ಸುಮಾರು 1000 ವರ್ಷಗಳಷ್ಟು ಹಳೆಯದಾದ ಅವಲೋಕಿತೇಶ್ವರ ಪದ್ಮಪಾಣಿಯನ್ನು ಮರಳಿ ತಂದಿರುವುದು ಅಪಾರ ಸಂತೋಷದ ವಿಷಯ: ಪ್ರಧಾನಿ
2013ರ ವರೆಗೆ ಸುಮಾರು 13 ವಿಗ್ರಹಗಳನ್ನು ಭಾರತಕ್ಕೆ ತರಲಾಗಿತ್ತು. ಆದರೆ, ಕಳೆದ ಏಳು ವರ್ಷಗಳಲ್ಲಿ, ಭಾರತವು 200 ಕ್ಕೂ ಹೆಚ್ಚು ಅಮೂಲ್ಯ ಪ್ರತಿಮೆಗಳನ್ನು ಯಶಸ್ವಿಯಾಗಿ ಮರಳಿ ತಂದಿದೆ: ಪ್ರಧಾನಿ
ಭಾರತೀಯ ಹಾಡುಗಳನ್ನು ಲಿಪ್ ಸಿಂಕ್ ಮಾಡುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಸೃಷ್ಟಿಸಿದ ಕಿಲಿ ಪಾಲ್ ಮತ್ತು ನೀಮಾ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪಿಸಿದ್ದಾರೆ
ನಮ್ಮ ಮಾತೃಭಾಷೆ ನಮ್ಮ ತಾಯಿಯಂತೆ ನಮ್ಮ ಜೀವನವನ್ನು ರೂಪಿಸುತ್ತದೆ: ಪ್ರಧಾನಿ ಮೋದಿ
ನಾವು ಹೆಮ್ಮೆಯಿಂದ ನಮ್ಮ ಮಾತೃಭಾಷೆಯಲ್ಲಿ ಮಾತನಾಡಬೇಕು: ಪ್ರಧಾನಿ ಮೋದಿ
ಕಳೆದ ಏಳು ವರ್ಷಗಳಲ್ಲಿ, ಆಯುರ್ವೇದದ ಪ್ರಯೋಜನಗಳನ್ನು ಉತ್ತೇಜಿಸಲು ಹೆಚ್ಚಿನ ಗಮನವನ್ನು ನೀಡಲಾಗಿದೆ: ಪ್ರಧಾನಿ ಮೋದಿ
ನೀವು ಭಾರತದಲ್ಲಿ ಎಲ್ಲಿಗೆ ಹೋದರೂ, ಸ್ವಚ್ಛತೆಯ ಕಡೆಗೆ ಕೆಲವು ಪ್ರಯತ್ನಗಳನ್ನು ಮಾಡುವುದನ್ನು ನೀವು ಕಾಣಬಹುದು: ಪ್ರಧಾನಮಂತ್ರಿ
ಪಂಚಾಯತ್‌ನಿಂದ ಸಂಸತ್ತಿನವರೆಗೆ, ನಮ್ಮ ದೇಶದ ಮಹಿಳೆಯರು ಹೊಸ ಎತ್ತರವನ್ನು ತಲುಪುತ್ತಿದ್ದಾರೆ: ಯುವಕರಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಕುಟುಂಬಗಳಿಗೆ ಪ್ರಧಾನಿ ಮೋದಿ ಮನವಿ: ಪ್ರಧಾನಿ ಮೋದಿ

ನನ್ನ ಪ್ರಿಯ ದೇಶಬಾಂಧವರೆ, ನಮಸ್ಕಾರ ಮನದ ಮಾತಿಗೆ ಮತ್ತೊಮ್ಮೆ ತಮ್ಮೆಲ್ಲರಿಗೂ ಸ್ವಾಗತ. ಇಂದು ಮನದ ಮಾತಿನ ಆರಂಭವನ್ನು ನಾವು ಭಾರತದ ಸಫಲತೆಯ ವಿಚಾರದೊಂದಿಗೆ ಆರಂಭಿಸೋಣ. ಈ ತಿಂಗಳ ಆರಂಭದಲ್ಲಿ ಭಾರತ ಇಟಲಿಯಿಂದ ತನ್ನ ಬಹು ಅಮೂಲ್ಯವಾದ ಪರಂಪರಾಗತ ಆಸ್ತಿಯೊಂದನ್ನು ಮರಳಿ ಪಡೆಯುವಲ್ಲಿ ಸಫಲವಾಗಿದೆ.  ಅದೇನೆಂದರೆ ಅವಲೋಕಿತೇಶ್ವರ ಪದ್ಮಪಾಣಿಯ ಪ್ರತಿಮೆ. ಇದು ಸಾವಿರ ವರ್ಷಕ್ಕಿಂತ ಹಳೆಯದ್ದು. ಈ ಮೂರ್ತಿ ಕೆಲ ವರ್ಷಗಳ ಹಿಂದೆ ಬಿಹಾರದಲ್ಲಿ ಗಯಾ ದೇವಿಯ ಸ್ಥಳವಾದ ಕುಂಡಲಪುರ ದೇವಾಲಯದಿಂದ ಕದಿಯಲಾಗಿತ್ತು.  ಆದರೆ ಬಹಳ ಪರಿಶ್ರಮದ ನಂತರ ಈಗ ಭಾರತಕ್ಕೆ ಈ ಪ್ರತಿಮೆ ಮರಳಿ ದೊರೆತಿದೆ. ಹೀಗೆಯೇ ಕೆಲ ವರ್ಷಗಳ ಹಿಂದೆ ತಮಿಳುನಾಡಿನ ವೆಲ್ಲೂರಿನಿಂದ ಭಗವಾನ್ ಆಂಜನೇಯರ್  ಹನುಮಂತ ದೇವರ ಪ್ರತಿಮೆ ಕಳ್ಳತನವಾಗಿತ್ತು. ಹನುಮಂತ ದೇವರ ಈ ಪ್ರತಿಮೆ ಕೂಡ 600-700 ವರ್ಷ ಪುರಾತನವಾದದ್ದು. ಈ ತಿಂಗಳ ಆರಂಭದಲ್ಲಿ ಆಸ್ಟ್ರೇಲಿಯಾದಲ್ಲಿ ನಮಗೆ ಇದು ಲಭಿಸಿತು.

ಸ್ನೇಹಿತರೆ, ಸಾವಿರಾರು ವರ್ಷಗಳ ನಮ್ಮ ಇತಿಹಾಸದಲ್ಲಿ ದೇಶದ ಮೂಲೆ ಮೂಲೆಗಳಲ್ಲಿ ಒಂದಕ್ಕಿಂತ ಒಂದು ಅಪ್ರತಿಮ ಮೂರ್ತಿಗಳು ನಿರ್ಮಾಣಗೊಳ್ಳುತ್ತಿದ್ದವು, ಇದರಲ್ಲಿ ಶೃದ್ಧೆಯಿತ್ತು, ಸಾಮರ್ಥ್ಯವಿತ್ತು, ಕೌಶಲ್ಯವಿತ್ತು ಮತ್ತು ವಿವಿಧತೆಯಿಂದ ಕೂಡಿತ್ತು. ಅಲ್ಲದೆ ನಮ್ಮ ಪ್ರತಿಯೊಂದು ಮೂರ್ತಿಯ ಇತಿಹಾಸದಲ್ಲಿ ಆಯಾ ಕಾಲದ ಪ್ರಭಾವವೂ ಕಂಡುಬರುತ್ತದೆ. ಇದು ಭಾರತದ ಶಿಲ್ಪಕಲೆಯ ಅಪರೂಪದ ಉದಾಹರಣೆಯಂತೂ ಆಗಿದೆಯಲ್ಲದೆ, ಇದರೊಂದಿಗೆ ನಮ್ಮ ಶೃದ್ಧೆಯೂ ಮಿಳಿತವಾಗಿತ್ತು. ಆದರೆ ಭೂತ ಕಾಲದಲ್ಲಿ ಬಹಳಷ್ಟು ಮೂರ್ತಿಗಳು ಕಳ್ಳತನದಿಂದು ಭಾರತದಿಂದ ಹೊರ ಹೋಗುತ್ತಲೇ ಇದ್ದವು. ಕೆಲವೊಮ್ಮೆ ಈ ದೇಶ ಕೆಲವೊಮ್ಮೆ ಆ ದೇಶದಲ್ಲಿ ಈ ಮೂರ್ತಿಗಳು ಮಾರಾಟಗೊಳ್ಳಲ್ಪಡುತ್ತಿದ್ದವು. ಅವರಿಗೆ ಇವು ಕಲಾಕೃತಿಗಳು ಮಾತ್ರ ಆಗಿದ್ದವು. ಅದರ ಇತಿಹಾಸ ಮತ್ತು ಶೃದ್ಧೆ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. ಈ ಮೂರ್ತಿಗಳನ್ನು ಮತ್ತೆ ತರುವುದು ಭಾರತ ಮಾತೆಯೆಡೆಗೆ ನಮ್ಮ ಕರ್ತವ್ಯವಾಗಿದೆ. ಈ ಮೂರ್ತಿಗಳಲ್ಲಿ ಭಾರತದ ಆತ್ಮ ಮತ್ತು ಶೃದ್ಧೆಯ ಅಂಶವಿದೆ. ಇವುಗಳಿಗೆ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವೂ ಇದೆ. ಈ ಕರ್ತವ್ಯವನ್ನು ಅರಿತು ಭಾರತ ತನ್ನ ಪ್ರಯತ್ನ ಮುಂದುವರಿಸಿತು. ಇದಕ್ಕೆ ಮತ್ತೊಂದು ಕಾರಣ ಕಳ್ಳತನ ಮಾಡುವ ಪ್ರವೃತ್ತಿಯವರಲ್ಲೂ ಒಂದು ಬಗೆಯ ಭಯ ಹುಟ್ಟಿತು. ಯಾವ ದೇಶಗಳಲ್ಲಿ ಈ ಮೂರ್ತಿಗಳನ್ನು ಕಳ್ಳತನ ಮಾಡಿ ತೆಗೆದುಕೊಂಡು ಹೋಗಲಾಗಿತ್ತೋ ಆ ದೇಶಗಳಿಗೂ ಭಾರತದೊಂದಿಗೆ ಸಂಬಂಧ ವೃದ್ಧಿಯ ನವಿರಾದ ರಾಜತಂತ್ರದ ಮಾರ್ಗದಲ್ಲಿ ಇದರ ಮಹತ್ವ ಬಹು ದೊಡ್ಡದು ಎಂಬುದರ ಅರಿವಾಗಿತ್ತು. ಏಕೆಂದರೆ ಇದರೊಂದಿಗೆ ಭಾರತದ ಭಾವನೆಗಳು, ಧಾರ್ಮಿಕ ಶೃದ್ಧೆ ಮಿಳಿತವಾಗಿದೆ. ಅಲ್ಲದೆ ಒಂದು ರೀತಿ ಜನರಿಂದ ಜನರ ಸಂಬಂಧಗಳಲ್ಲೂ ಇದು ಬಹು ದೊಡ್ಡ ಶಕ್ತಿಯ ಸಂಚಲನ ಉಂಟುಮಾಡುತ್ತದೆ. ಇದೀಗ ಕೆಲ ದಿನಗಳ ಹಿಂದೆ ನೀವು ನೋಡಿರಬಹುದು – ಕಾಶಿಯಿಂದ ಕಳ್ಳತನಗೊಂಡಿದ್ದ ಮಾತೆ ಅನ್ನಪೂರ್ಣೆಯ ಪ್ರತಿಮೆಯನ್ನು ಮರಳಿ ತರಲಾಗಿತ್ತು. ಇದು ಭಾರತದ ಬಗ್ಗೆ ಬದಲಾಗುತ್ತಿರುವ ಜಾಗತಿಕ ದೃಷ್ಟಿಕೋನಕ್ಕೆ ಒಂದು ಉದಾಹರಣೆಯಾಗಿದೆ. 2013 ರವರೆಗೆ ಸುಮಾರು 13 ಪ್ರತಿಮೆಗಳು ಭಾರತಕ್ಕೆ ಹಿಂದಿರುಗಿ ಬಂದಿವೆ.

