#MannKiBaat: ಪ್ರಧಾನ ಮಂತ್ರಿ ಸಂಗ್ರಹಾಲಯಕ್ಕೆ ಭೇಟಿ ನೀಡಿದ ಜನರ ಅನುಭವಗಳನ್ನು ಹಂಚಿಕೊಂಡ ಪ್ರಧಾನಿ ಮೋದಿ, ನಮೋ ಅಪ್ಲಿಕೇಶನ್‌ನಲ್ಲಿ #ಮ್ಯೂಸಿಯಂ ಕ್ವಿಜ್ ತೆಗೆದುಕೊಳ್ಳಲು ನಾಗರಿಕರಲ್ಲಿ ಮನವಿ ಮಾಡಿದರು
ಯಾವುದೇ ಸ್ಥಳೀಯ ಮ್ಯೂಸಿಯಂಗೆ ಭೇಟಿ ನೀಡಿ, #MuseumMemories ಬಳಸಿಕೊಂಡು ನಿಮ್ಮ ಅನುಭವಗಳನ್ನು ಹಂಚಿಕೊಳ್ಳಿ ಎಂದು #MannKiBaat ಸಮಯದಲ್ಲಿ ಪ್ರಧಾನಿ ಮೋದಿ ಹೇಳಿದರು
#MannKiBaat: ಸಣ್ಣ ಆನ್‌ಲೈನ್ ಪಾವತಿಗಳು ದೊಡ್ಡ ಡಿಜಿಟಲ್ ಆರ್ಥಿಕತೆಯನ್ನು ನಿರ್ಮಿಸುತ್ತವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
#MannKiBaat: ಆನ್‌ಲೈನ್ ವಹಿವಾಟುಗಳು ಸುಮಾರು ರೂ. ಪ್ರತಿದಿನ 20 ಸಾವಿರ ಕೋಟಿ ನಡೆಯುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ
ಕ್ರೀಡೆಯಂತೆಯೇ, ಕಲೆ, ಶೈಕ್ಷಣಿಕ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ದಿವ್ಯಾಂಗರು ಅದ್ಭುತಗಳನ್ನು ಮಾಡುತ್ತಿದ್ದಾರೆ. ತಂತ್ರಜ್ಞಾನದ ಶಕ್ತಿಯಿಂದ ಅವರು ಹೆಚ್ಚಿನ ಎತ್ತರವನ್ನು ಸಾಧಿಸುತ್ತಿದ್ದಾರೆ: #MannKiBaat ಸಮಯದಲ್ಲಿ ಪ್ರಧಾನಿ
ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುವುದು: #MannKiBaat ನಲ್ಲಿ ಪ್ರಧಾನಿ ಮೋದಿ
#MannKiBaat: ಕ್ಯಾಲ್ಕುಲಸ್‌ನಿಂದ ಕಂಪ್ಯೂಟರ್‌ಗಳವರೆಗೆ - ಈ ಎಲ್ಲಾ ವೈಜ್ಞಾನಿಕ ಆವಿಷ್ಕಾರಗಳು ಶೂನ್ಯವನ್ನು ಆಧರಿಸಿವೆ
ಭಾರತೀಯರಾದ ನಮಗೆ ಗಣಿತ ಯಾವತ್ತೂ ಕಷ್ಟಕರ ವಿಷಯವಾಗಿರಲಿಲ್ಲ. ಇದಕ್ಕೆ ದೊಡ್ಡ ಕಾರಣ ನಮ್ಮ ವೇದ ಗಣಿತ: #MannKiBaat ಸಮಯದಲ್ಲಿ ಪ್ರಧಾನಿ ಮೋದಿ

ನನ್ನ ಪ್ರೀತಿಯ ದೇಶಬಾಂಧವರೇ, ನಮಸ್ಕಾರಗಳು.

ಹೊಸ ವಿಷಯಗಳೊಂದಿಗೆ, ಹೊಸದಾದ ಪ್ರೇರಣಾದಾಯಕ ಉದಾಹರಣೆಗಳೊಂದಿಗೆ, ಹೊಸ ಹೊಸ ಸಂದೇಶಗಳನ್ನು ಹೊತ್ತು  ಮತ್ತೊಮ್ಮೆ ನಾನು ತಮ್ಮೊಂದಿಗೆ 'ಮನದ ಮಾತು' ಆಡಲು ಬಂದಿರುವೆ. ನಿಮಗೆ ಗೊತ್ತಾ ಈ ಸಲ ನನಗೆ ಅತಿ ಹೆಚ್ಚು ಪತ್ರಗಳು ಸಂದೇಶಗಳು ಯಾವ ವಿಷಯದ ಬಗ್ಗೆ ಬಂದಿವೆ? ಅಂತ ಆ ವಿಷಯ ಹೇಗಿದೆಯೆಂದರೆ ಇತಿಹಾಸ, ವರ್ತಮಾನ ಮತ್ತು ಭವಿಷ್ಯ  ಮೂರಕ್ಕೂ ಅನ್ವಯವಾಗುತ್ತದೆ. ನಾನಿಂದು ಮಾತನಾಡುತ್ತಿರುವುದು ರಾಷ್ಟ್ರಕ್ಕೆ ದೊರಕಿದ ದೇಶದ ಪ್ರಧಾನ ಮಂತ್ರಿಗಳ ಸಂಗ್ರಹಾಲಯದ  ಬಗ್ಗೆ. ಇದೇ ಏಪ್ರಿಲ್ 14ರಂದು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನದಂದು  ಪ್ರಧಾನಮಂತ್ರಿ  ಸಂಗ್ರಹಾಲಯ ಲೋಕಾರ್ಪಣೆಗೊಂಡಿದೆ. ಇದನ್ನು ದೇಶದ ನಾಗರಿಕರಿಗಾಗಿ  ತೆರೆದಿಡಲಾಗಿದೆ. ನಮ್ಮ ಕೇಳುಗರೊಬ್ಬರು ಅವರ ಹೆಸರು ಸಾರ್ಥಕ್, ಸಾರ್ಥಕ್ ಅವರು ಗುರು ಗ್ರಾಮದಲ್ಲಿ  ವಾಸಿಸುತ್ತಾರೆ. ಮೊದಲ ಅವಕಾಶ ಸಿಗುತ್ತಲೇ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರು. ಸಾರ್ಥಕ್ ಅವರು ನಮೋ ಆಪ್ ನಲ್ಲಿ ಏನು ಬರೆದುಕೊಂಡಿದ್ದಾರೆ, ಅದನ್ನು ನೋಡಿ, ನನಗೆ ಬಹಳ ಕುತೂಹಲ ಮೂಡಿಸಿತು.

ಅವರು ಏನು ಬರೆದಿದ್ದಾರೆ ಅಂದ್ರೆ ವರ್ಷಗಳಿಂದ ನ್ಯೂಸ್ ಚಾನೆಲ್ ನೋಡುತ್ತಾರೆ, ದಿನಪತ್ರಿಕೆಗಳನ್ನು ಓದುತ್ತಾರೆ, ಸೋಶಿಯಲ್ ಮೀಡಿಯಾದಲ್ಲಿ ಯೂ ಕೂಡ ತೊಡಗಿಸಿಕೊಂಡಿದ್ದಾರೆ, ಇದರಿಂದ ಅವರಿಗೆ  ತಮ್ಮ ಸಾಮಾನ್ಯ ಜ್ಞಾನ ಹೆಚ್ಚಾಗುತ್ತದೆ ಎಂದು ತಿಳಿದಿದ್ದರು. ಆದರೆ, ಯಾವಾಗ ಅವರು ಪ್ರಧಾನಮಂತ್ರಿ ಸಂಗ್ರಹಾಲಯವನ್ನು ನೋಡಿ ಬಂದರೋ, ಅವರಿಗೆ ಆಶ್ಚರ್ಯವೆನಿಸಿತು. ಇಲ್ಲಿವರೆಗೂ ನಮ್ಮ ದೇಶ ಮತ್ತು  ದೇಶದ ನೇತೃತ್ವವನ್ನು ವಹಿಸಿದ ನಾಯಕರ ಬಗ್ಗೆ ಹಲವಾರು ವಿಷಯಗಳು ತಿಳಿದಿರಲಿಲ್ಲ. ಅವರು ಪ್ರಧಾನಮಂತ್ರಿ ಸಂಗ್ರಹಾಲಯದ  ಕೆಲವು ವಸ್ತುಗಳ ಬಗ್ಗೆ ಹೀಗೆ ಬರೆಯುತ್ತಾರೆ- ಲಾಲ್ ಬಹದ್ದೂರ್ ಶಾಸ್ತ್ರಿಯವರ ಚರಕವನ್ನು ನೋಡಿ ಅವರು ಚಕಿತಗೊಂಡರು, ಏಕೆಂದರೆ ಅದು ಅವರಿಗೆ ಅವರ ಮಾವನ ಮನೆಯಿಂದ ಕೊಡುಗೆಯಾಗಿ ಬಂದಿತ್ತು. ಅವರು ಶಾಸ್ತ್ರೀಜಿಯವರ ಪಾಸ್ ಬುಕ್ ಕೂಡ  ನೋಡಿದರು. ಅಲ್ಲಿ ಅವರು ಅವರ ಹತ್ತಿರ ಎಷ್ಟು ಕಡಿಮೆ ಉಳಿತಾಯವಿತ್ತು ಎನ್ನುವುದನ್ನು ಕೂಡ ನೋಡಿದರು.

ಸಾರ್ಥಕ್ ಅವರು ಬರೆಯುತ್ತಾರೆ, ಅವರಿಗೆ ಮುರಾರ್ಜಿ ದೇಸಾಯಿ ಅವರು ಸ್ವತಂತ್ರ ಆಂದೋಲನದಲ್ಲಿ ತೊಡಗಿಸಿಕೊಳ್ಳುವ ಮೊದಲು ಗುಜರಾತ್ನಲ್ಲಿ ಡೆಪ್ಯೂಟಿ ಕಲೆಕ್ಟರ್ ಆಗಿದ್ದರು  ಎನ್ನುವುದು ಕೂಡ ಗೊತ್ತಿರಲಿಲ್ಲ. ಭಾರತದ ಆಡಳಿತ ಸೇವೆಯಲ್ಲಿ ಅವರು ಸುದೀರ್ಘ ಸೇವೆ ಸಲ್ಲಿಸಿದ್ದರು.

 ಸಾರ್ಥಕ್ ಅವರು, ಚೌಧರಿ ಚರಣ್ ಸಿಂಗ್ ಅವರ ಬಗ್ಗೆ  ಹೀಗೆ ಬರೆದಿದ್ದಾರೆ- ಜಮೀನುದಾರಿ ಪದ್ಧತಿಯನ್ನು ಹೋಗಲಾಡಿಸುವಲ್ಲಿ ಅವರ ಕೊಡುಗೆ ಅಪಾರವಾಗಿದ್ದು ಗೊತ್ತಿರ್ಲಿಲ್ಲ. ಅಷ್ಟೇ ಅಲ್ಲಾ, ಅವರು ಮುಂದೆ ಹೀಗೆ ಹೇಳಿದ್ದಾರೆ- ಭೂ ಸುಧಾರಣೆಯ ಬಗ್ಗೆ ನೋಡುತ್ತಾ ಹೋದಂತೆ ಅವರು, ಪಿ ವಿ ನರಸಿಂಹರಾವ್ ಅವರೂ ಭೂ ಸುಧಾರಣೆಯ ಬಗ್ಗೆ ಆಸಕ್ತಿ ಹೊಂದಿದ್ದರೆಂಬುದನ್ನು ತಿಳಿದುಕೊಳ್ಳುತ್ತಾರೆ.  ಸಾರ್ಥಕ್ ಅವರಿಗೆ ಈ ಮ್ಯೂಸಿಯಂನಲ್ಲಿ ಬಂದ ನಂತರವೇ ಗೊತ್ತಾಗಿದ್ದು ಏನೆಂದರೆ, ಶ್ರೀ ಚಂದ್ರಶೇಖರ್ ಅವರು 4,000 ಕಿಲೋಮೀಟರ್  ಐತಿಹಾಸಿಕ ಪಾದಯಾತ್ರೆ ಮಾಡಿದ್ದರು ಅನ್ನುವುದು.  ಅವರು ಅಟಲ್ ಬಿಹಾರಿ ವಾಜಪೇಯಿ ಅವರು ಉಪಯೋಗಿಸುತ್ತಿದ್ದ ವಸ್ತುಗಳನ್ನು ನೋಡಿದರು, ಅವರ ಭಾಷಣಗಳನ್ನು ಕೇಳಿ ಹೆಮ್ಮೆಪಟ್ಟರು. ಸಾರ್ಥಕ್ ಅವರು ಈ ಸಂಗ್ರಹಾಲಯದಲ್ಲಿ ಮಹಾತ್ಮ ಗಾಂಧಿ, ಸರ್ದಾರ್ ಪಟೇಲ್, ಡಾಕ್ಟರ್ ಅಂಬೇಡ್ಕರ್, ಜಯಪ್ರಕಾಶ್ ನಾರಾಯಣ್ ಮತ್ತು ನಮ್ಮ ಪ್ರಧಾನಮಂತ್ರಿ ಜವಾಹರಲಾಲ್ ನೆಹರುರವರ ಬಗ್ಗೆ ಬಹಳ ರೋಚಕ ಸಂಗತಿಗಳು ತಿಳಿದವು ಎಂದು ಹೇಳಿದ್ದಾರೆ.

