A hologram statue of Netaji has been installed at India Gate. The entire nation welcomed this move with great joy: PM Modi
The 'Amar Jawan Jyoti' near India Gate and the eternal flame at the 'National War Memorial' have been merged. This was a touching moment for all: PM
Padma award have been given to the unsung heroes of our country, who have done extraordinary things in ordinary circumstances: PM
Corruption hollows the country like a termite: PM Modi
The vibrancy and spiritual power of Indian culture has always attracted people from all over the world: PM Modi
Ladakh will soon get an impressive Open Synthetic Track and Astro Turf Football Stadium: PM Modi

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ! ಇಂದು ಮನದ ಮಾತಿನ ಮತ್ತೊಂದು ಸಂಚಿಕೆಯೊಂದಿಗೆ ನಾವೆಲ್ಲರೂ ಒಗ್ಗೂಡುತ್ತಿದ್ದೇವೆ. 2022 ರ ಮೊದಲ ಮನದ ಮಾತು ಇದಾಗಿದೆ. ಇಂದು ಕೂಡಾ ನಾವು ದೇಶ ಮತ್ತು ದೇಶಬಾಂಧವರ ಸಕಾರಾತ್ಮಕ ಪ್ರೇರಣೆ ಮತ್ತು ಸಾಮೂಹಿಕ ಪ್ರಯತ್ನಗಳಿಗೆ ಸಂಬಂಧಿಸಿದ ವಿಷಯಗಳ ಕುರಿತು ಮಾತನಾಡೋಣ. ಇಂದು ನಮ್ಮ ಪೂಜ್ಯ ಬಾಪು ಮಹಾತ್ಮಾ ಗಾಂಧೀಜಿಯವರ ಪುಣ್ಯತಿಥಿ. ಜನವರಿ 30 ರ ಈ ದಿನ ನಮಗೆ ಬಾಪು ಅವರ ಮಾರ್ಗದರ್ಶನವನ್ನು ನೆನಪಿಸಿಕೊಡುತ್ತದೆ. ಕೆಲ ದಿನಗಳ ಹಿಂದೆಯಷ್ಟೇ ನಾವು ಗಣರಾಜ್ಯೋತ್ಸವ ಆಚರಿಸಿದ್ದೇವೆ. ದೆಹಲಿಯ ರಾಜ್ ಪಥ್ ದಲ್ಲಿ ನಾವು ಶೌರ್ಯ ಮತ್ತು ಸಾಮರ್ಥ್ಯದ ಝಲಕ್ ನೋಡಿದ್ದೇವೆ. ಇದು ನಮ್ಮೆಲ್ಲರಲ್ಲಿ ಹೆಮ್ಮೆ ಮತ್ತು ಉತ್ಸಾಹವನ್ನು ತುಂಬಿದೆ. ಗಣರಾಜ್ಯೋತ್ಸವ ದಿನದ ಸಮಾರಂಭ ಜನವರಿ 23 ರಿಂದ ಅಂದರೆ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಜಯಂತಿಯಿಂದ ಆರಂಭವಾಗುತ್ತದೆ ಮತ್ತು ಜನವರಿ 30 ಗಾಂಧೀಜಿಯವರ ಪುಣ್ಯತಿಥಿವರೆಗೆ ಮುಂದುವರಿಯುತ್ತದೆ ಎಂಬ ಬದಲಾವಣೆಯನ್ನು ನೀವು ಗಮನಿಸಿರಬಹುದು.  ಇಂಡಿಯಾ ಗೇಟ್ ಬಳಿ ನೇತಾಜಿಯವರ ಡಿಜಿಟಲ್ ಪ್ರತಿಮೆಯನ್ನು ಕೂಡಾ ಸ್ಥಾಪಿಸಿದ್ದೇವೆ. ದೇಶ ಈ ವಿಷಯವನ್ನು ಸ್ವಾಗತಿಸಿದ ರೀತಿ, ದೇಶದೆಲ್ಲೆಡೆ ಆನಂದದ ಅಲೆ ಎದ್ದಿರುವ ರೀತಿ, ಪ್ರತಿಯೊಬ್ಬ ದೇಶವಾಸಿ ವ್ಯಕ್ತಪಡಿಸಿದಂತಹ ಸಂತಸದ ಭಾವನೆಯನ್ನು ನಾವು ಎಂದಿಗೂ ಮರೆಯಲಾಗದು. 
ಸ್ನೇಹಿತರೆ, ಆಜಾದಿ ಕೆ ಅಮೃತ್ ಮಹೋತ್ಸವದ ಸಂದರ್ಭದಲ್ಲಿ ದೇಶ ಇಂಥ ಪ್ರಯತ್ನಗಳ ಮೂಲಕ ರಾಷ್ಟ್ರೀಯ ಪ್ರತಿಷ್ಠೆಯನ್ನು ಪುನಃ ಪ್ರತಿಸ್ಥಾಪಿಸುತ್ತಿದೆ. ಇಂಡಿಯಾ ಗೇಟ್ ಬಳಿಯ ‘ಅಮರ ಜವಾನ್ ಜ್ಯೋತಿ’ ಯನ್ನು ಹತ್ತಿರವೇ ‘ರಾಷ್ಟ್ರೀಯ ಯುದ್ಧ ಸ್ಮಾರಕ’ ದ ಜ್ಯೋತಿಗಳಲ್ಲಿ ಲೀನಗೊಳಿಸಿದ್ದೇವೆ ಎಂಬುದನ್ನು ನಾವು ನೋಡಿದ್ದೇವೆ. ಇಂಥ ಭಾವನಾತ್ಮಕ ಸಂದರ್ಭದಲ್ಲಿ ಬಹಳಷ್ಟು ದೇಶವಾಸಿಗಳು ಮತ್ತು ಹುತಾತ್ಮ ಕುಟುಂಬದವರ ಕಣ್ಣಲ್ಲಿ ನೀರು ಜಿನುಗಿತ್ತು. ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಸ್ವಾತಂತ್ರ್ಯಾ ನಂತರ ಹುತಾತ್ಮರಾದ ಎಲ್ಲ ಯೋಧರ ಹೆಸರುಗಳನ್ನು ಬರೆಯಲಾಗಿದೆ. ನನಗೆ ಸೇನೆಯ ಕೆಲವು ಮಾಜಿ ಯೋಧರು ಪತ್ರ ಬರೆದು ಹೀಗೆ ಹೇಳಿದ್ದಾರೆ – “ಹುತಾತ್ಮರ ನೆನಪುಗಳೆದುರು ಪ್ರಜ್ವಲಿಸುತ್ತಿರುವ  ‘ಅಮರ ಜವಾನ್ ಜ್ಯೋತಿ’ ಹುತಾತ್ಮರು ಅಮರರಾಗಿರುವುದಕ್ಕೆ ಸಾಕ್ಷಿಯಾಗಿದೆ.”  ಅಮರ ಜವಾನ್ ಜ್ಯೋತಿ’ ಯಂತೆ ಹುತಾತ್ಮರ ತ್ಯಾಗ ಮತ್ತು ಬಲಿದಾನವೂ ಅಮರವಾಗಿದೆ. ಅವಕಾಶ ಸಿಕ್ಕಾಗಲೆಲ್ಲ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಎಂದು ನಿಮ್ಮೆಲ್ಲರಿಗೂ ಹೇಳಬಯಸುತ್ತೇನೆ. ನಿಮ್ಮ ಕುಟುಂಬ ಮತ್ತು ಮಕ್ಕಳನ್ನು ಕರೆದುಕೊಂಡು ಹೋಗಿ. ಇಲ್ಲಿ ನಿಮಗೆ ಒಂದು ವಿಭಿನ್ನವಾದ ಶಕ್ತಿ ಮತ್ತು ಪ್ರೇರಣೆಯ ಅನುಭವವಾಗುತ್ತದೆ.
