Eager for your inputs for 100th episode of Mann Ki Baat: PM Modi to countrymen
It is a matter of satisfaction that today awareness about organ donation is increasing in the country: PM Modi
Huge role of Nari Shakti in rising the potential of India: PM Modi
The speed with which India is moving forward in the field of solar energy is a big achievement in itself: PM Modi
The spirit of 'Ek Bharat, Shreshtha Bharat' strengthens our nation: PM Modi

ನನ್ನ ಪ್ರಿಯ ದೇಶಬಾಂಧವರೆ, ಮನದ ಮಾತಿಗೆ ನಿಮಗೆಲ್ಲ ಮನದ ಮಾತಿಗೆ ಮತ್ತೊಮ್ಮೆ ಆದರದ ಸ್ವಾಗತ. ಇಂದು ಈ ಚರ್ಚೆಯನ್ನು ಆರಂಭ ಮಾಡುತ್ತಲೇ ಮನದಾಳದಲ್ಲಿ ಅನೇಕ ಭಾವನೆಗಳು ಹರಿದುಬರುತ್ತಿವೆ. ನಮ್ಮ ಮತ್ತು ನಿಮ್ಮ ‘ಮನದ ಮಾತಿನ’ ಈ ಸಂಬಂಧ 99 ನೇ ಕಂತಿಗೆ ಬಂದು ತಲುಪಿದೆ. ಸಾಮಾನ್ಯವಾಗಿ 99 ನೇ ಕಂತು ಬಹಳ ಕಠಿಣವಾದದ್ದು ಎಂದು ನಾವು ಕೇಳಿದ್ದೇವೆ. ಕ್ರಿಕೆಟ್ ನಲ್ಲಂತೂ ‘Nervous Nineties’ ಅನ್ನು ಬಹಳ ಕಠಿಣವಾದ ಘಟ್ಟವೆಂದೇ ಭಾವಿಸಲಾಗುತ್ತದೆ. ಆದರೆ ಭಾರತದ ಜನಮಾನಸದ ‘ಮನದ ಮಾತು’ ಇದ್ದಲ್ಲಿ ಅದರ ಪ್ರೇರಣೆಯೇ ವಿಭಿನ್ನವಾಗಿರುತ್ತದೆ. ಮನದ ಮಾತಿನ 100 ನೇ ಕಂತಿನ ಬಗ್ಗೆ ದೇಶದ ಜನರ ಮನದಲ್ಲಿ ಬಹಳ ತ್ಸಾಹವಿದೆ ಎಂಬ ಬಗ್ಗೆಯೂ ನನಗೆ ಸಂತೋಷವಿದೆ. ನನಗೆ ಬಹಳಷ್ಟು ಸಂದೇಶಗಳು ಹರಿದುಬರುತ್ತಿವೆ, ದೂರವಾಣಿ ಕರೆಗಳು ಬರುತ್ತಿವೆ. ಇಂದು ನಾವು ಸ್ವಾತಂತ್ರ್ಯದ ಅಮೃತಕಾಲವನ್ನು ಆಚರಿಸುತ್ತಿದ್ದೇವೆ, ಹೊಸ ಹೊಸ ಸಂಕಲ್ಪಗಳೊಂದಿಗೆ ಮುನ್ನಡೆಯುತ್ತಿದ್ದೇವೆ ಎಂದ ಮೇಲೆ 100 ನೇ ಮನದ ಮಾತಿನ ಕಂತಿನ ಬಗ್ಗೆ ನಿಮ್ಮ ವಿಚಾರಗಳು ಮತ್ತು ಸಲಹೆ ಸೂಚನೆಗಳನ್ನು ಅರಿಯಲು ನಾನೂ ಬಹಳ ಉತ್ಸುಕನಾಗಿದ್ದೇನೆ. ನಾನು ನಿಮ್ಮ ಸಲಹೆ ಸೂಚನೆಗಳಿಗೆ ಕುತೂಹಲದಿಂದ ಕಾಯುತ್ತಿರುತ್ತೇನೆ. ಎಂದಿಗೂ ಕಾಯುತ್ತಿರುತ್ತೇನೆ ಆದರೆ ಈ ಬಾರಿ ಹೆಚ್ಚಿನ ನಿರೀಕ್ಷೆಯಿದೆ. ನಿಮ್ಮ ವಿಚಾರಗಳು ಮತ್ತು ಸಲಹೆ ಸೂಚನೆಗಳೇ ಏಪ್ರಿಲ್ 30 ರಂದು ಪ್ರಸಾರಗೊಳ್ಳುವ ಮನದ ಮಾತನ್ನು ಮತ್ತಷ್ಟು ಸ್ಮರಣೀಯಗೊಳಿಸಲಿವೆ.

    ನನ್ನ ಪ್ರಿಯ ದೇಶಬಾಂಧವರೆ. ಮನದ ಮಾತಿನಲ್ಲಿ ಬೇರೆಯವರ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಂಥ ಸಾವಿರಾರು ಜನರ ಬಗ್ಗೆ ಚರ್ಚಿಸಿದ್ದೇವೆ. ತಮ್ಮ ಮಗಳ ವಿದ್ಯಾಭ್ಯಾಸಕ್ಕಾಗಿ ತಮ್ಮ ಸಂಪೂರ್ಣ ಪಿಂಚಣಿಯನ್ನೇ ಮುಡಿಪಾಗಿಟ್ಟವರು ಹಲವರಿದ್ದರೆ, ಇನ್ನೂ ಎಷ್ಟೋ ಜನರು ತಮ್ಮ ಜೀವನವದ ಸಂಪೂರ್ಣ ಗಳಿಕೆಯನ್ನು ಪರಿಸರ ಮತ್ತು ಪ್ರಾಣಿ ಪಕ್ಷಿಗಳ ಸೇವೆಗೆ ಸಮರ್ಪಿಸಿಬಿಡುತ್ತಾರೆ. ನಮ್ಮ ದೇಶದಲ್ಲಿ ಪರಮಾರ್ಥವನ್ನು ಎಷ್ಟು ಉತ್ತುಂಗದಲ್ಲಿರಿಸಿದ್ದಾರೆಂದರೆ ಬೇರೆಯವರ ಸುಖಕ್ಕಾಗಿ ತಮ್ಮ ಸರ್ವಸ್ವವನ್ನೂ ದಾನ ಮಾಡಲು ಹಿಂಜರಿಯುವುದಿಲ್ಲ. ಹಾಗಾಗಿ ಬಾಲ್ಯದಿಂದಲೂ ನಮಗೆ ಶಿಬಿ ಮತ್ತು ದಧೀಚಿಯಂತಹ ದೇಹ ದಾನ ಮಾಡಿದವರ ಕಥೆಗಳನ್ನು ಹೇಳುತ್ತಾರೆ. 

    ಸ್ನೇಹಿತರೆ ಆಧುನಿಕ ವೈದ್ಯವಿಜ್ಞಾನದ ಈ ಕಾಲಘಟ್ಟದಲ್ಲಿ ಅಂಗ ದಾನ, ಒಬ್ಬರಿಗೆ ಜೀವದಾನ ನೀಡುವಂತಹ ಬಹುದೊಡ್ಡ ಮಾಧ್ಯಮವಾಗಿದೆ. ಒಬ್ಬ ವ್ಯಕ್ತಿ ಮೃತ್ಯುವಿನ ನಂತರ ತನ್ನ ದೇಹದಾನ ಮಾಡಿದಲ್ಲಿ ಅದರಿಂದ 8-9 ಜನರಿಗೆ ಹೊಸ ಜೀವನ ಲಭಿಸುವ ಸಂಭಾವ್ಯತೆಯಿರುತ್ತದೆ ಎಂದು ಹೇಳಲಾಗುತ್ತದೆ. ಇಂದು ದೇಶದಲ್ಲಿ ಅಂಗ ದಾನದ ಬಗ್ಗೆ ಜಾಗರೂಕತೆ ಹೆಚ್ಚಾಗುತ್ತಿದೆ ಎಂಬುದು ಸಂತೋಷದ ಸಂಗತಿ. 2013 ರಲ್ಲಿ ಅಂಗ ದಾನದ 5000 ಕ್ಕೂ ಕಡಿಮೆ ಪ್ರಕರಣಗಳು ದಾಖಲಾಗಿದ್ದವು ಆದರೆ 2022 ರಲ್ಲಿ ಈ ಸಂಖ್ಯೆ 15 ಸಾವಿರಕ್ಕೂ ಹೆಚ್ಚಾಗಿದೆ. ಅಂಗ ದಾನ ಮಾಡುವ ವ್ಯಕ್ತಿ ಮತ್ತು ಅವರ ಕುಟುಂಬ ನಿಜಕ್ಕೂ ಪುಣ್ಯದ ಕೆಲಸ ಮಾಡಿದೆ. 

    ಸ್ನೇಹಿತರೆ, ಬಹಳ ಸಮಯದಿಂದ ಇಂಥ ಪುಣ್ಯದ ಕೆಲಸ ಮಾಡಿದವರ ಮನದ ಮಾತನ್ನು ಅರಿಯುವ ಮತ್ತು ಇತರ ದೇಶಬಾಂಧವರೊಂದಿಗೆ ಅದನ್ನು ಹಂಚಿಕೊಳ್ಳಬೇಕು ಎಂಬ ಬಯಕೆ ಇತ್ತು. ಆದ್ದರಿಂದ ಇಂದು ಮನದ ಮಾತಿನಲ್ಲಿ ಒಬ್ಬ ಪುಟ್ಟ ಹೆಣ್ಣುಮಗು ಮತ್ತು ಓರ್ವ ಸುಂದರ ಹೆಣ್ಣುಮಗುವಿನ ತಂದೆ ಹಾಗೂ ತಾಯಿ ನಮ್ಮೊಂದಿಗೆ ಮಾತನಾಡಲಿದ್ದಾರೆ. ತಂದೆಯ ಹೆಸರು ಸುಖಬೀರ್ ಸಿಂಗ್ ಸಂಧು ಮತ್ತು ತಾಯಿಯ ಹೆಸರು ಸುಪ್ರೀತಾ ಕೌರ್. ಈ ಕುಟುಂಬ ಪಂಜಾಬ್ ನ ಅಮೃತಸರದಲ್ಲಿ ವಾಸಿಸುತ್ತಾರೆ. ಬಹಳಷ್ಟು ಹರಕೆ ಹೊತ್ತ ನಂತರ ಅವರಿಗೆ ಒಬ್ಬ ಸುಂದರ ಹೆಣ್ಣುಮಗುವನ್ನು ಭಗವಂತ ಕರುಣಿಸಿದ. ಕುಟುಂಬದವರೆಲ್ಲ ಬಹಳ ಪ್ರೀತಿಯಿಂದ ಅವಳಿಗೆ ಅಬಾಬತ್ ಕೌರ್ ಎಂದು ಹೆಸರಿಟ್ಟಿದ್ದರು.  ಅಬಾಬತ್ ಎಂಬುದರ ಅರ್ಥ  ಬೇರೆಯವರ ಸೇವೆಯೊಂದಿಗೆ, ಇತರರ ಕಷ್ಟಗಳನ್ನು ಪರಿಹರಿಸುವುದರೊಂದಿಗೆ ಸೇರಿದೆ. ಅಬಾಬತ್ 39 ದಿನಗಳ ಮಗುವಾಗಿದ್ದಾಗಲೇ ಅಸುನೀಗಿದಳು. ಆದರೆ ಸುಖಬೀರ್ ಸಿಂಗ್ ಸಂಧು, ಅವರ ಪತ್ನಿ ಸುಪ್ರೀತ್ ಕೌರ್ ಹಾಗೂ ಅವರ ಕುಟುಂಬ 39 ದಿನಗಳ ತಮ್ಮ ಮಗುವಿನ ಅಂಗದಾನ ಮಾಡುವಂತಹ ಅತ್ಯಂತ ಪ್ರೇರಣಾತ್ಮಕ ನಿರ್ಣಯ ತೆಗೆದುಕೊಂಡರು. ಈಗ ದೂರವಾಣಿ ಕರೆಯಲ್ಲಿ ಸುಖಬೀರ್ ಸಿಂಗ್ ಮತ್ತು ಅವರ ಪತ್ನಿ ನಮ್ಮ ಜೊತೆಗಿದ್ದಾರೆ. ಬನ್ನಿ ಅವರೊಂದಿಗೆ ಮಾತನಾಡೋಣ. 

