Accord priority to local products when you go shopping: PM Modi
During Mann Ki Baat, PM Modi shares an interesting anecdote of how Khadi reached Oaxaca in Mexico
Always keep on challenging yourselves: PM Modi during Mann Ki Baat
Learning is growing: PM Modi
Sardar Patel devoted his entire life for the unity of the country: PM Modi during Mann Ki Baat
Unity is Power, unity is strength: PM Modi
Maharishi Valmiki's thoughts are a guiding force for our resolve for a New India: PM

ನನ್ನ ಪ್ರಿಯ ದೇಶವಾಸಿಗಳೇ, ನಮಸ್ಕಾರ. ಇಂದು ವಿಜಯದಶಮಿ ಅಂದರೆ ದಸರಾ ಹಬ್ಬ. ಈ ಪವಿತ್ರ ದಿನದಂದು ನಿಮ್ಮೆಲ್ಲರಿಗೂ ಅನಂತ ಶುಭಾಷಯಗಳು. ದಸರಾ ಹಬ್ಬಅಸತ್ಯದ ಮೇಲೆ ಸತ್ಯದ ಜಯದ ಹಬ್ಬವಾಗಿದೆ. ಆದರೆ ಇದರ ಜೊತೆಗೆ ಒಂದರ್ಥದಲ್ಲಿಸಂಕಷ್ಟ ಕಾಲದಲ್ಲಿ ಧೈರ್ಯ ಜಯಿಸಿದ ಹಬ್ಬವೂ ಆಗಿದೆ. ನೀವೆಲ್ಲರೂ ಬಹಳ ಸಂಯಮದಿಂದ ಜೀವನ ನಡೆಸುತ್ತಿದ್ದೀರಿ. ಇತಿಮಿತಿಯಲ್ಲಿದ್ದುಕೊಂಡು ಹಬ್ಬದಾಚರಣೆ ಮಾಡುತ್ತಿದ್ದೀರಿ, ನಮ್ಮ ಹೋರಾಟದಲ್ಲಿ ಜಯ ಸುನಿಶ್ಚಿತವಾಗಿದೆ. ಹಿಂದೆ ದುರ್ಗಾ ಪೆಂಡಾಲ್ ಗಳಲ್ಲಿ ದೇವಿಯ ದರ್ಶನಕ್ಕೆ ಎಷ್ಟೊಂದು ಗುಂಪು ಸೇರುತ್ತಿತ್ತು ಎಂದರೆ ಒಂಥರಾ ಜಾತ್ರೆಯ ವಾತಾವರಣದಂತಿರುತ್ತಿತ್ತು. ಆದರೆ ಈ ಬಾರಿ ಹಾಗಾಗಲಿಲ್ಲ. ಹಿಂದೆ ದಸರಾ ಸಂದರ್ಭದಲ್ಲಿ ದೊಡ್ಡ ದೊಡ್ಡ ಜಾತ್ರೆಗಳಾಗುತ್ತಿದ್ದವು. ಆದರೆ ಈ ಬಾರಿ ಅದರ ಸ್ವರೂಪ ಬದಲಾಗಿದೆ. ರಾಮಲೀಲಾ ಹಬ್ಬವೂ ಹಾಗೆ. ಅದು ಬಹಳ ಆಕರ್ಷಕವಾಗಿರುತ್ತಿತ್ತು. ಆದರೆ ಅದರ ಮೇಲೆ ಒಂದಷ್ಟು ನಿರ್ಭಂಧನೆಗಳನ್ನು ಹೇರಲಾಗಿದೆ. ಹಿಂದೆ ನವರಾತ್ರಿಯಲ್ಲಿ ಗುಜರಾತ್ ನ ಗರಭಾ ಸದ್ದು ಎಲ್ಲೆಡೆ ರಿಂಗಣಿಸುತ್ತಿತ್ತು. ಈ ಬಾರಿ ದೊಡ್ಡ ದೊಡ್ಡ ಆಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ. ಮುಂದೆಯೂ ಇನ್ನು ಹಲವಾರು ಹಬ್ಬಗಳು ಬರಲಿವೆ. ಇನ್ನು ಈದ್ ಇದೆ, ಶರತ್ ಪೌರ್ಣಮಿ ಇದೆ, ವಾಲ್ಮೀಕಿ ಜಯಂತಿಯಿದೆ, ನಂತರ ಧನ್ ತೇರಸ್ ಇದೆ. ದೀಪಾವಳಿ, ಭಾವನ ಬಿದಿಗೆ, ಛಟಿ ಮಾತಾ ಪೂಜೆ ಇದೆ. ಗುರುನಾನಕ್ ದೇವ್ ರ ಜಯಂತಿಯಿದೆ – ಕೊರೊನಾದ ಈ ಸಂಕಷ್ಟ ಸ್ಥಿತಿಯಲ್ಲಿ ನಾವು ಸಂಮಯದಿಂದಿರಬೇಕು. ಮಿತಿಗಳಲ್ಲೇ ಇರಬೇಕು.

ಸ್ನೇಹಿತರೇ, ನಾವು ಹಬ್ಬಗಳ ಕುರಿತು ಮಾತನಾಡುವಾಗ, ಸಿದ್ಧತೆ ಮಾಡಿಕೊಳ್ಳುವಾಗ ಎಲ್ಲಕ್ಕಿಂತ ಮೊದಲು ಮಾರುಕಟ್ಟೆಗೆ ಯಾವಾಗ ಹೋಗುವುದು, ಏನೇನು ಖರೀದಿಸಬೇಕು ಎಂಬುದೇ ಆಲೋಚನೆಯಾಗಿರುತ್ತದೆ ಅದರಲ್ಲೂ ವಿಶೇಷವಾಗಿ ಮಕ್ಕಳಲ್ಲಿ ಈ ಬಾರಿ ಹಬ್ಬದಂದು ಹೊಸತೇನು ಸಿಗತ್ತೆ? ಎಂಬ ವಿಶಿಷ್ಟ ಉತ್ಸಾಹವಿರುತ್ತದೆ. ಹಬ್ಬಗಳ ಈ ಉತ್ಸಾಹ ಮತ್ತು ಮಾರುಕಟ್ಟೆಯ ಈ ಆಕರ್ಷಣೆ ಒಂದಕ್ಕೊಂದು ಮಿಳಿತವಾಗಿವೆ. ಆದರೆ ಈ ಬಾರಿ ನೀವು ಖರೀದಿಗೆ ಹೋದಾಗ, ‘ವೋಕಲ್ ಫಾರ್ ಲೋಕಲ್’ ಎಂಬ ಸಂಕಲ್ಪ ಖಂಡಿತ ನೆನಪಿರಲಿ. ಮಾರುಕಟ್ಟೆಯಿಂದ ವಸ್ತುಗಳನ್ನು ಖರೀದಿಸುವಾಗ ನಮ್ಮ ಸ್ಥಳೀಯ ಉತ್ಪನ್ನಗಳಿಗೆ ಪ್ರಾಮುಖ್ಯತೆಯನ್ನು ನೀಡಬೇಕು.

ಸ್ನೇಹಿತರೇ, ಹಬ್ಬಗಳ ಈ ಹರ್ಷೋಲ್ಲಾಸದ ಮಧ್ಯೆ  ಲಾಕ್ ಡೌನ್ ಸಮಯವನ್ನೂ ನೆನಪಿಸಿಕೊಳ್ಳಬೇಕು. ಲಾಕ್ ಡೌನ್ ನಲ್ಲಿ ಸ್ವಚ್ಛತಾ ಕರ್ಮಚಾರಿಗಳ ಬಗ್ಗೆ, ಮನೆಗೆಲಸ ಮಾಡುವ ಸೋದರ ಸೋದರಿಯರು, ಸ್ಥಳೀಯ ತರಕಾರಿ ಮಾರಾಟಗಾರರು, ಹಾಲು ಮಾರುವವರು, ಸುರಕ್ಷತಾ ಸಿಬ್ಬಂದಿ ಹೀಗೆ ಸಮಾಜದ ಈ ಸ್ನೇಹಿತರನ್ನು ಮತ್ತಷ್ಟು ಹತ್ತಿರದಿಂದ ಅರಿತಿದ್ದೇವೆ. ಇವರಿಲ್ಲದೆ ನಮ್ಮ ಜೀವನ ಬಹಳ ಕಷ್ಟದಾಯಕವಾಗುತ್ತಿತ್ತು. ನಮ್ಮ ಜೀವನದಲ್ಲಿ ಇವರೆಲ್ಲರ ಪಾತ್ರ ಏನು ಎಂಬುದನ್ನು ನಾವೀಗ ಅಕ್ಷರಶಃ ಅರಿತಿದ್ದೇವೆ. ಕಷ್ಟಕಾಲದಲ್ಲಿ ಇವರು ನಮ್ಮೆಲ್ಲರ ಜೊತೆಗಿದ್ದರು. ಈಗ ನಮ್ಮ ಹಬ್ಬಗಳಲ್ಲೂ, ಸಂತೋಷದಲ್ಲೂ ಇವರನ್ನು ಭಾಗಿಯಾಗಿಸಿಕೊಳ್ಳೋಣ. ಸಾಧ್ಯವಾದ ರೀತಿಯಲ್ಲಿ ಇವರನ್ನು ನಿಮ್ಮ ಸಂಭ್ರಮದಲ್ಲಿ ಭಾಗಿಯಾಗಿಸಿಕೊಳ್ಳಿ, ಕುಟುಂಬದ ಸದಸ್ಯರಂತೆ ಪರಿಗಣಿಸಿ ಎಂಬುದು ನನ್ನ ಆಗ್ರಹ. ಆಗ ನೋಡಿ ನಿಮ್ಮ ಸಂಭ್ರಮ ಎಷ್ಟು ವೃದ್ಧಿಸುತ್ತದೆ ಎಂದು.     

ಸ್ನೇಹಿತರೇ, ಈ ಹಬ್ಬಗಳ ಸಂದರ್ಭದಲ್ಲೂ ಗಡಿಗಳಲ್ಲಿ ಅಚಲವಾಗಿ ನಿಂತಿರುವ ಭಾರತ ಮಾತೆಯ ಸೇವೆ ಮತ್ತು ಸುರಕ್ಷತೆಯಲ್ಲಿ ತೊಡಗಿರುವ, ನಮ್ಮ ವೀರ ಸೈನಿಕರನ್ನು ನಾವು ನೆನಪಿನಲ್ಲಿಡಬೇಕು. ಅವರನ್ನು ನೆನೆಸಿಕೊಂಡೇ ಹಬ್ಬಗಳನ್ನು ಆಚರಿಸಬೇಕು. ಭಾರತ ಮಾತೆಯ ವೀರ ಸುಪುತ್ರರು ಮತ್ತು ಸುಪುತ್ರಿಯರ ಸನ್ಮಾನದಲ್ಲಿ ಮನೆಯಲ್ಲಿ ಒಂದು ದೀಪವನ್ನು ಬೆಳಗಬೇಕು. ನಮ್ಮ ವೀರ ಯೋಧರಿಗೂ ನಾನು ಹೇಳಬಯಸುವುದೇನೆಂದರೆ– ನೀವು ಗಡಿಯಲ್ಲಿರಬಹುದು ಆದರೆ ಸಂಪೂರ್ಣ ರಾಷ್ಟ್ರ ನಿಮ್ಮೊಂದಿಗಿದೆ. ನಿಮಗಾಗಿ ಪ್ರಾರ್ಥಿಸುತ್ತಿದೆ/ಶುಭಹಾರೈಸುತ್ತಿದೆ. ಯಾರ ಸುಪುತ್ರರು ಮತ್ತು ಸುಪುತ್ರಿಯರು ಇಂದು ಗಡಿಗಳಲ್ಲಿ ಕರ್ತವ್ಯನಿರತರಾಗಿದ್ದಾರೋ ಆ ಕುಟುಂಬಗಳ ತ್ಯಾಗಕ್ಕೂ ನಾನು ವಂದಿಸುತ್ತೇನೆ. ದೇಶದ ಒಂದಲ್ಲಾ ಒಂದು ಜವಾಬ್ದಾರಿ ನಿಭಾಯಿಸಲು ಯಾರು ತಮ್ಮ ಮನೆಯಲ್ಲಿರದೇ ಕುಟುಂಬದಿಂದ ದೂರವಿದ್ದಾರೋ ಅಂಥ ಪ್ರತಿ ವ್ಯಕ್ತಿಗೆ ಹೃದಯಪೂರ್ವಕ ಕೃತಜ್ಞತೆ ಸಲ್ಲಿಸುತ್ತೇನೆ.     