ಸ್ನೇಹಿತರೆ, ಅಮೃತ ಮಹೋತ್ಸವದ ಈ ಆಯೋಜನೆಗಳ ಮಧ್ಯೆ ದೇಶದಲ್ಲಿ ಅನೇಕ  ರಾಷ್ಟ್ರೀಯ ಪುರಸ್ಕಾರಗಳನ್ನೂ ನೀಡಲಾಯಿತು. ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಇದರಲ್ಲೊಂದಾಗಿದೆ. ಸಣ್ಣ ವಯಸ್ಸಿನಲ್ಲೇ ಸಾಹಸ ಮತ್ತು ಪ್ರೇರಣಾದಾಯಕ ಕೆಲಸ ಮಾಡಿದಂತಹ ಮಕ್ಕಳಿಗೆ ಈ ಪ್ರಶಸ್ತಿ ನೀಡಲಾಗುವುದು. ನಾವೆಲ್ಲರೂ ಮನೆಯಲ್ಲಿ ಈ ಮಕ್ಕಳ ಬಗ್ಗೆ ಖಂಡಿತ ಹೇಳಬೇಕು. ಇದರಿಂದ ನಮ್ಮ ಮಕ್ಕಳಿಗೂ ಪ್ರೇರಣೆ ದೊರೆಯುವುದು ಮತ್ತು ಅವರ ಮನದಲ್ಲಿ ದೇಶದ ಹೆಸರನ್ನು ಉಜ್ವಲಗೊಳಿಸುವ ಉತ್ಸಾಹ ಮೂಡುವುದು. ದೇಶದಲ್ಲಿ ಇದೀಗ ಪದ್ಮ ಪ್ರಶಸ್ತಿಯನ್ನು ಘೋಷಿಸಲಾಗಿದೆ.  ಪದ್ಮ ಪ್ರಶಸ್ತಿಯನ್ನು ಪಡೆದವರಲ್ಲಿ ಕೆಲವರ ಬಗ್ಗೆ ಜನರಿಗೆ ಅಷ್ಟೇನೂ ತಿಳಿದಿರದಂತಹ ಹೆಸರುಗಳೂ ಇವೆ. ಇವರೆಲ್ಲ ನಮ್ಮ ದೇಶದ ತೆರೆಮರೆಯ ಸಾಧಕರಾಗಿದ್ದಾರೆ. ಇವರು ಸಾಧಾರಣ ಪರಿಸ್ಥಿತಿಗಳಲ್ಲೂ ಅಸಾಧಾರಣ ಕೆಲಸವನ್ನು ಮಾಡಿದ್ದಾರೆ. ಉದಾಹರಣೆಗೆ ಉತ್ತರಾಖಂಡದ ಬಸಂತಿದೇವಿ ಅವರಿಗೆ ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಬಸಂತಿದೇವಿ ತಮ್ಮ ಜೀವನವನ್ನು ಸಂಘರ್ಷದಲ್ಲೇ ಸವೆಸಿದವರು. ಚಿಕ್ಕ ವಯಸ್ಸಿನಲ್ಲಿಯೇ ಪತಿ ವಿಯೋಗ ಕಾಡಿತ್ತು. ಅವರು ಆಶ್ರಮದಲ್ಲಿರಬೇಕಾಗಿ ಬಂದಿತು. ಇಲ್ಲಿದ್ದು ಅವರು ನದಿ ಸಂರಕ್ಷಣೆಗಾಗಿ ಸಂಘರ್ಷಗೈದರು ಮತ್ತು ಪರಿಸರ ಸಂರಕ್ಷಣೆಗೆ ಅಸಾಧಾರಣ ಕೊಡುಗೆ ನೀಡಿದ್ದಾರೆ. ಅವರು ಮಹಿಳಾ ಸಶಕ್ತೀಕರಣಕ್ಕೂ ಅಪಾರ ಕೊಡುಗೆ ನೀಡಿದ್ದಾರೆ. ಇದೇ ರೀತಿ ಮಣಿಪುರದ 77 ರ ವಯೋಮಾನದ ಲೌರೆಂಬಮ್ ಬಿನೊದೇವಿ ದಶಕಗಳಿಂದ ಮಣಿಪುರದ ಲಿಬಾ ಟೆಕ್ಸಟೈಲ್ ಕಲೆಯನ್ನು ಸಂರಕ್ಷಿಸುತ್ತಿದ್ದಾರೆ. ಅವರನ್ನೂ  ಪದ್ಮಶ್ರೀ ನೀಡಿ ಗೌರವಿಸಲಾಗಿದೆ. ಮಧ್ಯಪ್ರದೇಶದ ಅರ್ಜುನ್ ಸಿಂಗ್ ಅವರಿಗೆ ಬೈಗಾ  ಬುಡಕಟ್ಟು ನೃತ್ಯಕ್ಕೆ ಮನ್ನಣೆ ದೊರೆಯುವಂತೆ ಮಾಡಿರುವುದಕ್ಕಾಗಿ ಪದ್ಮಶ್ರೀ ದೊರೆತಿದೆ. ಪದ್ಮಶ್ರೀ ಪ್ರಶಸ್ತಿ ಪಡೆದ ಮತ್ತೊಬ್ಬರು ಶ್ರೀಯುತ ಅಮಾಯಿ ಮಹಾಲಿಂಗ ನಾಯಿಕ್. ಇವರೊಬ್ಬ ಕೃಷಿಕರು ಮತ್ತು ಕರ್ನಾಟಕದವರಾಗಿದ್ದಾರೆ. ಇವರನ್ನು ಕೆಲವರು ಟನಲ್ ಮ್ಯಾನ್ ಎಂದೂ ಕರೆಯುತ್ತಾರೆ. ಇವರು ಕೃಷಿಯಲ್ಲಿ ಎಂಥೆಂಥ ಆವಿಷ್ಕಾರಗಳನ್ನು ಮಾಡಿದ್ದಾರೆಂದರೆ ಇದನ್ನು ನೋಡಿ ಜನರು ನೋಡಿ ದಂಗಾಗುತ್ತಾರೆ. ಇವರ ಪ್ರಯತ್ನದ ಫಲ ಸಣ್ಣ ಹಿಡುವಳಿದಾರರಿಗೆ ಆಗುತ್ತಿದೆ. ಇಂಥ ಅನೇಕ ತೆರೆಮರೆಯ ಸಾಧಕರ ಕೊಡುಗೆಗಳಿಗೆ ದೇಶ ಅವರನ್ನು ಸನ್ಮಾನಿಸಿದೆ. ನೀವು ಖಂಡಿತ ಇಂಥವರ ಬಗ್ಗೆ ಅರಿಯುವ ಪ್ರಯತ್ನ ಮಾಡಿ. ಇವರಿಂದ ಜೀವನದಲ್ಲಿ ಬಹಳಷ್ಟು ಕಲಿಯಲು ಸಾಧ್ಯವಾಗುತ್ತದೆ. 
    ನನ್ನ ಪ್ರಿಯ ದೇಶಬಾಂಧವರೆ ಅಮೃತ್ ಮಹೋತ್ಸವದ ಅಂಗವಾಗಿ ನೀವೆಲ್ಲ ನನಗೆ ನೂರಾರು ಸಂದೇಶ ಮತ್ತು ಪತ್ರಗಳನ್ನು ಕಳುಹಿಸುತ್ತೀರಿ. ಸಾಕಷ್ಟು ಸಲಹೆಗಳನ್ನು ನೀಡುತ್ತೀರಿ. ಇವುಗಳಲ್ಲಿ ಅವಿಸ್ಮರಣೀಯವಾದ ಘಟನೆಗಳೂ ಇವೆ. ಒಂದು ಕೋಟಿಗೂ ಹೆಚ್ಚು ಮಕ್ಕಳು ತಮ್ಮ ‘ಮನದ ಮಾತನ್ನು’ ಪೋಸ್ಟ್ ಕಾರ್ಡನಲ್ಲಿ ಬರೆದು ನನಗೆ ಕಳುಹಿಸಿದ್ದಾರೆ. ಈ ಒಂದು ಕೋಟಿ ಪೋಸ್ಟ್ ಕಾರ್ಡಗಳು ದೇಶದ ವಿವಿಧ ಭಾಗಗಳಿಂದ ಮತ್ತು ವಿದೇಶಗಳಿಂದಲೂ ಬಂದಿವೆ. ಬಿಡುವು ಮಾಡಿಕೊಂಡು ಇದರಲ್ಲಿ ಹಲವಾರು ಪೋಸ್ಟ್ ಕಾರ್ಡಗಳನ್ನು ಓದುವ ಪ್ರಯತ್ನ ಮಾಡಿದ್ದೇನೆ. ಈ ಪೋಸ್ಟ್ ಕಾರ್ಡಗಳನ್ನು ಗಮನಿಸಿದಾಗ ದೇಶದ ಭವಿಷ್ಯಕ್ಕಾಗಿ ನಮ್ಮ ಹೊಸ ಪೀಳಿಗೆಯ ವಿಚಾರಗಳು ಎಷ್ಟೊಂದು ವ್ಯಾಪಕವಾಗಿವೆ ಮತ್ತು ಎಷ್ಟು ಬೃಹತ್ ಆಗಿದೆ ಎಂಬುದರ ಅರಿವಾಗುತ್ತದೆ. ನಾನು ಮನದ ಮಾತಿನ ಶ್ರೋತೃಗಳಿಗಾಗಿ ಕೆಲವು ಪೋಸ್ಟ್ ಕಾರ್ಡ ಗಳನ್ನು ಆಯ್ದುಕೊಂಡಿದ್ದೇನೆ. ಇವುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುವೆ. ಅಸ್ಸಾಂನ ಗುವಾಹಾಟಿಯಿಂದ ರಿದ್ಧಿಮಾ ಸ್ವರ್ಗಿಯಾರಿ ಅವರ ಪೋಸ್ಟ್ ಕಾರ್ಡ ಹೀಗಿದೆ. ರಿದ್ಧಿಮಾ 7 ನೇ ತರಗತಿ ವಿದ್ಯಾರ್ಥಿನಿ. ಅವರು ಸ್ವಾತಂತ್ರ್ಯದ 100 ವರ್ಷದಲ್ಲಿ ವಿಶ್ವದಲ್ಲೇ ಅತ್ಯಂತ ಸ್ವಚ್ಛ ದೇಶವೆಂದೆನಿಸಿಕೊಳ್ಳುವ, ಉಗ್ರವಾದದಿಂದ ಸಂಪೂರ್ಣ ಮುಕ್ತವಾದ, ಶೇಕಡಾ ನೂರರಷ್ಟು ಸಾಕ್ಷರ ದೇಶಗಳ ಪಟ್ಟಿಯಲ್ಲಿರುವ ದೇಶ, ಮತ್ತು ಸುಸ್ಥಿರತೆ ಮೂಲಕ ಆಹಾರ ಭದ್ರತೆಯಲ್ಲಿ ಸಕ್ಷಮವಾದ ಭಾರತವನ್ನು ನೋಡಬಯಸುತ್ತೇನೆ ಎಂದು ಬರೆದಿದ್ದಾರೆ. ರಿದ್ಧಿಮಾ – ನಮ್ಮ ಹೆಣ್ಣು ಮಕ್ಕಳ ವಿಚಾರ ಮತ್ತು ದೇಶಕ್ಕಾಗಿ ಅವರು ಕಾಣುವ ಕನಸು ಪೂರ್ಣಗೊಳ್ಳುತ್ತವೆ. ಎಲ್ಲರ ಪ್ರಯತ್ನಗಳು ಒಗ್ಗೂಡಿದಾಗ, ಯುವ ಪೀಳಿಗೆ ಇದನ್ನು ಗುರಿಯಾಗಿರಿಸಿಕೊಂಡು ಕೆಲಸ ಮಾಡಿದಾಗ ಭಾರತವನ್ನು ನೀವು ಹೇಗೆ ರೂಪಿಸಬೇಕೆಂದು ಕೊಂಡಿದ್ದೀರೊ ಹಾಗೆ ರೂಪಿಸಬಹುದಾಗಿದೆ. ಉತ್ತರ ಪ್ರದೇಶದ ಪ್ರಯಾಗ್ ರಾಜ್ ನ ನವ್ಯಾ ವರ್ಮಾ ಅವರಿಂದಲೂ ಪೋಸ್ಟ್ ಕಾರ್ಡ ಒಂದು ದೊರೆತಿದೆ. ನವ್ಯಾ ಹೀಗೆ ಬರೆದಿದ್ದಾರೆ. 2047 ರಲ್ಲಿ ಎಲ್ಲರಿಗೂ ಗೌರವಯುತ ಜೀವನ ದೊರೆಯುವಂತಹ ಭಾರತವನ್ನು ಕಾಣಬಯಸುತ್ತಾರೆ. ಅದರಲ್ಲಿ ಕೃಷಿಕರು ಸಮೃದ್ಧಿಯನ್ನು ಹೊಂದಬೇಕು ಮತ್ತು ಭ್ರಷ್ಟಾಚಾರ ನಿರ್ಮೂಲನೆಯಾಗಬೇಕು ಎಂದು ಬಯಸಿದ್ದಾರೆ. ನವ್ಯಾ- ದೇಶದ ಕುರಿತಾದ ನಿಮ್ಮ ಕನಸು ಪ್ರಶಂಸನೀಯವಾಗಿದೆ. ಈ ದಿಸೆಯಲ್ಲಿ ದೇಶ ತ್ವರಿತಗತಿಯಲ್ಲಿ ಮುಂದುವರಿಯುತ್ತಿದೆ. ನೀವು ಭ್ರಷ್ಟಾಚಾರ ಮುಕ್ತ ಭಾರತದ ಬಗ್ಗೆ ಮಾತನಾಡಿದ್ದೀರಿ. ಭ್ರಷ್ಟಾಚಾರ ದೇಶವನ್ನು ಗೆದ್ದಲಿನಂತೆ ಟೊಳ್ಳು ಮಾಡಿಬಿಡುತ್ತದೆ. ಇದರಿಂದ ಮುಕ್ತರಾಗಲು 2047 ರ ವರೆಗೆ ಏಕೆ ಕಾಯಬೇಕು ಈ ಕೆಲಸವನ್ನು ಎಲ್ಲ ದೇಶವಾಸಿಗಳು ಮತ್ತು ಇಂದಿನ ಯುವಪೀಳಿಗೆ ಒಗ್ಗೂಡಿ ಮಾಡಬೇಕಿದೆ. ಆದಷ್ಟು ಬೇಗ ಮಾಡಬೇಕಿದೆ. ಇದಕ್ಕಾಗಿ ಸ್ವತಃ ನಾವೆಲ್ಲರೂ ನಮ್ಮ ಕರ್ತವ್ಯಗಳಿಗೆ ಆದ್ಯತೆಯನ್ನು ನೀಡುವುದು ಬಹಳ ಅವಶ್ಯಕವಾಗಿದೆ. ಕರ್ತವ್ಯ ನಿಭಾಯಿಸುವ ಅರಿವಿದ್ದಲ್ಲಿ ಕರ್ತವ್ಯ ಸರ್ವಶ್ರೇಷ್ಠವಾದಾಗ ಅಲ್ಲಿ ಭ್ರಷ್ಟಾಚಾರ ಸುಳಿಯುವುದೂ ಇಲ್ಲ. 
