Sardar Patel and Birsa Munda shared the vision of national unity: PM Modi
Let’s pledge to make India a global animation powerhouse: PM Modi
Journey towards Aatmanirbhar Bharat has become a Jan Abhiyan: PM Modi
Stop, think and act: PM Modi on Digital arrest frauds
Many extraordinary people across the country are helping to preserve our cultural heritage: PM
Today, people around the world want to know more about India: PM Modi
Glad to see that people in India are becoming more aware of fitness: PM Modi

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. ' ಮನದ ಮಾತಿಗೆ' ಎಲ್ಲರಿಗೂ ಸ್ವಾಗತ. ನನ್ನ ಜೀವನದ ಅವಿಸ್ಮರಣೀಯ ಕ್ಷಣಗಳು ಯಾವುವು ಎಂದು ನನ್ನನ್ನು ನೀವು ಕೇಳಿದರೆ, ಬಹಳಷ್ಟು ಘಟನೆಗಳು ನೆನಪಿಗೆ ಬರುತ್ತವೆ, ಅದರಲ್ಲೂ ಒಂದು ವಿಶೇಷವಾದ ಕ್ಷಣವಿದೆ, ಅದೇ ಕಳೆದ ವರ್ಷ ನವೆಂಬರ್ 15 ರಂದು ನಾನು ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಜಾರ್ಖಂಡ್‌ನ ಅವರ ಜನ್ಮಸ್ಥಳ ಉಲಿಹಾತು ಗ್ರಾಮಕ್ಕೆ ಹೋಗಿದ್ದು. ನನ್ನ ಮೇಲೆ ಈ ಪ್ರವಾಸದ ಪ್ರಭಾವ ಆಗಾಧವಾಗಿತ್ತು. ಈ ಪುಣ್ಯಭೂಮಿಯ ಮಣ್ಣಿನ ಆಶೀರ್ವಾದ ಪಡೆಯುವ ಭಾಗ್ಯವನ್ನು ಪಡೆದ ದೇಶದ ಮೊದಲ ಪ್ರಧಾನಿ ನಾನಾಗಿದ್ದೇನೆ. ಆ ಕ್ಷಣದಲ್ಲಿ ನನಗೆ ಸ್ವಾತಂತ್ರ್ಯ ಹೋರಾಟದ ಶಕ್ತಿಯ ಅನುಭವವಾದುದಲ್ಲದೆ, ಈ ಭೂಮಿಯ ಶಕ್ತಿಯೊಂದಿಗೆ ಬೆರೆಯುವ ಅವಕಾಶವೂ ಲಭಿಸಿತು. ಒಂದು ನಿರ್ಧಾರವನ್ನು ಪೂರೈಸುವ ಧೈರ್ಯ ಹೇಗೆ ದೇಶದ ಕೋಟ್ಯಾಂತರ ಜನರ ಭವಿಷ್ಯವನ್ನು ಬದಲಾಯಿಸುತ್ತದೆ ಎಂಬುದರ ಅನುಭವವೂ ನನಗಾಯಿತು.

ಸ್ನೇಹಿತರೇ, ಭಾರತದಲ್ಲಿ ಯುಗ ಯುಗದಲ್ಲೂ ಕೆಲವು ಸವಾಲುಗಳು ಎದುರಾಗಿವೆ ಮತ್ತು ಪ್ರತಿ ಯುಗದಲ್ಲೂ ಈ ಸವಾಲುಗಳನ್ನು ಎದುರಿಸಿದಂತಹ ಇಂತಹ ಅಸಾಮಾನ್ಯ ಭಾರತೀಯರು ಜನಿಸಿದ್ದಾರೆ. ಇಂದಿನ 'ಮನದ ಮಾತು' ನಲ್ಲಿ ಧೈರ್ಯ ಮತ್ತು ದೂರದೃಷ್ಟಿ ಹೊಂದಿರುವ ಇಬ್ಬರು ಮಹಾನ್ ವೀರರ ಬಗ್ಗೆ ಚರ್ಚಿಸುತ್ತೇನೆ. ಅವರ 150ನೇ ಜನ್ಮ ಜಯಂತಿಯನ್ನು ಆಚರಿಸಲು ದೇಶ ನಿರ್ಧರಿಸಿದೆ. ಅಕ್ಟೋಬರ್ 31 ರಿಂದ ಸರ್ದಾರ್ ಪಟೇಲ್ ಅವರ 150 ನೇ ಜನ್ಮ ಜಯಂತಿಯ ವರ್ಷ ಪ್ರಾರಂಭವಾಗಲಿದೆ. ಇದರ ನಂತರ, ನವೆಂಬರ್ 15 ರಿಂದ ಭಗವಾನ್ ಬಿರ್ಸಾ ಮುಂಡಾ ಅವರ 150 ನೇ ಜನ್ಮ ಜಯಂತಿಯ ವರ್ಷ ಪ್ರಾರಂಭವಾಗಲಿದೆ. ಈ ಇಬ್ಬರೂ ಮಹಾನ್ ವ್ಯಕ್ತಿಗಳು ವಿಭಿನ್ನ ಸವಾಲುಗಳನ್ನು ಎದುರಿಸಿದ್ದಾರೆ, ಆದರೆ ಇಬ್ಬರೂ ‘ದೇಶದ ಏಕತೆ’ಯ ಒಂದೇ ದೃಷ್ಟಿಕೋನವನ್ನು ಹೊಂದಿದ್ದರು.

ಸ್ನೇಹಿತರೇ, ಕಳೆದ ವರ್ಷಗಳಲ್ಲಿ, ದೇಶವು ಹೊಸ ಶಕ್ತಿಯೊಂದಿಗೆ ಇಂತಹ ಮಹಾನ್ ವೀರರ ಮತ್ತು ನಾಯಕಿಯರ ಜಯಂತಿಯನ್ನು ಆಚರಿಸುವ ಮೂಲಕ ಹೊಸ ಪೀಳಿಗೆಗೆ ಹೊಸ ಸ್ಫೂರ್ತಿಯನ್ನು ನೀಡಿದೆ. ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಜಯಂತಿಯನ್ನು ಆಚರಿಸಿದಾಗ ಎಷ್ಟು ವಿಶೇಷವಾದ ಘಟನೆ ನಡೆದಿದ್ದವು ಎಂಬುದು ನಿಮಗೆ ನೆನಪಿರಬಹುದು. ನ್ಯೂಯಾರ್ಕ್‌ನ ಟೈಮ್ಸ್ ಸ್ಕ್ವೇರ್‌ನಿಂದ ಆಫ್ರಿಕಾದ ಸಣ್ಣ ಪುಟ್ಟ ಗ್ರಾಮಗಳವರೆಗೆ, ಪ್ರಪಂಚದಾದ್ಯಂತದ ಜನರು ಭಾರತದ ಸತ್ಯ ಮತ್ತು ಅಹಿಂಸೆಯ ಸಂದೇಶದ ಸಾರವನ್ನು ಅರಿತರು, ಅದನ್ನು ಮತ್ತೊಮ್ಮೆ ತಿಳಿದುಕೊಂಡರು ಮತ್ತು ಅವನ್ನು ಬದುಕಿನಲ್ಲಿ ಅಳವಡಿಸಿಕೊಂಡರು. ಕಿರಿಯರಿಂದ ಹಿರಿಯರವರೆಗೆ, ಭಾರತೀಯರಿಂದ ಹಿಡಿದು ವಿದೇಶಿಯರವರೆಗೆ ಎಲ್ಲರೂ ಗಾಂಧೀಜಿಯವರ ಬೋಧನೆಗಳನ್ನು ಈ ಹೊಸ ಸಂದರ್ಭದಲ್ಲಿ ಅರ್ಥಮಾಡಿಕೊಂಡರು, ಹೊಸ ಜಾಗತಿಕ ಪರಿಸ್ಥಿತಿಗಳಲ್ಲಿ ಅವುಗಳನ್ನು ತಿಳಿದುಕೊಂಡರು. ನಾವು ಸ್ವಾಮಿ ವಿವೇಕಾನಂದರ 150ನೇ ಜನ್ಮ ಜಯಂತಿಯನ್ನು ಆಚರಿಸಿದಾಗ, ದೇಶದ ಯುವಕರು ಭಾರತದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ಶಕ್ತಿಯನ್ನು ಹೊಸ ವ್ಯಾಖ್ಯಾನದ ರೂಪದಲ್ಲಿ ಅರ್ಥಮಾಡಿಕೊಂಡರು. ನಮ್ಮ ಮಹಾನ್ ಪುರುಷರು ಭೂತಕಾಲದಲ್ಲಿ ಕಳೆದುಹೋಗಿಲ್ಲ, ಬದಲಿಗೆ ಅವರ ಜೀವನವು ನಮ್ಮ ವರ್ತಮಾನವನ್ನು ಮುನ್ನಡೆಸುವ ಭವಿಷ್ಯದ ದಾರಿಯನ್ನು ತೋರಿಸುತ್ತದೆ ಎಂದು ಈ ಯೋಜನೆಗಳು ನಮಗೆ ಅರಿವು ಮೂಡಿಸಿದವು.

ಸ್ನೇಹಿತರೇ, ಈ ಮಹಾನ್ ವ್ಯಕ್ತಿತ್ವಗಳ 150 ನೇ ಜನ್ಮ ಜಯಂತಿಯನ್ನು ರಾಷ್ಟ್ರಮಟ್ಟದಲ್ಲಿ ಆಚರಿಸಲು ಸರ್ಕಾರ ನಿರ್ಧರಿಸಿದ್ದರೂ, ನಿಮ್ಮ ಪಾಲ್ಗೊಳ್ಳುವಿಕೆ ಮಾತ್ರ ಈ ಅಭಿಯಾನಕ್ಕೆ ಜೀವ ತುಂಬುತ್ತದೆ ಮತ್ತು ಅದನ್ನು ಯಶಸ್ವಿಗೊಳಿಸುತ್ತದೆ. ಈ ಅಭಿಯಾನದಲ್ಲಿ ಭಾಗವಹಿಸುವಂತೆ ನಾನು ನಿಮ್ಮೆಲ್ಲರನ್ನು ಕೋರುತ್ತೇನೆ. ಉಕ್ಕಿನ ಮನುಷ್ಯ ಸರ್ದಾರ್ ಪಟೇಲ್ ಅವರಿಗೆ ಸಂಬಂಧಿಸಿದ ನಿಮ್ಮ ವಿಚಾರಗಳು ಮತ್ತು ಕಾರ್ಯಗಳನ್ನು #Sardar150 ಯೊಂದಿಗೆ ಹಂಚಿಕೊಳ್ಳಿ ಮತ್ತು ಧರ್ತಿ-ಆಬಾ ಬಿರ್ಸಾ ಮುಂಡಾ ಅವರ ಪ್ರೇರಣಾದಾಯಕ ವಿಚಾರಗಳನ್ನು  #BirsaMunda150 ರೊಂದಿಗೆ ಜಗತ್ತಿಗೆ ಪರಿಚಾಯಿಸಿ. ಬನ್ನಿ ನಾವೆಲ್ಲರೂ ಒಗ್ಗೂಡಿ ಈ ಹಬ್ಬವನ್ನು ಭಾರತದ ವಿವಿಧತೆಯಲ್ಲಿ ಏಕತೆಯ ಆಚರಣೆಯಾಗಿಸೋಣ, ಇದನ್ನು ಪರಂಪರೆಯಿಂದ ಅಭಿವೃದ್ಧಿಯ ಆಚರಣೆಯಾಗಿ ಬದಲಾಯಿಸೋಣ.

