Hunar Haat has given wings to the aspirations of artisans: PM Modi
Our biodiversity is a unique treasure, must preserve it: PM Modi
Good to see that many more youngsters are developing keen interest in science and technology: PM Modi
New India does not want to follow the old approach, says PM Modi
Women are leading from the front and driving change in society: PM Modi
Our country's geography is such that it offers varied landscape for adventure sports: PM Modi

ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ, ಕಛ್ ನಿಂದ ಕೊಹಿಮಾವರೆಗೆ, ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ದೇಶದ ಸಮಸ್ತ ನಾಗರಿಕರಿಗೆ ಮತ್ತೊಮ್ಮೆ ನಮಸ್ಕಾರ ಮಾಡಲು ಅವಕಾಶ ದೊರೆತದ್ದು ನನ್ನ ಸೌಭಾಗ್ಯ. ತಮ್ಮೆಲ್ಲರಿಗೂ ನಮಸ್ಕಾರ. ನಮ್ಮ ದೇಶದ ವೈಶಾಲ್ಯತೆ ಮತ್ತು ವೈವಿಧ್ಯತೆಯನ್ನು ನೆನೆಯುವುದು, ಅದಕ್ಕೆ ತಲೆ ಬಾಗುವುದು, ಪ್ರತಿಯೊಬ್ಬ ಭಾರತೀಯನಲ್ಲೂ ಹೆಮ್ಮೆಯನ್ನು ಮೂಡಿಸುತ್ತದೆ ಮತ್ತು ಈ ವೈವಿಧ್ಯತೆಯ ಅನುಭವದ ಅವಕಾಶ ಹೊಸ ಅನುಭೂತಿ ನೀಡುವ, ಆನಂದವನ್ನು ತುಂಬುವ ಹಾಗೂ ಒಂದು ಬಗೆಯ ಪ್ರೇರಣೆಯ ಪುಷ್ಪದಂತಿದೆ. ಕೆಲ ದಿನಗಳ ಹಿಂದೆ, ದೆಹಲಿಯ ಹುನರ್ ಹಾಟ್ ನಲ್ಲಿ, ಒಂದು ಪುಟ್ಟ ಸ್ಥಳದಲ್ಲಿ, ನನಗೆ ನಮ್ಮ ದೇಶದ ವಿಶಾಲತೆ, ಸಂಸ್ಕೃತಿ, ಪರಂಪರೆಗಳು, ಊಟ-ಉಪಹಾರ ಮತ್ತು ಭಾವನೆಗಳ ವೈವಿಧ್ಯತೆಯ ದರ್ಶನವಾಯಿತು. ಸಾಂಪ್ರದಾಯಿಕ ವಸ್ತ್ರಗಳು, ಕರಕುಶಲ ವಸ್ತುಗಳು, ರತ್ನಗಂಬಳಿಗಳು, ಪಾತ್ರೆಗಳು, ಬಿದಿರು ಮತ್ತು ಕಂಚಿನ ಉತ್ಪನ್ನಗಳು, ಪಂಜಾಬಿನ ಹೂಕುಂಡಗಳು, ಆಂಧ್ರಪ್ರದೇಶದ ಅದ್ಭುತವಾದ ಚರ್ಮದ ಉತ್ಪನ್ನಗಳು, ತಮಿಳುನಾಡಿನ ಸುಂದರವಾದ ವರ್ಣಚಿತ್ರಗಳು, ಉತ್ತರ ಪ್ರದೇಶದ ಹಿತ್ತಾಳೆಯ ಉತ್ಪನ್ನಗಳು,  ಬದೋಹಿಯ ರತ್ನಗಂಬಳಿಗಳು, ಕಛ್ ನ ತಾಮ್ರದ ಉತ್ಪನ್ನಗಳು, ಅನೇಕ ಸಂಗೀತ ವಾದ್ಯಗಳು, ಲೆಕ್ಕವಿಲ್ಲದಷ್ಟು ಮಾತುಗಳು, ಸಂಪೂರ್ಣ ಭಾರತದ ಕಲೆ ಮತ್ತು ಸಂಸ್ಕೃತಿಯ ಕಿರುನೋಟ ನಿಜಕ್ಕೂ ಅದ್ಭುತವೇ ಆಗಿತ್ತು. ಇದರ ಹಿಂದಿನ ಕುಶಲಕರ್ಮಿಗಳ ಸಾಧನೆ, ಏಕಾಗ್ರತೆ, ಅವರ ಕೌಶಲ್ಯದ ಬಗೆಗಿನ ಒಲವಿನ ಕಥೆಗಳು ಸಹ ಬಹಳ ಪ್ರೇರಣಾದಾಯಕವಾಗಿವೆ. ಹುನರ್ ಹಾಟ್ ನಲ್ಲಿ ಒಬ್ಬ ದಿವ್ಯಾಂಗ ಮಹಿಳೆಯ ಮಾತುಗಳನ್ನು ಕೇಳಿ ಬಹಳ ಸಂತೋಷವಾಯಿತು. ಈ ಹಿಂದೆ ಅವರು ಬೀದಿ ಬದಿಯಲ್ಲಿ ತಮ್ಮ ವರ್ಣಚಿತ್ರಗಳನ್ನು ಮಾರಾಟ ಮಾಡುತ್ತಿದ್ದರು. ಆದರೆ, ಹುನರ್ ಹಾಟ್ ನ ಒಡನಾಟದೊಂದಿಗೆ ಅವರ ಜೀವನ ಬದಲಾಗಿದೆ ಎಂದು ಹೇಳಿದರು. ಇಂದು ಅವರು ಸ್ವಾವಲಂಬಿಯಷ್ಟೇ ಅಲ್ಲ, ಸ್ವಂತ ಮನೆಯನ್ನೂ ಖರೀದಿಸಿದ್ದಾರೆ. ಹುನರ್ ಹಾಟ್ ನಲ್ಲಿ ನನಗೆ ಹಲವಾರು ಕುಶಲಕರ್ಮಿಗಳನ್ನು ಭೇಟಿ ಮಾಡುವ ಮತ್ತು ಅವರೊಂದಿಗೆ ಸಂವಾದ ನಡೆಸುವ ಅವಕಾಶ ದೊರೆಯಿತು. ಹುನರ್ ಹಾಟ್ ನಲ್ಲಿ ಭಾಗವಹಿಸುವ ಕುಶಲಕರ್ಮಿಗಳಲ್ಲಿ ಶೇ.50 ಕ್ಕೂ ಹೆಚ್ಚು ಮಹಿಳೆಯರಿದ್ದಾರೆ ಎಂದು ನನಗೆ ತಿಳಿಸಲಾಗಿದೆ. ಕಳೆದ 3 ವರ್ಷಗಳಲ್ಲಿ ಹುನರ್ ಹಾಟ್ ಮೂಲಕ ಸುಮಾರು 3 ಲಕ್ಷ ಕುಶಲಕರ್ಮಿಗಳಿಗೆ ಮತ್ತು ಶಿಲ್ಪಿಗಳಿಗೆ ಉದ್ಯೋಗಾವಕಾಶ ದೊರೆತಿದೆ. ಹುನರ್ ಹಾಟ್ ಕಲಾ ಪ್ರದರ್ಶನಕ್ಕೆ ಒಂದು ವೇದಿಕೆಯಾಗಿರುವುದಷ್ಟೇ ಅಲ್ಲದೆ ಜನರ ಕನಸುಗಳ ಸಾಕಾರಕ್ಕೂ ಪುಷ್ಟಿ ನೀಡುತ್ತಿದೆ. ಈ ದೇಶದ ವಿವಿಧತೆಯನ್ನು ಅಲಕ್ಷ್ಯಗೊಳಿಸುವುದು ಅಸಂಭವ ಎನ್ನುವಂತಹ ಸ್ಥಳ ಇದಾಗಿದೆ. ಶಿಲ್ಪಕಲೆಯಂತೂ ಇದ್ದೇ ಇದೆ ಜೊತೆಗೆ ನಮ್ಮ ಉಟೋಪಚಾರಗಳ ವೈವಿಧ್ಯತೆಯನ್ನೂ ಕಾಣಬಹುದು. ಅಲ್ಲಿ ಒಂದೇ ಸಾಲಿನಲ್ಲಿ ಇಡ್ಲಿ – ದೋಸೆ, ಛೋಲೆ ಬಟೂರೆ, ದಾಲ್ ಬಾಟಿ, ಖಮನ್ – ಖಾಂಡ್ವಿ, ಇನ್ನೂ ಏನೇನೋ ಇತ್ತು. ನಾನು ಸ್ವತಃ ಅಲ್ಲಿ ಬಿಹಾರದ ಸ್ವಾದಿಷ್ಟ ಲಿಟ್ಟಿ ಚೋಖೆಯನ್ನು ಆಸ್ವಾದಿಸಿ, ಬಹಳ ಸಂತೋಷಪಟ್ಟೆ. ಭಾರತದ ಪ್ರತಿ ಭಾಗದಲ್ಲೂ ಇಂಥ ಮೇಳಗಳು, ಪ್ರದರ್ಶನಗಳು ಆಯೋಜಿತಗೊಳ್ಳುತ್ತಲೇ ಇರುತ್ತವೆ.  ಭಾರತವನ್ನು ಅರಿಯಲು, ಭಾರತವನ್ನು ಅನುಭವಿಸಲು ಅವಕಾಶ ಸಿಕ್ಕಾಗಲೆಲ್ಲಾ ಖಂಡಿತ ಇಂಥ ಪ್ರದರ್ಶನಗಳಿಗೆ ಭೇಟಿ ನೀಡಿ. ‘ಏಕ್ ಭಾರತ್ ಶ್ರೇಷ್ಠ ಭಾರತ್’ ವನ್ನು ಮನಃಪೂರ್ವಕ ಜೀವಿಸಲು ಇದು ಅವಕಾಶ ಕಲ್ಪಿಸುತ್ತದೆ. ನೀವು ಕೇವಲ ದೇಶದ ಕಲೆ ಮತ್ತು ಸಂಸ್ಕೃತಿಯ ಸಾಕ್ಷಾತ್ಕಾರ ಪಡೆಯುವುದಿಲ್ಲ ಜೊತೆಗೆ ದೇಶದ ಶ್ರಮಿಕ ಕುಶಲಕರ್ಮಿಗಳು, ವಿಶೇಷವಾಗಿ ಮಹಿಳೆಯರ ಸಮೃದ್ಧಿಗೂ ನಿಮ್ಮ ಕೊಡುಗೆಯನ್ನು ನೀಡಬಹುದಾಗಿದೆ. ಖಂಡಿತ ಭೇಟಿ ನೀಡಿ.

