Prabhu Ram was also a source of inspiration for the makers of our Constitution: PM Modi
The festivals of our democracy further strengthen India as the ‘Mother of Democracy’: PM Modi
Pran Pratishtha in Ayodhya has woven a common thread, uniting people across the country: PM Modi
India of the 21st century is moving ahead with the mantra of Women-led development: PM Modi
The Padma Awards recipients are doing unique work in their respective fields: PM Modi
The Ministry of AYUSH has standardized terminology for Ayurveda, Siddha and Unani medicine: PM Modi

ನನ್ನ ಪ್ರೀತಿಯ ದೇಶಬಾಂಧವರೆ ನಮಸ್ಕಾರ. ಇದು 2024 ರ ಮೊದಲ 'ಮನದ ಮಾತು' ಕಾರ್ಯಕ್ರಮವಾಗಿದೆ. ಅಮೃತಕಾಲದಲ್ಲಿ ಹೊಸ ಉತ್ಸಾಹ, ಹೊಸ ಅಲೆ ಉಕ್ಕುತ್ತಿದೆ. ಎರಡು ದಿನಗಳ ಹಿಂದೆ ನಾವೆಲ್ಲ ದೇಶವಾಸಿಗಳು 75ನೇ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದ್ದೇವೆ. ಈ ವರ್ಷ ನಮ್ಮ ಸಂವಿಧಾನವೂ 75 ವರ್ಷಗಳನ್ನು ಪೂರೈಸುತ್ತಿದೆ ಮತ್ತು ಸರ್ವೋಚ್ಚ ನ್ಯಾಯಾಲಯ ಕೂಡ 75 ವರ್ಷಗಳನ್ನು ಪೂರೈಸುತ್ತಿದೆ. ನಮ್ಮ ಪ್ರಜಾಪ್ರಭುತ್ವದ ಈ ಹಬ್ಬಗಳು ಭಾರತವನ್ನು mother of democracy ಯ ರೂಪದಲ್ಲಿ ಮತ್ತಷ್ಟು ಬಲಪಡಿಸುತ್ತವೆ. ಭಾರತದ ಸಂವಿಧಾನವನ್ನು ಅದೆಷ್ಟು ಗಹನವಾದ ಚಿಂತನೆಯ ನಂತರ ಸಿದ್ಧಪಡಿಸಲಾಗಿದೆ ಎಂದರೆ ಅದನ್ನು ಜೀವಂತ ದಾಖಲೆ ಎಂದು ಕರೆಯಲಾಗುತ್ತದೆ. ಈ ಸಂವಿಧಾನದ ಮೂಲ ಪ್ರತಿಯ ಮೂರನೇ ಅಧ್ಯಾಯದಲ್ಲಿ, ಭಾರತದ ನಾಗರಿಕರ ಮೂಲಭೂತ ಹಕ್ಕುಗಳನ್ನು ಕೂಡಾ ವಿವರಿಸಲಾಗಿದೆ ಮತ್ತು ಮೂರನೇ ಅಧ್ಯಾಯದ ಆರಂಭದಲ್ಲಿ, ನಮ್ಮ ಸಂವಿಧಾನದ ನಿರ್ಮಾತೃಗಳು ಭಗವಂತ ರಾಮ, ಸೀತಾ ಮಾತೆ ಮತ್ತು ಲಕ್ಷ್ಮಣರ ಚಿತ್ರಗಳಿಗೆ ಸ್ಥಾನ ನೀಡಿರುವುದು ಬಹಳ ಕುತೂಹಲಕಾರಿಯಾಗಿದೆ. ಪ್ರಭು ಶ್ರೀರಾಮನ ಆಳ್ವಿಕೆಯು ನಮ್ಮ ಸಂವಿಧಾನವನ್ನು ರಚಿಸಿದವರಿಗೆ ಸ್ಫೂರ್ತಿಯ ಮೂಲವಾಗಿದೆ ಮತ್ತು ಅದಕ್ಕಾಗಿಯೇ ಜನವರಿ 22 ರಂದು ಅಯೋಧ್ಯೆಯಲ್ಲಿ ನಾನು 'ದೇವನಿಂದ ದೇಶ', 'ರಾಮನಿಂದ ರಾಷ್ಟ್ರ’ ದ ಕುರಿತು ಮಾತನಾಡಿದ್ದೆ.

ಸ್ನೇಹಿತರೇ, ಅಯೋಧ್ಯೆಯ ಪ್ರಾಣ ಪ್ರತಿಷ್ಠಾಪನೆ ಸಂದರ್ಭವು ದೇಶದ ಕೋಟಿಗಟ್ಟಲೆ ಜನರನ್ನು ಒಂದುಗೂಡಿಸಿದಂತೆ ತೋರುತ್ತಿತ್ತು. ಎಲ್ಲರ ಭಾವನೆಗಳು ಒಂದೇ, ಎಲ್ಲರ ಭಕ್ತಿ ಒಂದೇ ಆಗಿತ್ತು, ಎಲ್ಲರ ಮಾತಿನಲ್ಲೂ ರಾಮ, ಎಲ್ಲರ ಹೃದಯದಲ್ಲೂ ರಾಮ ನೆಲೆಸಿದ್ದ. ಈ ಸಂದರ್ಭದಲ್ಲಿ ದೇಶದ ಅನೇಕ ಜನರು ರಾಮ ಭಜನೆಯನ್ನು ಹಾಡಿ, ಅದನ್ನು ಶ್ರೀರಾಮನ ಪಾದಕ್ಕೆ ಸಮರ್ಪಿಸಿದರು. ಜನವರಿ 22 ರ ಸಂಜೆ ಇಡೀ ದೇಶವು ರಾಮಜ್ಯೋತಿಯನ್ನು ಬೆಳಗಿಸಿ ದೀಪಾವಳಿಯನ್ನು ಆಚರಿಸಿತು. ಈ ಸಮಯದಲ್ಲಿ, ದೇಶವು ಸಾಮೂಹಿಕತೆಯ ಶಕ್ತಿಯನ್ನು ಮೆರೆಯಿತು. ಇದು ವಿಕಸಿತ ಭಾರತಕ್ಕಾಗಿ ನಾವು ಕೈಗೊಂಡ ಸಂಕಲ್ಪಗಳಿಗೆ ಆಧಾರವಾಗಿದೆ. ಮಕರ ಸಂಕ್ರಾಂತಿಯಿಂದ ಜನವರಿ 22ರವರೆಗೆ ಸ್ವಚ್ಛತಾ ಅಭಿಯಾನ ನಡೆಸುವಂತೆ ದೇಶದ ಜನತೆಗೆ ಮನವಿ ಮಾಡಿದ್ದೆ. ಲಕ್ಷಗಟ್ಟಲೆ ಜನರು ಭಕ್ತಿಯಿಂದ ಸೇರಿ ತಮ್ಮ ಪ್ರದೇಶದ ಧಾರ್ಮಿಕ ಸ್ಥಳಗಳನ್ನು ಸ್ವಚ್ಛಗೊಳಿಸಿದ್ದು ನನಗೆ ಅತೀವ ಸಂತಸ ತಂದಿದೆ. ಬಹಳಷ್ಟು ಜನರು ನನಗೆ ಇದಕ್ಕೆ ಸಂಬಂಧಿಸಿದ ಚಿತ್ರಗಳು ಮತ್ತು ವೀಡಿಯೊಗಳನ್ನು ಕಳುಹಿಸಿದ್ದಾರೆ - ಈ ಭಾವನೆ ನಿಲ್ಲಬಾರದು, ಈ ಅಭಿಯಾನ ಮುಂದುವರಿಯಬೇಕು. ಸಾಮೂಹಿಕತೆಯ ಈ ಶಕ್ತಿಯು ನಮ್ಮ ದೇಶವನ್ನು ಯಶಸ್ಸಿನ ಹೊಸ ಎತ್ತರಕ್ಕೆ ಕೊಂಡೊಯ್ಯಲಿದೆ.