ಪ್ರಧಾನಮಂತ್ರಿ: ಸುಖಬೀರ್ ಅವರೆ ನಮಸ್ಕಾರ. 

ಸುಖಬೀರ್ ಸಿಂಗ್: ಗೌರವಾನ್ವಿತ ಪ್ರಧಾನಮಂತ್ರಿಗಳೇ ನಮಸ್ಕಾರ, ಸತ್ ಶ್ರೀ ಅಕಾಲ 

ಪ್ರಧಾನಮಂತ್ರಿ: ಸತ್ ಶ್ರೀ ಅಕಾಲ್ ಜಿ, ಸತ್ ಶ್ರೀ ಅಕಾಲ್ … ಸುಖಬೀರ್ ಅವರೆ ಇಂದು ನಾನು ಮನದ ಮಾತಿನ ಬಗ್ಗೆ ಆಲೋಚಿಸುತ್ತಿದ್ದಾಗ, ಅಬಾಬತ್ ವಿಷಯ ಅದೆಷ್ಟು ಪ್ರೇರಣಾದಾಯಕವಾಗಿದೆ ಎಂಬುದನ್ನು ನಿಮ್ಮ ಮಾತುಗಳಲ್ಲೇ ಕೇಳಬೇಕು ಎಂದೆನಿಸಿತು. ಏಕೆಂದರೆ ಮನೆಯಲ್ಲಿ ಹೆಣ್ಣುಮಗುವಿನ ಜನನದೊಂದಿಗೆ ಅವರ ಕನಸುಗಳು ಸಾಕಷ್ಟು ಸಂತಸ ಸಂಭ್ರಮವನ್ನು ಹೊತ್ತು ತರುತ್ತವೆ. ಆದರೆ ಮಗಳು ಇಷ್ಟು ಬೇಗ ತೊರೆದು ಹೋದರೆ ಆ ಕಷ್ಟ ಎಷ್ಟು ವೇದನೆಯನ್ನು ತಂದು ಕೊಡುತ್ತದೆ ಎಂಬುದನ್ನು ನಾನು ಊಹಿಸಬಲ್ಲೆ. ನೀವು ಯಾವ ರೀತಿ ನಿರ್ಣಯ ಕೈಗೊಂಡಿರಿ ಎಂಬುದರ ಬಗ್ಗೆ ವಿವರವಾಗಿ ತಿಳಿಯಬಯಸುತ್ತೇನೆ. 

ಸುಖಬೀರ್ ಸಿಂಗ್: ಸರ್, ಭಗವಂತ ನಮಗೆ ಬಹಳ ಒಳ್ಳೇ ಮಗುವನ್ನು ಕರುಣಿಸಿದ್ದ. ನಮ್ಮ ಮನೆಗೆ ಬಹಳ ಸುಂದರ ಹೆಣ್ಣುಮಗುವನ್ನು ದಯಪಾಲಿಸಿದ್ದ. ಆದರೆ ಅವಳ ಜನ್ಮದ ನಂತರ ನಮಗೆ ಅವಳ ಮೆದುಳಿನಲ್ಲಿ ಕೆಲ ನರಗಳು ಗಂಟು ಕಟ್ಟಿಕೊಂಡರುವುದರಿಂದ ಅವಳ ಹೃದಯದ ಗಾತ್ರ ದೊಡ್ಡದಾಗುತ್ತಾ ಸಾಗಿದೆ ಎಂಬುದು ತಿಳಿಯಿತು. ಆದರೆ, ಮಗುವಿನ ಆರೋಗ್ಯ ತುಂಬಾ ಚೆನ್ನಾಗಿತ್ತು, ಎಷ್ಟೊಂದು ಸುಂದರ ಮಗು ಎಂಥ ದೊಡ್ಡ ಸಮಸ್ಯೆಯೊಂದಿಗೆ ಜನ್ಮ ತಳೆದಿದೆ ಎಂಬುದು ನಮ್ಮಲ್ಲಿ ಆತಂಕ ಮೂಡಿಸಿತು. ಮೊದಲ ಆರಂಭದ 24 ದಿನಗಳು ಮಗು ತುಂಬಾ ಚೆನ್ನಾಗಿತ್ತು. Normal ಆಗೇ ಇತ್ತು. ಇದ್ದಕ್ಕಿದ್ದಂತೆ ಅವಳ ಹೃದಯ ಕೆಲಸ ಮಾಡುವುದನ್ನು ನಿಲ್ಲಿಸಿತು. ಕೂಡಲೇ ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ವೈದ್ಯರು ಚಿಕಿತ್ಸೆ ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು. ಆದರೆ ಅವಳ ಸಮಸ್ಯೆಯೇನೆಂದು ತಿಳಿಯಲು ಸಮಯ ಬೇಕಾಯಿತು. ಅಷ್ಟು ಪುಟ್ಟ ಮಗುವಿಗೆ ಹೃದಯಾಘಾತವಾಯಿತು, ನಾವು ಚಿಕಿತ್ಸೆಗಾಗಿ ಅವಳನ್ನು ಚಂದೀಘಡದ ಪಿ ಜಿ ಐ ಸ್ಪತ್ರೆಗೆ ಕರೆದೊಯ್ದೆವು.  ಅಲ್ಲಿ ಬಹಳ ಧೈರ್ಯದಿಂದ  ಮಗು ಚಿಕಿತ್ಸೆಗೆ ಸ್ಪಂದಿಸುವ ಪ್ರಯತ್ನ ಮಾಡಿತು. ಆದರೆ ರೋಗ ಎಷ್ಟು ಗಂಭೀರವಾಗಿತ್ತೆಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಅದರ ಚಿಕಿತ್ಸೆ ಅಸಾಧ್ಯವಾಗಿತ್ತು. ವೈದ್ಯರು ಅವಳು ಚೇತರಿಕೊಳ್ಳುವಂತಾಗಲು ಬಹಳ ಪ್ರಯತ್ನಪಟ್ಟರು. 6 ತಿಂಗಳವರೆಗೆ ಮಗು ಚೇತರಿಸಿಕೊಂಡರೆ ಆಪರೇಷನ್ ಮಾಡಬಹುದಾಗಿತ್ತು. ಆದರೆ ದೇವರ ಇಚ್ಛೇ ಬೆರೆಯೇ ಆಗಿತ್ತು. ಮಗು 39 ದಿನದವಳಾಗಿದ್ದಾಗ ಮತ್ತೆ ಅವಳಿಗೆ ಹೃದಯಾಘಾತವಾಗಿದೆ ಅಲ್ಲದೆ ಅವಳ ಬದುಕುಳಿಯುವ ಸಂಭಾವ್ಯತೆ ಬಹಳ ಕಡಿಮೆ ಎಂದು ವೈದ್ಯರು ಹೇಳಿದರು. ಆಗ ನಾವಿಬ್ಬರೂ ದಂಪತಿಗಳು ಆ ಮಗು ಮತ್ತೆ ಮತ್ತೆ ಸಾವಿನೊಂದಿಗೆ ಹೋರಾಡಿ ಚೇತರಿಸಿಕೊಳ್ಳುತ್ತಿರುವುದನ್ನು ನಾವು ಕಂಡಿದ್ದೆವು, ಇನ್ನೇನು ಕೈಬಿಟ್ಟು ಹೋಗುತ್ತಾಳೆ ಎನ್ನುತ್ತಿರುವಾಗಲೇ ಚೇತರಿಸಿಕೊಳ್ಳುತ್ತಿದ್ದಳು. ಅವಳು ಕೊನೆಯುಸಿರೆಳೆದಾಗ ಈ ಮಗು ಈ ಲೋಕಕ್ಕೆ ಬಂದಿರುವುದರ ಹಿಂದೆ ಯಾವುದೋ ಉದ್ದೇಶವಿದೆ ಆದ್ದರಿಂದ ಯಾಕೆ ನಾವು ಅವಳ ಅಂಗದಾನ ಮಾಡಬಾರದು, ಬೇರೆ ಯಾವುದೋ ಮಗುವಿನ ಜೀವನದಲ್ಲಿ ಬೆಳಕು ಮೂಡಬಹುದಲ್ಲ ಎಂದು ಆಲೋಚಿಸಿದೆವು. ಆಗ ನಾವು ಪಿಜಿಐ ಆಡಳಿತಾತ್ಮಕ ವಿಭಾಗವನ್ನು ಸಂಪರ್ಕಿಸಿದೆವು. ಇಷ್ಟು ಪುಟ್ಟ ಮಗುವಿನ ಮೂತ್ರಪಿಂಡವನ್ನು ಮಾತ್ರವೇ ತೆಗೆದುಕೊಳ್ಳಬಹುದು ಎಂದು ಅವರು ನಮಗೆ ಮಾರ್ಗದರ್ಶನ ನೀಡಿದರು. ಆ ಭಗವಂತನೇ ನಮಗೆ ಶಕ್ತಿ ತುಂಬಿದ ಗುರುನಾನಕ ದೇವ್ ಅವರ ತತ್ವ ಇದನ್ನೇ ಹೇಳುತ್ತದೆ ಎಂದು ತಿಳಿದು ನಾವು ನಿರ್ಣಯ ಕೈಗೊಂಡೆವು    

ಪ್ರಧಾನಮಂತ್ರಿ: ಗುರು ತೋರಿದ ದಾರಿಯಲ್ಲಿ ನಡೆಯುವುದು ಮಾತ್ರವಲ್ಲ ಅದನ್ನೇ ಜೀವಿಸಿ ತೋರಿಸಿದ್ದೀರಿ. ಸುಪ್ರೀತ್ ಅವರಿದ್ದಾರೆಯೇ? ಅವರೊಂದಿಗೆ ಮಾತನಾಡಬಹುದೇ? 
ಸುಖಬೀರ್ ಸಿಂಗ್: ಇದ್ದಾರೆ ಸರ್

ಸುಪ್ರೀತ್: ಹಲ್ಲೋ

ಪ್ರಧಾನಮಂತ್ರಿ: ಹಲ್ಲೋ, ಸುಪ್ರೀತ್ ಅವರೆ ನಮಸ್ಕಾರ 

ಸುಖಬೀರ್ ಸಿಂಗ್: ನಮಸ್ಕಾರ ಸರ್, ನೀವು ನಮ್ಮೊಂದಿಗೆ ಮಾತನಾಡುತ್ತಿರುವುದು ನಮಗೆ ಬಹಳ ಹೆಮ್ಮೆಯ ವಿಷಯವಾಗಿದೆ. 