ನನ್ನ ಪ್ರಿಯ ದೇಶಬಂಧುಗಳೇ, ನಮ್ಮ ದೇಶದ ಪರಂಪರೆ ಬಹು ಮಹತ್ತರವಾದದ್ದು. ನಮ್ಮ ಪೂರ್ವಜರು ಇದನ್ನು ನಮಗೆ ಬಳುವಳಿಯಾಗಿ ನೀಡಿದ್ದಾರೆ. ನಮಗೆ ದೊರೆತ ಶಿಕ್ಷಣ ಮತ್ತು ದೀಕ್ಷೆಯ ಪ್ರಕಾರ ಪ್ರತಿಯೊಂದು ಜೀವಿಯ ಬಗ್ಗೆಯೂ ದಯಾಭಾವನೆಯಿದೆ, ಪ್ರಕೃತಿಯ ಬಗ್ಗೆ ಅಪಾರವಾದ ಪ್ರೀತಿಯಿದೆ, ಈ ಎಲ್ಲ ವಿಷಯಗಳು ನಮ್ಮ ಸಾಂಸ್ಕೃತಿಕ ಬಳುವಳಿಯಾಗಿವೆ. ಭಾರತದ ಇಂಥ ವಾತಾವರಣದ ಆತಿಥ್ಯ ಪಡೆಯಲು ಪ್ರತಿ ವರ್ಷ ವಿಶ್ವದಾದ್ಯಂತದಿಂದ ವಿಭಿನ್ನ ಪ್ರಭೇದದ ಪಕ್ಷಿಗಳು ಭಾರತಕ್ಕೆ ಆಗಮಿಸುತ್ತವೆ. ಭಾರತ ವರ್ಷಪೂರ್ತಿ ಹಲವಾರು ವಲಸಿಗ ಪ್ರಭೇದಗಳ ಆಶ್ರಯತಾಣವಾಗಿರುತ್ತದೆ. ಇಲ್ಲಿ ಬರುವ ಪಕ್ಷಿಗಳು 500 ಕ್ಕೂ ಹೆಚ್ಚು ಪ್ರಭೇದದ ಮತ್ತು ಬೇರೆ ಬೇರೆ ಪ್ರದೇಶಗಳಿಂದ ಬಂದವುಗಳಾಗಿರುತ್ತವೆ ಎಂದೂ ಹೇಳಲಾಗುತ್ತದೆ. ಕೆಲ ದಿನಗಳ ಹಿಂದೆ ಗಾಂಧಿ ನಗರದಲ್ಲಿ ‘COP – 13 convention’, ನಲ್ಲಿ ಈ ವಿಷಯದ ಕುರಿತು ಸಾಕಷ್ಟು ಚಿಂತನೆಯಾಯಿತು, ಮನನವಾಯಿತು ಮತ್ತು ಮನವರಿಕೆಯೂ ಆಯಿತು ಮತ್ತು ಭಾರತದ ಪ್ರಯತ್ನಗಳ ಬಗ್ಗೆ ಸಾಕಷ್ಟು ಮೆಚ್ಚುಗೆಯೂ ವ್ಯಕ್ತವಾಯಿತು. ಸ್ನೇಹಿತರೇ, ಮುಂಬರುವ 3 ವರ್ಷಗಳವರೆಗೆ ಭಾರತ, ವಲಸಿಗ ಪಕ್ಷಿ ಪ್ರಭೇದಗಳ ಕುರಿತಾದ ‘COP convention’ ನ ಻ಅಧ್ಯಕ್ಷತೆ ವಹಿಸುತ್ತಿದೆ ಎಂಬುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯ. ಈ ಅವಕಾಶವನ್ನು ಹೇಗೆ ಸದ್ಭಳಕೆ ಮಾಡಿಕೊಳ್ಳಬೇಕು ಎಂಬುದರ ಕುರಿತು ನಿಮ್ಮ ಻ಅನಿಸಿಕೆಗಳನ್ನು ಖಂಡಿತ ಕಳುಹಿಸಿ

‘COP convention’ ಕುರಿತು ಚರ್ಚೆ ನಡೆಯುತ್ತಿರುವಾಗಲೇ ನನ್ನ ಗಮನ ಮೇಘಾಲಯಕ್ಕೆ ಸಂಬಂಧಿಸಿದ ಒಂದು ಪ್ರಮುಖ ವಿಷಯದತ್ತ ಹರಿಯಿತು. ಇತ್ತೀಚೆಗೆ ಜೀವಶಾಸ್ತ್ರಜ್ಞರು ಮೀನಿನ ಒಂದು ಹೊಸ ಪ್ರಭೇದವನ್ನು ಪತ್ತೆ ಹಚ್ಚಿದ್ದಾರೆ, ಇದು ಕೇವಲ ಮೇಘಾಲಯದ ಗುಹೆಗಳೊಳಗೆ ಮಾತ್ರ ಕಂಡುಬರುತ್ತದೆ. ಈ  ಮೀನು ಗುಹೆಯೊಳಗೆ ಭೂಮಿಯಡಿಯಲ್ಲಿ ವಾಸಿಸುವ ಜಲಚರಗಳ ಪ್ರಭೇದಗಳಲ್ಲೇ ಅತ್ಯಂತ ದೊಡ್ಡದು ಎಂದು ನಂಬಲಾಗಿದೆ. ಈ ಮೀನು ಬೆಳಕು ತಲುಪಲು ಸಾಧ್ಯವೂ ಇಲ್ಲದಂತಹ ಕಗ್ಗತ್ತಲು ತುಂಬಿದ ಭೂಗರ್ಭದ ಗುಹೆಗಳಲ್ಲಿ ಇರುತ್ತದೆ. ಇಂಥ ಆಳವಾದ ಗುಹೆಯಲ್ಲಿ ಇಷ್ಟು ದೊಡ್ಡ ಮೀನು ಹೇಗೆ ಜೀವಂತವಾಗಿರುತ್ತದೆ ಎಂದು ವಿಜ್ಞಾನಿಗಳು ಕೂಡಾ ಅಚ್ಚರಿಪಟ್ಟಿದ್ದಾರೆ. ನಮ್ಮ ಭಾರತ ಅದರಲ್ಲೂ ವಿಶೇಷವಾಗಿ ಮೇಘಾಲಯ ಇಂಥ ಅಪರೂಪದ ಪ್ರಭೇದಗಳ ತವರಾಗಿದೆ ಎಂಬುದು ಆಹ್ಲಾದಕರ ವಿಷಯ. ಇದು ಭಾರತದ ಜೀವ ವೈವಿಧ್ಯತೆಗೆ ಒಂದು ಹೊಸ ಆಯಾಮವನ್ನು ನೀಡಲಿದೆ. ನಮ್ಮ ಸುತ್ತಮುತ್ತಲೂ ಇಂದಿಗೂ ಆವಿಷ್ಕರಿಸಲಾರದ ಹಲವಾರು ವಿಸ್ಮಯಗಳಿವೆ. ಇಂಥ ವಿಸ್ಮಯಗಳ ಪತ್ತೆಗೆ ತನಿಖಾ ಉತ್ಸಾಹದ ಅವಶ್ಯಕತೆಯಿರುತ್ತದೆ.    