ನನ್ನ ಪ್ರಿಯ ದೇಶಬಾಂಧವರೆ, ಇಂದು ನಾವು ಸ್ಥಳೀಯ ವಸ್ತುಗಳಿಗಾಗಿ ಧ್ವನಿ ಎತ್ತುತ್ತಿರುವಾಗ ವಿಶ್ವವೂ ನಮ್ಮ ಸ್ಥಳೀಯ ವಸ್ತುಗಳಿಗೆ ಅಭಿಮಾನ ಬೆಳೆಸಿಕೊಳ್ಳುತ್ತಿದೆ. ನಮ್ಮ ಬಹಳಷ್ಟು ಸ್ಥಳೀಯ ವಸ್ತುಗಳಿಗೆ ಜಾಗತಿಕ ಮಟ್ಟಕ್ಕೇರುವ ಸಾಮರ್ಥ್ಯವಿದೆ. ಉದಾಹರಣೆಗೆ ಖಾದಿ – ಸುದೀರ್ಘಾವಧಿವರೆಗೆ ಖಾದಿ ಸರಳತೆಯ ಸಂಕೇತವಾಗಿತ್ತು, ಆದರೆ ಇಂದು ನಮ್ಮ ಖಾದಿ ಪರಿಸರ ಸ್ನೇಹಿ ಬಟ್ಟೆಯ ರೂಪದಲ್ಲಿ ಜನಜನಿತವಾಗಿದೆ. ಆರೋಗ್ಯದ ದೃಷ್ಟಿಯಿಂದಲೂ ದೇಹಕ್ಕೆ ಹಿತವಾಗುವ ಬಟ್ಟೆಯಾಗಿದೆ, ಎಲ್ಲ ಋತುಗಳ ಬಟ್ಟೆಯಾಗಿದೆ. ಇಂದು ಖಾದಿ ಫ್ಯಾಷನ್ ವಿಶ್ವಕ್ಕೂ ಲಗ್ಗೆ ಇಡುತ್ತಿದೆ. ಖಾದಿ ಖ್ಯಾತಿ ಬೆಳೆಯುವುದರ ಜೊತೆಗೆ ವಿಶ್ವದ ಹಲವೆಡೆ ಖಾದಿ ಉತ್ಪಾದಿಸಲಾಗುತ್ತಿದೆ. ಮೆಕ್ಸಿಕೊದಲ್ಲಿ ಒಹಾಕಾ ಎಂಬ ಒಂದು ಸ್ಥಳವಿದೆ. ಈ ಪ್ರದೇಶದಲ್ಲಿ ಹಲವಾರು ಗ್ರಾಮಗಳಲ್ಲಿ ಸ್ಥಳೀಯರು ಗ್ರಾಮೀಣ ಖಾದಿ ನೇಯುವ ಕೆಲಸ ಮಾಡುತ್ತಾರೆ. ಇಂದು ಇಲ್ಲಿಯ ಖಾದಿ ‘ಒಹಾಕಾ ಖಾದಿ’ ಎಂದು ಪ್ರಸಿದ್ಧವಾಗಿದೆ. ಒಹಾಕಾಗೆ ಖಾದಿ ಹೇಗೆ ತಲುಪಿತು ಎಂಬುದು ಕೂಡ ಕುತೂಹಲಕಾರಿ ಸಂಗತಿ. ಮೆಕ್ಸಿಕೊದ ಒಬ್ಬ ಯುವಕ ಮಾರ್ಕ್ ಬ್ರೌನ್, ಒಮ್ಮೆ ಮಹಾತ್ಮಾ ಗಾಂಧಿಯವರ ಕುರಿತು ಒಂದು ಚಿತ್ರವನ್ನು ನೋಡಿದ. ಈ ಚಿತ್ರದಿಂದ ಬಹಳ ಪ್ರಭಾವಿತನಾದ ಬ್ರೌನ್ ಭಾರತದಲ್ಲಿ ಬಾಪು ಅವರ ಆಶ್ರಮಕ್ಕೆ ಬಂದರು ಮತ್ತು ಬಾಪು ಅವರ ಬಗ್ಗೆ ಮತ್ತಷ್ಟು ಆಳ ಅಧ್ಯಯನ ಮಾಡಿದರು. ಆಗ ಬ್ರೌನ್ ಅವರಿಗೆ ಖಾದಿ ಎಂಬುದು ಒಂದು ವಸ್ತ್ರವಲ್ಲ ಒಂದು ಸಂಪೂರ್ಣ ಜೀವನಪದ್ಧತಿ ಎಂಬುದು ಅರ್ಥವಾಯಿತು. ಗ್ರಾಮೀಣ ಅರ್ಥವ್ಯವಸ್ಥೆ ಮತ್ತು ಸ್ವಾವಲಂಬನೆ ಹೇಗೆ ಇದರೊಂದಿಗೆ ಬೆರೆತುಕೊಂಡಿದೆ ಎಂದರಿತ ಬ್ರೌನ್ ಬಹಳ ಪ್ರಭಾವಿತರಾದರು. ಆಗಲೇ ಮೆಕ್ಸಿಕೊಗೆ ತೆರಳಿ ಖಾದಿ ಕೆಲಸವನ್ನು ಆರಂಭಿಸುವುದಾಗಿ ಬ್ರೌನ್ ನಿರ್ಧರಿಸಿದರು. ಅವರು ಮೆಕ್ಸಿಕೊದ ಒಹಾಕಾದಲ್ಲಿ ಗ್ರಾಮಸ್ಥರಿಗೆ ಖಾದಿ ಕೆಲಸವನ್ನು ಕಲಿಸಿದರು. ಅವರಿಗೆ ತರಬೇತಿ ನೀಡಿದರು. ಇಂದು ‘ಒಹಾಕಾ ಖಾದಿ’ ಒಂದು ಬ್ರ್ಯಾಂಡ್ ಆಗಿ ಹೊರಹೊಮ್ಮಿದೆ. ಈ ಯೋಜನೆಯ ವೆಬ್ ಸೈಟ್ ನಲ್ಲಿ – ‘ದಿ ಸಿಂಬಲ್ ಆಫ್ ಧರ್ಮ ಇನ್ ಮೋಶನ್’ ಎಂದು ಬರೆದಿದೆ. ಈ ವೆಬ್ ಸೈಟ್ ನಲ್ಲಿ ಮಾರ್ಕ್ ಬ್ರೌನ್ ಅವರ ಒಂದು ಆಸಕ್ತಿಕರ ಸಂದರ್ಶನವೂ ಲಭ್ಯವಿದೆ. ಆರಂಭದಲ್ಲಿ ಜನರು ಖಾದಿ ಕುರಿತು ಸಂದೇಹ ಹೊಂದಿದ್ದರು. ಆದರೆ ಕೊನೆಗೆ ಇದರಲ್ಲಿ ಜನರ ಆಸಕ್ತಿ ಬೆಳೆಯಿತು ಮತ್ತು ಇದಕ್ಕೆ ಮಾರುಕಟ್ಟೆ ಸಿದ್ಧವಾಯಿತು ಎಂದು ಅವರು ಹೇಳುತ್ತಾರೆ. ಇವು ರಾಮರಾಜ್ಯಕ್ಕೆ ಸಂಬಂಧಿಸಿದ ಮಾತುಗಳು, ನೀವು ಜನರ ಅವಶ್ಯಕತೆಗಳನ್ನು ಪೂರೈಸಿದಾಗ ಜನರು ನಿಮ್ಮೊಂದಿಗೆ ಬೆರೆಯಲು ಮುಂದೆ ಬರುತ್ತಾರೆ ಎಂದು ಅವರು ಹೇಳುತ್ತಾರೆ.                     

ಸ್ನೇಹಿತರೇ, ದೆಹಲಿಯ ಕನ್ನಾಟ್ ಪ್ಲೇಸ್ ನ ಖಾದಿ ಅಂಗಡಿಯಲ್ಲಿ ಈ ಬಾರಿ ಗಾಂಧಿ ಜಯಂತಿಯಂದು ಒಂದೇ ದಿನ ಒಂದು ಕೋಟಿ ರೂಪಾಯಿಗಿಂತ ಹೆಚ್ಚು ಖರೀದಿಯಾಗಿದೆ. ಇದೇ ರೀತಿ ಕೊರೊನಾ ಸಮಯದಲ್ಲಿ ಖಾದಿ ಮಾಸ್ಕ್ ಗಳು ಬಹಳ ಜನಪ್ರೀಯವಾಗುತ್ತಿವೆ. ದೇಶಾದ್ಯಂತ ಬಹಳ ಸ್ಥಳಗಳಲ್ಲಿ ಸ್ವಸಹಾಯ ಗುಂಪುಗಳು ಮತ್ತು ಬೇರೆ ಸಂಸ್ಥೆಗಳು ಖಾದಿ ಮುಖಗವಸುಗಳನ್ನು ತಯಾರಿಸುತ್ತಿವೆ. ಉತ್ತರ ಪ್ರದೇಶದಲ್ಲೂ ಬಾರಾಬಂಕಿಯಲ್ಲಿ ಸುಮನ್ ದೇವಿ ಎಂಬ ಓರ್ವ ಮಹಿಳೆ ಇದ್ದಾರೆ. ಸುಮನ್ ಅವರು ತಮ್ಮ ಸ್ವಸಹಾಯ ಗುಂಪಿನ ಇತರ ಮಹಿಳೆಯರೊಡಗೂಡಿ ಖಾದಿ ಮುಖಗವಸುಗಳನ್ನು ತಯಾರಿಸಲಾರಂಭಿಸಿದರು. ಕ್ರಮೇಣ ಅವರೊಂದಿಗೆ ಇತರ ಮಹಿಳೆಯರು ಒಗ್ಗೂಡಲಾರಂಭಿಸಿದರು. ಈಗ ಅವರೆಲ್ಲರೂ ಸೇರಿ ಸಾವಿರಾರು ಖಾದಿ ಮುಖಗವಸುಗಳನ್ನು ತಯಾರಿಸುತ್ತಿದ್ದಾರೆ. ನಮ್ಮ ಸ್ಥಳೀಯ ಉತ್ಪನ್ನಗಳ ವಿಶೇಷತೆಯೇನೆಂದರೆ ಅವುಗಳ ಜೊತೆಗೆ ಒಂದು ಅದ್ಭುತವಾದ ದರ್ಶನವೂ ಬೆಸೆದುಕೊಂಡಿರುತ್ತದೆ.      