ಪ್ರಧಾನಮಂತ್ರಿ: ನೀವು ಎಷ್ಟು ದೊಡ್ಡ ಕೆಲಸ ಮಾಡಿದ್ದೀರಿ. ದೇಶದ ಜನರು ನಿಮ್ಮ ಮಾತುಗಳನ್ನು ಕೇಳಿದಾಗ ಜನರು ಇತರರ ಜೀವ ಉಳಿಸಲೆಂದು ಮುಂದೆ ಬರುತ್ತಾರೆ ಎಂಬುದು ನನ್ನ ಆಶಯ.ತೆಗೆದುಹಾಕಬೇಕೆಂದುಕೊಂಡೆವು ಅಬಾಬತ್ ಳ ಕೊಡುಗೆ ಬಹಳ ದೊಡ್ಡದು. 

ಸುಪ್ರೀತ್: ಸರ್, ಬಹುಶಃ ಗುರು ನಾನಕ್ ಜಿ ಅವರ ಪ್ರೇರಣೆಯೇ ಇರಬೇಕು -  ನಾವು ಇಷ್ಟು ದೊಡ್ಡ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಯಿತು. 

ಪ್ರಧಾನಮಂತ್ರಿ: ಗುರುಗಳ ಕೃಪೆಯಿಲ್ಲದೆ ಏನೂ ಸಾಧ್ಯವಿಲ್ಲ. 

ಸುಪ್ರೀತ್: ಖಂಡಿತ ಸರ್,

ಪ್ರಧಾನಮಂತ್ರಿ: ಸುಖಬೀರ್ ಅವರೆ ನೀವು ಆಸ್ಪತ್ರೆಯಲ್ಲಿದ್ದಾಗ ಎದೆ ಝಲ್ಲೆನ್ನುವಂತಹ ವಿಷಯವನ್ನು ನಿಮಗೆ ತಿಳಿಸಿದಾಗ್ಯೂ ನೀವು ಮತ್ತು ನಿಮ್ಮ ಪತ್ನಿ ಎದೆಗುಂದದೆ ಇಷ್ಟು ದೊಡ್ಡ ನಿರ್ಣಯ ಕೈಗೊಂಡಿರಿ. ಗುರುಗಳ ಆಶೀರ್ವಾದದಿಂದಲೇ ನಿಮ್ಮ ಮನದಲ್ಲಿ ಇಷ್ಟು ಉದಾತ್ತ ವಿಚಾರಗಳು ಬಂದಿವೆ. ಸಾಮಾನ್ಯ ಮಾತುಗಳಲ್ಲಿ ಹೇಳುವುದಾದರೆ ಅಬಾಬತ್ ಅರ್ಥವೇ ಬೇರೆಯವರಿಗೆ ನೆರವಾಗುವುದು ಎಂದಿದೆ. ಇಂಥ ಉದಾತ್ತ ಕಾರ್ಯ ಮಾಡಿದ  ಕ್ಷಣದ ಬಗ್ಗೆ ನಾನು ಕೇಳಬಯಸುತ್ತೇನೆ. 

ಸುಖಬೀರ್: ಸರ್, ಪ್ರಿಯಾ ಎಂಬ ನಮ್ಮ ಕುಟುಂಬ ಸ್ನೇಹಿತರೊಬ್ಬರಿದ್ದಾರೆ. ಅವರು ತಮ್ಮ ಅಂಗದಾನ ಮಾಡಿದ್ದರು. ಅವರಿಂದಲೂ ನಮಗೆ ಪ್ರೇರಣೆ ದೊರೆಯಿತು. ಆಗ ನಮಗೆ ಈ ಶರೀರ ಪಂಚತತ್ವಗಳಲ್ಲಿ ವಿಲೀನವಾಗಿಹೋಗುವುದು ಎಂದೆನಿಸಿತು. ಯಾರಾದರೂ ನಮ್ಮನ್ನಗಲಿದಾಗ ಅವರ ಶರೀರವನ್ನು ಅಗ್ನಿಯಲ್ಲಿ ದಹಿಸಲಾಗುತ್ತದೆ ಇಲ್ಲವೆ ಹೂಳಲಾಗುತ್ತದೆ. ಆದರೆ ಅವರ ಅಂಗ ಯಾರಿಗಾದರೂ ಉಪಯೋಗಕ್ಕೆ ಬಂದರೆ ಅದು ಒಳ್ಳೆಯದೇ ಅಲ್ಲವೇ. ವೈದ್ಯರು ನಮಗೆ ನಿಮ್ಮ ಮಗಳು ಭಾರತದ ಅತ್ಯಂತ ಕಿರಿಯ ವಯಸ್ಸಿನ ಅಂಗದಾನಿಯಾಗಿದ್ದಾಳೆ ಮತ್ತು ಅವಳ ಅಂಗ ಯಶಸ್ವಿಯಾಗಿ ಬೇರೆಯವರಿಗೆ ಕಸಿ ಮಾಡಲಾಗಿದೆ ಎಂದು ಹೇಳಿದಾಗ ನಮಗೆ ಬಹಳ ಹೆಮ್ಮೆಯೆನಿಸಿತು. ನಾವು ಇಷ್ಟು ವರ್ಷಗಳಲ್ಲಿ ನಮ್ಮ ಪಾಲಕರ ಹೆಸರನ್ನು ಬೆಳಗಲಾಗಲಿಲ್ಲ, ಆದರೆ ಒಂದು ಪುಟ್ಟ ಮಗು ಕೆಲವೇ ದಿನಗಳಲ್ಲಿ ನಮ್ಮ ಹೆಸರನ್ನು ಬೆಳಗಿಸಿದ್ದಾಳೆ. ಇಷ್ಟೇ ಅಲ್ಲ ಈ ವಿಷಯದ ಕುರಿತು ನಿಮ್ಮೊಂದಿಗೆ ನಾವು ಮಾತನಾಡುತ್ತಿರುವುದು ಮತ್ತಷ್ಟು ಹೆಮ್ಮೆಯ ವಿಷಯವಾಗಿದೆ.  

ಪ್ರಧಾನಮಂತ್ರಿ: ಸುಖಬೀರ್ ಅವರೇ ಇಂದು ನಿಮ್ಮ ಮಗುವಿನ ಅಂಗ ಮಾತ್ರ ಜೀವಂತವಾಗಿದೆ ಎಂದಲ್ಲ, ನಿಮ್ಮ ಮಗಳು ಮಾನವತೆಯ ಅಮರಗಾಥೆಯ ಅಮರ ಯಾತ್ರಿಕಳಾಗಿದ್ದಾಳೆ. ತನ್ನ ಶರೀರದ ಅಂಶದೊಂದಿಗೆ ಅವಳು ಇಂದಿಗೂ ಜೀವಂತವಾಗಿದ್ದಾಳೆ. ಈ ಉತ್ತಮ ಕೆಲಸಕ್ಕಾಗಿ ನಿಮ್ಮನ್ನು, ನಿಮ್ಮ ಶ್ರೀಮತಿಯವರನ್ನು ಮತ್ತು ಕುಟುಂಬದವರನ್ನು ನಾನು ಪ್ರಶಂಸಿಸುತ್ತೇನೆ. 

ಸುಖಬೀರ್: ಧನ್ಯವಾದಗಳು ಸರ್…  

ಸ್ನೇಹಿತರೆ, ನಾವು ಶಾಶ್ವತವಾಗಿ ಹೊರಟು ಹೋಗುವಾಗಲೂ ಒಬ್ಬರ ಜೀವವನ್ನು ಉಳಿಸಬೇಕು ಎಂಬುದೇ ಅಂಗಾಂಗ ದಾನದ ಬಹುದೊಡ್ಡ ಧ್ಯೇಯವಾಗಿರುತ್ತದೆ. ಅಂಗಾಂಗ ದಾನಕ್ಕಾಗಿ ಕಾಯುವ ಜನರಿಗೆ, ಕಾಯುವ ಪ್ರತಿ ಕ್ಷಣವನ್ನು ಕಳೆಯುವುದು ಎಷ್ಟು ಕಷ್ಟದಾಯಕ ಎಂಬುದು ತಿಳಿದಿರುತ್ತದೆ ಮತ್ತು ಅಂತಹ ಸ್ಥಿತಿಯಲ್ಲಿ, ಅಂಗದಾನಿ ಅಥವಾ ದೇಹದಾನಿ ದೊರೆತಲ್ಲಿ ಅವರು ದೇವರ ಪ್ರತಿರೂಪದಂತೆ ಕಾಣುತ್ತಾರೆ. ಜಾರ್ಖಂಡ್ ನಿವಾಸಿ ಸ್ನೇಹಲತಾ ಚೌಧರಿ ಕೂಡ ದೇವರಂತೆ ಇತರರಿಗೆ ಜೀವನ ನೀಡಿದವರು. 63 ವರ್ಷದ ಸ್ನೇಹಲತಾ ಚೌಧರಿ ಅವರು ತಮ್ಮ ಹೃದಯ, ಮೂತ್ರಪಿಂಡ ಮತ್ತು ಯಕೃತ್ತು ದಾನ ಮಾಡಿದ್ದಾರೆ. ಇಂದು 'ಮನ್ ಕಿ ಬಾತ್' ನಲ್ಲಿ ಅವರ ಮಗ – ಸೋದರ ಅಭಿಜಿತ್ ಚೌಧರಿ ನಮ್ಮೊಂದಿಗಿದ್ದಾರೆ. ಅವರೊಂದಿಗೆ ಮಾತನಾಡೋಣ.

ಪ್ರಧಾನಮಂತ್ರಿ – ಅಭಿಜೀತ್ ಅವರೇ ನಮಸ್ಕಾರ

ಅಭಿಜೀತ್ ಜೀ- ನಮಸ್ಕಾರ ಸರ್.

ಪ್ರಧಾನಮಂತ್ರಿ- ಅಭಿಜೀತ್ ಅವರೆ, ನಿಮ್ಮ ತಾಯಿ ನಿಮಗೆ ಜನ್ಮ ನೀಡುವ ಮೂಲಕ ತಾಯಿಯಾದರೂ ತಮ್ಮ ಮರಣಾ ನಂತರವೂ ಅನೇಕ ಜನರಿಗೆ ಜೀವನ ನೀಡಿದ ಮಹಾತಾಯಿಯ ಮಗ ನೀವು. ಮಗನಾಗಿ ಅಭಿಜಿತ್  ನಿಮಗೆ ಬಹಳ ಹೆಮ್ಮೆ ಎನಿಸುತ್ತಿರಬೇಕು.

ಅಭಿಜೀತ್: ಹೌದು ಸರ್.

ಪ್ರಧಾನಮಂತ್ರಿ: ನಿಮ್ಮ ತಾಯಿಯ ಬಗ್ಗೆ ಸ್ವಲ್ಪ ಹೇಳಿ, ಯಾವ ಸಂದರ್ಭದಲ್ಲಿ ಅಂಗಾಂಗ ದಾನದ ನಿರ್ಧಾರವನ್ನು ತೆಗೆದುಕೊಳ್ಳಲಾಯಿತು?