ಸ್ನೇಹಿತರೇ, ನನ್ನ ಮುಂದೆ ಚೆನ್ನೈನ ಮೊಹಮ್ಮದ್ ಇಬ್ರಾಹಿಂ ಅವರ ಮತ್ತೊಂದು ಪೋಸ್ಟ್ ಕಾರ್ಡ್ ಇದೆ. ಇಬ್ರಾಹಿಂ ಅವರು ಭಾರತವನ್ನು 2047 ರಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಬಹುದೊಡ್ಡ ಬಲಿಷ್ಠ ಸಾಮರ್ಥ್ಯದ ರೂಪದಲ್ಲಿ ನೋಡಲು ಬಯಸುತ್ತಾರೆ. ಚಂದ್ರನ ಮೇಲೆ ಭಾರತ ತನ್ನದೇ ಆದ ಸಂಶೋಧನಾ ನೆಲೆ ಹೊಂದಿರಬೇಕು, ಮತ್ತು ಮಂಗಳ ಗ್ರಹವನ್ನು ಭಾರತ ಜನರಿಗೆ ವಾಸಿಸಲು ಯೋಗ್ಯ ಸ್ಥಳವನ್ನಾಗಿ ಮಾಡಬೇಕೆಂದು ಅವರು ಬಯಸುತ್ತಾರೆ. ಇದರೊಂದಿಗೆ, ಭೂಮಿಯನ್ನು ಮಾಲಿನ್ಯ ರಹಿತವನ್ನಾಗಿ ಮಾಡುವಲ್ಲಿ ಭಾರತದ ಬಹುದೊಡ್ಡಪಾತ್ರವನ್ನು ನೋಡಬೇಕೆಂದು ಇಬ್ರಾಹಿಂ ಬಯಸುತ್ತಾರೆ. ಇಬ್ರಾಹಿಂ ಅವರೆ ನಿಮ್ಮಂತಹ ಯುವಜನರು ಇರುವ ದೇಶಕ್ಕೆ ಯಾವುದೇ ಕೆಲಸ ಅಸಾಧ್ಯವಲ್ಲ. 
ಸ್ನೇಹಿತರೇ, ನನ್ನ ಎದುರು ಮತ್ತೊಂದು ಪತ್ರವಿದೆ. ಈ ಪತ್ರ ಮಧ್ಯಪ್ರದೇಶದ ರಾಯ್ ಸೇನಾದಲ್ಲಿ ಸರಸ್ವತಿ ವಿದ್ಯಾ ಮಂದಿರದಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಭಾವನಾ ಅವರದ್ದು. ಯಾವ ರೀತಿಯಲ್ಲಿ ನೀವು ಪೋಸ್ಟ್ ಕಾರ್ಡ್ ಅನ್ನು ತ್ರಿವರ್ಣದಲ್ಲಿ ಅಲಂಕರಿಸಿ ಕಳುಹಿಸಿದ್ದೀರೋ ಅದನ್ನು ನೋಡಿ ನನಗೆ ಬಹಳ ಸಂತೋಷವಾಗುತ್ತಿದೆ ಎಂದು ಎಲ್ಲಕ್ಕಿಂತ ಮೊದಲು ಭಾವನಾ ಅವರಿಗೆ ಹೇಳಬಯಸುತ್ತೇನೆ.  ಭಾವನಾ ಅವರು ಕ್ರಾಂತಿಕಾರಿ ಶಿರೀಷ್ ಕುಮಾರ್ ಅವರ ಬಗ್ಗೆ ಬರೆದಿದ್ದಾರೆ. 
ಸ್ನೇಹಿತರೇ, ಗೋವಾದಿಂದ ಲಾರೆನ್ಶಿಯೋ ಪರೇರಾ ಅವರಿಂದ ಕೂಡಾ ಒಂದು ಪತ್ರ ಬಂದಿದೆ. ಇವರು 12 ನೇ ತರಗತಿಯ ವಿದ್ಯಾರ್ಥಿಯಾಗಿದ್ದಾರೆ. ಇವರ ಪತ್ರದಲ್ಲಿನ ವಿಷಯ, ಸ್ವಾತಂತ್ರ್ಯದ ತೆರೆಮರೆಯ ಮಹಾನ್ ವೀರರು. ಇದರ ಸಾರಾಂಶವನ್ನು ನಾನು ನಿಮಗೆ ಹೇಳುತ್ತಿದ್ದೇನೆ. ಇವರು ಬರೆದಿದ್ದಾರೆ –ಭೀಕಾಜಿಕಾಮಾ ಅವರು ಭಾರತೀಯ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗಿಯಾಗಿದ್ದ ಮಹಾನ್ ವೀರ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. ಅವರು ಹೆಣ್ಣು ಮಕ್ಕಳನ್ನು ಸಶಕ್ತರನ್ನಾಗಿಸಲು ದೇಶ ವಿದೇಶಗಳಲ್ಲಿ ಅನೇಕ ಅಭಿಯಾನಗಳನ್ನು ನಡೆಸಿದರು. ಅನೇಕ ಪ್ರದರ್ಶನಗಳನ್ನು ಆಯೋಜಿಸಿದರು. ನಿಸ್ಸಂಶಯವಾಗಿ, ಭೀಕಾಜಿಕಾಮಾ ಅವರು ಸ್ವಾತಂತ್ರ್ಯ ಹೋರಾಟಗಾರರ ಪೈಕಿ ಅತ್ಯಂತ ಧೈರ್ಯಶಾಲಿ ಮಹಿಳೆಯರಲ್ಲಿ ಒಬ್ಬರಾಗಿದ್ದಾರೆ. 1907 ರಲ್ಲಿ ಅವರು ಜರ್ಮನಿಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಈ ತ್ರಿವರ್ಣ ಧ್ವಜ ವಿನ್ಯಾಸ ಮಾಡುವಲ್ಲಿ ಅವರೊಂದಿಗೆ ಕೈಜೋಡಿಸಿದ ವ್ಯಕ್ತಿಯೆಂದರೆ ಶ್ರೀ ಶ್ಯಾಮ್ ಜಿ ಕೃಷ್ಣ ಶರ್ಮಾ. ಶ್ರೀ ಶ್ಯಾಮ್ ಜೀ ಕೃಷ್ಣ ವರ್ಮಾ ಅವರು ಜಿನಿವಾದಲ್ಲಿ 1930 ರಲ್ಲಿ ನಿಧನರಾದರು. ಭಾರತ ಸ್ವತಂತ್ರವಾದ ನಂತರ ಅವರ ಅಸ್ಥಿಯನ್ನು ಭಾರತಕ್ಕೆ ತರಬೇಕೆಂಬುದು ಅವರ ಅಂತಿಮ ಕೋರಿಕೆಯಾಗಿತ್ತು. ಹಾಗೆಯೇ 1947 ರಲ್ಲಿ ಸ್ವಾತಂತ್ರ್ಯ ಬಂದ ಎರಡನೇ ದಿನವೇ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಬೇಕಿತ್ತು, ಆದರೆ, ಈ ಕಾರ್ಯ ನಡೆಯಲಿಲ್ಲ. ಬಹುಶಃ ಈ ಕಾರ್ಯ ನಾನು ಮಾಡಬೇಕೆಂಬುದು ಭಗವಂತನ ಇಚ್ಛೆಯಾಗಿತ್ತೇನೋ, ಈ ಕಾರ್ಯ ಮಾಡುವ ಸೌಭಾಗ್ಯ ನನಗೆ ದೊರೆಯಿತು. ನಾನು ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ, 2003 ರಲ್ಲಿ ಅವರ ಚಿತಾಭಸ್ಮವನ್ನು ಭಾರತಕ್ಕೆ ತರಲಾಯಿತು. ಶ್ಯಾಮಜಿ ಕೃಷ್ಣ ವರ್ಮಾ ಅವರ ಸ್ಮರಣಾರ್ಥ ಅವರ ಜನ್ಮಸ್ಥಳವಾದ, ಕಛ್ ನ ಮಾಂಡ್ವಿಯಲ್ಲಿ ಒಂದು ಸ್ಮಾರಕವನ್ನು ಕೂಡಾ ಸ್ಥಾಪಿಸಲಾಯಿತು. 