ತಮಿಳಿನ ಮಹಾ ಕವಿಯಿತ್ರಿ ಅವ್ವಯ್ಯಾರ್ ಹೀಗೆ ಬರೆದಿದ್ದಾರೆ

ಕಟರದು ಕೈಮಣ ಅಲವೆ ಆನಾಲುಮ್

ಕಲ್ಲಾದದು ಉಲಗಲವು”

ಇದರರ್ಥ ‘ನಾವು ತಿಳಿದದ್ದು ಒಂದು ಮುಷ್ಠಿಯಷ್ಟಾದರೆ, ನಾವು ಅರಿಯದ್ದು ಸಂಪೂರ್ಣ ಬ್ರಹ್ಮಾಂಡಕ್ಕೆ ಸಮನಾಗಿದೆ’. ಈ ದೇಶದ ವೈವಿಧ್ಯತೆಯೂ ಹಾಗೇ ಇದೆ. ಎಷ್ಟು ಅರಿತರೂ ಸಾಲದು. ನಮ್ಮ ಜೀವವೈವಿಧ್ಯತೆಯೂ ಸಂಪೂರ್ಣ ಮಾನವ ಕುಲಕ್ಕೆ ಒಂದು ವಿಶಿಷ್ಟ ಖಜಾನೆಯಾಗಿದೆ. ಇದನ್ನು ನಾವು ಸಲಹಬೇಕು, ಸಂರಕ್ಷಿಸಬೇಕು ಮತ್ತು ಅನ್ವೇಷಿಸಬೇಕಿದೆ.

ನನ್ನ ಪ್ರಿಯ ಯುವ ಸ್ನೇಹಿತರೆ, ಈ ಮಧ್ಯೆ ನಮ್ಮ ದೇಶದ ಮಕ್ಕಳಲ್ಲಿ, ಯುವಕರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದೆಡೆ ಆಸಕ್ತಿ ನಿರಂತರವಾಗಿ ವೃದ್ಧಿಸುತ್ತಿದೆ. ಅಂತರಿಕ್ಷದಲ್ಲಿ ಉಪಗ್ರಹ ಉಡ್ಡಯನದಲ್ಲಿ ದಾಖಲೆ, ಹೊಸ ಹೊಸ ದಾಖಲೆಗಳು, ಹೊಸ ಹೊಸ ಯೋಜನೆಗಳು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಯಿಂದ ಬೀಗುವಂತೆ ಮಾಡುತ್ತವೆ. ನಾನು ಚಂದ್ರಯಾನ -2 ರ ಸಮಯದಲ್ಲಿ ಬೆಂಗಳೂರಿನಲ್ಲಿದ್ದೆ, ಆಗ ನಾನು ನೋಡಿದ್ದೆ, ಅಲ್ಲಿ ಉಪಸ್ಥಿತರಿದ್ದ ಮಕ್ಕಳ ಉತ್ಸಾಹ ನೋಡುವಂತಿತ್ತು. ನಿದ್ದೆಯ ಸುಳಿವೂ ಅಲ್ಲಿರಲಿಲ್ಲ. ಒಂದು ರೀತಿ ಇಡೀ ರಾತ್ರಿ ಅವರು ಜಾಗರಣೆ ಮಾಡಿದ್ದರು. ಅವರಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಅನ್ವೇಷಣೆ ಬಗ್ಗೆ ಇದ್ದ ಉತ್ಸಾಹವನ್ನು ನಾವು ಮರೆಯಲಾಗದು. ಮಕ್ಕಳ, ಯುವಕರ, ಇದೇ ಉತ್ಸಾಹಕ್ಕೆ ಪುಷ್ಟಿ ನೀಡಲು ಮತ್ತೊಂದು ವ್ಯವಸ್ಥೆಯು ಆರಂಭಗೊಂಡಿದೆ. ಈಗ ನೀವು ಶ್ರೀಹರಿಕೋಟಾದಲ್ಲಿ ಆಗುವ ಉಪಗ್ರಹ ಉಡಾವಣೆಯನ್ನು ಮುಂದೆ ಕುಳಿತು ನೋಡಬಹುದು. ಇತ್ತೀಚೆಗೆ ಇದನ್ನು ಸರ್ವರಿಗೂ ಮುಕ್ತಗೊಳಿಸಲಾಗಿದೆ. ಸಂದರ್ಶಕರ ಗ್ಯಾಲರಿ ನಿರ್ಮಿಸಲಾಗಿದ್ದು ಅಲ್ಲಿ 10 ಸಾವಿರ ಜನರು ಕುಳಿತುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. ಇಸ್ರೊ ವೆಬ್ ಸೈಟ್ ನಲ್ಲಿ ನೀಡಲಾದ ಲಿಂಕ್ ಮೂಲಕ ಆನ್ ಲೈನ್ ಬುಕಿಂಗ್ ಕೂಡಾ ಮಾಡಬಹುದಾಗಿದೆ. ಬಹಳಷ್ಟು ಶಾಲೆಗಳು ತಮ್ಮ ಮಕ್ಕಳಿಗೆ ಉಪಗ್ರಹ ಉಡಾವಣೆಯನ್ನು ತೋರಿಸಲು ಮತ್ತು ಅವರನ್ನು ಪ್ರೇರೆಪಿಸಲು ಪ್ರವಾಸಕ್ಕೂ ಕರೆದೊಯ್ಯುತ್ತಿವೆ ಎಂದು ನನಗೆ ಹೇಳಲಾಗಿದೆ. ಎಲ್ಲ ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ಇದರ ಲಾಭ ಪಡೆಯಬೇಕೆಂದು ನಾನು ಆಗ್ರಹಿಸುತ್ತೇನೆ.          