 ಮಿತ್ರರೇ, ದೇಶದ ಪ್ರಧಾನ ಮಂತ್ರಿಗಳ ಕೊಡುಗೆಯೇನು  ಎಂಬುದನ್ನು ನೆನಪಿಸಿಕೊಳ್ಳಲು 'ಆಜಾದೀ ಕಾ ಅಮೃತಮಹೋತ್ಸವ' ಕ್ಕಿಂತಲೂ ಹೆಚ್ಚಿನ  ಯಾವ ಅವಕಾಶವಿದೆ.  'ಆಜಾದೀ ಕಾ ಅಮೃತಮಹೋತ್ಸವ' ಒಂದು ಜನಾಂದೋಲನ ರೂಪ ತಾಳುತ್ತಿರುವುದು ರಾಷ್ಟ್ರಕ್ಕೆ ಹೆಮ್ಮೆಯ ವಿಷಯವಾಗಿದೆ. ಇತಿಹಾಸ ವಿಷಯದ ಬಗ್ಗೆ ಜನರ ಆಸಕ್ತಿ ಹೆಚ್ಚುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಧಾನಮಂತ್ರಿ ಮ್ಯೂಸಿಯಂ ಯುವಕರಿಗೆ ಒಂದು ಆಕರ್ಷಣೆಯ ಕೇಂದ್ರವಾಗಿದೆ. ಇದು ರಾಷ್ಟ್ರದ ಅಮೂಲ್ಯ ಪರಂಪರೆಗೆ ಸೇರ್ಪಡೆಯಾಗುತ್ತಿದೆ.

 ಹಾಗೆಯೇ ಮಿತ್ರರೇ, ಮ್ಯೂಜಿಯಮ್ ಬಗ್ಗೆ ಇಷ್ಟೊಂದು ವಿಷಯ ಹಂಚಿಕೊಳ್ಳುತ್ತಾ ನನಗೆ ಅನಿಸುತ್ತಿದೆ,  ನಾನು ತಮ್ಮನ್ನು ಯಾಕೆ  ಕೆಲವು ಪ್ರಶ್ನೆ ಕೇಳಬಾರದು.  ನೋಡೋಣ,  ನಿಮ್ಮ ಸಾಮಾನ್ಯ ಜ್ಞಾನ ಏನು ಹೇಳುತ್ತದೆ.  ನಿಮಗೆ ಎಷ್ಟು ತಿಳಿದಿದೆ. ನನ್ನ ಪ್ರಿಯ ಯುವ ಮಿತ್ರರೇ, ತಯಾರಾಗಿದ್ದೀರಾ, ಪೆನ್ನು ಮತ್ತು ಪೇಪರು ಎತ್ತಿಕೊಂಡಿರಾ?  ನಿಮಗೆ ಪ್ರಶ್ನೆಗಳನ್ನು ಕೇಳುತ್ತೇನೆ, ನೀವು ಅವುಗಳಿಗೆ ಉತ್ತರವನ್ನು ನಮೋ ಆಪ್  ಅಥವಾ ಸೋಶಿಯಲ್ ಮೀಡಿಯಾ ದಲ್ಲಿ # Tag Museum quiz (ಹ್ಯಾಶ್ ಟ್ಯಾಗ್ ಮ್ಯೂಸಿಯಂ ಕ್ವಿಜ್)  ನೊಂದಿಗೆ ಶೇರ್ ಮಾಡಿಕೊಳ್ಳಿ. ಅವಶ್ಯವಾಗಿ ಮಾಡಿರಿ.  ನಾನು ತಮಗೆ ಆಗ್ರಹ ಮಾಡುವುದೇನೆಂದರೆ-  ನೀವು ಅವಶ್ಯವಾಗಿ ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿ. ಇದರಿಂದ ರಾಷ್ಟ್ರದಾದ್ಯಂತ ಎಲ್ಲರಿಗೂ ಕೂಡ ಈ ಮ್ಯೂಸಿಯಂ ಬಗ್ಗೆ ಹೆಚ್ಚು ಕುತೂಹಲ ಮೂಡುತ್ತದೆ. ದೇಶದ ಯಾವ ನಗರದಲ್ಲಿ ಪ್ರಸಿದ್ಧ  ರೇಲ್ವೆ ಮ್ಯೂಸಿಯಂ ಇದೆ,  ಅಲ್ಲಿ ಕಳೆದ 45 ವರ್ಷಗಳಿಂದ ಭಾರತೀಯ ರೈಲಿನ  ಪರಂಪರೆಯನ್ನು  ನೋಡುವ ಅವಕಾಶ ದೊರೆಯುತ್ತಿದೆ.  ನಾನು  ನಿಮಗೆ ಒಂದು ಕ್ಲೂ  ಕೊಡುತ್ತೇನೆ. ನೀವು ಇಲ್ಲಿ ಫೇರಿ ಕ್ವೀನ್,  ಸಲೂನ್ ಆಫ್ ಪ್ರಿನ್ಸ್ ಆಫ್ ವೇಲ್ಸ್  ರಿಂದ ಹಿಡಿದು Fireless(ಫಾಯರ್ಲೆಸ್) ಸ್ಟೀಮ್ ಲೋಕೊಮೋಟಿವ್  ಗಳನ್ನು ಕೂಡ ನೋಡಬಹುದಾಗಿದೆ. 

 ಮುಂಬೈನಲ್ಲಿ ಕರೆನ್ಸಿಯ ವಿಕಾಸದ ಬಗ್ಗೆ ಬಹಳ ರೋಚಕ ವಿಷಯವನ್ನು ನೀಡುವ ಒಂದು ಮ್ಯೂಸಿಯಂ ಇದೆ. ಅದು ಯಾವುದು ಎಂದು ಗೊತ್ತಾ...? ಅಲ್ಲಿ ಕ್ರಿಸ್ತ ಪೂರ್ವ 6ನೇ ಶತಮಾನದಷ್ಟು ಹಳೆಯ ನಾಣ್ಯಗಳು ಇವೆ. ಇನ್ನೊಂದೆಡೆ E-Money ('ಈ-ಮನಿ') ಕೂಡ ಇದೆ.

 

ಮೂರನೇ ಪ್ರಶ್ನೆ, ವಿರಾಸತ್-ಎ-ಖಲ್ಸಾ  ಮ್ಯೂಸಿಯಂ  ಬಗ್ಗೆ ಇದೆ,  ಇದು ಪಂಜಾಬಿನ ಯಾವ ನಗರದಲ್ಲಿದೆ ಎಂದು ಗೊತ್ತಾ...?೬

 ಗಾಳಿಪಟ ಹಾರಿಸುವುದು ನಿಮ್ಮೆಲ್ಲರಿಗೂ ಕೂಡ ಬಹಳ ಆನಂದದಾಯಕ ವಿಷಯವಲ್ಲವೇ, ಮುಂದಿನ ಪ್ರಶ್ನೆ ಇದಕ್ಕೆ ಸಂಬಂಧಿಸಿದ್ದಾಗಿದೆ. ದೇಶದಲ್ಲಿ ಒಂದೇ ಒಂದು ಗಾಳಿಪಟ ಮ್ಯೂಸಿಯಮ್ ಇದೆ ಅದು ಎಲ್ಲಿದೆ... ಬನ್ನಿ ನಾನು ನಿಮಗೆ ಒಂದು ಕ್ಲೂ  ಕೊಡುತ್ತೇನೆ.  ಅಲ್ಲೊಂದು ಬಹುದೊಡ್ಡ ಗಾಳಿಪಟ ಇಟ್ಟಿದ್ದಾರೆ ಅದರ ಗಾತ್ರ 22 ಅಡಿ ಉದ್ದ 16 ಅಡಿ ಅಗಲ ಇದೆ. ಏನಾದ್ರೂ ಗೊತ್ತಾಯ್ತ... ಇಲ್ಲಾಂದ್ರೆ ಇನ್ನೊಂದು ವಿಷಯ ಹೇಳುತ್ತೇನೆ. ಇದು ಯಾವ ನಗರದಲ್ಲಿದೆಯೋ ಆ ನಗರದೊಂದಿಗೆ ಬಾಪೂ ಅವರ ವಿಶೇಷ ಸಂಬಂಧವಿತ್ತು.

 ಚಿಕ್ಕವರಿದ್ದಾಗ ಅಂಚೆಚೀಟಿಗಳನ್ನು ಸಂಗ್ರಹಿಸುವ ಆಸಕ್ತಿ ಯಾರಿಗೆ  ಇರಲಿಕ್ಕಿಲ್ಲ.  ಆದರೆ, ನಿಮಗೆ ಗೊತ್ತಾ ಭಾರತದಲ್ಲಿ ಅಂಚೆಚೀಟಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಮ್ಯೂಸಿಯಂ ಎಲ್ಲಿದೆ?

 ನಾನು ನಿಮಗೆ ಇನ್ನೊಂದು ಪ್ರಶ್ನೆ ಕೇಳುತ್ತೇನೆ,  ಗುಲ್ಶನ್ ಮಹಲ್ ಎಂಬ ಕಟ್ಟಡದಲ್ಲಿ ಯಾವ ಮ್ಯೂಸಿಯಂ ಇದೆ?  ಇದಕ್ಕೆ ಕ್ಲೂ ಅಂದರೆ, ಈ  ಮ್ಯೂಸಿಯಂನಲ್ಲಿ ನೀವು ಫಿಲಂ ಡೈರೆಕ್ಟರ್ ಕೂಡ ಆಗಬಹುದು.  ಕ್ಯಾಮರಾ,  ಎಡಿಟಿಂಗ್ ಮಾಡುವ ಸೂಕ್ಷ್ಮ ವಿಷಯಗಳನ್ನು ಕೂಡ ನೋಡಬಹುದಾಗಿದೆ.

 ಸರಿ, ನೀವು ಅಂತಹ ಯಾವುದಾದರೂ ಮ್ಯೂಸಿಯಂ ನೋಡಿದ್ದೀರಾ,  ಅಲ್ಲಿ ಜವಳಿ ಉದ್ಯಮಕ್ಕೆ ಸಂಬಂಧಿಸಿದಂತೆ ಅದರ ಪರಂಪರೆಯನ್ನು ಆಚರಿಸುತ್ತಾರೆ.  ಈ ಮ್ಯೂಸಿಯಂನಲ್ಲಿ ಮಿನಿಯೇಚರ್ ಪೇಂಟಿಂಗ್ಸ್,  ಜೈನ್ ಮ್ಯಾನುಸ್ಕ್ರಿಪ್ಟ್ಸ್,  ಸ್ಕಲ್ಪ್ ಚರ್ (Sculpture) ಇನ್ನೂ ಹಲವು ವಿಷಯಗಳಿವೆ. ಅವುಗಳ ವಿಶಿಷ್ಟ ಪ್ರದರ್ಶನಕ್ಕಾಗಿಯೇ ಈ ಮ್ಯೂಜಿಯಮ್ ಹೆಸರುವಾಸಿಯಾಗಿದೆ.

