QuoteConsistent efforts are being made to strengthen the NCC in our country: PM Modi
QuoteViksit Bharat Young Leaders Dialogue is an effort to connect one lakh new youth to politics: PM
QuoteHeartening to see the youth help senior citizens become part of the digital revolution: PM Modi
QuoteInnovative efforts from Chennai, Hyderabad & Bihar to enhance children’s education: PM Modi
QuoteIndian diaspora has made their mark in different nations: PM Modi
QuoteA museum is being developed in Lothal, dedicated to showcasing India’s maritime heritage: PM Modi
Quote#EkPedMaaKeNaam campaign has crossed the milestone of 100 crore trees planted in just 5 months: PM
QuoteUnique efforts are being made to revive the sparrows: PM Modi

ನನ್ನ ಪ್ರಿಯ ದೇಶವಾಸಿಗಳೇ ನಮಸ್ಕಾರ. 'ಮನದ ಮಾತು' ಎಂದರೆ ದೇಶದ ಸಾಮೂಹಿಕ ಪ್ರಯತ್ನಗಳ ಮಾತು, ದೇಶದ ಸಾಧನೆಗಳ ಬಗ್ಗೆ, ಜನರ ಸಾಮರ್ಥ್ಯಗಳ ಮಾತು, 'ಮನದ ಮಾತು' ಎಂದರೆ ದೇಶದ ಯುವಕರ, ದೇಶದ ಪ್ರಜೆಗಳ ಕನಸುಗಳು ಮತ್ತು ಆಕಾಂಕ್ಷೆಗಳ ಬಗ್ಗೆ ಮಾತನಾಡುವುದಾಗಿದೆ. ನಾನು ನಿಮ್ಮೊಂದಿಗೆ ನೇರವಾಗಿ ಮಾತನಾಡಲು ತಿಂಗಳಪೂರ್ತಿ 'ಮನದ ಮಾತಿಗಾಗಿ' ಕಾಯುತ್ತಿರುತ್ತೇನೆ. ಎಷ್ಟೊಂದು ಸಂದೇಶಗಳು, ಎಷ್ಟೊಂದು ಮೆಸೇಜ್ ಗಳು! ಸಾಧ್ಯವಾದಷ್ಟು ಸಂದೇಶಗಳನ್ನು ಓದಲು ಮತ್ತು ನಿಮ್ಮ ಸಲಹೆಗಳ ಬಗ್ಗೆ ಯೋಚಿಸಲು ನಾನು ನನ್ನ ಕೈಲಾದ ಪ್ರಯತ್ನ ಮಾಡುತ್ತೇನೆ.