ಆದರೆ ಕಳೆದ 7 ವರ್ಷಗಳಲ್ಲಿ 200 ಕ್ಕೂ ಹೆಚ್ಚು ಬಹು ಅಮೂಲ್ಯ ಪ್ರತಿಮೆಗಳನ್ನು ಭಾರತ ಸಫಲವಾಗಿ ಮರಳಿ ಸ್ವದೇಶಕ್ಕೆ ತಂದಿದೆ. ಅಮೇರಿಕಾ, ಬ್ರಿಟನ್, ಹಾಲೆಂಡ್, ಫ್ರಾನ್ಸ್, ಕೆನಡಾ, ಜರ್ಮನಿ, ಸಿಂಗಾಪೂರ್, ಹೀಗೆ ಅನೇಕ ದೇಶಗಳು ಭಾರತದ ಈ ಭಾವನೆಗಳನ್ನು ಅರಿತಿವೆ ಮತ್ತು ಮೂರ್ತಿಗಳನ್ನು ಮರಳಿ ತರುವಲ್ಲಿ ನಮಗೆ ಸಹಾಯ ಮಾಡಿವೆ. ನಾನು ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಅಮೇರಿಕಕ್ಕೆ ತೆರಳಿದಾಗ ಅಲ್ಲಿ ನನಗೆ ಬಹಳ ಪುರಾತನವಾದ ಹಲವಾರು ಪ್ರತಿಮೆಗಳು ಮತ್ತು  ಸಾಂಸ್ಕೃತಿಕವಾಗಿ ಮಹತ್ವಪೂರ್ಣವಾದ ಅನೇಕ ವಸ್ತುಗಳು ದೊರೆತವು. ದೇಶದ ಬಹು ಅಮೂಲ್ಯ ಪರಂಪರಾಗತ ವಸ್ತು ಮರಳಿ ಸಿಕ್ಕಾಗ, ಇತಿಹಾಸದ ಬಗ್ಗೆ ಶೃದ್ಧೆಯುಳ್ಳವರು, ಪುರಾತತ್ವ ಶಾಸ್ತ್ರದಲ್ಲಿ ಶೃದ್ಧೆಯುಳ್ಳವರು, ಶೃದ್ಧೆ ಮತ್ತು ಸಂಸ್ಕೃತಿಯೊಂದಿಗೆ ಸಂಬಂಧ ಹೊಂದಿದವರು ಮತ್ತು ಭಾರತೀಯರಾಗಿ ನಮಗೆಲ್ಲರಿಗೂ ಸಂಭ್ರಮಾನಂದವಾಗುವುದು ಅತ್ಯಂತ ಸಹಜ.

ಸ್ನೇಹಿತರೆ, ಭಾರತೀಯ ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಬಗ್ಗೆ ಮಾತನಾಡುತ್ತಾ ಇಂದು ಮನದ ಮಾತಿನಲ್ಲಿ ನಾನು ನಿಮಗೆ ಇಬ್ಬರು ವ್ಯಕ್ತಿಗಳೊಂದಿಗೆ ಭೇಟಿ ಮಾಡಿಸಬಯಸುತ್ತೇನೆ. ಈ ಮಧ್ಯೆ, ಫೇಸ್ ಬುಕ್, ಟ್ವಿಟ್ಟರ್ ಮತ್ತು ಇನ್ಸ್ಟಾಗ್ರಾಂ ನಲ್ಲಿ ತಾಂಜಾನಿಯಾದ ಇಬ್ಬರು ಸೋದರ ಸೋದರಿಯರಾದ ಕಿಲಿ ಪಾಲ್ ಮತ್ತು ನೀಮಾ ಅವರು ಬಹಳ ಚರ್ಚೆಯಲ್ಲಿದ್ದಾರೆ. ನೀವೂ ಅವರ ಬಗ್ಗೆ ಖಂಡಿತಾ ಕೇಳಿರುತ್ತೀರಿ ಎಂದು ನನಗೆ ನಂಬಿಕೆಯಿದೆ. ಅವರಲ್ಲಿ ಭಾರತೀಯ ಸಂಗೀತದ ಬಗ್ಗೆ ಒಂದು ಬಗೆಯ ಹುರುಪಿದೆ, ಒಂದು ಬಗೆಯ ಹುಚ್ಚಿದೆ ಮತ್ತು ಇದರಿಂದಾಗಿಯೇ ಅವರು ಬಹಳ ಜನಪ್ರಿಯವಾಗಿದ್ದಾರೆ. ಅವರು ಲಿಪ್ ಸಿಂಕ್ ಮಾಡುವ ರೀತಿಯಿಂದ ಅವರು ಇದಕ್ಕಾಗಿ ಅದೆಷ್ಟು ಶ್ರಮಪಡುತ್ತಿದ್ದಾರೆ ಎಂಬುದರ ಅರಿವಾಗುತ್ತದೆ. ಇತ್ತೀಚೆಗೆ, ಗಣರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ರಾಷ್ಟ್ರಗೀತೆ ‘ಜನ ಗಣ ಮನ’ ಹಾಡುತ್ತಿರುವ ಅವರ ವಿಡಿಯೋ ಬಹಳ ವೈರಲ್ ಆಗಿತ್ತು. ಕೆಲ ದಿನಗಳ ಹಿಂದೆ ಅವರು ಲತಾ ದೀದಿಯವರ ಹಾಡೊಂದನ್ನು ಹಾಡಿ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಅರ್ಪಿಸಿದ್ದರು. ನಾನು ಈ ಅದ್ಭುತ ಕ್ರಿಯಾತ್ಮಕತೆಗೆ ಈ ಸೋದರ ಸೋದರಿ ಕಿಲಿ ಮತ್ತು ನೀಮಾ ಅವರ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತಪಡಿಸುತ್ತೇನೆ. ಕೆಲ ದಿನಗಳ ಹಿಂದೆ ತಾಂಜಾನಿಯಾದಲ್ಲಿ ಭಾರತೀಯ ರಾಯಭಾರಿ ಕಛೇರಿಯಲ್ಲಿ ಇವರನ್ನು ಸನ್ಮಾನಿಸಲಾಗಿದೆ. ಭಾರತೀಯ ಸಂಗೀತದ ಜಾದೂ ಅಷ್ಟು ಅದ್ಭುತವಾಗಿದೆ. ಎಲ್ಲರ ಮನಸೂರೆಗೊಳ್ಳುತ್ತದೆ.  ಕೆಲ ವರ್ಷಗಳ ಹಿಂದೆ ವಿಶ್ವದ 150 ಕ್ಕೂ ಹೆಚ್ಚು ದೇಶಗಳ ಗಾಯಕರು, ಸಂಗೀತಗಾರರು ತಂತಮ್ಮ ವೇಷ ಭೂಷಣಗಳೊಂದಿಗೆ ಪೂಜ್ಯ ಬಾಪು ಪ್ರಿಯ ಮಹಾತ್ಮಾ ಗಾಂಧಿಯವರ ಪ್ರಿಯ ಭಜನೆ ವೈಷ್ಣವ ಜನತೋ ಹಾಡುವ ಸಫಲ ಪ್ರಯತ್ನವನ್ನು ಮಾಡಿದ್ದರು     