ಮಿತ್ರರೇ, ತಂತ್ರಜ್ಞಾನದ ಈ ಸಮಯದಲ್ಲಿ ಇವುಗಳ ಉತ್ತರ ಹುಡುಕಲು ನಿಮಗೆ ಬಹಳ ಸುಲಭವಾಗಿದೆ. ಈ ಪ್ರಶ್ನೆಗಳನ್ನು ನಿಮಗೆ ಯಾಕೆ ಕೇಳಿದೆ ಅಂದರೆ ನಮ್ಮ ಯುವ ಪೀಳಿಗೆಯಲ್ಲಿ  ಜಿಜ್ಞಾಸೆ ಹೆಚ್ಚಲಿ,  ಅವರು ಇವುಗಳ ಬಗ್ಗೆ ಇನ್ನೂ ಹೆಚ್ಚು ತಿಳಿದುಕೊಳ್ಳಲಿ, ಅವುಗಳನ್ನು ನೋಡಲು ಹೋಗಲಿ ಎಂದು... ಈಗಂತೂ ಮ್ಯೂಸಿಯಂನ  ಮಹತ್ವ ತಿಳಿದ ಮೇಲೆ ಹಲವಾರು ಜನರು ಸ್ವಯಂ ಪ್ರೇರಣೆಯಿಂದ ಮುಂದೆ ಬಂದು ಮ್ಯೂಸಿಯಂಗಾಗಿ ದಾನ ನೀಡುತ್ತಿದ್ದಾರೆ. ಹಲವರು, ತಾವು ಸಂಗ್ರಹಿಸಿದ್ದ  ಐತಿಹಾಸಿಕ ವಸ್ತುಗಳನ್ನು ಮ್ಯೂಸಿಯಂಗೆ ದಾನ ನೀಡುತ್ತಿದ್ದಾರೆ.  ನೀವೇನಾದರೂ ಹಾಗೆ ಮಾಡುತ್ತಿದ್ದರೆ ಅದು ಒಂದು ರೀತಿಯಿಂದ ಒಂದು ಸಾಂಸ್ಕೃತಿಕ ಸಂಪತ್ತನ್ನು ಇಡೀ ಸಮಾಜಕ್ಕೆ ನೀಡಿದಂತಾಗುತ್ತದೆ. ಭಾರತದಲ್ಲಿಯೂ ಜನರು ಈಗ ಇದಕ್ಕಾಗಿ ಮುಂದೆ ಬರುತ್ತಿದ್ದಾರೆ. ನಾನು ಇಂತಹ ಹಲವು ಖಾಸಗಿ ಪ್ರಯತ್ನಗಳನ್ನು ಕೂಡ ಶ್ಲಾಘಿಸುತ್ತೇನೆ. ಬದಲಾಗುತ್ತಿರುವ ಇಂದಿನ ಸಮಯದಲ್ಲಿ ಹಾಗೂ ಕೋವಿಡ್ ಪ್ರೋಟೋಕಾಲ್ ನಿಂದಾಗಿ ಸಂಗ್ರಹಾಲಯಗಳಲ್ಲಿ ಹೊಸ ರೀತಿಯ ವಿಧಾನಗಳನ್ನು ಅನುಸರಿಸುವಲ್ಲಿ ತೊಡಗಿಕೊಂಡಿದ್ದಾರೆ. ಮ್ಯೂಸಿಯಂಗಳಲ್ಲಿ, ಡಿಜಿಟೈಸೇಷನ್  ಕಡೆಗೂ ಒತ್ತು ನೀಡಲಾಗುತ್ತಿದೆ.  ಮೇ 18ರಂದು ಅಂತರರಾಷ್ಟ್ರೀಯ ಮ್ಯೂಸಿಯಂ ದಿವಸ ಆಚರಿಸುತ್ತಿರುವುದು ತಮ್ಮೆಲ್ಲರಿಗೂ ಗೊತ್ತಿರುವ ವಿಷಯವಾಗಿದೆ.  ಇದನ್ನು ನೋಡಿದಾಗ ಯುವ ಮಿತ್ರರಿಗಾಗಿ ನನ್ನ ಹತ್ತಿರ ಒಂದು ವಿಚಾರ ಇದೆ.  ಯಾಕೆ ನೀವು ಮುಂಬರುವ ರಜಾ ದಿನಗಳಲ್ಲಿ ನಿಮ್ಮ ಮಿತ್ರರೊಂದಿಗೆ ಸೇರಿ ಯಾವುದಾದರೂ ಒಂದು ಸ್ಥಳೀಯ ಮ್ಯೂಸಿಯಂಗೆ ಹೋಗಬಾರದು. ನೀವು ನಿಮ್ಮ ಅನುಭವವನ್ನು # Tag Museum Memories (ಹ್ಯಾಶ್ ಟ್ಯಾಗ್ ಮ್ಯೂಸಿಯಂ ಮೆಮೊರಿಸ್)  ನೊಂದಿಗೆ ಶೇರ್ ಮಾಡಿಕೊಳ್ಳಿ. ನೀವು ಹಾಗೆ ಮಾಡುವುದರಿಂದ ಇನ್ನೊಬ್ಬರ ಮನಸ್ಸಿನಲ್ಲಿಯೂ ಸಂಗ್ರಹಾಲಯಗಳ ಬಗ್ಗೆ ಜಿಜ್ಞಾಸೆ ಮೂಡುವುದು.

 ನನ್ನ ಪ್ರೀತಿಯ ದೇಶವಾಸಿಗಳೇ,  ನಿಮ್ಮ ನಿಮ್ಮ ಜೀವನದಲ್ಲಿ ಬಹಳ ಸಂಕಲ್ಪಗಳನ್ನು ಮಾಡಿರಬಹುದು, ಪೂರ್ಣಗೊಳಿಸಲು ಪ್ರಯತ್ನಗಳನ್ನು ಮಾಡಿದ್ದಿರಬಹುದು.  ಬಂಧುಗಳೇ, ಆದರೆ ಇತ್ತೀಚೆಗೆ ನನಗೆ ಒಂದು ಸಂಕಲ್ಪದ ಬಗ್ಗೆ ಮಾಹಿತಿ ಬಂತು,  ಅದು ನಿಜವಾಗಿಯೂ ಬಹಳ ಒಳ್ಳೆಯದಾಗಿತ್ತು,  ಬಹಳ ವಿಶಿಷ್ಟ ಕೂಡ ಆಗಿತ್ತು.  ಆಗ, ಇದನ್ನು ಮನದಾಳದ ಮಾತಿನಲ್ಲಿ ಅವಶ್ಯವಾಗಿ ನಮ್ಮ ಶ್ರೋತೃಗಳೊಂದಿಗೆ ಹಂಚಿಕೊಳ್ಳೋಣ ಎಂದೆನಿಸಿತು.

 ಬಂಧುಗಳೇ, ಯಾರಾದರೂ ಬೆಳಗ್ಗೆ ತಮ್ಮ ಮನೆಯಿಂದ ಹೊರಬಿದ್ದು ಇಂದು ಇಡೀ ನಗರವನ್ನು ಸುತ್ತುವೆನು ಹಾಗೂ ನನ್ನ ಇಡೀ ದಿನದ ಎಲ್ಲ ವ್ಯವಹಾರಗಳಲ್ಲಿ ಯಾವುದೇ ನಗದು ವ್ಯವಹಾರ ಮಾಡುವುದಿಲ್ಲ ಎಂದು ಸಂಕಲ್ಪ ಮಾಡುವುದು ಒಂದು ವಿಶಿಷ್ಟ ಸಂಕಲ್ಪವಲ್ಲವೇ... ದೆಹಲಿಯ ಇಬ್ಬರು ಪುತ್ರಿಯರು ಸಾಗರಿಕಾ ಮತ್ತು ಪ್ರೇಕ್ಷಾ  ಇಂತಹ Cashless Day out (ಕ್ಯಾಶ್ಲೆಸ್ ಡೇ ಔಟ್) ನ ಪ್ರಯೋಗಕ್ಕೆ ಸಂಕಲ್ಪ ಮಾಡಿದವರು.  ಸಾಗರಿಕಾ ಮತ್ತು ಪ್ರೇಕ್ಷಾ ದಿಲ್ಲಿಯಲ್ಲಿ ಎಲ್ಲೇ ಹೋದರು ಅವರಿಗೆ ಕ್ಯಾಶ್ಲೆಸ್  ಪೇಮೆಂಟ್ ಮಾಡುವ ಅವಕಾಶ ದೊರಕಿತು. UPI QR Code (ಯುಪಿಐ ಕ್ಯೂಆರ್ ಕೋಡ್)  ನಿಂದಾಗಿ  ಅವರಿಗೆ  ನಗದು ಹಣ ತೆಗೆಯುವ ಅವಶ್ಯಕತೆಯೇ ಬರಲಿಲ್ಲ. ಎಲ್ಲಿಯವರೆಗೆ ಅಂದರೆ, ರಸ್ತೆ ಬದಿಯಲ್ಲಿ ತಯಾರಿಸುವ ತಿಂಡಿ-ತಿನಿಸುಗಳು, ಸಂದು-ಗೊಂದಿಯ ಅಂಗಡಿಗಳಲ್ಲಿಯೂ ಕೂಡ ಬಹುತೇಕ ಸ್ಥಳಗಳಲ್ಲಿ Online transaction (ಆನ್ಲೈನ್ ಟ್ರಾಂಜೆಕ್ಷನ್) ವ್ಯವಸ್ಥೆ ಇತ್ತು.

 ಮಿತ್ರರೇ, ನಿಮಗನಿಸಬಹುದು ಇದು ದಿಲ್ಲಿ.  ಮೆಟ್ರೋ ಸಿಟಿ,  ಅಲ್ಲಿ ಇವೆಲ್ಲ ಇರುವುದು ಸರ್ವೇಸಾಮಾನ್ಯ… ಆದರೆ ಈಗ ಹಾಗಿಲ್ಲ.  ಯುಪಿಐ ನ  ಈ ಬಳಕೆಯು ದಿಲ್ಲಿಯಂತಹ ದೊಡ್ಡ ನಗರಗಳಿಗೆ ಮಾತ್ರ ಸೀಮಿತವಾಗಿಲ್ಲ.  ನನಗೆ ಗಾಜಿಯಾಬಾದ್ ನ ಆನಂದಿತಾ ತ್ರಿಪಾಠಿಯವರ ಒಂದು ಸಂದೇಶ ಬಂದಿದೆ.  ಆನಂದಿತಾ ತನ್ನ  ಪತಿಯೊಂದಿಗೆ ಕಳೆದ ವಾರ ಈಶಾನ್ಯ ರಾಜ್ಯಗಳ (ನಾರ್ಥ್ ಈಸ್ಟ್)  ಪ್ರವಾಸಕ್ಕೆ ಹೋಗಿದ್ದರು. ಅವರು ಅಸ್ಸಾಮ್ ನಿಂದ ಹಿಡಿದು  ಮೇಘಾಲಯ  ಮತ್ತು ಅರುಣಾಚಲಪ್ರದೇಶದ  ತವಾಂಗ್ ವರೆಗಿನ  ತಮ್ಮ ಪ್ರವಾಸದ ಅನುಭವವನ್ನು ಹಂಚಿಕೊಂಡಿದ್ದಾರೆ. ಹಲವು ದಿನಗಳ ಈ ಯಾತ್ರೆಯಲ್ಲಿ ಅವರಿಗೆ ದೂರದೂರದ ಊರುಗಳಲ್ಲಿಯೂ  ಕೂಡ  ನಗದು ಉಪಯೋಗಿಸುವ ಪ್ರಮೇಯವೇ ಬರಲಿಲ್ಲ ಎಂಬುದನ್ನು ಕೇಳಿ  ನಿಮಗೆ ಆಶ್ಚರ್ಯವೆನಿಸಬಹುದು. ಯಾವ ಸ್ಥಳಗಳಲ್ಲಿ   ಕೆಲವರ್ಷಗಳ ಹಿಂದೆ ಇಂಟರ್ನೆಟ್ ನ ಒಳ್ಳೆಯ ವ್ಯವಸ್ಥೆಯೂ ಇರಲಿಲ್ಲವೋ, ಅಲ್ಲಿಯೂ ಕೂಡ ಈಗ ಯುಪಿಐ  ನಿಂದ  ನಿಮ್ಮ ಹಣ  ಪಾವತಿಸಬಹುದಾಗಿದೆ.  ಸಾಗರಿಕಾ, ಪ್ರೇಕ್ಷಾ ಮುತ್ತು ಆನಂದಿತಾ  ಅವರ ಅನುಭವಗಳನ್ನು ನೋಡಿ  ನಾನು ತಮ್ಮಲ್ಲಿಯೂ  ಕೂಡ ಕೇಳಿಕೊಳ್ಳುವುದೇನೆಂದರೆ Cashless Day Out (ಕ್ಯಾಶ್ಲೆಸ್ ಡೇ ಔಟ್)  ನ ಪ್ರಯೋಗ ಮಾಡಿ ನೋಡಿ… ಅವಶ್ಯವಾಗಿ ಮಾಡಿರಿ.