ಸ್ನೇಹಿತರೇ, ಇಂದು ಬಹಳ ವಿಶೇಷವಾದ ದಿನವಾಗಿದೆ. ಇಂದು NCC ದಿನ. ಎನ್.ಸಿ.ಸಿ.ಯ ಹೆಸರು ಕೇಳಿದ ತಕ್ಷಣ ನಮಗೆ ನಮ್ಮ ಶಾಲಾ-ಕಾಲೇಜು ದಿನಗಳು ನೆನಪಾಗುತ್ತವೆ. ನಾನು ಸ್ವತಃ ಎನ್‌ಸಿಸಿ ಕೆಡೆಟ್ ಆಗಿದ್ದೆ, ಆದ್ದರಿಂದ, ಅದರಿಂದ ಪಡೆದ ಅನುಭವವು ನನಗೆ ಅಮೂಲ್ಯವಾದುದು ಎಂದು ನಾನು ಪೂರ್ಣ ವಿಶ್ವಾಸದಿಂದ ಹೇಳಬಲ್ಲೆ. 'ಎನ್‌ಸಿಸಿ' ಯುವಕರಲ್ಲಿ ಶಿಸ್ತು, ನಾಯಕತ್ವ ಮತ್ತು ಸೇವಾ ಮನೋಭಾವವನ್ನು ಮೂಡಿಸುತ್ತದೆ. ಯಾವುದೇ ಅವಘಡ ಸಂಭವಿಸಿದಾಗ, ಅದು ಪ್ರವಾಹವಾಗಲಿ, ಭೂಕಂಪವಾಗಲಿ, ಅಥವಾ ಯಾವುದೇ ಆಪತ್ತು ಬಂದೊದಗಿರಲಿ, ಸಹಾಯ ಮಾಡಲು ಎನ್‌ಸಿಸಿ ಕೆಡೆಟ್‌ಗಳು ಖಂಡಿತ ಹಾಜರಾಗುತ್ತಾರೆ. ಇಂದು ದೇಶದಲ್ಲಿ ಎನ್‌ಸಿಸಿಯ ಬಲವೃದ್ಧಿಗೆ ನಿರಂತರ ಕೆಲಸ ಮಾಡಲಾಗುತ್ತಿದೆ. 2014ರಲ್ಲಿ ಸುಮಾರು 14 ಲಕ್ಷ ಯುವಕರು ಎನ್‌ಸಿಸಿ ಸೇರಿದ್ದರು. ಈಗ 2024ರಲ್ಲಿ 20 ಲಕ್ಷಕ್ಕೂ ಹೆಚ್ಚು ಯುವಕರು ಎನ್‌ಸಿಸಿಗೆ ಸೇರ್ಪಡೆಗೊಂಡಿದ್ದಾರೆ. ಈ ಹಿಂದಿನ ಸ್ಥಿತಿಗೆ ಹೋಲಿಸಿದಲ್ಲಿ ಈಗ ಐದು ಸಾವಿರ ಹೊಸ ಶಾಲೆಗಳು ಮತ್ತು ಕಾಲೇಜುಗಳು ಎನ್‌ಸಿಸಿ ಸೌಲಭ್ಯವನ್ನು ಹೊಂದಿವೆ, ಮತ್ತು ಅದಕ್ಕಿಂತ ದೊಡ್ಡ ವಿಷಯವೆಂದರೆ ಹಿಂದೆ ಎನ್‌ಸಿಸಿಯಲ್ಲಿ ಮಹಿಳಾ ಕೆಡೆಟ್‌ಗಳ ಸಂಖ್ಯೆ ಕೇವಲ 25% ಆಗಿತ್ತು. ಈಗ ಎನ್‌ಸಿಸಿಯಲ್ಲಿ ಮಹಿಳಾ ಕೆಡೆಟ್‌ಗಳ ಸಂಖ್ಯೆ ಸುಮಾರು 40% ಕ್ಕೆ ಏರಿದೆ. ಗಡಿಭಾಗದಲ್ಲಿ ವಾಸಿಸುವ ಹೆಚ್ಚೆಚ್ಚು ಯುವಕರನ್ನು ಎನ್‌ಸಿಸಿಗೆ ಸೇರ್ಪಡೆಗೊಳಿಸುವ ಅಭಿಯಾನವೂ ನಿರಂತರವಾಗಿ ನಡೆಯುತ್ತಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಎನ್‌ಸಿಸಿಗೆ ಸೇರಬೇಕೆಂದು ನಾನು ಆಗ್ರಹಿಸುತ್ತೇನೆ. ನೀವು ಯಾವುದೇ ವೃತ್ತಿಯನ್ನು ಆಯ್ದುಕೊಂಡರೂ, ನಿಮ್ಮ ವ್ಯಕ್ತಿತ್ವವನ್ನು ರೂಪಿಸುವಲ್ಲಿ NCC ಬಹಳ ಸಹಾಯಕಾರಿ ಎಂಬುದನ್ನು ನೀವು ಕಾಣುತ್ತೀರಿ.