ಸ್ನೇಹಿತರೆ, ನಿಮಗೆ ನಾನು ಮತ್ತೊಂದು ರೋಮಾಂಚಕ ಮಾಹಿತಿ ನೀಡಬಯಸುತ್ತೇನೆ. ನಾನು ನಮೋ ಆಪ್ ನಲ್ಲಿ ಜಾರ್ಖಂಡ್ ನ ಧನ್ ಬಾದ್ ನಿವಾಸಿ ಪಾರಸ್ ಅವರ ಕಮೆಂಟ್ ಓದಿದೆ. ನಾನು ಇಸ್ರೋದ ಯುವಿಕಾ ಕಾರ್ಯಕ್ರಮದ ಕುರಿತು ಯುವ ಸ್ನೇಹಿತರಿಗೆ ತಿಳಿಸಬೇಕೆಂದು ಪಾರಸ್ ಕೋರಿದ್ದಾರೆ. ‘ಯುವಿಕಾ’ ಎಂಬುದು ಯುವಜನತೆಯನ್ನು ವಿಜ್ಞಾನದೊಂದಿಗೆ ಬೆರೆಯುವಂತೆ ಮಾಡಲು ಇಸ್ರೋ ಕೈಗೊಂಡ ಪ್ರಶಂಸನೀಯ ಪ್ರಯತ್ನವಾಗಿದೆ. 2019 ರಲ್ಲಿ ಈ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆರಂಭಿಸಲಾಗಿತ್ತು. ‘ಯುವಿಕಾ’ ಅಂದರೆ ಯುವ ವಿಜ್ಞಾನಿ ಕಾರ್ಯಕ್ರಮ ಎಂದು. ಈ ಕಾರ್ಯಕ್ರಮ ನಮ್ಮ ದೃಷ್ಟಿಕೋನವಾದ “ಜೈ ಜವಾನ್, ಜೈ ಕಿಸಾನ್, ಜೈ ವಿಜ್ಞಾನ್, ಜೈ ಅನುಸಂಧಾನ್” ಎಂಬುದಕ್ಕೆ ತಕ್ಕುದಾಗಿದೆ. ಈ ಕಾರ್ಯಕ್ರಮದಲ್ಲಿ ತಮ್ಮ ಪರೀಕ್ಷೆಗಳ ನಂತರ ರಜೆಯಲ್ಲಿ ವಿದ್ಯಾರ್ಥಿಗಳು ಇಸ್ರೋದ ಬೇರೆ ಬೇರೆ ಕೇಂದ್ರಗಳಲ್ಲಿ ಅಂತರಿಕ್ಷ ತಂತ್ರಜ್ಞಾನ, ಅಂತರಿಕ್ಷ ವಿಜ್ಞಾನ ಮತ್ತು ಅಂತರಿಕ್ಷ ಅನ್ವಯಿಕೆ ಕುರಿತು ಕಲಿಯುತ್ತಾರೆ. ನಿಮಗೆ ತರಬೇತಿ ಹೇಗಿದೆ? ಯಾವ ರೀತಿಯಿದೆ? ಎಷ್ಟು ರೋಮಾಂಚಕಾರಿಯಾಗಿದೆ? ಎಂದು ತಿಳಿಯಬೇಕೆಂದಲ್ಲಿ ಕಳೆದ ಬಾರಿ ಇದರಲ್ಲಿ ಪಾಲ್ಗೊಂಡವರ ಅನುಭವಗಳನ್ನು ಖಂಡಿತಾ ಓದಿರಿ. ನಿಮಗೆ ಸ್ವತಃ ಭಾಗವಹಿಸಬೇಕೆಂದಲ್ಲಿ ಇಸ್ರೋದ ‘ಯುವಿಕಾ’ ವೆಬ್ ಸೈಟ್ ಗೆ ತೆರಳಿ ನೊಂದಾಯಿಸಿಕೊಳ್ಳಬಹುದು. ನನ್ನ ಯುವಮಿತ್ರರೆ, ನಾನು ನಿಮಗಾಗಿ ವೆಬ್ ಸೈಟ್ ಹೆಸರು ಹೇಳುತ್ತಿದ್ದೇನೆ, ಬರೆದುಕೊಳ್ಳಿ ಮತ್ತು ಖಂಡಿತಾ ಇಂದೇ ಭೇಟಿ ನೀಡಿ. www.yuvika.isro.gov.in  ಬರೆದುಕೊಂಡಿರಾ?    

ನನ್ನ ಪ್ರೀತಿಯ ದೇಶವಾಸಿಗಳೇ, 2020 ರ ಜನವರಿ 31 ರಂದು ಲದ್ದಾಖ್ ನ ಸುಂದರ ಗಿರಿಶಿಖರಗಳು ಒಂದು ಐತಿಹಾಸಿಕ ಘಟನೆಗೆ ಸಾಕ್ಷಿಯಾದವು. ಲೇಹ್ ನ ಕುಶೊಕ್ ಬಾಕುಲಾ ರಿಂಪೋಚಿ ವಿಮಾನ ನಿಲ್ದಾಣದಿಂದ ಭಾರತೀಯ ವಾಯುಬಲದ AN-32 ವಿಮಾನ ಹಾರಾಟ ನಡೆಸಿದಾಗ ಒಂದು ಹೊಸ ಇತಿಹಾಸವೇ ನಿರ್ಮಾಣವಾಯಿತು.   ಈ ಉಡಾವಣೆಯಲ್ಲಿ ಶೇ 10 ರಷ್ಟು ಭಾರತೀಯ Bio-jet fuel ಮಿಶ್ರಣ ಮಾಡಲಾಗಿತ್ತು. ಎರಡೂ ಇಂಜಿನ್ ಗಳಲ್ಲೂ ಈ ಮಿಶ್ರಣದ ಉಪಯೋಗ ಮಾಡಿದ್ದು ಇದೇ ಮೊದಲ ಬಾರಿ. ಭಾರತದಲ್ಲಷ್ಟೇ ಅಲ್ಲದೆ ಇಡೀ ವಿಶ್ವದಲ್ಲೇ ಅತ್ಯಂತ ಎತ್ತರದಲ್ಲಿರುವ ವಿಮಾನ ನಿಲ್ದಾಣಗಳಲ್ಲಿ ಒಂದಾದ ವಿಮಾನ ನಿಲ್ದಾಣದಿಂದ ಇದು ಹಾರಾಟ ನಡೆಸಿದೆ. ವಿಶೇಷತೆಯೆಂದರೆ Bio-jet fuel ನ್ನು ಸೇವಿಸಲಾಗದ ಮರದ ತೈಲದಿಂದ ತಯರಿಸಲಾಗಿದೆ. ಇದನ್ನು ಭಾರತದ ವಿಭಿನ್ನ ಬುಡಕಟ್ಟು ಪ್ರದೇಶಗಳಿಂದ ಖರೀದಿಸಲಾಗುತ್ತದೆ. ಈ ಪ್ರಯತ್ನಗಳಿಂದ ಕೇವಲ ಇಂಗಾಲದ ಡೈ ಆಕ್ಸೈಡ್ ಹೊರಸೂಸುವಿಕೆ ತಗ್ಗಿಸುವುದಲ್ಲದೇ ಕಚ್ಚಾ ತೈಲದ ಆಮದಿನ ಮೇಲೆ ಭಾರತದ ಅವಲಂಬನೆಯೂ ಕಡಿಮೆಯಾಗಬಹುದಾಗಿದೆ.  ಈ ಬೃಹತ್ ಕಾರ್ಯದಲ್ಲಿ ತೊಡಗಿರುವ ಎಲ್ಲರನ್ನೂ ಅಭಿನಂದಿಸುತ್ತೇನೆ. ಅದರಲ್ಲೂ ವಿಶೇಷವಾಗಿ ಬಯೋಫ್ಯುಯೆಲ್ ನಿಂದ ವಿಮಾನ ಹಾರಾಟ ತಂತ್ರವನ್ನು ಸಿದ್ಧಪಡಿಸಿದ ಡೆಹ್ರಾಡೂನ್ ನ CSIR, Indian Institute of Petroleum ನ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ. ಅವರ ಈ ಪ್ರಯತ್ನ, ಮೇಕ್ ಇನ್ ಇಂಡಿಯಾಗೂ ಪುಷ್ಟಿ ನೀಡುತ್ತದೆ.

