100 ಕೋಟಿ ಲಸಿಕೆ ಡೋಸ್‌ಗಳ ನಂತರ ಭಾರತವು ಹೊಸ ಉತ್ಸಾಹ ಮತ್ತು ಶಕ್ತಿಯೊಂದಿಗೆ ಮುನ್ನಡೆಯುತ್ತಿದೆ: ಪ್ರಧಾನಿ ಮೋದಿ
ರಾಜಪ್ರಭುತ್ವದ ರಾಜ್ಯಗಳನ್ನು ಒಂದು ರಾಷ್ಟ್ರವಾಗಿ ಒಂದುಗೂಡಿಸುವಲ್ಲಿ ಸರ್ದಾರ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದಾರೆ: ಪ್ರಧಾನಿ ಮೋದಿ
ಭಗವಾನ್ ಬಿರ್ಸಾ ಮುಂಡಾಗೆ ಪ್ರಧಾನಿ ಮೋದಿಯವರ ಸಮೃದ್ಧ ಗೌರವಗಳು; ಸ್ವಾತಂತ್ರ್ಯ ಚಳುವಳಿಯಲ್ಲಿ ಬುಡಕಟ್ಟು ಸಮುದಾಯದ ಬಗ್ಗೆ ಹೆಚ್ಚು ಓದಲು ಯುವಕರನ್ನು ಪ್ರೇರೇಪಿಸುತ್ತದೆ
ಪ್ರಧಾನಿ ಮೋದಿ: 1947-48 ರಲ್ಲಿ, ಯುಎನ್ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಸಿದ್ಧಪಡಿಸುವಾಗ, ಅದನ್ನು ಬರೆಯಲಾಯಿತು - "ಎಲ್ಲಾ ಪುರುಷರನ್ನು ಸಮಾನವಾಗಿ ರಚಿಸಲಾಗಿದೆ". ಆದರೆ ಭಾರತದ ಪ್ರತಿನಿಧಿಯೊಬ್ಬರು ಇದನ್ನು ವಿರೋಧಿಸಿದರು ಮತ್ತು ನಂತರ ಅದನ್ನು ಬದಲಾಯಿಸಲಾಯಿತು - "ಎಲ್ಲಾ ಮಾನವ ಜೀವಿಗಳನ್ನು ಸಮಾನವಾಗಿ ರಚಿಸಲಾಗಿದೆ"
ನಮ್ಮ ಮಹಿಳಾ ಪೊಲೀಸ್ ಸಿಬ್ಬಂದಿ ದೇಶದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ಮಾದರಿಯಾಗುತ್ತಿದ್ದಾರೆ: ಪ್ರಧಾನಿ ಮೋದಿ
ಡ್ರೋನ್‌ಗಳ ಸಹಾಯದಿಂದ ಹಳ್ಳಿಗಳ ಭೂಮಿಯ ಡಿಜಿಟಲ್ ದಾಖಲೆಗಳನ್ನು ತಯಾರಿಸುತ್ತಿರುವ ಭಾರತವು ವಿಶ್ವದ ಒಂದು ದೇಶವಾಗಿದೆ: ಪ್ರಧಾನಿ ಮೋದಿ
ಸ್ವಚ್ಛ ಭಾರತ ಅಭಿಯಾನದ ವೇಗವನ್ನು ಕಡಿಮೆ ಮಾಡಲು ನಾವು ಬಿಡುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ. ನಾವು ಒಟ್ಟಾಗಿ ನಮ್ಮ ದೇಶವನ್ನು ಸ್ವಚ್ಛಗೊಳಿಸುತ್ತೇವೆ: ಪ್ರಧಾನಿ ಮೋದಿ

ನನ್ನ ಪ್ರಿಯ ದೇಶವಾಸಿಗಳೇ, ಕೋಟಿ ಕೋಟಿ ನಮನ. ನಾನು ಕೋಟಿ ಕೋಟಿ ನಮಸ್ಕಾರ ಎಂದು ಏಕೆ ಹೇಳುತ್ತಿದ್ದೇನೆ ಎಂದರೆ ನೂರು ಕೋಟಿ ಲಸಿಕೆ ಡೋಸ್ ಗಳ ನಂತರ ಇಂದು ದೇಶ ಹೊಸ ಉತ್ಸಾಹ ಮತ್ತು ಹುರುಪಿನಿಂದ ಮುನ್ನಡೆಯುತ್ತಿದೆ. ನಮ್ಮ ಲಸಿಕೆ ಅಭಿಯಾನದ ಸಫಲತೆ, ಭಾರತದ ಸಾಮರ್ಥ್ಯವನ್ನು ತೋರುತ್ತದೆ. ಎಲ್ಲರ ಪ್ರಯತ್ನದ ಮಂತ್ರದ ಶಕ್ತಿಯನ್ನು ಸಾರುತ್ತದೆ.

ಸ್ನೇಹಿತರೆ, ನೂರು ಕೋಟಿ ಲಸಿಕೆಯ ಸಂಖ್ಯೆ ಬಹಳ ದೊಡ್ಡದಾಗಿದೆ. ಆದರೆ ಇದರಿಂದ ಲಕ್ಷಾಂತರ ಸಣ್ಣ ಪುಟ್ಟ ಪ್ರೇರಣಾತ್ಮಕ ಮತ್ತು ಹೆಮ್ಮೆಪಡುವಂತಹ ಅನೇಕ ಅನುಭವಗಳು ಮತ್ತು ಉದಾಹರಣೆಗಳು ಒಗ್ಗೂಡಿವೆ. ಬಹಳಷ್ಟು ಜನರು ಪತ್ರ ಬರೆದು ಲಸಿಕೀಕರಣದ ಆರಂಭದೊಂದಿಗೆಯೇ ಹೇಗೆ ನನಗೆ ಇದಕ್ಕೆ ಇಷ್ಟೊಂದು ಬೃಹತ್ ಸಫಲತೆ ದೊರೆಯುತ್ತದೆ ಎಂದು ತಿಳಿದಿತ್ತು ಎಂದು ನನ್ನನ್ನು ಕೇಳುತ್ತಿದ್ದಾರೆ. ನನಗೆ ಧೃಡ ವಿಶ್ವಾಸ ಇತ್ತು ಏಕೆಂದರೆ ನನ್ನ ದೇಶದ ಜನತೆಯ ಕ್ಷಮತೆ ನನಗೆ ಚೆನ್ನಾಗಿ ಗೊತ್ತು. ನಮ್ಮ ಆರೋಗ್ಯ ಕಾರ್ಯಕರ್ತರು ದೇಶದ ಜನರ ಲಸಿಕಾ ಅಭಿಯಾನದಲ್ಲಿ ಎಳ್ಳಷ್ಟೂ ಹಿಂದುಳಿಯುವುದಿಲ್ಲ ಎಂದು ನನಗೆ ಅರಿವಿತ್ತು. ನಮ್ಮ ಆರೋಗ್ಯ ಕಾರ್ಯಕರ್ತರು ನಿರಂತರ ಪರಿಶ್ರಮ ಮತ್ತು ಸಂಕಲ್ಪದೊಂದಿಗೆ ಹೊಸದೊಂದು ಮಾದರಿಯನ್ನು ಸೃಷ್ಟಿಸಿದರು.  ಅವರು ನಾವೀನ್ಯತೆಯೊಂದಿಗೆ ತಮ್ಮ ಧೃಡ ನಿಶ್ಚಯದಿಂದ ಮಾನವೀಯತೆಯ ಸೇವೆಗಾಗಿ ಹೊಸ ಮಾನದಂಡವನ್ನೇ ರಚಿಸಿದ್ದಾರೆ. ಅವರ ಬಳಿ ಅಗಣಿತ ಉದಾಹರಣೆಗಳಿವೆ. ಅವರು ಹೇಗೆ ಎಲ್ಲ ಸವಾಲುಗಳನ್ನು ಮೀರಿ ಹೆಚ್ಚೆಚ್ಚು ಜನರಿಗೆ ಸುರಕ್ಷತೆಯ ಕವಚವನ್ನು ನೀಡಿದ್ದಾರೆ ಎಂಬುದನ್ನು ತೋರಿಸುತ್ತವೆ. ಈ ಕೆಲಸವನ್ನು ಮಾಡಲು ಇವರು ಅದೆಷ್ಟು ಪ್ರಯತ್ನಪಟ್ಟಿದ್ದಾರೆ ಎಂದು ನಾವು ಹಲವಾರು ಬಾರಿ ಪತ್ರಿಕೆಗಳಲ್ಲಿ ಓದಿದ್ದೇವೆ, ಇತರರಿಂದ ಕೇಳಿದ್ದೇವೆ. ಒಂದಕ್ಕಿಂತ ಒಂದರಂತೆ ಇಂತಹ ಅನೇಕ ಉದಾಹರಣೆಗಳು ನಮ್ಮೆದುರಿಗಿವೆ. ಇಂದು ನಾನು ಮನದ ಮಾತಿನ ಶ್ರೋತೃಗಳಿಗೆ ಉತ್ತರಾಖಂಡದ ಬಾಗೇಶ್ವರ್ ನ ಒಬ್ಬ ಆರೋಗ್ಯ ಕಾರ್ಯಕರ್ತರಾದ ಪೂನಮ್ ನೌತಿಯಾಲ್ ಅವರೊಂದಿಗೆ ಭೇಟಿ ಮಾಡಿಸಬಯಸುತ್ತೇನೆ.

ಸ್ನೇಹಿತರೆ, ಉತ್ತರಾಖಂಡದಲ್ಲಿ ನೂರಕ್ಕೆ ನೂರರಷ್ಟು ಪ್ರಥಮ ಡೋಸ್ ಲಸಿಕೆಯನ್ನು ಹಾಕಲಾಗಿದೆ. ಇವರು ಅದೇ ಉತ್ತರಾಖಂಡ್ ನ ಬಾಗೇಶ್ವರ್ ಪ್ರದೇಶದವರಾಗಿದ್ದಾರೆ. ಉತ್ತರಾಖಂಡ ಸರ್ಕಾರ ಕೂಡ ಅಭಿನಂದನೆಗೆ ಪಾತ್ರವಾಗಿದೆ. ಏಕೆಂದರೆ ಇದು ಬಹಳ ದುರ್ಗಮ ಮತ್ತು ಕಠಿಣ ಪ್ರದೇಶವಾಗಿದೆ. ಅದೇ ರೀತಿ ಇಂಥದೇ ಸವಾಲುಗಳ ಮಧ್ಯೆ ಹಿಮಾಚಲ ಕೂಡಾ ನೂರಕ್ಕೆ ನೂರು ಲಸಿಕೆ ಡೋಸ್ ಗಳನ್ನು ಪೂರ್ಣಗೊಳಿಸಿದೆ.  ಪೂನಂ ಅವರು ತಮ್ಮ ಕ್ಷೇತ್ರದ ಜನರ ಲಸಿಕೆ ಹಾಕುನ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಿದ್ದಾರೆ ಎಂದು ನನಗೆ ತಿಳಿಸಲಾಗಿದೆ.

ಪ್ರಧಾನಿ: ಪೂನಂ ಅವರೇ ನಮಸ್ಕಾರ

ಪೂನಂ ನೌಟಿಯಾಲ್: ಸರ್, ನಮಸ್ತೆ

ಪ್ರಧಾನಿ: ಪೂನಂ ಅವರೇ ನಿಮ್ಮ ಬಗ್ಗೆ ದೇಶದ ಜನತೆಗೆ ತಿಳಿಸಿಕೊಡಿ

ಪೂನಂ ನೌಟಿಯಾಲ್: ಸರ್ ನನ್ನ ಹೆಸರು ಪೂನಂ ನೌತಿಯಾಲ್. ಸರ್, ಉತ್ತರಾಖಂಡ್ ನ ಬಾಗೇಶ್ವರ್ ಜಿಲ್ಲೆಯ ಚಾನಿಕೋರಾಲಿ ಕೇಂದ್ರದಲ್ಲಿ ಕಾರ್ಯನಿರ್ವಹಸುತ್ತಿದ್ದೇನೆ. ನಾನು ಎ ಎನ್ ಎಂ ಆಗಿದ್ದೇನೆ.       

ಪ್ರಧಾನಿ: ಪೂನಂ ಅವರೇ ನನಗೆ ಬಾಗೇಶ್ವರ್ ಗೆ ಭೇಟಿ ನೀಡುವ ಅವಕಾಶ ಲಭಿಸಿದ್ದು ನನ್ನ ಸೌಭಾಗ್ಯವಾಗಿತ್ತು. ಅದು ಒಂದು ರೀತಿಯ ಪುಣ್ಯಕ್ಷೇತ್ರವಾಗಿದೆ. ಅಲ್ಲಿ ಪುರಾತನ ದೇವಾಲಯಗಳಿವೆ. ದಶಕಗಳ ಹಿಂದೆ ಜನರು ಹೇಗೆ ಕೆಲಸಮಾಡಿದ್ದರು ಎಂಬುದರ ಬಗ್ಗೆ ನಾನು ಬಹಳ ಪ್ರಭಾವಿತನಾಗಿದ್ದೆ. 