ಅಭಿಜೀತ್: ಜಾರ್ಖಂಡ್ನಲ್ಲಿ ಸರಾಯಿಕೆಲಾ ಎಂಬ ಒಂದು ಪುಟ್ಟ ಗ್ರಾಮವಿದೆ, ಅಲ್ಲಿ ನನ್ನ ತಂದೆ-ತಾಯಿ ಇಬ್ಬರೂ ವಾಸಿಸುತ್ತಿದ್ದರು. ಕಳೆದ ಇಪ್ಪತ್ತೈದು ವರ್ಷಗಳಿಂದ ನಿರಂತರವಾಗಿ ನಮ್ಮ ತಾಯಿ ಬೆಳಗಿನ ವಾಕಿಂಗ್ ಮಾಡುತ್ತಿದ್ದರು, ಅವರು ತಮ್ಮ ಅಭ್ಯಾಸಬಲದಂತೆ ಬೆಳಗಿನ ಜಾವ 4 ಗಂಟೆಗೆ ತಮ್ಮ ಬೆಳಗಿನ ವಾಕಿಂಗ್ ಗೆ ಹೊರಟಿದ್ದರು. ಆ ವೇಳೆ ಬೈಕ್ ಸವಾರನೊಬ್ಬ ಅವರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಆಕೆಯ ತಲೆಗೆ ತೀವ್ರ ಪೆಟ್ಟಾಗಿತ್ತು. ತಕ್ಷಣವೇ ನಾವು ಅವರನ್ನು ಸರಾಯಿಕೆಲಾ ಆಸ್ಪತ್ರೆಗೆ ಕರೆದೊಯ್ದೆವು, ವೈದ್ಯರು ಅವರಿಗೆ ಔಷಧೋಪಚಾರ ಮಾಡಿದರು, ಆದರೆ ತೀವ್ರ ರಕ್ತಸ್ರಾವವಾಗಿದ್ದರಿಂದ ಅವರಿಗೆ ಪ್ರಜ್ಞೆಯೇ ಇರಲಿಲ್ಲ. ತಕ್ಷಣ ಅವರನ್ನು ಟಾಟಾ ಮುಖ್ಯ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಅಲ್ಲಿ ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಯಿತು, 48 ಗಂಟೆಗಳ ವೀಕ್ಷಣೆಯ ನಂತರ, ವೈದ್ಯರು ಅವರು ಬದುಕುಳಿಯುವ ಅವಕಾಶಗಳು ಬಹಳ ಕಡಿಮೆ ಎಂದು ಹೇಳಿದರು. ನಂತರ ನಾವು ಅವರನ್ನು ವಿಮಾನದಲ್ಲಿ ಕರೆತಂದು ದೆಹಲಿಯ ಏಮ್ಸ್ಗೆ ಕರೆದುಕೊಂಡುಹೋದವು.. ಸುಮಾರು 7-8 ದಿನಗಳ ಕಾಲ ಅಲ್ಲಿ ಚಿಕಿತ್ಸೆ ನಡೆಯಿತು. ಅನಂತರ ಅವರ ಸ್ಥಿತಿ ಸುಧಾರಿಸಿತ್ತು. ಇದ್ದಕ್ಕಿದ್ದಂತೆ ಅವರ ರಕ್ತದೊತ್ತಡ ತುಂಬಾ ಕಡಿಮೆಯಾಯಿತು, ಆ ನಂತರ ಅವರ ಮೆದುಳು ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟಿದೆ ಎಂದು ಗೊತ್ತಾಯಿತು. ನಂತರ ಶಿಷ್ಟಾಚಾರದಂತೆ ವೈದ್ಯರು ಅಂಗಾಂಗ ದಾನದ ಬಗ್ಗೆ ನಮಗೆ ತಿಳಿಸುತ್ತಿದ್ದರು. ಅಂಗಾಂಗ ದಾನ ಎಂಬುದು ಕೂಡ ಅಸ್ತಿತ್ವದಲ್ಲಿದೆ ಎಂದು ನಮ್ಮ ತಂದೆಗೆ ನಾವು ಹೇಳಲು ಸಾಧ್ಯವಿರಲಿಲ್ಲ. ಏಕೆಂದರೆ ಸಹಿಸಿಕೊಳ್ಳಲು ಸಾಧ್ಯವಾಗಲಿಕ್ಕಿಲ್ಲ ಎಂದು ನಾವು ಭಾವಿಸಿದ್ದೆವು. ಈ ವಿಚಾರದ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂಬುದನ್ನು ಅವರ ಮನಸ್ಸಿನಿಂದ ತೆಗೆದುಹಾಕಬೇಕೆಂದುಕೊಂಡೆವು.  ನಾವು ಅವರಿಗೆ ಅಂಗಾಂಗ ದಾನದ ಮಾತು ನಡೆಯುತ್ತಿದೆ ಎಂದು ಹೇಳಿದ ತಕ್ಷಣ ಅವರು “ಇದೇ ನಿಮ್ಮ ತಾಯಿಯ ಇಚ್ಛೆಯಾಗಿತ್ತು ಮತ್ತು ನಾವು ಇದನ್ನು ಖಂಡಿತ ಮಾಡಲೇಬೇಕು ಎಂದು ಹೇಳಿದರು. ನಮ್ಮ ತಾಯಿ ಬದುಕುಳಿಯುವುದಿಲ್ಲ ಎಂದು ತಿಳಿದಾಗ ನಮಗೆ ತುಂಬಾ ನಿರಾಸೆಯಾಗಿತ್ತು ಆದರೆ ಅಂಗಾಂಗ ದಾನದ ಬಗ್ಗೆ ಚರ್ಚೆ ಪ್ರಾರಂಭವಾದ ನಂತರ, ಆ ನಿರಾಶಾವಾದವು ಸಕಾರಾತ್ಮಕವಾಗಿ ಬದಲಾಗಿಹೋಯಿತು ಮತ್ತು ನಾವು ತುಂಬಾ ಸಕಾರಾತ್ಮಕ ವಾತಾವರಣಕ್ಕೆ ಮರಳಿದೆವು. . ಹೀಗೆ ಚರ್ಚೆ ಮುಂದುವರಿದು ರಾತ್ರಿ 8 ಗಂಟೆಗೆ ಆಪ್ತಸಮಾಲೋಚನೆ  ನಡೆಸಲಾಯಿತು. ಎರಡನೇ ದಿನ ಅಂಗಾಂಗ ದಾನ ಮಾಡಿದೆವು. ನಮ್ಮ ತಾಯಿ ಈ ಹಿಂದೆ ನೇತ್ರದಾನ ಮತ್ತು ಸಾಮಾಜಿಕ ಚಟುವಟಿಕೆಯಂಥ ವಿಷಯಗಳಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಬಹುಶಃ ನಾವು ಈ ಆಲೋಚನೆಯನ್ನು ಮನಸ್ಸಿನಲ್ಲಿಟ್ಟುಕೊಂಡು ಮತ್ತು ಈ ವಿಷಯದ ಬಗ್ಗೆ ನನ್ನ ತಂದೆಯ ನಿರ್ಧಾರದಿಂದಾಗಿ ಅಂತಹ ದೊಡ್ಡ ನಿರ್ಧಾರ ಕೈಗೊಳ್ಳಲು ಸಾಧ್ಯವಾಯಿತು.

ಪ್ರಧಾನಮಂತ್ರಿ: ಎಷ್ಟು ಜನರಿಗೆ ಅಂಗಾಂಗ ಉಪಯುಕ್ತವಾದವು?

ಅಭಿಜೀತ್: ಅವರ ಹೃದಯ, ಎರಡು ಮೂತ್ರಪಿಂಡಗಳು, ಯಕೃತ್ತು ಮತ್ತು ಎರಡೂ ಕಣ್ಣುಗಳನ್ನು ದಾನ ಮಾಡಲಾಯಿತು, ಇದರಿಂದ ನಾಲ್ಕು ಜನರಿಗೆ ಜೀವದಾನ ದೊರೆಯಿತು ಮತ್ತು ಇಬ್ಬರಿಗೆ ದೃಷ್ಟಿ ಲಭಿಸಿತು.

ಪ್ರಧಾನಮಂತ್ರಿ- ಅಭಿಜೀತ್ ಅವರೇ, ನಿಮ್ಮ ತಂದೆ ಮತ್ತು ತಾಯಿ ಇಬ್ಬರೂ ಗೌರವಕ್ಕೆ ಅರ್ಹರು. ನಾನು ಅವರಿಗೆ ಮತ್ತು ನಿಮ್ಮ ತಂದೆ ನಿಮ್ಮ ಕುಟುಂಬ ಸದಸ್ಯರ  ಇಂತಹ ದೊಡ್ಡ ನಿರ್ಧಾರಕ್ಕೆ ನೇತೃತ್ವವಹಿಸಿದ್ದು, ನಿಜಕ್ಕೂ ಸ್ಫೂರ್ತಿದಾಯಕವಾಗಿದೆ ಮತ್ತು ತಾಯಿ ಎಲ್ಲರಿಗೂ ತಾಯಿಯೇ ಎಂದು ನಾನು ನಂಬುತ್ತೇನೆ. ತಾಯಿ ಸ್ಫೂರ್ತಿಯ ಸೆಲೆ. ಆದರೆ ತಾಯಿ ಬಿಟ್ಟು ಹೋಗುವ ಸಂಸ್ಕಾರ ಪೀಳಿಗೆಯಿಂದ ಪೀಳಿಗೆಗೆ ಅಗಾಧ ಶಕ್ತಿಯಾಗುತ್ತಾ ಸಾಗುತ್ತದೆ. ಅಂಗಾಂಗ ದಾನದ ವಿಷಯದಲ್ಲಿ ನಿಮ್ಮ ತಾಯಿಯ ಪ್ರೇರಣೆ ಇಂದು ಇಡೀ ದೇಶವನ್ನೇ ತಲುಪುತ್ತಿದೆ. ಈ ಪವಿತ್ರ ಮತ್ತು ಉತ್ತಮ ಕೆಲಸಕ್ಕಾಗಿ ನಿಮ್ಮ ಇಡೀ ಕುಟುಂಬವನ್ನು ನಾನು ಅಭಿನಂದಿಸುತ್ತೇನೆ. ಧನ್ಯವಾದಗಳು ಅಭಿಜೀತ್ ಅವರೆ, ಮತ್ತು ನಿಮ್ಮ ತಂದೆಗೆ ಖಂಡಿತ ನಮನಗಳನ್ನು ತಿಳಿಸಿ.

ಅಭಿಜೀತ್: ಖಂಡಿತವಾಗಿ, ಧನ್ಯವಾದಗಳು.