ನನ್ನ ಪ್ರೀತಿಯ ದೇಶಬಾಂಧವರೇ, ನಮ್ಮ ನವಭಾರತ ಈಗ ತನ್ನ ಹಳೆಯ ವಿಧಾನಗಳನ್ನು ತೊರೆದು ಹೊಸತರೊಂದಿಗೆ ಮುಂದೆ ಸಾಗುವುದಕ್ಕೆ ಸಿದ್ಧವಾಗಿದೆ.  ವಿಶೇಷವಾಗಿ, ಹೊಸಭಾರತದ ನಮ್ಮ ಸೋದರಿಯರು ಮತ್ತು ಮಾತೆಯರು ಮುಂದೆ ಸಾಗಿ ಆ ಸವಾಲುಗಳನ್ನು ತಮ್ಮ ಕೈಗೆತ್ತಿಕೊಳ್ಳುತ್ತಿದ್ದಾರೆ, ಇದರಿಂದಾಗಿ ಸಂಪೂರ್ಣ ಸಮಾಜದಲ್ಲಿ ಒಂದು ಸಕಾರಾತ್ಮಕ ಪರಿವರ್ತನೆ ಕಂಡುಬರುತ್ತಿದೆ. ಬಿಹಾರದ ಪೂರ್ಣಿಯಾದ ಕತೆಯು, ಇಡೀ ದೇಶದ ಜನರಿಗೆ ಪ್ರೇರಣೆ ನೀಡುವಂತಹದ್ದಾಗಿದೆ. ದಶಕಗಳಿಂದಲೂ ಪ್ರವಾಹದ ಸಮಸ್ಯೆಯಿಂದ ಓಲಾಡುತ್ತಿರುವ ಪ್ರದೇಶ ಇದಾಗಿದೆ. ಇಂತಹದ್ದರಲ್ಲಿ, ಇಲ್ಲಿ, ಬೇಸಾಯ ಮತ್ತು ಇತರ ಆದಾಯದ ಸಂಪನ್ಮೂಲಗಳನ್ನು ಕ್ರೋಢೀಕರಿಸುವುದು ಬಹಳ ಕಷ್ಟಕರವಾಗಿದೆ. ಆದರೆ, ಇದೇ ಪರಿಸ್ಥಿತಿಗಳಲ್ಲಿ ಪೂರ್ಣಿಯಾದಲ್ಲಿ, ಕೆಲವು ಮಹಿಳೆಯರು ಒಂದು ಬೇರೆಯೇ ಮಾರ್ಗವನ್ನು ಆಯ್ಕೆ ಮಾಡಿಕೊಂಡರು. ಸ್ನೇಹಿತರೇ, ಮೊದಲು ಈ ಪ್ರದೇಶದ ಮಹಿಳೆಯರು ಹಿಪ್ಪನೇರಳೆ ಅಥವಾ ಮಲ್ಬರಿ ಮರಗಳ ಮೇಲೆ ರೇಷ್ಮೆ ಹುಳುಗಳಿಂದ ರೇಷ್ಮೆಗೂಡು  ತಯಾರಿಸುತ್ತಿದ್ದರು. ಇದಕ್ಕೆ ಅವರಿಗೆ ಬಹಳ ಸಾಧಾರಣ ದರ ಸಿಗುತ್ತಿತ್ತು. ಇದನ್ನು ಖರೀದಿಸುವ ವ್ಯಕ್ತಿಗಳು, ಇದೇ ಕುಕೂನ್ ಗಳಿಂದ ರೇಷ್ಮೆ ದಾರ ತಯಾರಿಸಿ, ಭಾರೀ ಲಾಭ ಗಿಟ್ಟಿಸಿಕೊಳ್ಳುತ್ತಿದ್ದರು. ಆದರೆ, ಇಂದು ಪೂರ್ಣಿಯಾದ ಮಹಿಳೆಯರು ಒಂದು ಹೊಸ ಆರಂಭ ಮಾಡಿದ್ದಾರೆ ಮತ್ತು ಸಂಪೂರ್ಣ ಚಿತ್ರಣವನ್ನೇ ಬದಲಾಯಿಸಿ ಬಿಟ್ಟಿದ್ದಾರೆ. ಈ ಮಹಿಳೆಯರು ಸರ್ಕಾರದ ಸಹಾಯದೊಂದಿಗೆ, ಮಲ್ಬರಿ-ಉತ್ಪನ್ನ ಸಮೂಹ ರಚಿಸಿದರು. ಇದಾದ ನಂತರ ಅವರು ರೇಷ್ಮೆ ಗೂಡುಗಳಿಂದ ರೇಷ್ಮೆ ದಾರ ತಯಾರಿಸಿದರು ಮತ್ತು ಆ ನೂಲುಗಳಿಂದ ಸ್ವತಃ ಸೀರೆಗಳನ್ನು ತಯಾರಿಸುವುದನ್ನು ಕೂಡಾ ಪ್ರಾರಂಭಿಸಿದರು. ಈಮುನ್ನ ಯಾವ ರೇಷ್ಮೆಗೂಡುಗಳನ್ನು ಮಾರಾಟ ಮಾಡುವುದರಿಂದ ಅವರಿಗೆ ಸಾಧಾರಣ ಹಣ ಸಿಗುತ್ತಿತ್ತೋ, ಈಗ ಅದರಿಂದಲೇ ತಯಾರಿಸಲ್ಪಟ್ಟ ಸೀರೆಗಳು ಸಾವಿರಾರು ರೂಪಾಯಿಗಳಿಗೆ ಮಾರಾಟವಾಗುತ್ತಿವೆ ಎಂದು ತಿಳಿದು ನಿಮಗೆ ಆಶ್ಚರ್ಯವೆನಿಸಬಹುದು. ‘ಆದರ್ಶ್ ಜೀವಿಕಾ ಮಹಿಳಾ ಮಲ್ಬರಿ ಉತ್ಪಾದನಾ ಸಮೂಹ’ದ ಸೋದರಿಯರು ಮಾಡಿರುವ ಪವಾಡಗಳ ಪರಿಣಾಮಗಳು ಈಗ ಅನೇಕ ಗ್ರಾಮಗಳಲ್ಲಿ ಕಂಡು ಬರುತ್ತಿವೆ. ಪೂರ್ಣಿಯಾದ ಅನೇಕ ಗ್ರಾಮಗಳ ಸೋದರಿಯರು, ಈಗ ಕೇವಲ ಸೀರೆಗಳನ್ನು ತಯಾರಿಸುವುದಷ್ಟೇ ಅಲ್ಲದೇ, ದೊಡ್ಡ ದೊಡ್ಡ ಜಾತ್ರೆ, ಮೇಳಗಳಲ್ಲಿ ಮಳಿಗೆಗಳನ್ನು ತೆರೆದು ಮಾರಾಟ ಕೂಡಾ ಮಾಡುತ್ತಿದ್ದಾರೆ. ಇಂದಿನ ಮಹಿಳೆ ಹೊಸ ಶಕ್ತಿ, ಹೊಸ ಆಲೋಚನೆಯೊಂದಿಗೆ ಯಾವ ರೀತಿಯಲ್ಲಿ ಹೊಸ ಗುರಿಗಳನ್ನು ಸಾಧಿಸುತ್ತಿದ್ದಾರೆ ಎನ್ನುವುದಕ್ಕೆ ಇದು ಒಂದು ಉದಾಹರಣೆ.