ನನ್ನ ಪ್ರಿಯ ದೇಶವಾಸಿಗಳೇ, "ಛೋಟಾ ಭೀಮ್" ಟಿವಿಯಲ್ಲಿ ಪ್ರಸಾರವಾಗಲು ಆರಂಭವಾದ ಆ ದಿನಗಳನ್ನು ನೀವು ನೆನಪಿಸಿಕೊಳ್ಳಬೇಕು. ‘ಛೋಟಾ ಭೀಮ್’ ಬಗ್ಗೆ ಮಕ್ಕಳಲ್ಲಿ ಅದೆಷ್ಟು ಉತ್ಸುಕತೆಯಿತ್ತು ಎಂಬುದನ್ನು ಮರೆಯಲು ಸಾಧ್ಯವೇ ಇಲ್ಲ. ಇಂದು 'ಢೋಲಕ್‌ಪುರ್ ಕಾ ಢೋಲ್' ಭಾರತದಲ್ಲಿ ಮಾತ್ರವಲ್ಲದೆ ಇತರ ದೇಶಗಳ ಮಕ್ಕಳನ್ನು ಕೂಡ ಬಹಳ ಆಕರ್ಷಿಸುತ್ತಿದೆ ಎಂದರೆ ನಿಮಗೆ ಆಶ್ಚರ್ಯವಾಗಬಹುದು. ಇದೇ ರೀತಿ ನಮ್ಮ ಇತರ ಅನಿಮೇಟೆಡ್ ಧಾರಾವಾಹಿಗಳಾದ ‘ಕೃಷ್ಣ’, ‘ಹನುಮಾನ್’, ‘ಮೋಟು-ಪತಲೂ’ ಗಳನ್ನೂ  ಇಷ್ಟಪಡುವ ಅಭಿಮಾನಿಗಳು ಜಗತ್ತಿನಾದ್ಯಂತ ಇದ್ದಾರೆ. ಭಾರತೀಯ ಅನಿಮೇಷನ್ ಪಾತ್ರಗಳು: ಇಲ್ಲಿನ ಅನಿಮೇಷನ್ ಚಲನಚಿತ್ರಗಳು ಅವುಗಳ ವಿಷಯ ಮತ್ತು ಸೃಜನಶೀಲತೆಯಿಂದಾಗಿ ಪ್ರಪಂಚದಾದ್ಯಂತ ಮೆಚ್ಚುಗೆ ಪಡೆಯುತ್ತಿವೆ. ಸ್ಮಾರ್ಟ್‌ಫೋನ್‌ನಿಂದ ಸಿನಿಮಾ ಪರದೆಯವರೆಗೆ, ಗೇಮಿಂಗ್ ಕನ್ಸೋಲ್‌ನಿಂದ ವರ್ಚುವಲ್ ರಿಯಾಲಿಟಿವರೆಗೆ, ಅನಿಮೇಷನ್ ಎಲ್ಲೆಡೆ ಇರುವುದನ್ನು ನೀವು ನೋಡಿರಬಹುದು. ಅನಿಮೇಷನ್ ಜಗತ್ತಿನಲ್ಲಿ ಭಾರತ ಹೊಸ ಕ್ರಾಂತಿಯನ್ನು ನಿರ್ಮಿಸುವತ್ತ ದಾಪುಗಾಲಿಟ್ಟಿದೆ. ಭಾರತದ ಗೇಮಿಂಗ್ ಸ್ಪೇಸ್ ಕೂಡ ವೇಗವಾಗಿ ವಿಸ್ತರಿಸುತ್ತಿದೆ. ಇತ್ತೀಚಿನ ದಿನಗಳಲ್ಲಿ ಭಾರತೀಯ ಆಟಗಳು ಪ್ರಪಂಚದಾದ್ಯಂತ ಜನಪ್ರಿಯಗೊಳ್ಳುತ್ತಿವೆ. ಕೆಲವು ತಿಂಗಳುಗಳ ಹಿಂದೆ, ನಾನು ಭಾರತದ ಪ್ರಮುಖ ಗೇಮರ್ ಗಳನ್ನು ಭೇಟಿಯಾಗಿದ್ದೆ. ಆಗ ನನಗೆ ಭಾರತೀಯ ಗೇಮ್ ಗಳ ಅದ್ಭುತ ಸೃಜನಶೀಲತೆ ಮತ್ತು ಗುಣಮಟ್ಟದ ಬಗ್ಗೆ ತಿಳಿಯಲು ಮತ್ತು ಅರ್ಥಮಾಡಿಕೊಳ್ಳಲು ಅವಕಾಶ ಲಭಿಸಿತು.  ವಾಸ್ತವದಲ್ಲಿ, ದೇಶದಲ್ಲಿ ಸೃಜನಶೀಲ ಶಕ್ತಿಯ ಅಲೆ ಎದ್ದಿದೆ. ಅನಿಮೇಷನ್ ಜಗತ್ತಿನಲ್ಲಿ, ‘ಮೇಡ್ ಇನ್ ಇಂಡಿಯಾ’ ಮತ್ತು ‘ಮೇಡ್ ಬೈ ಇಂಡಿಯನ್ಸ್’ ಪ್ರಚಲಿತದಲ್ಲಿವೆ. ಇಂದು ಭಾರತೀಯ ಪ್ರತಿಭೆಗಳು ವಿದೇಶಿ ನಿರ್ಮಾಣಗಳ ಪ್ರಮುಖ ಭಾಗವಾಗುತ್ತಿವೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಈಗಿನ ಸ್ಪೈಡರ್ ಮ್ಯಾನ್ ಆಗಿರಲಿ ಅಥವಾ ಟ್ರಾನ್ಸ್‌ಫಾರ್ಮರ್ಸ್ ಆಗಿರಲಿ, ಈ ಎರಡೂ ಸಿನಿಮಾಗಳಲ್ಲಿ ಹರಿನಾರಾಯಣ ರಾಜೀವ್ ಅವರ ಕೊಡುಗೆಯನ್ನು ಜನರು ಬಹಳವಾಗಿ ಮೆಚ್ಚಿಕೊಂಡಿದ್ದಾರೆ. ಭಾರತದ ಅನಿಮೇಷನ್ ಸ್ಟುಡಿಯೋಗಳು ಪ್ರಪಂಚದ ಪ್ರಸಿದ್ಧ ನಿರ್ಮಾಣ ಕಂಪನಿಗಳಾದ ಡಿಸ್ನಿ ಮತ್ತು ವಾರ್ನರ್ ಬ್ರದರ್ಸ್‌ನೊಂದಿಗೆ ಕೆಲಸ ಮಾಡುತ್ತಿವೆ.

ಸ್ನೇಹಿತರೇ, ಇಂದು ನಮ್ಮ ಯುವಜನತೆ ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬೀಸುವ ಶುದ್ಧ ಭಾರತೀಯ ಮೂಲದ ವಿಷಯವಸ್ತುಗಳ ಮೇಲೆ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರಗಳನ್ನು ಪ್ರಪಂಚದಾದ್ಯಂತ ವೀಕ್ಷಿಸಲಾಗುತ್ತಿದೆ. ಅನಿಮೇಷನ್ ಕ್ಷೇತ್ರವು ಇಂದು ಉದ್ಯಮದ ರೂಪವನ್ನು ಪಡೆದುಕೊಂಡಿದ್ದು, ಇತರ ಉದ್ಯಮಗಳಿಗೂ ಪುಷ್ಟಿ  ನೀಡುತ್ತಿದೆ. ವಿ ಆರ್ (ವರ್ಚುವಲ್) ಪ್ರವಾಸೋದ್ಯಮವು ಇತ್ತೀಚಿನ ದಿನಗಳಲ್ಲಿ ಬಹಳ ಜನಪ್ರಿಯವಾಗುತ್ತಿದೆ. ನೀವು ವರ್ಚುವಲ್ ಪ್ರವಾಸದ ಮೂಲಕ ಅಜಂತಾ ಗುಹೆಗಳನ್ನು ನೋಡಬಹುದು, ಕೋನಾರ್ಕ್ ದೇವಾಲಯದ ಕಾರಿಡಾರ್‌ಗಳ ಮೂಲಕ ಅಡ್ಡಾಡಬಹುದು ಅಥವಾ ವಾರಣಾಸಿಯ ಘಾಟ್‌ಗಳ ಆನಂದವನ್ನು ಅನುಭವಿಸಬಹುದು. ಈ ಎಲ್ಲಾ ವಿ ಆರ್ ಅನಿಮೇಷನ್‌ಗಳನ್ನು ಭಾರತದ ಅನಿಮೇಟರ್ ಗಳು  ಸಿದ್ಧಪಡಿಸಿದ್ದಾರೆ.  ವಿ ಆರ್ ಮೂಲಕ ಈ ಸ್ಥಳಗಳನ್ನು ನೋಡಿದ ನಂತರ, ಅನೇಕ ಜನರು ಈ ಪ್ರವಾಸಿ ಸ್ಥಳಗಳಿಗೆ ವಾಸ್ತವ ಭೇಟಿ ನೀಡಲು ಬಯಸುತ್ತಾರೆ, ಅಂದರೆ ಪ್ರವಾಸಿ ತಾಣದ ವರ್ಚುವಲ್ ಪ್ರವಾಸವು ಜನರ ಮನಸ್ಸಿನಲ್ಲಿ ಕುತೂಹಲವನ್ನು ಮೂಡಿಸುವ ಮಾಧ್ಯಮವಾಗಿದೆ.  ಇಂದು, ಈ ವಲಯದಲ್ಲಿ, ಆನಿಮೇಟರ್‌ಗಳ ಜೊತೆಗೆ ಕಥೆ ಹೇಳುವವರು, ಬರಹಗಾರರು, ಹಿನ್ನೆಲೆ ಧ್ವನಿ ತಜ್ಞರು, ಸಂಗೀತಗಾರರು, ಗೇಮ್ ಡೆವಲಪರ್‌ಗಳು, ವಿ ಆರ್ ಮತ್ತು ಎ ಆರ್ ತಜ್ಞರ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಆದ್ದರಿಂದ, ನಾನು ಭಾರತದ ಯುವಕರಿಗೆ ಹೇಳುವುದೇನೆಂದರೆ - ನಿಮ್ಮ ಸೃಜನಶೀಲತೆಯನ್ನು ವೃದ್ಧಿಸಿಕೊಳ್ಳಿ. ಯಾರಿಗೆ ಗೊತ್ತು, ವಿಶ್ವದ ಮುಂದಿನ ಸೂಪರ್ ಹಿಟ್ ಅನಿಮೇಷನ್ ನಿಮ್ಮ ಕಂಪ್ಯೂಟರ್‌ನಿಂದ ಹೊರಬರಬಹುದು! ಮುಂದಿನ ವೈರಲ್ ಗೇಮ್ ನಿಮ್ಮದೇ  ಸೃಷ್ಟಿಯಾಗಿರಬಹುದು! ಶೈಕ್ಷಣಿಕ ಅನಿಮೇಷನ್‌ಗಳಲ್ಲಿ ನಿಮ್ಮ ನಾವೀನ್ಯತೆ ಉತ್ತಮ ಯಶಸ್ಸನ್ನು ಸಾಧಿಸಬಹುದು. ಇದೇ ಅಕ್ಟೋಬರ್ 28 ರಂದು ಅಂದರೆ ನಾಳೆ 'ವಿಶ್ವ ಅನಿಮೇಷನ್ ದಿನ'ವನ್ನು ಸಹ ಆಚರಿಸಲಾಗುತ್ತದೆ. ಬನ್ನಿ, ಭಾರತವನ್ನು ಜಾಗತಿಕ ಅನಿಮೇಷನ್ ಪವರ್ ಹೌಸ್ ಮಾಡಲು ಸಂಕಲ್ಪಗೈಯೋಣ  .