ಸ್ನೇಹಿತರೇ, ಭಾರತದ ಆಜಾದಿ ಕೇ ಅಮೃತ ಮಹೋತ್ಸವದ ಉತ್ಸಾಹ ಕೇವಲ ನಮ್ಮ ದೇಶದಲ್ಲಿ ಮಾತ್ರವಲ್ಲ, ನನಗೆ ಭಾರತದ ಮಿತ್ರ ರಾಷ್ಟ್ರವಾದ ಕ್ರೊಯೇಷಿಯಾದಿಂದ ಕೂಡಾ 75 ಪತ್ರಗಳು ಬಂದಿವೆ. ಕ್ರೊಯೇಷಿಯಾದ ಜಾಗ್ರೇಬ್ ನಲ್ಲಿ School of Applied Arts and Design ನ ವಿದ್ಯಾರ್ಥಿಗಳು ಭಾರತದ ಜನರಿಗಾಗಿ 75 ಕಾರ್ಡ್ ಗಳನ್ನು ಕಳುಹಿಸಿಕೊಟ್ಟಿದ್ದಾರೆ. ಮತ್ತು ಅಮೃತ ಮಹೋತ್ಸವದ ಅಂಗವಾಗಿ ಶುಭ ಕೋರಿದ್ದಾರೆ. ನಾನು ನಮ್ಮ ದೇಶವಾಸಿಗಳ ಪರವಾಗಿ ಕ್ರೋಯೇಷಿಯಾ ಮತ್ತು ಅಲ್ಲಿನ ಜನತೆಗೆ ಧನ್ಯವಾದ ಅರ್ಪಿಸುತ್ತೇನೆ. 
ನನ್ನ ಪ್ರೀತಿಯ ದೇಶಬಾಂಧವರೇ ಭಾರತ ಜ್ಞಾನ ಮತ್ತು ಶಿಕ್ಷಣದ ತಪೋಭೂಮಿಯಾಗಿದೆ. ನಾವು ಶಿಕ್ಷಣವನ್ನು ಕೇವಲ ಪುಸ್ತಕ ಜ್ಞಾನಕ್ಕೆ ಮಾತ್ರಾ ಸೀಮಿತ ಮಾಡಿಲ್ಲ, ಶಿಕ್ಷಣವನ್ನು ಜೀವನದ ಸಮಗ್ರ ಅನುಭವದ ರೀತಿಯಲ್ಲಿ ನೋಡಿದ್ದೇವೆ. ನಮ್ಮ ದೇಶದ ಮಹಾನ್ ವ್ಯಕ್ತಿಗಳು ಕೂಡಾ ಶಿಕ್ಷಣ ಕ್ಷೇತ್ರದೊಂದಿಗೆ ಆಳವಾದ ಸಂಬಂಧ ಹೊಂದಿದ್ದಾರೆ. ಪಂಡಿತ್ ಮದನ್ ಮೋಹನ ಮಾಳವೀಯ ಅವರು ಬನಾರಸ್ ಹಿಂದೂ ವಿಶ್ವವಿದ್ಯಾಲಯ ಸ್ಥಾಪಿಸಿದರೆ, ಮಹಾತ್ಮಾ ಗಾಂಧಿಯವರು ಗುಜರಾತ್ ವಿದ್ಯಾಪೀಠದ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದರು. ಗುಜರಾತ್ ನ ಆನಂದ್ ನಲ್ಲಿ ಒಂದು ಬಹಳ ಸುಂದರವಾದ ಸ್ಥಳವಿದೆ ಅದೆಂದರೆ ವಲ್ಲಭ್ ವಿದ್ಯಾನಗರ್. ಸರ್ದಾರ್ ಪಟೇಲ್ ಅವರ ಒತ್ತಾಯದ ಮೇರೆಗೆ, ಅವರ ಇಬ್ಬರು ಸಹವರ್ತಿಗಳಾದ, ಭಾಯಿ ಕಾಕಾ ಮತ್ತು ಭೀಖಾ ಭಾಯಿ ಅವರು, ಅಲ್ಲಿನ ಯುವಕರಿಗಾಗಿ ಶಿಕ್ಷಣ ಕೇಂದ್ರಗಳನ್ನು ಸ್ಥಾಪಿಸಿದರು. ಇದೇ ರೀತಿಯಲ್ಲಿ ಗುರುದೇವ ರವೀಂದ್ರನಾಥ್ ಠಾಗೂರ್ ಅವರು, ಶಾಂತಿ ನಿಕೇತನ್ ಸ್ಥಾಪಿಸಿದರು. ಮಹಾರಾಜಾ ಗಾಯಕ್ವಾಡ್ ಅವರು ಕೂಡಾ ಶಿಕ್ಷಣದ ಕಟ್ಟಾ ಬೆಂಬಲಿಗರಲ್ಲಿ ಒಬ್ಬರಾಗಿದ್ದರು. ಅವರು ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿದರು ಮತ್ತು ಡಾ. ಅಂಬೇಡ್ಕರ್ ಮತ್ತು ಶ್ರೀ ಅರಬಿಂದೋ ಸೇರಿದಂತೆ ಅನೇಕ ಮಹನೀಯರನ್ನು ಉನ್ನತ ಶಿಕ್ಷಣಕ್ಕಾಗಿ ಪ್ರೇರೇಪಿಸಿದರು. ಅಂತೆಯೇ, ಅಂತಹ ಮಹನೀಯರ ಪಟ್ಟಿಯಲ್ಲಿ ಮತ್ತೊಂದು ಹೆಸರು ರಾಜಾ ಮಹೇಂದ್ರ ಪ್ರತಾಪ್ ಸಿಂಹ ಅವರದ್ದು. ರಾಜಾ ಮಹೇಂದ್ರ ಪ್ರತಾಪ್ ಸಿಂಹ ಅವರು ಒಂದು ತಾಂತ್ರಿಕ ಶಾಲೆಯ ಸ್ಥಾಪನೆಗಾಗಿ ತಮ್ಮ ಮನೆಯನ್ನೇ ಕೊಡುಗೆಯಾಗಿ ನೀಡಿದರು. ಅವರು ಅಲೀಗಢ್ ಮತ್ತು ಮಥುರಾದಲ್ಲಿ ಶಿಕ್ಷಣ ಕೇಂದ್ರಗಳ ಸ್ಥಾಪನೆಗಾಗಿ ಸಾಕಷ್ಟು ಆರ್ಥಿಕ ಸಹಾಯ ಮಾಡಿದರು. ಸ್ವಲ್ಪ ದಿನಗಳ ಹಿಂದೆ, ಅಲಿಗಢ್ ನಲ್ಲಿ ಅವರ ಹೆಸರಿನ ವಿಶ್ವವಿದ್ಯಾಲಯಕ್ಕೆ ಶಂಕುಸ್ಥಾಪನೆ ಮಾಡುವ ಸೌಭಾಗ್ಯ ನನಗೆ ದೊರೆತಿತ್ತು. ಶಿಕ್ಷಣದ ಬೆಳಕನ್ನು ಜನರ ಬಳಿಗೆ ಕೊಂಡೊಯ್ಯುವ ಅದೇ ಸ್ಫೂರ್ತಿದಾಯಕ ಮನೋಭಾವನೆಯು ಇಂದಿಗೂ ಭಾರತದಲ್ಲಿ ಜೀವಂತವಾಗಿದೆ ಎಂಬುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ಈ ಭಾವನೆಯಲ್ಲಿ ಅತ್ಯಂತ ಸುಂದರ ವಿಷಯ ಏನೆಂದು ನಿಮಗೆ ಗೊತ್ತೇ? ಶಿಕ್ಷಣದ ಬಗ್ಗೆ ಅರಿವು ಸಮಾಜದ ಪ್ರತಿಯೊಂದು ಹಂತದಲ್ಲೂ ಕಂಡುಬರುತ್ತಿದೆ. ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಉಡುಮಲ್ ಪೇಟ್ ನಿವಾಸಿ ತಾಯಮ್ಮಾಳ್ ಅವರ ಉದಾಹರಣೆ ಬಹಳ ಪ್ರೇರಣಾದಾಯಕವಾಗಿದೆ. ತಾಯಮ್ಮಾಳ್ ಅವರಿಗೆ ತಮ್ಮದೇ ಯಾವುದೇ ಭೂಮಿ ಇಲ್ಲ. ಹಲವಾರು ವರ್ಷಗಳಿಂದ ಇವರ ಕುಟುಂಬ ಎಳನೀರು ಮಾರಾಟ ಮಾಡಿ ತಮ್ಮ ಜೀವನ ಸಾಗಿಸುತ್ತಿದ್ದಾರೆ. ಆರ್ಥಿಕ ಸ್ಥಿತಿಗತಿ ಅಷ್ಟೇನೂ ಚೆನ್ನಾಗಿಲ್ಲ ಆದರೂ, ತಾಯಮ್ಮಾಳ್  ತನ್ನ ಮಗ ಮತ್ತು ಮಗಳಿಗೆ ಶಿಕ್ಷಣ ಕೊಡಿಸಲು ಯಾವುದೇ ಹಿಂದೇಟು ಹಾಕಲಿಲ್ಲ. ಆಕೆಯ ಮಕ್ಕಳು ಚಿನ್ನವೀರಮ್ ಪಟ್ಟಿ ಪಂಚಾಯಿಚ್ ಯೂನಿಯನ್ ಮಿಡಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದರು. ಹಾಗೆಯೇ ಒಂದು ದಿನ ಶಾಲೆಯಲ್ಲಿ ಪೋಷಕರೊಂದಿಗೆ ನಡೆದ ಸಭೆಯಲ್ಲಿ ತರಗತಿಗಳು ಮತ್ತು ಶಾಲೆಯ ಸ್ಥಿತಿಗತಿ ಸುಧಾರಣೆ, ಶಾಲೆಯ ಮೂಲಸೌಕರ್ಯ ಸುಧಾರಣೆ ಮಾಡುವ ವಿಷಯ ಚರ್ಚೆಗೆ ಬಂದಿತು. ತಾಯಮ್ಮಾಳ್ ಕೂಡಾ ಆ ಸಭೆಯಲ್ಲಿ ಹಾಜರಿದ್ದರು. ಅವರು ಎಲ್ಲವನ್ನೂ ಕೇಳಿಸಿಕೊಂಡರು. ಇದೇ ಸಭೆಯಲ್ಲಿ, ಈ ಕೆಲಸ ಕಾರ್ಯಗಳಿಗಾಗಿ ಹಣದ ಕೊರತೆ ಇರುವ ವಿಷಯ ಕೂಡಾ ಚರ್ಚೆಗೆ ಬಂದಿತು. ಇದಾದ ನಂತರ, ತಾಯಮ್ಮಾಳ್ ಏನು ಮಾಡಿದರೆಂದು ಯಾರೂ ಕಲ್ಪನೆ ಕೂಡಾ ಮಾಡಲು ಸಾಧ್ಯವಿಲ್ಲ. ಎಳನೀರು ಮಾರಾಟ ಮಾಡಿ ಅಲ್ಪ ಸ್ವಲ್ಪ ಸಂಗ್ರಹಿಸಿದ್ದ ಒಂದು ಲಕ್ಷ ರೂಪಾಯಿಯನ್ನು ತಾಯಮ್ಮಾಳ್ ಶಾಲೆಗಾಗಿ ದಾನ ಮಾಡಿದರು. ವಾಸ್ತವದಲ್ಲಿ ಇದನ್ನು ಮಾಡಲು ಬಹಳ ದೊಡ್ಡ ಹೃದಯ ಮತ್ತು ಸೇವಾಮನೋಭಾವ ಬೇಕು.  ಈಗಿರುವ ಶಾಲೆಯಲ್ಲಿ 8 ನೇ ತರಗತಿಯವರೆಗೆ ಇದೆ. ಶಾಲೆಯ ಮೂಲಸೌಕರ್ಯ ಸುಧಾರಣೆಯಾದಾಗ,ಇಲ್ಲಿ ಹೈಯರ್ ಸೆಕೆಂಡರಿವರೆಗೆ ಶಿಕ್ಷಣ ನೀಡುವಂತಾಗುತ್ತದೆ ಎಂದು ತಾಯಮ್ಮಾಳ್ ಹೇಳುತ್ತಾರೆ. 