ನನ್ನ ಪ್ರೀತಿಯ ದೇಶಬಾಂಧವರೇ, ನಮ್ಮ ದೇಶದ ಮಹಿಳೆಯರ, ನಮ್ಮ ಹೆಣ್ಣು ಮಕ್ಕಳ ಉದ್ಯಮಶೀಲತೆ, ಅವರ ಸಾಹಸ, ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯವೆನಿಸಿದೆ. ನಮ್ಮ ಸುತ್ತ ಮುತ್ತ ಇಂತಹ ಅನೇಕ ಉದಾಹರಣೆಗಳು ಸಿಗುತ್ತವೆ. ಹೆಣ್ಣು ಮಕ್ಕಳು ಯಾವ ರೀತಿ ಹಿಂದಿನ ನಿರ್ಬಂಧಗಳನ್ನು ತೊಡೆದು ಹಾಕುತ್ತಿದ್ದಾರೆ, ಹೇಗೆ ಹೊಸ ಎತ್ತರಗಳನ್ನು ಅಧಿಗಮಿಸುತ್ತಿದ್ದಾರೆ ಎನ್ನುವುದು ಇವುಗಳಿಂದ ತಿಳಿದುಬರುತ್ತದೆ. ಹನ್ನೆರಡು ವರ್ಷದ ಬಾಲಕಿ ಕಾಮ್ಯಾ ಕಾರ್ತಿಕೇಯನ್ನಳ ಸಾಧನೆ ಬಗ್ಗೆ ನಾನು ನಿಮ್ಮೊಂದಿಗೆ ಖಂಡಿತಾ ಚರ್ಚಿಸಲು ಬಯಸುತ್ತೇನೆ.  ಕಾಮ್ಯಾ ತನ್ನ ಹನ್ನೆರಡನೇ ವಯಸ್ಸಿನಲ್ಲೇ, ಮೌಂಟ್ ಅಕಾನ್ಕಾಗುವಾ (Mount Aconcagua) ಏರುವ ಸಾಧನೆ ಮಾಡಿ ತೊರಿದ್ದಾಳೆ. ಇದು ದಕ್ಷಿಣ ಅಮೆರಿಕಾದಲ್ಲಿ, ಆಂಡಿಸ್ ಪರ್ವತದ ಅತ್ಯಂತ ಎತ್ತರದ ಶಿಖರವಾಗಿದ್ದು. ಸುಮಾರು 7000 ಮೀಟರ್ ಎತ್ತರವಿದೆ. ಈ ತಿಂಗಳಾರಂಭದಲ್ಲಿ ಕಾಮ್ಯಾ ಪರ್ವತ ಏರಿದಳು ಮತ್ತು ಎಲ್ಲಕ್ಕಿಂತ ಮೊದಲು ಅಲ್ಲಿ ನಮ್ಮ ತ್ರಿವರ್ಣ ಧ್ವಜ ಹಾರಿಸಿದಳೆಂದು ಕೇಳಿದಾಗ ಪ್ರತಿ ಭಾರತೀಯನ ಮನಸ್ಸಿಗೂ ಇದು ಆಳವಾಗಿ ಮುಟ್ಟತ್ತದೆ. ದೇಶವೇ ಹೆಮ್ಮೆ ಪಡುವಂತೆ ಮಾಡಿದ ಕಾವ್ಯಾ ಈಗ ಹೊಸದೊಂದು ಕಾರ್ಯಾಚರಣೆಯಲ್ಲಿದ್ದಾರೆ ಮತ್ತು ಇದರ ಹೆಸರು ಮಿಷನ್ ಸಾಹಸ್ ಎಂದು ನನಗೆ ತಿಳಿದು ಬಂದಿದೆ. ಇದರ ಮೂಲಕ ಅವರು ಎಲ್ಲಾ ಮಹಾದ್ವೀಪಗಳ ಅತಿ ಎತ್ತರದ ಪರ್ವತಾರೋಹಣ ಮಾಡುವಲ್ಲಿ ನಿರತರಾಗಿದ್ದಾರೆ. ಈ ಅಭಿಯಾನದಲ್ಲಿ ಅವರು ಉತ್ತರ ಮತ್ತು ದಕ್ಷಿಣ ಧೃವಗಳಲ್ಲಿ ಸ್ಕೀಯಿಂಗ್ ಕೂಡಾ ಮಾಡಬೇಕಾಗುತ್ತದೆ.  ನಾನು ಕಾಮ್ಯಾಳಿಗೆ ಮಿಷನ್ ಸಾಹಸ್ ಗಾಗಿ ನನ್ನ ಶುಭಾಷಯಗಳನ್ನು ಕೋರುತ್ತೇನೆ. ಹಾಗೆಯೇ ಕಾಮ್ಯಾಳ ಈ ಸಾಧನೆ ಫಿಟ್ ಆಗಿರಲು ಎಲ್ಲರನ್ನೂ ಪ್ರೇರೇಪಿಸುತ್ತದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ, ಕಾಮ್ಯಾ ತಲುಪಿರುವ ಈ ಎತ್ತರದಲ್ಲಿ, ಫಿಟ್ನೆಸ್ ಕೊಡುಗೆ ಬಹಳ ದೊಡ್ಡದಿದೆ.  A Nation that is fit, will be a nation that is hit. ಅಂದರೆ, ಯಾವ ದೇಶ ಫಿಟ್ ಆಗಿರುತ್ತದೆಯೇ, ಅದು ಯಾವಾಗಲೂ ಹಿಟ್ ಆಗಿರುತ್ತದೆ. ಹಾಗೆಯೇ ಮುಂಬರಲಿರುವ ತಿಂಗಳಂತೂ ಸಾಹಸಕ್ರೀಡೆಗಳಿಗೆ ಬಹಳಷ್ಟು ಉಪಯುಕ್ತವಾಗಿದೆ. ಭಾರತದ ಭೌಗೋಳಿಕತೆ ಹೇಗಿದೆಯೆಂದರೆ, ಅದು ನಮ್ಮ ದೇಶಕ್ಕೆ ಸಾಹಸಕ್ರೀಡೆಗಳಿಗೆ ಬಹಳಷ್ಟು ಅವಕಾಶಗಳನ್ನು ಒದಗಿಸುತ್ತದೆ. ಒಂದುಕಡೆ ಎತ್ತರೆತ್ತರದ ಪರ್ವತಗಳಿದ್ದರೆ, ಮತ್ತೊಂದೆಡೆ ದೂರದೂರದವರೆಗೆ ವ್ಯಾಪಿಸಿರುವ ಮರಳುಗಾಡಿದೆ. ಒಂದೆಡೆ ದಟ್ಟವಾದ ಕಾಡುಗಳು ಹರಡಿದ್ದರೆ, ಮತ್ತೊಂದೆಡೆ ವಿಸ್ತಾರವಾದ ಸಮುದ್ರವಿದೆ. ಆದ್ದರಿಂದ, ನೀವು ಕೂಡಾ ನಿಮ್ಮ ಇಷ್ಟದ ಜಾಗ, ನಿಮ್ಮ ಇಚ್ಛೆಯ ಚಟುವಟಿಕೆ ಆಯ್ಕೆ ಮಾಡಿ ಮತ್ತು ನಿಮ್ಮ ಜೀವನವನ್ನು ಸಾಹಸದೊಂದಿಗೆ ಖಂಡಿತಾಜೋಡಿಸಿ ಎಂದು ನಾನು ನಿಮ್ಮೆಲ್ಲರಲ್ಲಿ ವಿಶೇಷವಾಗಿ ಮನವಿ ಮಾಡುತ್ತೇನೆ.  ಜೀವನದಲ್ಲಿ ಸಾಹಸ ಇರಲೇ ಬೇಕಲ್ಲವೇ! ಸ್ನೇಹಿತರೇ,  ಹನ್ನೆರಡು ವರ್ಷದ ಹೆಣ್ಣುಮಗು ಕಾಮ್ಯಾಳ ಸಫಲತೆಯ ನಂತರ, 105 ವರ್ಷ ವಯಸ್ಸಿನ ಭಾಗೀರಥಿ ಅಮ್ಮನ ಸಫಲತೆಯ ಕತೆ ಕೇಳಿದರಂತೂ ನೀವು ಮತ್ತಷ್ಟು ಆಶ್ಚರ್ಯಚಕಿತರಾಗುತ್ತೀರಿ. ಸ್ನೇಹಿತರೇ, ನಾವು ಜೀವನದಲ್ಲಿ ಮುಂದುವರಿಯಬೇಕೆಂದು ಬಯಸಿದಲ್ಲಿ, ಅಭಿವೃದ್ಧಿ ಹೊಂದಲು ಬಯಸಿದಲ್ಲಿ, ಏನನ್ನಾದರೂ ಮಾಡಬೇಕೆಂದು ಬಯಸಿದರೆ, ನಮ್ಮೊಳಗಿನ ವಿದ್ಯಾರ್ಥಿ ಎಂದಿಗೂ ಸಾಯಬಾರದು ಎನ್ನುವುದು ಮೊದಲನೇ ಷರತ್ತಾಗಿರುತ್ತದೆ.  ನಮ್ಮ 105 ವರ್ಷ ವಯಸ್ಸಿನ ಭಾಗೀರಥಿ ಅಮ್ಮ ನಮಗೆ ಈ ಪ್ರೇರಣೆಯನ್ನು ನೀಡುತ್ತಾರೆ. ಈ ಭಾಗೀರಥಿ ಅಮ್ಮಾ ಯಾರು? ಎಂದು ಈಗ ನೀವು ಯೋಚಿಸುತ್ತಿರಬಹುದು. ಭಾಗೀರಥಿ ಅಮ್ಮ ಕೇರಳದ ಕೊಲ್ಲಂನಲ್ಲಿ ವಾಸಿಸುತ್ತಿದ್ದಾರೆ. ಬಹಳ ಚಿಕ್ಕ ವಯಸ್ಸಿನಲ್ಲೇ ಆಕೆ ತನ್ನ ತಾಯಿಯನ್ನು ಕಳೆದುಕೊಂಡರು. ಚಿಕ್ಕ ವಯಸ್ಸಿನಲ್ಲೇ ವಿವಾಹವಾದ ನಂತರ ಪತಿಯನ್ನು ಕೂಡಾ ಕಳೆದುಕೊಂಡರು. ಆದರೆ, ಭಾಗೀರಥಿ ಅಮ್ಮ ತಮ್ಮ ಧೈರ್ಯ ಕಳೆದುಕೊಳ್ಳಲಿಲ್ಲ, ತಮ್ಮ ಉತ್ಸಾಹ ಕಳೆದುಕೊಳ್ಳಲಿಲ್ಲ. ಹತ್ತು ವರ್ಷದಷ್ಟು ಕಡಿಮೆ ವಯಸ್ಸಿನಲ್ಲೇ ಅವರು ಶಾಲೆಯನ್ನು ತೊರೆಯಬೇಕಾಯಿತು. ಅವರು 105 ನೇ ವಯಸ್ಸಿನಲ್ಲಿ ಪುನಃ ಶಾಲೆಗೆ ಹೋಗಲು ಆರಂಭಿಸಿದರು. ಓದಲಾರಂಭಿಸಿದರು. ಈ ಇಳಿ  ವಯಸ್ಸಿನಲ್ಲೂ ಭಾಗೀರಥಿ ಅಮ್ಮ ಲೆವೆಲ್ 4 ರ ಪರೀಕ್ಷೆ ಬರೆದರು ಮತ್ತು ಬಹಳ ಕುತೂಹಲದಿಂದ ಫಲಿತಾಂಶಕ್ಕಾಗಿ ಕಾಯುತ್ತಿದ್ದರು.  ಅವರು ಪರೀಕ್ಷೆಯಲ್ಲಿ ಶೇಕಡಾ 75 ಅಂಕಗಳನ್ನು ಗಳಿಸಿದರು. ಇಷ್ಟೇ ಅಲ್ಲ, ಗಣಿತದಲ್ಲಿ ನೂರಕ್ಕೆ ನೂರು ಅಂಕ ಗಳಿಸಿದರು. ಅಮ್ಮ ಈಗ ಮುಂದೆ ಓದಲು ಬಯಸುತ್ತಿದ್ದಾರೆ. ಇನ್ನೂ ಮುಂದಿನ ಪರೀಕ್ಷೆಗಳನ್ನು ಬರಯಲು ಇಚ್ಛಿಸುತ್ತಿದ್ದಾರೆ. ಭಾಗೀರಥಿ ಅಮ್ಮನಂತಹ ವ್ಯಕ್ತಿಗಳು, ನಿಸ್ಸಂಶಯವಾಗಿಯೂ ಈ ದೇಶದ ಶಕ್ತಿಯಾಗಿದ್ದಾರೆ. ಸ್ಫೂರ್ತಿಯ ಅತಿದೊಡ್ಡ ಮೂಲವಾಗಿದ್ದಾರೆ. ನಾನು ಇಂದು ವಿಶೇಷವಾಗಿ ಭಾಗೀರಥಿ ಅಮ್ಮನಿಗೆ ವಂದಿಸುತ್ತೇನೆ.