ನನ್ನ ಪ್ರಿಯ ದೇಶವಾಸಿಗಳೇ, ಈ ಬಾರಿ ಜನವರಿ 26 ರ ಪರೇಡ್ ತುಂಬಾ ಅದ್ಭುತವಾಗಿತ್ತು, ಆದರೆ ಕವಾಯತಿನಲ್ಲಿ ಮಹಿಳಾ ಶಕ್ತಿಯನ್ನು ನೋಡುವುದು ಹೆಚ್ಚು ಚರ್ಚೆಯ ವಿಷಯವಾಗಿತ್ತು, ಕರ್ತವ್ಯ ಪಥದಲ್ಲಿ ಕೇಂದ್ರ ಭದ್ರತಾ ಪಡೆ ಮತ್ತು ದೆಹಲಿ ಪೊಲೀಸ್ ಮಹಿಳಾ ತುಕಡಿಗಳು ಕವಾಯತು ಆರಂಭಿಸಿದಾಗ, ಎಲ್ಲರೂ ಹೆಮ್ಮೆಯಿಂದ ಬೀಗಿದರು. ಮಹಿಳಾ ವಾದ್ಯಮೇಳದ ಕವಾಯತು ನೋಡಿ, ಅವರ ಅಮೋಘ ಸಮನ್ವಯತೆ ಕಂಡು ದೇಶ-ವಿದೇಶದ ಜನರು ಪುಳಕಿತರಾದರು. ಈ ಬಾರಿ ಪರೇಡ್‌ನಲ್ಲಿ ಸಾಗಿದ 20 ಸ್ಕ್ವಾಡ್‌ಗಳಲ್ಲಿ 11 ಸ್ಕ್ವಾಡ್‌ಗಳು ಮಹಿಳೆಯರದ್ದೇ ಆಗಿದ್ದವು. ಸಾಗಿಬಂದ ಸ್ಥಬ್ಧ ಚಿತ್ರಗಳಲ್ಲಿಯೂ, ಎಲ್ಲಾ ವೇಷಧಾರಿಗಳು ಮಹಿಳೆಯರೇ ಆಗಿದ್ದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸುಮಾರು ಒಂದೂವರೆ ಸಾವಿರ ಹೆಣ್ಣು ಮಕ್ಕಳು ಪಾಲ್ಗೊಂಡಿದ್ದರು. ಅನೇಕ ಮಹಿಳಾ ಕಲಾವಿದರು ಶಂಖ, ನಾದಸ್ವರ ಮತ್ತು ನಾಗದಾ ದಂತಹ ಭಾರತೀಯ ಸಂಗೀತ ವಾದ್ಯಗಳನ್ನು ನುಡಿಸುತ್ತಿದ್ದರು. ಡಿಆರ್‌ಡಿಒ ಬಿಡುಗಡೆ ಮಾಡಿದ ಟ್ಯಾಬ್ಲೋ ಕೂಡ ಎಲ್ಲರ ಗಮನ ಸೆಳೆಯಿತು. ನೀರು, ಭೂಮಿ, ಆಕಾಶ, ಸೈಬರ್ ಮತ್ತು ಬಾಹ್ಯಾಕಾಶ - ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳಾ ಶಕ್ತಿಯು ದೇಶವನ್ನು ಹೇಗೆ ರಕ್ಷಿಸುತ್ತಿದೆ ಎಂಬುದನ್ನು ಇದು ತೋರಿಸಿತ್ತು. 21ನೇ ಶತಮಾನದ ಭಾರತವು ಮಹಿಳಾ ನೇತೃತ್ವದ ಅಭಿವೃದ್ಧಿಯ ಮಂತ್ರದೊಂದಿಗೆ ಮುನ್ನಡೆಯುತ್ತಿದೆ.

ಸ್ನೇಹಿತರೇ, ನೀವು ಕೆಲವು ದಿನಗಳ ಹಿಂದೆ ಅರ್ಜುನ್ ಪ್ರಶಸ್ತಿ ಸಮಾರಂಭವನ್ನು ನೋಡಿರಬಹುದು. ಇದರಲ್ಲಿ ದೇಶದ ಹಲವು ಭರವಸೆಯ ಕ್ರೀಡಾಪಟುಗಳನ್ನು ಹಾಗೂ ಅಥ್ಲೀಟ್ ಗಳನ್ನು ರಾಷ್ಟ್ರಪತಿ ಭವನದಲ್ಲಿ ಸನ್ಮಾನಿಸಲಾಯಿತು. ಇಲ್ಲಿಯೂ ಜನರ ಗಮನ ಸೆಳೆದದ್ದು ಅರ್ಜುನ್ ಪ್ರಶಸ್ತಿ ಪಡೆದ ಹೆಣ್ಣು ಮಕ್ಕಳು ಮತ್ತು ಅವರ ಜೀವನ ಪಯಣ. ಈ ಬಾರಿ 13 ಮಹಿಳಾ ಕ್ರೀಡಾಪಟುಗಳಿಗೆ ಅರ್ಜುನ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಮಹಿಳಾ ಕ್ರೀಡಾಪಟುಗಳು ಅನೇಕ ದೊಡ್ಡ ಟೂರ್ನಿಗಳಲ್ಲಿ ಭಾಗವಹಿಸಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಿದ್ದಾರೆ. ದೈಹಿಕ ಸವಾಲುಗಳು ಮತ್ತು ಆರ್ಥಿಕ ಸವಾಲುಗಳು ಈ ಧೈರ್ಯಶಾಲಿ ಮತ್ತು ಪ್ರತಿಭಾವಂತ ಆಟಗಾರರ ಮುಂದೆ ಸೋತು ಹೋದವು. ಬದಲಾಗುತ್ತಿರುವ ಭಾರತದಲ್ಲಿ, ನಮ್ಮ ಹೆಣ್ಣುಮಕ್ಕಳು ಮತ್ತು ದೇಶದ ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ಅದ್ಭುತಗಳನ್ನು ಸಾಧಿಸುತ್ತಿದ್ದಾರೆ. ಮಹಿಳೆಯರು ತಮ್ಮ ಛಾಪು ಮೂಡಿಸಿದ ಇನ್ನೊಂದು ಕ್ಷೇತ್ರವಿದೆ, ಅದೇ ಸ್ವಸಹಾಯ ಗುಂಪುಗಳು. ಇಂದು ದೇಶದಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಸಂಖ್ಯೆಯೂ ಹೆಚ್ಚಿದ್ದು, ಅವರ ಕಾರ್ಯವ್ಯಾಪ್ತಿಯೂ ಸಾಕಷ್ಟು ವಿಸ್ತಾರಗೊಂಡಿದೆ. ಪ್ರತಿ ಹಳ್ಳಿಯ ಹೊಲಗಳಲ್ಲಿ ಡ್ರೋನ್‌ಗಳ ನೆರವಿನಿಂದ ಕೃಷಿಗೆ ಸಹಾಯ ಮಾಡುವ ನಮೋ ಡ್ರೋನ್ ದೀದಿಗಳನ್ನು ನೀವು ನೋಡುವ ದಿನ ದೂರವಿಲ್ಲ. ಉತ್ತರಪ್ರದೇಶದ ಬಹರಾಯಿಚ್‌ನಲ್ಲಿ ಸ್ಥಳೀಯ ಪದಾರ್ಥಗಳನ್ನು ಬಳಸಿ ಮಹಿಳೆಯರು ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳನ್ನು ತಯಾರಿಸುತ್ತಿರುವುದರ ಬಗ್ಗೆ ನನಗೆ ತಿಳಿದು ಬಂದಿದೆ. ನಿಬಿಯಾ ಬೇಗಂಪುರ ಗ್ರಾಮದ ಸ್ವಸಹಾಯ ಸಂಘಗಳ ಜೊತೆಗೂಡಿದ ಮಹಿಳೆಯರು ಹಸುವಿನ ಸಗಣಿ, ಬೇವಿನ ಸೊಪ್ಪು ಹಾಗೂ ಹಲವು ಬಗೆಯ ಔಷಧೀಯ ಸಸ್ಯಗಳನ್ನು ಬೆರೆಸಿ ಜೈವಿಕ ಗೊಬ್ಬರ ತಯಾರಿಸುತ್ತಿದ್ದಾರೆ. ಅದೇ ರೀತಿ ಈ ಮಹಿಳೆಯರು ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಮೆಣಸಿನಕಾಯಿ ಪೇಸ್ಟ್ ನಿಂದ ಸಾವಯವ ಕೀಟನಾಶಕವನ್ನು ಸಿದ್ಧಪಡಿಸುತ್ತಾರೆ. ಈ ಮಹಿಳೆಯರು ಒಗ್ಗೂಡಿ ‘ಉನ್ನತಿ ಜೈವಿಕ ಘಟಕ’ ಎಂಬ ಸಂಸ್ಥೆಯನ್ನು ರಚಿಸಿದ್ದಾರೆ. ಈ ಸಂಸ್ಥೆಯು ಈ ಮಹಿಳೆಯರಿಗೆ ಜೈವಿಕ ಉತ್ಪನ್ನಗಳನ್ನು ತಯಾರಿಸಲು ಸಹಾಯ ಮಾಡುತ್ತದೆ. ಇವರು ತಯಾರಿಸುವ ಜೈವಿಕ ಗೊಬ್ಬರ ಮತ್ತು ಜೈವಿಕ ಕೀಟನಾಶಕಗಳ ಬೇಡಿಕೆಯೂ ನಿರಂತರವಾಗಿ ಹೆಚ್ಚುತ್ತಿದೆ. ಇಂದು ಸಮೀಪದ ಗ್ರಾಮಗಳ 6 ಸಾವಿರಕ್ಕೂ ಹೆಚ್ಚು ರೈತರು ಇವರಿಂದ ಜೈವಿಕ ಉತ್ಪನ್ನಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಸ್ವಸಹಾಯ ಸಂಘಗಳಿಗೆ ಸೇರಿದ ಈ ಮಹಿಳೆಯರ ಆದಾಯ ವೃದ್ಧಿಸಿದ್ದು, ಅವರ ಆರ್ಥಿಕ ಸ್ಥಿತಿಯೂ ಸುಧಾರಿಸಿದೆ.