ನನ್ನ ಪ್ರಿಯ ದೇಶವಾಸಿಗಳೇ, ಸ್ವಾಮಿ ವಿವೇಕಾನಂದರು ಒಂದೊಮ್ಮೆ ಯಶಸ್ಸಿನ ಮಂತ್ರವನ್ನು ನೀಡಿದ್ದರು, ಅವರ ಮಂತ್ರ ಹೀಗಿತ್ತು  - 'ಒಂದು ವಿಚಾರವನ್ನು ಕೈಗೆತ್ತಿಕೊಳ್ಳಿ, ಅದನ್ನೇ ಜೀವನವನ್ನಾಗಿಸಿಕೊಳ್ಳಿ, ಅದರ ಬಗ್ಗೆ ಯೋಚಿಸಿ, ಅದರ ಬಗ್ಗೆ ಕನಸು ಕಾಣಿರಿ. ಅದನ್ನೇ ಜೀವಿಸಲಾರಂಭಿಸಿ.” ಇಂದು, ಸ್ವಾವಲಂಬಿ ಭಾರತ ಅದೇ ಯಶಸ್ಸಿನ ಮಂತ್ರದ ಮೇಲೆಯೇ ಮುಂದೆ ಸಾಗಿದೆ. ಈ ಅಭಿಯಾನವು ನಮ್ಮ ಸಾಮೂಹಿಕ ಪ್ರಜ್ಞೆಯ ಭಾಗವಾಗಿದೆ. ಪ್ರತಿ ಹಂತದಲ್ಲೂ ನಿರಂತರವಾಗಿ ಸ್ಫೂರ್ತಿಯ ಸೆಲೆಯಾಗಿದೆ. ಸ್ವಾವಲಂಬನೆ ನಮ್ಮ policy ಮಾತ್ರವಲ್ಲ, ನಮ್ಮ passion ಕೂಡಾ ಆಗಿದೆ. ಬಹಳ ವರ್ಷಗಳೇನು ಆಗಿಲ್ಲ, ಕೇವಲ 10 ವರ್ಷಗಳ ಹಿಂದಿನ ಮಾತು. ಭಾರತದಲ್ಲಿ ಯಾವುದೋ ಸಂಕೀರ್ಣ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಬೇಕು ಎಂದು ಯಾರಾದರೂ ಹೇಳಿದರೆ, ಅನೇಕರು ಅದನ್ನು ನಂಬುತ್ತಿರಲಿಲ್ಲ, ಅನೇಕರು ಅಪಹಾಸ್ಯ ಮಾಡುತ್ತಿದ್ದರು - ಆದರೆ ಇಂದು ಅದೇ ಜನರು ದೇಶದ ಯಶಸ್ಸನ್ನು ನೋಡಿದ ನಂತರ ದಿಗ್ಭ್ರಮೆಗೊಂಡಿದ್ದಾರೆ. ಭಾರತ ಸ್ವಾವಲಂಬಿಯಾಗುತ್ತಿದೆ, ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತ ಸಾಧನೆ ಮಾಡುತ್ತಿದೆ. ಒಂದು ಕಾಲದಲ್ಲಿ ಮೊಬೈಲ್ ಫೋನ್‌ಗಳ ಆಮದುದಾರರಾಗಿದ್ದ ಭಾರತ ಇಂದು ವಿಶ್ವದ ಎರಡನೇ ಅತಿ ದೊಡ್ಡ ಉತ್ಪಾದಕ ರಾಷ್ಟ್ರವಾಗಿದೆ. ಒಂದು ಕಾಲದಲ್ಲಿ ವಿಶ್ವದಲ್ಲೇ ಅತಿ ಹೆಚ್ಚು ರಕ್ಷಣಾ ಸಾಧನಗಳನ್ನು ಖರೀದಿಸುವ ದೇಶವಾಗಿದ್ದ ಭಾರತ ಇಂದು 85 ದೇಶಗಳಿಗೆ ರಫ್ತು ಮಾಡುತ್ತಿದೆ. ಬಾಹ್ಯಾಕಾಶ ತಂತ್ರಜ್ಞಾನದಲ್ಲಿ, ಇಂದು ಭಾರತವು ಚಂದ್ರನ ದಕ್ಷಿಣ ಧ್ರುವವನ್ನು ತಲುಪಿದ ಮೊದಲ ರಾಷ್ಟ್ರವಾಗಿದೆ. ನಾನು ಅತ್ಯಂತ ಇಷ್ಟಪಡುವ ಒಂದು ವಿಷಯವೆಂದರೆ ಈ ಸ್ವಾವಲಂಬನೆಯ ಅಭಿಯಾನವು ಕೇವಲ ಸರ್ಕಾರಿ ಅಭಿಯಾನವಾಗಿ ಉಳಿದಿಲ್ಲ, ಈಗ ಸ್ವಾವಲಂಬಿ ಭಾರತ ಅಭಿಯಾನವು ಸಾಮೂಹಿಕ ಅಭಿಯಾನವಾಗುತ್ತಿದೆ - ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆಗೈಯುತ್ತಿದೆ. ಉದಾಹರಣೆಗೆ, ಈ ತಿಂಗಳು ನಾವು ಲಡಾಖ್‌ನ ಹಾನ್ಲೆಯಲ್ಲಿ ಏಷ್ಯಾದ ಅತಿದೊಡ್ಡ 'ಇಮೇಜಿಂಗ್ ಟೆಲಿಸ್ಕೋಪ್ MACE' ಅನ್ನು ಸಹ ಉದ್ಘಾಟಿಸಿದ್ದೇವೆ. ಇದು 4300 ಮೀಟರ್ ಎತ್ತರದಲ್ಲಿದೆ. ಇದರ ವಿಶೇಷತೆ ಏನೆಂದು ತಿಳಿಯೋಣ! ಇದು ‘ಮೇಡ್ ಇನ್ ಇಂಡಿಯಾ’ ಆಗಿದೆ. ಮೈನಸ್ 30 ಡಿಗ್ರಿಯಷ್ಟು ಚಳಿಯಿರುವ ಸ್ಥಳದಲ್ಲಿ, ಆಮ್ಲಜನಕದ ಕೊರತೆಯಿರುವ ಸ್ಥಳದಲ್ಲಿ, ನಮ್ಮ ವಿಜ್ಞಾನಿಗಳು ಮತ್ತು ಸ್ಥಳೀಯ ಉದ್ಯಮಗಳು ಏಷ್ಯಾದ ಯಾವುದೇ ದೇಶ ಮಾಡದ ಕೆಲಸವನ್ನು ಮಾಡಿ ತೋರಿಸಿದ್ದಾರೆ. ಹ್ಯಾನ್ಲಿಯ ದೂರದರ್ಶಕವು ದೂರದ ಜಗತ್ತನ್ನು ನೋಡುತ್ತಿರಬಹುದು, ಆದರೆ ಅದು ನಮಗೆ ಇನ್ನೂ ಒಂದು ವಿಷಯ ಅಂದರೆ ‘ಸ್ವಾವಲಂಬಿ ಭಾರತದ ಸಾಮರ್ಥ್ಯವನ್ನು’ ತೋರಿಸುತ್ತಿದೆ,