ನನ್ನ ಪ್ರಿಯ ದೇಶಬಾಂಧವರೆ, ನಮ್ಮ ವಸ್ತುಗಳ ಮೇಲೆ ನಮಗೆ ಅಭಿಮಾನವಿದ್ದಾಗ ವಿಶ್ವದಲ್ಲೂ ಅವುಗಳ ಬಗ್ಗೆ ಜಿಜ್ಞಾಸೆ ಮೂಡುತ್ತದೆ. ನಮ್ಮ ಆಧ್ಯಾತ್ಮ, ಯೋಗ, ಆಯುರ್ವೇದ ಸಂಪೂರ್ಣ ವಿಶ್ವವನ್ನು ಆಕರ್ಷಿಸಿದಂತೆ ನಮ್ಮ ಹಲವಾರು ಕ್ರೀಡೆಗಳೂ ವಿಶ್ವವನ್ನು ಆಕರ್ಷಿಸುತ್ತಿವೆ. ಈ ಮಧ್ಯೆ ನಮ್ಮ ಮಲ್ಲಕಂಬವೂ ಅನೇಕ ದೇಶಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಅಮೇರಿಕದಲ್ಲಿ ಚಿನ್ಮಯ ಪಾಠನ್ ಕರ್ ಮತ್ತು ಪ್ರಜ್ಞಾ ಪಾಠನ್ ಕರ್ ತಮ್ಮ ಮನೆಯಿಂದಲೇ ಮಲ್ಲಕಂಬ ಕಲಿಯಲಾರಂಭಿಸಿದಾಗ ಅವರಿಗೂ ಇದಕ್ಕೆ ಇಷ್ಟೊಂದು ಸಫಲತೆ ದೊರೆಯುತ್ತದೆ ಎಂಬುದರ ಻಻ಅರಿವಿರಲಿಲ್ಲ. ಅಮೆರಿಕದಲ್ಲಿ ಇಂದು ಬಹಳಷ್ಟು ಸ್ಥಳಗಳಲ್ಲಿ ಮಲ್ಲಕಂಬ ತರಬೇತಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ದೊಡ್ಡ ಸಂಖ್ಯೆಯಲ್ಲಿ ಅಮೇರಿಕದ ಯುವಜನತೆ ಇದರೊಂದಿಗೆ ಬೆರೆಯುತ್ತಿದ್ದಾರೆ. ಮಲ್ಲಕಂಬ ಕಲಿಯುತ್ತಿದ್ದಾರೆ. ಇಂದು ಜರ್ಮನಿಯಾಗಲಿ, ಪೋಲ್ಯಾಂಡ್ ಆಗಲಿ, ಮಲೇಷ್ಯಾ ಆಗಲಿ ಹೀಗೆ ಸುಮಾರು 20 ಬೇರೆ ದೇಶಗಳಲ್ಲಿ ಮಲ್ಲಕಂಬ ಪ್ರಸಿದ್ಧಗೊಳ್ಳುತ್ತಿದೆ. ಈಗಂತೂ ಇದರ ವಿಶ್ವ ಚಾಂಪಿಯನ್ ಶಿಪ್  ಆರಂಭಿಸಲಾಗಿದೆ. ಇದರಲ್ಲಿ ಹಲವಾರು ದೇಶಗಳ ಸ್ಪರ್ಧಿಗಳು ಭಾಗವಹಿಸುತ್ತಾರೆ. ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ನಮ್ಮಲ್ಲಿ ಅಸಾಧಾರಣ ವಿಕಾಸವನ್ನು ಮೂಡಿಸುವಂತಹ ಇಂಥ ಹಲವಾರು ಕ್ರೀಡೆಗಳು ಇವೆ. ಇವು ನಮ್ಮ ಮನಸ್ಸು ಮತ್ತು ದೇಹದ ಸಮತೋಲನವನ್ನು ಒಂದು ನೂತನ ಆಯಾಮಕ್ಕೆ ಕೊಂಡೊಯ್ಯುತ್ತವೆ. ಆದರೆ ಹೊಸ ಪೀಳಿಗೆಯ ನಮ್ಮ ಯುವಜನತೆ ಮಲ್ಲಕಂಬಕ್ಕೆ ಅಷ್ಟೊಂದು ಪರಿಚಿತರಾಗಿರಲಿಕ್ಕಿಲ್ಲ. ಇದನ್ನು ಅಂತರ್ಜಾಲದಲ್ಲಿ ಹುಡುಕಿ ಮತ್ತು ನೋಡಿ.       

ಸ್ನೇಹಿತರೇ, ನಮ್ಮ ದೇಶದಲ್ಲಿ ಹಲವಾರು ಸಮರ ಕಲೆಗಳಿವೆ. ನಮ್ಮ ಯುವ ಸ್ನೇಹಿತರು ಇವುಗಳ ಬಗ್ಗೆಯೂ ತಿಳಿಯಲಿ, ಇವುಗಳನ್ನು ಕಲಿಯಲಿ ಮತ್ತು ಸಮಯಕ್ಕೆ ತಕ್ಕಂತೆ ಹೊಸ ಆವಿಷ್ಕಾರವನ್ನೂ ಮಾಡಲಿ ಎಂದು ನಾನು ಬಯಸುತ್ತೇನೆ. ನಮ್ಮ ಜೀವನದಲ್ಲಿ ದೊಡ್ಡ ದೊಡ್ಡ ಸವಾಲುಗಳು ಎದುರಾಗದಿದ್ದಲ್ಲಿ, ವ್ಯಕ್ತಿತ್ವದ ಸರ್ವೋತ್ಕೃಷ್ಟತೆ ಹೊರಹೊಮ್ಮುವುದಿಲ್ಲ. ಆದ್ದರಿಂದ, ಎಂದಿಗೂ ನಿಮಗೆ ನೀವೇ ಸವಾಲು ಹಾಕಿಕೊಳ್ಳುತ್ತಿರಿ

ನನ್ನ ಪ್ರಿಯ ದೇಶಬಾಂಧವರೆ, ‘Learning is Growing’ ಎಂದು ಹೇಳಲಾಗುತ್ತದೆ. ಇಂದು ಮನದಾಳದ ಮಾತಿನಲ್ಲಿ ನಾನು ನಿಮಗೆ, ಒಂದು ವಿಶಿಷ್ಠವಾದ ಹುಮ್ಮಸ್ಸು ಹೊಂದಿರುವ ವ್ಯಕ್ತಿಯೊಬ್ಬರ ಪರಿಚಯ ಮಾಡಿಕೊಡುತ್ತೇನೆ. ಇತರರೊಂದಿಗೆ ಓದುವ ಮತ್ತು ಕಲಿಯುವ ಹುಮ್ಮಸ್ಸು ಹಂಚಿಕೊಳ್ಳುವ ಅಭ್ಯಾಸ ಇವರಲ್ಲಿದೆ. ಇವರು ಪೊನ್ ಮರಿಯಪ್ಪನ್, ಇವರು ತಮಿಳುನಾಡಿನ ತೂತ್ತುಕುಡಿಯಲ್ಲಿ ಇರುತ್ತಾರೆ. ತೂತ್ತುಕುಡಿ ಪರ್ಲ್ ಸಿಟಿ ಅಂದರೆ ಮುತ್ತಿನ ನಗರಿಯೆಂದೂ ಪ್ರಸಿದ್ಧವಾಗಿದೆ. ಒಂದೊಮ್ಮೆ ಇದು ಪಾಂಡ್ಯನ್ ಸಾಮ್ರಾಜ್ಯದ ಮಹತ್ವಪೂರ್ಣ ಕೇಂದ್ರವಾಗಿತ್ತು. ಇಲ್ಲಿರುವ ನನ್ನ ಸ್ನೇಹಿತ  ಪೊನ್ ಮರಿಯಪ್ಪನ್, ಕ್ಷೌರಿಕ ವೃತ್ತಿಯಲ್ಲಿ ನಿರತರಾಗಿದ್ದು ಸಲೂನ್ ಒಂದನ್ನು ಹೊಂದಿದ್ದಾರೆ. ಬಹಳ ಚಿಕ್ಕ ಸಲೂನ್ ಇದೆ. ಅವರು ಒಂದು ವಿಶಿಷ್ಟ ಮತ್ತು ಪ್ರೇರಣಾತ್ಮಕ ಕೆಲಸವನ್ನು ಮಾಡಿದ್ದಾರೆ. ತಮ್ಮ ಸಲೂನ್ ನ ಒಂದು ಭಾಗವನ್ನು ಗ್ರಂಥಾಲಯ ಮಾಡಿದ್ದಾರೆ. ಯಾರೇ ಆಗಲಿ ಸಲೂನ್ ನಲ್ಲಿ ತಮ್ಮ ಸರದಿಗಾಗಿ ಕಾಯುತ್ತಿರುವಾಗ ಅಲ್ಲಿ ಏನಾದರೂ ಓದುತ್ತಾರೆ, ಅಥವಾ ಓದಿರುವ ಬಗ್ಗೆ ಏನಾದರೂ ಬರೆಯುತ್ತಾರಾದರೆ ಅಂಥ ಗ್ರಾಹಕರಿಗೆ ಪೊನ್ ಮರಿಯಪ್ಪನ್ ಅವರು ರಿಯಾಯಿತಿ ನೀಡುತ್ತಾರೆ – ಇದು ಆಸಕ್ತಿಕರವಲ್ಲವೇ .

ಬನ್ನಿ ತೂತ್ತುಕುಡಿಗೆ ಹೊಗೋಣ. ಪೊನ್ ಮರಿಯಪ್ಪನ್ ಅವರೊಂದಿಗೆ ಮಾತಾಡೋಣ

ಪ್ರಧಾನ ಮಂತ್ರಿ: ಪೊನ್ ಮರಿಯಪ್ಪನ್ ಅವರೆ ವಣಕ್ಕಂ….ಚೆನ್ನಾಗಿದ್ದೀರಾ

ಪೊನ್ ಮರಿಯಪ್ಪನ್ : ಮಾನ್ಯ ಪ್ರಧಾನ ಮಂತ್ರಿಗಳೇ ವಣಕ್ಕಂ

ಪ್ರಧಾನ ಮಂತ್ರಿ: ವಣಕ್ಕಂ, ವಣಕ್ಕಂ… …  ನಿಮಗೆ ಗ್ರಂಥಾಲಯದ ಯೋಚನೆ ಯಾವಾಗ ಬಂತು

ಪೊನ್ ಮರಿಯಪ್ಪನ್ : ನಾನು 8 ನೇ ತರಗತಿವರೆಗೆ ಓದಿದ್ದೇನೆ. ಅದರ ನಂತರ ಪಾರಿವಾರಿಕ ಸ್ಥಿತಿಯಿಂದಾಗಿ ಓದನ್ನು ಮುಂದುವರಿಸಲಾಗಲಿಲ್ಲ. ನಾನು ಓದಿದವರನ್ನು ನೋಡಿದಾಗ ನನ್ನ ಮನದಲ್ಲಿ ಏನೋ ಕೊರತೆ ಕಾಡುತ್ತಿತ್ತು. ಆದ್ದರಿಂದ ನನ್ನ ಮನದಲ್ಲಿ ಒಂದು ಗ್ರಂಥಾಲಯವನ್ನು ಏಕೆ ಸ್ಥಾಪಿಸಬಾರದು ಎಂಬ ಆಲೋಚನೆ ಬಂತು. ಅದರಿಂದ ಬಹಳಷ್ಟು ಜನರಿಗೆ ಇದರಿಂದ ಲಾಭವಾಗುತ್ತದೆ ಎಂಬುದೇ ನನಗೆ ಪ್ರೇರಣೆ ನೀಡಿತು.  

ಪ್ರಧಾನ ಮಂತ್ರಿ: ನಿಮಗೆ ಯಾವ ಪುಸ್ತಕ ಬಹಳ ಇಷ್ಟ?

ಪೊನ್ ಮರಿಯಪ್ಪನ್ : ‘ನನಗೆ ತಿರುಕ್ಕುರುಳ್’ ಬಹಳ ಇಷ್ಟ

ಪ್ರಧಾನ ಮಂತ್ರಿ: ನಿಮ್ಮೊಂದಿಗೆ ಮಾತನಾಡಿ ಬಹಳ ಆನಂದವಾಯಿತು. ತಮಗೆ ಅನಂತ ಶುಭಹಾರೈಕೆಗಳು

ಪೊನ್ ಮರಿಯಪ್ಪನ್ : ನನಗೂ ಮಾನ್ಯ  ಪ್ರಧಾನ ಮಂತ್ರಿಗಳೊಂದಿಗೆ ಮಾತನಾಡುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. 