ನನ್ನ ಪ್ರಿಯ ದೇಶವಾಸಿಗಳೇ, ಸಮಾಜ ಮತ್ತು ದೇಶವನ್ನು ಬಲಪಡಿಸಲು ನಿಸ್ವಾರ್ಥವಾಗಿ ದುಡಿಯುತ್ತಿರುವ ಇಂತಹ ದೇಶವಾಸಿಗಳ ಪ್ರಯತ್ನಗಳನ್ನು 'ಮನದ ಮಾತಿನಲ್ಲಿ' ನಾವು ಬೆಳಕಿಗೆ ತರುತ್ತೇವೆ. ಹೀಗೆ ಮೂರು ದಿನಗಳ ಹಿಂದೆ ದೇಶದ ಪದ್ಮ ಪ್ರಶಸ್ತಿಗಳನ್ನು ಘೋಷಿಸಿದಾಗ ‘ಮನದ ಮಾತಿನಲ್ಲಿ’ ಇಂಥವರ ಬಗ್ಗೆ ಚರ್ಚೆ ಮಾಡುವುದು ಸಹಜ. ಮೂಲ ಹಂತದಿಂದ ಜನರೊಂದಿಗೆ ಬೆರೆಯುವ ಮೂಲಕ ಸಮಾಜದಲ್ಲಿ ದೊಡ್ಡ ಬದಲಾವಣೆಗಳನ್ನು ತರಲು ಶ್ರಮಿಸಿದ ಹಲವಾರು ದೇಶವಾಸಿಗಳಿಗೆ ಈ ಬಾರಿಯೂ ಪದ್ಮ ಪ್ರಶಸ್ತಿ ನೀಡಲಾಗಿದೆ. ಈ ಸ್ಪೂರ್ತಿದಾಯಕ ಜನರ ಜೀವನ ಪಯಣದ ಬಗ್ಗೆ ತಿಳಿದುಕೊಳ್ಳಲು ದೇಶಾದ್ಯಂತ ಸಾಕಷ್ಟು ಕುತೂಹಲ ಕಂಡು ಬಂದಿದೆ. ಮಾಧ್ಯಮದ ಮುಖ್ಯಾಂಶಗಳಿಂದ ದೂರವಿದ್ದು, ಪತ್ರಿಕೆಗಳ ಮುಖಪುಟಗಳಿಂದ ದೂರ ಉಳಿದ ಈ ಜನ ಯಾವುದೇ ಆಡಂಬರವಿಲ್ಲದೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ನಾವು ಈ ಹಿಂದೆ ಈ ಜನರ ಬಗ್ಗೆ ಏನನ್ನೂ ನೋಡಿಲ್ಲ ಅಥವಾ ಕೇಳಿಲ್ಲ, ಆದರೆ ಈಗ ಪದ್ಮ ಪ್ರಶಸ್ತಿ ಘೋಷಣೆಯಾದ ನಂತರ ಎಲ್ಲೆಡೆ ಇಂಥವರ ಬಗ್ಗೆ ಚರ್ಚೆಯಾಗುತ್ತಿದ್ದು, ಅವರ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಜನ ಕಾತರರಾಗಿರುವುದು ನನಗೆ ಸಂತೋಷ ತಂದಿದೆ. ಈ ಪದ್ಮ ಪ್ರಶಸ್ತಿ ಪುರಸ್ಕೃತರಲ್ಲಿ ಹೆಚ್ಚಿನವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ವಿಶಿಷ್ಟ ಕೆಲಸ ಮಾಡುತ್ತಿದ್ದಾರೆ. ಯಾರೋ ಆಂಬ್ಯುಲೆನ್ಸ್ ಸೇವೆಯನ್ನು ನೀಡುತ್ತಿದ್ದರೆ, ಮತ್ತಾರೋ ನಿರ್ಗತಿಕರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ. ಕೆಲವರು ಸಾವಿರಾರು ಗಿಡಗಳನ್ನು ನೆಟ್ಟು ಪ್ರಕೃತಿ ಸಂರಕ್ಷಣೆಯ ಪ್ರಯತ್ನದಲ್ಲಿ ತೊಡಗಿದ್ದಾರೆ. 650ಕ್ಕೂ ಹೆಚ್ಚು ಭತ್ತದ ತಳಿಗಳ ಸಂರಕ್ಷಣೆಗೆ ಶ್ರಮಿಸಿದವರೂ ಇದ್ದಾರೆ. ಮಾದಕ ವ್ಯಸನ, ಮದ್ಯ ಸೇವನೆಯ ತಡೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿರುವವರೂ ಇದ್ದಾರೆ. ಅನೇಕ ಜನರು ಸ್ವಸಹಾಯ ಗುಂಪುಗಳೊಂದಿಗೆ, ವಿಶೇಷವಾಗಿ ನಾರಿ ಶಕ್ತಿ ಅಭಿಯಾನದೊಂದಿಗೆ ಜನರನ್ನು ಒಗ್ಗೂಡಿಸುವಲ್ಲಿ ತೊಡಗಿದ್ದಾರೆ. ಈ ಗೌರವಕ್ಕೆ ಪಾತ್ರರಾದವರಲ್ಲಿ 30 ಮಂದಿ ಮಹಿಳೆಯರೇ ಆಗಿರುವ ಬಗ್ಗೆ ದೇಶವಾಸಿಗಳೂ ಸಂತಸ ವ್ಯಕ್ತಪಡಿಸಿದ್ದಾರೆ. ಈ ಮಹಿಳೆಯರು ಮೂಲ ಹಂತದಿಂದ ತಮ್ಮ ಕೆಲಸ ಮಾಡುವ ಮೂಲಕ ಸಮಾಜ ಮತ್ತು ದೇಶವನ್ನು ಮುನ್ನಡೆಸುತ್ತಿದ್ದಾರೆ.

 

ಸ್ನೇಹಿತರೇ, ಪದ್ಮ ಪ್ರಶಸ್ತಿ ಪುರಸ್ಕೃತ ಪ್ರತಿಯೊಬ್ಬರ ಕೊಡುಗೆಯು ದೇಶವಾಸಿಗಳಿಗೆ ಸ್ಪೂರ್ತಿದಾಯಕವಾಗಿದೆ. ಶಾಸ್ತ್ರೀಯ ನೃತ್ಯ, ಶಾಸ್ತ್ರೀಯ ಸಂಗೀತ, ಜಾನಪದ ನೃತ್ಯ, ರಂಗಭೂಮಿ, ಭಜನೆ ಲೋಕದಲ್ಲಿ ದೇಶಕ್ಕೆ ಕೀರ್ತಿ ತರುತ್ತಿರುವವರು ಈ ಬಾರಿ ಸನ್ಮಾನ ಸ್ವೀಕರಿಸಿದವರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಪ್ರಾಕೃತ, ಮಾಳವಿ, ಲಂಬಾಡಿ ಭಾಷೆಗಳಲ್ಲಿ ಅತ್ಯುತ್ತಮ ಕೆಲಸ ಮಾಡಿದವರಿಗೂ ಈ ಗೌರವ ನೀಡಲಾಗಿದೆ. ಅನೇಕ ವಿದೇಶೀಯರೂ ಪದ್ಮ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರ ಕಾರ್ಯಗಳಿಂದ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹೊಸ ಉತ್ತುಂಗಕ್ಕೇರಿದೆ. ಇವರಲ್ಲಿ ಫ್ರಾನ್ಸ್, ತೈವಾನ್, ಮೆಕ್ಸಿಕೋ ಮತ್ತು ಬಾಂಗ್ಲಾದೇಶದ ನಾಗರಿಕರೂ ಸೇರಿದ್ದಾರೆ.

ಸ್ನೇಹಿತರೇ, ಕಳೆದ ದಶಕದಲ್ಲಿ ಪದ್ಮ ಪ್ರಶಸ್ತಿಗಳ ವ್ಯವಸ್ಥೆ ಸಂಪೂರ್ಣವಾಗಿ ಬದಲಾಗಿರುವುದು ನನಗೆ ತುಂಬಾ ಸಂತಸ ತಂದಿದೆ. ಈಗ ಇದು ಪೀಪಲ್ಸ್ ಪದ್ಮವಾಗಿ ಮಾರ್ಪಡಾಗಿದೆ.ಪದ್ಮ ಪ್ರಶಸ್ತಿ ನೀಡುವ ವ್ಯವಸ್ಥೆಯಲ್ಲಿಯೂ ಹಲವಾರು ಬದಲಾವಣೆಗಳಾಗಿವೆ. ಈಗ ಜನರು ಸ್ವತಃ ನಾಮನಿರ್ದೇಶನ ಮಾಡಿಕೊಳ್ಳಲು ಅವಕಾಶವಿದೆ. ಹೀಗಾಗಿ 2014ಕ್ಕೆ ಹೋಲಿಸಿದಲ್ಲಿ ಈ ಬಾರಿ 28 ಪಟ್ಟು ಹೆಚ್ಚು ನಾಮಪತ್ರಗಳು ಸಲ್ಲಿಕೆಯಾಗಿವೆ. ಪದ್ಮ ಪ್ರಶಸ್ತಿಯ ಘನತೆ, ಅದರ ವಿಶ್ವಾಸಾರ್ಹತೆ ಮತ್ತು ಗೌರವವು ಪ್ರತಿ ವರ್ಷವೂ ಹೆಚ್ಚುತ್ತಿದೆ ಎಂಬುದನ್ನು ಇದರಿಂದ ತಿಳಿಯುತ್ತದೆ. ಪದ್ಮ ಪ್ರಶಸ್ತಿ ಪಡೆದ ಎಲ್ಲರಿಗೂ ಮತ್ತೊಮ್ಮೆ ನನ್ನ ಶುಭಾಶಯ ಕೋರುತ್ತೇನೆ.