ಇಂದು ಭಾರತ ತನ್ನ ಸ್ವಾತಂತ್ರ್ಯದ 75 ನೇ ವರ್ಷದ ಮಹತ್ವಪೂರ್ಣ ಪರ್ವವನ್ನು ಆಚರಿಸುತ್ತಿರುವಾಗ ದೇಶ ಭಕ್ತಿ ಗೀತೆಗಳಲ್ಲೂ ಇಂಥ ಪ್ರಯತ್ನಗಳನ್ನು ಮಾಡಬಹುದಾಗಿದೆ. ವಿದೇಶಿ ನಾಗರಿಕರು, ಅಲ್ಲಿಯ ಪ್ರಸಿದ್ಧ ಗಾಯಕರನ್ನು ಭಾರತೀಯ ದೇಶ ಭಕ್ತಿ ಗೀತೆಗಳನ್ನು ಹಾಡಲು ಆಮಂತ್ರಿಸಬಹುದಾಗಿದೆ. ಇಷ್ಟೇ ಅಲ್ಲ ತಾಂಜೇನಿಯಾದ ಕಿಲಿ ಮತ್ತು ನೀಮಾ ಭಾರತೀಯ ಗೀತೆಗಳೊಂದಿಗೆ ಹೀಗೆ ಲಿಪ್ ಸಿಂಕ್ ಮಾಡಬಹುದಾದರೆ ನಮ್ಮ ದೇಶದ ಹಲವಾರು ಭಾಷೆಗಳಲ್ಲಿ ಅನೇಕ ಬಗೆಯ ಗೀತೆಗಳಿವೆ. ನಾವು ಗುಜರಾತಿ ಮಗು ತಮಿಳು ಗೀತೆಗೆ, ಕೇರಳದ ಮಗು ಅಸ್ಸಾಂ ಗೀತೆಗೆ, ಕನ್ನಡದ ಮಗು ಜಮ್ಮು ಮತ್ತು ಕಾಶ್ಮೀರದ ಗೀತೆಗೆ  ಲಿಪ್ ಸಿಂಕ್ ಮಾಡಬಹುದಲ್ಲವೆ. ನಾವು ‘ಏಕ್ ಭಾರತ್ ಶ್ರೇಷ್ಠ ಭಾರತ’ ಎಂಬ ಪರಿಸರವನ್ನು ಅನುಭವಿಸುವ ಇಂತಹ ವಾತಾವರಣ ಸೃಷ್ಟಿಸಬಹುದು. ಇಷ್ಟೇ ಅಲ್ಲ ನಾವು ಅಜಾದಿ ಕೆ ಅಮೃತ್ ಮಹೋತ್ಸವವನ್ನು ವಿಭಿನ್ನ ರೀತಿಯಲ್ಲಿ ಖಂಡಿತ ಆಚರಿಸಬಹುದಾಗಿದೆ. ಭಾರತೀಯ ಭಾಷೆಗಳ ಸುಪ್ರಸಿದ್ಧ ಗೀತೆಗಳನ್ನು ನೀವು ನಿಮ್ಮದೇ ರೀತಿಯಲ್ಲಿ ವಿಡಿಯೋ ಚಿತ್ರೀಕರಿಸಿ ಎಂದು ದೇಶದ ಯುವಜನತೆಯನ್ನು ನಾನು ಆಹ್ವಾನಿಸುತ್ತೇನೆ. ಇದರಿಂದ ನೀವು ಬಹಳ ಪ್ರಸಿದ್ಧಿ ಹೊಂದುತ್ತೀರಿ. ಅಲ್ಲದೆ ದೇಶದ ವಿವಿಧತೆ ಬಗ್ಗೆ ಹೊಸ ಪೀಳಿಗೆಗೆ ಪರಿಚಯವೂ ಆಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈಗ ಕೆಲವು ದಿನಗಳ ಹಿಂದಷ್ಟೇ, ನಾವು ಮಾತೃಭಾಷಾ ದಿನವನ್ನು ಆಚರಿಸಿದೆವು. ವಿದ್ವಾಂಸರು ಮಾತೃಭಾಷೆ ಶಬ್ದ ಎಲ್ಲಿಂದ ಬಂದಿತು, ಯಾವರೀತಿ ಅದರ ಉತ್ಪತ್ತಿಯಾಯಿತು, ಎಂಬ ಕುರಿತು ಬಹಳ ಅಕಾಡಮಿಕ್ ಇನ್ ಪುಟ್ ನೀಡಬಲ್ಲರು. ಯಾವ ರೀತಿ ನಮ್ಮ ತಾಯಿ ನಮ್ಮ ಜೀವನವನ್ನು ರೂಪಿಸುತ್ತಾಳೆಯೋ ಅದೇ ರೀತಿ ಮಾತೃಭಾಷೆ ಕೂಡಾ ನಮ್ಮ ಜೀವನವನ್ನು ರೂಪಿಸುತ್ತದೆ ಎಂದು ನಾನು ಹೇಳುತ್ತೇನೆ. ತಾಯಿ ಮತ್ತು ಮಾತೃಭಾಷೆ ಎರಡೂ ಜೀವನದ ಅಡಿಪಾಯವನ್ನು ಬಲಿಷ್ಠಗೊಳಿಸುತ್ತವೆ, ಚಿರಂಜೀವಿಯನ್ನಾಗಿಸುತ್ತವೆ. ಯಾವರೀತಿ ನಾವು ನಮ್ಮ ತಾಯಿಯನ್ನು ಬಿಡಲಾರೆವೋ ಅದೇ ರೀತಿ ಮಾತೃಭಾಷೆಯನ್ನು ಕೂಡಾ ಬಿಡಲಾರೆವು. ನನಗೆ ಕೆಲ ವರ್ಷಗಳ ಹಿಂದಿನ ಒಂದು ವಿಷಯ ನೆನಪಿನಲ್ಲಿದೆ. ನಾನು ಅಮೆರಿಕಾಗೆ ಹೋಗಬೇಕಾಯಿತು. ಅಲ್ಲಿ ವಿವಿಧ ಕುಟುಂಬಗಳಿಗೆ ಭೇಟಿ ನೀಡುವ ಅವಕಾಶ ದೊರೆಯುತ್ತಿತ್ತು, ಹಾಗೆಯೇ ಒಮ್ಮೆ ತೆಲುಗು ಭಾಷೆ ಮಾತನಾಡುವ ಕುಟುಂಬಕ್ಕೆ ಭೇಟಿ ನೀಡುವ ಅವಕಾಶ ದೊರೆತಿತ್ತು ಅಲ್ಲಿ ಬಹಳ ಸಂತೋಷ ನೀಡುವ ದೃಶ್ಯವೊಂದು ನನಗೆ ಕಂಡುಬಂದಿತು. ಅವರು ನನಗೆ ಹೇಳಿದ್ದೇನೆಂದರೆ, ಅವರು ಕುಟುಂಬದಲ್ಲಿ ಒಂದು ನಿಯಮದ ಪಾಲನೆ ಮಾಡುತ್ತಾರೆ ಅದೇನೆಂದರೆ ನಗರದಲ್ಲೇ ಇದ್ದಲ್ಲಿ, ಎಷ್ಟೇ ಕೆಲಸ ಕಾರ್ಯಗಳಿದ್ದರೂ, ಕುಟುಂಬದ ಪ್ರತಿಯೊಬ್ಬ ಸದಸ್ಯನೂ ರಾತ್ರಿಯ ಊಟದ ಸಮಯದಲ್ಲಿ ಒಟ್ಟಿಗೆ ಕುಳಿತು ಊಟ ಮಾಡಬೇಕು ಮತ್ತು ಪರಸ್ಪರರೊಂದಿಗೆ ಕಡ್ಡಾಯವಾಗಿ ತೆಲುಗು ಭಾಷೆಯಲ್ಲಿ ಮಾತ್ರಾ ಮಾತನಾಡಬೇಕು. ಅಲ್ಲಿಯೇ ಜನ್ಮತಾಳಿದ ಮಕ್ಕಳಿಗೂ ಅವರ ಮನೆಯಲ್ಲಿ ಇದೇ ನಿಯಮ ಅನ್ವಯವಾಗುತ್ತದೆ.  ತಮ್ಮ ಮಾತೃಭಾಷೆಯ ಬಗ್ಗೆ ಅವರ ಈ ಪ್ರೀತಿಯನ್ನು ನೋಡಿ, ಈ ಕುಟುಂಬದಿಂದ ನಾನು ಬಹಳ ಪ್ರಭಾವಿತನಾದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಸ್ವಾತಂತ್ರ್ಯಬಂದು 75 ವರ್ಷಗಳು ಕಳೆದಿದ್ದರೂ, ಕೆಲವರು ಇನ್ನೂ ತಮ್ಮ ಭಾಷೆ, ತಮ್ಮ ಉಡುಗೆ-ತೊಡುಗೆ, ತಮ್ಮಆಹಾರ-ಪಾನೀಯ ಕುರಿತಂತೆ ಒಂದು ರೀತಿಯ ಸಂಕೋಚ ಸ್ವಭಾವದಿಂದ, ಮಾನಸಿಕ ದ್ವಂದ್ವದೊಂದಿಗೆ ಜೀವಿಸುತ್ತಿದ್ದಾರೆ, ವಿಶ್ವದಲ್ಲಿ ಬೇರೆಲ್ಲಿಯೂ ಈ ರೀತಿ ಇಲ್ಲ. ನಮ್ಮ ಮಾತೃಭಾಷೆಯಲ್ಲಿ ನಾವು ಹೆಮ್ಮೆಯಿಂದ ಮಾತನಾಡಬೇಕು. ನಮ್ಮ ಭಾರತವಂತೂ ಭಾಷೆಯ ವಿಷಯದಲ್ಲಿ ಅದೆಷ್ಟು ಶ್ರೀಮಂತವಾಗಿದೆಯೆಂದರೆ ಇದಕ್ಕೆ ಹೋಲಿಕೆಯೇ ಇಲ್ಲ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಛ್ ನಿಂದ ಕೋಹಿಮಾದವರೆಗೆ ನೂರಾರು ಭಾಷೆಗಳು, ಸಾವಿರಾರು ಉಪ ಭಾಷೆಗಳು ಒಂದಕ್ಕಿಂತ ಮತ್ತೊಂದು ಭಿನ್ನವಾಗಿದ್ದರೂ ಕೂಡಾ ಸಂಯೋಜಿತವಾಗಿವೆ. ಭಾಷೆಗಳು ಅನೇಕ–ಭಾವ ಒಂದೇ, ಇದೇ ನಮ್ಮ ಭಾಷೆಗಳಲ್ಲಿನ ಅತ್ಯಂತ ಸುಂದರವಾದ ಅಂಶ. ಶತಮಾನಗಳಿಂದ ನಮ್ಮ ಭಾಷೆಗಳು ಪರಸ್ಪರರಿಂದ ಕಲಿಯುತ್ತಿವೆ, ಪರಿಷ್ಕೃತಗೊಳ್ಳುತ್ತಿವೆ ಮತ್ತು ಪರಸ್ಪರ ಅಭಿವೃದ್ಧಿ ಹೊಂದುತ್ತಿವೆ. ಭಾರತದಲ್ಲಿ ಅತ್ಯಂತ ಹಳೆಯ ಭಾಷೆ ತಮಿಳು ಭಾಷೆಯಾಗಿದೆ, ಪ್ರಪಂಚದ ಇಷ್ಟು ದೊಡ್ಡ ಪರಂಪರೆ ನಮ್ಮಲ್ಲಿದೆ ಎನ್ನುವುದು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕಾದ ವಿಷಯ. ಅದೇ ರೀತಿ ಅದೆಷ್ಟು ಪುರಾಣ ಗ್ರಂಥಗಳಿವೆಯೋ, ಅವುಗಳಲ್ಲಿ ಅಭಿವ್ಯಕ್ತಿ ಕೂಡಾ ನಮ್ಮ ಸಂಸ್ಕೃತ ಭಾಷೆಯಲ್ಲಿಯೇ ಇದೆ. ಭಾರತದ ಜನತೆ ಸುಮಾರು 121 ಪ್ರಕಾರದ ಮಾತೃ ಭಾಷೆಗಳಿಂದ ಸಂಪರ್ಕಿತರಾಗಿದ್ದೇವೆಂದು ನಮಗೆ ಹೆಮ್ಮೆಯೆನಿಸುತ್ತದೆ. ಇವುಗಳ ಪೈಕಿ 14 ಭಾಷೆಗಳಲ್ಲಂತೂ ಒಂದು ಕೋಟಿಗೂ ಅಧಿಕ ಜನರು ತಮ್ಮ ದೈನಂದಿನ ಜೀವನದಲ್ಲಿ ಮಾತನಾಡುತ್ತಾರೆ. ಅಂದರೆ, ಅನೇಕ ಐರೋಪ್ಯ ದೇಶಗಳು ಹೊಂದಿರುವ ಒಟ್ಟು ಜನಸಂಖ್ಯೆಗಿಂತ ಹೆಚ್ಚು ಜನರು ನಮ್ಮ ದೇಶದಲ್ಲಿ 14 ಬೇರೆ ಬೇರೆ ಭಾಷೆಗಳಿಂದ ಪರಸ್ಪರ ಸಂಪರ್ಕಿತರಾಗಿದ್ದಾರೆ. 2019 ರಲ್ಲಿ ಹಿಂದೀ ಭಾಷೆಯು ವಿಶ್ವದಲ್ಲಿ ಅತಿ ಹೆಚ್ಚಾಗಿ ಮಾತನಾಡುತ್ತಿರುವ ಭಾಷೆಗಳ ಪೈಕಿ ಮೂರನೇ ಸ್ಥಾನದಲ್ಲಿತ್ತು. ಈ ಬಗ್ಗೆ ಕೂಡಾ ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡಬೇಕು. ಭಾಷೆ ಎನ್ನುವುದು ಕೇವಲ ಅಭಿವ್ಯಕ್ತಪಡಿಸುವ ಮಾಧ್ಯಮ ಮಾತ್ರವಲ್ಲ, ಭಾಷೆ ಎನ್ನುವುದು ಸಮಾಜದ ಸಂಸ್ಕೃತಿ ಮತ್ತು ಪರಂಪರೆಯನ್ನು ಕೂಡಾ ಉಳಿಸಿ ಬೆಳೆಸುವ ಕಾರ್ಯ ನಿರ್ವಹಿಸುತ್ತದೆ. ತಮ್ಮ ಭಾಷೆಯ ಪರಂಪರೆಯನ್ನು ಉಳಿಸುವ ಬೆಳೆಸುವ ಇಂತಹ ಕಾರ್ಯವನ್ನು ಸೂರಿನಾಮ್ ನಲ್ಲಿ ಸುರ್ಜನ್ ಪರೋಹೀ ಅವರು ಮಾಡುತ್ತಿದ್ದಾರೆ. ಈ ತಿಂಗಳ ಎರಡರಂದು ಅವರು 84ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಪೂರ್ವಜರು ಅನೇಕ ವರ್ಷಗಳ ಹಿಂದೆಯೇ, ಸಾವಿರಾರು ಕಾರ್ಮಿಕರೊಂದಿಗೆ ಹೊಟ್ಟೆಪಾಡಿಗಾಗಿ ಸೂರೀನಾಮ್ ಗೆ ಬಂದು ನೆಲೆಸಿದ್ದರು. ಸುರ್ಜನ್ ಪರೋಹಿ ಅವರು ಹಿಂದೀ ಭಾಷೆಯಲ್ಲಿ ಬಹಳ ಸುಂದರವಾಗಿ ಕವಿತೆಗಳನ್ನು ಬರೆಯುತ್ತಾರೆ, ಅಲ್ಲಿನ ರಾಷ್ಟ್ರಕವಿಗಳ ಪೈಕಿ ಇವರ ಹೆಸರು ಕೂಡಾ ಕೇಳಿಬರುತ್ತದೆ. ಅಂದರೆ, ಇಂದಿಗೂ ಅವರ ಹೃದಯದಲ್ಲಿ ಹಿಂದೂಸ್ತಾನ್ ಮಿಡಿಯುತ್ತದೆ, ಅವರ ಕೃತಿಗಳಲ್ಲಿ ಭಾರತೀಯ ಮಣ್ಣಿನ ಘಮ ಹೊರಸೂಸುತ್ತದೆ.   ಸೂರಿನಾಮ್ ನ ಜನತೆ ಸುರ್ಜನ್ ಪರೋಹಿ ಅವರ ಹೆಸರಿನಲ್ಲಿ ಒಂದು ವಸ್ತು ಸಂಗ್ರಹಾಲಯ ಕೂಡಾ ಮಾಡಿದ್ದಾರೆ. 2015 ರಲ್ಲಿ ಇವರನ್ನು ಸನ್ಮಾನಿಸುವ ಅವಕಾಶ ನನಗೆ ದೊರೆತಿದ್ದು ನನ್ನ ಸೌಭಾಗ್ಯವಾಗಿತ್ತು.