ಸ್ನೇಹಿತರೇ, ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣದಲ್ಲಿ ಯುವಕರ ಪಾತ್ರ ಬಹಳ ದೊಡ್ಡದು. ಯುವ ಮನಸ್ಸುಗಳು ಒಗ್ಗೂಡಿ ದೇಶದ ಭವಿಷ್ಯದ ಕುರಿತು ಯೋಚಿಸಿದಾಗ, ವಿಚಾರ ವಿನಿಮಯ ಮಾಡಿಕೊಂಡಾಗ ಖಂಡಿತವಾಗಿಯೂ ಸೂಕ್ತ ಮಾರ್ಗಗಳು ಹೊರಹೊಮ್ಮುತ್ತವೆ. ಸ್ವಾಮಿ ವಿವೇಕಾನಂದರ ಜನ್ಮದಿನವಾದ ಜನವರಿ 12 ರಂದು ದೇಶವು 'ಯುವ ದಿನ'ವನ್ನು ಆಚರಿಸುತ್ತದೆ ಎಂದು ನಿಮಗೆ ತಿಳಿದಿದೆ. ಮುಂದಿನ ವರ್ಷ ಸ್ವಾಮಿ ವಿವೇಕಾನಂದರ 162ನೇ ಜಯಂತಿ. ಈ ಬಾರಿ ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲಾಗುವುದು. ಈ ಸಂದರ್ಭದಲ್ಲಿ, ಜನವರಿ 11-12 ರಂದು ದೆಹಲಿಯ ಭಾರತ ಮಂಟಪದಲ್ಲಿ ಯುವ ವಿಚಾರಗಳ ಮಹಾಕುಂಭ ನಡೆಯಲಿದ್ದು, ಈ ಉಪಕ್ರಮದ ಹೆಸರು 'ವಿಕಸಿತ ಭಾರತ Young Leaders Dialogue' ಎಂಬುದಾಗಿದೆ. ಭಾರತದಾದ್ಯಂತ ಕೋಟ್ಯಾಂತರ ಯುವಕರು ಇದರಲ್ಲಿ ಭಾಗವಹಿಸಲಿದ್ದಾರೆ. ಗ್ರಾಮ, ಬ್ಲಾಕ್, ಜಿಲ್ಲೆ, ರಾಜ್ಯ ಮತ್ತು ಅಲ್ಲಿಂದ ಆಯ್ಕೆಯಾದ ಎರಡು ಸಾವಿರ ಯುವಕರು ಭಾರತ ಮಂಟಪದಲ್ಲಿ 'ವಿಕಸಿತ ಭಾರತ Young Leaders Dialogue'  ನಲ್ಲಿ ಪಾಲ್ಗೊಳ್ಳಲು ಒಗ್ಗೂದಲಿದ್ದಾರೆ. ಯಾರ ಕುಟುಂಬ ಸದಸ್ಯರು ಅಥವಾ ಇಡೀ ಕುಟುಂಬ ರಾಜಕೀಯ ಹಿನ್ನೆಲೆ ಹೊಂದಿಲ್ಲವೋ ಅಂತಹ ಯುವಕರು ರಾಜಕೀಯಕ್ಕೆ ಸೇರುವಂತೆ ನಾನು ಕೆಂಪು ಕೋಟೆಯ ಪ್ರಾಂಗಣದಿಂದ ಕರೆ ನೀಡಿದ್ದು  ನಿಮಗೆ  ನೆನಪಿರಬಹುದು. ಅಂತಹ ಒಂದು ಲಕ್ಷ ಯುವಕರನ್ನು, ನವ ಯುವಕರನ್ನು ರಾಜಕೀಯ ಸೇರ್ಪಡೆಗೊಳಿಸಲು ದೇಶಾದ್ಯಂತ ವಿವಿಧ ಬಗೆಯ ವಿಶೇಷ ಅಭಿಯಾನಗಳನ್ನು ನಡೆಸಲಾಗುವುದು. 