ನನ್ನ ಪ್ರಿಯ ದೇಶವಾಸಿಗಳೇ, ಪ್ರತಿ ಜೀವನಕ್ಕೂ ಒಂದು ಗುರಿ ಇರುತ್ತದೆ, ಪ್ರತಿಯೊಬ್ಬರೂ ಗುರಿಯನ್ನು ಪೂರೈಸಲು ಹುಟ್ಟಿದ್ದಾರೆ ಎಂದು ಹೇಳಲಾಗುತ್ತದೆ. ಹಾಗಾಗಿ ಜನರು ಸಂಪೂರ್ಣ ನಿಷ್ಠೆಯಿಂದ ತಮ್ಮ ಕರ್ತವ್ಯಗಳನ್ನು ನಿರ್ವಹಿಸುತ್ತಾರೆ. ಕೆಲವರು ಸಮಾಜ ಸೇವೆಯ ಮೂಲಕ, ಕೆಲವರು ಸೈನ್ಯಕ್ಕೆ ಸೇರುವ ಮೂಲಕ, ಕೆಲವರು ಮುಂದಿನ ಪೀಳಿಗೆಗೆ ವಿದ್ಯಾದಾನ ಮಾಡುವ ಮೂಲಕ ತಮ್ಮ ಕರ್ತವ್ಯಗಳನ್ನು ನಿರ್ವಹಿಸುವುದನ್ನು ನಾವು ಕಂಡಿದ್ದೇವೆ. ಆದರೆ ಸ್ನೇಹಿತರೇ, ಕೆಲವು ಜನರು ಜೀವನದ ಅಂತ್ಯದ ನಂತರವೂ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುವವರು ನಮ್ಮ ಮಧ್ಯೆ ಇದ್ದಾರೆ. ಅಂಗಾಂಗ ದಾನದ ಮೂಲಕ ಅವರು ಈ ಕೆಲಸ ಮಾಡುತ್ತಾರೆ. ಇತ್ತೀಚಿನ ವರ್ಷಗಳಲ್ಲಿ, ದೇಶದಲ್ಲಿ ಸಾವಿರಕ್ಕೂ ಹೆಚ್ಚು ಜನರು ತಮ್ಮ ಸಾವಿನ ನಂತರ ತಮ್ಮ ಅಂಗಗಳನ್ನು ದಾನ ಮಾಡಿದರಿದ್ದಾರೆ. ಈ ನಿರ್ಧಾರವು ಸುಲಭವಲ್ಲ, ಆದರೆ ಈ ನಿರ್ಧಾರವು ಅನೇಕ ಜೀವಗಳನ್ನು ಉಳಿಸಲಿದೆ. ತಮ್ಮ ಪ್ರೀತಿಪಾತ್ರರ ಕೊನೆಯ ಆಸೆಗಳನ್ನು ಗೌರವಿಸಿದ ಕುಟುಂಬಗಳನ್ನು ಕೂಡ ನಾನು ಪ್ರಶಂಸಿಸುತ್ತೇನೆ. ಇಂದು, ದೇಶದ ಅನೇಕ ಸಂಸ್ಥೆಗಳು ಸಹ ಈ ದಿಸೆಯಲ್ಲಿ ಬಹಳ ಸ್ಪೂರ್ತಿದಾಯಕ ಪ್ರಯತ್ನಗಳನ್ನು ಮಾಡುತ್ತಿವೆ. ಕೆಲವು ಸಂಸ್ಥೆಗಳು ಅಂಗಾಂಗ ದಾನದ ಬಗ್ಗೆ ಜನರಿಗೆ ಅರಿವು ಮೂಡಿಸುತ್ತಿವೆ, ಕೆಲವು ಸಂಸ್ಥೆಗಳು ಅಂಗಾಂಗ ದಾನ ಮಾಡಲು ಇಚ್ಛಿಸುವವರು ನೋಂದಾಯಿಸಿಕೊಳ್ಳಲು ಸಹಾಯ ಮಾಡುತ್ತಿವೆ. ಇಂತಹ ಪ್ರಯತ್ನಗಳಿಂದಾಗಿ ದೇಶದಲ್ಲಿ ಅಂಗಾಂಗ ದಾನದತ್ತ ಸಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತಿದ್ದು, ಜನರ ಪ್ರಾಣರಕ್ಷಣೆಯೂ ಆಗುತ್ತಿದೆ.

ನನ್ನ ಪ್ರೀತಿಯ ದೇಶವಾಸಿಗಳೇ, ರೋಗಿಗಳ ಜೀವನವನ್ನು ಸುಲಭವಾಗಿಸುವ, ಅವರ ತೊಂದರೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುವಂತಹ ಭಾರತದ ಸಾಧನೆಯೊಂದನ್ನು ಈಗ ನಾನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಚಿಕಿತ್ಸೆಗಾಗಿ ಆಯುರ್ವೇದ, ಸಿದ್ಧ, ಅಥವಾ ಯುನಾನಿ ವೈದ್ಯಪದ್ಧತಿಯಿಂದ ಸಹಾಯ ದೊರೆಯುತ್ತಿರುವ ಹಲವರು ನಮ್ಮ ನಡುವೆ ಇರಬಹುದು. ಆದರೆ, ಇಂತಹ ರೋಗಿಗಳು ಇದೇ ಪದ್ಧತಿಯ ಬೇರೊಂದು ವೈದ್ಯರ ಬಳಿಗೆ ಹೋದಾಗ ಅವರಿಗೆ ಸಮಸ್ಯೆ ಎದುರಾಗುತ್ತದೆ. ಈ ಚಿಕಿತ್ಸಾ ಪದ್ಧತಿಗಳಲ್ಲಿ ರೋಗದ ಹೆಸರು, ಚಿಕಿತ್ಸೆ ಮತ್ತು ಔಷಧಗಳಿಗಾಗಿ ಒಂದೇ ರೀತಿಯ ಭಾಷೆಯ ಉಪಯೋಗ ಇರುವುದಿಲ್ಲ. ಪ್ರತಿ ಚಿಕಿತ್ಸಕರು ತಮ್ಮದೇ ರೀತಿಯಲ್ಲಿ ರೋಗದ ಹೆಸರು ಮತ್ತು ಚಿಕಿತ್ಸೆಯ ವಿಧಿ-ವಿಧಾನಗಳನ್ನು ಬರೆಯುತ್ತಾರೆ. ಇದರಿಂದಾಗಿ ಬೇರೊಬ್ಬ ಚಿಕಿತ್ಸಕರಿಗೆ ಅರ್ಥ ಮಾಡಿಕೊಳ್ಳಲು ಕೆಲವೊಮ್ಮೆ ಕಷ್ಟವಾಗುತ್ತದೆ. ದಶಕಗಳಿಂದ ನಡೆಯುತ್ತಲೇ ಬಂದಿರುವ ಈ ಸಮಸ್ಯೆಗೆ ಕೂಡಾ ಈಗ ಪರಿಹಾರ ಅನ್ವೇಷಿಸಲಾಗಿದೆ. ಆಯುಷ್ ಸಚಿವಾಲಯವು ಆಯುರ್ವೇದ, ಸಿದ್ಧ ಮತ್ತು ಯುನಾನಿ ಚಿಕಿತ್ಸೆಗೆ ಸಂಬಂಧಿಸಿದ ದತ್ತಾಂಶ ಮತ್ತು ಪರಿಭಾಷೆಯನ್ನು ವರ್ಗೀಕರಿಸಿದ್ದು, ಇದರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಸಹಾಯ ಮಾಡಿದೆ ಎಂದು ಹೇಳಲು ನನಗೆ ಸಂತೋಷವಾಗುತ್ತದೆ. ಇವರಿಬ್ಬರ ಪ್ರಯತ್ನದಿಂದಾಗಿ, ಆಯುರ್ವೇದ, ಯುನಾನಿ ಮತ್ತು ಸಿದ್ಧ್ ಚಿಕಿತ್ಸೆಗಳಲ್ಲಿ ರೋಗ ಮತ್ತು ಚಿಕಿತ್ಸೆಗೆ ಸಂಬಂಧಿಸಿದ ಪರಿಭಾಷೆಯನ್ನು ಕೋಡಿಂಗ್ ಮಾಡಲಾಗಿದೆ. ಈ ಕೋಡಿಂಗ್ ನೆರವಿನಿಂದ ಈಗ ಎಲ್ಲಾ ವೈದ್ಯರು ಪ್ರಿಸ್ಕ್ರಿಪ್ಷನ್ ಅಥವಾ ತಮ್ಮ ಸೂಚನಾ ಚೀಟಿಯಲ್ಲಿ ಒಂದೇ ರೀತಿಯ ಭಾಷೆ ಬರೆಯುತ್ತಾರೆ. ಇದರಿಂದ ಒಂದು ಪ್ರಯೋಜನವೆಂದರೆ, ನೀವು ಆ ಚೀಟಿಯನ್ನು ತೆಗೆದುಕೊಂಡು ಬೇರೊಬ್ಬ ವೈದ್ಯರ ಬಳಿಗೆ ಹೋದಲ್ಲಿ, ವೈದ್ಯರಿಗೆ ಇದರ ಸಂಪೂರ್ಣ ಮಾಹಿತಿ ಆ ಚೀಟಿಯಲ್ಲಿಯೇ ದೊರೆಯುತ್ತದೆ. ನಿಮ್ಮ ಕಾಯಿಲೆ, ಚಿಕಿತ್ಸೆ, ಯಾವ ಯಾವ ಔಷಧವನ್ನು ನಿಮಗೆ ನೀಡಲಾಗುತ್ತಿದೆ, ಎಂದಿನಿಂದ ನಿಮಗೆ ಚಿಕಿತ್ಸೆ ನೀಡಲಾಗುತ್ತಿದೆ, ನಿಮಗೆ ಯಾವ ಪದಾರ್ಥಗಳಿಂದ ಅಲರ್ಜಿಯಾಗುತ್ತದೆ, ಇತ್ಯಾದಿಗಳನ್ನೆಲ್ಲಾ ತಿಳಿದುಕೊಳ್ಳಲು ಆ ಚೀಟಿಯಿಂದ ಸಹಾಯ ದೊರೆಯುತ್ತದೆ. ಇದರ ಮತ್ತೊಂದು ಪ್ರಯೋಜನವು ಸಂಶೋಧನೆಯ ಕಾರ್ಯದಲ್ಲಿ ತೊಡಗಿಕೊಂಡಿರುವ ವ್ಯಕ್ತಿಗಳಿಗೆ ದೊರೆಯುತ್ತದೆ. ಇತರ ದೇಶಗಳ ವಿಜ್ಞಾನಿಗಳಿಗೆ ಕೂಡಾ ರೋಗ, ಔಷಧ ಮತ್ತು ಅದರ ಪ್ರಭಾವದ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಸಂಶೋಧನೆ ಹೆಚ್ಚಾದಂತೆಲ್ಲಾ ಮತ್ತು ಹಲವು ವಿಜ್ಞಾನಿಗಳೊಂದಿಗೆ ಕೈಜೋಡಿಸುವುದರಿಂದ ಈ ಚಿಕಿತ್ಸಾ ಪದ್ಧತಿ ಮತ್ತಷ್ಟು ಉತ್ತಮ ಫಲಿತಾಂಶ ನೀಡುತ್ತದೆ ಮತ್ತು ಜನರಿಗೆ ಇವುಗಳ ಬಗ್ಗೆ ಒಲವು ಹೆಚ್ಚಾಗುತ್ತದೆ. ಈ ಆಯುಷ್ ಪದ್ಧತಿಗಳಲ್ಲಿ ತೊಡಗಿಕೊಂಡಿರುವ ನಮ್ಮ ಚಿಕಿತ್ಸಕರು, ಈ ಕೋಡಿಂಗ್ ಅನ್ನು ಶೀಘ್ರದಲ್ಲೇ ಅಳವಡಿಸಿಕೊಳ್ಳುತ್ತಾರೆಂಬ ನಂಬಿಕೆ ನನಗಿದೆ.