ಸ್ನೇಹಿತರೇ, ನೀವು ಕೂಡ ಒಂದು ಕೆಲಸ ಮಾಡಬೇಕೆಂದು ನಾನು ಬಯಸುತ್ತೇನೆ. ಸ್ವಾವಲಂಬಿಯಾಗುತ್ತಿರುವ ಭಾರತದ ಅಂತಹ ಪ್ರಯತ್ನಗಳ ಉದಾಹರಣೆಗಳನ್ನು ಸಾಧ್ಯವಾದಷ್ಟು ಹಂಚಿಕೊಳ್ಳಿ. ನಿಮ್ಮ ನೆರೆಹೊರೆಯಲ್ಲಿ ನೀವು ಯಾವ ಹೊಸ ಆವಿಷ್ಕಾರವನ್ನು ನೋಡಿದ್ದೀರಿ, ಯಾವ ಸ್ಥಳೀಯ ಸ್ಟಾರ್ಟ್ ಅಪ್ ನಿಮ್ಮ ಮೇಲೆ ಹೆಚ್ಚು ಪ್ರಭಾವ ಬೀರಿದೆ, ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮದಲ್ಲಿ #AatmanirbharInnovation ಜೊತೆಗೆ ಬರೆಯಿರಿ ಮತ್ತು ಸ್ವಾವಲಂಬಿ ಭಾರತವನ್ನು ಉತ್ಸವವನ್ನು ಆಚರಿಸಿ. ಈ ಹಬ್ಬದ ಋತುವಿನಲ್ಲಿ, ನಾವೆಲ್ಲರೂ ಸ್ವಾವಲಂಬಿ ಭಾರತದ ಅಭಿಯಾನಕ್ಕೆ ಮತ್ತಷ್ಟು ಪುಷ್ಟಿ ನೀಡೋಣ. ನಾವು vocal for local ಸ್ಥಳೀಯ ವಸ್ತುಗಳಿಗೆ ದನಿಯಾಗುವ ಮಂತ್ರದೊಂದಿಗೆ ನಮ್ಮ ಖರೀದಿಗಳನ್ನು ಮಾಡೋಣ. ಇದು ಹೊಸ ಭಾರತ, ಇಲ್ಲಿ ಅಸಾಧ್ಯ ಎಂಬುದು ಕೇವಲ ಒಂದು ಸವಾಲು ಅಷ್ಟೇ, ಈಗ ಮೇಕ್ ಇನ್ ಇಂಡಿಯಾ ಈಗ ಮೇಕ್ ಫಾರ್ ದಿ ವರ್ಲ್ಡ್ ಆಗಿ ಮಾರ್ಪಟ್ಟಿದೆ, ಇಲ್ಲಿ ಪ್ರತಿಯೊಬ್ಬ ನಾಗರಿಕನು ಇನ್ನೋವೇಟರ್ ಆಗಿದ್ದಾನೆ, ಇಲ್ಲಿ ಪ್ರತಿ ಸವಾಲು ಅವಕಾಶವಾಗಿದೆ. ನಾವು ಭಾರತವನ್ನು ಸ್ವಾವಲಂಬಿಯನ್ನಾಗಿ ಮಾಡುವುದು ಮಾತ್ರವಲ್ಲ, ನಮ್ಮ ದೇಶವನ್ನು ನಾವೀನ್ಯತೆಯ ಜಾಗತಿಕ ಶಕ್ತಿಯ ಕೇಂದ್ರವಾಗಿ ಬಲಪಡಿಸಬೇಕಿದೆ.

ನನ್ನ ಪ್ರಿಯ ದೇಶವಾಸಿಗಳೆ, ನಿಮಗೆ ನಾನು ಒಂದು ಆಡಿಯೋ ಕೇಳಿಸುತ್ತೇನೆ.

# ಆಡಿಯೋ) #

ಆಡಿಯೋ ಬೈಟ್‌ನ ಪ್ರತಿಲೇಖನ

ವಂಚಕ 1: ಹಲೋ

ನೋಂದವರು : ಸರ್, ನಮಸ್ಕಾರ ಸರ್.

ವಂಚಕ 1: ಹಲೋ

ನೋಂದವರು: ಸಾರ್ ಹೇಳಿ ಸಾರ್

ವಂಚಕ 1: ನೋಡಿ ನೀವು ನನಗೆ  ಎಫ್‌ಐಆರ್ ಸಂಖ್ಯೆ ಕಳುಹಿಸಿದ್ದೀರಲ್ಲ, ಇದರ ವಿರುದ್ಧ ನಮ್ಮ ಬಳಿ 17 ದೂರುಗಳಿವೆ, ನೀವು ಈ ಸಂಖ್ಯೆಯನ್ನು ಬಳಸುತ್ತಿದ್ದೀರಾ?

ನೋಂದವರು: ನಾನು ಇದನ್ನು ಬಳಸುವುದಿಲ್ಲ ಸರ್.

ವಂಚಕ 1: ಈಗ ನೀವು ಎಲ್ಲಿಂದ ಮಾತನಾಡುತ್ತಿದ್ದೀರಿ?

ನೋಂದವರು: ಸಾರ್ ಕರ್ನಾಟಕ ಸಾರ್, ಮನೆಯಲ್ಲಿದ್ದೇನೆ ಸಾರ್.

ವಂಚಕ 1: ಸರಿ, ತಮ್ಮ ಹೇಳಿಕೆಯನ್ನು ದಾಖಲಿಸಿ, ಇದರಿಂದ ಈ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುವುದು. ಭವಿಷ್ಯದಲ್ಲಿ ನಿಮಗೆ ಯಾವುದೇ ಸಮಸ್ಯೆಯಾಗುವುದಿಲ್ಲ, ಸರಿನಾ

ನೋಂದವರು: ಸರಿ ಸರ್

ವಂಚಕ 1: ನಾನು ಈಗಲೇ ನಿಮ್ಮನ್ನು  ಕನೆಕ್ಟ್ ಮಾಡುತ್ತೇನೆ, ಅವರು ನಿಮ್ಮ ತನಿಖಾ ಅಧಿಕಾರಿಗಳು. ದಯವಿಟ್ಟು ನಿಮ್ಮ ಹೇಳಿಕೆಯನ್ನು ರೆಕಾರ್ಡ್ ಮಾಡಿ ಇದರಿಂದ ಈ ಸಂಖ್ಯೆಯನ್ನು ಬ್ಲಾಕ್ ಮಾಡಲಾಗುವುದು, ಸರಿನಾ.

ನೋಂದವರು: ಆಯಿತು ಸರ್

ವಂಚಕ1: ಸರಿ, ಹೇಳಿ, ನಾನು ಯಾರೊಂದಿಗೆ ಮಾತನಾಡುತ್ತಿದ್ದೇನೆ? ನಿಮ್ಮ ಆಧಾರ್ ಕಾರ್ಡ್ ಅನ್ನು ತೋರಿಸಿ, ಪರಿಶೀಲಿಸಬೇಕಿದೆ.

ನೋಂದವರು: ಸಾರ್, ನನ್ನ ಬಳಿ ಈಗ ಆಧಾರ್ ಕಾರ್ಡ್ ಇಲ್ಲ, ದಯವಿಟ್ಟು ಸಾರ್.

ವಂಚಕ 1: ಫೋನ್ ನಲ್ಲಿ, ನಿಮ್ಮ ಫೋನ್‌ನಲ್ಲಿದೆಯೇ?

ನೋಂದವರು: ಇಲ್ಲ ಸಾರ್

ವಂಚಕ 1: ನಿಮ್ಮ ಫೋನ್‌ನಲ್ಲಿ ಆಧಾರ್ ಕಾರ್ಡ್‌ನ ಚಿತ್ರವಿಲ್ಲವೇ?

ನೋಂದವರು: ಇಲ್ಲ ಸಾರ್

ವಂಚಕ 1: ನಿಮಗೆ ಸಂಖ್ಯೆ ನೆನಪಿದೆಯೇ?

ನೋಂದವರು: ಸಾರ್ ಇಲ್ಲ ಸಾರ್, ನಂಬರ್ ಕೂಡ ನೆನಪಿಲ್ಲ ಸಾರ್.

ವಂಚಕ 1: ನಾವು ಪರಿಶೀಲಿಸಬೇಕಾಗಿದೆ, ಸರಿನಾ, ಪರಿಶೀಲಿಸೋದಿಕ್ಕೆ.

ನೋಂದವರು: ಇಲ್ಲ ಸಾರ್

ವಂಚಕ 1: ಭಯಪಡಬೇಡಿ, ಹೆದರಬೇಡಿ, ನೀವು ಏನೂ ಮಾಡದಿದ್ದರೆ ಹೆದರಬೇಡಿ.

ನೋಂದವರು: ಆಯ್ತು ಸಾರ್, ಆಯ್ತು ಸಾರ್

ವಂಚಕ 1: ನಿಮ್ಮ ಬಳಿ ಆಧಾರ್ ಕಾರ್ಡ್ ಇದ್ದರೆ ಪರಿಶೀಲಿಸಲು ಅದನ್ನು ನನಗೆ ತೋರಿಸಿ.

ನೋಂದವರು: ಇಲ್ಲ, ಇಲ್ಲ ಸಾರ್, ನಾನು ಹಳ್ಳಿಗೆ ಬಂದಿದ್ದೇನೆ ಸಾರ್, ಅಲ್ಲಿ ಸರ್ ಮನೆಯಲ್ಲಿದೆ ಸರ್.

ವಂಚಕ 1: ಸರಿ

ವಂಚಕ 2 : ಮೇ ಐ ಕಮ್ ಇನ್ ಸರ್

ವಂಚಕ 1: ಕಮ್ ಇನ್

ವಂಚಕ  2: ಜೈ ಹಿಂದ್

ವಂಚಕ 1: ಜೈ ಹಿಂದ್

ವಂಚಕ 1: ಪ್ರೋಟೋಕಾಲ್ ಪ್ರಕಾರ ಈ ವ್ಯಕ್ತಿಯ one sided video call record  ಮಾಡಿ, ಒ ಕೆ .