ಸ್ನೇಹಿತರೇ, ಇಂದು, ಅಂದರೆ ಫೆಬ್ರವರಿ 27 ಮರಾಠಿ ಭಾಷೆಯ ಹೆಮ್ಮೆಯ ದಿನವೂ ಆಗಿದೆ.

“ಸರ್ವ ಮರಾಠಿ ಬಂಧು ಭಗಿನಿನಾ ಮರಾಠಿ ಭಾಷಾ ದಿನಾಚ್ಯಾ ಹಾರ್ದಿಕ್ ಶುಭೇಚ್ಚಾ”

“ಮರಾಠಿ ಸೋದರ ಸೋದರಿಯರಿಗೆಲ್ಲಾ ಮರಾಠಿ ದಿನದ ಹಾರ್ದಿಕ ಶುಭಾಶಯಗಳು.”

ಈ ದಿನವನ್ನು ಮರಾಠಿ ಭಾಷೆಯ ಕವಿವರ್ಯ, ವಿಷ್ಣು ಬಾಮನ್ ಶಿರ್ವಾಡ್ಕರ್, ಶ್ರೀಮಾನ್ ಕುಸುಮಾಗ್ರಜ್ ಅವರಿಗೆ ಸಮರ್ಪಿಸಲಾಗಿದೆ. ಇಂದು ಕುಸುಮಾಗ್ರಜ್ ಅವರ ಜನ್ಮ ಜಯಂತಿಯೂ ಹೌದು. ಕುಸುಮಾಗ್ರಜ್ ಅವರು ಮರಾಠಿ ಕವಿತೆಗಳನ್ನು ರಚಿಸಿದ್ದಾರೆ, ಅನೇಕ ನಾಟಕಗಳನ್ನು ರಚಿಸಿದ್ದಾರೆ, ಮರಾಠಿ ಸಾಹಿತ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ.

ಸ್ನೇಹಿತರೇ, ನಮ್ಮಲ್ಲಿ ಭಾಷೆಗೆ ತನ್ನದೇ ಆದ ಸೌಂದರ್ಯವಿದೆ, ಮಾತೃಭಾಷೆಗೆ ತನ್ನದೇ ಆದ ವಿಜ್ಞಾನವಿದೆ. ಈ ವಿಜ್ಞಾನವನ್ನು ಅರ್ಥ ಮಾಡಿಕೊಂಡೇ, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ, ಸ್ಥಳೀಯ ಭಾಷೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗಿದೆ. ನಮ್ಮ ವೃತ್ತಿಪರ ಕೋರ್ಸ್ಗಳಲ್ಲಿ ಕೂಡಾ ಸ್ಥಳೀಯ ಭಾಷೆಯಲ್ಲಿ ಶಿಕ್ಷಣ ನೀಡಬೇಕೆಂಬ ಬಗ್ಗೆ ಪ್ರಯತ್ನಗಳು ನಡೆಯುತ್ತಿವೆ. ಸ್ವಾತಂತ್ರ್ಯದ ಅಮೃತ ಕಾಲದಲ್ಲಿ ಇಂತಹ ಪ್ರಯತ್ನಗಳಿಗೆ ನಾವೆಲ್ಲರೂ ಒಂದುಗೂಡಿ ವೇಗ ನೀಡಬೇಕಾಗಿದೆ, ಇದೊಂದು ಸ್ವಾಭಿಮಾನದಕೆಲಸವಾಗಿದೆ. ನೀವು ಯಾವ ಮಾತೃಭಾಷೆ ಮಾತನಾಡುತ್ತೀರೋ ಅದರ ಸೌಂದರ್ಯದ ಬಗ್ಗೆ ಖಂಡಿತವಾಗಿಯೂ ತಿಳಿದುಕೊಳ್ಳಬೇಕೆಂದು ಮತ್ತು ಏನನ್ನಾದರೂ ಬರೆಯಬೇಕೆಂದು ನಾನು ಬಯಸುತ್ತೇನೆ.

ಸ್ನೇಹಿತರೇ, ಕೆಲವೇ ದಿನಗಳ ಹಿಂದೆ, ನನ್ನ ಸ್ನೇಹಿತ, ಕೀನ್ಯಾ ದೇಶದ ಮಾಜಿ ಪ್ರಧಾನ ಮಂತ್ರಿ ರಾಯಿಲಾ ಒಡಿಂಗಾ ಅವರನ್ನು ನಾನು ಭೇಟಿ ಮಾಡಿದ್ದೆ. ಈ ಭೇಟಿಯು ಬಹಳ ಆತ್ಮೀಯವಾಗಿತ್ತು ಮಾತ್ರವಲ್ಲ ಭಾವಪೂರ್ಣವಾಗಿತ್ತು. ನಾನು ಬಹಳ ಉತ್ತಮ ಮಿತ್ರರಾಗಿದ್ದೇವೆ ಆದ್ದರಿಂದ ಬಿಚ್ಚುಮನಸ್ಸಿನಿಂದ ಅನೇಕ ವಿಚಾರಗಳ ಬಗ್ಗೆ ಮಾತುಕತೆ ಆಡುತ್ತೇವೆ. ನಾವಿಬ್ಬರೂ ಮಾತನಾಡುತ್ತಿದ್ದಾಗ, ಒಡಿಂಗಾ ಅವರು ತಮ್ಮ ಮಗಳ ಬಗ್ಗೆ ಹೇಳಿದರು. ಅವರ ಮಗಳು ರೋಸ್ ಮೇರಿಗೆ ಬ್ರೈನ್ ಟ್ಯೂಮರ್ ಆಗಿತ್ತು ಮತ್ತು ಹೀಗಾಗಿ ಆಕೆಗೆ ಶಸ್ತ್ರಚಿಕಿತ್ಸೆ ಮಾಡಬೇಕಾಗಿತ್ತು. ಆದರೆ ಅದರ ಒಂದು ಅಡ್ಡಪರಿಣಾಮ ಉಂಟಾಗಿ ರೋಸ್ ಮೇರಿಯ ಕಣ್ಣುಗಳ ದೃಷ್ಟಿ ಹೆಚ್ಚುಕಡಿಮೆ ನಷ್ಟವಾಗಿತ್ತು, ಕಣ್ಣು ಕಾಣಿಸುತ್ತಿರಲಿಲ್ಲ. ಆ ಹೆಣ್ಣು ಮಗುವಿನ ಪರಿಸ್ಥಿತಿ ಏನಾಗಿರಬಹುದು, ಮತ್ತು ಆಕೆಯ ತಂದೆಯ ಪರಿಸ್ಥಿತಿ ಏನಾಗಿರಬಹುದು ಎಂದು ನಾವು ಊಹಿಸಬಹುದು, ಅವರ ಭಾವನೆಗಳನ್ನು ಅರ್ಥ ಮಾಡಿಕೊಳ್ಳಬಹುದು. ಅವರು ವಿಶ್ವಾದ್ಯಂತ ಆಸ್ಪತ್ರೆಗಳಲ್ಲಿ, ಮಗಳ ಚಿಕಿತ್ಸೆಗಾಗಿ, ಪ್ರಯತ್ನ ಪಡದ ವಿಶ್ವದ ಯಾವುದೇ ದೊಡ್ಡ ದೇಶವಿಲ್ಲ. ವಿಶ್ವದ ದೊಡ್ಡ ದೊಡ್ಡ ದೇಶಗಳಲ್ಲಿ ಪ್ರಯತ್ನಿಸಿದರು, ಆದರೆ ಎಲ್ಲೂ ಫಲ ದೊರೆಯಲಿಲ್ಲ. ಒಂದು ರೀತಿಯಲ್ಲಿ ಎಲ್ಲಾ ಆಸೆಗಳನ್ನೂ ಕೈಬಿಟ್ಟರು, ಮನೆಯಲ್ಲಿ ಒಂದು ರೀತಿಯ ನಿರಾಶಾದಾಯಕ ವಾತಾವರಣ ಸೃಷ್ಟಿಯಾಯಿತು. ಇಷ್ಟರಲ್ಲೇ, ಭಾರತದಲ್ಲಿ ಆಯುರ್ವೇದ ಚಿಕಿತ್ಸೆಗಾಗಿ ಬರುವಂತೆ ಯಾರೋ ಒಬ್ಬರು ಸಲಹೆ ನೀಡಿದರು. ಅವರು ಈವರೆಗೇ ಸಾಕಷ್ಟು ಪ್ರಯತ್ನಗಳನ್ನು ಮಾಡಿಯಾಗಿತ್ತು, ಆದರೂ ಇದನ್ನೂ ಕೂಡಾ ಒಮ್ಮೆ ಪ್ರಯತ್ನಿಸಿ ನೋಡಬಾರದೇಕೆ ಎಂದು ಯೋಚಿಸಿದರು. ಅವರು ಭಾರತಕ್ಕೆ ಬಂದರು, ಕೇರಳದ ಒಂದು ಆಯುರ್ವೇದ ಆಸ್ಪತ್ರೆಯಲ್ಲಿ ತಮ್ಮ ಮಗಳಿಗೆ ಚಿಕಿತ್ಸೆ ಕೊಡಿಸಲು ಆರಂಭಿಸಿದರು. ಸಾಕಷ್ಟು ಸಮಯ ಮಗಳು ಇಲ್ಲಿಯೇ ಇದ್ದರು. ಆಯುರ್ವೇದದ ಚಿಕಿತ್ಸೆಯಿಂದಾಗಿ ರೋಸ್ ಮೇರಿಯವರ  ಕಣ್ಣಿನ ದೃಷ್ಟಿ ಪುನಃ ಸಾಕಷ್ಟು ಮರಳಿ ಬಂದಿತು. ಯಾವ ರೀತಿ ಆಕೆಗೆ ಒಂದು ಹೊಸ ಜೀವನ ದೊರೆಯಿತು, ರೋಸ್ ಮೇರಿ ಜೀವನದಲ್ಲಿ ಹೊಸ ಬೆಳಕು ಮೂಡಿತೆಂದು ನೀವು ಊಹಿಸಬಹುದು. ಇಡೀ ಕುಟುಂಬದಲ್ಲಿ ಹೊಸ ಬೆಳಕು, ಹೊಸ ಜೀವನ ಮೂಡಿತು. ಒಡಿಂಗಾ ಅವರು ಬಹಳ ಭಾವುಕರಾಗಿ ಈ ವಿಚಾರವನ್ನು ನನಗೆ ಹೇಳಿದರು, ಭಾರತದ ಆಯುರ್ವೇದದ ಜ್ಞಾನವನ್ನು ಅವರು ಕೀನ್ಯಾಗೆ ಕೂಡಾ ತಲುಪುವಂತೆ ಮಾಡುವ ತಮ್ಮ ಇಚ್ಛೆಯನ್ನು ಪ್ರಕಟಿಸಿದರು. ಯಾವ ರೀತಿ ಗಿಡಗಳು ಈ ಕಾರ್ಯದಲ್ಲಿ ಉಪಯೋಗಕ್ಕೆಬರುತ್ತದೆಯೋ ಅಂತಹ ಗಿಡಗಳನ್ನು ಬೆಳೆಸುವುದಾಗಿ ಮತ್ತು ಅದರ ಪ್ರಯೋಜನ ಹೆಚ್ಚಿನ ಜನರಿಗೆ ಸಿಗುವಂತೆ ಅವರು ಪ್ರಯತ್ನ ಪಡುವುದಾಗಿ ಅವರು ಹೇಳಿದರು.