 ಮಿತ್ರರೇ, ಕಳೆದ ಕೆಲವು ವರ್ಷಗಳಲ್ಲಿ BHIM UPI(ಭೀಮ್ ಯುಪಿಐ) ಬಹಳ ವೇಗವಾಗಿ ನಮ್ಮ ಅರ್ಥವ್ಯವಸ್ಥೆ ಮತ್ತು ನಮ್ಮ ದಿನಚರಿಯ ಭಾಗವಾಗಿದೆ. ಈಗಂತೂ, ಸಣ್ಣ ಸಣ್ಣ ನಗರಗಳಲ್ಲಿ ಅಲ್ಲದೆ ಹೆಚ್ಚಿನ ಹಳ್ಳಿಗಳಲ್ಲಿಯೂ ಕೂಡ ಜನರು ಯುಪಿಐ ನಿಂದಲೇ ಕೊಡು ಕೊಳ್ಳುವಿಕೆಯನ್ನು ಮಾಡುತ್ತಿದ್ದಾರೆ. ಡಿಜಿಟಲ್ ಎಕಾನಮಿ ಇಂದ ದೇಶದಲ್ಲಿ ಒಂದು ಸಂಸ್ಕೃತಿಯು ಹುಟ್ಟಿಕೊಳ್ಳುತ್ತಿದೆ.  ಓಣಿಯಲ್ಲಿನ ಚಿಕ್ಕ ಚಿಕ್ಕ ಅಂಗಡಿಗಳಲ್ಲಿಯೂ ಕೂಡ ಡಿಜಿಟಲ್ ಪೇಮೆಂಟ್ ಮಾಡುವುದರಿಂದಾಗಿ ಅವರಿಗೆ ತಮ್ಮ ಗ್ರಾಹಕರಿಗೆ ಸುಲಭವಾಗಿ ಸೇವೆ ಒದಗಿಸುವಂತೆ ಆಗಿದೆ.  ಅವರಿಗೆ ಈಗ ಚಿಲ್ಲರೆ ಹಣದ ಸಮಸ್ಯೆ ಆಗುವುದಿಲ್ಲ. ನೀವು ಕೂಡ  ದೈನಂದಿನ ಕಾರ್ಯಕಲಾಪಗಳಲ್ಲಿ ಯುಪಿಐ ಉಪಯೋಗ ಮಾಡುತ್ತಿರಬಹುದು. ಎಲ್ಲಿಗೆ ಹೋಗಲಿ ನಗದು ತೆಗೆದುಕೊಂಡು ಹೋಗುವುದು, ಬ್ಯಾಂಕಿಗೆ ಹೋಗುವುದು, ಎಟಿಎಂನಿಂದ ಹಣ ಪಡೆಯುವ ಕಷ್ಟವೇ ಇಲ್ಲ. ಮೊಬೈಲ್ ನಿಂದಲೇ ಎಲ್ಲಾ ಪೇಮೆಂಟ್ ಮಾಡಬಹುದಾಗಿದೆ. ಆದರೆ, ನಿಮಗೆ ಗೊತ್ತಾ, ನಿಮ್ಮ ಈ ಸಣ್ಣ ಸಣ್ಣ ಆನ್ಲೈನ್ ಪೇಮೆಂಟ್ ನಿಂದ ರಾಷ್ಟ್ರದಲ್ಲಿ ಎಷ್ಟು ದೊಡ್ಡ ಡಿಜಿಟಲ್ ಎಕಾನಮಿ ತಯಾರಾಗಿದೆ ಎಂದು. ಈಗ ನಮ್ಮ ದೇಶದಲ್ಲಿ ಪ್ರತಿದಿನ ಸರಿಸುಮಾರು 20 ಸಾವಿರ ಕೋಟಿ ರೂಪಾಯಿಗಳ ಆನ್ಲೈನ್ ಟ್ರಾನ್ಸಾಕ್ಷನ್ ಆಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಅಂತೂ ಯುಪಿಐ ಟ್ರಾನ್ಸಾಕ್ಷನ್  ಸುಮಾರು ಹತ್ತು ಲಕ್ಷ ಕೋಟಿ ರೂಪಾಯಿಗಳಿಗೆ ತಲುಪಿತ್ತು.  ಇದರಿಂದ ದೇಶದಲ್ಲಿ ಅನುಕೂಲಗಳು ಹೆಚ್ಚಾಗುತ್ತಿವೆ  ಅಲ್ಲದೆ ಪ್ರಾಮಾಣಿಕತೆಯ ವಾತಾವರಣ ನಿರ್ಮಾಣವಾಗುತ್ತಿದೆ. ಈಗಂತೂ ದೇಶದಲ್ಲಿ  ಫಿನ್-ಟೆಕ್  ನೊಂದಿಗೆ ಸೇರಿಕೊಂಡು ಹೊಸ ಸ್ಟಾರ್ಟ್ ಅಪ್ ಗಳು ಮುಂದುವರಿಯುತ್ತಿವೆ. ಒಂದು ವೇಳೆ ನಿಮ್ಮ ಹತ್ತಿರ ಇಂತಹ ಡಿಜಿಟಲ್ ಪೇಮೆಂಟ್  ಮತ್ತು ಸ್ಟಾರ್ಟಪ್ ಎಕೊಸಿಸ್ಟಮ್ ನ ಶಕ್ತಿಯೊಂದಿಗೆ ಸಂಬಂಧಿಸಿದ ಅನುಭವಗಳಿದ್ದರೆ ಅವುಗಳನ್ನು ಹಂಚಿಕೊಳ್ಳಿ.  ನಿಮ್ಮ ಅನುಭವಗಳು ಇನ್ನುಳಿದ ಹಲವಾರು ದೇಶವಾಸಿಗಳಿಗೆ ಪ್ರೇರಣೆಯಾಗಬಹುದಾಗಿದೆ.

 ನನ್ನ ಪ್ರಿತಿಯ ದೇಶವಾಸಿಗಳೇ,  ತಂತ್ರಜ್ಞಾನದ ಶಕ್ತಿಯು ಇಂದು ಹೀಗೆ ಸಾಮಾನ್ಯ ಜನರ ಜೀವನವನ್ನು ಬದಲಾಯಿಸುತ್ತದೆ, ಇದು ನಮಗೆ ನಮ್ಮ ಸುತ್ತಮುತ್ತಲೂ ಯಾವಾಗಲೂ ಕಾಣಸಿಗುತ್ತಿದೆ.  ತಂತ್ರಜ್ಞಾನವು ಇನ್ನೊಂದು ದೊಡ್ಡ ಕೆಲಸ ಮಾಡಿದೆ. ಅದೆಂದರೆ ನಮ್ಮ  ದಿವ್ಯಾಂಗ  ಅಸಾಧಾರಣ  ಕ್ಷಮತೆಯ  ಲಾಭವನ್ನು ರಾಷ್ಟ್ರ ಮತ್ತು ವಿಶ್ವಕ್ಕೆ ನೀಡುವುದು.  ನಮ್ಮ ದಿವ್ಯಾಂಗ ಸಹೋದರ-ಸಹೋದರಿಯರು ಏನು ಮಾಡುತ್ತಾರೆ ಎಂಬುದನ್ನು ನಾವು ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ ನೋಡಿದ್ದೇವೆ.  ಕ್ರೀಡೆಗಳ ಹಾಗೆಯೇ, ಕಲೆ, ಶಿಕ್ಷಣ ಮುತ್ತು ಇನ್ನೂ ಹಲವು ಕ್ಷೇತ್ರಗಳಲ್ಲಿ ದಿವ್ಯಾಂಗ ಮಿತ್ರರು ಅದ್ಭುತಗಳನ್ನು ಸೃಷ್ಟಿಸುತ್ತಿದ್ದಾರೆ. ಆದರೆ,  ಯಾವಾಗ ಇವರಿಗೆ ತಂತ್ರಜ್ಞಾನದ ಶಕ್ತಿ ಒದಗುವುದೋ, ಆಗ ಇವರು ಇನ್ನೂ ಹೆಚ್ಚಿನದನ್ನು ಸಾಧಿಸಿ ತೋರಿಸಬಹುದಾಗಿದೆ.  ಆದ್ದರಿಂದ, ರಾಷ್ಟ್ರವು ದಿವ್ಯಾಂಗ ಬಂಧುಗಳಿಗಾಗಿ  ಸಂಪನ್ಮೂಲಗಳು ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಸಾಧನೆಯ ಹಾದಿ ಇನ್ನಷ್ಟು ಸುಲಭಗೊಳಿಸಲು ನಿರಂತರ ಪ್ರಯತ್ನಶೀಲವಾಗಿದೆ.  ದೇಶದಲ್ಲಿ ಹಲವು ಸ್ಟಾರ್ಟಪ್ ಗಳು ಮತ್ತು ಸಂಘ ಸಂಸ್ಥೆಗಳು ಈ ನಿಟ್ಟಿನಲ್ಲಿ ಪ್ರೇರಣಾದಾಯಕ ಕಾರ್ಯನಿರ್ವಹಿಸುತ್ತಿವೆ.  ಅಂತಹ ಒಂದು ಸಂಸ್ಥೆಯೆಂದರೆ ವಾಯ್ಸ್ ಆಫ್ specially-abled ಪೀಪಲ್,  ಈ ಸಂಸ್ಥೆಗಳು Assistive ಟೆಕ್ನೋಲಜಿ ಕ್ಷೇತ್ರದಲ್ಲಿ ಹೊಸ ಹೊಸ ಅವಕಾಶಗಳನ್ನು ಹುಟ್ಟುಹಾಕುತ್ತಿದೆ.  ದಿವ್ಯಾಂಗ ಕಲಾಕಾರರ ಕಾರ್ಯಗಳನ್ನು, ಜಗತ್ತಿನಾದ್ಯಂತ ಪಸರಿಸಲು ಒಂದು ಹೊಸ ಇನ್ನೋವೇಟಿವ್ ಕಾರ್ಯ ಆರಂಭಿಸಿತು.   ವಾಯ್ಸ್ ಆಫ್ specially-abled ಪೀಪಲ್  ನ  ಎಲ್ಲಾ ಕಲಾಕಾರರ  ಪೇಂಟಿಂಗ್ ಗಳ ಒಂದು ಡಿಜಿಟಲ್ ಆರ್ಟ್ ಗ್ಯಾಲರಿ ಮಾಡಲಾಗಿದೆ.  ದಿವ್ಯಾಂಗ ಮಿತ್ರರು ಹೇಗೆ ಅಸಾಧಾರಣ ಪ್ರತಿಭೆಗಳ ಆಗರವಾಗಿದ್ದಾರೆ  ಮತ್ತು  ಅವರಲ್ಲಿ  ಅದೆಷ್ಟು ಅಸಾಧಾರಣ ಶಕ್ತಿ ಇರುತ್ತದೆ ಎಂಬುದನ್ನು ಅರಿಯಲು ಈ ಆರ್ಟ್ ಗ್ಯಾಲರಿಯು ಒಂದು ಉದಾಹರಣೆಯಾಗಿದೆ.  ದಿವ್ಯಾಂಗ ಮಿತ್ರರ ಜೀವನದಲ್ಲಿ ಎಂತಹ ಸವಾಲುಗಳು ಎದುರಾಗುತ್ತವೆ, ಅವುಗಳಿಂದ ಹೊರಬಂದು ಅವರು ಎಲ್ಲಿಯವರೆಗೆ ಮುಟ್ಟಬಹುದು,  ಇಂತಹ ಅನೇಕ ವಿಷಯಗಳನ್ನು ಪೇಂಟಿಂಗ್ಸ್ ಗಳಲ್ಲಿ ನಾವು ಕಾಣಬಹುದಾಗಿದೆ. ನಿಮಗೂ ಕೂಡ ಯಾರಾದರೂ ದಿವ್ಯಾಂಗ ಮಿತ್ರರು ಪರಿಚಯವಿದ್ದರೆ, ಅವರ ಜಾಣ್ಮೆಯನ್ನು ತಿಳಿದಿದ್ದರೆ, ಡಿಜಿಟಲ್ ತಂತ್ರಜ್ಞಾನದಿಂದ ಅದನ್ನು ವಿಶ್ವದ ಮುಂದೆ ತರಬಹುದಾಗಿದೆ.  ದಿವ್ಯಾಂಗ ಮಿತ್ರರೆಲ್ಲರೂ ಇಂತಹ ಪ್ರಯತ್ನಗಳೊಂದಿಗೆ ಅವಶ್ಯವಾಗಿ ಸೇರಿರಿ.

 ನನ್ನ ಪ್ರೀತಿಯ ದೇಶವಾಸಿಗಳೇ, ದೇಶದ ಬಹುತೇಕ ಭಾಗಗಳಲ್ಲಿ ಬೇಸಿಗೆಯು ಬಹಳ ತೀವ್ರವಾಗಿ ಹೆಚ್ಚುತ್ತಿದೆ. ಏರುತ್ತಿರುವ ಈ ಶಾಖವು, ನೀರಿನ ಸಂರಕ್ಷಣೆಯ ನಮ್ಮ ಜವಾಬ್ದಾರಿಯನ್ನೂ ಕೂಡ ಅಷ್ಟೇ ಹೆಚ್ಚಿಸುತ್ತದೆ. ಈಗ ನೀವು ಇರುವ ಸ್ಥಳದಲ್ಲಿ ಸಾಕಷ್ಟು ನೀರು ಲಭ್ಯವಿರಬಹುದು. ಆದರೆ, ನೀರಿನ ಪ್ರತಿ ಹನಿಯೂ ಅಮೃತಕ್ಕೆ ಸಮನಾದಂತಹ, ಜಲಕ್ಷಾಮ ಪ್ರದೇಶಗಳಲ್ಲಿ ವಾಸಿಸುವ ಕೋಟ್ಯಂತರ ಜನರನ್ನು ನೀವು ಸದಾ ಸ್ಮರಿಸುತ್ತಿರಬೇಕು.

 ಸ್ನೇಹಿತರೇ, ಸ್ವಾತಂತ್ರ್ಯದ 75 ನೇ ವರ್ಷದ ಈ ಸಂದರ್ಭದಲ್ಲಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ, ಯಾವ ಸಂಕಲ್ಪಗಳೊಂದಿಗೆ  ದೇಶವು ಮುನ್ನಡೆಯುತ್ತಿದೆಯೋ ಅದರಲ್ಲಿ ಜಲ ಸಂರಕ್ಷಣೆಯೂ ಕೂಡ ಒಂದಾಗಿದೆ. ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶದ ಪ್ರತಿ ಜಿಲ್ಲೆಯಲ್ಲಿ 75 ಅಮೃತ ಸರೋವರಗಳನ್ನು ನಿರ್ಮಿಸಲಾಗುವುದು. ಈ ಚಳವಳಿಯು ಎಷ್ಟು ದೊಡ್ಡದೆಂದು ನೀವು ಊಹಿಸಬಹುದು. ನಿಮ್ಮದೇ ನಗರದಲ್ಲಿ 75 ಅಮೃತ ಸರೋವರಗಳು ಇರುವ ದಿನವು ದೂರವಿಲ್ಲ. ನೀವೆಲ್ಲರೂ ಮತ್ತು ವಿಶೇಷವಾಗಿ ಯುವಕರು ಈ ಚಳವಳಿಯ ಬಗ್ಗೆ ತಿಳಿದುಕೊಳ್ಳಬೇಕೆಂದು ಮತ್ತು ಅದರ ಜವಾಬ್ದಾರಿಯನ್ನು ಸಹ ತೆಗೆದುಕೊಳ್ಳಬೇಕೆಂದು ನಾನು ಬಯಸುತ್ತೇನೆ. ನಿಮ್ಮ ಪ್ರದೇಶದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಯಾವುದೇ ಇತಿಹಾಸವಿದ್ದರೆ, ಹೋರಾಟಗಾರರ ಸ್ಮೃತಿ ಇದ್ದರೆ, ನೀವು ಅದನ್ನೂ ಅಮೃತ ಸರೋವರದೊಂದಿಗೆ ಕೂಡಿಸಬಹುದು. ಅಂದಹಾಗೆ, ಅಮೃತ ಸರೋವರದ ಸಂಕಲ್ಪವನ್ನು ತೆಗೆದುಕೊಂಡ ನಂತರ, ಅನೇಕ ಸ್ಥಳಗಳಲ್ಲಿ ಇದರ ಕೆಲಸವು ವೇಗವಾಗಿ ಪ್ರಾರಂಭವಾಗಿವೆ ಎಂದು ತಿಳಿದು ನನಗೆ ಸಂತೋಷವಾಯಿತು.

 ಉತ್ತರಪ್ರದೇಶದ ರಾಂಪುರದ ಗ್ರಾಮ ಪಂಚಾಯತ್ ಪಟ್ವಾಯಿ ಬಗ್ಗೆ ನನಗೆ ಮಾಹಿತಿ ಸಿಕ್ಕಿದೆ. ಅಲ್ಲಿ ಗ್ರಾಮ ಸಭೆಯ ಜಾಗದಲ್ಲಿ ಒಂದು ಕೆರೆ ಇತ್ತು. ಆದರೆ ಅದು ಕಸದಿಂದ ತುಂಬಿ ಕೊಳಕಾಗಿತ್ತು. ಕಳೆದ ಕೆಲವು ವಾರಗಳಿಂದ ಸಾಕಷ್ಟು ಶ್ರಮವಹಿಸಿ, ಸ್ಥಳೀಯರ ನೆರವಿನಿಂದ, ಸ್ಥಳೀಯ ಶಾಲಾ ಮಕ್ಕಳ ನೆರವಿನಿಂದ,  ಕೊಳೆ ತುಂಬಿದ್ದ ಆ ಕೆರೆಯ ರೂಪವೇ ಬದಲಾಯಿತು. ಈಗ ಆ ಕೆರೆಯ ದಡದಲ್ಲಿ ತಡೆಗೋಡೆ, ಗಡಿಗೋಡೆ, ಫುಡ್ ಕೋರ್ಟ್, ಕಾರಂಜಿ ಅಲ್ಲದೆ ಲೈಟಿಂಗ್…  ಹೀಗೆ ಏನೆಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಪ್ರಯತ್ನಕ್ಕಾಗಿ ನಾನು ರಾಂಪುರದ ಪಟ್ವಾಯಿ ಗ್ರಾಮ ಪಂಚಾಯತ್, ಆ ಗ್ರಾಮದ ಜನತೆ, ಅಲ್ಲಿನ ಮಕ್ಕಳನ್ನು ಬಹಳ ಅಭಿನಂದಿಸುತ್ತೇನೆ.

 ಸ್ನೇಹಿತರೇ, ನೀರಿನ ಲಭ್ಯತೆ ಮತ್ತು ನೀರಿನ ಕೊರತೆ, ಇವು ಯಾವುದೇ ದೇಶದ ಪ್ರಗತಿ ಮತ್ತು ವೇಗದ ಮೇಲೆ ಪ್ರಭಾವ ಬೀರುತ್ತವೆ. 'ಮನ್ ಕಿ ಬಾತ್' ನಲ್ಲಿ ನಾನು ಸ್ವಚ್ಛತೆಯಂತಹ ವಿಷಯಗಳ ಜೊತೆ-ಜೊತೆಗೆ ನೀರಿನ ಸಂರಕ್ಷಣೆಯ ಬಗ್ಗೆಯೂ ಮತ್ತೆ ಮತ್ತೆ ಮಾತನಾಡುವುದನ್ನು ನೀವು ಗಮನಿಸಿರಬೇಕು. ಇದನ್ನೇ ನಮ್ಮ ಗ್ರಂಥಗಳಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ -

“ಪಾನಿಯಂ ಪರಮಂ ಲೋಕೇ, ಜೀವಾನಾಂ ಜೀವನಂ ಸ್ಮೃತಮ್||”

 ಅಂದರೆ, ಪ್ರಪಂಚದಲ್ಲಿ ನೀರು, ಪ್ರತಿಯೊಂದು ಜೀವಿಯ, ಜೀವನದ ಆಧಾರವಾಗಿದೆ ಮತ್ತು ನೀರು ಬಹಳ ದೊಡ್ಡ ಸಂಪನ್ಮೂಲವೂ ಆಗಿದೆ, ಆದ್ದರಿಂದಲೇ ನಮ್ಮ ಪೂರ್ವಜರು ನೀರಿನ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿದ್ದರು. ವೇದಗಳಿಂದ ಪುರಾಣಗಳವರೆಗೆ ಎಲ್ಲೆಡೆ ನೀರನ್ನು ಸಂರಕ್ಷಿಸುವುದು, ಕೊಳಗಳು, ಸರೋವರಗಳನ್ನು ನಿರ್ಮಿಸುವುದು ಮನುಷ್ಯನ ಸಾಮಾಜಿಕ ಮತ್ತು ಆಧ್ಯಾತ್ಮಿಕ ಕರ್ತವ್ಯವೆಂದು ಹೇಳಲಾಗಿದೆ. ವಾಲ್ಮೀಕಿ ರಾಮಾಯಣದಲ್ಲಿ ಜಲಮೂಲಗಳನ್ನು ಜೋಡಿಸುವುದಕ್ಕೆ ಹಾಗೂ ಜಲ ಸಂರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ. ಅದೇ ರೀತಿ, ಸಿಂಧೂ-ಸರಸ್ವತಿ ಮತ್ತು ಹರಪ್ಪನ್ ನಾಗರಿಕತೆಗಳ ಕಾಲದಲ್ಲೂ ಭಾರತದಲ್ಲಿ ನೀರಿಗೆ ಸಂಬಂಧಿಸಿದ ಇಂಜಿನಿಯರಿಂಗ್ ಅನ್ನು ಎಷ್ಟು ಅಭಿವೃದ್ಧಿಪಡಿಸಲಾಗಿತ್ತು ಎಂಬುದು ಇತಿಹಾಸದ ವಿದ್ಯಾರ್ಥಿಗಳಿಗೆ ತಿಳಿದಿರುತ್ತದೆ. ಪ್ರಾಚೀನ ಕಾಲದಲ್ಲಿ, ಅನೇಕ ನಗರಗಳಲ್ಲಿ ನೀರಿನ ಮೂಲಗಳ ಪರಸ್ಪರ ಸಂಪರ್ಕಿತ ವ್ಯವಸ್ಥೆ ಇರುತ್ತಿತ್ತು ಮತ್ತು ಆ ಸಮಯದಲ್ಲಿ, ಜನಸಂಖ್ಯೆಯು ಹೆಚ್ಚಿರಲಿಲ್ಲ, ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿರಲಿಲ್ಲ, ಒಂದು ರೀತಿಯ ಸಮೃದ್ಧಿ ಇತ್ತು, ಆದರೂ, ನೀರಿನ ಸಂರಕ್ಷಣೆಯ ಬಗ್ಗೆ ಆಗಿನ ಕಾಲದಲ್ಲಿಯೇ ಅತ್ಯಂತ ಹೆಚ್ಚಿನ ಅರಿವಿತ್ತು. ಆದರೆ, ಇಂದು ಪರಿಸ್ಥಿತಿ ತದ್ವಿರುದ್ಧವಾಗಿದೆ. ನಿಮ್ಮ ಪ್ರದೇಶದಲ್ಲಿರುವ ಇಂತಹ ಹಳೆಯ ಕೊಳಗಳು, ಬಾವಿಗಳು ಮತ್ತು ಕೆರೆಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ನಾನು ನಿಮ್ಮೆಲ್ಲರನ್ನು ಒತ್ತಾಯಿಸುತ್ತೇನೆ. ಅಮೃತ್ ಸರೋವರ ಅಭಿಯಾನದಿಂದಾಗಿ, ಜಲ ಸಂರಕ್ಷಣೆಯ ಜೊತೆ-ಜೊತೆಗೆ, ನಿಮ್ಮ ಕ್ಷೇತ್ರವೂ ಸಹ ಗುರುತಿಸಲ್ಪಡುತ್ತದೆ.

ಇದರಿಂದಾಗಿ, ನಗರಗಳಲ್ಲಿ, ಪ್ರದೇಶಗಳಲ್ಲಿ ಸ್ಥಳೀಯ ಪ್ರವಾಸಿ ಸ್ಥಳಗಳು ಅಭಿವೃದ್ಧಿಯಾಗುತ್ತವೆ, ಜನರ ತಿರುಗಾಟಕ್ಕೆ ಸ್ಥಳವೂ ಸಹ ಸಿದ್ಧವಾಗುತ್ತದೆ.

 ಸ್ನೇಹಿತರೇ, ನೀರಿಗೆ ಸಂಬಂಧಿಸಿದ ಪ್ರತಿಯೊಂದು ಪ್ರಯತ್ನವೂ ನಮ್ಮ ನಾಳೆಗೆ ಸಂಬಂಧಿಸಿದೆ. ಇದು ಇಡೀ ಸಮಾಜದ ಜವಾಬ್ದಾರಿಯಾಗಿದೆ. ಇದಕ್ಕಾಗಿ ಶತಮಾನಗಳಿಂದ ವಿವಿಧ ಸಮಾಜಗಳಿಂದ, ವಿಭಿನ್ನ ಪ್ರಯತ್ನಗಳು ನಿರಂತರವಾಗಿ ನಡೆದಿವೆ. ಉದಾಹರಣೆಗೆ, 'ಮಾಲ್ ಧಾರಿ' ಎಂಬ "Ran of kutch " ನಲ್ಲಿನ ಬುಡಕಟ್ಟು ಪ್ರದೇಶದ ಜನಾಂಗವು ಜಲ ಸಂರಕ್ಷಣೆಗಾಗಿ "ವೃದಾಸ್" ಎಂಬ ವಿಧಾನವನ್ನು ಬಳಸುತ್ತದೆ.  ಇದರ ಭಾಗವಾಗಿ, ಸಣ್ಣ ಬಾವಿಗಳನ್ನು ನಿರ್ಮಿಸಲಾಗುತ್ತದೆ ಮತ್ತು ಅವುಗಳನ್ನು ಸಂರಕ್ಷಿಸಲು ಸುತ್ತಲೂ ಮರ-ಗಿಡಗಳನ್ನು ನೆಡಲಾಗುತ್ತದೆ. ಇದೇ ರೀತಿ, ಮಧ್ಯಪ್ರದೇಶದ ’ಭಿಲ್’ ಬುಡಕಟ್ಟು ಜನಾಂಗದವರು ತಮ್ಮ ಐತಿಹಾಸಿಕ "ಹಲ್ಮಾ" ಸಂಪ್ರದಾಯವನ್ನು ನೀರಿನ ಸಂರಕ್ಷಣೆಗಾಗಿ ಬಳಸಿದರು. ಈ ಸಂಪ್ರದಾಯದಲ್ಲಿ, ಇಲ್ಲಿನ ಬುಡಕಟ್ಟು ಜನರು ನೀರಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಒಂದು ಸ್ಥಳದಲ್ಲಿ ಸೇರಿ ಚರ್ಚಿಸುತ್ತಾರೆ. ಹಲ್ಮಾ ಸಂಪ್ರದಾಯದಿಂದ ಬಂದ ಸಲಹೆಗಳಿಂದಾಗಿ ಈ ಭಾಗದಲ್ಲಿ ನೀರಿನ ಸಮಸ್ಯೆ ಕಡಿಮೆಯಾಗಿದೆ ಮತ್ತು ಅಂತರ್ಜಲ ಮಟ್ಟವೂ ಹೆಚ್ಚುತ್ತಿದೆ.