ಸ್ನೇಹಿತರೇ, 39 ದಿನಗಳ ಕಾಲ ಜೀವಿಸಿದ್ದಅಬಾಬತ್ಕೌರ್ ಇರಬಹುದು ಅಥವಾ 63 ವರ್ಷ ವಯಸ್ಸಿನ ಸ್ನೇಹಲತಾಚೌಧರಿ ಇರಬಹುದು, ಇಂತಹ ದಾನವೀರರು ನಮಗೆ ಜೀವನದ ಮಹತ್ವ ಅರ್ಥಮಾಡಿಸಿಹೋಗುತ್ತಾರೆ. ನಮ್ಮ ದೇಶದಲ್ಲಿ ಇಂದು, ಆರೋಗ್ಯಪೂರ್ಣ ಜೀವನ ನಡೆಸುವ ಆಸೆಯಿಂದ, ಅಂಗಾಂಗ ದಾನ ಪಡೆದುಕೊಳ್ಳುವ ಅಗತ್ಯವಿರುವ, ಅದಕ್ಕಾಗಿ ನಿರೀಕ್ಷಿಸುತ್ತಿರುವಂತಹ ಜನರು  ಅತಿ ದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅಂಗಾಗದಾನವನ್ನು ಸುಲಭ ಮಾಡುವುದಕ್ಕಾಗಿ ಮತ್ತು ಅದಕ್ಕೆ ಪ್ರೋತ್ಸಾಹ ನೀಡುವುದಕ್ಕಾಗಿ ದೇಶಾದ್ಯಂತ ಇಂತಹ ಏಕರೂಪದನೀತಿಯ ಪ್ರಕಾರ ಕೆಲಸ ನಡೆಯುತ್ತಿದೆ ಎಂಬ ತೃಪ್ತಿ ನನಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳ ವಾಸಸ್ಥಳದಷರತ್ತುಗಳನ್ನುತೆಗೆದುಹಾಕುವ ನಿರ್ಣಯ ಕೂಡಾ ಕೈಗೊಳ್ಳಲಾಗುತ್ತಿದೆ, ಅಂದರೆ, ರೋಗಿಯು ದೇಶದ ಯಾವುದೇ ರಾಜ್ಯಕ್ಕೆ ಹೋಗಿ ಅಂಗಪಡೆದುಕೊಳ್ಳುವುದಕ್ಕಾಗಿ ನೋಂದಣಿ ಮಾಡಿಸಿಕೊಳ್ಳಬಹುದಾಗಿದೆ. ಸರ್ಕಾರವು ಅಂಗಾಂಗ ದಾನಕ್ಕಾಗಿ 65 ವರ್ಷಕ್ಕಿಂತ ಕಡಿಮೆ ವಯಸ್ಸಿನ, ವಯಸ್ಸು ಮಿತಿಯನ್ನು ಕೂಡಾ ಕೊನೆಗೊಳಿಸುವ ನಿರ್ಣಯ ಕೈಗೊಂಡಿದೆ. ಈ ಪ್ರಯತ್ನಗಳ ನಡುವೆಯೇ, ಅಂಗಾಂಗ ದಾನಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮುಂದೆ ಬರಬೇಕೆಂದು ನಾನು ದೇಶವಾಸಿಗಳಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮ ಇಂತಹ ಒಂದು ನಿರ್ಧಾರ, ಅನೇಕರ ಜೀವ ಉಳಿಸಬಹುದಾಗಿದೆ, ಅನೇಕರಿಗೆ ಜೀವನ ನೀಡಬಹುದಾಗಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಇದು ನವರಾತ್ರಿಯ ಸಮಯ, ಶಕ್ತಿ ದೇವತೆಯ ಆರಾಧನೆಯ ಸಮಯ. ಇಂದು ಹೊಸ ಕೋನದಿಂದ ಹೊರಹೊಮ್ಮುತ್ತಾ ಮುಂದೆ ಬರುತ್ತಿರುವ ಭಾರತದ ಸಾಮರ್ಥ್ಯದಲ್ಲಿ, ಅತ್ಯಂತ ದೊಡ್ಡ ಪಾತ್ರ ನಮ್ಮ ಮಹಿಳೆಯರ ಶಕ್ತಿಯಾಗಿದೆ. ಇತ್ತೀಚೆಗೆ ಇಂತಹ ಹಲವಾರು ಉದಾಹರಣೆಗಳು ನಮ್ಮ ಮುಂದೆ ಬಂದಿವೆ. ಇತ್ತೀಚೆಗೆ ನೀವು ಸೋಷಿಯಲ್ ಮೀಡಿಯಾದಲ್ಲಿ ಏಷ್ಯಾದ ಪ್ರಥಮ ಮಹಿಳಾ ಲೋಕೋಪೈಲಟ್ ಸುರೇಖಾ ಯಾದವ್ ಅವರನ್ನು ಖಂಡಿತವಾಗಿಯೂ ನೋಡಿಯೇ ಇರುತ್ತೀರಿ. ಸುರೇಖಾ ಅವರು, ವಂದೇ ಭಾರತ್ ಎಕ್ಸ್ ಪ್ರೆಸ್ ನ ಪ್ರಥಮ ಮಹಿಳಾ ಲೋಕೋ ಪೈಲಟ್ ಆಗಿ ಮತ್ತೊಂದು ಹೆಗ್ಗಳಿಕೆಯ ದಾಖಲೆಗೆ ಪಾತ್ರರಾಗಿದ್ದಾರೆ. ಇದೇ ತಿಂಗಳು, ಚಿತ್ರ ನಿರ್ಮಾಪಕಿ ಗುನೀತ್ ಮೊಂಗಾ ಮತ್ತು ನಿರ್ದೇಶಕಿ ಕಾರ್ತಿಕೀ ಗೋಂಜಾಲ್ವಿಸ್ ಅವರುಗಳು ತಮ್ಮ ಡಾಕ್ಯುಮೆಂಟರಿ ‘Elephant Whisperers’ ಗಾಗಿ Oscar ಪ್ರಶಸ್ತಿ ವಿಜೇತರಾಗಿ ದೇಶಕ್ಕೆ ಹೆಮ್ಮೆ ತಂದುಕೊಟ್ಟಿದ್ದಾರೆ.   ಬಾಬಾ ಅಣು ಸಂಶೋಧನಾ ಕೇಂದ್ರದ ವಿಜ್ಞಾನಿ, ಜ್ಯೋತಿರ್ಮಯಿ ಮೊಹಾಂತಿ ಅವರು ಕೂಡಾ ದೇಶಕ್ಕಾಗಿ ಮತ್ತೊಂದು ಸಾಧನೆ ಮಾಡಿದ್ದಾರೆ. ಜ್ಯೋತಿರ್ಮಯಿ ಅವರಿಗೆ ಕೆಮಿಕಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ IUPAC ನ ವಿಶೇಷ ಪ್ರಶಸ್ತಿ ದೊರೆತಿದೆ. ಈ ವರ್ಷದ ಆರಂಭದಲ್ಲಿ, ಭಾರತದ 19 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಹಿಳಾ ಕ್ರಿಕೆಟ್ ತಂಡವು ಟಿ-20 ವಿಶ್ವಕಪ್ ಪ್ರಶಸ್ತಿ ತನ್ನದಾಗಿಸಿಕೊಂಡು ಹೊಸದೊಂದು ಇತಿಹಾಸ ಸೃಷ್ಟಿಸಿತು. ನೀವು ರಾಜಕೀಯದತ್ತ ನೋಡಿದರೆ, ಒಂದು ಹೊಸ ಆರಂಭ ನಾಗಾಲ್ಯಾಂಡ್ ನಲ್ಲಿ ನಡೆದಿದೆ. ನಾಗಾಲ್ಯಾಂಡ್ ನಲ್ಲಿ 75 ವರ್ಷಗಳಲ್ಲಿ ಮೊದಲಬಾರಿಗೆ ಇಬ್ಬರು ಮಹಿಳಾ ಶಾಸಕರು ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿದ್ದಾರೆ. ಇವರಲ್ಲಿ ಒಬ್ಬರನ್ನು ನಾಗಾಲ್ಯಾಂಡ್ ಸರ್ಕಾರವು ಸಚಿವರನ್ನಾಗಿ ಕೂಡಾ ನೇಮಿಸಿದೆ ಅಂದರೆ, ರಾಜ್ಯದ ಜನತೆಗೆ ಪ್ರಥಮ ಬಾರಿಗೆ ಮಹಿಳಾ ಸಚಿವರೊಬ್ಬರು ದೊರೆತಿದ್ದಾರೆ. 

ಸ್ನೇಹಿತರೇ, ಟರ್ಕಿಯಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ ಅಲ್ಲಿನ ಜನರಿಗೆ ಸಹಾಯ ಮಾಡಲು ಹೋಗಿದ್ದಂತಹ ಆ ಧೈರ್ಯಶಾಲಿ ಹೆಣ್ಣುಮಕ್ಕಳನ್ನು ನಾನು ಕೆಲವು ದಿನಗಳ ಹಿಂದೆ ಭೇಟಿಯಾಗಿದ್ದೆ. ಇವರೆಲ್ಲರೂ NDRF ತಂಡದಲ್ಲಿ ಸೇರಿದ್ದರು. ಇವರ ಧೈರ್ಯ ಮತ್ತು ಕೌಶಲ್ಯವನ್ನು ಇಡೀ ಜಗತ್ತೇ ಪ್ರಶಂಸಿಸುತ್ತಿದೆ. ಭಾರತವು ವಿಶ್ವಸಂಸ್ಥೆಯ ಮಿಷನ್ ಅಡಿಯಲ್ಲಿ ಶಾಂತಿ ಪಾಲನಾ ಸೇನೆಯಲ್ಲಿ ಕೇವಲ ಮಹಿಳೆಯರನ್ನು ಒಳಗೊಂಡ ತುಕಡಿಯನ್ನು ಕೂಡಾ ನಿಯೋಜಿಸಿದೆ. 

ಇಂದು ದೇಶದ ಹೆಣ್ಣು ಮಕ್ಕಳು, ನಮ್ಮ ಮೂರು ಸೇನೆಗಳಲ್ಲಿ ತಮ್ಮ ಶೌರ್ಯ, ಸಾಹಸದ ಬಾವುಟ ಹಾರಿಸುತ್ತಿದ್ದಾರೆ. ಗ್ರೂಪ್ ಕ್ಯಾಪ್ಟನ್ ಶಾಲಿಜಾಧಾಮಿ ಅವರು Combat Unit ನಲ್ಲಿ Command Appointment ಪಡೆದುಕೊಂಡ ಪ್ರಥಮ ಮಹಿಳಾ ವಾಯುಸೇನಾ ಅಧಿಕಾರಿಯಾಗಿದ್ದಾರೆ. ಅವರು ಸುಮಾರು 3 ಸಾವಿರ ಗಂಟೆಗಳ flying experience- ವಿಮಾನ ಹಾರಟದ ಅನುಭವ ಹೊಂದಿದ್ದಾರೆ. ಇದೇ ರೀತಿ ಭಾರತೀಯ ಸೇನೆಯ ಕ್ಯಾಪ್ಟನ್ ಶಿವಾ ಚೌಹಾಣ್ ಅವರು ಸಿಯಾಚಿನ್ ನಲ್ಲಿ ನೇಮಕಗೊಡ ಪ್ರಥಮ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.  ತಾಪಮಾನ ಮೈನಸ್ ಅರವತ್ತು ಡಿಗ್ರಿ ಸೆಲ್ಷಿಯಸ್ ಗೆ ಕುಸಿಯುವ ಸಿಯಾಚಿನ್ ಪ್ರದೇಶದಲ್ಲಿ ಶಿವಾ ಅವರು ಮೂರು ತಿಂಗಳ ಕಾಲ ನೆಲೆಸುತ್ತಾರೆ. 

