Al-Sabah, Crown Prince of the State of Kuwait. Prime Minister fondly recalled his recent meeting with His Highness the Crown Prince on the margins of the UNGA session in September 2024.

Prime Minister conveyed that India attaches utmost importance to its bilateral relations with Kuwait. The leaders acknowledged that bilateral relations were progressing well and welcomed their elevation to a Strategic Partnership. They emphasized on close coordination between both sides in the UN and other multilateral fora. Prime Minister expressed confidence that India-GCC relations will be further strengthened under the Presidency of Kuwait.

⁠Prime Minister invited His Highness the Crown Prince of Kuwait to visit India at a mutually convenient date.

His Highness the Crown Prince of Kuwait hosted a banquet in honour of Prime Minister.