ಈ ಆಡಿಯೋ ಕೇವಲ ಮಾಹಿತಿಗಾಗಿ ಅಲ್ಲ, ಇದು ಕೇವಲ ಮನರಂಜನೆಯ ಆಡಿಯೋ ಅಲ್ಲ, ಈ ಆಡಿಯೋ ಆಳವಾದ ಕಾಳಜಿಯೊಂದಿಗೆ, ಚಿಂತನೆಯೊಂದಿಗೆ ಬಂದಿದೆ. ನೀವು ಈಗ ಕೇಳಿದ ಸಂಭಾಷಣೆಯು ಡಿಜಿಟಲ್ ಅರೆಸ್ಟ್ ವಂಚನೆಯ ಕುರಿತಾಗಿದೆ. ಸಂತ್ರಸ್ತೆ ಮತ್ತು ವಂಚಕನ ನಡುವೆ ಈ ಸಂಭಾಷಣೆ ನಡೆದಿದೆ. ಡಿಜಿಟಲ್  ಅರೆಸ್ಟ್ ನ ವಂಚನೆಯ ಪ್ರಕರಣದಲ್ಲಿ ಕರೆ ಮಾಡುವ ವ್ಯಕ್ತಿಗಳು ಕೆಲವೊಮ್ಮೆ ಪೊಲೀಸರು, ಕೆಲವೊಮ್ಮೆ ಸಿಬಿಐ, ಕೆಲವೊಮ್ಮೆ ನಾರ್ಕೋಟಿಕ್ಸ್, ಕೆಲವೊಮ್ಮೆ ಆರ್ ಬಿ ಐ ಹೀಗೆ ವಿವಿಧ ಹೆಸರುಗಳನ್ನು ಹೇಳುತ್ತಾರೆ ಮತ್ತು ಅಧಿಕಾರಿಗಳಂತೆ ಮಾತನಾಡುತ್ತಾರೆ ಮತ್ತು ತುಂಬಾ ವಿಶ್ವಾಸದಿಂದ ಹೀಗೆ ಮಾಡುತ್ತಾರೆ. ಈ ವಿಷಯದ ಬಗ್ಗೆ ಮಾತನಾಡಲೇ ಬೇಕೆಂದು ಮನ್ ಕಿ ಬಾತ್ ನ ಬಹಳಷ್ಟು ಶ್ರೋತೃಗಳು ಹೇಳಿದ್ದಾರೆ. ಬನ್ನಿ, ಈ ವಂಚನೆ ಮಾಡುವ ಗ್ಯಾಂಗ್ ಹೇಗೆ ಕೆಲಸ ಮಾಡುತ್ತದೆ, ಈ ಅಪಾಯಕಾರಿ ಆಟವೇನೆಂದು ನಾನು ನಿಮಗೆ ಹೇಳುತ್ತೇನೆ. ನೀವು ಇದರ ಕುರಿತು ಅರ್ಥಮಾಡಿಕೊಳ್ಳುವುದು ಮತ್ತು ಇದನ್ನು ಇತರರಿಗೂ ತಿಳಿಸಿ ಹೇಳುವುದು ಕೂಡಾ ಅತ್ಯಂತ ಅಗತ್ಯವಾಗಿದೆ. ಅವರ ಮೊದಲನೆಯ ಉಪಾಯ – ನಿಮ್ಮ ವೈಯಕ್ತಿಕ ಮಾಹಿತಿಯೆಲ್ಲವನ್ನೂ ಅವರು ಸಂಗ್ರಹಿಸಿರುತ್ತಾರೆ. “ನೀವು ಕಳೆದ ತಿಂಗಳು ಗೋವಾಗೆ ಹೋಗಿದ್ದಿರಲ್ಲವೇ? ನಿಮ್ಮ ಮಗಳು ದೆಹಲಿಯಲ್ಲಿ ಓದುತ್ತಿದ್ದಾಳಲ್ಲವೇ? ನೀವೇ ಆಶ್ಚರ್ಯಚಕಿತರಾಗುವ ರೀತಿಯಲ್ಲಿ ನಿಮ್ಮೆಲ್ಲಾ ಮಾಹಿತಿಯನ್ನು ಅವರು ಕಲೆ ಹಾಕಿ ಇರಿಸಿಕೊಂಡಿರುತ್ತಾರೆ. ಎರಡನೆಯ ಉಪಾಯ – ಭಯದ ವಾತಾವರಣ ಉಂಟುಮಾಡುವುದು, ಸಮವಸ್ತ್ರ, ಸರ್ಕಾರಿ ಕಛೇರಿಯ ಸೆಟಪ್, ಕಾನೂನಿನ ವಿಭಾಗಗಳು ಹೀಗೆ ದೂರವಾಣಿಯ ಮೂಲಕ ಅವರು ನಿಮ್ಮನ್ನು ಅದೆಷ್ಟು ಹೆದರಿಸುತ್ತಾರೆಂದರೆ ನಿಮಗೆ ಆಲೋಚಿಸಲೂ ಸಾಧ್ಯವಾಗುವುದಿಲ್ಲ. ನಂತರ ಅವರು ಮಾಡುವ ಮೂರನೇ ಕೆಲಸ – ಸಮಯದ ಒತ್ತಡ ಹಾಕುತ್ತಾರೆ, ‘ಈಗಲೇ ನಿರ್ಧಾರಕ್ಕೆ ಬರಬೇಕು, ಇಲ್ಲದಿದ್ದಾರೆ ಬಂಧಿಸಬೇಕಾಗುತ್ತದೆ”, - ಈ ಜನರು ಪೀಡಿತರ ಮೇಲೆ ಅದೆಷ್ಟು ಮಾನಸಿಕವಾಗಿ ಒತ್ತಡ ಹೇರುತ್ತಾರೆಂದರೆ ಅವರು ಹೆದರಿಬಿಡುತ್ತಾರೆ. Digital arrest ವಂಚನೆಗೆ ಬಲಿಯಾದವರ ಪೈಕಿ ಪ್ರತಿಯೊಂದು ವರ್ಗದ, ಪ್ರತಿಯೊಂದು ವಯಸ್ಸಿನ ಜನರು ಸೇರಿದ್ದಾರೆ. ಜನರು ಭಯದ ಕಾರಣದಿಂದಲೇ ತಮ್ಮ ಶ್ರಮದಿಂದ ಗಳಿಸಿದ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದಾರೆ. ನಿಮಗೆ ಎಂದಾದರೂ ಈ ರೀತಿಯ ಕರೆ ಬಂದರೆ ನೀವು ಹೆದರಬಾರದು. ಯಾವುದೇ ತನಿಖಾ ಸಂಸ್ಥೆ, ದೂರವಾಣಿ ಕರೆ ಅಥವಾ ವಿಡಿಯೋ ಕರೆಯ ಮೂಲಕ ಈ ರೀತಿಯ ವಿಚಾರಣೆಯನ್ನು ಕೈಗೊಳ್ಳುವುದಿಲ್ಲ ಎನ್ನುವ ವಿಷಯ ನಿಮಗೆ ತಿಳಿದಿರಬೇಕು. ನಾನು ನಿಮಗೆ ಡಿಜಿಟಲ್ ಭದ್ರತೆಯ ಮೂರು ಹಂತಗಳನ್ನು ಹೇಳುತ್ತೇನೆ. ಈ ಮೂರು ಹಂತಗಳೆಂದರೆ ‘ತಾಳಿ, ಯೋಚಿಸಿ – ಕ್ರಮ ಕೈಗೊಳ್ಳಿ, -( रुको-सोचो-Action लो’)  ಕರೆ ಬಂದ ತಕ್ಷಣ, ತಾಳಿ, ಗಾಬರಿಯಾಗಬೇಡಿ, ಶಾಂತವಾಗಿರಿ, ತರಾತುರಿಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳಬೇಡಿ, ಯಾರಿಗೂ ನಿಮ್ಮ ವೈಯಕ್ತಿಕ ಮಾಹಿತಿ ನೀಡಬೇಡಿ. ಸಾಧ್ಯವಾದರೆ ಸ್ಕ್ರೀನ್ ಶಾಟ್ ತೆಗೆದುಕೊಳ್ಳಿ ಮತ್ತು ಖಂಡಿತವಾಗಿಯೂ ಕರೆ ರೆಕಾರ್ಡ್ ಮಾಡಿ. ತಾಳಿ – ಈ ಮೊದಲನೇ ಹಂತದ ನಂತರದ ಎರಡನೇ ಹಂತ- ಆಲೋಚಿಸಿ. ಯಾವುದೇ ಸರ್ಕಾರಿ ಸಂಸ್ಥೆ ದೂರವಾಣಿ ಮೂಲಕ ಇಂತಹ ಬೆದರಿಕೆ ಹಾಕುವುದಿಲ್ಲ, ಅಥವಾ ವಿಡಿಯೋ ಕರೆಯ ಮೂಲಕ ವಿಚಾರಣೆ ಮಾಡುವುದಿಲ್ಲ, ಅಥವಾ ಈ ರೀತಿ ಹಣ ಕೇಳುವುದಿಲ್ಲ – ಹೆದರಿಕೆಯಾದಲ್ಲಿ ಏನೋ ತಪ್ಪಾಗಿದೆ ಎಂದು ಅರ್ಥ ಮಾಡಿಕೊಳ್ಳಿ. ಮೊದಲ, ಎರಡನೇ ಹಂತದ ನಂತರ ಈಗ ಹೇಳುತ್ತೇನೆ ಮೂರನೇ ಹಂತದ ಬಗ್ಗೆ. ಮೊದಲ ಹಂತದಲ್ಲಿ ನಾನು ಹೇಳಿದೆ ತಾಳಿ ಎಂದು, ಎರಡನೇ ಹಂತದಲ್ಲಿ ನಾನು ಹೇಳಿದೆ ಆಲೋಚಿಸಿ ಎಂದು, ಮೂರನೇ ಹಂತದಲ್ಲಿ ನಾನು ಹೇಳುತ್ತೇನೆ ಕ್ರಮ ಕೈಗೊಳ್ಳಿ ಎಂದು. ರಾಷ್ಟ್ರೀಯ ಸೈಬರ್ ಸಹಾಯವಾಣಿ 1930 ಸಂಖ್ಯೆ ಡಯಲ್ ಮಾಡಿ, cybercrime.gov.in ನಲ್ಲಿ ವರದಿ ಮಾಡಿ, ಕುಟುಂಬ ಮತ್ತು ಪೊಲೀಸರಿಗೆ ತಿಳಿಯಪಡಿಸಿ, ಸಾಕ್ಷ್ಯಗಳನ್ನು ಸುರಕ್ಷಿತವಾಗಿ ಇರಿಸಿ.  ‘ತಾಳಿ’, ನಂತರ ‘ಆಲೋಚಿಸಿ’, ಮತ್ತು ನಂತರ ‘ಕ್ರಮ ಕೈಗೊಳ್ಳಿ’  ಈ ಮೂರು ಹಂತಗಳು ನಿಮ್ಮ ಡಿಜಿಟಲ್ ಸುರಕ್ಷತೆಯ ರಕ್ಷಕರಾಗುತ್ತವೆ.