 

ನನ್ನ ಸ್ನೇಹಿತರೇ, ನಾನು ಆಯುಷ್ ಚಿಕಿತ್ಸಾ ಪದ್ಧತಿಯ ಬಗ್ಗೆ ಮಾತನಾಡುತ್ತಿರುವಾಗ, ಯಾನುಂಗ್ ಜಾಮೋಹ್ ಲೈಂಗೋ ಅವರ ಚಿತ್ರ ನನ್ನ ಕಣ್ಣಮುಂದೆ ಬರುತ್ತಿದೆ. ಶ್ರೀಮತಿ ಯಾನುಂಗ್ ಅವರು ಅರುಣಾಚಲ ಪ್ರದೇಶದ ನಿವಾಸಿಯಾಗಿದ್ದಾರೆ ಮತ್ತು ಗಿಡಮೂಲಿಕೆಗಳ ಔಷಧೀಯ ತಜ್ಞೆಯಾಗಿದ್ದಾರೆ. ಇವರು ಆದಿವಾಸಿ ಬುಡಕಟ್ಟಿನ ಪಾರಂಪರಿಕ ವೈದ್ಯಕೀಯ ಪದ್ಧತಿಯನ್ನು ಪುನರುಜ್ಜೀವನಗೊಳಿಸಲು ಸಾಕಷ್ಟು ಕೆಲಸ ಮಾಡಿದ್ದಾರೆ. ಈ ಕೊಡುಗೆಗಾಗಿ ಅವರಿಗೆ ಈ ಬಾರಿ ಪದ್ಮ ಪ್ರಶಸ್ತಿಯನ್ನು ಕೂಡಾ ಪ್ರದಾನ ಮಾಡಲಾಗಿದೆ. ಅದೇ ರೀತಿ ಈ ಬಾರಿ ಚತ್ತೀಸ್ ಗಢದ ಹೇಮಚಂದ್ ಮಾಂಜೀ ಅವರಿಗೆ ಕೂಡಾ ಪದ್ಮ ಪ್ರಶಸ್ತಿ ಪ್ರದಾನ ಮಾಡಲಾಗಿದೆ. ವೈದ್ಯರಾಜ್ ಹೇಮಚಂದ್ ಮಾಂಜೀ ಅವರೂ ಕೂಡಾ ಆಯುಶ್ ಚಿಕಿತ್ಸಾ ಪದ್ಧತಿಯ ಸಹಾಯದಿಂದ ಜನರಿಗೆ ಚಿಕಿತ್ಸೆ ನೀಡುತ್ತಾರೆ. ಛತ್ತೀಸ್ ಗಢ್ ನ ನಾರಾಯಣಪುರದಲ್ಲಿ ಬಡ ರೋಗಿಗಳಿಗೆ ಅವರು ಸುಮಾರು ಐದು ದಶಕಗಳಿಗಿಂತ ಹೆಚ್ಚು ಕಾಲದಿಂದ ಚಿಕಿತ್ಸೆ ಸೇವೆ ಒದಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ಆಯುರ್ವೇದ ಮತ್ತು ಗಿಡಮೂಲಿಕೆಗಳ ಔಷಧಗಳ ಖಜಾನೆಯೇ ಅಡಗಿದೆ, ಅವುಗಳ ಸಂರಕ್ಷಣೆಯಲ್ಲಿ ಶ್ರೀಮತಿ ಯಾನುಂಗ್ ಮತ್ತು ಹೇಮಚಂದ್ ಅವರುಗಳಂತಹ ಜನರ ಬಹು ದೊಡ್ಡ ಪಾತ್ರವಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ‘ಮನದ ಮಾತಿನ’ ಮೂಲಕ ನಮ್ಮ ನಿಮ್ಮ ನಡುವೆ ಏರ್ಪಟ್ಟಿರುವ ಈ ಬಾಂಧವ್ಯ ಒಂದು ದಶಕದಷ್ಟು ಹಳೆಯದಾಗಿದೆ. ಸೋಷಿಯಲ್ ಮೀಡಿಯಾ ಮತ್ತು ಅಂತರ್ಜಾಲದ ಈ ಯುಗದಲ್ಲಿ ಕೂಡಾ ಇಡೀ ದೇಶವನ್ನು ಸಂಪರ್ಕಿಸುವ ಒಂದು ಪ್ರಬಲ ಮಾಧ್ಯಮ ರೇಡಿಯೋ ಆಗಿದೆ. ರೇಡಿಯೋದ ಈ ಶಕ್ತಿ ಎಷ್ಟು ಬದಲಾವಣೆ ತರಲು ಸಾಧ್ಯ ಎನ್ನುವುದಕ್ಕೆ ಒಂದು ವಿಶಿಷ್ಠ ಉದಾಹರಣೆ ಛತ್ತೀಸ್ ಗಢ್ ನಲ್ಲಿ ಕಾಣಸಿಗುತ್ತಿದೆ. ಕಳೆದ ಸುಮಾರು 7 ವರ್ಷಗಳಿಂದ ಇಲ್ಲಿನ ರೇಡಿಯೋದಲ್ಲಿ ಒಂದು ಜನಪ್ರಿಯ ಕಾರ್ಯಕ್ರಮ ಪ್ರಸಾರವಾಗುತ್ತಿದ್ದು, ಇದರ ಹೆಸರು ‘ಹಮರ್ ಹಾಥೀ – ಹಮರ್ ಗೋಠ್’ ಎಂಬುದಾಗಿದೆ. ಹೆಸರು ಕೇಳುತ್ತಿದ್ದಂತೆಯೇ ರೇಡಿಯೋ ಮತ್ತು ಆನೆಯ ನಡುವೆ ಇದೆಂತಹ ಕನೆಕ್ಷನ್ ಎಂದು ನಿಮಗೆ ಅನಿಸಬಹುದು. ಆದರೆ ರೇಡಿಯೋದ ವಿಶೇಷತೆ. ಛತ್ತೀಸ್ ಗಡ್ ನಲ್ಲಿ ಆಕಾಶವಾಣಿಯ ಅಂಬಿಕಾಪುರ, ರಾಯ್ ಪುರ, ಬಿಲಾಸ್ ಪುರ, ಮತ್ತು ರಾಯಗಢ್ ಈ ನಾಲ್ಕು ಕೇಂದ್ರಗಳಿಂದ ಪ್ರತಿದಿನ ಸಂಜೆ ಈ ಕಾರ್ಯಕ್ರಮ ಪ್ರಸಾರವಾಗುತ್ತದೆ ಮತ್ತು ಛತ್ತೀಸ್ ಗಢ್ ನ ಅರಣ್ಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಸವಿರುವ ಜನರು ಬಹಳ ಗಮನವಿಟ್ಟು ಈ ಕಾರ್ಯಕ್ರಮ ಆಲಿಸುತ್ತಾರೆಂದು