 ಸ್ನೇಹಿತರೇ, ಇಂತಹುದೇ ಕರ್ತವ್ಯ ಭಾವನೆಯು ಪ್ರತಿಯೊಬ್ಬರ ಮನಸ್ಸಿನಲ್ಲಿ ಬಂದರೆ, ನೀರಿನ ಸಮಸ್ಯೆಗೆ ಸಂಬಂಧಿಸಿದ ದೊಡ್ಡ ಸವಾಲುಗಳನ್ನು ಕೂಡ ಪರಿಹರಿಸಬಹುದು. ಬನ್ನಿ, ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಜಲ ಸಂರಕ್ಷಣೆ ಮತ್ತು ಜೀವನ ಸಂರಕ್ಷಣೆಯ ಪ್ರತಿಜ್ಞೆ ಮಾಡೋಣ. ನಾವು ಹನಿ-ಹನಿ ನೀರನ್ನು ಉಳಿಸಿ ಪ್ರತಿಯೊಂದು ಜೀವವನ್ನೂ ಉಳಿಸೋಣ.

 ನನ್ನ ಪ್ರೀತಿಯ ದೇಶವಾಸಿಗಳೇ, ನೀವು ಗಮನಿಸಿರಬೇಕು, ಕೆಲವು ದಿನಗಳ ಹಿಂದೆ ನಾನು ನನ್ನ ಯುವ ಸ್ನೇಹಿತರು, ವಿದ್ಯಾರ್ಥಿಗಳೊಂದಿಗೆ 'ಪರೀಕ್ಷಾ ಪೆ ಚರ್ಚಾ' ನಡೆಸಿದ್ದೆ. ಈ ಚರ್ಚೆಯಲ್ಲಿ ಕೆಲವು ವಿದ್ಯಾರ್ಥಿಗಳು ಹೇಳಿದ್ದು, ಅವರಿಗೆ ಪರೀಕ್ಷೆಯಲ್ಲಿ ಗಣಿತದ ಬಗ್ಗೆ ಭಯವಿದೆ. ಇದೇ ವಿಷಯವನ್ನು ಅನೇಕ ವಿದ್ಯಾರ್ಥಿಗಳು ತಮ್ಮ ಸಂದೇಶದಲ್ಲಿ ನನಗೆ ಕಳುಹಿಸಿದ್ದರು. ಈ ಬಾರಿಯ ‘ಮನ್ ಕಿ ಬಾತ್’ನಲ್ಲಿ ಗಣಿತ-mathematics ಬಗ್ಗೆ ಖಂಡಿತ ಚರ್ಚೆ ಮಾಡುವೆನೆಂದು ನಾನು  ನಿರ್ಧರಿಸಿದ್ದೆ. ಸ್ನೇಹಿತರೇ, ಗಣಿತಶಾಸ್ತ್ರವು ಎಂತಹ ವಿಷಯವೆಂದರೆ, ಅದರ ಬಗ್ಗೆ ಭಾರತೀಯರಾದ ನಮಗೆ ಅದು ಹೆಚ್ಚು ಸಹಜವಾಗಬೇಕು. ಏಕೆಂದರೆ, ಗಣಿತಕ್ಕೆ ಸಂಬಂಧಿಸಿದಂತೆ ಇಡೀ ಜಗತ್ತಿಗೆ ಹೆಚ್ಚಿನ ಸಂಶೋಧನೆ ಮತ್ತು ಕೊಡುಗೆಯನ್ನು ಭಾರತೀಯರೇ ನೀಡಿದ್ದಾರೆ. ಸೊನ್ನೆ ಅಂದರೆ ಝೀರೊ, ಇದರ ಆವಿಷ್ಕಾರ ಮತ್ತು ಪ್ರಾಮುಖ್ಯದ ಬಗ್ಗೆ ನೀವು ಸಾಕಷ್ಟು ಕೇಳಿರಲೂಬಹುದು. ಇದನ್ನೂ ನೀವು ಕೇಳಿರಬಹುದು, ಸೊನ್ನೆಯನ್ನು ಕಂಡುಹಿಡಿಯಲಾಗದಿದ್ದರೆ, ಬಹುಶಃ ನಾವು, ಪ್ರಪಂಚದ ಇಷ್ಟೊಂದು ವೈಜ್ಞಾನಿಕ ಉನ್ನತಿಯನ್ನೂ ನೋಡಲು ಸಾಧ್ಯವಾಗುತ್ತಿರಲಿಲ್ಲ. ಕಲನಶಾಸ್ತ್ರದಿಂದ ಕಂಪ್ಯೂಟರ್‌ಗಳವರೆಗೆ - ಈ ಎಲ್ಲಾ ವೈಜ್ಞಾನಿಕ ಸಂಶೋಧನೆಗಳು ಶೂನ್ಯದ ಅನ್ವೇಷಣೆಯನ್ನೇ ಆಧರಿಸಿವೆ. ಭಾರತದ ಗಣಿತಶಾಸ್ತ್ರಜ್ಞರು ಮತ್ತು ವಿದ್ವಾಂಸರು ಎಲ್ಲಿಯವರೆಗೆ ಬರೆದಿದ್ದಾರೆಂದರೆ -

“ಯತ್ ಕಿಂಚಿತ್ ವಸ್ತು ತತ್ ಸರ್ವಂ, ಗಣಿತೇನ ಬಿನಾ ನಹಿಂ!”

ಅಂದರೆ, ಈ ಇಡೀ ವಿಶ್ವದಲ್ಲಿ ಏನಿದೆಯೋ, ಅದೆಲ್ಲವೂ ಗಣಿತವನ್ನೇ ಅವಲಂಬಿಸಿದೆ. ನೀವು ವಿಜ್ಞಾನದ ಅಧ್ಯಯನವನ್ನು ನೆನಪಿಸಿಕೊಂಡರೆ, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ. ವಿಜ್ಞಾನದ ಪ್ರತಿಯೊಂದು ನಿಯಮವನ್ನು ಗಣಿತದ ಸೂತ್ರದಲ್ಲಿಯೇ ವಿವರಿಸಲಾಗುತ್ತದೆ. ನ್ಯೂಟನ್ ನ ನಿಯಮಗಳಾಗಿರಲಿ, ಐನ್‌ಸ್ಟೈನ್‌ನ ಪ್ರಸಿದ್ಧ ಸಮೀಕರಣವಾಗಲಿ, ಬ್ರಹ್ಮಾಂಡಕ್ಕೆ ಸಂಬಂಧಿಸಿದ ಎಲ್ಲಾ ವಿಜ್ಞಾನವೂ ಗಣಿತವೇ ಆಗಿದೆ.     ಈಗಂತೂ ವಿಜ್ಞಾನಿಗಳು ಥಿಯರಿ ಆಫ್ ಎವೆರಿಥಿಂಗ್ ಬಗ್ಗೆಯೂ ಮಾತನಾಡುತ್ತಾರೆ, ಅಂದರೆ, ಬ್ರಹ್ಮಾಂಡದಲ್ಲಿ ಎಲ್ಲವನ್ನೂ ವಿವರಿಸುವಂತಹ ಏಕೈಕ ಸೂತ್ರ. ಗಣಿತದ ಸಹಾಯದಿಂದ ವೈಜ್ಞಾನಿಕ ತಿಳಿವಳಿಕೆಯ ಇಂತಹ ಹರಿವಿನ ಕಲ್ಪನೆಯನ್ನು ನಮ್ಮ ಋಷಿಮುನಿಗಳು ಆಗಲೇ ಮಾಡಿದ್ದರು. ಸೊನ್ನೆಯನ್ನು ಕಂಡುಹಿಡಿಯುವುದರ ಜೊತೆಗೆ, ನಾವು ಅನಂತತೆ ಅಂದರೆ infinite ಅನ್ನೂ ಕೂಡ ವಿವರಿಸಿದ್ದೇವೆ. ಸಾಮಾನ್ಯ ಭಾಷೆಯಲ್ಲಿ, ನಾವು ಸಂಖ್ಯೆಗಳ ಬಗ್ಗೆ ಮಾತನಾಡುವಾಗ, ನಾವು ಮಿಲಿಯನ್, ಬಿಲಿಯನ್ ಮತ್ತು ಟ್ರಿಲಿಯನ್ ಗಳವರೆಗೆ ಮಾತನಾಡುತ್ತೇವೆ ಮತ್ತು ಯೋಚಿಸುತ್ತೇವೆ. ಆದರೆ, ವೇದಗಳು ಮತ್ತು ಭಾರತೀಯ ಗಣಿತಶಾಸ್ತ್ರದಲ್ಲಿ, ಈ ಲೆಕ್ಕಾಚಾರವು ಮತ್ತಷ್ಟು ಹೆಚ್ಚು ಮುಂದಕ್ಕೆ ಹೋಗುತ್ತದೆ. ನಮ್ಮಲ್ಲಿ ಬಹಳ ಹಳೆಯ ಶ್ಲೋಕವೊಂದು ಪ್ರಚಲಿತದಲ್ಲಿದೆ -

ಎಕಂ ದಶಂ ಶತಂ ಚೈವ, ಸಹಸ್ರಮ್ ಅಯುತಂ ತಥಾ |

ಲಕ್ಷಂ ಚ ನಿಯುತಂ ಚೈವ, ಕೋಟಿ: ಅರ್ಬುದಮ್ ಎವ ಚ ||

ವೃಂದಂ ಖರ್ವೋ ನಿಖರ್ವ್: ಚ, ಶಂಖ: ಪದ್ಮ: ಚ ಸಾಗರ: |

ಅಂತ್ಯಂ ಮಧ್ಯಂ ಪರಾರ್ಧ: ಚ, ದಶ ವೃಧ್ಯಾ ಯಥಾ ಕ್ರಮಮ್ ||

 

ಈ ಶ್ಲೋಕದಲ್ಲಿ ಸಂಖ್ಯೆಗಳ ಕ್ರಮವನ್ನು ವಿವರಿಸಲಾಗಿದೆ. ಹೇಗೆಂದರೆ -

ಒಂದು, ಹತ್ತು, ನೂರು, ಸಾವಿರ ಮತ್ತು ಅಯುತ!

ಲಕ್ಷ, ನಿಯುತ್ ಮತ್ತು ಕೋಟಿ.