ಸ್ನೇಹಿತರೇ, ಜೀವನದ ಪ್ರತಿಕೂಲ ಸಮಯದಲ್ಲಿ ನಮ್ಮ ಧೈರ್ಯ, ನಮ್ಮ ಇಚ್ಛಾ-ಶಕ್ತಿ, ಯಾವುದೇ ಪರಿಸ್ಥಿತಿಯನ್ನಾದರೂ ಬದಲಾಯಿಸಿಬಿಡುತ್ತದೆ. ಇತ್ತೀಚೆಗೆ ನಾನು, ಮೀಡಿಯಾದಲ್ಲಿ ಒಂದು ಕತೆಯನ್ನು ಓದಿದೆ ಮತ್ತು ಅದನ್ನು ನಿಮ್ಮೊಂದಿಗೆ ಖಂಡಿತಾ ಹಂಚಿಕೊಳ್ಳಲು ಬಯಸುತ್ತೇನೆ.  ಇದು ಮುರಾದಾಬಾದ್ ನ ಹಮೀರ್ ಪುರ ಗ್ರಾಮದ ನಿವಾಸಿ ಸಲ್ಮಾನ್ ಎಂಬಾತನ ಕತೆಯಾಗಿದೆ. ಸಲ್ಮಾನ್ ಹುಟ್ಟಿನಿಂದಲೇ ದಿವ್ಯಾಂಗ. ಅವರ ಕಾಲು ಆತನಿಗೆ ಸಹಕರಿಸುತ್ತಿರಲಿಲ್ಲ. ಇಂತಹ ಕಷ್ಟಗಳ ನಡುವೆಯೂ ಅವರು  ಸೋಲೊಪ್ಪಿಕೊಳ್ಳಲಿಲ್ಲ ಮತ್ತು ಸ್ವಂತಃ ತಮ್ಮ ಕೆಲಸ ಆರಂಭಿಸಬೇಕೆಂದು ನಿರ್ಧರಿಸಿದರು. ಜೊತೆಯಲ್ಲೇ,  ತಾವು ತಮ್ಮಂತಹ ದಿವ್ಯಾಂಗರಿಗೆ ಸಹಾಯ ಕೂಡಾ ಮಾಡುವುದಾಗಿ ಕೂಡಾ ನಿರ್ಧರಿಸಿದನು. ಮತ್ತೇನಾಯಿತೆಂದರೆ , ಸಲ್ಮಾನ್ ತನ್ನ ಗ್ರಾಮದಲ್ಲೇ, ಚಪ್ಪಲಿ ಮತ್ತು ಡಿಟರ್ಜೆಂಟ್ ತಯಾರಿಸುವ ಕೆಲಸ ಆರಂಭಿಸಿದರು. ನೋಡ ನೋಡುತ್ತಿದ್ದಂತೆಯೇ, ಅವರೊಂದಿಗೆ ಇತರ 30 ಮಂದಿ ದಿವ್ಯಾಂಗ ಸ್ನೇಹಿತರು ಸೇರಿಕೊಂಡರು. ಇಲ್ಲಿ ನೀವು ಗಮನಿಸಬೇಕಾದ ಅಂಶವೆಂದರೆ, ಸಲ್ಮಾನನಿಗೆ ಸ್ವತಃ ನಡೆಯಲು ಸಮಸ್ಯೆ ಇತ್ತು, ಆದರೆ ಅವರು ಇತರರಿಗೆ ನಡೆಯಲು ಸಹಾಯ ಮಾಡುವ ಚಪ್ಪಲಿ ತಯಾರಿಸಲು ನಿರ್ಧಾರ ಮಾಡಿದರು. ವಿಶೇಷವೆಂದರೆ ಸಲ್ಮಾನ್, ಜೊತೆಯ ದಿವ್ಯಾಂಗರಿಗೆ ತಾವೇ ಸ್ವತಃ ತರಬೇತಿ ನೀಡಿದರು. ಈಗ ಇವರೆಲ್ಲರೂ ಸೇರಿ ಮ್ಯಾನುಫ್ಯಾಕ್ಚರಿಂಗ್ ಕೂಡಾ ಮಾಡುತ್ತಾರೆ ಮತ್ತು ಮಾರ್ಕೆಟಿಂಗ್ ಕೂಡಾ ಮಾಡುತ್ತಾರೆ. ತಮ್ಮ ಶ್ರಮದಿಂದ ಇವರುಗಳು, ಕೇವಲ ತಮಗಾಗಿ ಉದ್ಯೋಗ ಖಾತ್ರಿ ಪಡಿಸಿಕೊಂಡಿದ್ದು ಮಾತ್ರವಲ್ಲದೇ, ತಮ್ಮ ಕಂಪೆನಿಯನ್ನು ಕೂಡಾ ಲಾಭದಾಯಕವಾಗಿಸಿದರು. ಈಗ ಇವರೆಲ್ಲರೂ ಸೇರಿ, ಒಂದು ದಿನದಲ್ಲಿ ನೂರಾ ಐವತ್ತು (150) ಜೊತೆ ಚಪ್ಪಲಿ ತಯಾರಿಸುತ್ತಾರೆ. ಇಷ್ಟೇ ಅಲ್ಲ, ಈವರ್ಷ 100 ದಿವ್ಯಾಂಗರಿಗೆ ಉದ್ಯೋಗಾವಕಾಶ ನೀಡಬೇಕೆಂದು ಸಲ್ಮಾನ್ ಸಂಕಲ್ಪ ಕೂಡಾ ಮಾಡಿದ್ದಾರೆ. ಇವರೆಲ್ಲರ ಧೈರ್ಯ, ಅವರ ಉದ್ಯಮಶೀಲತೆಗೆ ನಾನು ನಮಸ್ಕರಿಸುತ್ತೇನೆ. ಇಂತಹದ್ದೇ ಸಂಕಲ್ಪ ಶಕ್ತಿ, ಗುಜರಾತ್ ನ ಕೆಲವು ಪ್ರಾಂತ್ಯಗಳಲ್ಲಿ, ಅಜರಕ್ ಗ್ರಾಮದ ಜನರಲ್ಲಿ ಕೂಡಾ ಕಂಡು ಬಂದಿದೆ. 2001 ರಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ನಂತರ,ಜನರೆಲ್ಲರೂ ಗ್ರಾಮ ತೊರೆಯುತ್ತಿದ್ದರು, ಆಗ ಇಸ್ಮಾಯಿಲ್ ಖತ್ರಿ ಎಂಬ ವ್ಯಕ್ತಿಯು, ಗ್ರಾಮದಲ್ಲೇ ಉಳಿದು, ತಮ್ಮ ಸಾಂಪ್ರದಾಯಿಕ ಅಜರಕ್ ಪ್ರಿಂಟ್ ನ ಕಲೆಯನ್ನು ಉಳಿಸಿಕೊಳ್ಳಬೇಕೆಂದು ನಿರ್ಧರಿಸಿದರು. ನಂತರ, ನೋಡ ನೋಡುತ್ತಿದ್ದಂತೆಯೇ ಪ್ರಾಕೃತಿಕ ಬಣ್ಣಗಳಿಂದ ತಯಾರಿಸಿದ ಅಜರಕ್ ಕಲೆಯು ಪ್ರತಿಯೊಬ್ಬರನ್ನೂ ಆಕರ್ಷಿಸತೊಡಗಿತು ಮತ್ತು ಈ ಸಂಪೂರ್ಣ ಗ್ರಾಮವು ತನ್ನ ಸಾಂಪ್ರದಾಯಿಕ ಕರಕುಶಲ ವಿಧಾನದೊಂದಿಗೆ ಬೆಸೆದುಕೊಂಡಿತು.   ಗ್ರಾಮಸ್ಥರು, ನೂರಾರು ವರ್ಷಗಳಷ್ಟು ಹಳೆಯದಾದ ತಮ್ಮ ಕಲೆಯನ್ನು ಉಳಿಸಿದ್ದು ಮಾತ್ರವಲ್ಲ, ಅದನ್ನು ನವೀನ ಫ್ಯಾಷನ್ ನೊಂದಿಗೆ ಕೂಡಾ ಜೋಡಿಸಿದರು. ಈಗ ದೊಡ್ಡ ದೊಡ್ಡ ಡಿಸೈನರ್, ದೊಡ್ಡ ದೊಡ್ಡ ಡಿಸೈನ್ ಸಂಸ್ಥೆಗಳು ‘ಅಜರಕ್ ಪ್ರಿಂಟ್’ ಬಳಸಲು ಆರಂಭಿಸಿವೆ. ಗ್ರಾಮದ ಶ್ರಮಜೀವಿಗಳ ಕಾರಣದಿಂದಾಗಿ, ಇಂದು ‘ಅಜರಕ್ ಪ್ರಿಂಟ್’ ಒಂದು ದೊಡ್ಡ ಬ್ರಾಂಡ್ ಎನಿಸುತ್ತಿದೆ.  ವಿಶ್ವದ ದೊಡ್ಡ ಖರೀದಿದಾರರು ಈ ಪ್ರಿಂಟ್ ನೆಡೆಗೆ ಆಕರ್ಷಿತರಾಗುತ್ತಿದ್ದಾರೆ.