ಸ್ನೇಹಿತರೆ, ನಾನು ಮತ್ತೊಮ್ಮೆ ಹೇಳುತ್ತೇನೆ digital arrest ನಂತಹ ಯಾವುದೇ ವ್ಯವಸ್ಥೆ ಕಾನೂನಿನಲ್ಲಿ ಇಲ್ಲ, ಇದು ಕೇವಲ ವಂಚನೆ, ಸುಳ್ಳು, ಮೋಸ ಮತ್ತು ಕಿಡಿಗೇಡಿಗಳ ಗುಂಪಿನ ಕಿತಾಪತಿಯಾಗಿದೆ ಮತ್ತು ಇದನ್ನು ಯಾರು ಮಾಡುತ್ತಿದ್ದಾರೋ ಅವರು ಸಮಾಜದ ಶತ್ರುಗಳು. digital arrest ನ ಹೆಸರಿನಲ್ಲಿ ನಡೆಯುತ್ತಿರುವ ವಂಚನೆಯನ್ನು ತಡೆಗಟ್ಟಲು, ಎಲ್ಲಾ ತನಿಖಾ ಸಂಸ್ಥೆಗಳು ರಾಜ್ಯ ಸರ್ಕಾರಗಳೊಂದಿಗೆ ಕೈಜೋಡಿಸಿ ಕೆಲಸ ಮಾಡುತ್ತಿವೆ. ಈ ಏಜೆನ್ಸಿಗಳ ನಡುವೆ ಸಮನ್ವಯ ಉಂಟುಮಾಡಲು ರಾಷ್ಟ್ರೀಯ ಸೈಬರ್ ಸಮನ್ವಯ ಕೇಂದ್ರ (National Cyber Co-ordination Centre) ರಚಿಸಲಾಗಿದೆ. ಇಂತಹ ವಂಚನೆಗಳನ್ನು ಮಾಡುವ ಸಾವಿರಾರು ವಿಡಿಯೋ ಕಾಲಿಂಗ್ ಐಡಿಗಳನ್ನು ಏಜೆನ್ಸಿಗಳ ಮೂಲಕ  ನಿರ್ಬಂಧಿಸಲಾಗಿದೆ.  ಲಕ್ಷಾಂತರ ಸಿಮ್ ಕಾರ್ಡ್, ಮೊಬೈಲ್ ಫೋನ್ ಮತ್ತು ಬ್ಯಾಂಕ್ ಖಾತೆಗಳನ್ನು ಕೂಡಾ ತಡೆಹಿಡಿಯಲಾಗಿದೆ. ಏಜೆನ್ಸಿಗಳು ತಮ್ಮ ಕೆಲಸ ಮಾಡುತ್ತಿವೆ ಆದರೆ, ಡಿಜಿಟಲ್ ಅರೆಸ್ಟ್ ನ ಹೆಸರಿನಲ್ಲಿ ನಡೆಯುತ್ತಿರುವ ಹಗರಣದಿಂದ ತಪ್ಪಿಸಿಕೊಳ್ಳುವುದು ಬಹಳ ಅಗತ್ಯವಾಗಿದೆ. ಇದಕ್ಕೆ ಪ್ರತಿಯೊಬ್ಬ ನಾಗರಿಕ ಜಾಗರೂಕನಾಗಿರುವುದು ಬಹಳ ಮುಖ್ಯ. ಈ ರೀತಿಯ ಸೈಬರ್ ವಂಚನೆಗೆ ಬಲಿಯಾದ ಜನರು ಆ ವಿಷಯವನ್ನು ಹೆಚ್ಚು ಹೆಚ್ಚು ಜನರಿಗೆ ಹೇಳಬೇಕು. ನೀವು ಜಾಗರೂಕತೆಗಾಗಿ #SafeDigitalIndia ದ ಬಳಕೆ ಮಾಡಬಹುದು. ಸೈಬರ್ ಹಗರಣದ ವಿರುದ್ಧದ ಅಭಿಯಾನದಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವಂತೆ ಶಾಲೆ ಮತ್ತು ಕಾಲೇಜುಗಳನ್ನು ನಾನು ಮನವಿ ಮಾಡುತ್ತೇನೆ. ಸಮಾಜದ ಪ್ರತಿಯೊಬ್ಬರ ಪ್ರಯತ್ನದಿಂದ ಮಾತ್ರ ನಾವು ಈ ಸವಾಲನ್ನು ಎದುರಿಸಲು ಸಾಧ್ಯ.

ನನ್ನ ಪ್ರೀತಿಯ ದೇಶವಾಸಿಗಳೇ, ನಮ್ಮ ಅನೇಕ ಶಾಲಾ ಮಕ್ಕಳು ಕ್ಯಾಲಿಗ್ರಫಿ ಅಂದರೆ ಸುಲೇಖದಲ್ಲಿ ಹೆಚ್ಚಿನ ಆಸಕ್ತಿ ಹೊಂದಿದ್ದಾರೆ. ಇದರಿಂದ ನಮ್ಮ ಕೈಬರಹ ಸ್ವಚ್ಛ,  ಸುಂದರ ಮತ್ತು ಆಕರ್ಷಕವಾಗುತ್ತದೆ. ಇಂದು ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಜನಪ್ರಿಯವಾಗಿಸಲು ಇದರ ಬಳಕೆ ಮಾಡಲಾಗುತ್ತಿದೆ. ಇಲ್ಲಿನ ಅನಂತ್ ನಾಗ್ ನ ಫಿರ್ದೌಸಾ ಬಶೀರ್ ಅವರು   calligraphy ನಲ್ಲಿ ಪರಿಣತಿ ಹೊಂದಿದ್ದಾರೆ. ಇದರಿಂದ ಅವರು ಸ್ಥಳೀಯ ಸಂಸ್ಕೃತಿಯ ಹಲವು ಅಂಶಗಳನ್ನು ಮುಂದೆ ತರುತ್ತಿದ್ದಾರೆ. ಫಿರ್ದೌಸಾ ಅವರ calligraphy ಸ್ಥಳೀಯ ಜನರನ್ನು, ವಿಶೇಷವಾಗಿ ಯುವಜನತೆಯನ್ನು ತನ್ನೆಡೆಗೆ ಆಕರ್ಷಿಸಿದೆ. ಇಂತಹದ್ದೇ ಮತ್ತೊಂದು ಪ್ರಯತ್ನ ಉಧಮ್ ಪುರದ ಗೋರೀನಾಥ್ ಅವರು ಕೂಡಾ ಮಾಡುತ್ತಿದ್ದಾರೆ. ಒಂದು ಶತಮಾನಕ್ಕೂ ಹಳೆಯದಾದ ಸಾರಂಗಿಯ ಮೂಲಕ ಅವರು ಡೋಗ್ರಾ ಸಂಸ್ಕೃತಿ ಮತ್ತು ಪರಂಪರೆಯ ವಿಭಿನ್ನ ರೂಪಗಳ ಸಂರಕ್ಷಣೆಯಲ್ಲಿ ತೊಡಗಿಕೊಂಡಿದ್ದಾರೆ. ಸಾರಂಗಿಯ ಸ್ವರದೊಂದಿಗೆ ಅವರು ತಮ್ಮ ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿರುವ ಪ್ರಾಚೀನ ಕಥೆಗಳು ಮತ್ತು ಐತಿಹಾಸಿಕ ಘಟನೆಗಳನ್ನು ಆಕರ್ಷಕ ರೀತಿಯಲ್ಲಿ ಹೇಳುತ್ತಾರೆ. ದೇಶದ ಬೇರೆ ಬೇರೆ ಭಾಗಗಳಲ್ಲಿ ಕೂಡಾ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಲು ಮುಂದಾಗುತ್ತಿರುವ ಇಂತಹ ಅಸಾಮಾನ್ಯ ವ್ಯಕ್ತಿಗಳು ಕಾಣಸಿಗುತ್ತಾರೆ.  ಡಿ. ವೈಕುಂಠಮ್ ಅವರು ಸುಮಾರು 50 ವರ್ಷಗಳಿಂದ ಚೆರಿಯಾಲ್ ಜಾನಪದ ಕಲೆಯನ್ನು ಜನಪ್ರಿಯವಾಗಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.  ತೆಲಂಗಾಣಾದೊಂದಿಗೆ ಬೆಸೆದುಕೊಂಡಿರುವ ಈ ಕಲೆಯನ್ನು ಮುಂದಕ್ಕೆ ಕೊಂಡೊಯ್ಯುವ ಅವರ ಪ್ರಯತ್ನ ಬಹಳ ಉತ್ತಮವಾಗಿದೆ. ಚೆರಿಯಾಲ್ ಪೈಂಟಿಂಗ್ಸ್ ತಯಾರಿಸುವ ಪ್ರಕ್ರಿಯ ಅತ್ಯಂತ ವಿಶಿಷ್ಟವಾಗಿದೆ. ಇದು ಒಂದು scroll ನ ರೂಪದಲ್ಲಿ ಕಥೆಗಳನ್ನು ಮುಂದೆ ತರುತ್ತದೆ. ಇದರಲ್ಲಿ ನಮ್ಮ ಚರಿತ್ರೆ, ಮತ್ತು ಪುರಾಣಗಳ ಸಂಪೂರ್ ನೋಟ ದೊರೆಯುತ್ತದೆ. ಛತ್ತೀಸ್ ಗಢದಲ್ಲಿ ನಾರಾಯಣಪುರದ ಬುಟ್ಲೂರಾಮ್ ಮಾಥ್ರಾ ಅವರು ಅಬೂಜಮಾಡಿಯಾ ಬುಡಕಟ್ಟು ಜನಾಂಗದ ಜಾನಪದ ಕಲೆಯನ್ನು ಸಂರಕ್ಷಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಕಳೆದ ನಾಲ್ಕು ದಶಕಗಳಿಂದ ಅವರು ಈ ಅಭಿಯಾನದಲ್ಲಿ ತೊಡಗಿಸಿಕೊಂಡಿದ್ದಾರೆ. ‘ಬೇಟಿ ಬಚಾವೋ-ಬೇಟಿ ಪಢಾವೋ‘ ಮತ್ತು ‘ಸ್ವಚ್ಛ ಭಾರತ‘ ದಂತಹ ಅಭಿಯಾನಗಳೊಂದಿಗೆ ಜನರನ್ನು ಸಂಪರ್ಕಿಸುವಲ್ಲಿ ಅವರ ಈ ಕಲೆ ತುಂಬಾ ಪರಿಣಾಮಕಾರಿಯಾಗಿದೆ.