'ವಿಕಸಿತ ಭಾರತ Young Leaders Dialogue' ಕೂಡ ಅಂತಹ ಒಂದು ಪ್ರಯತ್ನ. ಭಾರತ ಮತ್ತು ವಿದೇಶಗಳ ತಜ್ಞರು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಅನೇಕ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಗಣ್ಯರು ಸಹ ಉಪಸ್ಥಿತರಿರುತ್ತಾರೆ. ಸಾಕಷ್ಟು ಸಮಯ ಅದರಲ್ಲಿ ಭಾಗವಹಿಸಲು ನಾನೂ ಕೂಡ ಪ್ರಯತ್ನಿಸುತ್ತೇನೆ. ಯುವಕರು ತಮ್ಮ ವಿಚಾರಗಳನ್ನು ನೇರವಾಗಿ ನಮ್ಮ ಮುಂದಿಡಲು ಅವಕಾಶ ಲಭಿಸುತ್ತದೆ. ದೇಶವು ಈ ಆಲೋಚನೆಗಳನ್ನು ಹೇಗೆ ಅಳವಡಿಸಿಕೊಳ್ಳಬಹುದು, ಮುಂದಕ್ಕೆ ಕೊಂಡೊಯ್ಯಬಹುದು? ಸೂಕ್ತ ಮಾರ್ಗಸೂಚಿಯನ್ನು ಹೇಗೆ ರಚಿಸಬಹುದು? ಎಂಬುದಕ್ಕಾಗಿ ನೀಲನಕ್ಷೆಯನ್ನು ಸಿದ್ಧಪಡಿಸಲಾಗುವುದು. ಆದ್ದರಿಂದ ನೀವೂ ಸಿದ್ಧರಾಗಿ, ಭವಿಷ್ಯದ ಭಾರತವನ್ನು ನಿರ್ಮಿಸಲು ಹೊರಟಿರುವವರಿಗೆ, ದೇಶದ ಮುಂಬರುವ ಪೀಳಿಗೆಗೆ  ಇದು ಒಂದು ಸುವರ್ಣ ಅವಕಾಶವಾಗಿದೆ. ಬನ್ನಿ ಒಗ್ಗೂಡಿ ದೇಶವನ್ನು ಕಟ್ಟೋಣ ಮತ್ತು ದೇಶವನ್ನು ಅಭಿವೃದ್ಧಿ ಪಡಿಸೋಣ.

ನನ್ನ ಪ್ರಿಯ ದೇಶವಾಸಿಗಳೇ, ‘ಮನದ ಮಾತಿನಲ್ಲಿ’ ನಾವು ಆಗಾಗ್ಗೆ ನಿಸ್ವಾರ್ಥದಿಂದ ಸಮಾಜಕ್ಕಾಗಿ ದುಡಿಯುತ್ತಿರುವ, ಜನರ ಚಿಕ್ಕಪುಟ್ಟ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಇಂತಹ ಯುವಕರ ಬಗ್ಗೆ ಮಾತನಾಡುತ್ತೇವೆ. ನಮ್ಮ ಸುತ್ತಮುತ್ತ ನೋಡಿದರೆ, ಕೆಲವು ರೀತಿಯ ಸಹಾಯ ಅಥವಾ ಕೆಲವು