ಸ್ನೇಹಿತರೇ, ಪಟ್ಟಿ ಎಷ್ಟೊಂದು ಉದ್ದವಿದೆಯೆಂದರೆ ಎಲ್ಲರ ಬಗ್ಗೆ ಮಾತನಾಡುವುದು ಸಾಧ್ಯವಾಗುವುದಿಲ್ಲ. ಇಂತಹ ಎಲ್ಲ ಮಹಿಳೆಯರು, ನಮ್ಮ ಹೆಣ್ಣು ಮಕ್ಕಳು, ಭಾರತ ಮತ್ತು ಭಾರತದ ಕನಸಿಗೆ ಬಲ ತುಂಬುತ್ತಿದ್ದಾರೆ. ನಾರಿ ಶಕ್ತಿಯ ಈ ಬಲವು ಅಭಿವೃದ್ಧಿ ಹೊಂದುತ್ತಿರುವ ಭಾರತದ ಜೀವಾಳವಾಗಿದೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ವಿಶ್ವದೆಲ್ಲಡೆ ಸ್ವಚ್ಛ ಇಂಧನ, ಮರುನವೀಕರಿಸಬಹುದಾದ ಇಂಧನ ಕುರಿತು ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ನಾನು ವಿಶ್ವದ ಜನರನ್ನು ಭೇಟಿ ಮಾಡಿದಾಗ ಅವರು, ಈ ಕ್ಷೇತ್ರದಲ್ಲಿ ಭಾರತದ ಅಭೂತಪೂರ್ವ ಯಶಸ್ಸಿನ ಬಗ್ಗೆ ಖಂಡಿತವಾಗಿಯೂ ಮಾತುಗಳನ್ನು ಆಡುತ್ತಾರೆ.  ವಿಶೇಷವಾಗಿ, ಭಾರತ, ಸೌರ ಇಂಧನದ ಕ್ಷೇತ್ರದಲ್ಲಿ ಮುಂದುವರಿಯುತ್ತಿರುವ ವೇಗವು ನಿಜಕ್ಕೂ ಒಂದು ದೊಡ್ಡ ಸಾಧನೆಯಾಗಿದೆ. ಭಾರತದ ಜನರು ಶತಮಾನಗಳಿಂದಲೂ ಸೂರ್ಯನೊಂದಿಗೆ ವಿಶೇಷ ಅನುಬಂಧ ಹೊಂದಿದ್ದಾರೆ. ನಮ್ಮಲ್ಲಿ ಸೂರ್ಯನ ಶಕ್ತಿಯ ಬಗ್ಗೆ ಇರುವ ವೈಜ್ಞಾನಿಕ ತಿಳುವಳಿಕೆ, ಸೂರ್ಯನ ಆರಾಧನೆಯ ಸಂಪ್ರದಾಯ ಇತರ ಪ್ರದೇಶಗಳಲ್ಲಿ ವಿರಳವಾಗಿ ಕಂಡುಬರುತ್ತದೆ. ಇಂದು ಪ್ರತಿಯೊಬ್ಬ ದೇಶವಾಸಿಯೂ ಸೌರ ಶಕ್ತಿಯ ಪ್ರಾಮುಖ್ಯವನ್ನು ಅರಿಯುತ್ತಿದ್ದಾರೆ ಮತ್ತು ಸ್ವಚ್ಛ ಇಂಧನ ಕ್ಷೇತ್ರದಲ್ಲಿ ತಮ್ಮದೇ ಕೊಡುಗೆ ನೀಡಲು ಬಯಸುತ್ತಿದ್ದಾರೆಂದು ನನಗೆ ಬಹಳ ಸಂತೋಷವಿದೆ. ‘ಸಬ್ ಕಾ ಪ್ರಯಾಸ್’ ನ ಈ ಸ್ಫೂರ್ತಿಯು ಇಂದು ಭಾರತದ Solar Mission ಅನ್ನು ಮುಂದೆ ನಡೆಸುತ್ತಿದೆ. ಮಹಾರಾಷ್ಟ್ರದ ಪುಣೆಯಲ್ಲಿ, ಇಂತಹ ಒಂದು ಉತ್ತಮ ಪ್ರಯತ್ನವು ನನ್ನ ಗಮನವನ್ನು ತನ್ನೆಡೆಗೆ ಸೆಳೆಯಿತು. ಇಲ್ಲಿ MSR-Olive Housing Society ಯ ಜನರು, ಸೊಸೈಟಿಯಲ್ಲಿ ಕುಡಿಯುವ ನೀರು, ಲಿಫ್ಟ್ ಮತ್ತು ಲೈಟ್ ನಂತಹ ಸಾಮೂಹಿಕ ಬಳಕೆಯ ವಸ್ತುಗಳನ್ನು, ಈಗ ಸೌರ ಶಕ್ತಿಯಿಂದಲೇ ಚಾಲನೆಗೊಳಿಸಬೇಕೆಂದು ನಿರ್ಧರಿಸಿದರು. ನಂತರ ಸೊಸೈಟಿಯ ಎಲ್ಲ ಜನರು ಒಂದುಗೂಡಿ Solar Panel ಅಳವಡಿಸಿಕೊಂಡರು. ಇಂದು ಈ ಸೋಲಾರ್ ಪ್ಯಾನೆಲ್ ನಿಂದ ಪ್ರತಿ ವರ್ಷ ಸುಮಾರು 90 ಸಾವಿರ ಕಿಲೋವ್ಯಾಟ್ ಗಂಟೆ ವಿದ್ಯುತ್ ಉತ್ಪಾದನೆಯಾಗುತ್ತಿದೆ. ಇದರಿಂದ ಪ್ರತಿ ತಿಂಗಳೂ ಸುಮಾರು 40ಸಾವಿರ ರೂಪಾಯಿ ಉಳಿತಾಯವಾಗುತ್ತಿದೆ. ಈ ಉಳಿತಾಯದ ಪ್ರಯೋಜನ ಸೊಸೈಟಿಯಲ್ಲಿ ಪ್ರತಿಯೊಬ್ಬರಿಗೂ ದೊರೆಯುತ್ತಿದೆ.     ಸ್ನೇಹಿತರೇ, ಪುಣೆಯಂತೆಯೇ, ದಮನ್-ಡಿಯುದಲ್ಲಿ ಡಿಯು ಒಂದು ಪ್ರತ್ಯೇಕ ಜಿಲ್ಲೆಯಾಗಿದೆ. ಅಲ್ಲಿನ ಜನರು ಕೂಡಾ ಒಂದು ಅದ್ಭುತ ಕೆಲಸ ಮಾಡಿ ತೋರಿಸಿದ್ದಾರೆ. ಡಿಯು ದ್ವೀಪ ಸೋಮನಾಥ್ ಗೆ ಸಮೀಪದಲ್ಲಿದೆ ಎಂಬುದು ನಿಮಗೆ ತಿಳಿದೇ ಇದೆ. ಹಗಲಿನ ವೇಳೆಯಲ್ಲಿ ಎಲ್ಲ ರೀತಿಯ ಅಗತ್ಯ ಕೆಲಸಗಳಿಗಾಗಿ ಶೇಕಡಾ ನೂರರಷ್ಟು ಕ್ಲೀನ್ ಎನರ್ಜಿ ಬಳಕೆ ಮಾಡುತ್ತಿರುವ ಭಾರತದ ಪ್ರಥಮ ಜಿಲ್ಲೆ ಈ ದ್ವೀಪವಾಗಿದೆ. ಡಿಯುವಿನ ಈ ಯಶಸ್ಸಿನ ಹಿಂದಿನ ಮಂತ್ರ ಕೂಡಾ ‘ಎಲ್ಲರ ಪ್ರಯತ್ನ,’ ಅಂದರೆ ‘ಸಬ್ ಕಾ ಪ್ರಯಾಸ್’ ಎಂಬುದೇ ಆಗಿದೆ. ಇಲ್ಲಿ ವಿದ್ಯುತ್ ಉತ್ಪಾದನೆಗಾಗಿ ಸಂಪನ್ಮೂಲಗಳ ಸವಾಲಿತ್ತು, ಜನರು ಈ ಸವಾಲಿನ ಉತ್ತರವಾಗಿ ಸೌರ ಶಕ್ತಿಯನ್ನು ಆಯ್ಕೆ ಮಾಡಿಕೊಂಡರು. ಇಲ್ಲಿ ಬರಡು ಭೂಮಿಗಳಲ್ಲಿ ಮತ್ತು ಅನೇಕ ಕಟ್ಟಡಗಳ ಮೇಲೆ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಲಾಯಿತು. ಈ ಪ್ಯಾನೆಲ್ ಗಳಿಂದ ಡಿಯುನಲ್ಲಿ ಹಗಲಿನ ವೇಳೆಯಲ್ಲಿ ಎಷ್ಟು ವಿದ್ಯುತ್ತಿನ ಅಗತ್ಯವಿರುತ್ತದೆಯೋ ಅದಕ್ಕಿಂತ ಹಚ್ಚು ವಿದ್ಯುತ್ ಉತ್ಪಾದನೆಯಾಗುತ್ತಿದೆ. ಈ ಸೌರ ಯೋಜನೆಯಿಂದ, ವಿದ್ಯುತ್ ಖರೀದಿಗಾಗಿ ವೆಚ್ಚವಾಗುತ್ತಿದ್ದ ಸುಮಾರು 52 ಕೋಟಿ ರೂಪಾಯಿ ಉಳಿತಾಯವಾಗಿದೆ. ಇದರಿಂದ ಪರಿಸರದ ರಕ್ಷಣೆಯೂ ಆಗಿದೆ. 

    ಸ್ನೇಹಿತರೇ, ಪುಣೆ ಮತ್ತು ದೀವ್ ನ ಜನರು ಮಾಡಿ ತೋರಿಸಿರುವಂತಹ ಪ್ರಯತ್ನವು ದೇಶಾದ್ಯಂತ ಅನೇಕ ಕಡೆ ಕೂಡಾ ನಡೆಯುತ್ತಿದೆ. ಪರಿಸರ ಮತ್ತು ಪ್ರಕೃತಿಯ ವಿಷಯದಲ್ಲಿ ನಾವು ಭಾರತೀಯರು ಎಷ್ಟು ಸಂವೇದನಾಶೀಲರಾಗಿದ್ದೇವೆ, ಮತ್ತು ನಮ್ಮ ದೇಶ ಯಾವರೀತಿ ಭವಿಷ್ಯದ ಪೀಳಿಗೆಗಾಗಿ ಎಷ್ಟು ಜಾಗರೂಕತೆ ವಹಿಸುತ್ತದೆ ಎಂಬುದನ್ನು ಇದು ತೋರಿಸುತ್ತದೆ. ಇಂತಹ ಎಲ್ಲ ಪ್ರಯತ್ನಗಳನ್ನೂ ನಾನು ಹೃದಯಪೂರ್ವಕವಾಗಿ ಪ್ರಶಂಸಿಸುತ್ತೇನೆ. 