ಸ್ನೇಹಿತರೆ, ಕಾಶ್ಮೀರದ ಕಣಿವೆಗಳಿಂದ ಹಿಡಿದು ಛತ್ತೀಸ್ ಗಢದ ಅರಣ್ಯಗಳವರೆಗೆ ನಮ್ಮ ಕಲೆ ಮತ್ತು ಸಂಸ್ಕೃತಿ ಹೊಸ ಹೊಸ ಬಣ್ಣಗಳನ್ನು ಹರಡುತ್ತಿದೆ ಎಂದು ನಾವು ಈಗ ಮಾತನಾಡುತ್ತಿದ್ದೆವು, ಆದರೆ ಈ ಮಾತು ಇಲ್ಲಿಗೆ ಕೊನೆಗೊಳ್ಳುವುದಿಲ್ಲ. ನಮ್ಮ ಈ ಕಲೆಗಳ ಸುವಾಸನೆ ದೂರ ದೂರದವರೆಗೂ ಹರಡುತ್ತಿದೆ. ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಜನರು ಭಾರತೀಯ ಕಲೆ ಮತ್ತು ಸಂಸ್ಕೃತಿಯಿಂದ ಮಂತ್ರಮುಗ್ಧರಾಗುತ್ತಿದ್ದಾರೆ. ನಾನು ನಿಮಗೆ ಉಧಮ್ ಪುರದಲ್ಲಿ ಅನುರಣಿಸುವ ಸಾರಂಗಿಯ ಬಗ್ಗೆ ಹೇಳುತ್ತಿರುವಾಗ, ಸಾವಿರಾರು ಮೈಲಿಗಳ ದೂರದಲ್ಲಿರುವ ರಷ್ಯಾದ ಯಾಕೂತ್ಸಕ್ ನಗರದಲ್ಲಿ ಕೂಡಾ ಭಾರತೀಯ ಕಲೆಯ ಮಧುರ ರಾಗ ಅನುರಣಿಸುತ್ತಿರುವುದು   ನನಗೆ ನೆನಪಾಯಿತು. ಚಳಿಗಾಲದ ದಿನ, ಮೈನಸ್ 65 ಡಿಗ್ರಿ ತಾಪಮಾನ, ನಾಲ್ಕೂ ದಿಕ್ಕಿನಲ್ಲಿ ಹಿಮದ ಬಿಳಿ ಹೊದಿಕೆ ಮತ್ತು ಅಲ್ಲಿನ ಒಂದು ಥಿಯೇಟರ್ ನಲ್ಲಿ ಜನರು ಮಂತ್ರಮುಗ್ಧರಾಗಿ ಕಾಳಿದಾಸನ ಅಭಿಜ್ಞಾನ ಶಾಕುಂತಲಂ ವೀಕ್ಷಿಸುತ್ತಿರುವುದನ್ನು ಊಹಿಸಿಕೊಳ್ಳಿ. ವಿಶ್ವದ ಅತ್ಯಂತ ಶೀತಲ ನಗರವಾದ ಯಾಕುಟ್ಸಕ್ ನಲ್ಲಿ ಭಾರತೀಯ ಸಾಹಿತ್ಯದ ಬೆಚ್ಚನೆಯ ಶಾಖವನ್ನು ನೀವು ಊಹಿಸಬಹುದೇ? ಇದು ಕಲ್ಪನೆಯಲ್ಲ ಸತ್ಯ – ನಮ್ಮೆಲ್ಲರ ಮನಸ್ಸನ್ನೂ ಹೆಮ್ಮೆ ಮತ್ತು ಆನಂದದಿಂದ ತುಂಬುವಂತೆ ಮಾಡುವ ಸತ್ಯವಾದ ವಿಷಯ ಇದು.

ಸ್ನೇಹಿತರೇ, ಕೆಲವು ವಾರಗಳ ಹಿಂದೆ, ನಾನು ಲಾವೋಸ್ ಗೆ ಹೋಗಿದ್ದೆ. ಅದು ನವರಾತ್ರಿಯ ಸಮಯವಾಗಿತ್ತು ಮತ್ತು ನಾನು ಅಲ್ಲಿ ಕೆಲವು ಅದ್ಭುತಗಳನ್ನು ಕಂಡೆ. ಸ್ಥಳೀಯ ಕಲಾವಿದರು “ಫಲಕ್ ಫಲಮ್” ‘ಲಾವೋಸ್ ನ ರಾಮಾಯಣ’ ಪ್ರಸ್ತುತ ಪಡಿಸುತ್ತಿದ್ದರು. ಅವರ ಕಣ್ಣುಗಳಲ್ಲಿ ನಮ್ಮ ಮನದಲ್ಲಿ ರಾಮಾಯಣದ ಬಗ್ಗೆ ಇರುವ ಅದೇ ಭಕ್ತಿ, ಅವರ ಧ್ವನಿಯಲ್ಲಿ ಅದೇ ಸಮರ್ಪಣಾ ಭಾವ ಎದ್ದು ಕಾಣುತ್ತಿತ್ತು. ಇದೇ ರೀತಿ ಕುವೈತ್ ನಲ್ಲಿ ಶ್ರೀ ಅಬ್ದುಲ್ಲಾ ಅಲ್ ಬಾರುನ್ ಅವರು ರಾಮಾಯಣ ಮತ್ತು ಮಹಾಭಾರತವನ್ನು ಅರಬ್ ಬಾಷೆಗೆ ಅನುವಾದ ಮಾಡಿದ್ದಾರೆ. ಇದು ಕೇವಲ ಅನುವಾದ ಮಾತ್ರವಲ್ಲ ಎರಡು ಮಹಾನ್ ಸಂಸ್ಕೃತಿಗಳ ನಡುವಿನ ಒಂದು ಸೇತುವೆಯಾಗಿದೆ. ಅವರ ಈ ಪ್ರಯತ್ನ ಅರಬ್ ಜಗತ್ತಿನಲ್ಲಿ ಭಾರತೀಯ ಸಾಹಿತ್ಯದ ಹೊಸ ಅರಿವನ್ನು ಮೂಡಿಸುತ್ತಿದೆ. ಪೆರುವಿನಲ್ಲಿ ಮತ್ತೊಂದು ಪ್ರೇರಣಾದಾಯಕ ಉದಾಹರಣೆಯಿದೆ. ಎರ್ಲಿಂದಾ ಗ್ರಾಸಿಯಾ (Erlinda Garcia) ಅವರು ಅಲ್ಲಿನ ಯುವಜನತೆಗೆ ಭರತನಾಟ್ಯ ಕಲಿಸುತ್ತಿದ್ದಾರೆ ಮತ್ತು ಮಾರಿಯಾ ವಾಲ್ಡೇಜ್  (Maria Valdez) ಒಡಿಶಾ ನೃತ್ಯದ ತರಬೇತಿ ನೀಡುತ್ತಿದ್ದಾರೆ. ಈ ಕಲೆಗಳಿಂದ ಪ್ರಭಾವಿತರಾಗಿ, ದಕ್ಷಿಣ ಅಮೆರಿಕಾದ ಅನೇಕ ದೇಶಗಳಲ್ಲಿ ‘ಭಾರತೀಯ ಶಾಸ್ತ್ರೀಯ ನೃತ್ಯದ’ ಜನಪ್ರಿಯತೆ ಹೆಚ್ಚಾಗುತ್ತಿದೆ.

ಸ್ನೇಹಿತರೇ, ವಿದೇಶೀ ನೆಲದಲ್ಲಿ ಭಾರತದ ಈ ಉದಾಹರಣೆಗಳು ಭಾರತೀಯ ಸಂಸ್ಕೃತಿಯ ಶಕ್ತಿ ಎಷ್ಟೊಂದು ಅದ್ಭುತವೆಂಬುದನ್ನು ಪ್ರದರ್ಶಿಸುತ್ತದೆ. ಇದು ವಿಶ್ವವನ್ನು ನಿರಂತರವಾಗಿ ತನ್ನತ್ತ ಆಕರ್ಷಿಸುತ್ತಿದೆ.

“ಎಲ್ಲೆಲ್ಲಿ ಕಲೆ ಇದೆಯೋ ಅಲ್ಲೆಲ್ಲಾ ಭಾರತವಿದೆ”,

“ಎಲ್ಲೆಲ್ಲಿ ಸಂಸ್ಕೃತಿ ಇದೆಯೋ ಅಲ್ಲೆಲ್ಲಾ ಭಾರತವಿದೆ”

ಇಂದು ವಿಶ್ವಾದ್ಯಂತ ಜನರು ಭಾರತದ ಬಗ್ಗೆ, ಭಾರತದ ಜನತೆಯ ಬಗ್ಗೆ ತಿಳಿಯಲು ಇಷ್ಟಪಡುತ್ತಿದ್ದಾರೆ. ಆದ್ದರಿಂದ ನಿಮ್ಮ ಸುತ್ತಮುತ್ತಲಿನ ಇಂತಹ ಸಾಂಸ್ಕೃತಿಕ ಉಪಕ್ರಮವನ್ನು #CulturalBridges ನಲ್ಲಿ ಹಂಚಿಕೊಳ್ಳಬೇಕೆನ್ನುವುದು ನಿಮ್ಮೆಲ್ಲರಲ್ಲಿ ನನ್ನ ಮನವಿ. ‘ಮನದ ಮಾತಿನಲ್ಲಿ’ ನಾವು ಇಂತಹ ಉದಾಹರಣೆಗಳ ಬಗ್ಗೆ ಮುಂದೆಯೂ ಮಾತನಾಡೋಣ.

ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಹೆಚ್ಚಿನ ಭಾಗಗಳಲ್ಲಿ ಚಳಿಗಾಲದ ಋತು ಆರಂಭವಾಗಿದೆ, ಆದರೆ ಫಿಟ್ನೆಸ್ ನ ಉತ್ಸಾಹ, ತವಕ, ಫಿಟಿ ಇಂಡಿಯಾದ ಸ್ಫೂರ್ತಿ ಇವುಗಳ ಮೇಲೆ ಯಾವುದೇ ಋತುವಿನಿಂದ ಯಾವುದೇ ವ್ಯತ್ಯಾಸ ಉಂಟಾಗುವುದಿಲ್ಲ. ಯಾರು ಆರೋಗ್ಯದಿಂದ ಸದೃಢರಾಗಿರುತ್ತಾರೆ ಅವರಿಗೆ ಚಳಿಗಾಲ, ಬೇಸಿಗೆ ಕಾಲ, ಮಳೆಗಾಲ ಯಾವುದೂ ಗಮನಕ್ಕೆ ಬರುವುದಿಲ್ಲ. ಭಾರತದಲ್ಲಿ ಈಗ ಜನರು ಆರೋಗ್ಯದಿಂದ ಸದೃಢವಾಗಿರುವ ನಿಟ್ಟಿನಲ್ಲಿ ಬಹಳ ಗಮನ ಹರಿಸುತ್ತಿದ್ದಾರೆ ಎನ್ನುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ನಿಮ್ಮ ಸುತ್ತಮುತ್ತಲಿನ ಉದ್ಯಾನವನಗಳಲ್ಲಿ ಜನರ ಸಂಖ್ಯೆ ಹೆಚ್ಚಾಗುತ್ತಿರುವುದನ್ನು ನೀವು ಕೂಡಾ ಗಮನಿಸಿಯೇ ಇರುತ್ತೀರಿ. ವಯಸ್ಸಾದ ಹಿರಿಯರು, ನವಯುವಕ-ಯುವತಿಯರು, ಮತ್ತು ಯೋಗಾಭ್ಯಾಸ ಮಾಡುತ್ತಿರುವ ಕುಟುಂಬಗಳನ್ನು ನೋಡಿದಾಗ ನನಗೆ ಬಹಳ ಹರ್ಷವಾಗುತ್ತದೆ. ನಾನು ಯೋಗದಿನದಂದು ಶ್ರೀನಗರದಲ್ಲಿದ್ದಾಗ ಮಳೆ ಸುರಿಯುತ್ತಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ಜನರು ಯೋಗಕ್ಕಾಗಿ ಸೇರಿದ್ದರೆಂಬುದು ನನಗೆ ನೆನಪಿದೆ.  ಈಗ ಕೆಲವೇ ದಿನಗಳ ಹಿಂದೆ, ಶ್ರೀನಗರದಲ್ಲಿ ನಡೆದ ಮ್ಯಾರಥಾನ್ ನಲ್ಲಿ ಕೂಡಾ ಜನರಲ್ಲಿ ಸದೃಢರಾಗಿ ಇರಬೇಕೆನ್ನುವ ಜನರ ಉತ್ಸಾಹ ನನಗೆ ಕಂಡುಬಂತು. Fit India ದ ಈ ಭಾವನೆ ಈಗ ಒಂದು ಸಮೂಹ ಚಳವಳಿಯ ರೂಪ ತಳೆಯುತ್ತಿದೆ.