ತಿಳಿದರೆ ನಿಮಗೆ ಆಶ್ಚರ್ಯವೆನಿಸಬಹುದು. ಆನೆಗಳ ಹಿಂಡು ಅರಣ್ಯದ ಯಾವ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬ ಮಾಹಿತಿಯನ್ನು ‘ಹಮರ್ ಹಾಥೀ – ಹಮರ್ ಗೋಠ್’ ಕಾರ್ಯಕ್ರಮದಲ್ಲಿ ಹೇಳಲಾಗುತ್ತದೆ. ಈ ಮಾಹಿತಿಯಿಂದ ಇಲ್ಲಿನ ಜನರಿಗೆ ಬಹಳ ಉಪಯೋಗವಾಗುತ್ತದೆ. ರೇಡಿಯೋದಿಂದ ಆನೆಗಳ ಹಿಂಡು ಬರುತ್ತಿರುವ ಮಾಹಿತಿ ದೊರೆಯುತ್ತಿದ್ದಂತೆಯೇ ಅವರು ಜಾಗರೂಕರಾಗುತ್ತಾರೆ. ಯಾವ ಮಾರ್ಗದಲ್ಲಿ ಆನೆಗಳು ಸಂಚರಿಸುತ್ತವೆಯೋ, ಆ ಮಾರ್ಗದಲ್ಲಿ ಹೋಗುವ ಅಪಾಯ ತಪ್ಪುತ್ತದೆ. ಒಂದೆಡೆ ಇದು ಆನೆಗಳ ಹಿಂಡಿನಿಂದ ಸಂಭವಿಸಬಹುದಾದ ನಷ್ಟದ ಸಾಧ್ಯತೆಯನ್ನು ಕಡಿಮೆ ಮಾಡಿದರೆ ಮತ್ತೊಂದೆಡೆ ಆನೆಗಳ ಕುರಿತ ದತ್ತಾಂಶ ಸಂಗ್ರಹಣೆಗೆ ಸಹಾಯ ದೊರೆಯುತ್ತದೆ. ಈ ದತ್ತಾಂಶದ ಉಪಯೋಗದಿಂದ ಭವಿಷ್ಯದಲ್ಲಿ ಆನೆಗಳ ಸಂರಕ್ಷಣೆಯಲ್ಲಿ ಕೂಡಾ ನೆರವು ದೊರೆಯುತ್ತದೆ. ಇಲ್ಲಿ ಆನೆಗಳ ಹಿಂಡಿನ ಕುರಿತ ಮಾಹಿತಿಯು ಸೋಷಿಯಲ್ ಮೀಡಿಯಾದ ಮೂಲಕ ಕೂಡಾ ಜನರಿಗೆ ತಲುಪಿಸಲಾಗುತ್ತಿದೆ. ಇದರಿಂದಾಗಿ ಅರಣ್ಯದ ಸುತ್ತಮುತ್ತ ವಾಸಿಸುವ ಜನರಿಗೆ ಆನೆಗಳೊಂದಿಗೆ ಸಾಮರಸ್ಯದಿಂದ ಇರುವುದು ಕೂಡಾ ಸುಲಭವಾಗಿದೆ. ಛತ್ತೀಸ್ ಗಢದ ಈ ವಿಶಿಷ್ಠ ಉಪಕ್ರಮ ಮತ್ತು ಇದರ ಅನುಭವಗಳ ಪ್ರಯೋಜನವು ದೇಶದ ಇತರ ಅರಣ್ಯ ಪ್ರದೇಶಗಳಲ್ಲಿ ವಾಸಿಸುವ ಜನರು ಕೂಡಾ ಪಡೆದುಕೊಳ್ಳಬಹುದಾಗಿದೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಇದೇ ಜನವರಿ 25 ರಂದು ನಾವೆಲ್ಲರೂ ರಾಷ್ಟ್ರೀಯ ಮತದಾನ ದಿನವನ್ನು ಆಚರಿಸಿದ್ದೇವೆ. ಇದು ನಮ್ಮ ಶ್ರೇಷ್ಠ ಪ್ರಜಾಪ್ರಭುತ್ವ ಸಂಪ್ರದಾಯಗಳಿಗೆ ಒಂದು ಮಹತ್ವದ ದಿನವಾಗಿದೆ. ಇಂದು ದೇಶದಲ್ಲಿ ಸುಮಾರು 96 ಕೋಟಿ ಮತದಾರರಿದ್ದಾರೆ. ಈ ಅಂಕಿಅಂಶ ಎಷ್ಟು ದೊಡ್ಡದೆಂದು ನಿಮಗೆ ತಿಳಿದಿದೆಯೇ? ಇದು ಅಮೆರಿಕಾ ದೇಶದ ಒಟ್ಟು ಜನಸಂಖ್ಯೆಗಿಂತಲೂ ಸುಮಾರು ಮೂರು ಪಟ್ಟು ಹೆಚ್ಚು. ಇದು ಇಡೀ ಯೂರೋಪ್ ನ ಒಟ್ಟು ಜನಸಂಖ್ಯೆಗಿಂತಲೂ ಸುಮಾರು ಒಂದೂವರೆ ಪಟ್ಟು ಹೆಚ್ಚು. ಮತದಾನ ಕೇಂದ್ರಗಳ ಬಗ್ಗೆ ಹೇಳುವುದಾದರೆ, ದೇಶದಲ್ಲಿ ಇಂದು ಇವುಗಳ ಸಂಖ್ಯೆ ಸುಮಾರು ಹತ್ತೂವರೆ ಲಕ್ಷ. ಭಾರತದ ಪ್ರತಿಯೊಬ್ಬ ನಾಗರಿಕನೂ ಪ್ರಜಾಪ್ರಭುತ್ವದ ತಮ್ಮ ಹಕ್ಕಿನ ಪ್ರಯೋಜನ ಪಡೆಯುವಂತಾಗಬೇಕು, ಇದಕ್ಕಾಗಿ ನಮ್ಮ ಚುನಾವಣಾ ಆಯೋಗವು ಕೇವಲ ಓರ್ವ ಮತದಾನ ಇರುವಂತಹ ಸ್ಥಳಗಳಲ್ಲಿ ಕೂಡಾ ಮತಕೇಂದ್ರಗಳನ್ನು ಸ್ಥಾಪಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಲಗೊಳಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿರುವ ಚುನಾವಣಾ ಆಯೋಗವನ್ನು ನಾನು ಪ್ರಶಂಸಿಸುತ್ತೇನೆ.

 