ಪೂನಂ ನೌತಿಯಾಲ್: ಹೌದು ಸರ್     

ಪ್ರಧಾನಿ: ಪೂನಂ ಅವರೇ ನಿಮ್ಮ ಕ್ಷೇತ್ರದ ಎಲ್ಲ ಜನರಿಗೆ ಲಸಿಕೆಯನ್ನು ಕೊಡಿಸಿದ್ದೀರಾ?

ಪೂನಂ ನೌಟಿಯಾಲ್:   ಹೌದು ಸರ್, ಎಲ್ಲರಿಗೂ ಲಸಿಕೆ ನೀಡಲಾಗಿದೆ.   

ಪ್ರಧಾನಿ: ನಿಮಗೆ ಯಾವುದೇ ರೀತಿ ಸಮಸ್ಯೆ ಎದುರಿಸಬೇಕಾಗಿತ್ತೇ?

ಪೂನಂ ನೌಟಿಯಾಲ್: ಹೌದು ಸರ್, ಮಳೆಯಾದಾಗಲೆಲ್ಲ ರಸ್ತೆ ತಡೆ ಆಗ್ತಾ ಇತ್ತು. ನಾವು ನದಿಯನ್ನು ದಾಟಿ ಹೋಗಿದ್ದೇವೆ, ಎನ್ ಹೆಚ್ ಸಿ ವಿ ಸಿ ಪ್ರಯುಕ್ತ ನಾವು ಮನೆಮನೆಗೆ ಹೋದಂತೆ ಈಗಲೂ ಮನೆ ಮನೆಗೆ ತೆರಳಿದ್ದೇವೆ, ವೃದ್ಧರು, ದಿವ್ಯಾಂಗರು, ಗರ್ಭವತಿಯರು, ಬಾಣಂತಿಯರು ಕೇಂದ್ರಕ್ಕೆ ಬರಲಾಗುತ್ತಿದ್ದಿಲ್ಲ

ಪ್ರಧಾನಿ: ಆದರೆ ಬೆಟ್ಟಪ್ರದೇಶದಲ್ಲಿ ಮನೆಗಳೂ ದೂರ ದೂರ ಇರುತ್ತವಲ್ಲವೇ

ಪೂನಂ ನೌಟಿಯಾಲ್: ಹೌದು ಸರ್,    

ಪ್ರಧಾನಿ: ಹಾಗಾದರೆ ಒಂದು ದಿನಕ್ಕೆ ಎಷ್ಟು ಲಸಿಕೆ ನೀಡಲಾಗುತ್ತಿತ್ತು

ಪೂನಂ ನೌಟಿಯಾಲ್: ಸರ್ ಕಿ ಮೀಟರ್ ಲೆಕ್ಕದಲ್ಲಿ….ಸರ್ 10 ಕಿ ಮೀ ಕೆಲವೊಮ್ಮೆ 8 ಕಿ ಮೀ

ಪ್ರಧಾನಿ: ಸರಿ, ಇಳಿಜಾರು ಪ್ರದೇಶದಲ್ಲಿ 8-10 ಕಿ ಮೀ ಎಂದರೇನು ತಿಳಿದಿರುವುದಿಲ್ಲ. ಬೆಟ್ಟ ಪ್ರದೇಶದ  8-10 ಕಿ ಮೀ ಎಂದರೆ ಪೂರ್ತಿ ದಿನ ಕಳೆದುಹೋಗುತ್ತದೆ ಎಂದು ನನಗೆ ತಿಳಿದಿದೆ.

ಪೂನಂ ನೌಟಿಯಾಲ್: ಹೌದು ಸರ್,      

ಪ್ರಧಾನಿ: ಆದರೆ ಇದು ಬಹಳ ಶ್ರಮದ ಕೆಲಸ, ಲಸಿಕೆಯ ಪರಿಕರಗಳನ್ನು ಹೊತ್ತೊಯ್ಯುವುದು ಕಷ್ಟ. ನಿಮಗೆ ಯಾರಾದರೂ ಸಹಾಯಕರಿದ್ದರೆ?

ಪೂನಂ ನೌಟಿಯಾಲ್: ಹೌದು ಸರ್, ತಂಡದಲ್ಲಿ ಐವರು ಇರುತ್ತಿದ್ದೆವು.      

ಪ್ರಧಾನಿ: ಹೌದಾ!

ಪೂನಂ ನೌಟಿಯಾಲ್: ಅದರಲ್ಲಿ ವೈದ್ಯರು, ಎ ಎನ್ ಎಂ, ಔಷಧಿ ವಿತರಕರು, ಆಶಾ ಮತ್ತು ದತ್ತಾಂಶ ಭರ್ತಿ ಮಾಡುವವರು ಇರುತ್ತಿದ್ದರು.      

ಪ್ರಧಾನಿ: ಹೌದಾ ದತ್ತಾಂಶ ಭರ್ತಿ ಮಾಡುತ್ತಿದ್ದರಾ? ಅಲ್ಲಿ ಸಂಪರ್ಕ ಸಾಧ್ಯವಿತ್ತೇ? ಅಲ್ಲೇ ಮಾಡುತ್ತಿದ್ದಿರೋ ಇಲ್ಲ ಭಾಗೇಶ್ವರಕ್ಕೆ ಬಂದು ಮಾಡುತ್ತಿದ್ದಿರೊ?

ಪೂನಂ ನೌಟಿಯಾಲ್: ಸರ್ ಕೆಲವು ಪ್ರದೇಶಗಳಲ್ಲಿ ಲಭ್ಯವಾಗುತ್ತಿತ್ತು ಕೆಲವೆಡೆಯ ದತ್ತಾಂಶವನ್ನು ಭಾಗೇಶ್ವರಕ್ಕೆ ಬಂದು ದಾಖಲಿಸುತ್ತಿದ್ದೆವು.

ಪ್ರಧಾನಿ: ಹೌದಾ, ನೀವು ಎಲ್ಲೆಗಳನ್ನು ಮೀರಿ ಜನರಿಗೆ ಲಸಿಕೆ ಹಾಕಿಸಿದ್ದೀರಿ ಎಂದು ನನಗೆ ತಿಳಿದುಬಂದಿದೆ. ನಿಮಗೆ ಈ ಆಲೋಚನೆ, ಈ ಕಲ್ಪನೆ ಹೇಗೆ ಬಂತು. ನೀವು ಹೇಗೆ ಸಾಧಿಸಿದಿರಿ?

ಪೂನಂ:ನಾವು ಸಂಪೂರ್ಣ ತಂಡದವರು ಒಬ್ಬ ವ್ಯಕ್ತಿಯೂ ಇದರಿಂದ ದೂರ ಉಳಿಯಬಾರದು, ನಮ್ಮ ದೇಶದಿಂದ ಕೊರೊನಾ ಹೊರ ಹಾಕಬೇಕು ಎಂದು ಸಂಕಲ್ಪ ಮಾಡಿದ್ದೆವು. ನಾನು ಮತ್ತು ಆಶಾ ಸೇರಿ ಗ್ರಾಮ ಮಟ್ಟದ ಪ್ರತಿಯೊಬ್ಬ ವ್ಯಕ್ತಿಯ ಲಸಿಕೆ  ಬಾಕಿ ಇರುವ ದಾಖಲೆಯನ್ನು ಸಿದ್ಧಪಡಿಸಿದೆವು. ನಂತರ ಅದರ ಪ್ರಕಾರ ಯಾರು ಕೇಂದ್ರಕ್ಕೆ ಬಂದರೂ ಅವರಿಗೆ ಅಲ್ಲಿಯೇ ಲಸಿಕೆ ನೀಡಲಾಯಿತು. ನಂತರ ಮನೆ ಮನೆಗೆ ತೆರಳಿದೆವು. ನಂತರ ಬಾಕಿ ಉಳಿದವರು, ಕೇಂದ್ರಕ್ಕೆ ಬರಲಾಗದವರು….

ಪ್ರಧಾನಿ: ಸರಿ, ನೀವು ಜನರಿಗೆ ತಿಳಿ ಹೇಳಬೇಕಾಗುತ್ತಿತ್ತೇ?

ಪೂನಂ: ಹೌದು ಸರ್ ತಿಳಿಸಿ ಹೇಳಿದೆವು

ಪ್ರಧಾನಿ: ಜನರಲ್ಲಿ ಈಗಲೂ ಲಸಿಕೆ ಪಡೆಯುವ ಉತ್ಸಾಹವಿದೆಯೇ?

ಪೂನಂ: ಹೌದು ಸರ್, ಈಗ ಜನರಲ್ಲಿ ಅರಿವು ಮೂಡಿದೆ. ಆರಂಭದಲ್ಲಿ ನಮಗೆ ಬಹಳ ತೊಂದರೆಯಾಯಿತು. ಜನರಿಗೆ ಈ ಲಸಿಕೆ ಸುರಕ್ಷಿತವಾಗಿದೆ, ಪರಿಣಾಮಕಾರಿಯಾಗಿದೆ, ನಾವೂ ತೆಗೆದುಕೊಂಡಿದ್ದೇವೆ, ನಾವು ಆರೋಗ್ಯವಾಗೇ ಇದ್ದೇವೆ, ನಿಮ್ಮ ಕಣ್ಣೆದುರಿಗೇ ಇದ್ದೇವೆ. ನಮ್ಮ ಸಿಬ್ಬಂದಿ ಎಲ್ಲರೂ ಲಸಿಕೆ ಪಡೆದಿದ್ದಾರೆ. ಎಲ್ಲರೂ ಚೆನ್ನಾಗಿದ್ದಾರೆ  ಎಂದು ತಿಳಿಸಿ ಹೇಳಬೇಕಾಗುತ್ತಿತ್ತು

ಪ್ರಧಾನಿ: ಲಸಿಕೆ ಹಾಕಿಸಿಕೊಂಡ ಮೇಲೆ ದೂರುಗಳೇನಾದರೂ ಇದ್ದವೇ?

ಪೂನಂ: ಇಲ್ಲ ಸರ್, ಯಾವ ಬಗೆಯ ದೂರೂ ಇರಲಿಲ್ಲ.

ಪ್ರಧಾನಿ: ಏನೂ ಆಗಲಿಲ್ಲವೆ?

ಪೂನಂ: ಇಲ್ಲ ಸರ್

ಪ್ರಧಾನಿ: ಎಲ್ಲರೂ ಸಂತಸಪಟ್ಟರೆ?

ಪೂನಂ: ಹೌದು ಸರ್

ಪ್ರಧಾನಿ: ಆರೋಗ್ಯ ಚೆನ್ನಾಗಿತ್ತೇ?

ಪೂನಂ: ಹೌದು ಸರ್

ಪ್ರಧಾನಿ: ತುಂಬಾ ಸಂತೋಷ ನೀವು ಬಹು ದೊಡ್ಡ ಕೆಲಸ ಮಾಡಿದ್ದೀರಿ.  ಈ ಕ್ಷೇತ್ರ ಎಷ್ಟು ದುರ್ಗಮವಾದದ್ದು ಎಂದು ನನಗೆ ಗೊತ್ತು. ಬೆಟ್ಟ ಪ್ರದೇಶದ್ಲಲಿ ಕಾಲ್ನಡಿಗೆಯಲ್ಲಿ ಸಾಗುವುದು!, ಒಂದು ಬೆಟ್ಟ ಹತ್ತಬೇಕು ಮತ್ತೆ ಇಳಿಯಬೇಕು ಅದೂ ಅಲ್ಲದೆ ಮನೆಯೂ ದೂರ ದೂರ ಇರುತ್ತವೆ. ಇದೆಲ್ಲದರ ಹೊರತಾಗಿ ನೀವು ಅದ್ಭುತ ಕೆಲಸ ಮಾಡಿದ್ದೀರಿ. 

ಪೂನಂ: ಧನ್ಯವಾದಗಳು ಸರ್, ನಿಮ್ಮೊಂದಿಗೆ ಮಾತನಾಡಿದ್ದು ನನ್ನ ಸೌಭಾಗ್ಯ.