ಮಾಹಿತಿಯ ಅಗತ್ಯವಿರುವ ಅನೇಕ ಜನರನ್ನು ನಾವು ಕಾಣುತ್ತೇವೆ. ಕೆಲವು ಯುವಕರು ಈ ರೀತಿಯ ಸಮಸ್ಯೆಯನ್ನು ಪರಿಹರಿಸಿದ್ದಾರೆಂದು ತಿಳಿದು ನನಗೆ ಸಂತೋಷವಾಗಿದೆ. ಉದಾಹರಣೆಗೆ  ಲಕ್ನೋ ನಿವಾಸಿ ವೀರೇಂದ್ರ ಅವರು ವೃದ್ಧರು ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಪಡೆಯಲು   ಸಹಾಯ ಮಾಡುತ್ತಾರೆ.  ನಿಯಮಾನುಸಾರ ಎಲ್ಲಾ ಪಿಂಚಣಿದಾರರು ವರ್ಷಕ್ಕೊಮ್ಮೆ ಲೈಫ್ ಸರ್ಟಿಫಿಕೇಟ್ ಸಲ್ಲಿಸಬೇಕು ಎಂಬುದು ನಿಮಗೆ ಗೊತ್ತೇ ಇದೆ. 2014ರ ತನಕ ಹಿರಿಯರು ಖುದ್ದಾಗಿ ಬ್ಯಾಂಕ್  ಗೆ ಹೋಗಿ ಅದನ್ನು ಸಲ್ಲಿಸಬೇಕಾಗಿತ್ತು. ಇದರಿಂದ ನಮ್ಮ ಹಿರಿಯರಿಗೆ ಎಷ್ಟು ಅನಾನುಕೂಲವಾಗುತ್ತಿತ್ತು ಎಂಬುದನ್ನು ನೀವೇ ಊಹಿಸಿಕೊಳ್ಳಿ. ಈಗ ಈ ವ್ಯವಸ್ಥೆ ಬದಲಾಗಿದೆ. ಈಗ ಡಿಜಿಟಲ್ ಲೈಫ್ ಸರ್ಟಿಫಿಕೇಟ್ ನೀಡುವ ಮೂಲಕ ಇದು ಸುಲಭಗೊಂಡಿದೆ, ಹಿರಿಯರು ಬ್ಯಾಂಕ್‌ಗೆ ಹೋಗಬೇಕಾಗಿಲ್ಲ. ತಂತ್ರಜ್ಞಾನದಿಂದಾಗಿ ಹಿರಿಯರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ವೀರೇಂದ್ರ ಅವರಂತಹ ಯುವಕರ ಪಾತ್ರ ಬಹು ದೊಡ್ಡದಾಗಿದೆ. ಅವರು ತಮ್ಮ ಕ್ಷೇತ್ರದ ಹಿರಿಯರಿಗೆ ಈ ಕುರಿತು ಅರಿವು ಮೂಡಿಸುತ್ತಿರುತ್ತಾರೆ. ಅಲ್ಲದೆ ಅವರು ಹಿರಿಯರನ್ನು ಟೆಕ್ ಸ್ಯಾವಿ ಕೂಡಾ ಮಾಡುತ್ತಿದ್ದಾರೆ. ಹಾಗಾಗಿ ಇಂದು  ಡಿಜಿಟಲ್ ಲೈಫ್ ಪ್ರಮಾಣ ಪತ್ರವನ್ನು ಪಡೆಯುವವರ ಸಂಖ್ಯೆ 80 ಲಕ್ಷಕ್ಕೂ ಹೆಚ್ಚಾಗಿದೆ. ಇವರಲ್ಲಿ ಎರಡು ಲಕ್ಷಕ್ಕೂ ಹೆಚ್ಚು ವಯೋವೃದ್ಧರು 80 ವರ್ಷ ಮೀರಿದವರಾಗಿದ್ದಾರೆ.