ನನ್ನ ಪ್ರೀತಿಯ ದೇಶಬಾಂಧವರೆ, ಇತ್ತೀಚೆಗೆ ಮಹಾ-ಶಿವರಾತ್ರಿ ಹಬ್ಬವನ್ನು ದೇಶಾದ್ಯಂತ ಆಚರಿಸಲಾಗಿದೆ. ಭಗವಂತ ಶಿವ ಮತ್ತು ಮಾತೆ ಪಾರ್ವತಿ ದೇವಿಯ ಆಶೀರ್ವಾದವು ದೇಶದ ಪ್ರಜ್ಞೆಯನ್ನು ಜಾಗೃತಗೊಳಿಸಿದೆ. ಮಹಾ-ಶಿವರಾತ್ರಿಯಂದು ಭೋಲೇ ಬಾಬಾನ ಆಶೀರ್ವಾದ ನಿಮ್ಮ ಮೇಲೆ ಉಳಿಯಲಿ,ನಿಮ್ಮ ಎಲ್ಲಾ ಮನೋಭಿಲಾಷೆಗಳನ್ನು ಶಿವ ಈಡೇರಿಸಲಿ, ನೀವು ಶಕ್ತಿವಂತರಾಗಿರಿ, ಆರೋಗ್ಯವಂತರಾಗಿರಿ, ಸುಖವಾಗಿರಿ, ಸಂತೋಷವಾಗಿರಿ ಮತ್ತು ದೇಶಕ್ಕಾಗಿ ನಿಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಿರಿ.

ಸ್ನೇಹಿತರೇ, ಮಹಾಶಿವರಾತ್ರಿಯೊಂದಿಗೇ, ವಸಂತ ಋತುವಿನ ಸೌಂದರ್ಯ ದಿನೇ ದಿನೇ ಹೆಚ್ಚಾಗುತ್ತಾ ಹೋಗುತ್ತದೆ. ಮುಂಬರುವ ದಿನಗಳಲ್ಲಿ ಹೋಳಿ ಹಬ್ಬವೂ ಇದೆ. ಅದಾದ ನಂತರ ಶೀಘ್ರದಲ್ಲೇ ಗುಡಿಪಾಡವಾ ಕೂಡಾ ಬರಲಿದೆ. ನವರಾತ್ರಿಯ ಹಬ್ಬವೂ ಇದರೊಂದಿಗೆ ಸೇರಿಕೊಂಡಿದೆ. ರಾಮನವಮಿ ಹಬ್ಬವೂ ಬರುತ್ತದೆ. ಹಬ್ಬಗಳು ನಮ್ಮ ದೇಶದಲ್ಲಿ ಸಾಮಾಜಿಕ ಜೀವನದ ಅವಿಭಾಜ್ಯ ಅಂಗವೇ ಆಗಿದೆ. ಪ್ರತಿ ಹಬ್ಬದ ಹಿಂದೆ ಯಾವುದಾದರೊಂದು ಸಾಮಾಜಿಕ ಸಂದೇಶ ಅಡಗಿರುತ್ತದೆ ಮತ್ತು ಈ ಸಂದೇಶವು ಕೇವಲ ಸಮಾಜವನ್ನು ಮಾತ್ರವಲ್ಲ, ಸಂಪೂರ್ಣ ದೇಶವನ್ನು, ಏಕತೆಯಲ್ಲಿ ಬಂಧಿಸಿಡುತ್ತದೆ. ಹೋಳಿ ಹಬ್ಬದ ನಂತರ ಚೈತ್ರ ಶುಕ್ಲ -ಪಾಡ್ಯದಿಂದ ಭಾರತೀಯ ವಿಕ್ರಮೀ ನೂತನ ವರ್ಷಾರಂಭವೂ ಆಗುತ್ತದೆ. ಅದಕ್ಕಾಗಿಯೂ, ಭಾರತೀಯ ಹೊಸ ವರ್ಷಕ್ಕಾಗಿಯೂ , ನಾನು ನಿಮಗೆಲ್ಲಾ ಮುಂಚಿತವಾಗಿಯೇ ಶುಭಾಶಯ ಹೇಳುತ್ತಿದ್ದೇನೆ.

ನನ್ನ ಪ್ರೀತಿಯ ದೇಶ ಬಾಂಧವರೇ, ನನ್ನ ಮುಂದಿನ ಮನ್ ಕಿ ಬಾತ್ ವೇಳೆಗೆ ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ನಿರತರಾಗಿರುತ್ತಾರೆ ಎಂದು ನನಗನಿಸುತ್ತದೆ. ಯಾರ ಪರೀಕ್ಷೆಗಳು ಮುಗಿದಿರುತ್ತವೆಯೋ ಅವರು ಖುಷಿಯಾಗಿರುತ್ತಾರೆ. ನಿರತರಾಗಿರುವವರಿಗೆ, ಖುಷಿಯಾಗಿರುವವರಿಗೆ ಕೂಡಾ ಅನೇಕಾನೇಕ ಶುಭಕಾಮನೆಗಳನ್ನು ನೀಡುತ್ತಿದ್ದೇನೆ, ಬನ್ನಿ, ಮುಂದಿನ ಮನ್ ಕಿ ಬಾತ್ ಗಾಗಿ ಅನೇಕಾನೇಕ ವಿಷಯಗಳನ್ನು ತೆಗೆದುಕೊಂಡು ಪುನಃ ಭೇಟಿಯಾಗೋಣ.

ಅನಂತಾನಂತ ಧನ್ಯವಾದಗಳು. ನಮಸ್ಕಾರ.

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.