ಪ್ರಧಾನಿ: ನಿಮ್ಮಂತಹ ಲಕ್ಷಾಂತರ ಆರೋಗ್ಯ ಕಾರ್ಯಕರ್ತರ ಪರಿಶ್ರಮದಿಂದಲೇ ನೂರು ಕೋಟಿ ಲಸಿಕೆ ನೀಡುವ ಗುರಿಯ ಮೈಲಿಗಲ್ಲು ಸಾಧನೆ ಸಾಧ್ಯವಾಗಿದೆ. ಇಂದು ನಾನು ಕೇವಲ ನಿಮಗೆ ಮಾತ್ರ ಕೃತಜ್ಞತೆ ಸಲ್ಲಿಸುತ್ತಿಲ್ಲ, ಹೊರತಾಗಿ ‘ಎಲ್ಲರಿಗೂ ಲಸಿಕೆ ಉಚಿತ ಲಸಿಕೆ’ ಅಭಿಯಾನವನ್ನು ಇಷ್ಟು ಎತ್ತರಕ್ಕೆ ಕೊಂಡೊಯ್ದ ಮತ್ತು ಯಶಸ್ಸನ್ನು ತಂದುಕೊಟ್ಟ ಪ್ರತಿಯೊಬ್ಬ ಭಾರತೀಯನಿಗೂ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಿಮಗೂ ಮತ್ತು ನಿಮ್ಮ ಕುಟುಂಬಕ್ಕೂ ಅನಂತ ಶುಭಾಷಯಗಳು.

ನನ್ನ ಪ್ರಿಯ ದೇಶಬಾಂಧವರೆ, ಮುಂದಿನ ರವಿವಾರ 31 ಅಕ್ಟೋಬರ್ ಗೆ ಸರ್ದಾರ್ ಪಟೇಲರ ಜಯಂತಿಯಿದೆ ಎಂದು ನಿಮಗೆ ತಿಳಿದಿದೆ. ‘ಮನದ ಮಾತಿನ’ ಪ್ರತಿಯೊಬ್ಬ ಶ್ರೋತೃಗಳ ಪರವಾಗಿ ಮತ್ತು ನನ್ನ ಪರವಾಗಿ ನಾನು ಉಕ್ಕಿನ ಮನುಷ್ಯ ನಿಗೆ ನಮನ ಸಲ್ಲಿಸುತ್ತೇನೆ. ಸ್ನೇಹಿತರೆ, 31 ಅಕ್ಟೋಬರ್ ಅನ್ನು ‘ರಾಷ್ಟ್ರೀಯ ಏಕತೆಯ ದಿನ’ ವಾಗಿ ಆಚರಿಸುತ್ತೇವೆ. ಏಕತೆಯ ಸಂದೇಶವನ್ನು ಸಾರುವ ಒಂದಲ್ಲ ಒಂದು ಕೆಲಸದಲ್ಲಿ ನಮ್ಮನ್ನು ತೊಡಗಿಸಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕಛ್ ನ ಲಖಪತ್ ಕೋಟೆಯಿಂದ ಏಕತಾ ಪ್ರತಿಮೆವರೆಗೆ ಗುಜರಾತ್ ಪೋಲಿಸರು ಬೈಕ್ ರಾಲಿ ಆರಂಭಿಸಿರುವುದು ನಿಮಗೆ ತಿಳಿದಿರಬಹುದು. ತ್ರಿಪುರಾ ಪೋಲಿಸರು ಏಕತಾ ದಿನದಾಚರಣೆಗೆ ತ್ರಿಪುರಾದಿಂದ ಏಕತಾ ಪ್ರತಿಮೆವರೆಗೆ ಬೈಕ್ ರಾಲಿ ಹಮ್ಮಿಕೊಂಡಿದ್ದಾರೆ. ಅಂದರೆ ಪೂರ್ವದಿಂದ ಪಶ್ಚಿಮದವರೆಗೆ ದೇಶವನ್ನು ಒಗ್ಗೂಡಿಸುತ್ತಿದ್ದಾರೆ. ಜಮ್ಮು ಕಾಶ್ಮೀರದ ಪೋಲಿಸರು ಕೂಡ ಉರಿಯಿಂದ ಪಠಾನ್ ಕೋಟ್ ವರೆಗೆ ಇಂಥದ್ದೇ  ಬೈಕ್ ರಾಲಿ ಹಮ್ಮಿಕೊಂಡು ದೇಶದ ಏಕತೆಯ ಸಂದೇಶ ನೀಡುತ್ತಿದ್ದಾರೆ. ಈ ಎಲ್ಲ ಪೋಲಿಸ್ ಪಡೆಗೆ ನಾನು ನಮನ ಸಲ್ಲಿಸುತ್ತೇನೆ. ಜಮ್ಮು ಕಾಶ್ಮೀರದ ಕುಪ್ವಾಡಾ ಜಿಲ್ಲೆಯ ಬಹಳಷ್ಟು ಸೋದರಿಯರ ಬಗ್ಗೆ ನನಗೆ ಒಂದು ವಿಷಯ ತಿಳಿದಿದೆ. ಈ ಸೋದರಿಯರು ಕಾಶ್ಮೀರದಲ್ಲಿ ಸೇನೆ ಮತ್ತು ಸರ್ಕಾರಿ ಕಚೇರಿಗಳಿಗಾಗಿ ತ್ರಿವರ್ಣ ಧ್ವಜವನ್ನು ಸಿ ಸಿದ್ಧಪಡಿಸುವ  ಕೆಲಸದಲ್ಲಿ ತೊಡಗಿದ್ದಾರೆ. ಈ ಕೆಲಸ ದೇಶ ಭಕ್ತಿಯ ಭಾವನೆಯಿಂದ ತುಂಬಿದೆ. ನಾನು ಈ ಸೋದರಿಯರ ಉತ್ಸಾಹವನ್ನು ಪ್ರಶಂಸಿಸುತ್ತೇನೆ. ನೀವೂ ಭಾರತದ ಏಕತೆಗಾಗಿ, ಭಾರತದ ಶ್ರೇಷ್ಠತೆಗಾಗಿ ಏನನ್ನಾದರೂ ಖಂಡಿತ ಮಾಡಬೇಕು. ನಿಮ್ಮ ಮನಸ್ಸಿಗೆ ಅದೆಷ್ಟು ಸಂತೃಪ್ತಿ ಸಿಗುತ್ತದೋ ನೀವೇ ನೋಡಿ.

ಸ್ನೇಹಿತರೆ, ಸರ್ದಾರ್ ಅವರು ಹೀಗೆ ಹೇಳುತ್ತಿದ್ದರು- “ನಾವು ನಮ್ಮ ಒಗ್ಗಟ್ಟಿನ ಪ್ರಯತ್ನದಿಂದಲೇ ದೇಶವನ್ನು ಆಕಾಶದೆತ್ತರಕ್ಕೆ ಕೊಂಡೊಯ್ಯಬಲ್ಲೆವು. ನಮ್ಮಲ್ಲಿ ಏಕತೆಯಿಲ್ಲದಿದ್ದರೆ ನಮಗೆ ನಾವೇ ಹೊಸ ವಿಪತ್ತುಗಳಿಗೆ ಒಡ್ಡಿಕೊಳ್ಳುತ್ತೇವೆ.” ಅಂದರೆ ರಾಷ್ಟ್ರೀಯ ಏಕತೆಯಿಂದಲೇ ಅಭಿವೃದ್ಧಿ ಸಾಧ್ಯ. ನಾವು ಸರ್ದಾರ್ ಪಟೇಲರ ವಿಚಾರಗಳು ಮತ್ತು ಜೀವನದಿಂದ ಬಹಳಷ್ಟು ಕಲಿಯಬಹುದು. ದೇಶದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಕೂಡ ಇತ್ತೀಚೆಗೆ ಸರ್ದಾರ್ ಅವರ ಕುರಿತು ಒಂದು ಚಿತ್ರ ರೂಪದ ಜೀವನ ಚರಿತ್ರೆಯನ್ನು ಮುದ್ರಿಸಿದೆ. ನಮ್ಮ ಎಲ್ಲ ಯುವಜನತೆ ಇದನ್ನು ಖಂಡಿತ ಓದಲಿ ಎಂದು ನಾನು ಬಯಸುತ್ತೇನೆ. ಇದರಿಂದ ನಿಮಗೆ ಆಸಕ್ತಿಕರ ರೂಪದಲ್ಲಿ ಸರ್ದಾರ್ ಅವರ ಬಗ್ಗೆ ತಿಳಿಯುವ ಅವಕಾಶ ದೊರೆಯುತ್ತದೆ.   

ಪ್ರಿಯ ದೇಶಬಾಂಧವರೆ, ಜೀವನ ನಿರಂತರ ಪ್ರಗತಿಯನ್ನು ಬಯಸುತ್ತದೆ, ವಿಕಾಸವನ್ನು ಬಯಸುತ್ತದೆ. ಎತ್ತರಗಳನ್ನು ಸಾಧಿಸಬಯಸುತ್ತದೆ. ವಿಜ್ಞಾನ ಅದೆಷ್ಟೇ ಮುಂದುವರಿಯಲಿ, ಪ್ರಗತಿಯ ವೇಗ ಎಷ್ಟೇ ವೇಗವಾದರೂ, ಭವನಗಳು ಅದೆಷ್ಟೇ ಭವ್ಯವಾಗಿರಲಿ ಆದರೂ ಜೀವನ ಅಪೂರ್ಣವೆನಿಸುತ್ತದೆ. ಆದರೆ, ಇದರೊಂದಿಗೆ ಸಂಗೀತ-ಗಾಯನ, ಕಲೆ, ನೃತ್ಯ, ಸಾಹಿತ್ಯ ಬೆರೆತಾಗ ಇದರ ಸೆಳೆತ, ಜೀವಂತಿಕೆ ಬಹಳಷ್ಟು ಪಟ್ಟು ಹೆಚ್ಚಾಗುತ್ತದೆ. ಒಂದು ರೀತಿ ಜೀವನ ಸಾರ್ಥಕವಾಗಬೇಕಾದರೆ ಇವೆಲ್ಲವುಗಳ ಇರುವಿಕೆ ಅಷ್ಟೇ ಮಹತ್ವವಾಗುತ್ತದೆ. ಆದ್ದರಿಂದಲೇ ಇವೆಲ್ಲ ವಿಧಿ ವಿಧಾನಗಳು ನಮ್ಮ ಜೀವನದಲ್ಲಿ  ವೇಗವರ್ಧಕಗಳಂತೆ ಕೆಲಸ ಮಾಡುತ್ತವೆ. ನಮ್ಮ ಉತ್ಸಾಹವನ್ನು ಹೆಚ್ಚಿಸುತ್ತವೆ ಎಂದು ಹೇಳಲಾಗುತ್ತದೆ. ಮಾನವನ ಮನದ ಅಂತರಂಗದ ವಿಕಾಸಕ್ಕೆ, ನಮ್ಮ  ಅಂತರಂಗದ ಯಾತ್ರೆಯ ಪಯಣಕ್ಕೆ ಮಾರ್ಗ ರೂಪಿಸುವಲ್ಲಿಯೂ ಸಂಗೀತ-ಗಾಯನ ವಿವಿಧ ಕಲೆಗಳ ಬಹುದೊಡ್ಡ ಪಾತ್ರವಿರುತ್ತದೆ ಮತ್ತು ಇವುಗಳನ್ನು ಸಮಯ, ಸೀಮೆ, ಜಾತಿ ಮತ ಯಾವುದೂ ತಡೆಯಲಾಗದು ಎಂಬುದು ಇವುಗಳ  ಬಹುದೊಡ್ಡ ಶಕ್ತಿಯಾಗಿದೆ. ಅಮೃತ ಮಹೋತ್ಸವದಲ್ಲಿಯೂ ನಮ್ಮ ಕಲೆ, ಸಂಸ್ಕೃತಿ, ಗೀತೆ, ಸಂಗೀತದ ಬಣ್ಣಗಳನ್ನು ಖಂಡಿತ ಬೆರೆಸಲೇಬೇಕು. ನಿಮ್ಮಿಂದ ನನಗೂ ಅಮೃತ ಮಹೋತ್ಸವ ಮತ್ತು ಕಲೆ, ಗೀತೆ, ಸಂಗೀತದ ಶಕ್ತಿಯ ಬಗೆಗಿನ ಹಲವಾರು ಸಲಹೆ ಸೂಚನೆಗಳು ಬರುತ್ತಿವೆ.  ಈ ಸಲಹೆಗಳು ನನಗೆ ಬಹಳ ಅಮೂಲ್ಯವಾಗಿವೆ. ನಾನು ಅಧ್ಯಯನಕ್ಕೆ ಇವುಗಳನ್ನು ಸಂಸ್ಕೃತಿ ಸಚಿವಾಲಯಕ್ಕೆ ಕಳುಹಿಸಿದ್ದೆ.  ಸಚಿವಾಲಯ ಈ ಸಲಹೆ ಸೂಚನೆಗಳನ್ನು ಬಹಳ ಗಂಭೀರವಾಗಿ ಪರಿಗಣಿಸಿ ಇಷ್ಟೊಂದು ಕಡಿಮೆ ಸಮಯದಲ್ಲಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದೆ ಎಂದು ಹೇಳಲು ಸಂತೋಷವೆನಿಸುತ್ತದೆ. ದೇಶಭಕ್ತಿ ಗೀತೆಗಳ ಸ್ಪರ್ಧೆ ಎಂಬುದು ಈ ಸಲಹೆಗಳಲ್ಲಿ ಒಂದಾಗಿದೆ! ಸ್ವಾತಂತ್ರ್ಯ ಹೋರಾಟದಲ್ಲಿ ವಿವಿಧ ಭಾಷೆಗಳಲ್ಲಿ ದೇಶಭಕ್ತಿ ಗೀತೆಗಳು ಮತ್ತು ಭಜನೆಗಳು ಸಂಪೂರ್ಣ ರಾಷ್ಟ್ರವನ್ನು ಒಗ್ಗೂಡಿಸಿದ್ದವು. ಈಗ ಅಮೃತ ಮಹೋತ್ಸವದಲ್ಲಿ ನಮ್ಮ ಯುವ ಜನತೆ ದೇಶಭಕ್ತಿಯ ಗೀತೆಗಳನ್ನು ಬರೆದು ಈ ಸ್ಪರ್ಧೆಗೆ ಮತ್ತಷ್ಟು ಮೆರುಗು ತುಂಬಬಲ್ಲಬಹುದಾಗಿದೆ. ದೇಶಭಕ್ತಿ ಗೀತೆಗಳು ರಾಷ್ಟ್ರ ಭಾಷೆ ಅಥವಾ ಮಾತೃಭಾಷೆ ಇಲ್ಲವೆ ಇಂಗ್ಲೀಷ್ ನಲ್ಲಿಯೂ ಬರೆಯಬಹುದಾಗಿದೆ. ಆದರೆ ಈ ರಚನೆಗಳು ನವಭಾರತದ ಹೊಸ ವಿಚಾರಗಳನ್ನು ಹೊಂದಿರಬೇಕು. ದೇಶದ ಪ್ರಸ್ತುತ ಸಫಲತೆಯಿಂದ ಪ್ರೇರಣೆ ಪಡೆದು ಭವಿಷ್ಯದಲ್ಲಿ ದೇಶ ಸಂಕಲ್ಪ ಕೈಗೊಳ್ಳುವಂತಿರಬೇಕು. ಗ್ರಾಮ ಪಂಚಾಯ್ತಿಯಿಂದ ರಾಷ್ಟ್ರಮಟ್ಟದಲ್ಲಿ ಇದಕ್ಕೆ ಸಂಬಂಧಿಸಿದ ಸ್ಪರ್ಧೆಗಳನ್ನು ಏರ್ಪಡಿಸುವ ಸಿದ್ಧತೆ ಸಂಸ್ಕೃತಿ ಸಚಿವಾಲಯ ಮಾಡಿಕೊಳ್ಳುತ್ತಿದೆ.