ಪ್ರಧಾನ ಮಂತ್ರಿ: ಅನಂತ ಶುಭಹಾರೈಕೆಗಳು

ಪೊನ್ ಮರಿಯಪ್ಪನ್ : ಧನ್ಯವಾದಗಳು ಪ್ರಧಾನ ಮಂತ್ರಿಯವರೇ 

ಪ್ರಧಾನ ಮಂತ್ರಿ: ಧನ್ಯವಾದಗಳು     

ನಾವು ಇದೀಗ ಪೊನ್ ಮರಿಯಪ್ಪನ್ ಅವರೊಂದಿಗೆ ಮಾತನಾಡಿದೆವು. ಅವರು ಜನರ ಕೇಶವಿನ್ಯಾಸವನ್ನಂತೂ ಮಾಡುತ್ತಾರೆ ಅದರ ಜೊತೆಗೆ ಜೀವನ ವಿನ್ಯಾಸಗೊಳಿಸಿಕೊಳ್ಳಲೂ ಅವಕಾಶ ನೀಡುತ್ತಾರೆ. ತಿರುಕ್ಕುರುಳ್ ನ ಜನಪ್ರೀಯತೆಯ ಬಗ್ಗೆ ಕೇಳಿ ಬಹಳ ಸಂತೋಷವಾಯಿತು. ತಿರುಕ್ಕುರುಳ್ ಜನಪ್ರೀಯತೆಯ ಬಗ್ಗೆ ನೀವೆಲ್ಲರೂ ಕೇಳಿದಿರಿ. ಇಂದು ಭಾರತದ ಎಲ್ಲ ಭಾಷೆಗಳಲ್ಲಿ ತಿರುಕ್ಕುರುಳ್ ಲಭ್ಯವಿದೆ. ಅವಕಾಶ ಸಿಕ್ಕರೆ ಖಂಡಿತ ಓದಬೇಕು. ಒಂದು ರೀತಿಯಲ್ಲಿ ಅದು ಜೀವನಕ್ಕೆ ಮಾರ್ಗದರ್ಶಿಯಿದ್ದಂತಿದೆ.

ಸ್ನೇಹಿತರೇ, ಜ್ಞಾನವನ್ನು ಹರಡುವ ಮೂಲಕ ಅಪಾರ ಸಂತೋಷ ಪಡೆದುಕೊಳ್ಳುವ ಅನೇಕ ಮಂದಿ ಭಾರತದಾದ್ಯಂತ ಇದ್ದಾರೆ ಎಂದು ತಿಳಿದರೆ ನಿಮಗೆ ಸಂತೋಷವಾಗುತ್ತದೆ. ಓದಬೇಕೆಂದು ಪ್ರತಿಯೊಬ್ಬರೂ ಪ್ರೇರೇಪಿತರಾಗಬೇಕೆಂದು ಬಯಸುವ ಜನರು ಇವರಾಗಿದ್ದಾರೆ. ಮಧ್ಯಪ್ರದೇಶದ ಸಿಂಗ್ರೌಲಿಯ ಶಿಕ್ಷಕಿ ಉಷಾ ದುಬೆ ಅವರು ತಮ್ಮ ಸ್ಕೂಟಿಯನ್ನೇ ಸಂಚಾರಿ ಗ್ರಂಥಾಲಯವನ್ನಾಗಿ (mobile library) ಬದಲಾಯಿಸಿಬಿಟ್ಟಿದ್ದಾರೆ. ಅವರು ಪ್ರತಿದಿನ ತಮ್ಮ ಚಲಿಸುವ ಗ್ರಂಥಾಲಯದೊಂದಿಗೆ ಯಾವುದಾದರೊಂದು ಹಳ್ಳಿಗೆ ತಲುಪುತ್ತಾರೆ ಮತ್ತು ಅಲ್ಲಿನ ಮಕ್ಕಳಿಗೆ ಓದು ಕಲಿಸುತ್ತಾರೆ. ಮಕ್ಕಳು ಆಕೆಯನ್ನು ಪ್ರೀತಿಯಿಂದ ಪುಸ್ತಕದ ಅಕ್ಕಾ ಎಂದು ಕರೆಯುತ್ತಾರೆ. ಈ ವರ್ಷದ ಆಗಸ್ಟ್ ತಿಂಗಳಿನಲ್ಲಿ ಅರುಣಾಚಲ ಪ್ರದೇಶದ ನಿರ್ಜುಲಿಯ ರೆಯೋ(Rayo) ಗ್ರಾಮದಲ್ಲಿ ಒಂದು ಸ್ವ–ಸಹಾಯ ಗ್ರಂಥಾಲಯ (Self Help Library) ನಿರ್ಮಿಸಲಾಯಿತು. ವಾಸ್ತವದಲ್ಲಿ, ಇಲ್ಲಿನ ಮೀನಾ ಗುರಂಗ್ ಮತ್ತು ದಿವಾಂಗ್ ಹೊಸಾಯಿ ಅವರುಗಳಿಗೆ ಅಲ್ಲಿ ಯಾವುದೇ ಗ್ರಂಥಾಲಯವಿಲ್ಲ ಎಂದು ತಿಳಿದುಬಂದಾಗ ಅದರ ನಿಧಿಗಾಗಿ ಅವರು ಸಹಾಯ ಹಸ್ತ ಚಾಚಿದರು. ಈ ಗ್ರಂಥಾಲಯದಲ್ಲಿ ಯಾವುದೇ ಸದಸ್ಯತ್ವ ಇಲ್ಲ ಎಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಯಾರೇ ಆದರೂ ಎರಡು ವಾರಗಳಿಗಾಗಿ ಪುಸ್ತಕ ಕೊಂಡೊಯ್ಯಬಹುದು. ಓದಿಯಾದ ನಂತರ ಅದನ್ನು ಹಿಂದಿರುಗಿಸಬೇಕಾಗುತ್ತದೆ. ಈ ಗ್ರಂಥಾಲಯ ವಾರದ ಏಳೂ ದಿನ, ದಿನದ ಇಪ್ಪತ್ನಾಲ್ಕು ಗಂಟೆಗಳ ಕಾಲವೂ ತೆರೆದೇ ಇರುತ್ತದೆ. ನೆರೆಹೊರೆಯ ಪೋಷಕರು ತಮ್ಮ ಮಕ್ಕಳು ಪುಸ್ತಕ ಓದುವುದರಲ್ಲಿ ನಿರತರಾಗಿರುವುದನ್ನು ನೋಡಿ ಬಹಳ ಸಂತೋಷಗೊಂಡಿದ್ದಾರೆ. ಅದರಲ್ಲೂ ವಿಶೇಷವಾಗಿ ಶಾಲೆಗಳು ಕೂಡಾ ಆನ್ಲೈನ್ ತರಗತಿಗಳು ಆರಂಭಿಸಿರುವ ಸಮಯದಲ್ಲಿ. ಚಂಡೀಗಢದಲ್ಲಿ ಒಂದು ಸರ್ಕಾರೇತರ ಸಂಸ್ಥೆ (NGO) ನಡೆಸುವ ಸಂದೀಪ್ ಕುಮಾರ್ ಅವರು ಮಿನಿ ವ್ಯಾನೊಂದರಲ್ಲಿ (mini van) ಸಂಚಾರಿ ಗ್ರಂಥಾಲಯ ನಿರ್ಮಿಸಿದ್ದು, ಇದರ ಮೂಲಕ ಬಡ ಮಕ್ಕಳಿಗೆ ಓದಲು ಉಚಿತವಾಗಿ ಪುಸ್ತಕಗಳನ್ನು ನೀಡಲಾಗುತ್ತಿದೆ. ಇದರೊಂದಿಗೇ ಗುಜರಾತ್ ನ ಭಾವನಗರದಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿರುವ ಎರಡು ಸಂಸ್ಥೆಗಳ ಬಗ್ಗೆ ಕೂಡಾ ತಿಳಿದುಕೊಂಡಿದ್ದೇನೆ.  ಅವುಗಳಲ್ಲಿ ಒಂದು ‘ವಿಕಾಸ್ ವರ್ತುಲ್ ಟ್ರಸ್ಟ್’.  ಈ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುವ ವಿದ್ಯಾರ್ಥಿಗಳಿಗೆ ಬಹಳ ಸಹಾಯಕವಾಗಿದೆ. ಈ ಸಂಸ್ಥೆ 1975 ರಿಂದ ಕಾರ್ಯ ನಿರ್ವಹಿಸುತ್ತಿದೆ ಮತ್ತು ಇದು 5,000 ಪುಸ್ತಕಗಳ ಜೊತೆಯಲ್ಲಿ 140 ಕ್ಕಿಂತ ಹೆಚ್ಚು ನಿಯತಕಾಲಿಕೆಗಳನ್ನು (magazine) ಒದಗಿಸುತ್ತದೆ. ಇಂತಹದ್ದೇ ಒಂದು ಸಂಸ್ಥೆ ‘ಪುಸ್ತಕ್ ಪರಬ್.  ಇದೊಂದು ನವೀನ ಯೋಜನೆಯಾಗಿದ್ದು, ಸಾಹಿತ್ಯಾತ್ಮಕ ಪುಸ್ತಕಗಳೊಂದಿಗೆ ಮತ್ತೊಂದು ಪುಸ್ತಕವನ್ನು ಉಚಿತವಾಗಿ ಒದಗಿಸುತ್ತದೆ. ಈ ಗ್ರಂಥಾಲಯದಲ್ಲಿ ಆಧ್ಯಾತ್ಮಿಕ, ಆಯುರ್ವೇದ ಚಿಕಿತ್ಸೆ ಮತ್ತು ಇನ್ನೂ ಅನೇಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಕೂಡಾ ಇವೆ. ನಿಮಗೇನಾದರೂ ಇಂತಹ ಅಥವಾ ಇಂತಹ ಪ್ರಯತ್ನಗಳ ಬಗ್ಗೆ ತಿಳಿದಿದ್ದರೆ, ಅದನ್ನು ಸಾಮಾಜಿಕ ಮಾಧ್ಯಮದಲ್ಲಿ (social media) ಖಂಡಿತವಾಗಿಯೂ ಹಂಚಿಕೊಳ್ಳಬೇಕೆಂದು ನಿಮ್ಮಲ್ಲಿ ನಾನು ಮನವಿ ಮಾಡುತ್ತಿದ್ದೇನೆ. ಈ ಉದಾಹರಣೆ ಕೇವಲ ಪುಸ್ತಕ ಓದುವುದು ಅಥವಾ ಗ್ರಂಥಾಲಯ ಪ್ರಾರಂಭಿಸುವುದಕ್ಕೆ ಮಾತ್ರ ಸೀಮಿತವಲ್ಲ, ಇದು ನವ ಭಾರತದ ಭಾವನೆಯ ಪ್ರತೀಕವೂ ಆಗಿದ್ದು, ಸಮಾಜದ ಅಭಿವೃದ್ಧಿಗಾಗಿ ಪ್ರತಿಯೊಂದು ಕ್ಷೇತ್ರದಲ್ಲೂ, ಪ್ರತಿ ವರ್ಗದ ಜನರು ಹೊಸ ಹೊಸ ಮತ್ತು ನವೀನ ವಿಧಾನಗಳನ್ನು ಅಳವಡಿಸಿಕೊಳ್ಳುತ್ತಿದ್ದಾರೆ ಎಂಬುದನ್ನು ಸೂಚಿಸುತ್ತಿದೆ

ನ ಹೀ ಜ್ಞಾನೇನ ಸದೃಶಂ ಪವಿತ್ರ ಮಿಹ ವಿದ್ಯತೇ (न हि ज्ञानेन सदृशं पवित्रमिह विद्यते)