ಸ್ನೇಹಿತರೆ, ನಮ್ಮ ಶಾಲೆಗಳು, ಮಕ್ಕಳ ಫಿಟ್ನೆಸ್ ಬಗ್ಗೆ ಈಗ ಮತ್ತಷ್ಟು ಹೆಚ್ಚಿನ ಗಮನ ನೀಡುತ್ತಿರುವುದನ್ನು ನೋಡಿ ನನಗೆ ಬಹಳ ಸಂತೋಷವೆನಿಸುತ್ತದೆ. Fit India School Hours ಕೂಡಾ ಒಂದು ವಿಶಿಷ್ಟ ಉಪಕ್ರಮವಾಗಿದೆ. ಶಾಲೆಗಳು ತಮ್ಮ ಮೊದಲ ಪೀರಿಯಡ್ ಅನ್ನು ಬೇರೆ ಬೇರೆ ದೈಹಿಕ ಧಾರ್ಡ್ಯತೆಯ ಚಟುವಟಿಕೆಗಳಿಗಾಗಿ ಉಪಯೋಗಿಸಿ ಕೊಳ್ಳುತ್ತಿವೆ.  ಅನೇಕ ಶಾಲೆಗಳಲ್ಲಿ ಒಂದು ದಿನ ಮಕ್ಕಳಿಗೆ ಯೋಗಾಭ್ಯಾಸ ಮಾಡಿಸುತ್ತಿದ್ದರೆ ಮತ್ತೊಂದು ದಿನ ಏರೋಬಿಕ್ ಸೆಷನ್ ಇರುತ್ತದೆ. ಮತ್ತೊಂದು ದಿನ ಕ್ರೀಡಾ ಕೌಶಲ್ಯಗಳತ್ತ ಗಮನ ಹರಿಸಿದರೆ, ಮತ್ತೊಂದು ದಿನ ಖೋ-ಖೋ, ಕಬಡ್ಡಿಯಂತಹ ಸಾಂಪ್ರದಾಯಿಕ ಆಟಗಳನ್ನು ಆಡಿಸಲಾಗುತ್ತಿದೆ.  ಇವುಗಳ ಪರಿಣಾಮ ಬಹಳ ಅದ್ಭುತವಾಗಿದೆ. ಹಾಜರಾತಿ ಪ್ರಮಾಣ ಉತ್ತಮವಾಗುತ್ತಿದೆ, ಮಕ್ಕಳ ಏಕಾಗ್ರತೆ ಹೆಚ್ಚಾಗುತ್ತಿದೆ ಮತ್ತು ಮಕ್ಕಳಿಗೆ ಈ ಆಟಗಳಿಂದ ಸಂತೋಷ ಉಂಟಾಗುತ್ತಿದೆ.

ಸ್ನೇಹಿತರೆ, ನಾನು Wellness ನ ಈ ಶಕ್ತಿಯನ್ನು ಎಲ್ಲೆಡೆಯಲ್ಲೂ ನೋಡುತ್ತಿದ್ದೇನೆ. ಮನದ ಮಾತಿನ ಅನೇಕ ಶ್ರೋತೃಗಳು ತಮ್ಮ ಅನುಭವ ಕುರಿತು ನನಗೆ ತಿಳಿಯಪಡಿಸಿದ್ದಾರೆ. ಕೆಲವರಂತೂ ಅತ್ಯಂತ ಆಸಕ್ತಿಕರ ಪ್ರಯೋಗಗಳನ್ನು ಮಾಡುತ್ತಿದ್ದಾರೆ. ಉದಾಹರಣೆಗೆ ಹೇಳಬೇಕೆಂದರೆ, Family Fitness Hour ಅಂದರೆ, ಒಂದು ಕುಟುಂಬ, ಪ್ರತಿ ವಾರಾಂತ್ಯದಲ್ಲಿ ಒಂದು ಗಂಟೆ ಕಾಲ Family Fitness ಚಟುವಟಿಕೆಗಾಗಿ ಮೀಸಲಿಡುತ್ತಿದ್ದಾರೆ. ಮತ್ತೊಂದು ಉದಾಹರಣೆಯೆಂದರೆ ದೇಶೀಯ ಆಟಗಳ ಪುನರಾರಂಭ. ಅಂದರೆ ಕೆಲವು ಕುಟುಂಬಗಳು ತಮ್ಮ ಮಕ್ಕಳಿಗೆ ಸಾಂಪ್ರದಾಯಿಕ ಆಟಗಳನ್ನು ಕಲಿಸುತ್ತಿದ್ದಾರೆ, ಆಡಿಸುತ್ತಿದ್ದಾರೆ. ನೀವು ಕೂಡಾ ನಿಮ್ಮ Fitness ದಿನಚರಿಯ ಅನುಭವವನ್ನು #fitIndia ಹೆಸರಿನ Social Media ದಲ್ಲಿ ಖಂಡಿತವಾಗಿಯೂ ಶೇರ್ ಮಾಡಿ. ನಾನು ದೇಶವಾಸಿಗಳಿಗೆ ಒಂದು ಮಾಹಿತಿಯನ್ನು ಖಂಡಿತವಾಗಿಯೂ ನೀಡಲು ಬಯಸುತ್ತೇನೆ. ಈ ವರ್ಷ ಅಕ್ಟೋಬರ್ 31 ರಂದು ಸರ್ದಾರ್ ಪಟೇಲ್ ಅವರ ಜಯಂತಿಯ ದಿನದಂದೇ ದೀಪಾವಳಿ ಹಬ್ಬವೂ ಇದೆ. ನಾವು ಪ್ರತಿ ವರ್ಷ ಅಕ್ಟೋಬರ್ 31 ರಂದು “ರಾಷ್ಟ್ರೀಯ ಏಕತಾ ದಿನದಂದು” ‘ರನ್ ಫಾರ್ ಯುನಿಟಿ - ಏಕತೆಗಾಗಿ ಓಟ’ ಆಯೋಜಿಸುತ್ತೇವೆ. ದೀಪಾವಳಿ ಹಬ್ಬದ ಕಾರಣದಿಂದಾಗಿ ಈ ಬಾರಿ ಅಕ್ಟೋಬರ್ 29 ರಂದು ಅಂದರೆ ಮಂಗಳವಾರದಂದೇ ‘ಏಕತೆಗಾಗಿ ಓಟ’ ಆಯೋಜಿಸಲಾಗುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಈ ಓಟದಲ್ಲಿ ಪಾಲ್ಗೊಳ್ಳಿ, ದೇಶದ ಏಕತೆಯ ಮಂತ್ರದೊಂದಿಗೆ ಫಿಟ್ನೆಸ್ ನ ಮಂತ್ರವನ್ನು ಕೂಡಾ ಎಲ್ಲೆಡೆ ಪಸರಿಸಿ ಎನ್ನುವುದು ನಿಮ್ಮಲ್ಲೆರಲ್ಲಿ ನನ್ನ ಮನವಿ.

ನನ್ನ ಪ್ರೀತಿಯ ದೇಶಬಾಂಧವರೇ, ಈ ಬಾರಿಯ ‘ಮನದ ಮಾತು’ ಇಲ್ಲಿಗೆ ಮುಗಿಸೋಣ. ನೀವು ನಿಮ್ಮ ಸಲಹೆ-ಸೂಚನೆಗಳನ್ನು ನನಗೆ ಕಳುಹಿಸುತ್ತಿರಿ. ಇದು ಹಬ್ಬಗಳ ಕಾಲ. ಮನದ ಮಾತಿನ ಶ್ರೋತೃ ಬಾಂಧವರಿಗೆಲ್ಲಾ ಧನ್ ತೇರಸ್, ದೀಪಾವಳಿ, ಛಟ್ ಪೂಜಾ, ಗುರುನಾನಕ್ ಜಯಂತಿ ಹಾಗೂ ಎಲ್ಲಾ ಹಬ್ಬಗಳಿಗಾಗಿ ಅನೇಕಾನೇಕ ಶುಭ ಹಾರೈಕೆಗಳು. ನೀವೆಲ್ಲರೂ ಬಹಳ ಸಂತೋಷೋಲ್ಲಾಸಗಳಿಂದ ಹಬ್ಬಗಳನ್ನು ಆಚರಿಸಿ. ವೋಕಲ್ ಫಾರ್ ಲೋಕಲ್ ಮಂತ್ರವನ್ನು ನೆನಪಿಟ್ಟುಕೊಳ್ಳಿ. ಹಬ್ಬಗಳ ಕಾಲದಲ್ಲಿ ಸ್ಥಳೀಯ ಅಂಗಡಿಗಳಿಂದ ಖರೀದಿಸಿದ ವಸ್ತುಗಳು ಖಂಡಿತಾ ನಿಮ್ಮ ಮನೆಗಳಿಗೆ ಬರಲಿ. ಮತ್ತೊಮ್ಮೆ, ನಿಮ್ಮೆಲ್ಲರಿಗೂ ಮುಂಬರುವ ಹಬ್ಬಗಳಿಗಾಗಿ ಅನೇಕಾನೇಕ ಶುಭ ಹಾರೈಕೆಗಳು. ಧನ್ಯವಾದ.

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”