ಸ್ನೇಹಿತರೆ, ಮನದ ಮಾತಿನ ಇಂಥ ಒಬ್ಬ ಶ್ರೋತೃ ಅಮೃತ ಮಹೋತ್ಸವದಲ್ಲಿ  ರಂಗೋಲಿ ಕಲೆಯನ್ನು ಬೆರೆಸಬಹುದು ಎಂಬ ಸಲಹೆ ನೀಡಿದ್ದಾರೆ. ನಮ್ಮಲ್ಲಿ ಹಬ್ಬಹರಿದಿನಗಳಲ್ಲಿ ಬಣ್ಣದ ರಂಗೋಲಿ ಬಿಡಿಸುವ ಪರಂಪರೆ ಶತಮಾನಗಳಿಂದಲೂ ಇದೆ. ರಂಗೋಲಿ ಮೂಲಕ ದೇಶದ ವಿವಿಧತೆಯ ದರ್ಶನವಾಗುತ್ತದೆ. ವಿವಿಧ ರಾಜ್ಯಗಳನ್ನು ಭಿನ್ನ ಭಿನ್ನವಾದ ಹೆಸರಿನಿಂದ ಹಲವು ಪರಿಕಲ್ಪನೆಗಳಿಂದ ರಂಗೋಲಿ ಬಿಡಿಸಲಾಗುತ್ತದೆ. ಹಾಗಾಗಿ ಸಂಸ್ಕೃತಿ ಸಚಿವಾಲಯ ಇದಕ್ಕೆ ಸಂಬಂಧಿಸಿದ ರಾಷ್ಟ್ರೀಯ ಸ್ಪರ್ಧೆಯೊಂದನ್ನು ಆಯೋಜಿಸಲಿದೆ. ನೀವು ಕಲ್ಪಿಸಿಕೊಳ್ಳಿ ಈಗ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ರಂಗೋಲಿ ಬಿಡಿಸಿದಾಗ ಜನರು ತಮ್ಮ ಮನೆಯ ಮುಂದೆ. ಗೋಡೆಗಳ ಮೇಲೆ ಸ್ವಾತಂತ್ರ್ಯ ಯೋಧರ ಚಿತ್ರವನ್ನು ಬಿಡಿಸುತ್ತಾರೆ, ಸ್ವಾತಂತ್ರ್ಯ ಹೋರಾಟದ ಘಟನೆಯೊಂದನ್ನು ಬಣ್ಣಗಳಲ್ಲಿ ತೋರ್ಪಡಿಸುತ್ತಾರೆ ಎಂದಾಗ ಅಮೃತ ಮಹೋತ್ಸವದ ಮೆರುಗು ಮತ್ತಷ್ಟು ವೃದ್ಧಿಸುತ್ತದೆ.

ಸ್ನೇಹಿತರೆ, ನಮ್ಮಲ್ಲಿ ಜೋಗುಳದ ಪರಂಪರೆಯೂ ಇದೆ. ನಮ್ಮಲ್ಲಿ ಪುಟ್ಟ ಮಕ್ಕಳಿಗೆ ಜೋಗುಳ ಹಾಡಿ ಸಂಸ್ಕಾರದ ಧಾರೆ ಎರೆಯಲಾಗುತ್ತದೆ ಸಂಸ್ಕೃತಿಯ ಪರಿಚಯ ಮಾಡಿಸಲಾಗುತ್ತದೆ. ಜೋಗುಳಕ್ಕೂ ತನ್ನದೇ ವೈವಿಧ್ಯತೆಯಿದೆ. ನಾವು ಅಮೃತ ಮಹೋತ್ಸವದಲ್ಲಿ ಈ ಕಲೆಯನ್ನೂ ಪುನರುಜ್ಜೀವನ ಮಾಡಬಹುದಲ್ಲವೇ! ದೇಶಭಕ್ತಿಗೆ ಸಂಬಂಧಿಸಿದ, ತಾಯಂದಿರು ತಮ್ಮ ಮನೆಗಳಲ್ಲಿ ಪುಟ್ಟ ಮಕ್ಕಳಿಗೆ ಕಲಿಸುವಂತಹ ಇಂಥ ಜೋಗುಳ ಪದಗಳನ್ನು, ಗೀತೆ, ಕವಿತೆ ಏನನ್ನಾದರೂ ಖಂಡಿತ ಬರೆಯಬಹುದು, ಈ ಜೋಗುಳಗಳಲ್ಲಿ ಆಧುನಿಕ ಭಾರತದ ಘಟನೆಗಳಿರಲಿ, 21 ನೇ ಶತಮಾನದ ಭಾರತದ ಕನಸುಗಳ ದರ್ಶನವಾಗಲಿ. ಎಲ್ಲ ಶ್ರೋತೃಗಳ ಸಲಹೆ ಸೂಚನೆಗಳನ್ನು ಪರಿಗಣಿಸಿ ಸಚಿವಾಲಯ ಈ ಎಲ್ಲ ಸ್ಪರ್ಧೆಗಳನ್ನು ಏರ್ಪಡಿಸುವ ನಿರ್ಣಯ ಕೈಗೊಂಡಿದೆ.

ಸ್ನೇಹಿತರೆ, ಈ ಮೂರು ಸ್ಪರ್ಧೆಗಳು 31 ಅಕ್ಟೋಬರ್ ದಂದು ಸರ್ದಾರ್ ಪಟೇಲರ ಜಯಂತಿಯಂದು ಆರಂಭಗೊಳ್ಳಲಿವೆ. ಮುಂಬರುವ ದಿನಗಳಲ್ಲಿ ಸಂಸ್ಕೃತಿ ಸಚಿವಾಲಯ ಇದಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿ ಒದಗಿಸಲಿದೆ. ಈ ಮಾಹಿತಿ ಸಚಿವಾಲಯದ ಜಾಲತಾಣದಲ್ಲಿಯೂ ಲಭ್ಯವಿರಲಿದೆ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ನೀಡಲಾಗುವುದು. ನೀವೆಲ್ಲರೂ ಇದರಲ್ಲಿ ಭಾಗವಹಿಸಲಿ ಎಂದು ನಾನು ಬಯಸುತ್ತೇನೆ. ನಮ್ಮ ಯುವಜನತೆ ಖಂಡಿತ ತಮ್ಮ ಕಲೆ ಮತ್ತು ಪ್ರತಿಭೆಯನ್ನು ಪ್ರದರ್ಶಿಸಲಿ. ಇದರಿಂದ ನಿಮ್ಮ ಪ್ರದೇಶದ ಕಲೆ ಮತ್ತು ಸಂಸ್ಕೃತಿ ದೇಶದ ಮೂಲೆ ಮೂಲೆಗೂ ತಲುಪುತ್ತದೆ. ನಿಮ್ಮ ಕಥೆಗಳನ್ನು ಸಂಪೂರ್ಣ ದೇಶ ಆಲಿಸಲಿದೆ.  