    ನನ್ನ ಪ್ರೀತಿಯ ದೇಶವಾಸಿಗಳೇ, ಕಾಲಕಾಲಕ್ಕೆ, ಸ್ಥಿತಿ-ಪರಿಸ್ಥಿತಿಗಳಿಗೆ ಅನುಗುಣವಾಗಿ, ಅನೇಕ ಸಂಪ್ರದಾಯಗಳು ಅಭಿವೃದ್ಧಿ ಹೊಂದುತ್ತಿರುತ್ತವೆ. ಇದೇ ಸಂಪ್ರದಾಯಗಳು ನಮ್ಮ ಸಂಸ್ಕೃತಿಯ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಅದು ಪ್ರತಿದಿನಕ್ಕೆ ಬೇಕಾಗಿರುವ ಪ್ರಾಣಶಕ್ತಿಯನ್ನು ನೀಡುತ್ತದೆ. ಕೆಲವು ತಿಂಗಳ ಹಿಂದೆ, ಕಾಶಿಯಲ್ಲಿ ಇಂತಹದ್ದೇ ಸಂಪ್ರದಾಯವೊಂದು ಆರಂಭವಾಯಿತು. ಕಾಶಿ-ತಮಿಳ್ ಸಂಗಮಮ್ ಸಮಯದಲ್ಲಿ, ಕಾಶಿ ಮತ್ತು ತಮಿಳು ಕ್ಷೇತ್ರದ ನಡುವೆ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಐತಿಹಾಸಿಕ ಮತ್ತು ಸಾಂಸ್ಕೃತಿಕ ಸಂಬಂಧಗಳನ್ನು ಸಂಭ್ರಮದಿಂದ ಆಚರಿಸಲಾಯಿತು. ‘ಏಕ್ ಭಾರತ್–ಶ್ರೇಷ್ಠ ಭಾರತ್ ನ ಭಾವನೆ ನಮ್ಮ ದೇಶಕ್ಕೆ ಬಲ ತುಂಬುತ್ತದೆ. ನಾವು ಪರಸ್ಪರರ ಬಗ್ಗೆ ಅರಿತುಕೊಂಡಾಗ, ಪರಸ್ಪರರಿಂದ ಕಲಿತಾಗ, ಏಕತೆಯ ಈ ಅನಿಸಿಕೆ ಮತ್ತಷ್ಟು ಗಾಢವಾಗುತ್ತದೆ. ಏಕತೆಯ ಈ ಸ್ಫೂರ್ತಿಯೊಂದಿಗೆ ಮುಂದಿನ ತಿಂಗಳು ಗುಜರಾತ್ ನ ವಿವಿಧ ಭಾಗಗಳಲ್ಲಿ ‘ಸೌರಾಷ್ಟ್ರ-ತಮಿಳ್ ಸಂಗಮಮ್’ನಡೆಯಲಿದೆ. ‘ಸೌರಾಷ್ಟ್ರ-ತಮಿಳ್ ಸಂಗಮಮ್’  ಏಪ್ರಿಲ್ ತಿಂಗಳಿನಲ್ಲಿ 17 ರಿಂದ 30 ರವರೆಗೂ ನಡೆಯಲಿದೆ. ಗುಜರಾತ್ ರಾಜ್ಯಕ್ಕೆ ತಮಿಳುನಾಡಿನೊಂದಿಗೆ ಏನು ಸಂಬಂಧ? ಎಂದು ‘ಮನದ ಮಾತಿನ‘ ಕೆಲವು ಶ್ರೋತೃಗಳು ಆಲೋಚಿಸುತ್ತಿರಬಹುದು. ವಾಸ್ತವದಲ್ಲಿ, ಶತಮಾನಗಳ ಹಿಂದೆಯೇ, ಸೌರಾಷ್ಟ್ರದ ಅನೇಕ ಮಂದಿ ತಮಿಳು ನಾಡಿನ ವಿವಿಧ ಭಾಗಗಳಲ್ಲಿ ನೆಲೆಸಿದ್ದಾರೆ. ಇವರನ್ನು ಇಂದಿಗೂ ಸೌರಾಷ್ಟ್ರೀ ತಮಿಳರು ಎಂದೇ ಕರೆಯಲಾಗುತ್ತಿದೆ.  ಇವರ ತಿಂಡಿ-ತಿನಿಸು, ಉಡುಗೆ-ತೊಡುಗೆ, ಜೀವನ ಶೈಲಿ, ಸಾಮಾಜಿಕ ಪದ್ಧತಿಗಳಲ್ಲಿ ಇಂದು ಕೂಡಾ ಸೌರಾಷ್ಟ್ರದ ನೋಟ ಸ್ವಲ್ಪ ಮಟ್ಟಿಗೆ ಕಂಡುಬರುತ್ತದೆ. ಈ ಕಾರ್ಯಕ್ರಮದ ಆಯೋಜನೆ ಕುರಿತಂತೆ ನನಗೆ ತಮಿಳುನಾಡಿನಿಂದ ಬಹಳಷ್ಟು ಮಂದಿ ಸಲಹೆ ನೀಡುತ್ತಾ ಪತ್ರ ಬರೆದಿದ್ದಾರೆ. ಮಧುರೈ ನಿವಾಸಿ ಜಯಚಂದ್ರನ್ ಅವರು ಒಂದು ಭಾವನಾತ್ಮಕ ವಿಷಯವನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಅವರು ಹೇಳಿದ್ದಾರೆ –“ಸಾವಿರ ವರ್ಷಗಳ ನಂತರ, ಮೊದಲ ಬಾರಿಗೆ ಸೌರಾಷ್ಟ್ರ-ತಮಿಳರ ಬಗ್ಗೆ ಆಲೋಚಿಸಲಾಗಿದೆ, ಸೌರಾಷ್ಟ್ರದಿಂದ ತಮಿಳುನಾಡಿಗೆ ಬಂದು ನೆಲೆಸಿರುವ ಜನರ ಬಗ್ಗೆ ಕೇಳಲಾಗುತ್ತಿದೆ” ಜಯಚಂದ್ರನ್ ಅವರು ಈ ಮಾತುಗಳು, ಸಾವಿರಾರು ತಮಿಳು ಸೋದರ-ಸೋದರಿಯರ ಅಭಿವ್ಯಕ್ತಿಯಾಗಿದೆ. 

    ಸ್ನೇಹಿತರೇ, ‘ಮನದ ಮಾತಿನ’ ಶ್ರೋತೃಗಳಿಗೆ ನಾನು ಅಸ್ಸಾಂಗೆ ಸಂಬಂಧಿಸಿದ ಒಂದು ವಿಷಯ ಹೇಳಲು ಬಯಸುತ್ತೇನೆ. ಇದು ಕೂಡಾ ‘ಏಕ್ ಭಾರತ್–ಶ್ರೇಷ್ಠ ಭಾರತ್ ನ ಭಾವನೆಯನ್ನು ಬಲಿಷ್ಠಗೊಳಿಸುತ್ತದೆ. ನಾವು ವೀರ ಲಾಸಿತ್ ಬೋರ್ ಫುಕನ್ ಅವರ 400 ನೇ ಜಯಂತಿ ಆಚರಿಸುತ್ತಿದ್ದೇವೆಂದು ನಿಮಗೆಲ್ಲರಿಗೂ ತಿಳಿದೇ ಇದೆ. ವೀರ ಲಾಸಿತ್ ಬೋರ್ ಫುಕನ್ ಅವರು ಗುವಾಹಟಿಯನ್ನು ಮೊಘಲ್ ಸುಲ್ತಾನರ ದಬ್ಬಾಳಿಕೆಯಿಂದ ಮುಕ್ತಗೊಳಿಸಿದರು. ಇಂದು ದೇಶಕ್ಕೆ, ಈ ಮಹಾನ್ ಸೇನಾನಿಯ ಅದಮ್ಯ ಸಾಹಸದ ಪರಿಚಯವಾಗುತ್ತಿದೆ. ಕೆಲ ದಿನಗಳ ಹಿಂದೆ ಲಾಸಿತ್ ಬೋರ್ ಫುಕನ್ ಅವರ ಜೀವನಾಧಾರಿತ ಪ್ರಬಂಧ ಬರೆಯುವ ಒಂದು ಅಭಿಯಾನ ನಡೆಸಲಾಗಿತ್ತು. ಇದಕ್ಕಾಗಿ ಸುಮಾರು 45 ಲಕ್ಷ ಮಂದಿ ಪ್ರಬಂಧ ಬರೆದು ಕಳುಹಿಸಿದ್ದರೆಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ಈಗ ಇದೊಂದು ಗಿನ್ನೀಸ್ ದಾಖಲೆಯಾಗಿದೆಯೆಂದು ತಿಳಿದು ಕೂಡಾ ನಿಮಗೆ ಸಂತೋಷವೆನಿಸಬಹುದು. ಇದಕ್ಕಿಂತ ಮುಖ್ಯವಾದ ವಿಷಯವೆಂದರೆ ವೀರ ಲಾಸಿತ್ ಬೋರ್ ಫುಕನ್ ಕುರಿತಂತೆ ಬರೆದ ಪ್ರಬಂಧಗಳನ್ನು ಸುಮಾರು 23 ಬೇರೆ ಬೇರೆ ಭಾಷೆಗಳಲ್ಲಿ ಬರೆದು ಕಳುಹಿಸಲಾಗಿತ್ತು. ಈ ಭಾಷೆಗಳಲ್ಲಿ ಅಸ್ಸಾಮಿ ಭಾಷೆ ಮಾತ್ರವಲ್ಲದೇ ಹಿಂದೀ, ಇಂಗ್ಲೀಷ್, ಬಂಗಾಳಿ, ಬೋಡೋ, ನೇಪಾಳಿ, ಸಂಸ್ಕೃತ, ಸಂಥಾಲಿಯಂತಹ ಅನೇಕ ಭಾಷೆಗಳ ಜನರು ಪ್ರಬಂಧ ಬರೆದು ಕಳುಹಿಸಿದ್ದರು. ಈ ಪ್ರಯತ್ನದಲ್ಲಿ ಕೈಜೋಡಿಸಿದ ಪ್ರತಿಯೊಬ್ಬರನ್ನೂ ನಾನು ಮನಃಪೂರ್ವಕವಾಗಿ ಪ್ರಶಂಸಿಸುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಕಾಶ್ಮೀರ ಅಥವಾ ಶ್ರೀನಗರದ ವಿಷಯ ಬಂದಾಗ, ಎಲ್ಲಕ್ಕಿಂತ ಮೊದಲು, ನಮ್ಮ ಕಣ್ಣುಗಳ ಮುಂದೆ, ಅಲ್ಲಿನ ಕಣಿವೆಗಳು, ಮತ್ತು ದಾಲ್ ಸರೋವರದ ಚಿತ್ರ ಮೂಡಿ ಬರುತ್ತದೆ. ನಮ್ಮಲ್ಲಿ ಪ್ರತಿಯೊಬ್ಬರೂ ದಾಲ್ ಸರೋವರವನ್ನು ನೋಡಿ ಕಣ್ತುಂಬಿಕೊಳ್ಳಲು ಬಯಸುತ್ತೇವೆ, ಈ ಸರೋವರದಲ್ಲಿ ಮತ್ತೊಂದು ವಿಶೇಷತೆಯಿದೆ, ಅದೆಂದರೆ, ಈ ಸರೋವರವು ತನ್ನ ಸ್ವಾದಿಷ್ಟ ಲೋಟಸ್ ಸ್ಸ್ಟೆಮ್ಸ್– ತಾವರೆಯ ಕಾಂಡಗಳಿಗಾಗಿ ಕೂಡಾ ಹೆಸರುವಾಸಿಯಾಗಿದ್ದು, ಇದನ್ನು ಕಮಲ್ಕಕಡಿ ಎಂದು ಕರೆಯಲಾಗುತ್ತದೆ. ತಾವರೆಯ ಕಾಂಡವನ್ನು ದೇಶದಲ್ಲಿ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಕಾಶ್ಮೀರದಲ್ಲಿ ಇದನ್ನು ನಾದರೂ ಎಂದು ಕರೆಯುತ್ತಾರೆ. ಕಾಶ್ಮೀರದ ನಾದರೂಗೆ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಲಿದೆ. ಈ ಬೇಡಿಕೆಯನ್ನು ಮನಗಂಡು, ದಾಲ್ ಸರೋವರದಲ್ಲಿ ನಾದರೂ ಬೆಳೆಯುವ ರೈತರು ಒಂದು FPO ಸಿದ್ಧಪಡಿಸಿದರು. ಈ FPO ದಲ್ಲಿ ಸುಮಾರು 250 ರೈತರು ಒಳಗೊಂಡಿದ್ದಾರೆ. ಇಂದು ಈ ರೈತರು ತಮ್ಮ ನಾದರೂ ಬೆಳೆಯನ್ನು ವಿದೇಶಗಳಿಗೂ ಕಳುಹಿಸಲಾರಂಭಿಸಿದ್ದಾರೆ. ಈಗ ಕೆಲವು ದಿನಗಳ ಹಿಂದೆ ಈ ರೈತರು ಯುಎಇಗೆ ಎರಡು ಲೋಡ್ ಸರಕು ಕಳುಹಿಸಿದ್ದಾರೆ. ಈ ಯಶಸ್ಸು ಕಾಶ್ಮೀರಕ್ಕೆ ಹೆಸರು ತಂದುಕೊಡುತ್ತಿರುವುದು ಮಾತ್ರವಲ್ಲದೇ, ನೂರಾರು ರೈತರ ವರಮಾನ ಹೆಚ್ಚಳಕ್ಕೆ ಕೂಡಾ ಕಾರಣವಾಗುತ್ತಿದೆ. 