ಅಂದರೆ, ಜ್ಞಾನಕ್ಕೆ ಸಮಾನವಾದ ಪವಿತ್ರವಾದ ವಿಷಯ ಮತ್ಯಾವುದೂ ಇಲ್ಲ. ಜ್ಞಾನವನ್ನು ಹರಡುವವರಿಗೆ, ಇಂತಹ ಉತ್ತಮ ಪ್ರಯತ್ನ ಮಾಡುವವರಿಗೆ, ಎಲ್ಲಾ ಮಹಾನುಭಾವರಿಗೂ ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತಿದ್ದೇನೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಜಯಂತಿಯಾದ, ಅಕ್ಟೋಬರ್ 31 ರಂದು ನಾವೆಲ್ಲರೂ ‘ರಾಷ್ಟ್ರೀಯ ಏಕತಾ ದಿವಸ್’ ಆಚರಿಸುತ್ತೇವೆ. ‘ಮನದ ಮಾತಿ’ನಲ್ಲಿ ನಾವು ಈ ಮೊದಲು ಸರ್ದಾರ್ ಪಟೇಲ್ ಅವರ ಬಗ್ಗೆ ವಿವರವಾಗಿ ಮಾತನಾಡಿದ್ದೇವೆ. ಅವರ ಶ್ರೇಷ್ಠ ವ್ಯಕ್ತಿತ್ವದ ಹಲವು ಆಯಾಮಗಳ ಬಗ್ಗೆ ಚರ್ಚಿಸಿದ್ದೇವೆ. ಏಕಕಾಲದಲ್ಲಿ ಹಲವು ಸಿದ್ಧಾಂತಗಳನ್ನೊಳಗೊಂಡ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳು ಬಹಳ ವಿರಳವಾಗಿ ಸಿಗುತ್ತಾರೆ – ಆಳವಾದ ವೈಚಾರಿಕತೆ. ನೈತಿಕ ಸ್ಥೈರ್ಯ, ರಾಜಕೀಯ ಕುಶಾಗ್ರಮತಿ, ಕೃಷಿ ಕ್ಷೇತ್ರದಲ್ಲಿ ಆಳವಾದ ಜ್ಞಾನ ಮತ್ತು ರಾಷ್ಟ್ರೀಯ ಏಕತೆಗೆ ಸಮರ್ಪಣೆಯ ಭಾವನೆ. ಸರ್ದಾರ್ ಪಟೇಲ್ ಅವರ ಹಾಸ್ಯ ಪ್ರಜ್ಞೆಯನ್ನು (sense of humour) ಪ್ರತಿಬಿಂಬಿಸುವ ಒಂದು ವಿಷಯ ನಿಮಗೆ ತಿಳಿದಿದೆಯೇ? ರಾಜರು – ರಾಜಮನೆತನದೊಂದಿಗೆ ಮಾತುಕತೆ ನಡೆಸುತ್ತಿದ್ದರು, ಪೂಜ್ಯ ಬಾಪೂ ಅವರ ಜನಾಂದೋಲನದ ನಿರ್ವಹಣೆ ಮಾಡುತ್ತಿದ್ದರು, ಬ್ರಿಟಿಷರೊಂದಿಗೆ ಯುದ್ಧವನ್ನು ಕೂಡಾ ಮಾಡುತ್ತಿದ್ದರು. ಅದರ ಮಧ್ಯದಲ್ಲಿಯೇ ಹಾಸ್ಯ ಪ್ರಜ್ಞೆ ಕೂಡಾ ಪ್ರದರ್ಶಿಸುತ್ತಿದ್ದ ಆ ಉಕ್ಕಿನ ಮನುಷ್ಯನ ವ್ಯಕ್ತಿತ್ವವನ್ನು ಸ್ವಲ್ಪ ಕಲ್ಪನೆ ಮಾಡಿಕೊಳ್ಳಿ. ಬಾಪೂ ಅವರು ಸರ್ದಾರ್ ಪಟೇಲ್ ಅವರ ಬಗ್ಗೆ ಹೀಗೆಂದಿದ್ದರು – ಅವರ ಹಾಸ್ಯಪೂರ್ಣ ಮಾತುಗಳು ನನ್ನನ್ನು ಎಷ್ಟು ನಗಿಸುವುದೆಂದರೆ, ನಕ್ಕೂ ನಕ್ಕೂ ನನಗೆ ಹೊಟ್ಟೆ ಹುಣ್ಣಾಗುತ್ತಿತ್ತು, ಹೀಗೆ ದಿನದಲ್ಲಿ ಒಂದು ಬಾರಿಯಲ್ಲ, ಅನೇಕ ಬಾರಿ ಆಗುತ್ತಿತ್ತು. ಇದರಲ್ಲಿ ನಮಗೊಂದು ಪಾಠವೂ ಇದೆ, ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ನಿಮ್ಮ ಹಾಸ್ಯ ಪ್ರಜ್ಞೆಯನ್ನು ಜೀವಂತವಾಗಿರಿಸಿಕೊಳ್ಳಿ, ಇದು ನಮ್ಮನ್ನು ಆರಾಮವಾಗಿರಿಸುತ್ತದೆ, ಮತ್ತು ನಾವು ನಮ್ಮ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.  ಸರ್ದಾರ್ ಅವರು ಮಾಡಿದ್ದು ಕೂಡಾ ಇದನ್ನೇ.

ನನ್ನ ಪ್ರೀತಿಯ ದೇಶವಾಸಿಗಳೇ,  ಸರ್ದಾರ್ ಪಟೇಲ್ ಅವರು ತಮ್ಮ ಸಂಪೂರ್ಣ ಜೀವನವನ್ನು ದೇಶದ ಒಗ್ಗಟ್ಟಿಗಾಗಿ ಮೀಸಲಿಟ್ಟರು. ಅವರು ಭಾರತದ ಜನರನ್ನು ಸ್ವಾತಂತ್ರ್ಯದ  ಚಳುವಳಿಗೆ ಸೇರಿಸಿದರು.  ಅವರು ಸ್ವಾತಂತ್ರ್ಯದೊಂದಿಗೆ ರೈತರ ಸಮಸ್ಯೆಗಳನ್ನು ಜೋಡಿಸುವ ಕೆಲಸ ಮಾಡಿದರು. ಅವರು ರಾಜ–ರಾಜ ಮನೆತನಗಳನ್ನುನಮ್ಮ ದೇಶದೊಂದಿಗೆ ಒಂದುಗೂಡಿಸುವ ಕೆಲಸ ಮಾಡಿದರು. ಅವರು ವಿವಿಧತೆಯಲ್ಲಿ ಏಕತೆ ಮಂತ್ರವನ್ನು ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲಿ ಜಾಗೃತಗೊಳಿಸುತ್ತಿದ್ದರು.

ಸ್ನೇಹಿತರೇ, ನಾವಿಂದು ನಮ್ಮ ಮಾತು, ನಮ್ಮ ನಡವಳಿಕೆ, ನಮ್ಮ ಕಾರ್ಯಗಳಿಂದ, ನಮ್ಮನ್ನು ‘ಒಂದುಗೂಡಿಸುವ’ ಹಾಗೂ ದೇಶದ ಒಂದು ಭಾಗದಲ್ಲಿ  ವಾಸಿಸುವ ನಾಗರಿಕನ ಮನಸ್ಸಿನಲ್ಲಿ, ಮತ್ತೊಂದು ಭಾಗದಲ್ಲಿ ವಾಸಿಸುವ ನಾಗರಿಕನಿಗಾಗಿ ಸ್ವಾಭಾವಿಕತೆ ಮತ್ತುಆತ್ಮೀಯತೆಯ ಭಾವನೆ ಜಾಗೃತಗೊಳಿಸುವ ಆ ಎಲ್ಲಾ ಕಾರ್ಯಗಳನ್ನೂ ಪ್ರತಿ ಕ್ಷಣವೂ ಮುನ್ನಡೆಸಬೇಕಾಗಿದೆ.  ನಮ್ಮ ಪೂರ್ವಜರು ಈ ಪ್ರಯತ್ನಗಳನ್ನು ಶತಮಾನಗಳಿಂದಲೂ ನಿರಂತರವಾಗಿ ಮಾಡಿದ್ದಾರೆ.  ಈಗ ನೋಡಿ, ಕೇರಳದಲ್ಲಿ ಜನ್ಮತಾಳಿದ ಪೂಜ್ಯ ಆದಿ ಶಂಕರಾಚಾರ್ಯರು, ಭಾರತದ ನಾಲ್ಕೂ ದಿಕ್ಕುಗಳಲ್ಲಿ ನಾಲ್ಕು ಪ್ರಮುಖ ಮಠಗಳನ್ನು ಸ್ಥಾಪಿಸಿದರು – ಉತ್ತರದಲ್ಲಿ ಬದರಿ, ಪೂರ್ವದಲ್ಲಿ ಪೂರಿ, ದಕ್ಷಿಣದಲ್ಲಿ ಶೃಂಗೇರಿ ಮತ್ತು ಪಶ್ಚಿಮದಲ್ಲಿ ದ್ವಾರಕಾ. ಅವರು ಶ್ರೀನಗರಕ್ಕೂ ಯಾತ್ರೆ ಬೆಳೆಸಿದ್ದರು. ಇದರಿಂದಾಗಿಯೇ ಅಲ್ಲಿ ಒಂದು ಶಂಕರಾಚಾರ್ಯ ಬೆಟ್ಟ (‘Shankracharya Hill’) ಇದೆ.   ತೀರ್ಥಯಾತ್ರೆಯು ಭಾರತವನ್ನು ಒಂದು ಸೂತ್ರದಲ್ಲಿ ಬಂಧಿಸುತ್ತದೆ. ಜ್ಯೋತಿರ್ಲಿಂಗಗಳು ಮತ್ತು ಶಕ್ತಿಪೀಠಗಳು ಭಾರತವನ್ನು ಒಂದು ಸೂತ್ರದಲ್ಲಿ ಬಂಧಿಸುತ್ತವೆ. ತ್ರಿಪುರಾದಿಂದ ಗುಜರಾತ್ ವರೆಗೆ, ಜಮ್ಮು ಕಾಶ್ಮೀರದಿಂದ ತಮಿಳುನಾಡಿನವರೆಗೆ ಸ್ಥಾಪನೆಯಾಗಿರುವ ನಮ್ಮ ಶೃದ್ಧಾ ಕೇಂದ್ರಗಳು ನಮ್ಮನ್ನು ‘ಒಂದುಗೂಡಿಸುತ್ತವೆ’. ಭಕ್ತಿ ಆಂದೋಲನವು ಸಂಪೂರ್ಣ ಭಾರತದಲ್ಲಿ ಒಂದು ದೊಡ್ಡ ಜನಾಂದೋಲನವಾಗಿಬಿಟ್ಟಿತು, ಇದು ನಮ್ಮನ್ನು ಭಕ್ತಿಯ ಮುಖಾಂತರ ಒಂದುಗೂಡಿಸಿತು. ಏಕತೆಯ ಶಕ್ತಿಯಿರುವ ಈ ವಿಷಯಗಳು ನಮ್ಮ ನಿತ್ಯ ಜೀವನದಲ್ಲಿ ಬೆರೆತುಹೋದವು. ಪ್ರತಿ ಆಚರಣೆಗೆ ಮೊದಲು ವಿವಿಧ ನದಿಗಳನ್ನು ಆಹ್ವಾನಿಸಲಾಗುತ್ತದೆ – ಇದರಲ್ಲಿ ದೂರದ ಉತ್ತರದಲ್ಲಿರುವ ಸಿಂಧು ನದಿಯಿಂದ ದಕ್ಷಿಣ ಭಾರತದ ಜೀವನದಿ ಕಾವೇರಿಯವರೆಗೂ ಒಳಗೊಂಡಿದೆ. ಇಲ್ಲಿ ನಮ್ಮ ಜನರು ಹೀಗೆಂದು ಹೇಳುತ್ತಾರೆ –ಸ್ನಾನ ಮಾಡುವ ಸಮಯದಲ್ಲಿ ಪವಿತ್ರ ಭಾವನೆಯಿಂದ ಏಕತೆಯ ಮಂತ್ರವನ್ನೇ ಹೇಳಲಾಗುತ್ತದೆ:

ಗಂಗೇ ಚ ಯಮುನೇ ಚೈವ ಗೋದಾವರಿ ಸರಸ್ವತಿ

ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು

(गंगे च यमुने चैव गोदावरि सरस्वती I

नर्मदे सिन्धु कावेरि जलेSस्मिन् सन्निधिं कुरु II)

ಅಂತೆಯೇ ಸಿಖ್ಖರ ಪವಿತ್ರ ಸ್ಥಳಗಳಲ್ಲಿ ‘ನಾಂದೇಡ್ ಸಾಹಿಬ್’ ಮತ್ತು ‘ಪಠನಾ ಸಾಹಿಬ್’ ಗುರುದ್ವಾರಗಳೂ ಸೇರಿವೆ. ನಮ್ಮ ಸಿಖ್ ಗುರುಗಳು ಕೂಡಾ ತಮ್ಮ ಜೀವನ ಮತ್ತು ಸತ್ಕಾರ್ಯಗಳ ಮೂಲಕ ಏಕತೆಯ ಭಾವನೆಯನ್ನು ಹೆಚ್ಚಿಸಿದ್ದಾರೆ. ಕಳೆದ ಶತಮಾನದಲ್ಲಿ, ನಮ್ಮ ದೇಶದಲ್ಲಿ, ಡಾ. ಬಾಬಾಸಾಹೆಬ್ ಅಂಬೇಡ್ಕರ್ ರವರಂತಹ ಮಹಾನ್ ವ್ಯಕ್ತಿಗಳು ಸಂವಿಧಾನದ ಮುಖಾಂತರ ನಮ್ಮೆಲ್ಲರನ್ನೂ ಒಂದುಗೂಡಿಸಿದ್ದಾರೆ.