ಪ್ರೀತಿಯ ದೇಶವಾಸಿಗಳೇ, ಈಗ ನಾವು ಅಮೃತ ಮಹೋತ್ಸವದಲ್ಲಿ ದೇಶದ ವೀರ ಪುತ್ರ-ಪುತ್ರಿಯರನ್ನು, ಅವರ ಮಹಾನ್ ಪುಣ್ಯ ಆತ್ಮಗಳನ್ನು ನೆನಪಿಸಿಕೊಳ್ಳುತ್ತಿದ್ದೇವೆ. ಮುಂದಿನ ತಿಂಗಳು ನವೆಂಬರ್ 15 ರಂದು ನಮ್ಮ ದೇಶದ ಇಂತಹ ಮಹಾಪುರುಷ, ವೀರ ಸೈನಿಕ, ಭಗವಾನ್ ಬಿರಸಾ ಮುಂಡಾ ಅವರ ಜನ್ಮ ಜಯಂತಿ ಬರಲಿದೆ. ಭಗವಾನ್ ಬಿರಸಾ ಮುಂಡಾ ಅವರನ್ನು ಧರತೀಆಬಾ ಎಂದು ಕೂಡಾ ಕರೆಯುತ್ತಾರೆ. ಇದರ ಅರ್ಥವೇನೆಂದು ನಿಮಗೆ ಗೊತ್ತೇ?ಇದರ ಅರ್ಥ ಭೂಮಿತ ತಂದೆ ಎಂದು. ಭಗವಾನ್ ಬಿರಸಾ ಮುಂಡಾ ಅವರು ನಮ್ಮ ಸಂಸ್ಕೃತಿ, ನಮ್ಮ ಅರಣ್ಯ, ಭೂಮಿ ರಕ್ಷಣೆಯನ್ನುಮಾಡುತ್ತಿದ್ದರೋ ಅಂತಹ ಕೆಲಸವನ್ನು ಮಾಡಲು ಭೂಮಿಯ ತಂದೆ ಮಾತ್ರಾಮಾಡಬಲ್ಲರು. ಅವರು ನಮಗೆ ನಮ್ಮ ಸಂಸ್ಕೃತಿ ಮತ್ತು ಬೇರುಗಳ ಬಗ್ಗೆ ಹೆಮ್ಮೆ ಪಡುವುದನ್ನು ಕಲಿಸಿದರು. ವಿದೇಶೀ ಸರ್ಕಾರ ಅವರಿಗೆ ಎಷ್ಟೇ ಬೆದರಿಕೆ ಹಾಕಿದರೂ, ಎಷ್ಟೇ ಒತ್ತಡ ಹಾಕಿದರೂ, ಅವರು ತಮ್ಮ ಆದಿವಾಸಿ ಸಂಸ್ಕೃತಿಯನ್ನು ಬಿಡಲಿಲ್ಲ. ಪ್ರಕೃತಿ ಹಾಗೂ ಪರಿಸರವನ್ನು ಪ್ರೀತಿಸುವುದನ್ನು ನಾವು ಕಲಿಯಬೇಕೆಂದರೆ, ಅದಕ್ಕೆ ಕೂಡಾ ಧರತೀ ಆಬಾ ಭಗವಾನ್ ಬಿರಸಾ ಮುಂಡಾ ಅವರು ನಮಗೆ ಬಹಳ ದೊಡ್ಡ ಪ್ರೇರಣೆಯಾಗುತ್ತಾರೆ. ಪರಿಸರಕ್ಕೆ ಹಾನು ಉಂಟು ಮಾಡುವ ವಿದೇಶೀ ಆಡಳಿತ ಪ್ರತಿಯೊಂದು ನೀತಿಯನ್ನು ಕೂಡಾ ಅವರು ವಿರೋಧಿಸಿದರು. ಬಡವರು ಮತ್ತು ಸಮಸ್ಯೆಗಳಿಂದ ಬಳಲುತ್ತಿರುವ ಜನರಿಗೆ ಸಹಾಯ ಮಾಡಲು ಬಿರಸಾ ಮುಂಡಾ ಸದಾ ಮುಂದಾಗುತ್ತಿದ್ದರು. ಅವರು ಸಾಮಾಜಿಕ  ಅನಿಷ್ಠಗಳನ್ನು ತೊಡೆದು ಹಾಕಲು ಸಮಾಜದಲ್ಲಿ ಜಾಗರೂಕತೆ ಮೂಡಿಸಿದರು. ಉಲ್ಗುಲಾನ್ ಚಳುವಳಿಯಲ್ಲಿ ಅವರ ಮುಂದಾಳತ್ವವನ್ನು ಯಾರು ತಾನೇ ಮರೆಯಲು ಸಾಧ್ಯ. ಈ ಚಳುವಳಿಯು ಬ್ರಿಟಿಷರನ್ನು ನಡುಗಿಸಿಬಿಟ್ಟಿತು. ಇದಾದ ನಂತರ ಬ್ರಿಟಿಷರು ಭಗವಾನ್ ಬಿರಸಾ ಮುಂಡಾ ಅವರ ಮೇಲೆ ಬಹುದೊಡ್ಡ ಬಹುಮಾನ ಘೋಷಿಸಿತು. ಬ್ರಿಟಿಷ್ ಸರ್ಕಾರವು ಅವರನ್ನು ಸೆರೆಮನೆಗೆ ಕಳುಹಿಸಿತು, ಅವರಿಗೆ ಎಷ್ಟೊಂದು ಚಿತ್ರಹಿಂಸೆ ನೀಡಿತೆಂದರೆ, ಅವರು ತಮ್ಮ 25 ನೇವರ್ಷದಲ್ಲೇ ನಮ್ಮನ್ನು ಅಗಲಿದರು. ಅವರು ಶಾರೀರಿಕವಾಗಿ ಮಾತ್ರ ನಮ್ಮನ್ನು ಅಗಲಿದ್ದಾರೆ ಅಷ್ಟೇ. ಜನಮಾನಸದಲ್ಲಿ ಭಗವಾನ್ ಬಿರಸಾ ಅವರು ಚಿರಕಾಲ ನೆಲೆಸಿರುತ್ತಾರೆ. ಜನರಿಗೆ ಅವರ ಜೀವನ ಒಂದು ಪ್ರೇರಣಾ ಶಕ್ತಿಯಾಗಿದೆ. ಇಂದಿಗೂ ಅವರ ಸಾಹಸ ಮತ್ತು ಶೌರ್ಯ ಕುರಿತ ಜಾನಪದ ಗೀತೆಗಳು ಮತ್ತು ಕತೆಗಳು ಮಧ್ಯ ಭಾರತದಲ್ಲಿ ಬಹಳಷ್ಟು ಜನಪ್ರಿಯವಾಗಿವೆ. ನಾನು ಧರತೀ ಆಬಾ ಬಿರಸಾ ಮುಂಡಾ ಅವರಿಗೆ ನಮನಗಳನ್ನು ಸಲ್ಲಿಸುತ್ತೇನೆ, ಅವರ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಓದಬೇಕೆಂದು ಯುವಜನರಲ್ಲಿ ಮನವಿ ಮಾಡುತ್ತೇನೆ. ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನಮ್ಮ ಬುಡಕಟ್ಟು ಸಮುದಾಯದ ವಿಶಿಷ್ಟ ಕೊಡುಗೆಯ ಬಗ್ಗೆ ನೀವು ಎಷ್ಟು ತಿಳಿದುಕೊಳ್ಳುತ್ತೀರೋ ಅಷ್ಟೇ ಹಮ್ಮೆಯ ಭಾವನೆ ನಿಮ್ಮಲ್ಲಿ ಮೂಡುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಅಕ್ಟೋಬರ್ 24 ರಂದು, ಯುಎನ್ ದಿನ ಅಂದರೆ ವಿಶ್ವಸಂಸ್ಥೆಯ ದಿನವನ್ನಾಗಿ ಆಚರಿಸಲಾಗುತ್ತದೆ. ವಿಶ್ವ ಸಂಸ್ಥೆ ಸ್ಥಾಪನೆಯಾದ ದಿನ ಇಂದು. ವಿಶ್ವ ಸಂಸ್ಥೆ ಸ್ಥಾಪನೆಯಾದಾಗಿನಿಂದಲೂ  ಭಾರತ ಇದರೊಂದಿಗೆ ಸೇರಿದೆ. ಭಾರತಕ್ಕೆ ಸ್ವಾತಂತ್ರ್ಯ ದೊರೆಯುವುದಕ್ಕೆ ಮುನ್ನವೇ 1945 ರಲ್ಲ್ಲೇ ಭಾರತ ವಿಶ್ವ ಸಂಸ್ಥೆಯ ಚಾರ್ಟರ್ ಮೇಲೆ ತನ್ನ ಸಹಿ ಹಾಕಿದೆಯೆಂಬ ವಿಷಯ ನಿಮಗೆ ತಿಳಿದಿದೆಯೇ.  ವಿಶ್ವ ಸಂಸ್ಥೆಗೆ ಸಂಬಂಧಿಸಿದಂತೆ ಮತ್ತೊಂದು ವಿಶಿಷ್ಠ ಅಂಶವಿದೆ ಅದೆಂದರೆ ವಿಶ್ವ ಸಂಸ್ಥೆಯ ಪ್ರಭಾವ ಮತ್ತು ಅದರ ಸಾಮರ್ಥ್ಯ ವರ್ಧನೆಯಲ್ಲಿ ಭಾರತದ ನಾರೀಶಕ್ತಿಯು ಬಹು ದೊಡ್ಡ ಪಾತ್ರ ವಹಿಸಿದೆ. 1947-48 ರಲ್ಲಿ ವಿಶ್ವ ಸಂಸ್ಥೆ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ ಸಿದ್ಧವಾಗುತ್ತಿರುವಾಗ, ಆ ಘೋಷಣೆಯಲ್ಲಿ ಹೀಗೆ ಬರೆಯಲಾಗುತ್ತಿತ್ತು, “All Men are Created Equal”. ಆದರೆ, ಭಾರತದ ಪ್ರತಿನಿಧಿಯೊಬ್ಬರು ಇದನ್ನು ಬಲವಾಗಿ ವಿರೋಧಿಸಿದರು ನಂತರ ಸಾರ್ವತ್ರಿಕ ಘೋಷಣೆಯಲ್ಲಿ“All Human Beings are Created Equal” ಎಂದು ಬರೆಯಲಾಯಿತು. ಇದು ಲಿಂಗ ಸಮಾನತೆಯ ಭಾರತದ ಶತಮಾನದಷ್ಟು ಹಳೆಯದಾದ ಪರಂಪರೆಗೆ ಅನುಗುಣವಾಗಿತ್ತು. ಇದು ಸಾಧ್ಯವಾಗಿಸಿದ ಆ ಪ್ರತಿನಿಧಿ ಶ್ರೀಮತಿ ಹಂಸಾಮೆಹತಾ ಎಂದು ನಿಮಗೆ ಗೊತ್ತೇ, ಅದೇ ಸಂದರ್ಭದಲ್ಲಿ ಮತ್ತೊಬ್ಬ ಪ್ರತಿನಿಧಿ ಶ್ರೀಮತಿ ಲಕ್ಷ್ಮಿ ಮೆನನ್ ಅವರು ಲಿಂಗ ಸಮಾನತೆ ವಿಷಯದ ಬಗ್ಗೆ ಬಲವಾಗಿ ಪ್ರತಿಪಾದಿಸಿದರು. ಇಷ್ಟೇ ಅಲ್ಲ, 1953 ರಲ್ಲಿ ಶ್ರೀಮತಿ ವಿಜಯಲಕ್ಷ್ಮಿ ಪಂಡಿತ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಅಧಿವೇಶನದ ಮೊದಲ ಮಹಿಳಾ ಅಧ್ಯಕ್ಷರು ಕೂಡಾ ಆಗಿದ್ದರು.

ಸ್ನೇಹಿತರೇ, ನಾವು ನಂಬುವ, ಈ ರೀತಿ ಪ್ರಾರ್ಥನೆ ಸಲ್ಲಿಸುವ ಭೂಮಿಯ ಮಕ್ಕಳಾಗಿದ್ದೇವೆ:

ಓಂ ದ್ಯೌಃಶಾಂತಿರಂತರಿಕ್ಷಂಶಾಂತಿಃ

ಪೃಥಿವೀಶಾಂತಿರಾಪಃಶಾಂತಿರೋಷಧಯಃಶಾಂತಿಃ|

ವನಸ್ಪತಯಃಶಾಂತಿರ್ವಿಶ್ವೇದೇವಾಃಶಾಂತಿರ್ಬ್ರಹ್ಮಶಾಂತಿಃ

ಸರ್ವಂಶಾಂತಿಃಶಾಂತಿರೇವಶಾಂತಿಃ ಸಾ ಮಾ ಶಾಂತಿರೇಧಿ||

ಓಂ ಶಾಂತಿಃಶಾಂತಿಃಶಾಂತಿಃ

ಭಾರತ ಯಾವಾಗಲೂ ವಿಶ್ವ ಶಾಂತಿಗಾಗಿ ಕೆಲಸ ಮಾಡಿದೆ. ಭಾರತ 1950 ರ ದಶಕದಿಂದ ಸತತವಾಗಿ ವಿಶ್ವ ಸಂಸ್ಥೆಯ ಶಾಂತಿ ಪಾಲನೆ ಮಿಶನ್ ನ ಭಾಗವಾಗಿದೆ ಎನ್ನುವುದು ನಮಗೆಲ್ಲಾ ಹೆಮ್ಮೆಯ ವಿಷಯವಾಗಿದೆ. ಬಡತನ ನಿವಾರಣೆ, ಹವಾಮಾನ ಬದಲಾವಣೆ, ಮತ್ತು ಕಾರ್ಮಿಕ ಸಂಬಂಧಿತ ಸಮಸ್ಯೆಗಳ ಪರಿಹಾರದಲ್ಲಿ ಕೂಡಾ ಭಾರತ ಪ್ರಮುಖ ಪಾತ್ರ ವಹಿಸುತ್ತಿದೆ. ಇಷ್ಟೇ ಅಲ್ಲದೇ ಯೋಗ ಮತ್ತು ಆಯುಷ್ ಅನ್ನು ಜನಪ್ರಿಯಗೊಳಿಸಲು, ಭಾರತ WHOಅಂದರೆ World Health Organisation - ವಿಶ್ವ ಆರೋಗ್ಯ ಸಂಸ್ಥೆಯ ಜೊತೆಗೂಡಿ ಕೆಲಸ ಮಾಡುತ್ತಿದೆ. 2021 ರ ಮಾರ್ಚ್ ತಿಂಗಳಿನಲ್ಲಿ ಭಾರತದಲ್ಲಿ ಸಾಂಪ್ರದಾಯಿಕ ಚಿಕಿತ್ಸೆಗಾಗಿ ಜಾಗತಿಕ ಕೇಂದ್ರ ಸ್ಥಾಪನೆ ಮಾಡಲಾಗುವುದೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತು.