ಸ್ನೇಹಿತರೇ, ಕಾಶ್ಮೀರದ ಕೃಷಿಗೆ ಸಂಬಂಧಪಟ್ಟಂತೆ ಮತ್ತೊಂದು ಇಂತಹದ್ದೇ ಪ್ರಯತ್ನ ತನ್ನ ಯಶಸ್ಸಿನ ಪರಿಮಳವನ್ನು ಪಸರಿಸುತ್ತಿದೆ. ನಾನು ಯಶಸ್ಸಿನ ಪರಿಮಳದ ಬಗ್ಗೆ ಏಕೆ ಮಾತನಾಡುತ್ತಿದ್ದೇನೆಂದು ನೀವು ಯೋಚಿಸುತ್ತಿರಬಹುದು–ಹೌದು ಇದು ಪರಿಮಳದ ಮಾತು, ಸುಗಂಧದ ಮಾತು.! ವಾಸ್ತವದಲ್ಲಿ, ಜಮ್ಮು ಕಾಶ್ಮೀರದ ಡೋಡಾ ಜಿಲ್ಲೆಯಲ್ಲಿ ಭದರ್ವಾಹ್ ಎಂಬ ಊರು ಇದೆ! ಇಲ್ಲಿನ ರೈತರು, ದಶಕಗಳಿಂದಲೂ ಜೋಳದ ಸಾಂಪ್ರದಾಯಿಕ ಕೃಷಿ ಮಾಡುತ್ತಿದ್ದರು, ಆದರೆ, ಕೆಲವು ರೈತರು ಏನನ್ನಾದರೂ ಹೊಸತನ್ನು ಮಾಡಬೇಕೆಂದು ಆಲೋಚಿಸಿದರು. ಅವರು floriculture ಅಂದರೆ ಹೂಗಳ ಕೃಷಿ ಮಾಡಬೇಕೆಂದು ಆಲೋಚಿಸಿದರು. ಇಂದು ಸುಮಾರು ಎರಡೂವರೆ ಸಾವಿರ ರೈತರು ಲ್ಯಾವೆಂಡರ್  ಕೃಷಿ ಕೈಗೊಂಡಿದ್ದಾರೆ. ಇವರಿಗೆ ಕೇಂದ್ರ ಸರ್ಕಾರದಿಂದ aroma mission ಅಡಿಯಲ್ಲಿ ಸಹಾಯ ಕೂಡಾ ದೊರೆತಿದೆ. ಈ ಹೊಸ ಕೃಷಿಯು ರೈತರ ಆದಾಯವನ್ನು ಸಾಕಷ್ಟು ಹೆಚ್ಚಳ ಮಾಡಿದೆ ಮತ್ತು ಇಂದು ಲ್ಯಾವೆಂಡರ್ ಬೆಳೆಯೊಂದಿಗೆ ಇದರ ಯಶಸ್ಸಿನ ಪರಿಮಳ ಕೂಡಾ ದೂರದೂರವರೆಗೂ ವ್ಯಾಪಿಸುತ್ತಿದೆ. 

ಸ್ನೇಹಿತರೇ, ಕಾಶ್ಮೀರದ ವಿಷಯಕ್ಕೆ ಬಂದಾಗ, ಕಮಲದ ಹೂವಿನ ಮಾತು, ಹೂವಿನ ಮಾತು, ಸುಗಂಧದ ಮಾತು, ಹಾಗೆಯೇ ಕಮಲದ ಪುಷ್ಪದಲ್ಲಿ ವಿರಾಜಮಾನಳಾಗಿರುವ ತಾಯಿ ಶಾರದೆಯ ಸ್ಮರಣೆ ಬರುವುದು ಸಹಜವೇ ತಾನೇ. ಕೆಲವು ದಿನಗಳ ಹಿಂದಷ್ಟೇ, ಕುಪ್ವಾರಾದಲ್ಲಿ ತಾಯಿ ಶಾರದೆಯ ಭವ್ಯ ದೇವಾಲಯ ಲೋಕಾರ್ಪಣೆಗೊಂಡಿದೆ. ಶಾರದಾ ಪೀಠಕ್ಕೆ ಬೇಟಿ ನೀಡಲು ಸಾಗುತ್ತಿದ್ದ ಅದೇ ಮಾರ್ಗದಲ್ಲಿ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ಥಳೀಯ ಜನತೆ ಈ ದೇವಾಲಯದ ನಿರ್ಮಾಣಕ್ಕೆ ಬಹಳ ಸಹಾಯ ಮಾಡಿದ್ದಾರೆ. ನಾನು ಜಮ್ಮು ಕಾಶ್ಮೀರದ ಜನರಿಗೆ ಈ ಶುಭ ಕಾರ್ಯಕ್ಕಾಗಿ ಅಭಿನಂದನೆ ಸಲ್ಲಿಸುತ್ತೇನೆ. 

ನನ್ನ ಪ್ರೀತಿಯ ದೇಶವಾಸಿಗಳೇ, ಇವು ಈ ಬಾರಿಯ‘ಮನದ ಮಾತು’ ಗಳು. ಮುಂದಿನ ಬಾರಿ, ಮನದ ಮಾತಿನ 100 ನೇ ಸಂಚಿಕೆಯಲ್ಲಿ ನಿಮ್ಮನ್ನು ಭೇಟಿಯಾಗುತ್ತೇನೆ. ನೀವೆಲ್ಲರೂ ಸಲಹೆ ಸೂಚನೆಗಳನ್ನು ಖಂಡಿತವಾಗಿಯೂ ಕಳುಹಿಸಿಕೊಡಿ. ಈ ಮಾರ್ಚ್ ತಿಂಗಳಿನಲ್ಲಿ, ನಾವು ಹೋಳಿ ಹಬ್ಬದಿಂದ ನವರಾತ್ರಿಯವರೆಗೂ ಅನೇಕ ಹಬ್ಬಗಳ ಆಚರಣೆಯಲ್ಲಿ ನಿರತರಾಗಿದ್ದೆವು. ರಂಜಾನ್ ನ ಪವಿತ್ರ ತಿಂಗಳು ಕೂಡಾ ಆರಂಭವಾಗಿದೆ. ಇನ್ನು ಕೆಲವೇ ದಿನಗಳಲ್ಲಿ ಶ್ರೀ ರಾಮನವಮಿ ಹಬ್ಬ ಕೂಡಾ ಬರಲಿದೆ. ಆ ನಂತರ ಮಹಾವೀರ ಜಯಂತಿ, ಶುಭ ಶುಕ್ರವಾರ (ಗುಡ್ ಫ್ರೈಡೇ) ಮತ್ತು ಈಸ್ಟರ್ ಹಬ್ಬಗಳು ಕೂಡಾ ಇರಲಿವೆ, ಏಪ್ರಿಲ್ ತಿಂಗಳಿನಲ್ಲಿ ನಾವು, ಇಬ್ಬರು ಭಾರತದ ಮಹಾಪುರುಷರ ಜಯಂತಿಯನ್ನು ಕೂಡಾ ಆಚರಿಸಲಿದ್ದೇವೆ. ಮಹಾತ್ಮ ಜ್ಯೋತಿಬಾ ಫುಲೆ ಮತ್ತು ಬಾಬಾಸಾಹೇಬ್ ಅಂಬೇಡ್ಕರ್. ಈ ಇಬ್ಬರು ಮಹಾಪುರುಷರು ಸಮಾಜದಲ್ಲಿನ ಭೇದಭಾವ ತೊಡೆದುಹಾಕಲು ಮಹತ್ವಪೂರ್ಣ ಕೊಡುಗೆ ನೀಡಿದ್ದಾರೆ. ಇಂದು ಸ್ವಾತಂತ್ರ್ಯದ ಅಮೃತ ಕಾಲದಲ್ಲಿ, ನಾವು, ಇಂತಹ ಮಹಾನ್ ಪುರುಷರಿಂದ ಕಲಿಯಬೇಕಾದ ಮತ್ತು ಪ್ರೇರಣೆ ಹೊಂದುವ ಅಗತ್ಯವಿದೆ. ನಾವು ನಮ್ಮ ಕರ್ತವ್ಯಗಳನ್ನು ಆದ್ಯತೆಯಾಗಿಸಿಕೊಳ್ಳಬೇಕುಸ್ನೇಹಿತರೇ, ಕೆಲವು ಸ್ಥಳಗಳಲ್ಲಿ ಕೊರೋನಾ ಹೆಚ್ಚಾಗುತ್ತಿದೆ. ಆದ್ದರಿಂದ ನೀವೆಲ್ಲರೂ ಜಾಗರೂಕತೆಯಿಂದ ಇರಬೇಕು, ಸ್ವಚ್ಛತೆಯ ಬಗ್ಗೆ ಗಮನ ಹರಿಸಬೇಕು. ಮುಂದಿನ ತಿಂಗಳು, ಮನದ ಮಾತಿನ 100 ನೇಸಂಚಿಕೆಯಲ್ಲಿ ನಾವು ಪುನಃ ಭೇಟಿಯಾಗೋಣ, ಅಲ್ಲಿಯವರೆಗೂ ನನಗೆ ವಿದಾಯ ಹೇಳಿ,

ಧನ್ಯವಾದ, ನಮಸ್ಕಾರ

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.