ಸ್ನೇಹಿತರೆ,

ಒಗ್ಗಟ್ಟೇ ಶಕ್ತಿ, ಒಗ್ಗಟ್ಟೇ ಬಲ,

ಒಗ್ಗಟ್ಟೇ ಪ್ರಗತಿ, ಒಗ್ಗಟ್ಟೇ ಸಬಲೀಕರಣ,

ಒಗ್ಗಟ್ಟಿನಿಂದ ನಾವು ಹೊಸ ಎತ್ತರಗಳನ್ನು ಅಧಿಗಮಿಸುತ್ತೇವೆ

(Unity is Power, Unity is strength,

Unity is Progress, Unity is Empowerment,

United we will scale new heights )

 

ಹಾಗೆಯೇ, ನಿರಂತರವಾಗಿ ಅನುಮಾನದ ಬೀಜಗಳನ್ನು ನಮ್ಮ ಮನದಲ್ಲಿ ಬಿತ್ತುವ ಪ್ರಯತ್ನ ಮಾಡುತ್ತಿರುವ, ದೇಶವನ್ನು ವಿಭಜಿಸಲು ಪ್ರಯತ್ನಿಸುವಂತಹ ಶಕ್ತಿಗಳು ಕೂಡಾ ಇರುತ್ತವೆ. ಇಂತಹ ದುರುದ್ದೇಶಗಳಿಗೆ ತಕ್ಕ ಉತ್ತರವನ್ನು ಪ್ರತಿಬಾರಿಯೂ ದೇಶ ಕೊಟ್ಟಿದೆ. ನಾವು ನಿರಂತರವಾಗಿ ನಮ್ಮ ಸೃಜನಾತ್ಮಕವಾಗಿ, ಪ್ರೀತಿಯಿಂದ, ಪ್ರತಿ ಕ್ಷಣ ಪ್ರಯತ್ನಪೂರ್ವಕವಾಗಿ ನಮ್ಮ ಚಿಕ್ಕ ಚಿಕ್ಕ ಕೆಲಸ ಕಾರ್ಯಗಳಲ್ಲಿ, ‘ಏಕ್ ಭಾರತ – ಶ್ರೇಷ್ಠ ಭಾರತ’ದ ಆಕರ್ಷಕ ಬಣ್ಣಗಳನ್ನು  ತುಂಬಬೇಕು, ಒಗ್ಗಟ್ಟಿನ ಹೊಸ ಬಣ್ಣ ತುಂಬಬೇಕು ಮತ್ತು ಪ್ರತಿಯೊಬ್ಬ ನಾಗರಿಕನೂ ಇದಕ್ಕೆ ಬಣ್ಣ ತುಂಬಬೇಕು.  ಈ ಸಮಯದಲ್ಲಿ ನಾನು ಒಂದು ಜಾಲತಾಣ ವೀಕ್ಷಿಸಬೇಕೆಂದು ನಿಮ್ಮಲ್ಲರಲ್ಲಿ ಮನವಿ ಮಾಡುತ್ತಿದ್ದೇನೆ – ekbharat.gov.in (ಏಕ್ ಭಾರತ್ ಡಾಟ್ ಗೌ ಡಾಟ್ ಇನ್) ಇದರಲ್ಲಿ, ರಾಷ್ಟ್ರೀಯ ಏಕೀಕರಣದ (national integration) ನಮ್ಮ ಅಭಿಯಾನವನ್ನು ಮುನ್ನಡೆಸುವ ಹಲವು ಪ್ರಯತ್ನಗಳು ಕಂಡುಬರುತ್ತವೆ. ಇದರಲ್ಲಿ ಒಂದು ಆಸಕ್ತಿದಾಯಕ ಭಾಗವಿದೆ –ಅದೇ ‘ಇಂದಿನ ವಾಕ್ಯ’. ಈ ವಿಭಾಗದಲ್ಲಿ ನಾವು,  ಪ್ರತಿದಿನ, ಒಂದು ವಾಕ್ಯವನ್ನು, ಬೇರೆ ಬೇರೆ ಭಾಷೆಗಳಲ್ಲಿ ಹೇಗೆ ನುಡಿಯುತ್ತಾರೆ ಎನ್ನುವುದನ್ನು ಕಲಿಯಬಹುದಾಗಿದೆ.  ನೀವು ಈ ಜಾಲತಾಣಕ್ಕಾಗಿ (website)  ನಿಮ್ಮ ಕೊಡುಗೆಯನ್ನೂ ನೀಡಬಹುದು. ಹೇಗೆಂದರೆ ಪ್ರತಿಯೊಂದು ರಾಜ್ಯ ಮತ್ತು ಸಂಸ್ಕೃತಿಯಲ್ಲಿ ವಿಭಿನ್ನ ರೀತಿಯ ಆಹಾರ–ಪಾನೀಯ ಇರುತ್ತದೆ. ಈ ತಿನಿಸುಗಳನ್ನು ಸ್ಥಳೀಯತೆಗೆ ಅನುಗುಣವಾಗಿ ವಿಶೇಷ ಪದಾರ್ಥಗಳು, ಅಂದರೆ ಧಾನ್ಯ ಮತ್ತು ಸಾಂಬಾರ ದಿನಿಸುಗಳನ್ನು ಉಪಯೋಗಿಸಿ ತಯಾರಿಸಲಾಗುತ್ತದೆ. ನಾವು ಈ ಸ್ಥಳೀಯ ಆಹಾರದ ಪಾಕ ವಿಧಾನವನ್ನು ಸ್ಥಳೀಯ ಪದಾರ್ಥಗಳ ಹೆಸರಿನೊಂದಿಗೆ, ‘ಏಕ ಭಾರತ್ –ಶ್ರೇಷ್ಠ ಭಾರತ್’ (‘एक भारत–श्रेष्ठ भारत’)ಜಾಲತಾಣದಲ್ಲಿ ಒಗ್ಗಟ್ಟಿನ ಶಕ್ತಿ ಹಂಚಿಕೊಳ್ಳಬಹುದೇ? ಮತ್ತು ರೋಗನಿರೋಧಕ ಶಕ್ತಿ (Unity andImmunity) ಹೆಚ್ಚಿಸಿಕೊಳ್ಳುವುದಕ್ಕಾಗಿ ಇದಕ್ಕಿಂತ ಉತ್ತಮ ವಿಧಾನ ಮತ್ಯಾವುದಿದೆ.

ಸ್ನೇಹಿತರೆ, ಈ ತಿಂಗಳ 31 ರಂದು ನನಗೆ ಕೇವಡಿಯಾದಲ್ಲಿ ಐತಿಹಾಸಿಕ ಏಕತಾ ಪ್ರತಿಮೆ (Statue of Unity) ಯ ಸ್ಥಳದಲ್ಲಿ ನಡೆಯಲಿರುವ ಅನೇಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ನೀವು ಕೂಡಾ ಖಂಡಿತವಾಗಿಯೂ ಸೇರಿಕೊಳ್ಳಿ.

ನನ್ನ ಪ್ರೀತಿಯ ದೇಶವಾಸಿಗಳೇ, ಅಕ್ಟೋಬರ್ 31 ರಂದು ನಾವು ವಾಲ್ಮೀಕಿ ಜಯಂತಿ ಕೂಡಾ ಆಚರಿಸುತ್ತೇವೆ. ನಾನು ಮಹರ್ಷಿ ವಾಲ್ಮೀಕಿ ಅವರಿಗೆ ನಮಿಸುತ್ತೇನೆ ಮತ್ತು ಈ ವಿಶೇಷ ಸಂದರ್ಭದಲ್ಲಿ ದೇಶವಾಸಿಗಳಿಗೆ ಹಾರ್ದಿಕ ಶುಭಾಶಯಗಳನ್ನೂ ಕೋರುತ್ತೇನೆ. ಮಹರ್ಷಿ ವಾಲ್ಮೀಕಿಯ ಶ್ರೇಷ್ಠ ವಿಚಾರಗಳು ಕೋಟ್ಯಂತರ ಜನರಿಗೆ ಪ್ರೇರಣೆ ನೀಡುತ್ತವೆ, ಅವರಲ್ಲಿ ಬಲ ತುಂಬುತ್ತವೆ. ಅವು ಲಕ್ಷಾಂತರ–ಕೋಟ್ಯಂತರ ಬಡವರಿಗೆ ಮತ್ತು ಶೋಷಿತರಿಗೆ ದೊಡ್ಡ ಭರವಸೆಯಾಗಿವೆ. ಅವರಲ್ಲಿ ಆಸೆ ಮತ್ತು ನಂಬಿಕೆಯ ಬೆಳಕು ಮೂಡಿಸುತ್ತದೆ. ಅವು ಹೀಗೆನ್ನುತ್ತವೆ – ಯಾರಿಗೇ ಆಗಲಿ ಇಚ್ಛಾಶಕ್ತಿ  ಇದ್ದರೆ, ಅವರು ಯಾವುದೇ ಕೆಲಸವನ್ನಾದರೂ ಬಹಳ ಸುಲಭವಾಗಿ ಮಾಡಬಹುದು ಎಂದು. ಅನೇಕ ಯುವಕ–ಯುವತಿಯರಿಗೆ ಅಸಾಧಾರಣ ಕಾರ್ಯ ಮಾಡುವಂತಹ ಶಕ್ತಿ ನೀಡುವುದು ಇದೇ ಸಂಕಲ್ಪ ಶಕ್ತಿ (ಇಚ್ಛಾಶಕ್ತಿ). ಮಹರ್ಷಿ ವಾಲ್ಮೀಕಿ ಸಕಾರಾತ್ಮಕ ಚಿಂತನೆಗಳಿಗೆ ಒತ್ತು ನೀಡಿದರು– ಅವರಿಗೆ ಸೇವೆ ಮತ್ತು ಮಾನವೀಯತೆ ಸರ್ವಶ್ರೇಷ್ಠವಾಗಿತ್ತು. ಮಹರ್ಷಿ ವಾಲ್ಮೀಕಿಯ ಆಚಾರ, ವಿಚಾರ ಮತ್ತು ಆದರ್ಶ ಇಂದು ನವ ಭಾರತದ ನಮ್ಮ ಸಂಕಲ್ಪಕ್ಕೆ ಸ್ಫೂರ್ತಿಯೂ ಆಗಿದೆ ಮತ್ತು ದಿಕ್ಸೂಚಿಯೂ ಆಗಿದೆ.  ಭವಿಷ್ಯದ ಪೀಳಿಗೆಗಳಿಗೆ ಮಾರ್ಗದರ್ಶನಕ್ಕಾಗಿ ರಾಮಾಯಣದಂತಹ ಶ್ರೇಷ್ಠ ಗ್ರಂಥ ರಚಿಸಿದ ಮಹರ್ಷಿ ವಾಲ್ಮೀಕಿಯವರಿಗೆ ನಾವು ಸದಾಕಾಲ ಕೃತಜ್ಞರಾಗಿರೋಣ.