ಸ್ನೇಹಿತರೇ, ವಿಶ್ವ ಸಂಸ್ಥೆಯ ಬಗ್ಗೆ ಮಾತನಾಡುತ್ತಿರುವಾಗ ನನಗೆ ಇಂದು ಅಟಲ್ ಜಿ ಅವರ ಮಾತುಗಳು ನೆನಪಿಗೆ ಬರುತ್ತಿದೆ. ಅವರು 1977 ರಲ್ಲಿ ವಿಶ್ವ ಸಂಸ್ಥೆಯನ್ನು ಉದ್ದೇಶಿಸಿ ಹಿಂದಿಯಲ್ಲಿ ಭಾಷಣ ಮಾಡಿ ಇತಿಹಾಸ ರಚಿಸಿದ್ದರು. ನಾನು ಇಂದು ಮನ್ ಕಿ ಬಾತ್ ನ ಶ್ರೋತೃಗಳಿಗೆ ಅಟಲ್ ಜಿ ಅವರ ಆ ಭಾಷಣದ ಕೆಲವು ಅಂಶವನ್ನು ಕೇಳಿಸಲುಬಯಸುತ್ತೇನೆ. ಕೇಳಿ, ಅಟಲ್ ಜಿ ಅವರ ಶಕ್ತಿಯುತ ಧ್ವನಿ -

``ಇಲ್ಲಿ ನಾನು ರಾಷ್ಟ್ರಗಳ ಶಕ್ತಿ ಮತ್ತು ಮಹತ್ವದ ಬಗ್ಗೆ ಯೋಚಿಸುತ್ತಿಲ್ಲ. ಸಾಮಾನ್ಯ ಮನುಷ್ಯನ ಪ್ರತಿಷ್ಠೆ ಮತ್ತು ಪ್ರಗತಿ ನನಗೆ ಹೆಚ್ಚು ಮಹತ್ವದ ವಿಷಯವಾಗಿದೆ. ಇಡೀ ಮಾನವ ಸಮಾಜಕ್ಕೆ, ವಾಸ್ತವದಲ್ಲಿ ಪ್ರತಿಯೊಬ್ಬ ಪುರುಷ, ಮಹಿಳೆ ಮತ್ತು ಮಗುವಿಗೆ ನ್ಯಾಯ ಮತ್ತು ಘನತೆ ದೊರೆಯುವುದನ್ನು ಖಚಿತಪಡಿಸಿಕೊಳ್ಳಲು ನಾವು ಎಷ್ಟು ಮಾತ್ರ ಪ್ರಯತ್ನಶೀಲರಾಗಿದ್ದೇವೆ ಎಂಬ ಏಕೈಕ ಮಾನದಂಡದಿಂದ ಮಾತ್ರಾ ನಾವು ನಮ್ಮ ಯಶಸ್ಸು ಮತ್ತು ವೈಫಲ್ಯಗಳನ್ನು ನಾವು ಅಳೆಯಬೇಕು.”

ಸ್ನೇಹಿತರೇ, ಅಟಲ್ ಜಿ ಅವರ ಈ ಮಾತುಗಳು ನಮಗೆ ಇಂದು ಕೂಡಾ ದಾರಿ ತೋರಿಸುತ್ತದೆ. ಈ ಭೂಮಿಯನ್ನು ಒಂದು ಉತ್ತಮ ಹಾಗು ಸುರಕ್ಷಿತ ಗ್ರಹವನ್ನಾಗಿ ಮಾಡುವಲ್ಲಿ ಭಾರತದ ಕೊಡುಗೆ, ವಿಶ್ವಾದ್ಯಂತ ಬಹು ದೊಡ್ಡ ಪ್ರೇರಣೆಯಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ಈಗ ಕೆಲವು ದಿನಗಳ ಹಿಂದೆಯಷ್ಟೇ ಅಕ್ಟೋಬರ್ 21 ರಂದು ನಾವು ಪೊಲೀಸ್ ಸ್ಮೃತಿ ದಿನ ಆಚರಿಸಿದೆವು. ಈ ದಿನ ನಾವು ವಿಶೇಷವಾಗಿ ದೇಶ ಸೇವೆಯಲ್ಲಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಪೊಲೀಸ್ ಸ್ನೇಹಿತರನ್ನು ನೆನಪಿಸಿಕೊಳ್ಳುತ್ತೇವೆ. ನಾನು ಇಂದು ನಮ್ಮ ಇಂತಹ ಪೊಲೀಸ್ ಸ್ನೇಹಿತರ ಕುಟುಂಬದವರನ್ನು ಕೂಡಾ ನೆನಪಿಸಿಕೊಳ್ಳಲು ಬಯಸುತ್ತೇನೆ. ಕುಟುಂಬದ ಸಹಕಾರ ಮತ್ತು ತ್ಯಾಗ ಇಲ್ಲದಿದ್ದರೆ ಇಂತಹ ಕಠಿಣ ಸೇವೆ ಬಹಳವೇ ಕಷ್ಟವಾಗುತ್ತದೆ. ಪೊಲೀಸ್ ಸೇವೆಗೆ ಸಂಬಂಧಿಸಿದಂತೆ ಮನ್ ಕಿ ಬಾತ್ ಶ್ರೋತೃಗಳಿಗೆ ನಾನು ಮತ್ತೊಂದು ಮಾತ ಹೇಳಲು ಬಯಸುತ್ತೇನೆ. ಸೇನೆ ಮತ್ತು ಪೊಲೀಸ್ ಸೇವೆಗಳು ಕೇವಲ ಪುರುಷರಿಗಾಗಿ ಮಾತ್ರಾ ಎಂಬ ನಂಬಿಕೆ ಒಂದು ಕಾಲದಲ್ಲಿತ್ತು, ಆದರೆ ಇಂದು ಹಾಗಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಮಹಿಳಾ ಪೊಲಿಸ್ ಸಿಬ್ಬಂದಿಯ ಸಂಖ್ಯೆ ದ್ವಿಗುಣವಾಗಿದೆ ಎಂದು Bureau of Police Research and Development  ನ ಅಂತಿ ಸಂಖ್ಯೆ ಹೇಳುತ್ತದೆ.  2014 ರಲ್ಲಿ ಈ ಸಂಖ್ಯೆ ಸುಮಾರು 1 ಲಕ್ಷ 5 ಸಾವಿರವಿತ್ತು 2020 ರಲ್ಲಿ ಈ ಸಂಖ್ಯೆ ದುಪ್ಪಟ್ಟಿಗಿಂತ ಹೆಚ್ಚಾಗಿದೆ ಮತ್ತು ಈ ಸಂಖ್ಯೆ ಈಗ ಸುಮಾರು 2 ಲಕ್ಷ 15 ಸಾವಿರ ತಲುಪಿದೆ. Central Armed Police Forces ನಲ್ಲಿ ಕೂಡಾ ಕಳೆದ ಏಳು ವರ್ಷಗಳಲ್ಲಿ ಮಹಿಳಾ ಸಿಬ್ಬಂದಿಯ ಸಂಖ್ಯೆ ಹೆಚ್ಚು ಕಡಿಮೆ ದುಪ್ಪಟ್ಟಾಗಿದೆ. ನಾನು ಕೇವಲ ಸಂಖ್ಯೆಗಳ ಬಗ್ಗೆ ಮಾತನಾಡುತ್ತಿಲ್ಲ, ಇಂದು ದೇಶದ ಹೆಣ್ಣುಮಕ್ಕಳು ಕಠಿಣ ಡ್ಯೂಟಿ ಕೂಡಾ ಸಂಪೂರ್ಣ ಸಾಮರ್ಥ್ಯ ಮತ್ತು ಭರವಸೆಯಿಂದ ಮಾಡುತ್ತಿದ್ದಾರೆ. ಉದಾಹರಣೆಗೆ, ಈಗ ಕೆಲವು ಹೆಣ್ಣು ಮಕ್ಕಳು ಅತ್ಯಂತ ಕಠಿಣವೆಂದು ನಂಬಲಾಗುವ ಒಂದು Specialized Jungle Warfare Commandos ನ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಇವರು ನಮ್ಮ Cobra Battalion ನ ಭಾಗವಾಗುತ್ತಾರೆ.

ಸ್ನೇಹಿತರೇ, ಇಂದು ನಾವು ವಿಮಾನ ನಿಲ್ದಾಣಗಳು, ಮೆಟ್ರೋ ನಿಲ್ದಾಣಗಳಿಗೆ ಹೋದಾಗ ಅಥವಾ ಸರ್ಕಾರಿ ಕಚೇರಿಗಳನ್ನು ನೋಡಿದಾಗ, ಅಂತಹ ಕಡೆಗಳಲ್ಲಿ CISF ನ ಧೈರ್ಯಶಾಲಿ ಮಹಿಳೆಯರು ಪ್ರತಿಯೊಂದು ಸೂಕ್ಷ್ಮ ಸ್ಥಳದ ಕಾವಲು ಕೆಲಸದಲ್ಲಿ ನಿರತರಾಗಿರುವುದು ಕಂಡು ಬರುತ್ತದೆ. ಇದರ ಅತ್ಯಂತ ಸಕಾರಾತ್ಮಕ ಪರಿಣಾಮವು ನಮ್ಮ ಪೊಲೀಸ್ ಪಡೆ ಹಾಗೂ ಸಮಾಜದ ನೈತಿಕತೆಯ ಮೇಲೂ ಕೂಡಾ ಉಂಟಾಗಿದೆ. ಮಹಿಳಾ ಭದ್ರತಾ ಸಿಬ್ಬಂದಿಯ ಉಪಸ್ಥಿತಿ ಸಹಜವಾಗಿಯೇ ಜನರಲ್ಲಿ ಅದರಲ್ಲೂ ವಿಶೇಷವಾಗಿ ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ತುಂಬುತ್ತದೆ. ಅವರು ಸಹಜವಾಗಿಯೇ ಅವರೊಂದಿಗೆ ಸಂಪರ್ಕದ ಅನಿಸಿಕೆ ಹೊಂದುತ್ತಾರೆ. ನಮ್ಮ ಈ ಮಹಿಳಾ ಪೊಲೀಸ್ ಸಿಬ್ಬಂದಿ ದೇಶದ ಲಕ್ಷಾಂತರ ಹೆಣ್ಣುಮಕ್ಕಳಿಗೆ ಮಾದರಿ ಆಗುತ್ತಿದ್ದಾರೆ. ಶಾಲೆಗಳು ತೆರೆದ ನಂತರ ತಮ್ಮ ಕ್ಷೇತ್ರಗಳಲ್ಲಿರುವ ಶಾಲೆಗಳಿಗೆ ಭೇಟಿ ನೀಡಬೇಕೆಂದು ಮತ್ತು ಅಲ್ಲಿನ ಮಕ್ಕಳೊಂದಿಗೆ ಮಾತನಾಡಬೇಕೆಂದು ನಾನು ಮಹಿಳಾ ಪೊಲೀಸ್ ಸಿಬ್ಬಂದಿಯಲ್ಲಿ ಮನವಿ ಮಾಡುತ್ತಿದ್ದೇನೆ. ಈ ರೀತಿ ಮಾತುಕತೆ ನಡೆಸುವುದರಿಂದ ನಮ್ಮ ಹೊಸ ಪೀಳಿಗೆಗೆ ಹೊಸದೊಂದು ಮಾರ್ಗ ದೊರೆಯುತ್ತದೆಂಬ ವಿಶ್ವಾಸ ನನಗಿದೆ. ಇಷ್ಟೇ ಅಲ್ಲದೇ, ಇದರಿಂದಾಗಿ ಪೊಲೀಸರ ಮೇಲೆ ಜನರ ವಿಶ್ವಾಸ ನಂಬಿಕೆಯೂ ಹೆಚ್ಚಾಗುತ್ತದೆ. ಮುಂದೆ ಮತ್ತಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಪೊಲೀಸ್ ಸೇವೆಯಲ್ಲಿ ತೊಡಗಿಕೊಳ್ಳುತ್ತಾರೆಂದು ಮತ್ತು ನಮ್ಮ ದೇಶದ New Age Policing ನ ಮುಂದಾಳತ್ವ ವಹಿಸುತ್ತಾರೆಂದೂ ನಾನು ನಿರೀಕ್ಷಿಸುತ್ತೇನೆ.