ನಮ್ಮ ಭೂಮಿ ಮತ್ತು ಪರಂಪರೆಯಿಂದ ಒಬ್ಬರ ಜೀವನದಲ್ಲಿ ಇಷ್ಟು ದೊಡ್ಡ ಕಷ್ಟ ದೂರವಾಗಿದೆ ಎನ್ನುವುದು ನನಗೆ ಬಹಳ ಸಂತೋಷದ ವಿಷಯವಾಗಿದೆ. ಇದನ್ನು ಕೇಳಿ ನಿಮಗೆ ಕೂಡಾ ಬಹಳ ಸಂತೋಷವಾಗಿರುತ್ತದೆ. ಇದರಿಂದ ಹೆಮ್ಮೆ ಪಡದ ಭಾರತೀಯ ಇರುತ್ತಾನೆಯೇ? ಕೇವಲ ಒಡಿಂಗಾ ಅವರು ಮಾತ್ರವಲ್ಲದೇ, ಪ್ರಪಂಚದ ಲಕ್ಷಾಂತರ ಜನರು ಆಯುರ್ವೇದದಿಂದ ಇಂತಹ ಪ್ರಯೋಜನಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ನಮಗೆಲ್ಲರಿಗೂ ತಿಳಿದಿದೆ.

ಬ್ರಿಟನ್ನಿನ ರಾಜಕುಮಾರ ಚಾರ್ಲ್ಸ್ ಅವರು ಕೂಡಾ ಆಯುರ್ವೇದದ ಬಹು ದೊಡ್ಡ ಪ್ರಶಂಸಕರಾಗಿದ್ದಾರೆ. ಅವರೊಂದಿಗೆ ನಾನು ಭೇಟಿಯಾದಾಗಲೆಲ್ಲ ಅವರು ಆಯುರ್ವೇದದ ಬಗ್ಗೆ ಖಂಡಿತಾ ಪ್ರಸ್ತಾಪಿಸುತ್ತಾರೆ. ಅವರಿಗೆ ಭಾರತದ ಹಲವಾರು ಆಯುರ್ವೇದ ಸಂಸ್ಥೆಗಳ ಬಗ್ಗೆ ಮಾಹಿತಿಯೂ ಇದೆ.

ಸ್ನೇಹಿತರೆ, ಕಳೆದ 7 ವರ್ಷಗಳಲ್ಲಿ ದೇಶದಲ್ಲಿ ಆಯುರ್ವೇದದ ಪ್ರಚಾರ ಮತ್ತು ಪ್ರಸಾರ ಕುರಿತು ಬಹಳಷ್ಟು ಗಮನಹರಿಸಲಾಗಿದೆ. ಆಯುಷ್ ಸಚಿವಾಲಯ ಆರಂಭಿಸುವುದರೊಂದಿಗೆ ಚಿಕಿತ್ಸೆ ಮತ್ತು ಆರೋಗ್ಯ ಕುರಿತು ನಮ್ಮ ಪಾರಂಪರಿಕ ಪದ್ಧತಿಗಳನ್ನು ಜನಪ್ರಿಯಗೊಳಿಸುವ ಸಂಕಲ್ಪಕ್ಕೆ ಮತ್ತಷ್ಟು ಬಲ ದೊರೆತಿದೆ. ಕಳೆದ ಕೆಲ ಸಮಯದಿಂದ ಆಯುರ್ವೇದ ಕ್ಷೇತ್ರದಲ್ಲೂ ಅನೇಕ ಹೊಸ ಸ್ಟಾರ್ಟ್ ಅಪ್ ಗಳು ಆರಂಭವಾಗಿದೆ ಎಂಬ ಕುರಿತು ನನಗೆ ಬಹಳ ಸಂತೋಷವೆನಿಸುತ್ತದೆ. ಇದೇ ತಿಂಗಳ ಆರಂಭದಲ್ಲಿ  ಆಯಷ್ ಸ್ಟಾರ್ಟ್ ಅಪ್ ಚಾಲೆಂಜ್ ಆರಂಭಗೊಂಡಿತ್ತು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುವ ಸ್ಟಾರ್ಟ್ ಅಪ್ ಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿತ್ತು. ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಯುವಜನತೆ ಈ ಸ್ಪರ್ಧೆಯಲ್ಲಿ ಖಂಡಿತ ಭಾಗವಹಿಸಿ ಎಂದು ನಾನು ಆಗ್ರಹಿಸುತ್ತೇನೆ.

ಸ್ನೇಹಿತರೆ, ಒಂದು ಬಾರಿ ಜನರು ಒಗ್ಗೂಡಿ ಏನನ್ನದರೂ ಮಾಡಬೇಕೆಂದು ನಿರ್ಧರಿಸಿದರೆ ಅದ್ಭುತವಾದುದನ್ನು ಮಾಡಿಬಿಡುತ್ತಾರೆ. ಸಮಾಜದಲ್ಲಿ ಜನರ ಪಾಲ್ಗೊಳ್ಳುವಿಕೆಯಿಂದ, ಸಾಮೂಹಿಕ ಪ್ರಯತ್ನದಿಂದ ಮಾಡಿದಂತಹ ಇಂಥ ಅನೇಕ ದೊಡ್ಡ ಬದಲಾವಣೆಗಳಾಗಿವೆ.  “ಮಿಷನ್ ಜಲ್ ಥಲ್” ಎಂಬ ಹೆಸರಿನ ಇಂಥದೇ ಒಂದು ಜನಾಂದೋಲನ ಕಾಶ್ಮೀರದ ಶ್ರೀನಗರದಲ್ಲಿ ನಡೆಯುತ್ತಿದೆ. ಇದು ಶ್ರೀನಗರದ ಕೊಳಗಳು ಮತ್ತು ಕೆರೆಗಳ ಸ್ವಚ್ಛತೆ ಮತ್ತು ಅವುಗಳ ಹಳೆಯ ವೈಭವವನ್ನು ಮರುಕಳಿಸುವ ಒಂದು ವಿಶಿಷ್ಟ ಪ್ರಯತ್ನವಾಗಿದೆ. “ಮಿಷನ್ ಜಲ್ ಥಲ್” ದ ದೃಷ್ಟಿಕೋನ “ಕುಶಲ್ ಸಾರ” ಮತ್ತು “ಗಿಲ್ ಸಾರ” ಮೇಲಿದೆ. ಜನಾಂದೋಲನದ ಜೊತೆಗೆ ಇದರಲ್ಲಿ ತಂತ್ರಜ್ಞಾನದ ಸಹಾಯವನ್ನೂ ಪಡೆದುಕೊಳ್ಳಲಾಗುತ್ತಿದೆ. ಎಲ್ಲೆಲ್ಲಿ ಅತಿಕ್ರಮಣ ಮಾಡಿಕೊಳ್ಳಲಾಗಿದೆ, ಎಲ್ಲೆಲ್ಲಿ ಅಕ್ರಮವಾಗಿ ಕಟ್ಟಡ ನಿರ್ಮಿಸಲಾಗಿದೆ ಇದನ್ನು ಪತ್ತೆಹಚ್ಚಲು ಈ ಕ್ಷೇತ್ರವನ್ನು ಸಂಪೂರ್ಣ ಸರ್ವೆ ಮಾಡಲಾಯಿತು. ಇದರ ಜೊತೆಗೆ ಪ್ಲಾಸ್ಟಿಕ್ ತ್ಯಾಜ್ಯವನ್ನು ನಿರ್ಮೂಲನೆ ಮಾಡುವ ಮತ್ತು ಕಸ ವಿಮೋಚನೆ ಅಭಿಯಾನವನ್ನು ಕೈಗೊಳ್ಳಲಾಯಿತು. ಈ ಅಭಿಯಾನದ 2 ನೇ ಹಂತ ಹಳೆಯ ನಾಲೆಗಳು ಮತ್ತು ಕೆರೆ ತುಂಬುವ ನಿಟ್ಟಿನಲ್ಲಿ 19 ಕೊಳಗಳನ್ನು ಪುನರುಜ್ಜೀವನಗೊಳಿಸುವ ಸಂಪೂರ್ಣ ಪ್ರಯತ್ನ ಮಾಡಲಾಯಿತು. ಈ ಪುನರುಜ್ಜೀವಗೊಳಿಸುವ ಯೋಜನೆಯ ಮಹತ್ವದ ಬಗ್ಗೆ ಹೆಚ್ಚೆಚ್ಚು ಅರಿವು ಮೂಡಿಸಲು ಸ್ಥಳೀಯ ಜನರು ಮತ್ತು ಯುವಜನತೆಯನ್ನು ಜಲ ರಾಯಭಾರಿಗಳನ್ನಾಗಿ ನೇಮಿಸಲಾಯಿತು. ಈಗ ಸ್ಥಳೀಯರು “ಗಿಲ್ ಸಾರ್” ಕೊಳದಲ್ಲಿ ಪ್ರವಾಸಿ ಪಕ್ಷಿಗಳು ಮತ್ತು ಮೀನಿನ ಸಂಖ್ಯೆ ವೃದ್ಧಿಸುತ್ತಲೇ ಸಾಗಲಿ ಎಂದು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಅದನ್ನು ಕಂಡು ಸಂತೋಷವೂ ಆಗುತ್ತದೆ. ನಾನು ಈ ಅದ್ಭುತ ಪ್ರಯತ್ನಕ್ಕೆ ಶ್ರೀನಗರದ ಜನತೆಗೆ ಅನಂತ ಅಭಿನಂದನೆ ಸಲ್ಲಿಸುತ್ತೇನೆ.