ಸ್ನೇಹಿತರೇ, ಇಂದು ಜಗತ್ತಿನ ಹಲವು ದೇಶಗಳಲ್ಲಿ ಮತದಾನದ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತಿದ್ದರೆ, ಭಾರತದಲ್ಲಿ ಮತದಾನದ ಶೇಕಡಾವಾರು ಹೆಚ್ಚಾಗುತ್ತಿರುವುದು ದೇಶಕ್ಕೆ ಸಂತಸದ ಸಂಗತಿಯೂ ಹೌದು. 1951-52 ರಲ್ಲಿ ದೇಶದಲ್ಲಿ ಪ್ರಥಮ ಬಾರಿಗೆ ಚುನಾವಣೆ ನಡೆದಾಗ, ಸುಮಾರು ಶೇಕಡಾ 45 ರಷ್ಟು ಮತದಾರರು ಮಾತ್ರಾ ಮತ ಚಲಾಯಿಸಿದ್ದರು. ಈಗ ಈ ಅಂಕಿ ಅಂಶ ಸಾಕಷ್ಟು ಹೆಚ್ಚಳವಾಗಿದೆ. ದೇಶದಲ್ಲಿ ಕೇವಲ ಮತದಾರರ ಸಂಖ್ಯೆಯಲ್ಲಿ ಮಾತ್ರವೇ ಹೆಚ್ಚಳವಾಗಿಲ್ಲ, ಮತ ಚಲಾಯಿಸುವವರ ಸಂಖ್ಯೆಯಲ್ಲಿ ಕೂಡಾ ಹೆಚ್ಚಳವಾಗಿದೆ. ನಮ್ಮ ಯುವ ಮತದಾರರಿಗೆ ನೋಂದಾಯಿಸಿಕೊಳ್ಳಲು ಹೆಚ್ಚಿನ ಅವಕಾಶ ದೊರೆಯಬೇಕೆಂದು ಸರ್ಕಾರವು ಕಾನೂನಿನಲ್ಲಿ ಕೂಡಾ ಬದಲಾವಣೆ ತಂದಿದೆ. ಮತದಾರರಲ್ಲಿ ಜಾಗೃತಿ ಹೆಚ್ಚಿಸುವುದಕ್ಕಾಗಿ ಸಮುದಾಯ ಹಂತದಲ್ಲಿ ಕೂಡಾ ಪ್ರಯತ್ನಗಳು ನಡೆಯುತ್ತಿರುವುದನ್ನು ನೋಡಿ ಹರ್ಷವೆನಿಸುತ್ತದೆ. ಅನೇಕರು ಮನೆ ಮನೆಗಳಿಗೆ ತೆರಳಿ ಮತದಾರರಿಗೆ ಮತದಾನ ಕುರಿತು ಹೇಳುತ್ತಿದ್ದಾರೆ, ಕೆಲವು ಕಡೆ ಪೈಂಟಿಂಗ್ ಗಳನ್ನು ಸಿದ್ಧಪಡಿಸಿ, ಕೆಲವು ಬೀದಿ ನಾಟಕಗಳ ಮೂಲಕ ಯುವಜನತೆಯನ್ನು ಆಕರ್ಷಿಸುತ್ತಿದ್ದಾರೆ. ಇಂತಹ ಪ್ರತಿ ಪ್ರಯತ್ನ, ನಮ್ಮ ಪ್ರಜಾಪ್ರಭುತ್ವದ ಹಬ್ಬದಲ್ಲಿ, ಹಲವು ಬಣ್ಣಗಳನ್ನು ತುಂಬುತ್ತಿದೆ. ಮತದಾರ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ಖಂಡಿತವಾಗಿಯೂ ಸೇರಿಸಿ ಎಂದು ನಾನು ‘ಮನದ ಮಾತಿನ’ ಮೂಲಕ, ನಮ್ಮ ಫಸ್ಟ್ ಟೈಮ್ ವೋಟರ್ಸ್ ಗೆ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂದು ಹೇಳಲು ಬಯಸುತ್ತೇನೆ. ರಾಷ್ಟ್ರೀಯ ಮತದಾರ ಸೇವಾ ಪೋರ್ಟಲ್ (National voter service portal) ಮತ್ತು voter Helpline app ಮೂಲಕ ಇದನ್ನು ಸುಲಭವಾಗಿ ಆನ್ಲೈನ್ ನಲ್ಲಿ ಪೂರ್ಣಗೊಳಿಸಬಹುದು. ನಿಮ್ಮ ಒಂದು ಮತ, ದೇಶದ ಭಾಗ್ಯವನ್ನೇ ಬದಲಾಯಿಸಬಹುದು, ದೇಶದ ಭಾಗ್ಯವಾಗಬಹುದು ಎಂಬುದನ್ನು ನೀವು ಸದಾ ನೆನಪಿನಲ್ಲಿಟ್ಟುಕೊಳ್ಳಿ.

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಜನವರಿ 28 ರಂದು, ವಿವಿಧ ಕಾಲಘಟ್ಟಗಳಲ್ಲಿ ದೇಶಪ್ರೇಮಕ್ಕೆ ಉದಾಹರಣೆಯಾಗಿ ನಿಂತಿರುವ ಭಾರತದ ಇಬ್ಬರು ಮಹಾನ್ ವ್ಯಕ್ತಿಗಳ ಜನ್ಮಜಯಂತಿಯನ್ನು ಕೂಡಾ ಆಚರಿಸಲಾಗುತ್ತಿದೆ. ಇಂದು ದೇಶ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರಿಗೆ ಗೌರವ ನಮನ ಸಲ್ಲಿಸುತ್ತಿದೆ. ಲಾಲಾ ಜಿ ಅವರು ಸ್ವಾತಂತ್ರ್ಯ ಹೋರಾಟದ ಹೋರಾಟಗಾರರಾಗಿದ್ದರು, ಅವರು ಪರಕೀಯರ ಆಳ್ವಿಕೆಯಿಂದ ನಮ್ಮನ್ನು ಮುಕ್ತಗೊಳಿಸಲು ತಮ್ಮ ಜೀವನವನ್ನು ತ್ಯಾಗ ಮಾಡಿದರು. ಲಾಲಾ ಜಿ ಅವರ ವ್ಯಕ್ತಿತ್ವವನ್ನು ಕೇವಲ ಸ್ವಾತಂತ್ರ್ಯ ಹೋರಾಟಕ್ಕೆ ಮಾತ್ರಾ ಸೀಮಿತವಾಗಿಸಲು ಸಾಧ್ಯವಿಲ್ಲ. ಅವರು ಬಹಳ ದೂರದೃಷ್ಟಿಯುಳ್ಳವರಾಗಿದ್ದರು. ಅವರು ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಹಲವು ಸಂಸ್ಥೆಗಳ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿದೇಶಿಯರನ್ನು ದೇಶದಿಂದ ಹೊರಹಾಕುವುದು ಮಾತ್ರಾ ಅವರ ಉದ್ದೇಶವಾಗಿರಲಿಲ್ಲ, ದೇಶಕ್ಕೆ ಆರ್ಥಿಕ ಬಲವನ್ನು ನೀಡುವ ಉದ್ದೇಶ ಅವರ ಚಿಂತನೆಯ ಪ್ರಮುಖ ಭಾಗವಾಗಿತ್ತು. ಅವರ ಚಿಂತನೆಗಳು ಮತ್ತು ತ್ಯಾಗವು ಭಗತ್ ಸಿಂಗ್ ಅವರ ಮೇಲೆ ಬಹಳ ಪ್ರಭಾವ ಬೀರಿತು. ಇಂದು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರಿಗೆ ಗೌರವಪೂರ್ವಕವಾಗಿ ನಮಸ್ಕಾರಗಳನ್ನು ಸಲ್ಲಿಸುವ ದಿನವೂ ಹೌದು. ಇತಿಹಾಸದ ಮಹತ್ವದ ಕಾಲದಲ್ಲಿ ನಮ್ಮ ಸೈನ್ಯವನ್ನು ಮುನ್ನಡೆಸುವ ಮೂಲಕ ಅವರು ಧೈರ್ಯ ಮತ್ತು ಶೌರ್ಯಕ್ಕೆ ಉದಾಹರಣೆಯಾಗಿದ್ದಾರೆ. ನಮ್ಮ ಸೇನೆಯನ್ನು ಬಲಿಷ್ಠಗೊಳಿಸುವಲ್ಲಿ ಅವರು ಮಹತ್ವದ ಕೊಡುಗೆ ನೀಡಿದ್ದಾರೆ.

 