ನನ್ನ ಪ್ರೀತಿಯ ದೇಶಬಾಂಧವರೇ, ಕಳೆದ ಕೆಲವು ವರ್ಷಗಳಲ್ಲಿ ನಮ್ಮ ದೇಶದಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆ ಬಹಳ ವೇಗವಾಗಿ ಸಾಗುತ್ತಿದೆ ಮತ್ತು ಇದರ ಬಗ್ಗೆ ಮನ್ ಕಿ ಬಾತ್ ನ ಶ್ರೋತ್ರುಗಳು ನನಗೆ ಆಗಾಗ್ಗೆ ಪತ್ರ ಬರೆಯುತ್ತಿರುತ್ತಾರೆ. ಇಂದು ನಾನು ಅಂತಹ ನಮ್ಮ ಯುವಜನತೆ ಮತ್ತು ಚಿಕ್ಕ ಚಿಕ್ಕ ಮಕ್ಕಳ ಕಲ್ಪನೆಯಲ್ಲಿ ಮಿಳಿತವಾಗಿರುವ ಒಂದು ವಿಷಯವನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.  ಅದೆಂದರೆ, ಡ್ರೋನ್ , ಡ್ರೋನ್ ತಂತ್ರಜ್ಞಾನದ ವಿಷಯ. ಕೆಲವು ವರ್ಷಗಳ ಹಿಂದೆ ಡ್ರೋನ್ ಎಂಬ ಹೆಸರು ಕೇಳಿದಾಗ ಜನರ ಮನದಲ್ಲಿ ಮೊದಲಿಗೆ ಯಾವ ಅನಿಸಿಕೆ ಮೂಡುತ್ತಿತ್ತು? ಸೇನೆ, ಶಸ್ತ್ರಾಸ್ತ್ರಗಳು, ಯುದ್ಧಗಳು. ಆದರೆ ಇಂದು ಯಾವುದೇ ವಿವಾಹ ಸಂಬಂಧಿತ ಮೆರವಣಿಗೆ ಅಥವಾ ಸಮಾರಂಭ ನಡೆದಾಗ ನಾವು ಡ್ರೋನ್ ನಿಂದ ಫೋಟೋ ಮತ್ತು ವಿಡಿಯೋ ಮಾಡುತ್ತಿರುವುದನ್ನು ಕಾಣುತ್ತೇವೆ. ಡ್ರೋನ್ ನ ಶ್ರೇಣಿ, ಅದರ ಸಾಮರ್ಥ್ಯ ಕೇವಲ ಇಷ್ಟು ಮಾತ್ರವಲ್ಲ. ಡ್ರೋನ್ ನ ಸಹಾಯದಿಂದ ತನ್ನ ಹಳ್ಳಿಗಳಲ್ಲಿ ಭೂಮಿಯ ಡಿಜಿಟಲ್ ರೆಕಾರ್ಡ್ ತಯಾರಿಸುತ್ತಿರುವ ವಿಶ್ವದ ಮೊದಲ ದೇಶಗಳಲ್ಲಿ ಭಾರತ ಕೂಡಾ ಒಂದೆನಿಸಿದೆ. ಭಾರತ ಡ್ರೋನ್ಅನ್ನು ಸಾಗಾಣಿಕೆಗಾಗಿ ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ವ್ಯಾಪಕ ವಿಧಾನದಲ್ಲಿ ಕೆಲಸ ಮಾಡುತ್ತಿದೆ. ಅದು ಗ್ರಾಮದಲ್ಲಿ ಕೃಷಿಗಾಗಿ ಅಥವಾ ಮನೆಗಳಿಗಾಗಿ ಸಾಮಾನುಗಳ ವಿತರಣೆಯಾಗಿರಲಿ, ತುರ್ತು ಪರಿಸ್ಥಿತಿಯಲ್ಲಿ ಸಹಾಯ ತಲುಪಿಸುವುದಿರಲಿ, ಅಥವಾ ಕಾನೂನು ಸುವ್ಯವಸ್ಥೆಯ ಮೇಲೆ ನಿಗಾ ವಹಿಸುವುದಿರಲಿ. ಡೋನ್ ನಮ್ಮ ಈ ಅಗತ್ಯಗಳಿಗಾಗಿ ನಿಯೋಜಿಸಲ್ಪಡುವುದನ್ನು ನೋಡುವ ದಿನ ದೂರವೇನಿಲ್ಲ. ಇವುಗಳಲ್ಲಿ ಹೆಚ್ಚಿನವುಗಳನ್ನು ಈಗಾಗಲೇ ಆರಂಭಿಸಲಾಗಿದೆ. ಕೆಲವೇ ದಿನಗಳ ಹಿಂದೆಯಷ್ಟೇ ಗುಜರಾತ್ ನ ಭಾವನಗರದಲ್ಲಿ ಡ್ರೋನ್ ಮೂಲಕ ಹೊಲಗಳಲ್ಲಿ -ಯೂರಿಯಾ ಸಿಂಪರಣೆ ಮಾಡಲಾಯಿತು. ಕೋವಿಡ್ ಲಸಿಕೆ ಅಭಿಯಾನದಲ್ಲಿ ಕೂಡಾ ಡ್ರೋನ್ ಗಳು ತಮ್ಮ ಪಾತ್ರ ನಿರ್ವಹಿಸುತ್ತಿವೆ. ಇದರ ಒಂದು ಚಿತ್ರಣ ನಮಗೆ ಮಣಿಪುರದಲ್ಲಿ ಕಾಣಸಿಕ್ಕಿತು. ಇಲ್ಲಿ ಒಂದು ದ್ವೀಪಕ್ಕೆಡ್ರೋನ್ ಮೂಲಕ ಲಸಿಕೆ ತಲುಪಿಸಲಾಯಿತು. ತೆಲಂಗಾಣದಲ್ಲಿ ಕೂಡಾ ಡ್ರೋನ್ ಮೂಲಕ ಲಸಿಕೆ ಪೂರೈಕೆಗಾಗಿ ಪ್ರಯತ್ನಗಳು ನಡೆಯುತ್ತಿವೆ. ಇಷ್ಟೇ ಅಲ್ಲದೇ, ಈಗ ಮೂಲ ಸೌಕರ್ಯದ ಅನೇದ ದೊಡ್ಡ ದೊಡ್ಡ ಯೋಜನೆಗಳ ಮೇಲೆ ನಿಗಾ ವಹಿಸುವುದಕ್ಕಾಗಿ ಕೂಡಾ ಡ್ರೋನ್ ಬಳಕೆ ಮಾಡಲಾಗುತ್ತಿದೆ. ತನ್ನ ಡ್ರೋನ್  ಸಹಾಯದಿಂದ ಮೀನುಗಾರರ ಜೀವ ಉಳಿಸುವ ಕೆಲಸ ಮಾಡಿದ ಓರ್ವ ಯುವ ವಿದ್ಯಾರ್ಥಿಯ ಬಗ್ಗೆ ಕೂಡಾ ನಾನು ಓದಿದ್ದೇನೆ.

ಸ್ನೇಹಿತರೇ, ಈ ಕ್ಷೇತ್ರದಲ್ಲಿ ಎಷ್ಟೊಂದು ನಿಬಂಧನೆ, ಕಾನೂನು ಮತ್ತು ನಿರ್ಬಂಧಗಳನ್ನು ಹೇರಲಾಗಿತ್ತೆಂದರೆ, ಡ್ರೋನ್ ನ ನಿಜವಾದ ಸಾಮರ್ಥ್ಯದ ಬಳಕೆ ಸಾಧ್ಯವೇ ಆಗುತ್ತಿರಲಿಲ್ಲ. ಅವಕಾಶವಾಗಿ ಕಾಣಬೇಕಿದ್ದ ತಂತ್ರಜ್ಞಾನವನ್ನು ಬಿಕ್ಕಟ್ಟಿನ ರೂಪದಲ್ಲಿ ಕಾಣಲಾಗುತ್ತಿತ್ತು. ನಿಮಗೆ ಯಾವುದೇ ಕೆಲಸಕ್ಕಾಗಿ ಡ್ರೋನ್ ಹಾರಿಸಬೇಕಾದರೆ ಅದಕ್ಕಾಗಿ ಪರವಾನಗಿ ಮತ್ತು ಅನುಮತಿಯ ಎಷ್ಟೊಂದು ಸಮಸ್ಯೆ ಎದುರಾಗುತ್ತಿದ್ದೆಂದರೆ, ಜನರು ಡ್ರೋನ್ ಹೆಸರು ಮಾತ್ರದಿಂದಲೇ ದೂರ ಸರಿಯುತ್ತಿದ್ದರು. ಈ ಮನೋಭಾವವನ್ನು ಬದಲಾಯಿಸಬೇಕೆಂದು ಮತ್ತು ಹೊಸ ಟ್ರೆಂಡ್ ನಮ್ಮದಾಗಿಸಿಕೊಳ್ಳಬೇಕೆಂದು ನಾವು ನಿರ್ಣಯಿಸಿದೆವು. ಆದ್ದರಿಂದ ಈ ವರ್ಷ ಆಗಸ್ಟ್ 25 ರಂದು ದೇಶ ಒಂದು ಹೊಸ ಡ್ರೋನ್ ನೀತಿ ಜಾರಿಗೆ ತಂದಿತು. ಡ್ರೋನ್   ಸಂಬಂಧಿತ ಪ್ರಸ್ತುತ ಮತ್ತು ಭವಿಷ್ಯದ ಸಂಭವನೀಯತೆಗಳಿಗೆ ಅನುಗುಣವಾಗಿ ಈ ನೀತಿಯನ್ನು ಸಿದ್ಧಪಡಿಸಲಾಗಿದೆ. ನ್ಯಾನೊ ಬಹಳಷ್ಟು ಫಾರಂ ಗಳನ್ನು ತುಂಬಬೇಕಿಲ್ಲ, ಮೊದಲಿನಷ್ಟು ಶುಲ್ಕವನ್ನೂ ತುಂಬಬೇಕಿಲ್ಲ. ಹೊಸ ಡ್ರೋನ್ ನೀತಿ ಬಂದಮೇಲೆ ಅನೇಕ ಡ್ರೋನ್ Start-ups ಗಳಲ್ಲಿ ವಿದೇಶೀ ಮತ್ತು ದೇಶೀಯ ಹೂಡಿಕೆದಾರರು ಹೂಡಿಕೆ ಮಾಡಿದ್ದಾರೆಂಬ ವಿಷಯ ನಿಮಗೆ ತಿಳಿಸಲು ನನಗೆ ಹರ್ಷವೆನಿಸುತ್ತದೆ. ಅನೇಕ ಕಂಪೆನಿಗಳು ತಯಾರಿಕಾ ಘಟಕಗಳನ್ನು ಕೂಡಾ ಸ್ಥಾಪಿಸುತ್ತಿವೆ. Army, Navy ಮತ್ತು Air Force ಗಳು ಭಾರತೀಯ ಡ್ರೋನ್ ಕಂಪೆನಿಗಳಿಗೆ 500 ಕೋಟಿ ರೂಪಾಯಿಗಿಂತ ಹೆಚ್ಚಿನ ಆರ್ಡರ್ ಕೂಡಾ ನೀಡಿವೆ. ಇದಿನ್ನೂ ಆರಂಭ ಮಾತ್ರ. ನಾವು ಇಲ್ಲಿಗೇ ನಿಲ್ಲಬಾರದು. ನಾವು ಡ್ರೋನ್ ತಂತ್ರಜ್ಞಾನದಲ್ಲಿ ಅಗ್ರ ದೇಶವಾಗಬೇಕು. ಇದಕ್ಕಾಗಿ ಸರ್ಕಾರ ಸಾಧ್ಯವಿರುವ ಪ್ರತಿಯೊಂದು ಹೆಜ್ಜೆಯನ್ನೂ ಇಡುತ್ತಿದೆ.  ಡ್ರೋನ್ ನೀತಿಯ ನಂತರ ಸೃಷ್ಟಿಯಾದ ಅವಕಾಶಗಳ ಪ್ರಯೋಜನ ಪಡೆದುಕೊಳ್ಳುವ ಕುರಿತು ಖಂಡಿತಾ ಯೋಚಿಸಬೇಕೆಂದು, ಮುಂದೆ ಬರಬೇಕೆಂದು ನಾನು ದೇಶದ ಯುವಜನತೆಯಲ್ಲಿ ಕೇಳುತ್ತಿದ್ದೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಉತ್ತರ ಪ್ರದೇಶದ ಮೀರಟ್ ನಿಂದ ಮನ್ ಕಿ ಬಾತ್ ನ ಶ್ರೋತೃಗಳಲ್ಲಿ ಒಬ್ಬರಾದ ಶ್ರೀಮತಿ ಪ್ರಭಾ ಶುಕ್ಲಾ ಅವರು ಸ್ವಚ್ಛತೆಗೆ ಸಂಬಂಧಿಸಿದಂತೆ ನನಗೆ ಒಂದು ಪತ್ರ ಬರೆದಿದ್ದಾರೆ. ಅವರು ಹೀಗೆ ಬರೆದಿದ್ದಾರೆ – “ಭಾರತದಲ್ಲಿ ನಾವೆಲ್ಲರೂ ಹಬ್ಬಗಳಲ್ಲಿ ಸ್ವಚ್ಛತೆಯನ್ನು ಆಚರಿಸುತ್ತೇವೆ. ಹಾಗೆಯೇ ನಾವು ಸ್ವಚ್ಛತೆಯನ್ನು ಪ್ರತಿದಿನದ ಹವ್ಯಾಸವನ್ನಾಗಿ ಮಾಡಿಕೊಂಡರೆ ದೇಶ ಖಂಡಿತವಾಗಿಯೂ ಸ್ವಚ್ಛವಾಗುತ್ತದೆ.” ನನಗೆ ಪ್ರಭಾ ಅವರ ಮಾತುಗಳು ಬಹಳ ಮೆಚ್ಚುಗೆಯಾಯಿತು. ವಾಸ್ತವದಲ್ಲಿ, ಎಲ್ಲಿ ಸ್ವಚ್ಛತೆಯಿರುತ್ತದೆಯೋ ಅಲ್ಲಿ ಆರೋಗ್ಯವಿರುತ್ತದೆ ಮತ್ತು ಎಲ್ಲಿ ಆರೋಗ್ಯವಿರುತ್ತದೆಯೋ ಅಲ್ಲಿ ಸಾಮರ್ಥ್ಯ ಇರುತ್ತದೆ ಹಾಗೆಯೇ ಸಮೃದ್ಧಿಯೂ ಇರುತ್ತದೆ. ಆದ್ದರಿಂದಲೇ ಸ್ವಚ್ಛ ಭಾರತ ಅಭಿಯಾನಕ್ಕೆ ದೇಶ ಇಷ್ಟೊಂದು ಒತ್ತು ನೀಡುತ್ತಿದೆ.