ಸ್ನೇಹಿತರೆ, 8 ವರ್ಷಗಳ ಹಿಂದೆ ದೇಶ ಆರಂಭಿಸಿದ್ದ ‘ಸ್ವಚ್ಛ ಭಾರತ’  ಅಭಿಯಾನದ ವಿಸ್ತಾರ ಸಮಯದೊಂದಿಗೆ ವೃದ್ಧಿಸುತ್ತಾ ಸಾಗಿದೆ. ಹೊಸ ಹೊಸ ಆವಿಷ್ಕಾರಗಳೂ ಇದರೊಂದಿಗೆ ಸೇರಿಕೊಂಡವು. ಭಾರತದಲ್ಲಿ ನೀವು ಎಲ್ಲಿಯೇ ಹೋದರೂ ಎಲ್ಲೆಡೆ ಸ್ವಚ್ಛತೆ ಬಗ್ಗೆ ಒಂದಲ್ಲಾ ಒಂದು ರೀತಿಯ ಪ್ರಯತ್ನ ಸಾಗಿರುವುದನ್ನು ಕಾಣಬಹುದು. ಅಸ್ಸಾಂ ನ ಕೊಖ್ರಜಾರ್ ನಲ್ಲಿಯ ಇಂಥದೇ ಒಂದು ಪ್ರಯತ್ನದ ಬಗ್ಗೆ ನನಗೆ ತಿಳಿಯಿತು. ಇಲ್ಲಿ ಬೆಳಗ್ಗೆ ವಾಕಿಂಗ್ ಮಾಡುವವರ ಒಂದು ಗುಂಪು ‘ಸ್ವಚ್ಛ ಮತ್ತು ಹಸಿರು ಕೋಖ್ರಜಾರ್’ ನಿರ್ಮಾಣಕ್ಕೆ ಶ್ಲಾಘನೀಯ ಪ್ರಯತ್ನವನ್ನು ಮಾಡಿದ್ದಾರೆ. ಇವರೆಲ್ಲರೂ ಹೊಸ ಫ್ಲೈ ಓವರ್ ಕ್ಷೇತ್ರದಲ್ಲಿ 3 ಕಿ ಮೀ ಉದ್ದದ ರಸ್ತೆಯನ್ನು ಸ್ವಚ್ಛಗೊಳಿಸಿ, ಸ್ವಚ್ಛತೆಯ ಬಗ್ಗೆ ಪ್ರೇರಣಾತ್ಮಕ ಸಂದೇಶವನ್ನು ಸಾರಿದ್ದಾರೆ. ಇದರಂತೆ ವಿಶಾಖ ಪಟ್ಟಣಂ ದಲ್ಲಿ ‘ಸ್ವಚ್ಛ ಭಾರತ ಆಂದೋಲನ’ ಅಡಿ ಪಾಲಿಥೀನ್ ಬದಲಾಗಿ ಬಟ್ಟೆಯ ಚೀಲಗಳ ಬಳಕೆಗೆ ಪ್ರೋತ್ಸಾಹಿಸಲಾಗುತ್ತಿದೆ. ಇಲ್ಲಿಯ ಜನತೆ ಪರಿಸರವನ್ನು ಸ್ವಚ್ಛವಾಗಿಡಲು ಸಿಂಗಲ್ ಯೂಸ್ ಪ್ಲಾಸ್ಟಿಕ್ ಉತ್ಪನ್ನಗಳ ವಿರುದ್ಧ ಅಭಿಯಾನವನ್ನೂ ಆರಂಭಿಸಿದ್ದಾರೆ. ಇದರ ಜೊತೆಗೆ ಜನರು ಮನೆಯಲ್ಲೇ ಕಸವನ್ನು ಬೇರ್ಪಡಿಸುವ ಬಗ್ಗೆ ಜಾಗರೂಕತೆಯನ್ನು ಮೂಡಿಸುತ್ತಿದ್ದಾರೆ. ಮುಂಬೈಯ ಸೋಮಯ್ಯಾ ಕಾಲೇಜಿನ ವಿದ್ಯಾರ್ಥಿಗಳು ಸ್ವಚ್ಛತಾ ಅಭಿಯಾನದಲ್ಲಿ ಸೌಂದರ್ಯವನ್ನೂ ಸೇರಿಸಿಕೊಂಡಿದ್ದಾರೆ. ಇವರು ಕಲ್ಯಾಣ ರೈಲ್ವೇ ನಿಲ್ದಾಣದ ಗೋಡೆಗಳನ್ನು ಸುಂದರ ವರ್ಣಚಿತ್ರಗಳಿಂದ ಅಲಂಕರಿಸಿದ್ದಾರೆ. ರಾಜಸ್ಥಾನದ ಸವಾಯಿ ಮಾಧವಪುರದ ಪ್ರೇರಣಾತ್ಮಕ ಉದಾಹರಣೆ ಬಗ್ಗೆ ನನಗೆ ಮಾಹಿತಿ ಲಭಿಸಿದೆ. ಇಲ್ಲಿಯ ಯುವಜನತೆ ರಣಥಂಬೋರ್ ನಲ್ಲಿ ‘ಮಿಶನ್ ಬೀಟ್ ಪ್ಲಾಸ್ಟಿಕ್’ ಎಂಬ ಆಂದೋಲನವನ್ನು ಆರಂಭಿಸಿದ್ದಾರೆ. ಇದರಲ್ಲಿ ರಣಥಂಬೋರ್ ಕಾಡುಗಳಿಂದ ಪ್ಲಾಸ್ಟಿಕ್’ ಮತ್ತು ಪಾಲಿಥೀನ್ ತೊಡೆದುಹಾಕಿದ್ದಾರೆ. ಎಲ್ಲರ ಪ್ರಯತ್ನದ ಇದೇ ಭಾವನೆ ದೇಶದಲ್ಲಿ ಜನಾಂದೋಲನದ ಭಾವನೆಗೆ ಪುಷ್ಟಿ ನೀಡುತ್ತದೆ. ಜನರ ಪಾಲ್ಗೊಳ್ಳುವಿಕೆಯಿದ್ದಲ್ಲಿ ದೊಡ್ಡ ದೊಡ್ಡ ಗುರಿಯನ್ನೂ ಸಾಧಿಸಲಾಗುತ್ತದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಇನ್ನು ಕೆಲವೇ ದಿನಗಳಲ್ಲಿ,  ಮಾರ್ಚ್ 8 ರಂದು ಇಡೀ ವಿಶ್ವದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನ ಆಚರಿಸಲಾಗುತ್ತದೆ. ಮಹಿಳೆಯರ ಸಾಹಸ, ನೈಪುಣ್ಯ, ಅವರ ಪ್ರತಿಭೆ ಸಂಬಂಧಿತ ಎಷ್ಟೊಂದು ಉದಾಹರಣೆಗಳನ್ನು ನಾವು ಮನ್ ಕಿ ಬಾತ್ ನಲ್ಲಿ ಸತತವಾಗಿ ಹಂಚಿಕೊಳ್ಳುತ್ತಿದ್ದೇವೆ. ಸ್ಕಿಲ್ ಇಂಡಿಯಾ ಆಗಿರಲಿ, ಸ್ವ ಸಹಾಯ ಗುಂಪೇ ಆಗಿರಲಿ, ಅಥವಾ ಸಣ್ಣ ದೊಡ್ಡ ಉದ್ಯೋಗವಿರಲಿ ಮಹಿಳೆಯರು ಪ್ರತಿಯೊಂದರಲ್ಲೂ ಮುನ್ನಡೆ ಸಾಧಿಸಿದ್ದಾರೆ. ನೀವು ಯಾವುದೇ ಕ್ಷೇತ್ರದಲ್ಲಾದರೂ ನೋಡಿ, ಮಹಿಳೆಯರು ಹಿಂದಿನ ಮಿಥ್ಯೆಗಳನ್ನು ತೊಡೆದುಹಾಕುತ್ತಿದ್ದಾರೆ. ಇಂದು ನಮ್ಮ ದೇಶದಲ್ಲಿ ಪಾರ್ಲಿಮೆಂಟ್ ನಿಂದ ಪಂಚಾಯತ್ ವರೆಗೂ ವಿಭಿನ್ನ ಕಾರ್ಯಕ್ಷೇತ್ರಗಳಲ್ಲಿ ಹೊಸ ಔನ್ನತ್ಯಗಳನ್ನು ಸಾಧಿಸುತ್ತಿದ್ದಾರೆ. ಸೇನೆಯಲ್ಲಿ ಕೂಡಾ ಹೆಣ್ಣು ಮಕ್ಕಳು ಹೊಸ ಮತ್ತು ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ, ಮತ್ತು ದೇಶದ ರಕ್ಷಣೆ ಮಾಡುತ್ತಿದ್ದಾರೆ. ಕಳೆದ ತಿಂಗಳು ಗಣರಾಜ್ಯೋತ್ಸವ ದಿನದಂದು ಆಧುನಿಕ ಫೈಟರ್ ವಿಮಾನಗಳನ್ನು ಕೂಡಾ ಹೆಣ್ಣುಮಕ್ಕಳು ಹಾರಾಟ ನಡೆಸಿದ್ದನ್ನು ನಾವು ನೋಡಿದೆವು. ದೇಶದ ಸೈನಿಕ್ ಶಾಲೆಗಳಲ್ಲಿ ಕೂಡಾ ಹೆಣ್ಣುಮಕ್ಕಳ ಪ್ರವೇಶಾತಿಗೆ ಇದ್ದ ನಿರ್ಬಂಧವನ್ನು ತೆಗೆದುಹಾಕಲಾಗಿದೆ, ಇಡೀ ದೇಶದಲ್ಲಿ ಹೆಣ್ಣು ಮಕ್ಕಳು ಸೈನಿಕ್ ಶಾಲೆಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳುತ್ತಿದ್ದಾರೆ. ಇದೇ ರೀತಿ, ನಮ್ಮ ಸ್ಟಾರ್ಟ್ ಅಪ್ ಜಗತ್ತನ್ನು ನೋಡಿ, ಕಳೆದ ವರ್ಷ, ದೇಶದಲ್ಲಿ ಸಾವಿರಾರು ಹೊಸ ಸ್ಟಾರ್ಟಪ್ ಗಳು ಆರಂಭವಾದವು. ಇವುಗಳ ಪೈಕಿ ಅರ್ಧದಷ್ಟು ಸ್ಟಾರ್ಟ್ ಅಪ್ ಗಳಲ್ಲಿ ಮಹಿಳೆಯರು ನಿರ್ದೇಶಕರ ಪಾತ್ರ ನಿರ್ವಹಿಸುತ್ತಿದ್ದಾರೆ. ಕಳೆದ ಕೆಲವು ಸಮಯದಲ್ಲಿ ಮಹಿಳೆಯರಿಗಾಗಿ ಮಾತೃತ್ವ ರಜಾ ದಿನಗಳನ್ನು ಹೆಚ್ಚಿಸುವ ನಿರ್ಣಯ ಕೈಗೊಳ್ಳಲಾಗಿದೆ. ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳಿಗೆ ಸಮಾನ ಹಕ್ಕು ನೀಡುತ್ತಾ, ವಿವಾಹದ ವಯಸ್ಸನ್ನು ಸರಿದೂಗಿಸುವುದಕ್ಕೆ ದೇಶ ಪ್ರಯತ್ನಿಸುತ್ತಿದೆ. ಇದರಿಂದಾಗಿ ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗುತ್ತಿದೆ. ದೇಶದಲ್ಲಿ ಬಹುದೊಡ್ಡ ಬದಲಾವಣೆಯಾಗುತ್ತಿರುವುದನ್ನು ನೀವು ನೋಡುತ್ತಿರಬಹುದು.  