ಅಕ್ಟೋಬರ್ 31 ರಂದು ಭಾರತದ ಮಾಜಿ ಪ್ರಧಾನಮಂತ್ರಿ ಶ್ರೀಮತಿ ಇಂದಿರಾ ಗಾಂಧಿಯವರನ್ನು ನಾವು ಕಳೆದುಕೊಂಡೆವು. ನಾನು ಅವರಿಗೆ ಗೌರವಪೂರ್ವಕ ಶ್ರದ್ಧಾಂಜಲಿ ಅರ್ಪಿಸುತ್ತೇನೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಕಾಶ್ಮೀರದ ಪುಲ್ವಾಮಾ ಸಂಪೂರ್ಣ ಭಾರತಕ್ಕೆ ಶಿಕ್ಷಣ ನೀಡುವಲ್ಲಿ ಗಣನೀಯ ಪಾತ್ರ ವಹಿಸುತ್ತಿದೆ. ಇಂದು ದೇಶಾದ್ಯಂತ ಮಕ್ಕಳು ತಮ್ಮ ಹೋಮ್ ವರ್ಕ್ ಮಾಡುವಾಗ, ನೋಟ್ಸ್ ಸಿದ್ಧಪಡಿಸುವಾಗ ಇದರ ಹಿಂದೆ ಎಲ್ಲೋ ಒಂದುಬ ಕಡೆ ಪುಲ್ವಾಮಾದ ಜನತೆಯ ಕಠಿಣ ಶ್ರಮ ಖಂಡಿತಾ ಅಡಗಿರುತ್ತದೆ. ಕಾಶ್ಮೀರ ಕಣಿವೆಯು, ಸಂಪೂರ್ಣ ದೇಶದ, ಸರಿ ಸುಮಾರು ಶೇಕಡಾ 90 ರಷ್ಟು ಪೆನ್ಸಿಲ್ ಸ್ಲೇಟ್, ಮರದ ಪಟ್ಟಿಯ ಬೇಡಿಕೆಯನ್ನು ಪೂರೈಸುತ್ತದೆ, ಅದರಲ್ಲಿ ಬಹುದೊಡ್ಡ ಪಾಲುದಾರಿಕೆ ಪುಲ್ವಾಮಾ ಪ್ರದೇಶದ್ದಾಗಿದೆ. ಒಂದು ಕಾಲದಲ್ಲಿ ನಾವು ಪೆನ್ಸಿಲ್ ಗಾಗಿ ವಿದೇಶಗಳಿಂದ ಕಟ್ಟಿಗೆ ತರಿಸಿಕೊಳ್ಳುತ್ತಿದ್ದೆವು, ಆದರೆ ಈಗ ನಮ್ಮ ಪುಲ್ವಾಮಾ, ಈ ವಿಷಯದಲ್ಲಿ ದೇಶವನ್ನು ಸ್ವಾವಲಂಬಿಯಾಗಿಸುತ್ತಿದೆ. ವಾಸ್ತವದಲ್ಲಿ, ಪುಲ್ವಾಮಾದ ಈ ಪೆನ್ಸಿಲ್ ಸ್ಲೇಟ್ ಗಳು ರಾಜ್ಯಗಳ ನಡುವಿನ ಅಂತರವನ್ನು ಕಡಿಮೆ ಮಾಡುತ್ತಿವೆ. ಕಣಿವೆಯ ಚಿನಾರ್ ನ ಕಟ್ಟಿಗೆಯಲ್ಲಿ ಅಧಿಕ ತೇವಾಂಶ ಮತ್ತು ಮೃದುತ್ವ ಇರುತ್ತದೆ, ಈ ಗುಣವೇ ಅದನ್ನು ಪೆನ್ಸಿಲ್ ತಯಾರಿಕೆಗೆ ಸೂಕ್ತವಾಗಿಸುತ್ತದೆ. ಪುಲ್ವಾಮಾದ, ಉಕ್ಖೂವನ್ನು, ಪೆನ್ಸಿಲ್ ಗ್ರಾಮದ ಹೆಸರಿನಿಂದ ಕರೆಯುತ್ತಾರೆ. ಇಲ್ಲಿ ಪೆನ್ಸಿಲ್ ಸ್ಲೇಟ್ ತಯಾರಿಸುವ ಅನೇಕ ಘಟಕಗಳಿದ್ದು ಉದ್ಯೋಗಾವಕಾಶ ಒದಗಿಸುತ್ತಿವೆ ಮತ್ತು ಇವುಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಕೆಲಸ ಮಾಡುತ್ತಾರೆ.

ಸ್ನೇಹಿತರೇ, ಇಲ್ಲಿನ ಜನರು ಏನಾದರೊಂದು ಹೊಸತನ್ನು ಮಾಡುವ ನಿರ್ಧಾರ ಕೈಗೊಂಡಾಗ, ಕೆಲಸದ ರಿಸ್ಕ್ ತೆಗೆದುಕೊಳ್ಳಲು ಸಿದ್ಧರಾದಾಗ, ಮತ್ತು ತಮ್ಮನ್ನು ತಾವು ಈ ಕೆಲಸಕ್ಕೆ ಸಮರ್ಪಿಸಿಕೊಂಡಾಗ ಪುಲ್ವಾಮಾಗೆ ತನ್ನನ್ನು ತಾನು ಗುರುತಿಸಿಕೊಳ್ಳಲು ಸಾಧ್ಯವಾಯಿತು. ಅಂತೆಯೇ ಕಷ್ಟಪಟ್ಟು ದುಡಿಯುವ ವ್ಯಕ್ತಿಗಳಲ್ಲಿ ಒಬ್ಬರು – ಮಂಜೂರ್ ಅಹ್ಮದ್ ಅಲಾಯಿ. ಮೊದಲಿಗೆ ಮಂಜೂರ್ ಅವರು ಕಟ್ಟಿಗೆ ಕಡಿಯುವ ಓರ್ವ ಸಾಮಾನ್ಯ ಕೂಲಿಕಾರರಾಗಿದ್ದರು. ತಮ್ಮ ಮುಂದಿನ ಪೀಳಿಗೆ ಬಡತನದ ಬವಣೆ ಅನುಭವಿಸದಂತೆ ಮಾಡಲು, ಏನಾದರೂ ಹೊಸದನ್ನು ಮಾಡಬೇಕೆಂದು ಮಂಜೂರ್ ಬಯಸುತ್ತಿದ್ದರು.  ಅವರು ತಮ್ಮ ಬಳಿಯಿದ್ದ ಭೂಮಿಯನ್ನು ಮಾರಾಟ ಮಾಡಿ Apple Wooden Box, ಅಂದರೆ ಸೇಬು ಇರಿಸುವ ಮರದ ಪೆಟ್ಟಿಗೆ ತಯಾರಿಸುವ ಘಟಕ ಪ್ರಾರಂಭಿಸಿದರು. ತಮ್ಮ ಸಣ್ಣ ವ್ಯಾಪಾರದಲ್ಲಿ ತೊಡಗಿಕೊಂಡಿರುವಾಗ, ಮಂಜೂರ್ ಅವರಿಗೆ ಪೆನ್ಸಿಲ್ ತಯಾರಿಕೆಯಲ್ಲಿ ಚಿನಾರ್ ಮರದ ಉಪಯೋಗ ಪ್ರಾರಂಭಿಸಲಾಗಿದೆ ಎಂಬ ವಿಚಾರ ಎಲ್ಲಿಂದಲೋ ತಿಳಿದು ಬಂತು. ಈ ವಿಷಯ ತಿಳಿದುಬಂದ ನಂತರ ಮಂಜೂರ್ ಅವರು, ತಮ್ಮ ಉದ್ಯಮಶೀಲತೆಯನ್ನು ಪರಿಚಯಿಸುತ್ತಾ, ಕೆಲವು ಪ್ರಸಿದ್ಧ ಪೆನ್ಸಿಲ್ ತಯಾರಿಕಾ ಘಟಕಗಳಿಗೆ ಚಿನಾರ್ ಮರದ ಪೆಟ್ಟಿಗೆಗಳನ್ನು ಪೂರೈಕೆ ಮಾಡಲು ಆರಂಭಿಸಿದರು. ಮಂಜೂರ್ ಅವರಿಗೆ ಇದು ಬಹಳ ಲಾಭದಾಯಕವಾಗಿ ಕಂಡುಬಂತು ಮತ್ತು ಅವರ ಆದಾಯವೂ ಉತ್ತಮ ರೀತಿಯಲ್ಲಿ  ಹೆಚ್ಚುತ್ತಾ ಹೋಯಿತು. ಕಾಲಕ್ರಮೇಣ ಅವರು ಪೆನ್ಸಿಲ್ ಸ್ಲೇಟ್ ತಯಾರಿಕಾ ಯಂತ್ರೋಪಕರಣ ಖರೀದಿಸಿದರು ಮತ್ತು ನಂತರ ದೇಶದ ದೊಡ್ಡ ದೊಡ್ಡ ಕಂಪೆನಿಗಳಿಗೆ ಪೆನ್ಸಿಲ್ ಸ್ಲೇಟ್ ಸರಬರಾಜು ಮಾಡಲಾರಂಭಿಸಿದರು. ಇಂದು ಮಂಜೂರ್ ಅವರ ಈ ವ್ಯಾಪಾರದ ವಹಿವಾಟು ಕೋಟಿಗಳಲ್ಲಿದೆ ಮತ್ತು ಅವರು ಸುಮಾರು ಇನ್ನೂರು ಮಂದಿಗೆ ಜೀವನೋಪಾಯ ಒದಗಿಸುತ್ತಿದ್ದಾರೆ. ಇಂದಿನ ಮನದ ಮಾತಿನ ಮುಖಾಂತರ, ಸಮಸ್ತ ದೇಶವಾಸಿಗಳ ಪರವಾಗಿ ನಾನು ಮಂಜೂರ್ ಅವರೂ ಸೇರಿದಂತೆ, ಪುಲ್ವಾಮಾದಲ್ಲಿ  ದುಡಿಯುವ ಸೋದರ–ಸೋದರಿಯರ ಜೊತೆಗೆ ಅವರ ಕುಟುಂಬದವರನ್ನು ಪ್ರಶಂಸಿಸುತ್ತೇನೆ –ನೀವೆಲ್ಲರೂ, ದೇಶದ ಯುವ ಜನತೆಯ ಮನಸ್ಸುಗಳಿಗೆ ಶಿಕ್ಷಣ ನೀಡುವಲ್ಲಿ ನಿಮ್ಮ ಅತ್ಯಮೂಲ್ಯ ಕೊಡುಗೆ ನೀಡುತ್ತಿರುವಿರಿ.