 ಇದೇರೀತಿ ಈ ಸಂಖ್ಯೆಗಳು ಮುಂದುವರಿಯುತ್ತವೆ - ಶಂಖ, ಪದ್ಮ ಮತ್ತು ಸಾಗರದವರೆಗೆ. ಒಂದು ಸಾಗರದ ಅರ್ಥವೆಂದರೆ 10 (57). ಇಷ್ಟೇ ಅಲ್ಲ, ಇದರ ನಂತರವೂ ಓಘ್ ಮತ್ತು ಮಹೋಘ್ ನಂತಹ ಸಂಖ್ಯೆಗಳಿರುತ್ತವೆ. ಒಂದು ಮಹೋಘ ಎಂದರೆ - 10 (62) ಕ್ಕೆ ಸಮನಾಗಿರುತ್ತದೆ, ಅಂದರೆ, ಒಂದರ ಮುಂದೆ 62 ಸೊನ್ನೆಗಳು, ಅರವತ್ತೆರಡು ಸೊನ್ನೆಗಳು.  ನಾವು ಮನಸ್ಸಿನಲ್ಲಿ ಇಷ್ಟೊಂದು ದೊಡ್ಡ ಸಂಖ್ಯೆಯನ್ನು ಕಲ್ಪಿಸಿಕೊಳ್ಳುವುದೂ ಕಷ್ಟ, ಆದರೆ, ಭಾರತೀಯ ಗಣಿತಶಾಸ್ತ್ರದಲ್ಲಿ, ಇವುಗಳನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ನಾನು ಇಂಟೆಲ್ ಕಂಪನಿಯ ಸಿಇಒ ಅವರನ್ನು ಭೇಟಿಯಾಗಿದ್ದೆ. ಅವರು ನನಗೆ ಒಂದು ವರ್ಣಚಿತ್ರವನ್ನು ನೀಡಿದ್ದರು, ಅದರಲ್ಲಿ ವಾಮನ ಅವತಾರದ ಮೂಲಕ ಅಂತಹ ಒಂದು ಭಾರತೀಯ ಲೆಕ್ಕಾಚಾರ ಅಥವಾ ಅಳತೆಯ ವಿಧಾನವನ್ನು ಚಿತ್ರಿಸಲಾಗಿದೆ. ಇಂಟೆಲ್ ಹೆಸರು ಕೇಳಿದ ತಕ್ಷಣ ನಿಮಗೆ ತಾನಾಗಿಯೇ ಕಂಪ್ಯೂಟರ್ ನೆನಪಾಗಿರಬಹುದು. ಕಂಪ್ಯೂಟರಿನ ಭಾಷೆಯಲ್ಲಿ Binary ಪದ್ಧತಿಯ ಬಗ್ಗೆಯೂ ನೀವು ಕೇಳಿರಬಹುದು, ಆದರೆ ಆಚಾರ್ಯ ಪಿಂಗಳಾರಂತಹ ಋಷಿಗಳು ನಮ್ಮ ದೇಶದಲ್ಲಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಇವರು Binary ಪದ್ಧತಿಯನ್ನು ಕಂಡುಹಿಡಿದಿದ್ದರು.  ಇದೇ ರೀತಿ ಆರ್ಯಭಟ್ಟರಿಂದ ಹಿಡಿದು ರಾಮಾನುಜನ್ ರಂತಹ ಗಣಿತಶಾಸ್ತ್ರಜ್ಞರವರೆಗೂ, ನಮ್ಮಲ್ಲಿ ಗಣಿತದ ಹಲವಾರು ಸಿದ್ಧಾಂತಗಳ ಮೇಲೆ,  ಕೆಲಸಗಳು ನಡೆದಿವೆ.

 ಸ್ನೇಹಿತರೇ, ಭಾರತೀಯರಾದ ನಮಗೆ ಗಣಿತವು ಎಂದಿಗೂ ಕಷ್ಟದ ವಿಷಯವಾಗಿರಲಿಲ್ಲ, ಇದಕ್ಕೆ ನಮ್ಮ ವೈದಿಕ ಗಣಿತವೇ ದೊಡ್ಡ ಕಾರಣ. ಆಧುನಿಕ ಕಾಲದಲ್ಲಿ ವೈದಿಕ ಗಣಿತದ ಶ್ರೇಯಸ್ಸು ಶ್ರೀ ಭಾರತೀ ಕೃಷ್ಣ ತೀರ್ಥ ಜಿ ಮಹಾರಾಜರಿಗೆ ಸಲ್ಲುತ್ತದೆ. ಇವರು ಲೆಕ್ಕಾಚಾರದ ಪ್ರಾಚೀನ ವಿಧಾನಗಳನ್ನು ಪುನರುಜ್ಜೀವಗೊಳಿಸಿ, ಅದಕ್ಕೆ ವೈದಿಕ ಗಣಿತ ಎಂದು ಹೆಸರಿಸಿದರು. ವೈದಿಕ ಗಣಿತದ ಪ್ರಾಮುಖ್ಯ ಎಂದರೆ ಇದರ ಮೂಲಕ ನೀವು ಅತ್ಯಂತ ಕಿಷ್ಟಕರವಾದ ಲೆಕ್ಕಾಚಾರಗಳನ್ನು ಸಹ ಕಣ್ಣು ಮಿಟುಕಿಸುವುದರಲ್ಲಿ ಮನಸ್ಸಿನಲ್ಲಿಯೇ ಮಾಡಬಹುದು. ಇತ್ತೀಚಿನ ದಿನಗಳಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಅನೇಕ ಯುವಕರು ವೈದಿಕ ಗಣಿತವನ್ನು ಕಲಿಯುವ ಮತ್ತು ಕಲಿಸುವ ವೀಡಿಯೊಗಳನ್ನು ನೀವು ನೋಡಿರಬೇಕು.

 ಸ್ನೇಹಿತರೇ, ಇಂದು 'ಮನ್ ಕಿ ಬಾತ್' ನಲ್ಲಿ ವೈದಿಕ ಗಣಿತವನ್ನು ಕಲಿಸುವ ಇಂತಹ ಒಬ್ಬ ಸ್ನೇಹಿತರು ನಮ್ಮೊಂದಿಗೆ ಇದ್ದಾರೆ. ಇವರು ಕೋಲ್ಕತ್ತಾದ ಗೌರವ್ ಟೆಕರೀವಾಲ್ ರವರು.  ಕಳೆದ ಎರಡು-ಎರಡೂವರೆ ದಶಕಗಳಿಂದ, ವೈದಿಕ ಗಣಿತದ ಆಂದೋಲನವನ್ನು ಬಹಳ ಸಮರ್ಪಣೆಯೊಂದಿಗೆ ಮುನ್ನಡೆಸುತ್ತಿದ್ದಾರೆ. ಬನ್ನಿ, ಅವರೊಂದಿಗೆ ಮಾತನಾಡೋಣ…

 ಮೋದಿ ಜಿ - ಗೌರವ್ ಜಿ ನಮಸ್ತೆ!

 ಗೌರವ್ - ನಮಸ್ತೆ ಸರ್!

 ಮೋದಿ ಜೀ - ನಿಮಗೆ ವೈದಿಕ ಗಣಿತದಲ್ಲಿ ಬಹಳ ಆಸಕ್ತಿ ಇರುವುದಾಗಿಯೂ, ಈ ಬಗ್ಗೆ ಬಹಳಷ್ಟು ಕೆಲಸ ಮಾಡಿರುವುದಾಗಿಯೂ ನಾನು ಕೇಳಿದ್ದೇನೆ. ಆದ್ದರಿಂದ ಮೊದಲು ನಾನು ನಿಮ್ಮ ಬಗ್ಗೆ ತಿಳಿದುಕೊಳ್ಳ ಬಯಸುತ್ತೇನೆ ಹಾಗೂ ನೀವು ಈ ವಿಷಯದಲ್ಲಿ ಹೇಗೆ ಆಸಕ್ತಿ ತಾಳಿದ್ದೀರಿ, ನನಗೆ ಹೇಳಿ?

 ಗೌರವ್ - ಸರ್, ಇಪ್ಪತ್ತು ವರ್ಷಗಳ ಹಿಂದೆ ನಾನು ಬಿಸಿನೆಸ್ ಸ್ಕೂಲ್‌ಗೆ ಅರ್ಜಿ ಸಲ್ಲಿಸುವಾಗ, ಅದರಲ್ಲಿ CAT ಎಂಬ ಸ್ಪರ್ಧಾತ್ಮಕ ಪರೀಕ್ಷೆ ಇತ್ತು. ಅದರಲ್ಲಿ ಗಣಿತದ ಹಲವಾರು ಪ್ರಶ್ನೆಗಳಿರುತ್ತಿದ್ದವು. ಅವುಗಳನ್ನು ಕಡಿಮೆ ಸಮಯದಲ್ಲಿ ಮಾಡಬೇಕಿತ್ತು. ಆಗ ನನ್ನ ತಾಯಿ ನನಗೆ ವೈದಿಕ ಗಣಿತ ಎಂಬ ಪುಸ್ತಕವನ್ನು ತಂದು ಕೊಟ್ಟರು. ಸ್ವಾಮಿ ಶ್ರೀ ಭಾರತೀಕೃಷ್ಣ ತೀರ್ಥ ಜಿ ಮಹಾರಾಜರು ಆ ಪುಸ್ತಕವನ್ನು ಬರೆದಿದ್ದರು. ಮತ್ತು ಅದರಲ್ಲಿ ಅವರು 16 ಸೂತ್ರಗಳನ್ನು ನೀಡಿದ್ದರು. ಇದರಲ್ಲಿ ಗಣಿತವು ತುಂಬಾ ಸರಳ ಮತ್ತು ವೇಗವಾಗಿರುತ್ತದೆ. ಅದನ್ನು ಓದಿದಾಗ ನನಗೆ ಬಹಳ ಪ್ರೇರಣೆ ದೊರೆಯಿತು ಮತ್ತು ನಂತರ ಗಣಿತದಲ್ಲಿ ನನ್ನ ಆಸಕ್ತಿಯು ಜಾಗೃತವಾಯಿತು. ಭಾರತದ ಕೊಡುಗೆಯಾದ, ನಮ್ಮ ಪರಂಪರೆಯಾಗಿರುವ ಈ ವಿಷಯವನ್ನು ಜಗತ್ತಿನ ಮೂಲೆ ಮೂಲೆಗೂ ತಲುಪಿಸಬಹುದು ಎಂಬುದನ್ನು ನಾನು ಅರ್ಥಮಾಡಿಕೊಂಡೆ. ಅಂದಿನಿಂದ ನಾನು ವೈದಿಕ ಗಣಿತವನ್ನು ಪ್ರಪಂಚದ ಮೂಲೆ ಮೂಲೆಗಳಿಗೆ ತಲುಪಿಸುವ ಗುರಿಯನ್ನು ಹೊಂದಿದ್ದೇನೆ. ಏಕೆಂದರೆ ಗಣಿತದ ಭಯ ಎಲ್ಲರನ್ನೂ ಕಾಡುತ್ತದೆ. ಮತ್ತು ವೈದಿಕ ಗಣಿತಕ್ಕಿಂತ ಸರಳವಾದದ್ದು ಮತ್ತಿನ್ನೇನಿದೆ?

 ಮೋದಿ ಜೀ - ಗೌರವ್ ಜೀ ನೀವು ಎಷ್ಟು ವರ್ಷಗಳಿಂದ ಇದರಲ್ಲಿ ಕೆಲಸ ಮಾಡುತ್ತಿದ್ದೀರಿ?

 ಗೌರವ್ - ನನಗೆ ಇಂದಿಗೆ ಸುಮಾರು 20 ವರ್ಷಗಳಾದವು ಸರ್! ನಾನು ಇದರಲ್ಲಿಯೇ ತೊಡಗಿಸಿಕೊಂಡಿದ್ದೇನೆ.

 ಮೋದಿ ಜೀ - ಈ ಬಗ್ಗೆ ಜಾಗೃತಿಗಾಗಿ ಏನು ಮಾಡುತ್ತಿರಿ, ಯಾವ ಪ್ರಯೋಗಗಳನ್ನು ಮಾಡುತ್ತೀರಿ, ಜನರ ಬಳಿ ಹೇಗೆ ಹೋಗುತ್ತೀರಿ?

 ಗೌರವ್ - ನಾವು ಶಾಲೆಗಳಿಗೆ ಹೋಗುತ್ತೇವೆ, ನಾವು ಆನ್‌ಲೈನ್ ಶಿಕ್ಷಣವನ್ನು ನೀಡುತ್ತೇವೆ. ನಮ್ಮ ಸಂಸ್ಥೆಯ ಹೆಸರು ವೇದಿಕ್ ಮ್ಯಾಥ್ಸ್ ಫೋರಮ್ ಇಂಡಿಯಾ. ಈ ಸಂಸ್ಥೆಯ ಅಡಿಯಲ್ಲಿ ಇಂಟರ್ನೆಟ್ ಮೂಲಕ ದಿನದ 24 ಗಂಟೆಯೂ ವೈದಿಕ ಗಣಿತವನ್ನು ಕಲಿಸುತ್ತೇವೆ ಸರ್!