ಈ ಬದಲಾವಣೆ ನಮ್ಮ ಸಾಮಾಜಿಕ ಅಭಿಯಾನಗಳ ಯಶಸ್ಸು. ಹೆಣ್ಣು ಮಕ್ಕಳನ್ನು ಉಳಿಸಿ, ಹೆಣ್ಣು ಮಕ್ಕಳನ್ನು ಓದಿಸಿ ಯಶಸ್ಸನ್ನೇ ನೋಡಿ, ದೇಶದಲ್ಲಿ ಇಂದು ಲಿಂಗ ಅನುಪಾತದಲ್ಲಿ ಸುಧಾರಣೆಯಾಗುತ್ತಿದೆ. ಶಾಲೆಗೆ ಹೋಗುವ ಹೆಣ್ಣುಮಕ್ಕಳ ಸಂಖ್ಯೆಯಲ್ಲಿ ಕೂಡಾ ಹೆಚ್ಚಳವಾಗಿದೆ. ನಮ್ಮ ಹೆಣ್ಣು ಮಕ್ಕಳು ಮಧ್ಯದಲ್ಲಿ ಶಾಲೆಗೆ ಹೋಗುವುದನ್ನು ನಿಲ್ಲಿಸದಂತೆ ನೋಡಿಕೊಳ್ಳುವುದು ಕೂಡಾ ನಮ್ಮದೇ ಜವಾಬ್ದಾರಿಯಾಗಿದೆ. ಇದೇ ರೀತಿ, ಸ್ವಚ್ಛ ಭಾರತ್ ಅಭಿಯಾನದ ಅಡಿಯಲ್ಲಿ, ದೇಶದಲ್ಲಿ ಮಹಿಳೆಯರಿಗೆ ಬಯಲು ಶೌಚದಿಂದ ಮುಕ್ತಿ ದೊರೆತಿದೆ. ತ್ರಿವಳಿ ತಲಾಖ್ ನಂತಹ ಸಾಮಾಜಿಕ ಪಿಡುಗು ಕೂಡಾ ಅಂತ್ಯವಾಗುತ್ತಿದೆ. ತ್ರಿವಳಿ ತಲಾಖ್ ವಿರುದ್ಧದ  ಕಾನೂನು ಬಂದಾಗಿನಿಂದ, ದೇಶದಲ್ಲಿ ತ್ರಿವಳಿ ತಲಾಖ್  ಪ್ರಕರಣಗಳಲ್ಲಿ ಶೇಕಡಾ 80 ರಷ್ಟು ಇಳಿಕೆ ಕಂಡುಬಂದಿದೆ. ಇಷ್ಟೊಂದು ಬದಲಾವಣೆಗಳು ಇಷ್ಟು ಕಡಿಮೆ ಸಮಯದಲ್ಲಿ ಹೇಗೆ ಸಾಧ್ಯವಾಗುತ್ತಿದೆ ? ನಮ್ಮ ದೇಶದಲ್ಲಿ ಪರಿವರ್ತನೆ ಮತ್ತು ಪ್ರಗತಿಶೀಲ ಪ್ರಯತ್ನಗಳ ನೇತೃತ್ವವನ್ನು ಸ್ವತಃ ಮಹಿಳೆಯರೇ ವಹಿಸುತ್ತಿರುವುದೇ ಇದಕ್ಕೆ ಕಾರಣವಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ನಾಳೆ ಫೆಬ್ರವರಿ 28 ರಂದು ಅಂತಾರಾಷ್ಟ್ರೀಯ ವಿಜ್ಞಾನ ದಿನ. ಈ ದಿನ ರಾಮನ್ ಎಫೆಕ್ಟ್ ನ ಅನ್ವೇಷಣೆಗಾಗಿ ಕೂಡಾ ಹೆಸರಾಗಿದೆ. ನಮ್ಮ ವೈಜ್ಞಾನಿಕ ಪಯಣವನ್ನು ಶ್ರೀಮಂತವಾಗಿಸಲು ತಮ್ಮ ಮಹತ್ವಪೂರ್ಣ ಕೊಡುಗೆ ನೀಡಿರುವ ಸಿ.ವಿ. ರಾಮನ್ ಅವರಿಗೆ ಮತ್ತು ಅಂತಹ ಎಲ್ಲಾ ವಿಜ್ಞಾನಿಗಳಿಗೆ ಗೌರವಪೂರ್ಣ ವಂದನೆಗಳನ್ನು ಅರ್ಪಿಸುತ್ತೇನೆ. ಸ್ನೇಹಿತರೇ, ನಮ್ಮ ಜೀವನದಲ್ಲಿ ತಂತ್ರಜ್ಞಾನವು ಸುಲಭ ಮತ್ತು ಸರಳತೆಯಲ್ಲಿ ಸಾಕಷ್ಟು ಮಹತ್ವದ ಪಾತ್ರ ವಹಿಸುತ್ತದೆ. ಯಾವ ತಂತ್ರಜ್ಞಾನ ಉತ್ತಮವಾಗಿದೆ, ಯಾವ ತಂತ್ರಜ್ಞಾನದ ಉತ್ತಮ ಉಪಯೋಗ ಯಾವುದು, ಈ ಎಲ್ಲ ವಿಷಯಗಳ ಬಗ್ಗೆ ನಾವು ಸಾಮಾನ್ಯವಾಗಿ ತಿಳಿದಿರುತ್ತೇವೆ. ಆದರೆ, ನಮ್ಮ ಕುಟುಂಬದ ಮಕ್ಕಳಿಗೆ ಆ ತಂತ್ರಜ್ಞಾನದ ಆಧಾರ ಯಾವುದು, ಅದರ ಹಿಂದಿರುವ ವಿಜ್ಞಾನ ಯಾವುದು, ಈ ವಿಷಯಗಳ ಬಗ್ಗೆ ನಮ್ಮ ಗಮನ ಹೋಗುವುದೇ ಇಲ್ಲ. ಈ ವಿಜ್ಞಾನ ದಿನದಂದು ತಮ್ಮ ಮಕ್ಕಳ ವೈಜ್ಞಾನಿಕ ಮನೋಭಾವ ವಿಕಾಸವಾಗುವಂತೆ ಮಾಡಲು ಖಂಡಿತವಾಗಿಯೂ ಸಣ್ಣ ಸಣ್ಣ ಪ್ರಯತ್ನಗಳನ್ನು ಮಾಡಲಾರಂಭಿಸಬೇಕೆಂದು ನಾನು ಎಲ್ಲ ಕುಟುಂಬದವರಲ್ಲಿ ಮನವಿ ಮಾಡುತ್ತಿದ್ದೇನೆ. ಕೇವಲ ಕನ್ನಡಕ ಹಾಕಿ  ನೋಡುವುದು, ಸಂತೋಷ ಪಡುವುದು ಇಷ್ಟೇ ಅಲ್ಲ. ಕನ್ನಡಕ ಹಾಕಿಕೊಂಡ ನಂತರ ಹಿಂದಿಗಿಂತ ಚೆನ್ನಾಗಿ ಕಾಣಿಸುತ್ತಿದೆ ಎನ್ನುವುದರ ಹಿಂದೆ ಇರುವ ವಿಜ್ಞಾನ ಯಾವುದು ಎಂಬುದನ್ನು ಮಕ್ಕಳಿಗೆ ಸುಲಭವಾಗಿ ಅರ್ಥ ಮಾಡಿಸಬಹುದು.  ನೀವು ಈಗ ಮಕ್ಕಳಿಗೆ ಒಂದು ಸಣ್ಣ ಕಾಗದದ ಮೇಲೆ ಬರೆದು ಅವರಿಗೆ ತಿಳಿಸಬಹುದು. ಈಗ ಅವರು ಮೊಬೈಲ್ ಫೋನ್ ಉಪಯೋಗಿಸುತ್ತಾರೆ. ಕ್ಯಾಲ್ಕ್ಯುಲೇಟರ್ ಹೇಗೆ ಕೆಲಸ ಮಾಡುತ್ತದೆ, ರಿಮೋಟ್ ಕಂಟ್ರೋಲ್ ಹೇಗೆ ಕೆಲಸ ಮಾಡುತ್ತದೆ. ಸೆನ್ಸರ್ ಎಂದರೇನು, ಇಂತಹ ವೈಜ್ಞಾನಿಕ ಮಾತುಕತೆ  ಮನೆಯಲ್ಲಿ ನಡೆಯುತ್ತದೆಯೇ? ಇದನ್ನು ನಾವು ಸುಲಭವಾಗಿ ಮಾಡಬಹುದು. ನಾವು ನಮ್ಮ ದೈನದಿಂನ ಜೀವನದಲ್ಲಿನ ಕೆಲವು ವಿಷಯಗಳನ್ನು, ಅವುಗಳ ಹಿಂದಿರುವ ವೈಜ್ಞಾನಿಕತೆಯನ್ನು ಸುಲಭವಾಗಿ ಮಕ್ಕಳಿಗೆ ವಿವರಿಸಬಹುದು. ಅದೇರೀತಿ, ನಾವು ನಮ್ಮ ಮಕ್ಕಳೊಂದಿಗೆ ಒಟ್ಟಿಗೆ ಆಕಾಶದತ್ತ ನೋಡಿದ್ದೇವೆಯೇ? ರಾತ್ರಿಯಲ್ಲಿ ನಕ್ಷತ್ರಗಳ ಬಗ್ಗೆ ಕೂಡಾ ಖಂಡಿತವಾಗಿಯೂ ಮಾತನಾಡಬಹುದು. ಅನೇಕ ರೀತಿಯ ನಕ್ಷತ್ರ ಪುಂಜಗಳು  ಕಂಡುಬರುತ್ತವೆ, ಅವುಗಳ ಬಗ್ಗೆ ತಿಳಿಸಿಕೊಡಿ. ಈ ರೀತಿ ಮಾಡುವ ಮೂಲಕ ನೀವು ಮಕ್ಕಳಲ್ಲಿ ಭೌತಶಾಸ್ತ್ರ ಮತ್ತು ಖಗೋಳ ವಿಜ್ಞಾನದ ಬಗ್ಗೆ ಮಕ್ಕಳಲ್ಲಿ ಹೊಸ ಕುತೂಹಲ ಮೂಡುವಂತೆ ಮಾಡಬಹುದು. ನೀವು ನಕ್ಷತ್ರಗಳು ಮತ್ತು ಗ್ರಹಗಳನ್ನು ಪತ್ತೆ ಮಾಡಬಹುದಾದ ಅಥವಾ ಆಕಾಶದಲ್ಲಿ ಕಾಣಿಸುತ್ತಿರುವ ನಕ್ಷತ್ರವನ್ನು ಗುರುತಿಸಬಹುದಾದ ಮತ್ತು ಅವುಗಳ ಬಗ್ಗೆ ತಿಳಿದುಕೊಳ್ಳಬಹುದಾದ ಅನೇಕ ಅನ್ವಯಿಕಗಳು ಕೂಡಾ ಈಗ ಲಭ್ಯವಿದೆ. ನೀವು ನಿಮ್ಮ ನೈಪುಣ್ಯ ಮತ್ತು ವೈಜ್ಞಾನಿಕ ಗುಣಗಳನ್ನು ರಾಷ್ಟ್ರ ನಿರ್ಮಾಣದ ಕೆಲಸ ಕಾರ್ಯಗಳಲ್ಲಿ ಕೂಡಾ ಉಪಯೋಗಿಸಿ ಎಂದು ನಾನು ನಮ್ಮ ಸ್ಟಾರ್ಟ್ ಅಪ್ ಗಳಿಗೆ ಕೂಡಾ ಹೇಳುತ್ತೇನೆ. ಇದು ದೇಶಕ್ಕಾಗಿ ನಮ್ಮ ಸಾಮೂಹಿಕ ವೈಜ್ಞಾನಿಕ ಜವಾಬ್ದಾರಿಯೂ ಆಗಿದೆ. ನಮ್ಮ Start-ups virtual reality ಪ್ರಪಂಚದಲ್ಲಿ ಕೂಡಾ ಬಹಳ ಚೆನ್ನಾಗಿ ಕೆಲಸ ಮಾಡುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ವರ್ಚುವಲ್ ತರಗತಿಗಳ ಈ ಕಾಲದಲ್ಲಿ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಒಂದು ವರ್ಚುವಲ್ ಪ್ರಯೋಗಾಲಯವನ್ನು ಕೂಡಾ ನಿರ್ಮಿಸಬಹುದಾಗಿದೆ. ನಾವು virtual reality ಮೂಲಕ  ಮಕ್ಕಳು ಮನೆಯಲ್ಲಿ ಕುಳಿತಿರುವಂತೆಯೇ ಅವರಿಗೆ chemistry lab ನ ಅನುಭವ ಉಂಟಾಗುವಂತೆ ಮಾಡಬಹುದು. ನಮ್ಮ ಶಿಕ್ಷಕರು ಮತ್ತು ಪೋಷಕರಲ್ಲಿ ನನ್ನ ವಿನಂತಿಯೆಂದರೆ, ನೀವೆಲ್ಲರೂ ವಿದ್ಯಾರ್ಥಿಗಳು ಮತ್ತು ಮಕ್ಕಳನ್ನು ಪ್ರಶ್ನೆ ಕೇಳುವುದಕ್ಕೆ ಪ್ರೋತ್ಸಾಹಿಸಿ ಮತ್ತು ಅವರೊಂದಿಗೆ ಸೇರಿ ಸರಿಯಾದ ಉತ್ತರಕ್ಕಾಗಿ ಹುಡುಕಾಟ ನಡೆಸಿ. ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತೀಯ ವಿಜ್ಞಾನಿಗಳ ಪಾತ್ರವನ್ನು ನಾನು ಇಂದು ಪ್ರಶಂಸಿಸಲು ಬಯಸುತ್ತೇನೆ. ಅವರ ಕಠಿಣ ಪರಿಶ್ರಮದಿಂದಾಗಿಯೇ Made In India ಲಸಿಕೆಯ ಉತ್ಪಾದನೆ ಸಾಧ್ಯವಾಯಿತು, ಇದರಿಂದಾಗಿ ಇಡೀ ವಿಶ್ವಕ್ಕೆ ಬಹುದೊಡ್ಡ ಸಹಾಯ ದೊರೆತಂತಾಯಿತು. ಮನುಕುಲಕ್ಕೆ ಇದು ವಿಜ್ಞಾನದ ಬಹುದೊಡ್ಡ ಕೊಡುಗೆಯಾಗಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ಈಬಾರಿ ಕೂಡಾ ನಾವು ಅನೇಕ ವಿಷಯಗಳ ಬಗ್ಗೆ ಮಾತನಾಡಿದೆವು. ಮುಂಬರುವ ಮಾರ್ಚ್ ತಿಂಗಳಿನಲ್ಲಿ ಅನೇಕ ಹಬ್ಬ, ಉತ್ಸವಗಳು ಬರಲಿವೆ. ಶಿವರಾತ್ರಿ ಹಬ್ಬವಿದೆ ಮತ್ತು ಕೆಲವೇ ದಿನಗಳ ನಂತರ ನೀವೆಲ್ಲರೂ ಹೋಳಿ ಹಬ್ಬದ ಸಿದ್ಧತೆಯಲ್ಲಿ ತೊಡಗಲಿದ್ದೀರಿ. ನಮ್ಮೆಲ್ಲರನ್ನೂ ಒಂದೇ ಸೂತ್ರದಲ್ಲಿ ಜೋಡಿಸುವ  ಹಬ್ಬ ಹೋಳಿ ಹಬ್ಬವಾಗಿದೆ. ಇದರಲ್ಲಿ ನಮ್ಮವರು-ಪರರು, ದ್ವೇಷ-ವಿದ್ವೇಷ, ಸಣ್ಣ-ದೊಡ್ಡ ಎಂಬೆಲ್ಲಾ ಭೇದಭಾವಗಳು ಅಳಿಸಿಹೋಗುತ್ತವೆ. ಆದ್ದರಿಂದಲೇ ಹೀಗೆಂದು ಹೇಳುತ್ತಾರೆ, ಹೋಳಿಯ ಬಣ್ಣಕ್ಕಿಂತಲೂ ಗಾಢವಾದ ಬಣ್ಣ, ಹೋಳಿಯ ಪ್ರೇಮ ಮತ್ತು ಸೌಹಾರ್ದದ್ದು ಎಂದು. ಹೋಳಿ ಹಬ್ಬದಲ್ಲಿ ಗುಜಿಯಾ ಸಿಹಿತಿನಿಸಿನ ಜೊತೆಯಲ್ಲಿ ಬಾಂಧವ್ಯದ ಸಿಹಿಯೂ ವಿಶಿಷ್ಟವಾಗಿರುತ್ತದೆ. ಈ ಬಾಂಧವ್ಯವನ್ನು ನಾವು ಮತ್ತಷ್ಟು ಬಲಗೊಳಿಸಬೇಕು ಮತ್ತು ಬಾಂಧವ್ಯ ಕೇವಲ ನಮ್ಮ ಕುಟುಂಬದ ಸದಸ್ಯರೊಂದಿಗೆ ಮಾತ್ರವಲ್ಲ, ನಮ್ಮ ಈ ಮಹಾನ್ ಕುಟುಂಬದ ಭಾಗವಾಗಿರುವ ಎಲ್ಲರೊಂದಿಗೂ ಇರಬೇಕು. ಇದರ ಮಹತ್ವಪೂರ್ಣ ವಿಧಾನ ಕೂಡಾ ನೀವು ನೆನಪಿಟ್ಟುಕೊಳ್ಳಬೇಕು. ಈ ವಿಧಾನವೆಂದರೆ– ‘Vocal for Local’ ಮಂತ್ರದೊಂದಿಗೆ ಹಬ್ಬ ಆಚರಿಸುವುದು. ನೀವು ಹಬ್ಬಗಳಲ್ಲಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸಿ, ಇದರಿಂದಾಗಿ ನಿಮ್ಮ ಸುತ್ತಮುತ್ತ ವಾಸಿಸುವ ಜನರ ಜೀವನದಲ್ಲಿ ಸಂತೋಷದ, ಭರವಸೆಯ ಬಣ್ಣ ತುಂಬಲಿ. ನಮ್ಮ ದೇಶ ಯಶಸ್ವಿಯಾಗಿ ಕೋರೋನಾ ವಿರುದ್ಧದ ಹೋರಾಟ ನಡೆಸುತ್ತಾ ಮುಂದೆ ಸಾಗುತ್ತಿದೆಯೋ ಅದರಿಂದಾಗಿ ಹಬ್ಬಗಳಲ್ಲಿ ಉತ್ಸಾಹ ಕೂಡಾ ಅನೇಕ ಪಟ್ಟು ಹೆಚ್ಚಾಗುತ್ತಿದೆ. ಇದೇ ಉತ್ಸಾಹದೊಂದಿಗೆ ನಾವು ನಮ್ಮ ಹಬ್ಬಗಳನ್ನು ಆಚರಿಸಬೇಕು, ಮತ್ತು ಅದರೊಂದಿಗೆ ಎಚ್ಚರಿಕೆಯಿಂದ ಕೂಡಾ ಇರಬೇಕು. ನಾನು ನಿಮ್ಮೆಲ್ಲರಿಗೂ ಮುಂಬರಲಿರುವ ಹಬ್ಬಗಳಿಗಾಗಿ ಶುಭಾಶಯಗಳನ್ನು ಕೋರುತ್ತನೆ. ನಾನು ಸದಾಕಾಲ ನಿಮ್ಮ ಮಾತುಗಳ, ನಿಮ್ಮ ಪತ್ರಗಳ ಮತ್ತು ನಿಮ್ಮ ಸಂದೇಶಗಳ ನಿರೀಕ್ಷೆಯಲ್ಲಿ ಇರುತ್ತೇನೆ.

ಅನೇಕಾನೇಕ ಧನ್ಯವಾದ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Bad loans decline: Banks’ gross NPA ratio declines to 13-year low of 2.5% at September end, says RBI report

Media Coverage

Bad loans decline: Banks’ gross NPA ratio declines to 13-year low of 2.5% at September end, says RBI report
NM on the go

Nm on the go

Always be the first to hear from the PM. Get the App Now!
...
PM Modi pays tributes to the Former Prime Minister Dr. Manmohan Singh
December 27, 2024

The Prime Minister, Shri Narendra Modi has paid tributes to the former Prime Minister, Dr. Manmohan Singh Ji at his residence, today. "India will forever remember his contribution to our nation", Prime Minister Shri Modi remarked.

The Prime Minister posted on X:

"Paid tributes to Dr. Manmohan Singh Ji at his residence. India will forever remember his contribution to our nation."