ನಾನು ಈಗ ಚರ್ಚೆ ಮಾಡುತ್ತಿದ್ದುದು ನಮ್ಮ ದೇಶದಲ್ಲಿ ಶಿಕ್ಷಣದ ಬಗ್ಗೆ ಇರುವ ಇದೇ ಭಾವನೆಯ ಕುರಿತಾಗಿ. IIT BHU ನ ಒಂದು Alumnus ನ ಇದೇ ರೀತಿಯ ದಾನದ ಬಗ್ಗೆ ಕೂಡಾ ನನಗೆ ತಿಳಿದು ಬಂದಿದೆ. BHUದ ಹಳೆಯ ವಿದ್ಯಾರ್ಥಿ ಜಯ್ ಚೌಧರಿ ಅವರು IIT BHUFoundation ಗೆ ಒಂದು ಮಿಲಿಯನ್ ಡಾಲರ್ ಅಂದರೆ ಸುಮಾರು ಏಳೂವರೆ ಕೋಟಿ ರೂಪಾಯಿ ಕೊಡುಗೆ ನೀಡಿದ್ದಾರೆ. 
PART 3 

ಸ್ನೇಹಿತರೇ, ನಮ್ಮ ದೇಶದಲ್ಲಿ ವಿವಿಧ ಕ್ಷೇತ್ರಗಳಿಗೆ ಸೇರಿದ ಅನೇಕ ಜನರಿದ್ದಾರೆ, ಅವರು ಇತರರಿಗೆ ಸಹಾಯ ಮಾಡುವ ಮೂಲಕ ಸಮಾಜದ ಕುರಿತಾದ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷವಾಗಿ ನಮ್ಮ ವಿವಿಧ ಐಐಟಿಗಳಲ್ಲಿ ಇಂತಹ ಪ್ರಯತ್ನಗಳು ನಿರಂತರವಾಗಿ ಕಂಡುಬರುತ್ತಿರುವುದು ನನಗೆ ಬಹಳ ಸಂತೋಷವೆನಿಸುತ್ತದೆ. ಕೇಂದ್ರೀಯ ವಿಶ್ವವಿದ್ಯಾನಿಲಯಗಳಲ್ಲೂ ಇಂತಹ ಸ್ಫೂರ್ತಿದಾಯಕ ಉದಾಹರಣೆಗಳಿಗೆ ಕೊರತೆಯಿಲ್ಲ. ಇಂತಹ ಪ್ರಯತ್ನಗಳನ್ನು ಮತ್ತಷ್ಟು ಹೆಚ್ಚಿಸಲು ಕಳೆದ ವರ್ಷ ಸೆಪ್ಟೆಂಬರ್ ನಿಂದ ದೇಶದಲ್ಲಿ ವಿದ್ಯಾಂಜಲಿ ಅಭಿಯಾನವನ್ನೂ ಪ್ರಾರಂಭಿಸಲಾಗಿದೆ. ವಿವಿಧ ಸಂಸ್ಥೆಗಳು, CSR ಮತ್ತು ಖಾಸಗಿ ವಲಯದ ಭಾಗವಹಿಸುವಿಕೆಯೊಂದಿಗೆ ದೇಶಾದ್ಯಂತ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವುದು ಇದರ ಉದ್ದೇಶವಾಗಿದೆ. ಸಮುದಾಯದ ಭಾಗವಹಿಸುವಿಕೆ ಮತ್ತು ಮಾಲೀಕತ್ವದ ಮನೋಭಾವವನ್ನು ವಿದ್ಯಾಂಜಲಿ ಉತ್ತೇಜಿಸುತ್ತಿದೆ. ನಿಮ್ಮ ಶಾಲೆ, ಕಾಲೇಜುಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದಲ್ಲಿ, ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಏನಾದರೂ ಕೊಡುಗೆ ನೀಡಿದಲ್ಲಿ,  ದೊರೆಯುವ ಆನಂದ ಮತ್ತು ಸಂತೋಷದ ಅನುಭವ ಅನುಭವಿಸಿದಾಗ ಮಾತ್ರಾ ತಿಳಿದುಬರುತ್ತದೆ. 
ನನ್ನ ಪ್ರೀತಿಯ ದೇಶವಾಸಿಗಳೇ, ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಪ್ರತಿಯೊಂದು ಜೀವಿಯ ಬಗ್ಗೆ ಕರುಣೆ ಇವು ನಮ್ಮ ಸಂಸ್ಕೃತಿಯೂ ಹೌದು ಸಹಜ ಸ್ವಭಾವವೂ ಹೌದು. ಇತ್ತೀಚಿಗೆ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಾಗ ನಮ್ಮ ಈ ಸಂಸ್ಕಾರದ ಒಂದು ನೋಟ ನಮಗೆ ಕಾಣಸಿಕ್ಕಿತು.  ಈ ಹುಲಿಯನ್ನು ಜನರು ಕಾಲರ್ ವಾಲಿ ಹೆಣ್ಣು ಹುಲಿ ಎಂದು ಕರೆಯುತ್ತಿದ್ದರು. ಅರಣ್ಯ ಇಲಾಖೆ ಇದಕ್ಕೆ ಟಿ-15 ಎಂದು ಹೆಸರಿಸಿದೆ. ಇದರ ಮೃತ್ಯುವಿನಿಂದ ತಮ್ಮ ಆಪ್ತರು ಯಾರೋ ಮರಣ ಹೊಂದಿದಂತೆ ಜನರು ಭಾವುಕರಾದರು. ಜನರು ಅದರ ಅಂತಿಮ ವಿಧಿಗಳನ್ನು ನೆರವೇರಿಸಿದರು, ಅದನ್ನು ಬಹಳ ಗೌರವ ಮತ್ತು ಪ್ರೀತಿಯಿಂದ ಬೀಳ್ಕೊಟ್ಟರು. ಸಾಮಾಜಿಕ ಜಾಲತಾಣಗಳಲ್ಲಿ ಈ ಚಿತ್ರಗಳನ್ನು ನೀವೂ ನೋಡಿರಬಹುದು. ಪ್ರಕೃತಿ ಮತ್ತು ಪ್ರಾಣಿಗಳ ಮೇಲೆ ಭಾರತೀಯರಾದ ನಮಗಿರುವ ಈ ಪ್ರೀತಿಯನ್ನು ಪ್ರಪಂಚದಾದ್ಯಂತ ಬಹಳವಾಗಿ ಪ್ರಶಂಸಿಸಲಾಗಿದೆ.  ಕಾಲರ್ ಹುಲಿ ತನ್ನ ಜೀವಿತಾವಧಿಯಲ್ಲಿ 29 ಮರಿಗಳಿಗೆ ಜನ್ಮ ನೀಡಿತ್ತು. ಅವುಗಳ ಪೈಕಿ 25 ಮರಿಗಳನ್ನು ಬೆಳೆಸಿತು. ಈ ಟಿ-15  ರ  ಜೀವನವನ್ನು ನಾವೂ ಸಂಭ್ರಮಿಸಿದ್ದೇವೆ ಮತ್ತು ಅದು ಇಹಲೋಕವನ್ನು ತ್ಯಜಿಸಿದಾಗ ಭಾವುಕ ವಿದಾಯವನ್ನೂ ನೀಡಿದ್ದೇವೆ. ಇದೇ ಭಾರತದ ಜನರ ವಿಶೇಷತೆ. ನಾವು ಪ್ರತಿಯೊಂದು ಜೀವಿಯೊಂದಿಗೆ ಪ್ರೀತಿ ಬಾಂಧವ್ಯವನ್ನು ಬೆಸೆದುಕೊಳ್ಳುತ್ತೇವೆ. ಈ ಬಾರಿಯ ಗಣರಾಜ್ಯೋತ್ಸವ ಪರೇಡ್‌ನಲ್ಲೂ ನಾವು ಅಂತಹದ್ದೇ ದೃಶ್ಯವನ್ನು ನೋಡಿದ್ದೇವೆ. ಈ ಪರೇಡ್‌ನಲ್ಲಿ ಅಧ್ಯಕ್ಷರ ಅಂಗರಕ್ಷಕ ಚಾರ್ಜರ್ ಕುದುರೆ ವಿರಾಟ್ ತನ್ನ ಕೊನೆಯ ಪರೇಡ್‌ನಲ್ಲಿ ಭಾಗವಹಿಸಿತು. ವಿರಾಟ್ ಹೆಸರಿನ ಕುದುರೆ 2003 ರಲ್ಲಿ ರಾಷ್ಟ್ರಪತಿ ಭವನಕ್ಕೆ ಬಂದಿತು ಮತ್ತು ಪ್ರತಿ ಬಾರಿ ಗಣರಾಜ್ಯೋತ್ಸವದಂದು Commandant charger ರೂಪದಲ್ಲಿ ಪರೇಡ್ ಅನ್ನು ಮುನ್ನಡೆಸುತ್ತಿತ್ತು. ರಾಷ್ಟ್ರಪತಿ ಭವನದಲ್ಲಿ ವಿದೇಶಿ ರಾಷ್ಟ್ರದ ಮುಖ್ಯಸ್ಥರನ್ನು ಸ್ವಾಗತಿಸುವ ಸಂದರ್ಭದಲ್ಲಿ ಕೂಡಾ ಅದು ಈ ಪಾತ್ರವನ್ನು ನಿರ್ವಹಿಸುತ್ತಿತ್ತು. ಈ ವರ್ಷ, ಸೇನಾ ದಿನದಂದು ಸೇನಾ ಮುಖ್ಯಸ್ಥರು ವಿರಾಟ್‌ ಕುದುರೆಗೆ  COAS Commendation Card ಕೂಡಾ ಪ್ರದಾನ ಮಾಡಿದರು. ಕುದುರೆ ವಿರಾಟ್ ನ ವಿರಾಟ ರೂಪದ ಸೇವೆಯನ್ನು ಗುರುತಿಸಿ ಅದರ ಸೇವಾ ನಿವೃತ್ತಿಯ ನಂತರ ಅದನ್ನು ಅಷ್ಟೇ ಅದ್ಧೂರಿಯಾಗಿ ಬೀಳ್ಕೊಡಲಾಯಿತು.