ಸ್ನೇಹಿತರೇ, ರಾಂಚಿಯಲ್ಲಿನ ಒಂದು ಗ್ರಾಮ ಸಪಾರೋಮ್ನಯಾಸರಾಯ್ ಬಗ್ಗೆ ತಿಳಿದು ಬಹಳ ಸಂತೋಷವೆನಿಸಿತು. ಈ ಗ್ರಾಮದಲ್ಲಿ ಒಂದು ಕೆರೆ ಇತ್ತು. ಆದರೆ ಜನರು ಈ ಕೆರೆಯಪ್ರದೇಶವನ್ನು ಬಯಲು ಶೌಚಕ್ಕಾಗಿ ಉಪಯೋಗಿಸಲು ಆರಂಭಿಸಿದ್ದರು. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ಪ್ರತಿ ಮನೆಯಲ್ಲೂ ಶೌಚಾಲಯ ನಿರ್ಮಾಣವಾದಾಗ ಗ್ರಾಮದ ಜನರು ಗ್ರಾಮವನ್ನು ಸ್ವಚ್ಛ ಮತ್ತು ಸುಂದರಗೊಳಿಸ ಬೇಕೆಂದು ಯೋಚಿಸಿದರು. ಅನಂತರ ಏನಾಯಿತು ಗೊತ್ತೇ, ಎಲ್ಲರೂ ಸೇರಿ ಕೆರೆಯಿದ್ದ ಜಾಗವನ್ನು ಸುಂದರವಾದ ಉದ್ಯಾನವನ ನಿರ್ಮಿಸಿದರು. ಇದು ಆ ಸ್ಥಳ ಜನರಿಗೆ, ಮಕ್ಕಳಿಗೆ, ಒಂದು ಸಾರ್ವಜನಿಕ ಸ್ಥಳವಾಗಿದೆ. ಇದರಿಂದಾಗಿ ಇಡೀ ಗ್ರಾಮದ ಜನಜೀವನದಲ್ಲಿ ಬಹು ದೊಡ್ಡ ಪರಿವರ್ತನೆಯಾಗಿದೆ. ನಾನು ನಿಮಗೆ ಛತ್ತೀಸ್ ಗಢದ ದೇವೂರ್ ಗ್ರಾಮದ ಮಹಳೆಯರ ಬಗ್ಗೆ ಕೂಡಾ ಹೇಳಲು ಬಯಸುತ್ತೇನೆ. ಇಲ್ಲಿನ ಮಹಿಳೆಯರು ಒಂದು ಸ್ವ ಸಹಾಯ ಗುಂಪು ನಡೆಸುತ್ತಾರೆ ಮತ್ತು ಒಗ್ಗೂಡಿ ಗ್ರಾಮದ ಚೌಕಗಳು, ವೃತ್ತಗಳು, ರಸ್ತೆಗಳು ಮತ್ತು ದೇವಾಲಯಗಳನ್ನು ಸ್ವಚ್ಛಗೊಳಿಸುತ್ತಾರೆ.

ಸ್ನೇಹಿತರೇ, ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿ ರಾಮ್ವೀರ್ ಅವರನ್ನು ಜನರು ‘ಪಾಂಡ್ ಮ್ಯಾನ್’ ಎಂಬ ಹೆಸರಿನಿಂದ ಗುರುತಿಸುತ್ತಾರೆ.

ರಾಮ್ವೀರ್ ಅವರು ಮೆಕ್ಯಾನಿಕಲ್ ಇಂಜನಿಯರಿಂಗ್ ಪದವಿ ಪಡೆದ ನಂತರ, ಉದ್ಯೋಗ ಮಾಡುತ್ತಿದ್ದರು. ಆದರೆ ಅವರ ಮನಸ್ಸಿನಲ್ಲಿ ಸ್ವಚ್ಛತೆಯ ಕುರಿತು ಬೇರೊಂದು ಯೋಚನೆ ಮೂಡಿತು, ಅವರು ತಾವು ಮಾಡುತ್ತಿದ್ದ ಉದ್ಯೋಗವನ್ನು ತೊರೆದು, ಕೆರೆಗಳನ್ನು ಸ್ವಚ್ಛ ಮಾಡುವ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ರಾಮ್ವೀರ್ ಅವರು ಇದುವರೆಗೂ ಹಲವು ಕೆರೆಗಳನ್ನು ಸ್ವಚ್ಛಗೊಳಿಸಿದ್ದಾರೆ ಮತ್ತು ಅವುಗಳನ್ನು ಪುನರುಜ್ಜೀವಗೊಳಿಸಿದ್ದಾರೆ.

ಸ್ನೇಹಿತರೇ, ಪ್ರತಿಯೊಬ್ಬ ನಾಗರಿಕನೂ ಸ್ವಚ್ಛತೆಯನ್ನು ತನ್ನ ಜವಾಬ್ದಾರಿ ಎಂದು ಭಾವಿಸಿದಾಗ ಮಾತ್ರಾ ಸ್ವಚ್ಛತೆಯ ಪ್ರಯತ್ನ ಸಂಪೂರ್ಣವಾಗಿ ಯಶಸ್ವಿಯಾಗುತ್ತದೆ. ಈಗ ದೀಪಾವಳಿ ಹಬ್ಬದ ಸಮಯದಲ್ಲಿ ನಾವೆಲ್ಲರೂ ನಮ್ಮ ಮನೆಯನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದೇವೆ. ಆದರೆ ಈ ಸಂದರ್ಭದಲ್ಲಿ ನಾವು ನಮ್ಮ ಮನೆಯ ಸ್ವಚ್ಛತೆಯ ಜೊತೆಗೆ ನಮ್ಮ ಸುತ್ತಮುತ್ತಲು ಕೂಡಾ ಸ್ವಚ್ಛವಾಗಿರಬೇಕೆಂದು ನಾವು ಗಮನ ಹರಿಸಬೇಕು. ನಾವು ನಮ್ಮ ಮನೆಯನ್ನೇನೋ ಸ್ವಚ್ಛಗೊಳಿಸುತ್ತೇವೆ ಆದರೆ ನಮ್ಮ ಮನೆಯ ಕಸಕಡ್ಡಿ ನಮ್ಮ ಮನೆಯ ಹೊರಗಡೆ, ರಸ್ತೆಗಳ ಮೇಲೆ ಬಿಸಾಡಬಾರದು.  ಅಂದಹಾಗೆ, ನಾನು ಸ್ವಚ್ಛತೆಯ ಕುರಿತು ಮಾತನಾಡುವಾಗ ದಯವಿಟ್ಟು ಸಿಂಗಲ್ ಯೂಸ್ಡ್ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕೆನ್ನುವ ವಿಷಯ ದಯವಿಟ್ಟು ಮರೆಯಬಾರದು. ಹಾಗಾದರೆ ಬನ್ನಿ, ಸ್ವಚ್ಛ ಭಾರತ್ ಅಭಿಯಾನದ ಉತ್ಸಾಹವನ್ನು ಕಡಿಮೆಯಾಗಲು ಬಿಡುವುದಿಲ್ಲವೆಂಬ ಸಂಕಲ್ಪವನ್ನು ನಾವು ಕೈಗೊಳ್ಳೋಣ. ನಾವೆಲ್ಲರೂ ಒಟ್ಟಾಗಿ ಸೇರಿ ನಮ್ಮ ದೇಶವನ್ನು ಸಂಪೂರ್ಣವಾಗಿ ಸ್ವಚ್ಛವಾಗಿಸೋಣ ಮತ್ತು ಸ್ವಚ್ಛವಾಗಿ ಇರಿಸೋಣ.

ನನ್ನ ಪ್ರೀತಿಯ ದೇಶಬಾಂಧವರೇ, ಇಡೀ ಅಕ್ಟೋಬರ್ ತಿಂಗಳು ಹಬ್ಬಗಳ ಸಂಭ್ರಮದಿಂದ ರಂಗು ರಂಗಾಗಿದೆ. ಇನ್ನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದೆ.  ದೀಪಾವಳಿಯ ನಂತರ ಗೋವರ್ಧನ್ ಪೂಜೆ ನಂತರ ಭಾಯಿ-ದೂಜ್ ಹಬ್ಬಗಳು ಬರಲಿವೆ. ಇವುಗಳ ಜೊತೆಯಲ್ಲೇ ಬರಲಿದೆ ಛತ್ ಪೂಜೆ. ನವೆಂಬರ್ ತಿಂಗಳಿನಲ್ಲಿ ಗುರುನಾನಕ್ ದೇವ್ ಅವರ ಜಯಂತಿಯೂ ಇದೆ. ಇಷ್ಟೊಂದು ಹಬ್ಬಗಳು ಒಟ್ಟೊಟ್ಟಾಗಿ ಬರುತ್ತವೆಂದರೆ ಅವುಗಳಿಗಾಗಿ ಸಿದ್ಧತೆಯೂ ಬಹಳ ಮುಂಚಿನಂದಲೇ ಆರಂಭವಾಗಿಬಿಡುತ್ತದೆ. ನೀವೆಲ್ಲರೂ ಈಗಿನಿಂದಲೇ ನಿಮ್ಮ ಖರೀದಿಯ ಯೋಜನೆಯಲ್ಲಿ ತೊಡಗಿರುತ್ತೀರಲ್ಲವೇ, ಆದರೆ, ಖರೀದಿ ಎಂದರೆ ವೋಕಲ್ ಫಾರ್ ಲ್ಲೋಕಲ್ ಎನ್ನುವುದು ನಿಮಗೆ ನೆನಪಿದೆಯಲ್ಲವೇ. ನೀವು ಸ್ಥಳೀಯ ವಸ್ತುಗಳನ್ನು ಖರೀದಿಸಿದಲ್ಲಿ, ನಿಮ್ಮ ಹಬ್ಬವು ಸಂಭ್ರಮದಿಂದ ಕೂಡಿರುತ್ತದೆ ಹಾಗೆಯೇ ಯಾರೋ ಒಬ್ಬ ಬಡ ಸೋದರ- ಸೋದರಿ, ಓರ್ವ ಕುಶಲಕರ್ಮಿ, ಓರ್ವ ನೇಕಾರನ ಮನೆಯಲ್ಲಿ ಕೂಡಾ ಹಬ್ಬದ ಬೆಳಕು ಮೂಡುತ್ತದೆ. ನಾವೆಲ್ಲರೂ ಸೇರಿ ಆರಂಭಿಸಿದ ಅಭಿಯಾನ ಈ ಬಾರಿ ಹಬ್ಬಗಳ ಸಾಲಿನಲ್ಲಿ ಮತ್ತಷ್ಟು ಬಲಿಷ್ಠವಾಗುತ್ತದೆ ಎಂಬ ಸಂಪೂರ್ಣ ನಂಬಿಕೆ ನನಗಿದೆ. ನೀವಿರುವ ಪ್ರದೇಶದಲ್ಲಿ ದೊರೆಯುವ ಸ್ಥಳೀಯ ವಸ್ತುಗಳನ್ನು ಖರೀದಿಸಿ ಹಾಗೆಯೇ ಅವುಗಳ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಿ. ನಿಮ್ಮ ಜೊತೆಯಲ್ಲಿರುವ ಜನರಿಗೆ ಕೂಡಾ ಹೇಳಿ. ಮುಂದಿನ ತಿಂಗಳು ನಾವು ಮತ್ತೆ ಭೇಟಿಯಾಗೋಣ. ಹೀಗೆಯೇ ಮತ್ತಷ್ಟು ವಿಷಯಗಳ ಬಗ್ಗೆ ಮಾತನಾಡೋಣ.

ನಿಮಗೆಲ್ಲರಿಗೂ ಅನೇಕಾನೇಕ ಧನ್ಯವಾದ. ನಮಸ್ಕಾರ.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.