 ಮೋದಿ ಜೀ - ಗೌರವ್ ಜೀ, ನಿಮಗೆ ತಿಳಿದಿರಬಹುದು, ನಾನು ಯಾವಾಗಲೂ ಮಕ್ಕಳೊಂದಿಗೆ ಮಾತನಾಡಲು ಇಷ್ಟಪಡುತ್ತೇನೆ ಮತ್ತು ನಾನು ಅವಕಾಶಗಳಿಗಾಗಿ ಕಾಯುತ್ತಿರುತ್ತೇನೆ. ಮತ್ತು ಎಕ್ಸಾಂ ವಾರಿಯರ್ ಮೂಲಕ, ನಾನು ಅದನ್ನು ಒಂದು ರೀತಿಯಲ್ಲಿ ಸಾಂಸ್ಥಿಕಗೊಳಿಸಿದ್ದೇನೆ ಮತ್ತು ನಾನು ಮಕ್ಕಳೊಂದಿಗೆ ಮಾತನಾಡುವಾಗ ನನಗೆ ತಿಳಿದದ್ದು, ಅವರು ಗಣಿತದ ಹೆಸರು ಕೇಳಿದರೆ ಸಾಕು ಓಡಿಹೋಗುತ್ತಾರೆ ಮತ್ತು ಎಲ್ಲೆಡೆ ಹರಡಿರುವ ಈ ಭಯವನ್ನು ಹೋಗಲಾಡಿಸಬೇಕು ಎನ್ನುವುದೇ ನನ್ನ ಪ್ರಯತ್ನವಾಗಿದೆ. ಈ ಭಯವನ್ನು ಹೋಗಲಾಡಿಸಬೇಕು. ಸಂಪ್ರದಾಯದಿಂದ ಬಂದ ಸಣ್ಣ ತಂತ್ರಗಳಿಂದ. ಇದು ಗಣಿತದ ವಿಷಯದಲ್ಲಿ ಭಾರತಕ್ಕೆ ಹೊಸದೇನಲ್ಲ.. ಬಹುಶಃ ಪ್ರಪಂಚದ ವಿವಿಧ ಪ್ರಾಚೀನ ಸಂಪ್ರದಾಯಗಳಲ್ಲಿ ಭಾರತ ಗಣಿತದ ಸಂಪ್ರದಾಯವನ್ನು ಹೊಂದಿದೆ, ಆದ್ದರಿಂದ ಪರೀಕ್ಷಾ ಯೋಧರು ಭಯವನ್ನು ದೂಡಬೇಕೆಂದರೆ ನೀವು ಅವರಿಗೆ ಏನು ಹೇಳಬಯಸುತ್ತೀರಿ?

ಗೌರವ್ - ಸರ್, ಇದು ಮಕ್ಕಳಿಗೆ ಹೆಚ್ಚು ಉಪಯುಕ್ತವಾಗಿದೆ, ಏಕೆಂದರೆ, ಪರೀಕ್ಷೆಯ ಕಾಲ್ಪನಿಕ ಭಯವು ಪ್ರತಿ ಮನೆಯಲ್ಲೂ ಬಂದು ಬಿಟ್ಟಿದೆ. ಪರೀಕ್ಷೆಗಾಗಿ ಮಕ್ಕಳು ಟ್ಯೂಷನ್ ತೆಗೆದುಕೊಳ್ಳುತ್ತಾರೆ, ಪೋಷಕರು ಆತಂಕಗೊಂಡಿರುತ್ತಾರೆ. ಶಿಕ್ಷಕರೂ ಕೂಡ ಆತಂಕಗೊಂಡಿರುತ್ತಾರೆ. ಆದರೆ ವೈದಿಕ ಗಣಿತದಿಂದ ಇದೆಲ್ಲವೂ ಛೂಮಂತ್ರವಾಗುತ್ತದೆ. ಈ ಸಾಮಾನ್ಯ ಗಣಿತಕ್ಕಿಂತ ವೈದಿಕ ಗಣಿತವು ಶೇಕಡ ಸಾವಿರದೈದುನೂರು ಪಟ್ಟು ವೇಗವಾಗಿದೆ ಮತ್ತು ಇದು ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸವನ್ನು ತುಂಬುತ್ತದೆ ಹಾಗೂ ಬುದ್ಧಿಯೂ ವೇಗವಾಗಿ ಓಡುತ್ತದೆ.  ನಾವು ವೈದಿಕ ಗಣಿತದೊಂದಿಗೆ ಯೋಗವನ್ನೂ ಪರಿಚಯಿಸಿದ್ದೇವೆ. ಇದರಿಂದ ಮಕ್ಕಳು ಕಣ್ಣು ಮುಚ್ಚಿಕೊಂಡು ಕೂಡ ವೈದಿಕ ಗಣಿತದ ವಿಧಾನದಿಂದ ಲೆಕ್ಕಗಳನ್ನು ಮಾಡಬಹುದು.

 ಮೋದಿ ಜಿ - ಧ್ಯಾನದ ಸಂಪ್ರದಾಯದಲ್ಲಿಯೂ ಸಹ, ಈ ರೀತಿಯಲ್ಲಿ ಗಣಿತವನ್ನು ಮಾಡುವುದು, ಇದು ಕೂಡ ಧ್ಯಾನದ ಒಂದು ಪ್ರಾಥಮಿಕ ಕೋರ್ಸ್ ಆಗಿರುತ್ತದೆ.

 ಗೌರವ್ - ಹೌದು ಸರ್!

 

ಮೋದಿ ಜೀ - ಗೌರವ್ ಜೀ, ನನಗೆ ಬಹಳ ಸಂತೋಷವಾಯಿತು. ನೀವು ಮಿಷನ್ ಮೋಡ್‌ನಲ್ಲಿ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದೀರಿ. ಮತ್ತು ವಿಶೇಷವಾಗಿ ನಿಮ್ಮ ತಾಯಿಯವರು ಒಬ್ಬ ಉತ್ತಮ ಶಿಕ್ಷಕಿಯಂತೆ ನಿಮ್ಮನ್ನು ಈ ಮಾರ್ಗದಲ್ಲಿ ಕರೆದೊಯ್ದಿದ್ದಾರೆ. ಇಂದು ನೀವು ಲಕ್ಷಾಂತರ ಮಕ್ಕಳನ್ನು ಆ ಮಾರ್ಗದಲ್ಲಿ ಕರೆದೊಯ್ಯುತ್ತಿದ್ದೀರಿ. ನಿಮಗೆ ನನ್ನ ಶುಭ ಹಾರೈಕೆಗಳು.

 ಗೌರವ್ - ಧನ್ಯವಾದಗಳು ಸರ್! ನಾನು ನಿಮಗೆ ಆಭಾರಿಯಾಗಿದ್ದೇನೆ ಸರ್! ವೈದಿಕ ಗಣಿತಕ್ಕೆ ಪ್ರಾಮುಖ್ಯವನ್ನು ನೀಡಿ, ನೀವು ನನ್ನನ್ನು ಆಯ್ಕೆ ಮಾಡಿದ್ದೀರಿ ಸರ್! ಆದ್ದರಿಂದ ನಾವು ತುಂಬಾ ಕೃತಜ್ಞರಾಗಿರುತ್ತೇವೆ.

 ಮೋದಿಜಿ - ತುಂಬಾ ಧನ್ಯವಾದಗಳು. ನಮಸ್ಕಾರ |

 ಗೌರವ್ - ನಮಸ್ತೆ ಸರ್.

 ಸ್ನೇಹಿತರೇ, ಗೌರವ್ ರವರು ಬಹಳ ಚೆನ್ನಾಗಿ ವಿವರಿಸಿದರು. ವೈದಿಕ ಗಣಿತವು, ಗಣಿತವನ್ನು ಹೇಗೆ ಕ್ಲಿಷ್ಟದಿಂದ ಇಷ್ಟ ಪಡುವಂತೆ ಮಾಡುತ್ತದೆ ಎಂಬುದನ್ನು. ಇಷ್ಟೇ ಅಲ್ಲ, ನೀವು ವೈದಿಕ ಗಣಿತದ ಮೂಲಕ ದೊಡ್ಡ ವೈಜ್ಞಾನಿಕ ಸಮಸ್ಯೆಗಳನ್ನು ಸಹ ಪರಿಹರಿಸಬಹುದು. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ವೈದಿಕ ಗಣಿತವನ್ನು ಕಲಿಸಬೇಕೆಂದು ನಾನು ಬಯಸುತ್ತೇನೆ. ಇದರಿಂದ ಅವರ ಆತ್ಮವಿಶ್ವಾಸ ಹೆಚ್ಚಾಗುವುದಲ್ಲದೆ, ಅವರ ಮೆದುಳಿನ ವಿಶ್ಲೇಷಣಾತ್ಮಕ ಶಕ್ತಿಯೂ ಹೆಚ್ಚುತ್ತದೆ. ಅಲ್ಲದೆ ಗಣಿತದ ಬಗ್ಗೆ ಕೆಲವು ಮಕ್ಕಳಲ್ಲಿ ಏನೇ ಚಿಕ್ಕ ಭಯವಿದ್ದರೂ, ಆ ಭಯವೂ ಸಂಪೂರ್ಣವಾಗಿ ಕೊನೆಗೊಳ್ಳುತ್ತದೆ.

 ನನ್ನ ಪ್ರೀತಿಯ ದೇಶವಾಸಿಗಳೇ, ಇಂದು 'ಮನ್ ಕಿ ಬಾತ್' ನಲ್ಲಿ, ಮ್ಯೂಸಿಯಂನಿಂದ ಹಿಡಿದು ಗಣಿತದವರೆಗೆ ಅನೇಕ ಮಾಹಿತಿಯುಕ್ತ ವಿಷಯಗಳನ್ನು ಚರ್ಚಿಸಲಾಗಿದೆ. ನಿಮ್ಮ ಸಲಹೆಗಳಿಂದಾಗಿ ಈ ಎಲ್ಲಾ ವಿಷಯಗಳು 'ಮನ್ ಕಿ ಬಾತ್' ನ ಭಾಗವಾಗುತ್ತವೆ. ಇದೇ ರೀತಿ, ನಿಮ್ಮ ಸಲಹೆಗಳನ್ನು ಮುಂದೆಯೂ ನನಗೆ ನಮೋ ಆಪ್ ಮತ್ತು MyGov ಮೂಲಕ ಕಳುಹಿಸುತ್ತಿರಿ. ಮುಂಬರುವ ದಿನಗಳಲ್ಲಿ ದೇಶದಲ್ಲಿ ಈದ್ ಹಬ್ಬ ಬರಲಿದೆ. ಮೇ 3 ರಂದು ಅಕ್ಷಯ ತೃತೀಯ ಮತ್ತು ಭಗವಾನ್ ಪರಶುರಾಮರ ಜನ್ಮದಿನವನ್ನು ಸಹ ಆಚರಿಸಲಾಗುತ್ತದೆ. ಕೆಲವು ದಿನಗಳ ನಂತರದಲ್ಲೇ ವೈಶಾಖ ಬುದ್ಧ ಪೂರ್ಣಿಮೆಯ ಹಬ್ಬವೂ ಬರುತ್ತದೆ.

ಈ ಎಲ್ಲಾ ಹಬ್ಬಗಳು ಸಂಯಮ, ಪವಿತ್ರತೆ, ದಾನ ಮತ್ತು ಸಾಮರಸ್ಯದ ಹಬ್ಬಗಳಾಗಿವೆ. ನಿಮ್ಮೆಲ್ಲರಿಗೂ ಮುಂಚಿತವಾಗಿ ಈ ಎಲ್ಲ ಹಬ್ಬಗಳಿಗೆ ಶುಭಾಶಯಗಳು. ಈ ಹಬ್ಬಗಳನ್ನು ಬಹಳ ಸಂತೋಷದಿಂದ ಮತ್ತು ಸಾಮರಸ್ಯದಿಂದ ಆಚರಿಸಿ. ಇದೆಲ್ಲದರ ನಡುವೆಯೂ ನೀವು ಕೊರೊನಾ ಬಗ್ಗೆ ಎಚ್ಚರದಿಂದಿರಬೇಕು. ಮಾಸ್ಕ್ ಧರಿಸುವುದು, ನಿಯಮಿತವಾಗಿ ಕೈಗಳನ್ನು ತೊಳೆಯುವುದು, ತಡೆಗಟ್ಟುವಿಕೆಗೆ ಅಗತ್ಯವಾದ ಕ್ರಮಗಳೆಲ್ಲವನ್ನೂ ನೀವು  ಪಾಲಿಸುತ್ತಿರಿ. ಮುಂದಿನ ಬಾರಿ 'ಮನ್ ಕಿ ಬಾತ್' ನಲ್ಲಿ ನಾವು ಮತ್ತೊಮ್ಮೆ ಭೇಟಿಯಾಗೋಣ ಹಾಗೂ ನೀವು ಕಳುಹಿಸಿದ ಇನ್ನಷ್ಟು ಹೊಸ ವಿಷಯಗಳ ಬಗ್ಗೆ  ಚರ್ಚಿಸೋಣ - ಅಲ್ಲಿಯವರೆಗೆ ವಿದಾಯ ಹೇಳೋಣ. ಬಹಳ ಬಹಳ  ಧನ್ಯವಾದಗಳು.

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi visits the Indian Arrival Monument
November 21, 2024

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.