ನನ್ನ ಪ್ರೀತಿಯ ದೇಶವಾಸಿಗಳೇ,  ನಿಷ್ಠೆಯಿಂದ ಪ್ರಾಮಾಣಿಕ ಪ್ರಯತ್ನ ಮಾಡಿದಾಗ, ಉದಾತ್ತ ಧ್ಯೇಯದೊಂದಿಗೆ ಕೆಲಸ ಮಾಡಿದಾಗ, ಅದಕ್ಕೆ ಉತ್ತಮ ಫಲಿತಾಂಶ ದೊರೆಯುತ್ತದೆ.  ಇದಕ್ಕೆ ಒಂದು ಉತ್ತಮ ಉದಾಹರಣೆ ಅಸ್ಸಾಂ ನಿಂದ ನನ್ನ ಮುಂದೆ ಬಂದಿದೆ. ಅಸ್ಸಾಂ ಹೆಸರು ಕೇಳುತ್ತಿದ್ದಂತೆಯೇ ಅಲ್ಲಿನ ಚಹಾ ತೋಟಗಳು ಮತ್ತು ಅನೇಕ ರಾಷ್ಟ್ರೀಯ ಉದ್ಯಾನವನಗಳ ನೆನಪು ಮೂಡುತ್ತದೆ. ಅದರೊಂದಿಗೆ, ಒಂದು ಕೊಂಬಿನ ಘೇಂಡಾ ಮೃಗ ಅಂದರೆ one horn Rhino ದ ಚಿತ್ರವೂ ಕೂಡಾ ಮನದಲ್ಲಿ ಮೂಡುತ್ತದೆ. ಒಂದು ಕೊಂಬಿನ ಘೇಂಡಾಮೃಗ ಯಾವಾಗಲೂ ಅಸ್ಸಾಂ ಸಂಸ್ಕೃತಿಯ ಭಾಗವಾಗಿದೆ ಎಂದು ನಿಮಗೆಲ್ಲಾ ತಿಳಿದೇ ಇದೆ. ಭಾರತ ರತ್ನ ಭೂಪೇನ್ ಹಜಾರಿಕಾ ಅವರ ಈ ಹಾಡು ಪ್ರತಿಯೊಬ್ಬರ ಕಿವಿಯಲ್ಲೂ ಅನುರಣಿಸುತ್ತದೆ. 
##SONG (A Separate audio file  will be shared on Whatdsapp)
ಸ್ನೇಹಿತರೇ, ಈ ಹಾಡಿನ ಅರ್ಥ ಬಹಳ ಪ್ರಸ್ತುತವಾಗಿದೆ. ಈ ಗೀತೆಯಲ್ಲಿ ಹೀಗೆಂದು ಹೇಳಲಾಗಿದೆ, ಕಾಜಿರಂಗದ ಹಸಿರು ತುಂಬಿದ ಪರಿಸರ, ಆನೆ ಮತ್ತು ಹುಲಿಯ ವಾಸಸ್ಥಳ, ಒಂದು ಕೊಂಬಿನ ಘೇಂಡಾಮೃಗವನ್ನು ಭೂಮಿ ನೋಡುತ್ತದೆ, ಹಕ್ಕಿಗಳ ಮಧುರ ಕಲರವವನ್ನು ಕೇಳಿಸಿಕೊಳ್ಳುತ್ತದೆ. ಅಸ್ಸಾಮಿನ ವಿಶ್ವ ಪ್ರಸಿದ್ಧ ಕೈಮಗ್ಗದಲ್ಲಿ ನೇಯ್ದ ಮೂಗ ಮತ್ತು ಏರಿ ಉಡುಪುಗಳಲ್ಲಿ ಕೂಡಾ ಘೇಂಡಾ ಮೃಗದ ಆಕೃತಿಯನ್ನು ನೋಡಬಹುದು. ಅಸ್ಸಾಮಿನ ಸಂಸ್ಕೃತಿಯಲ್ಲಿ ಯಾವ ಘೇಂಡಾಮೃಗದ ಇಷ್ಟೊಂದು ಪ್ರಾಮುಖ್ಯತೆ ಇದೆಯೋ ಆ ಘೇಂಡಾ ಮೃಗಗಳು ಕೂಡಾ ಕಷ್ಟಗಳನ್ನು ಎದುರಿಸಬೇಕಾಯಿತು. 2013 ರಲ್ಲಿ 37 ಮತ್ತು 2014 ರಲ್ಲಿ 32 ಘೇಂಡಾ ಮೃಗಗಳನ್ನು ಪ್ರಾಣಿ ಕಳ್ಳಸಾಗಣೆದಾರರು ಕೊಂದು ಹಾಕಿದ್ದರು.  ಈ ಸವಾಲನ್ನು ಎದುರಿಸಲು, ಕಳೆದ ಏಳು ವರ್ಷಗಳಲ್ಲಿ ಅಸ್ಸಾಂ ಸರ್ಕಾರವು ವಿಶೇಷ ಪ್ರಯತ್ನಗಳನ್ನು ಕೈಗೊಂಡಿತು. ಘೇಂಡಾಮೃಗಗಳ ಬೇಟೆಯ ವಿರುದ್ಧ ಬಹು ದೊಡ್ಡ ಅಭಿಯಾನ ನಡೆಸಿತು. ಕಳೆದ ಸೆಪ್ಟೆಂಬರ್ 22 ರಂದು World Rhino Day ಸಂದರ್ಭದಲ್ಲಿ, ಕಳ್ಳ ಸಾಗಣೆದಾರರಿಂದ ವಶಪಡಿಸಿಕೊಂಡ 2400 ಕ್ಕೂ ಹೆಚ್ಚು ಘೇಂಡಾಗಳ ಕೊಂಬುಗಳನ್ನು ಸುಡಲಾಯಿತು. ಇದು ಕಳ್ಳ ಸಾಗಾಣಿಕೆದಾರರಿಗೆ ಒಂದು ಸ್ಪಷ್ಟ ಸಂದೇಶವಾಗಿತ್ತು. ಇಂತಹ ಪ್ರಯತ್ನಗಳ ಫಲವಾಗಿ ಈಗ ಅಸ್ಸಾಂನಲ್ಲಿ ಘೇಂಡಾ ಮೃಗಗಳ ಬೇಟೆಯಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ. 2013 ರಲ್ಲಿ 37 ಘೇಂಡಾ ಮೃಗಗಳು ಕೊಲ್ಲಲ್ಪಟ್ಟಿದ್ದರೆ, 2020 ರಲ್ಲಿ 2 ಮತ್ತು 2021 ರಲ್ಲಿ ಕೇವಲ ಒಂದು ಘೇಂಡಾಮೃಗದ ಬೇಟೆಯ ಪ್ರಕರಣ ಕಂಡು ಬಂದಿತು. ಘೇಂಡಾ ಮೃಗಗಳನ್ನು ಕಾಪಾಡಲು ಅಸ್ಸಾಂ ಸರ್ಕಾರದ ಈ ಸಂಕಲ್ಪವನ್ನು ನಾನು ಪ್ರಶಂಸಿಸುತ್ತೇನೆ. 