ನನ್ನ ಪ್ರೀತಿಯ ದೇಶವಾಸಿಗಳೇ, ಇಂದು ಕ್ರೀಡಾ ಜಗತ್ತಿನಲ್ಲಿಯೂ ಭಾರತ ಹೊಸ ಎತ್ತರವನ್ನು ಮುಟ್ಟುತ್ತಿದೆ. ಕ್ರೀಡಾ ಜಗತ್ತಿನಲ್ಲಿ ಪ್ರಗತಿ ಸಾಧಿಸಲು, ಆಟಗಾರರಿಗೆ ಹೆಚ್ಚು ಹೆಚ್ಚು ಕ್ರೀಡೆಗಳನ್ನಾಡಲು ಅವಕಾಶಗಳು ದೊರೆಯುವುದು ಮತ್ತು ದೇಶದಲ್ಲಿ ಉತ್ತಮ ಕ್ರೀಡಾ ಪಂದ್ಯಾವಳಿಗಳನ್ನು ಆಯೋಜಿಸುವುದು ಕೂಡಾ ಅಗತ್ಯವಾಗಿದೆ. ಇದೇ ಚಿಂತನೆಯೊಂದಿಗೆ ಇಂದು ಭಾರತದಲ್ಲಿ ಹೊಸ ಹೊಸ ಕ್ರೀಡಾ ಕೂಟಗಳನ್ನು ಆಯೋಜಿಸಲಾಗುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಚೆನ್ನೈನಲ್ಲಿ ಖೇಲೋ ಇಂಡಿಯಾ ಯುವ ಕ್ರೀಡಾಕೂಟ ಉದ್ಘಾಟಿಸಲಾಯಿತು. ಇದರಲ್ಲಿ ದೇಶದ 5 ಸಾವಿರಕ್ಕೂ ಅಧಿಕ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಇಂದು ಭಾರತದಲ್ಲಿ ಇಂತಹ ಹೊಸ ವೇದಿಕೆಗಳು ಸತತವಾಗಿ ಸೃಷ್ಟಿಯಾಗುತ್ತಿದ್ದು, ಇದರಲ್ಲಿ ಕ್ರೀಡಾಪಟುಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸುವ ಅವಕಾಶ ದೊರೆಯುತ್ತಿರುವುದು ನನಗೆ ಸಂತಸವೆನಿಸುತ್ತಿದೆ. ಇಂತಹ ಒಂದು ವೇದಿಕೆಯೇ –Beach Games. ಇದನ್ನು ದಿಯುವಿನಲ್ಲಿ ಆಯೋಜಿಸಲಾಗಿತ್ತು. ‘ದಿಯು‘ ಕೇಂದ್ರಾಡಳಿತ ಪ್ರದೇಶವೆಂದೂ, ಇದು ಸೋಮನಾಥ್ ಗೆ ಬಹಳ ಸಮೀಪವಿದೆಯೆಂದೂ ನಿಮಗೆ ತಿಳಿದೇ ಇದೆ. ಈ ವರ್ಷದ ಆರಂಭದಲ್ಲಿಯೇ ದಿಯುನಲ್ಲಿ ಈ Beach Games ಆಯೋಜಿಸಲಾಗಿತ್ತು. ಇದು ಭಾರತದ ಪ್ರಥಮ multi-sports beach games ಆಗಿತ್ತು. ಇದರಲ್ಲಿ Tug of war, Sea swimming, pencaksilat, ಮಲ್ಲಕಂಬ, Beach volleyball, Beach ಕಬಡ್ಡಿ, Beach soccer ಮತ್ತು Beach Boxing ಇತ್ಯಾದಿ ಸ್ಪರ್ಧೆಗಳು ನಡೆದವು. ಇದರಲ್ಲಿ ಪ್ರತಿಯೊಬ್ಬ ಸ್ಪರ್ಧಿಗೂ ತಮ್ಮ ಪ್ರತಿಭಾ ಪ್ರದರ್ಶನಕ್ಕೆ ಸಾಕಷ್ಟು ಅವಕಾಶ ದೊರೆಯಿತು ಮತ್ತು ಈ ಪಂದ್ಯಾವಳಿಯಲ್ಲಿ ಸಮುದ್ರದೊಂದಿಗೆ ಯಾವುದೇ ಸಂಬಂಧವಿಲ್ಲದ ದೂರ ದೂರದ ರಾಜ್ಯಗಳಿಂದ ಕೂಡಾ ಬಹಳಷ್ಟು ಕ್ರೀಡಾಪಟುಗಳು ಬಂದಿದ್ದರೆಂದು ತಿಳಿದು ನಿಮಗೆ ಆಶ್ಚರ್ಯವಾಗಬಹುದು. ಯಾವುದೇ ಸಮುದ್ರ ತೀರವಿಲ್ಲದ ಮಧ್ಯಪ್ರದೇಶ ಈ ಪಂದ್ಯಾವಳಿಯಲ್ಲಿ ಎಲ್ಲಕ್ಕಿಂತ ಹೆಚ್ಚು ಪದಕಗಳನ್ನು ಗೆದ್ದುಕೊಂಡಿತು. ಕ್ರೀಡೆಗಳಿಗಾಗಿನ ಈ ಒಲವು ಯಾವುದೇ ದೇಶವನ್ನು ಕ್ರೀಡಾ ಪ್ರಪಂಚದಲ್ಲಿ ಅಗ್ರಗಣ್ಯನನ್ನಾಗಿಸಬಹುದು.

 

ನನ್ನ ಪ್ರೀತಿಯ ದೇಶವಾಸಿಗಳೇ, ಈ ಬಾರಿಯ ‘ಮನದ ಮಾತು’ ಇಲ್ಲಿಗೆ ಮುಗಿಸುತ್ತಿದ್ದೇನೆ. ಫೆಬ್ರವರಿಯಲ್ಲಿ ನಿಮ್ಮೊಂದಿಗೆ ಮತ್ತೊಮ್ಮೆ ಮಾತನಾಡುತ್ತೇನೆ. ದೇಶದ ಜನರ ಸಾಮೂಹಿಕ ಪ್ರಯತ್ನಗಳಿಂದ, ವೈಯಕ್ತಿಕ ಪ್ರಯತ್ನಗಳಿಂದ, ದೇಶ ಯಾವರೀತಿ ಪ್ರಗತಿ ಸಾಗುತ್ತಿದೆ ಎಂಬ ಬಗ್ಗೆ ನಮ್ಮ ಗಮನ ಕೇಂದ್ರೀಕೃತವಾಗಿರುತ್ತದೆ. ಸ್ನೇಹಿತರೇ ನಾಳೆ 29 ರಂದು ಬೆಳಿಗ್ಗೆ 11 ಗಂಟೆಗೆ ನಾವು ‘ಪರೀಕ್ಷಾ ಪೆ ಚರ್ಚಾ‘ ಕೂಡ ಮಾಡುತ್ತೇವೆ. ಇದು ‘ಪರೀಕ್ಷಾ ಪೇ ಚರ್ಚಾ’ ದ 7 ನೇ ಆವೃತ್ತಿಯಾಗಿದೆ. ನಾನು ಯಾವಾಗಲೂ ನಿರೀಕ್ಷಿಸುತ್ತಿರುವ ಕಾರ್ಯಕ್ರಮ ಇದಾಗಿದೆ. ಇದರಿಂದ ನನಗೆ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸುವ ಅವಕಾಶ ದೊರೆಯುತ್ತದೆ ಮತ್ತು ಅವರುಗಳ ಪರೀಕ್ಷೆ ಸಂಬಂಧಿತ ಒತ್ತಡವನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಮಾಡುತ್ತೇನೆ. ಕಳೆದ 7 ವರ್ಷಗಳಲ್ಲಿ, ‘ಪರೀಕ್ಷಾ ಪೇ ಚರ್ಚಾ’ ಶಿಕ್ಷಣ ಮತ್ತು ಪರೀಕ್ಷೆ ಸಂಬಂಧಿತ ಹಲವು ವಿಷಯಗಳ ಬಗ್ಗೆ ಮಾತುಕತೆ ನಡೆಸುವ ಒಂದು ಬಹಳ ಉತ್ತಮ ಮಾಧ್ಯಮವಾಗಿ ಹೊರಹೊಮ್ಮಿದೆ. ಈ ಬಾರಿ ಎರಡು ಕೋಟಿ ಐವತ್ತು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳು ಇದಕ್ಕಾಗಿ ನೋಂದಾಯಿಸಿಕೊಂಡಿದ್ದಾರೆ ಮತ್ತು ತಮ್ಮ ಇನ್ಪುಟ್ ಕೂಡಾ ನೀಡಿದ್ದಾರೆಂದು ನನಗೆ ಹರ್ಷವೆನಿಸುತ್ತದೆ. ನಾವು 2018 ರಲ್ಲಿ ಮೊದಲ ಬಾರಿ ಈ ಕಾರ್ಯಕ್ರಮ ಆರಂಭಿಸಿದಾಗ, ಈ ಸಂಖ್ಯೆ ಕೇವಲ 22 ಸಾವಿರದಷ್ಟಿತ್ತು. ವಿದ್ಯಾರ್ಥಿಗಳನ್ನು ಉತ್ತೇಜಿಸಲು ಮತ್ತು ಪರೀಕ್ಷೆಯ ಒತ್ತಡದ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಹಲವು ವಿನೂತನ ಪ್ರಯತ್ನಗಳನ್ನು ಮಾಡಲಾಗಿದೆಯೆಂದು ನಾನು ನಿಮಗೆ ಹೇಳಲು ಬಯಸುತ್ತೇನೆ. ನಾಳೆ ಈ ಕಾರ್ಯಕ್ರಮದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ನಾನು ನಿಮ್ಮೆಲ್ಲರಲ್ಲಿ ವಿಶೇಷವಾಗಿ ಯುವಜನತೆಯಲ್ಲಿ ಮನವಿ ಮಾಡುತ್ತಿದ್ದೇನೆ. ನಿಮ್ಮೊಂದಿಗೆ ಮಾತನಾಡುವುದು ನನಗೆ ಬಹಳ ಇಷ್ಟವಾಗುತ್ತದೆ. ಇದರೊಂದಿಗೆ ನಾನು ‘ಮನದ ಮಾತಿನ’ ಈ ಸಂಚಿಕೆಯಲ್ಲಿ ನಿಮಗೆ ವಿದಾಯ ಕೋರುತ್ತಿದ್ದೇನೆ. ಶೀಘ್ರದಲ್ಲೇ ಮತ್ತೆ ಭೇಟಿಯಾಗೋಣ. ಧನ್ಯವಾದ.

 

 

 

 

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
PM Modi extends Hanukkah greetings to Benjamin Netanyahu
December 25, 2024

The Prime Minister, Shri Narendra Modi has extended Hanukkah greetings to Benjamin Netanyahu, the Prime Minister of Israel and all the people across the world celebrating the festival.

The Prime Minister posted on X:

“Best wishes to PM @netanyahu and all the people across the world celebrating the festival of Hanukkah. May the radiance of Hanukkah illuminate everybody’s lives with hope, peace and strength. Hanukkah Sameach!"

מיטב האיחולים לראש הממשלה
@netanyahu
ולכל האנשים ברחבי העולם חוגגים את חג החנוכה. יהיה רצון שזוהר חנוכה יאיר את חיי כולם בתקווה, שלום וכוח. חג חנוכה שמח