ನನ್ನ ಪ್ರೀತಿಯ ದೇಶವಾಸಿಗಳೇ, ಲಾಕ್ಡೌನ್ ಸಮಯದಲ್ಲಿ ತಂತ್ರಜ್ಞಾನ–ಆಧರಿತ ಸೇವಾ ಪೂರೈಕೆಯ (Technology-Based service delivery) ಹಲವು ಪ್ರಯೋಗಗಳು ನಮ್ಮ ದೇಶದಲ್ಲಿ ಆಗಿವೆ, ಮತ್ತು ಈಗ ಇವುಗಳನ್ನು ಬಹಳ ದೊಡ್ಡ ತಂತ್ರಜ್ಞಾನ ಮತ್ತು ಲಾಜಿಸ್ಟಿಕ್ ಕಂಪೆನಿಗಳೇ ಮಾಡಬಹುದು ಎಂದೇನಿಲ್ಲ. ಜಾರ್ಖಂಡ್ ನಲ್ಲಿ ಈ ಕೆಲಸವನ್ನು ಮಹಿಳೆಯರ ಸ್ವ–ಸಹಾಯ ಗುಂಪು ಮಾಡಿ ತೋರಿಸಿದೆ. ಈ ಮಹಿಳೆಯರು ರೈತರ ಹೊಲಗಳಿಂದ ತರಕಾರಿ ಮತ್ತು ಹಣ್ಣುಗಳನ್ನು ತೆಗೆದುಕೊಂಡುಹೋಗಿ ನೇರವಾಗಿ ಮನೆಗಳಿಗೆ ತಲುಪಿಸಿದರು. ಈ ಮಹಿಳೆಯರು ‘ಆಜೀವಿಕಾ ಫಾರ್ಮ್ ಫ್ರೆಷ್’ (‘आजीविका farm fresh’)ಎಂಬ ಹೆಸರಿನ     ಒಂದು ಆಪ್ (app)ತಯಾರಿಸಿದರು ಮತ್ತು ಅದರ ಮುಖಾಂತರ ಜನರು ಸುಲಭವಾಗಿ ತರಕಾರಿ ತರಿಸಿಕೊಳ್ಳಬಹುದಾಗಿತ್ತು. ಈ ಪ್ರಯತ್ನದಿಂದಾಗಿ ರೈತರಿಗೆ ತಮ್ಮ ತರಕಾರಿ ಮತ್ತು ಹಣ್ಣುಗಳಿಗೆ ಉತ್ತಮ ಬೆಲೆ ದೊರೆಯಿತು ಮತ್ತು ಜನರಿಗೆ ಕೂಡಾ ತಾಜಾ ತರಕಾರಿಗಳು ದೊರೆಯಲಾರಂಭಿಸಿತು. ಅಲ್ಲಿ ‘ಆಜೀವಿಕಾ ಫಾರ್ಮ್ ಫ್ರೆಷ್’ (‘आजीविका farm fresh’) ಆಪ್ (app)ನ ಉಪಾಯ ಬಹಳ ಪ್ರಸಿದ್ಧಿಯಾಗುತ್ತಿದೆ. ಲಾಕ್ಡೌನ್ ಸಮಯದಲ್ಲಿ ಇವರುಗಳು 50 ಲಕ್ಷ ರೂಪಾಯಿಗಿಂತ ಹೆಚ್ಚಿನ ಬೆಲೆಯ ಹಣ್ಣು–ತರಕಾರಿಗಳನ್ನು ಜನರಿಗೆ ತಲುಪಿಸಿದ್ದಾರೆ. ಸ್ನೇಹಿತರೆ, ಕೃಷಿ ಕ್ಷೇತ್ರದಲ್ಲಿ ಹೊಸ ಸಂಭಾವ್ಯತೆಗಳನ್ನು ನೋಡಿ ನಮ್ಮ ಯುವ ಜನತೆ ಕೂಡಾ ಹೆಚ್ಚಿನ ಸಂಖ್ಯೆಯಲ್ಲಿ ಇದರಲ್ಲಿ ಸೇರುತ್ತಿದ್ದಾರೆ. ಮಧ್ಯಪ್ರದೇಶದ ಬಡವಾಸಿಯದ ಅತುಲ್ ಪಾಟೀದಾರ್ ಅವರು ತಮ್ಮ ಕ್ಷೇತ್ರದ ಸುಮಾರು ನಾಲ್ಕು ಸಾವಿರ ರೈತರನ್ನು ಡಿಜಿಟಲ್ ರೂಪದಲ್ಲಿ ಒಂದುಗೂಡಿಸಿದ್ದಾರೆ. ಈ ರೈತ ಅತುಲ್ ಪಾಟೀದಾರ್ ಅವರ ಇ ಪ್ಲಾಟ್ ಫಾರಂ ಫಾರ್ಮ ಕಾರ್ಡ್ (E-platform farm card) ಮೂಲಕ, ಜನರು ಕೃಷಿ ಪರಿಕರ ಅಂದರೆ ಗೊಬ್ಬರ, ಬೀಜ, ಕೀಟನಾಶಕ, ಶೀಲೀಂಧ್ರನಾಶಕ ಇತ್ಯಾದಿಗಳ ಪೂರೈಕೆಯನ್ನು ಮನೆ ಬಾಗಿಲಿನಲ್ಲೇ ಪಡೆದುಕೊಳ್ಳುತ್ತಿದ್ದಾರೆ ಅಂದರೆ, ರೈತರ ಅಗತ್ಯ ವಸ್ತುಗಳು ಅವರ ಮನೆ ಬಾಗಿಲಿನಲ್ಲೇ ದೊರೆಯುತ್ತಿವೆ. ಈ ಡಿಜಿಟಲ್ ವೇದಿಕೆಯಲ್ಲಿ ಆಧುನಿಕ ಕೃಷಿ ಉಪಕರಣಗಳು ಕೂಡಾ ಬಾಡಿಗೆಗೆ ದೊರೆಯುತ್ತವೆ. ಲಾಕ್ಡೌನ್ ಸಮಯದಲ್ಲಿ ಕೂಡಾ ಈ ಡಿಜಿಟಲ್ ವೇದಿಕೆಯ ಮುಖಾಂತರ ರೈತರಿಗೆ ಸಾವಿರಾರು ಪಾಕೆಟ್ ಡೆಲಿವರಿ ಮಾಡಲಾಗಿದ್ದು, ಅವುಗಳಲ್ಲಿ ಹತ್ತಿ ಮತ್ತು ತರಕಾರಿಗಳ ಬೀಜಗಳು ಕೂಡಾ ಇದ್ದವು. ಅತುಲ್ ಮತ್ತು ಅವರ ತಂಡ ರೈತರಲ್ಲಿ ತಂತ್ರಜ್ಞಾನದ ಅರಿವು ಮೂಡಿಸುತ್ತಿದೆ, ಆನ್ಲೈನ್ ಪಾವತಿ ಮತ್ತು ಖರೀದಿ ಕುರಿತು ಕಲಿಸುತ್ತಿದೆ.

ಸ್ನೇಹಿತರೆ, ಈ ಕೆಲವು ದಿನಗಳ ಹಿಂದೆ ಮಹಾರಾಷ್ಟ್ರದ ಒಂದು ಘಟನೆಯ ಮೇಲೆ ನನ್ನ ಗಮನ ಹರಿಯಿತು. ಅಲ್ಲಿ ಒಂದು ಫಾರ್ಮರ್ ಪ್ರೊಡ್ಯೂಸರ್ ಕಂಪೆನಿಯು ಮೆಕ್ಕೆ ಜೋಳ ಬೆಳೆಯುವ ರೈತರಿಂದ ಮೆಕ್ಕೆ ಜೋಳ ಖರೀದಿಸಿತು. ಕಂಪೆನಿ ಈ ಬಾರಿ ರೈತರಿಗೆ ಮೂಲ ಬೆಲೆಗಿಂತ ಹೆಚ್ಚುವರಿಯಾಗಿ ಬೋನಸ್ ಕೂಡಾ ನೀಡಿತು. ರೈತರಿಗೆ ಇದರಿಂದ ಸಂತೋಷದೊಂದಿಗೆ ಆಶ್ಚರ್ಯವೂ ಆಯಿತು. ಕಂಪೆನಿಯನ್ನು ಕೇಳಿದಾಗ, ಭಾರತ ಸರ್ಕಾರ ತಂದಿರುವ ಹೊಸ ಕೃಷಿ ಕಾನೂನಿನ ಪ್ರಕಾರ, ರೈತ ಭಾರತದಲ್ಲಿ ಎಲ್ಲಿಯಾದರೂ ಬೆಳೆಯನ್ನು ಮಾರಲು ಸಾಧ್ಯವಾಗುತ್ತಿದೆ ಮತ್ತು ಅವರಿಗೆ ಉತ್ತಮ ಬೆಲೆ ದೊರೆಯುತ್ತಿದೆ, ಆದ್ದರಿಂದ ಈ ಹೆಚ್ಚುವರಿ ಲಾಭವನ್ನು ರೈತರೊಂದಿಗೆ ಹಂಚಿಕೊಳ್ಳಬೇಕೆಂಬ ವಿಷಯ ತಿಳಿದು ಬಂದಿತು. ಇದರಲ್ಲಿ ಅವರ ಹಕ್ಕು ಕೂಡಾ ಇದೆ ಆದ್ದರಿಂದಲೇ ಅವರು ರೈತರಿಗೆ ಬೋನಸ್ ನೀಡಿದರು. ಸ್ನೇಹಿತರೆ, ಬೋನಸ್ ಕಡಿಮೆಯಾಗಿರಬಹುದು, ಆದರೆ ಇದು ಬಹಳ ದೊಡ್ಡ  ಆರಂಭವಾಗಿದೆ. ಹೊಸ ಕೃಷಿ–ಕಾನೂನಿನಿಂದ ತಳ ಮಟ್ಟದಲ್ಲಿ ಯಾವ ರೀತಿಯ ಬದಲಾವಣೆಗಳು ರೈತರ ಪರವಾಗಿ ಸಾಧ್ಯವಾಗಲಿದೆ ಎನ್ನುವುದು ನಮಗೆ ಇದರಿಂದ ತಿಳಿದುಬರುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಮನದ ಮಾತಿನಲ್ಲಿ, ದೇಶವಾಸಿಗಳ ಅಸಾಧಾರಣ ಸಾಧನೆಗಳು, ನಮ್ಮ ದೇಶ, ನಮ್ಮ ಸಂಸ್ಕೃತಿಯ ವಿವಿಧ ಆಯಾಮಗಳ ಬಗ್ಗೆ, ನಿಮ್ಮೆಲ್ಲರೊಂದಿಗೆ ಮಾತನಾಡುವ ಅವಕಾಶ ದೊರೆಯಿತು. ನಮ್ಮ ದೇಶ ಪ್ರತಿಭಾವಂತ ವ್ಯಕ್ತಿಗಳಿಂದ ತುಂಬಿದೆ. ಇಂತಹ ವ್ಯಕ್ತಿಗಳ ಬಗ್ಗೆ ನಿಮಗೆ ತಿಳಿದಿದ್ದರೆ, ಅವರ ಕುರಿತು ಮಾತನಾಡಿ, ಬರೆಯಿರಿ ಮತ್ತು ಅವರ ಸಫಲತೆಗಳ ಬಗ್ಗೆ ಹಂಚಿಕೊಳ್ಳಿ. ಮುಂಬರುವ ಹಬ್ಬಗಳಿಗಾಗಿ ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಅನೇಕಾನೇಕ ಶುಭಾಕಾಂಕ್ಷೆಗಳು. ಆದರೆ, ಒಂದು ಮಾತು ನೆನಪಿಡಿ, ಹಬ್ಬಗಳಲ್ಲಿ, ಈ ವಿಷಯಗಳನ್ನು ವಿಶೇಷವಾಗಿ ನೆನಪಿಟ್ಟುಕೊಳ್ಳಿ – ಮಾಸ್ಕ್ ಧರಿಸಬೇಕು, ಕೈಗಳನ್ನು ಸಾಬೂನಿನಿಂದ ತೊಳೆಯುತ್ತಿರಬೇಕು, ಎರಡು ಗಜಗಳ ಅಂತರವನ್ನು ಕಾಪಾಡಿಕೊಳ್ಳಬೇಕು.

ಸ್ನೇಹಿತರೆ, ಮುಂದಿನ ತಿಂಗಳು ಮತ್ತೊಮ್ಮೆ ನಿಮ್ಮೊಂದಿಗೆ ಮನದ ಮಾತು ಆಡುತ್ತೇನೆ, ಅನೇಕಾನೇಕ ಧನ್ಯವಾದ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"