    ಸ್ನೇಹಿತರೇ, ಭಾರತೀಯ ಸಂಸ್ಕೃತಿಯ ವಿವಿಧ ಬಣ್ಣುಗಳು ಮತ್ತು ಆಧ್ಯಾತ್ಮದ ಶಕ್ತಿಯು ವಿಶ್ವಾದ್ಯಾಂತ ಜನರನ್ನು ಯಾವಾಗಲೂ ತನ್ನೆಡೆಗೆ ಆಕರ್ಷಿಸುತ್ತಲೇ ಇದೆ. ಭಾರತೀಯ ಸಂಸ್ಕೃತಿಯು ಅಮೆರಿಕಾ, ಕೆನಡಾ, ದುಬೈ, ಸಿಂಗಪೂರ್, ಪಶ್ಚಿಮ ಯೂರೋಪ್ ಮತ್ತು ಜಪಾನ್ ದೇಶಗಳಲ್ಲಿ ಬಹಳ ಜನಪ್ರಿಯವಾಗಿದೆ ಎಂದು ನಾನು ನಿಮಗೆ ಹೇಳಿದರೆ,  ನಿಮಗೆ ಇದು ಸಾಮಾನ್ಯ, ಎನಿಸಬಹುದು, ಯಾವುದೇ ಆಶ್ಚರ್ಯವಾಗದೇ ಇರಬಹುದು. ಆದರೆ, ಲ್ಯಾಟಿನ್ ಅಮೆರಿಕಾ ಮತ್ತು ದಕ್ಷಿಣ ಅಮೆರಿಕಾದಲ್ಲಿ ಕೂಡಾ ಭಾರತೀಯ ಸಂಸ್ಕೃತಿಯ ಬಗ್ಗೆ ಬಹಳ ಆಕರ್ಷಣೆಯಿದೆ ಎಂದು ಹೇಳಿದಾಗ, ನೀವು ಖಂಡಿತವಾಗಿಯೂ ಯೋಚನೆ ಮಾಡುತ್ತೀರಿ. Mexico ದಲ್ಲಿ ಖಾದಿಗೆ ಪ್ರೋತ್ಸಾಹ ನೀಡುವ ಮಾತೇ ಇರಲಿ ಅಥವಾ ಬ್ರೆಜಿಲ್ ನಲ್ಲಿ ಭಾರತೀಯ ಸಂಪ್ರದಾಯಗಳನ್ನು ಜನಪ್ರಿಯಗೊಳಿಸಲು ನಡೆಸುತ್ತಿರುವ ಪ್ರಯತ್ನಗಳೇ ಇರಲಿ, ಮನ್ ಕಿ ಬಾತ್ ನಲ್ಲಿ ನಾವು ಈ ವಿಷಯಗಳ ಬಗ್ಗೆ ಈ ಮೊದಲು ಕೂಡಾ ಚರ್ಚೆ ಮಾಡಿದ್ದೇವೆ. ಇಂದು ನಾನು Argentinaದಲ್ಲಿ ಹರಡುತ್ತಿರುವ ಭಾರತೀಯ ಸಂಸ್ಕೃತಿಯ ವಿಷಯದ ಬಗ್ಗೆ ಹೇಳುತ್ತೇನೆ. Argentina ದಲ್ಲಿ, ನಮ್ಮ ಸಂಸ್ಕೃತಿಯನ್ನು ಬಹಳ ಇಷ್ಟ ಪಡುತ್ತಾರೆ. 2018 ರಲ್ಲಿ, ನಾನು ಅರ್ಜೆಂಟೀನಾ ಪ್ರವಾಸದಲ್ಲಿ ಯೋಗದ ಕಾರ್ಯಕ್ರಮವಾದ ‘Yoga For Peace’ನಲ್ಲಿ ಪಾಲ್ಗೊಂಡಿದ್ದೆನು. ಇಲ್ಲಿ Argentina ನಲ್ಲಿ, ಹಸ್ತಿನಾಪುರ ಫೌಂಡೇಷನ್ ಎಂಬ ಹೆಸರಿನ ಸಂಸ್ಥೆಯಿದೆ. ಎಲ್ಲಿಯ ಅರ್ಜೆಂಟೀನಾ, ಎಲ್ಲಿಯ ಹಸ್ತಿನಾಪುರ ಫೌಂಡೇಷನ್, ನಿಮಗೆ ಇದನ್ನು ಕೇಳಿ ಆಶ್ಚರ್ಯವೆನಿಸುತ್ತದೆ ಅಲ್ಲವೇ? ಈ ಫೌಂಡೇಷನ್, ಅರ್ಜೆಂಟೀನಾದಲ್ಲಿ ಭಾರತೀಯ ವೈದಿಕ ಸಂಸ್ಕೃತಿಯ ಪ್ರಚಾರದಲ್ಲಿ ತೊಡಗಿಕೊಂಡಿದೆ. ಈ ಸಂಸ್ಥೆಯನ್ನು 40 ವರ್ಷಗಳಿಗೆ ಮೊದಲು, ಓರ್ವ ಮೇಡಂ, ಪ್ರೊಫೆಸರ್ ಏಡಾ ಎಲ್ ಬ್ರೆಕ್ಟ್ ಅವರು ಸ್ಥಾಪಿಸಿದರು. ಇಂದು ಪ್ರೊಫೆಸರ್ ಏಡಾ ಎಲ್ ಬ್ರೆಕ್ಟ್ ಅವರು 90 ವರ್ಷ ಸಮೀಪಿಸುತ್ತಿದ್ದಾರೆ. ಭಾರತದೊಂದಿಗೆ ಅವರ ಒಡನಾಟ ಹೇಗೆ ಪ್ರಾರಂಭವಾಯಿತು ಎಂಬುದು ಬಹಳ ಕುತೂಹಲಕಾರಿ ವಿಷಯವಾಗಿದೆ. ಅವರು 18 ವರ್ಷ ವಯಸ್ಸಿನವರಾಗಿದ್ದಾಗ, ಮೊದಲ ಬಾರಿಗೆ ಅವರಿಗೆ ಭಾರತೀಯ ಸಂಸ್ಕೃತಿಯ ಶಕ್ತಿಯ ಪರಿಚಯವಾಯಿತು. ಅವರು ಭಾರತದಲ್ಲಿ ಸಾಕಷ್ಟು ಕಾಲ ಇದ್ದರು. ಭಗವದ್ಗೀತೆ ಮತ್ತು ಉಪನಿಷತ್ ಬಗ್ಗೆ ಆಳವಾಗಿ ಅರಿತರು. ಇಂದು ಹಸ್ತಿನಾಪುರ ಫೌಂಡೇಷನ್ ನ 40 ಸಾವಿರಕ್ಕೂ ಅಧಿಕ ಸದಸ್ಯರಿದ್ದಾರೆ ಮತ್ತು Argentina ಮತ್ತು ಇತರ ಲ್ಯಾಟಿನ್ ಅಮೆರಿಕಾ ದೇಶಗಳಲ್ಲಿ ಇದರ ಸುಮಾರು 30 ಶಾಖೆಗಳಿವೆ. ಹಸ್ತಿನಾಪುರ ಫೌಂಡೇಷನ್ ಸ್ಪ್ಯಾನಿಷ್ ಭಾಷೆಯಲ್ಲಿ 100 ಕ್ಕೂ ಅಧಿಕ ವೈದಿಕ ಮತ್ತು ತತ್ವಶಾಸ್ತ್ರ ಗ್ರಂಥಗಳನ್ನು ಪ್ರಕಟಿಸಿದೆ. ಇದರ ಆಶ್ರಮ ಕೂಡಾ ಬಹಳ ಆಕರ್ಷಣೀಯವಾಗಿದೆ. ಆಶ್ರಮದಲ್ಲಿ 12 ದೇವಾಲಯಗಳನ್ನು ನಿರ್ಮಿಸಲಾಗಿದೆ, ಇದರಲ್ಲಿ ಅನೇಕ ದೇವಾನುದೇವತೆಗಳ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ.  ಈ ಎಲ್ಲಾ ಕೇಂದ್ರಗಳಲ್ಲಿ ಅದ್ವೈತವಾದಿ ಧ್ಯಾನ ಮತ್ತು ಪ್ರಾರ್ಥನೆಗಾಗಿ ವಿಶೇಷವಾದ ಮಂದಿರಗಳನ್ನು ಕೂಡಾ ನಿರ್ಮಿಸಲಾಗಿದೆ. 
ಸ್ನೇಹಿತರೆ ಇಂಥ ಹಲವಾರು ಉದಾಹರಣೆಗಳು, ನಮ್ಮ ಸಂಸ್ಕೃತಿ ನಮಗೆ ಮಾತ್ರವಲ್ಲ ಸಂಪೂರ್ಣ ವಿಶ್ವಕ್ಕೆ ಅಮೂಲ್ಯ ಪರಂಪರೆಯಾಗಿದೆ ಎಂಬುದನ್ನು ತೋರ್ಪಡಿಸುತ್ತದೆ. ವಿಶ್ವದಾದ್ಯಂತದ ಜನರು ಇದನ್ನು ಅರಿಯಬಯಸುತ್ತಾರೆ. ಜೀವಿಸಬಯಸುತ್ತಾರೆ. ನಾವು ಕೂಡಾ ಸಂಪೂರ್ಣ ಜವಾಬ್ದಾರಿಯಿಂದ ನಮ್ಮ ಸಾಂಸ್ಕೃತಿಕ ಪರಂಪರೆಯನ್ನು ಸ್ವತಃ ನಮ್ಮ ಜೀವನದ ಭಾಗವನ್ನಾಗಿ ಮಾಡಿಕೊಳ್ಳುತ್ತಾ ಎಲ್ಲರಿಗೂ ತಲುಪಿಸುವ ಪ್ರಯತ್ನ ಮಾಡಬೇಕು. 
ನನ್ನ ಪ್ರಿಯ ದೇಶಬಾಂಧವರೆ, ಈಗ ನಿಮ್ಮೆಲ್ಲರಿಗೆ ವಿಶೇಷವಾಗಿ ಯುವಮಿತ್ರರಿಗೆ ಒಂದು ಪ್ರಶ್ನೆ ಕೇಳಬಯಸುತ್ತೇನೆ. ನೀವು ಒಂದು ಬಾರಿಗೆ ಎಷ್ಟು ಪುಶ್ ಅಪ್ಸ್ ಮಾಡಬಹುದು ಎಂದು ಆಲೋಚಿಸಿ. ನಾನು ನಿಮಗೆ ಹೇಳಬಯಸುವ ವಿಷಯ ಕೇಳಿ ಖಂಡಿತ ನಿಮಗೆ ಆಶ್ಚರ್ಯವಾಗುತ್ತದೆ. ಮಣಿಪುರದಲ್ಲಿ 24 ವರ್ಷದ ಯುವಕ ಥೌನಾವೋಜಮ್ ನಿರಂಜಾಯ್ ಸಿಂಗ್ ಒಂದು ನಿಮಿಷದಲ್ಲಿ 109  ಪುಶ್ ಅಪ್ಸ್ ಮಾಡಿ ದಾಖಲೆ ಬರೆದಿದ್ದಾರೆ. ನಿರಂಜಾಯ್ ಸಿಂಗ್ ಅವರಿಗೆ ದಾಖಲೆ ಮುರಿಯುವುದು ಹೊಸತೇನಲ್ಲ. ಇದಕ್ಕೂ ಮೊದಲು ಒಂದೇ ಕೈಯಿಂದ ಅತಿ ಹೆಚ್ಚು ನಕಲ್ ಪುಶ್ ಅಪ್ಸ್ ದಾಖಲೆ ಮಾಡಿದ್ದಾರೆ. ನಿರಂಜಾಯ್ ಸಿಂಗ್ ಅವರಿಂದ ಪ್ರೇರಿತರಾಗಿ ನೀವು ಕೂಡಾ ದೈಹಿಕ ಸ್ವಾಸ್ಥ್ಯವನ್ನು ಜೀವನದ ಭಾಗವನ್ನಾಗಿಸಿಕೊಳ್ಳುತ್ತೀರಿ ಎಂದು ನಾನು ಭಾವಿಸಿದ್ದೇನೆ. 
ಸ್ನೇಹಿತರೆ ಇಂದು ನಾನು ನಿಮ್ಮ ಬಳಿ ಲಡಾಖ್ ನ ಒಂದು ವಿಷಯ ಪ್ರಸ್ತಾಪಿಸಬಯಸುತ್ತೇನೆ. ಇದರ ಬಗ್ಗೆ ತಿಳಿದು ನಿಮಗೆ ಹೆಮ್ಮೆಯೆನಿಸುತ್ತದೆ.  ಲಡಾಖ್ ಗೆ ಬಹುಬೇಗ ಒಂದು ಅದ್ಭುತ ಒಪನ್ ಸಿಂಥೆಟಿಕ್ ಟ್ರ್ಯಾಕ್ ಮತ್ತು ಆಸ್ಟ್ರೊ ಟರ್ಫ್ ಫುಟ್ಬಾಲ್ ಸ್ಟೇಡಿಯಂ ಕೊಡುಗೆ ಲಭಿಸಲಿದೆ. ಈ ಕ್ರೀಡಾಂಗಣ 10 ಸಾವಿರಕ್ಕೂ ಹೆಚ್ಚು ಎತ್ತರದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರ ನಿರ್ಮಾಣ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.  ಲಡಾಖ್ ನ ಈ ಕ್ರೀಡಾಂಗಣ ಅತ್ಯಂತ ದೊಡ್ಡದಾಗಿರಲಿದ್ದು 30 ಸಾವಿರ ಜನರು ಕುಳಿತುಕೊಳ್ಳಬಹುದಾಗಿದೆ. ಲಡಾಖ್ ನ ಈ ಆಧುನಿಕ ಫುಟ್ಬಾಲ್ ಕ್ರೀಡಾಂಗಣದಲ್ಲಿ 8 ಸಾಲುಗಳ ಸಿಂಥೆಟಿಕ್ ಟ್ರ್ಯಾಕ್ ಕೂಡಾ ಇರಲಿದೆ. ಇದಲ್ಲದೆ ಇಲ್ಲಿ 1000 ಹಾಸಿಗೆಗಳ ವಸತಿಗೃಹ ವ್ಯವಸ್ಥೆಯೂ ಇರಲಿದೆ. ಈ ಕ್ರೀಡಾಂಗಣಕ್ಕೆ ಫುಟ್ಬಾಲ್ ನ ಮಹಾನ್ ಸಂಸ್ಥೆಯಾದ ಫೀಫಾ ಕೂಡಾ ಮನ್ನಣೆ ನೀಡಿದೆ ಎಂದು ತಿಳಿದು ನಿಮಗೆ ಸಂತೋಷವಾಗಬಹುದು. ಕ್ರೀಡೆಯ ಇಂಥ ಬೃಹತ್ ಪ್ರಮಾಣದ ಮೂಲಭೂತ ಸೌಕರ್ಯದ ನಿರ್ಮಾಣವಾದಾಗ ದೇಶದ ಯುವಜನತೆಗೆ ಉತ್ತಮ ಅವಕಾಶಗಳನ್ನು ಹೊತ್ತು ತರುತ್ತದೆ. ಅಲ್ಲದೆ ಇಂಥ ವ್ಯವಸ್ಥೆಗಳಿದ್ದಲ್ಲಿ ದೇಶಾದ್ಯಂತದಿಂದ ಜನರು ಭೇಟಿ ನೀಡಲಾರಂಭಿಸುತ್ತಾರೆ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ದೊರೆಯುತ್ತದೆ ಮತ್ತು ಉದ್ಯೋಗಾವಕಾಶಗಳು ತೆರೆದುಕೊಳ್ಳುತ್ತವೆ. ಲಡಾಖ್ ನ ಅನೇಕ ಯುವಕ ಯುವತಿಯರಿಗೂ ಈ ಕ್ರೀಡಾಂಗಣದಿಂದ ಲಾಭವಾಗಲಿದೆ. 
ನನ್ನ ಪ್ರಿಯ ದೇಶಬಾಂಧವರೆ, ಮನದ ಮಾತಿನಲ್ಲಿ ಈ ಬಾರಿಯೂ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಕೊರೊನಾದ ರೂಪಾಂತರಿಯ ವಿರುದ್ಧದ ಹೋರಾಟದ ಸಫಲತೆಗಾಗಿ ಭಾರತ ಬಹಳ ಶ್ರಮಿಸುತ್ತಿದೆ.   ಸುಮಾರು ನಾಲ್ಕುವರೆ ಕೋಟಿ ಮಕ್ಕಳು ಕೊರೊನಾ ಲಸಿಕೆ ಪಡೆದಿದ್ದಾರೆ ಎಂಬುದು ಹೆಮ್ಮೆಯ ಸಂಗತಿಯಾಗಿದೆ. ಇದರರ್ಥವೇನೆಂದರೆ 15 ರಿಂದ 18 ವರ್ಷದ ವಯೋಮಾನದ ಸುಮಾರು 60% ರಷ್ಟು ಯುವಜನತೆ 3-4 ವಾರಗಳಲ್ಲೇ ಲಸಿಕೆ ಹಾಕಿಸಿಕೊಂಡಿದ್ದಾರೆ. ಇದರಿಂದ ಯುವಜನತೆಯ ರಕ್ಷಣೆ ಮಾತ್ರವಲ್ಲ ಅವರು ಓದು ಮುಂದುವರಿಸಲೂ ಸಹಾಯವಾಗುತ್ತದೆ. ಮತ್ತೊಂದು ಒಳ್ಳೇ ವಿಷಯವೆಂದರೆ 20 ದಿನಗಳಲ್ಲೇ ಸುಮಾರು 1 ಕೋಟಿ ಜನರು ಪ್ರಿಕಾಶನ್ ಡೋಸ್ ಪಡೆದಿದ್ದಾರೆ. ನಮ್ಮ ದೇಶದ ಲಸಿಕೆ ಮೇಲೆ ದೇಶಬಾಂಧವರ ಈ ವಿಶ್ವಾಸ ನಮ್ಮ ದೊಡ್ಡ ಶಕ್ತಿಯಾಗಿದೆ. ಈಗಂತೂ ಕೊರೊನಾ ಕೇಸ್ ಗಳು ಕೂಡಾ ಕಡಿಮೆಯಾಗಲಾರಂಭಿಸಿವೆ – ಇದು ಬಹಳ ಸಕಾರಾತ್ಮಕ ಸಂಕೇತವಾಗಿದೆ. ಜನರು ಸುರಕ್ಷಿತವಾಗಿರಲಿ, ದೇಶದ ಆರ್ಥಿಕ ವ್ಯವಹಾರ ವೇಗ ಪಡೆಯಲಿ ಎಂಬುದು ದೇಶದ ಜನತೆಯ ಆಕಾಂಕ್ಷೆಯಾಗಿದೆ. ನಿಮಗೆ ಗೊತ್ತೇ ಇದೆ – ಮನದ ಮಾತಿನಲ್ಲಿ ಕೆಲವು ವಿಷಯಗಳನ್ನು ಪ್ರಸ್ತಾಪಿಸದೇ ಇರಲು ಸಾಧ್ಯವಿಲ್ಲ. ಅವು – ‘ಸ್ವಚ್ಛತಾ ಆಂದೋಲನ’ ವನ್ನು ನಾವು ಮರೆಯಬಾರದು. ಸಿಂಗಲ್ ಯೂಸ್ ಪ್ಲಾಸ್ಟಿಕ್ ಆಂದೋಲನದ ವೇಗ ಹೆಚ್ಚಿಸಬೇಕಿದೆ, ವೋಕಲ್ ಫಾರ್ ಲೋಕಲ್ ಎಂಬ ಮಂತ್ರ ನಮ್ಮ ಜವಾಬ್ದಾರಿಯಾಗಿದೆ, ಸ್ವಾವಲಂಬಿ ಭಾರತ ಅಭಿಯಾನಕ್ಕೆ ತನುಮನದಿಂದ ಒಗ್ಗೂಡಬೇಕಿದೆ. ನಮ್ಮೆಲ್ಲರ ಪ್ರಯತ್ನದಿಂದಲೇ ದೇಶ ಅಭಿವೃದ್ಧಿಯ ಹೊಸ ಉತ್ತುಂಗಕ್ಕೆರಲಿದೆ. ಇದೇ ಆಶಯದೊಂದಿಗೆ ನಾನು ನಿಮ್ಮಿಂದ ವಿದಾಯ ಪಡೆಯುತ್ತೇನೆ. ಅನಂತ ಧನ್ಯವಾದಗಳು.  

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
Prime Minister condoles passing away of Shri MT Vasudevan Nair
December 26, 2024

The Prime Minister, Shri Narendra Modi has condoled the passing away of Shri MT Vasudevan Nair Ji, one of the most respected figures in Malayalam cinema and literature. Prime Minister Shri Modi remarked that Shri MT Vasudevan Nair Ji's works, with their profound exploration of human emotions, have shaped generations and will continue to inspire many more.

The Prime Minister posted on X:

“Saddened by the passing away of Shri MT Vasudevan Nair Ji, one of the most respected figures in Malayalam cinema and literature. His works, with their profound exploration of human emotions, have shaped generations and will continue to inspire many more. He also gave voice to the silent and marginalised. My thoughts are with his family and admirers. Om Shanti."