ಸ್ನೇಹಿತರೇ, ಹಲವಾರು ನಗರಗಳಲ್ಲಿ ಹಿರಿಯರನ್ನು ಡಿಜಿಟಲ್ ಕ್ರಾಂತಿಯ ಪಾಲುದಾರರನ್ನಾಗಿ ಮಾಡಲು 'ಯುವಕರು' ಮುಂದೆ ಬರುತ್ತಿದ್ದಾರೆ. ಭೋಪಾಲ್ ನ ಮಹೇಶ್ ತಮ್ಮ ಬಡಾವಣೆಯ ಬಹಳಷ್ಟು ಹಿರಿಯರಿಗೆ ಮೊಬೈಲ್ ಮೂಲಕ ಪಾವತಿ ಮಾಡುವುದನ್ನು ಕಲಿಸಿದ್ದಾರೆ. ಈ ಹಿರಿಯರ ಬಳಿ smart phone ಏನೋ ಇತ್ತು. ಆದರೆ ಅದರ ಸೂಕ್ತ ಉಪಯೋಗದ ಬಗ್ಗೆ ತಿಳಿಸಿಕೊಡುವವರು ಯಾರೂ ಇರಲಿಲ್ಲ. ಹಿರಿಯರನ್ನು   digital arrest ನಂತಹ ಅಪಾಯದಿಂದ ರಕ್ಷಿಸಲು ಕೂಡಾ ಯುವಕರು ಮುಂದೆ ಬಂದಿದ್ದಾರೆ. ಅಹ್ಮದಾಬಾದ್ ನ ರಾಜೀವ್ ಜನರಿಗೆ digital arrest ಅಪಾಯದ ಬಗ್ಗೆ ಅರಿವು ಮೂಡಿಸುತ್ತಾರೆ.   'ಮನದ ಮಾತಿನ ಹಿಂದಿನ ಕಾಂತಿನಲ್ಲಿ ನಾನು digital arrest ಬಗ್ಗೆ ಚರ್ಚಿಸಿದ್ದೆ. ಇಂತಹ ಅಪರಾಧಗಳಿಗೆ ಹೆಚ್ಚಾಗಿ ಹಿರಿಯರೆ ಬಲಿಯಾಗುತ್ತಾರೆ.  ಇಂತಹ ಸ್ಥಿತಿಯಲ್ಲಿ ಅವರಿಗೆ ಅರಿವು ಮೂಡಿಸಿ ಸೈಬರ್ ವಂಚನೆಯಿಂದ ರಕ್ಷಿಸುವ ಜವಾಬ್ದಾರಿ ನಮ್ಮ ಮೇಲಿದೆ. ಸರ್ಕಾರದಲ್ಲಿ digital arrest ಎಂಬ ಯಾವುದೇ ನಿಯಮಾನುಸಾರಣೆ ಇಲ್ಲ ಎಂಬುದನ್ನು ನಾವು ಪದೇ ಪದೇ ಜನರಿಗೆ ತಿಳಿಸಬೇಕಾಗುತ್ತದೆ - ಇದು ಸಂಪೂರ್ಣ ಸುಳ್ಳು, ಜನರನ್ನು ವಂಚಿಸುವಂತಹ ಒಂದು ಕುತಂತ್ರವಾಗಿದೆ. ನಮ್ಮ ಯುವ ಸ್ನೇಹಿತರು ಪೂರ್ಣ ಸೂಕ್ಷ್ಮತೆಯಿಂದ ಈ ಒಳ್ಳೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಮತ್ತು ಇತರರಿಗೂ ಸ್ಫೂರ್ತಿ ನೀಡುತ್ತಿದ್ದಾರೆ ಎಂಬುದು ನನಗೆ ಸಂತೋಷ ನೀಡಿದೆ.

ನನ್ನ ಪ್ರಿಯ ದೇಶವಾಸಿಗಳೇ, ಈ ಮಧ್ಯೆ ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ರೀತಿಯ ಪ್ರಯೋಗಗಳು ನಡೆಯುತ್ತಿವೆ. ನಮ್ಮ ಮಕ್ಕಳಲ್ಲಿ ಸೃಜನಶೀಲತೆಯನ್ನು ವೃದ್ಧಿಸುವ ಮತ್ತು ಪುಸ್ತಕದ ಮೇಲಿನ ಪ್ರೀತಿಯನ್ನು ಹೆಚ್ಚಿಸುವ ಪ್ರಯತ್ನವಾಗಿದೆ - 'ಪುಸ್ತಕಗಳು' ಮನುಷ್ಯನ ಆತ್ಮೀಯ ಸ್ನೇಹಿತ ಎಂದು ಹೇಳಲಾಗುತ್ತದೆ ಮತ್ತು ಈಗ ಈ ಸ್ನೇಹವನ್ನು ಗಟ್ಟಿಗೊಳಿಸಲು, ಗ್ರಂಥಾಲಯಕ್ಕಿಂತ ಉತ್ತಮವಾದ ಸ್ಥಳ ಯಾವುದಿದೆ? ನಾನು ಚೆನ್ನೈನ ಒಂದು ಉದಾಹರಣೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಇಲ್ಲಿ ಮಕ್ಕಳಿಗಾಗಿ ಸೃಜನಶೀಲತೆ ಮತ್ತು ಕಲಿಕೆಯ ಕೇಂದ್ರವಾಗಿರುವಂತಹ ಗ್ರಂಥಾಲಯವನ್ನು ಸ್ಥಾಪಿಸಲಾಗಿದೆ. ಇದನ್ನು ಪ್ರಾಕೃತ ಅರಿವಗಮ್ ಎಂದು ಕರೆಯಲಾಗುತ್ತದೆ. ಈ ಗ್ರಂಥಾಲಯದ ಪರಿಕಲ್ಪನೆ ತಂತ್ರಜ್ಞಾನದ ವಿಶ್ವದೊಂದಿಗೆ ಸಂಬಂಧ ಹೊಂದಿರುವ ಶ್ರೀ ರಾಮ ಗೋಪಾಲನ್ ಅವರ ಕೊಡುಗೆಯಾಗಿದೆ. ವಿದೇಶದಲ್ಲಿ ತಮ್ಮ ಉದ್ಯೋಗದಲ್ಲಿ ಅವರು ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಆದರೆ, ಮಕ್ಕಳಲ್ಲಿ ಓದುವ ಮತ್ತು ಕಲಿಯುವ ಹವ್ಯಾಸವನ್ನು ಬೆಳೆಸುವ ಬಗ್ಗೆ ಅವರು ಯೋಚಿಸುತ್ತಿದ್ದರು. ಭಾರತಕ್ಕೆ ಹಿಂದಿರುಗಿದ ನಂತರ ಅವರು ಪ್ರಾಕೃತ ಅರಿವಗಮ್ ಅನ್ನು ಸ್ಥಾಪಿಸಿದರು. ಇದರಲ್ಲಿ ಮೂರು ಸಾವಿರಕ್ಕೂ ಹೆಚ್ಚು ಪುಸ್ತಕಗಳಿದ್ದು, ಮಕ್ಕಳು ಓದಲು ಪೈಪೋಟಿ ನಡೆಸುತ್ತಿದ್ದಾರೆ. ಪುಸ್ತಕಗಳ ಹೊರತಾಗಿ ಈ ಗ್ರಂಥಾಲಯದಲ್ಲಿ ನಡೆಯುವ ಹಲವಾರು ರೀತಿಯ ಚಟುವಟಿಕೆಗಳು ಮಕ್ಕಳನ್ನು ಆಕರ್ಷಿಸುತ್ತಿವೆ. ಕಥೆ ಹೇಳುವ ಅವಧಿಗಳಾಗಲಿ, ಕಲಾ ಕಾರ್ಯಾಗಾರಗಳಾಗಲಿ, ಜ್ಞಾಪಕ ಶಕ್ತಿ ವೃದ್ಧಿಯ ತರಬೇತಿ ತರಗತಿಗಳಾಗಲಿ, ರೊಬೊಟಿಕ್ಸ್ ಪಾಠಗಳಿರಲಿ  ಅಥವಾ ಸಾರ್ವಜನಿಕ ಭಾಷಣಗಳೆ ಆಗಿರಲಿ, ಇಲ್ಲಿ ಪ್ರತಿಯೊಬ್ಬರಿಗೂ ಇಷ್ಟವಾಗುವಂತಹ ಒಂದಲ್ಲ ಒಂದು ಚಟುವಟಿಕೆ ಇದ್ದೇ ಇದೆ.

ಸ್ನೇಹಿತರೇ, ಹೈದರಾಬಾದ್‌ನಲ್ಲಿ ಸಹ ‘food for thought’ ಫೌಂಡೇಶನ್ ಅನೇಕ ಅದ್ಭುತ ಗ್ರಂಥಾಲಯಗಳನ್ನು ರಚಿಸಿದೆ. ಮಕ್ಕಳಿಗೆ ಹೆಚ್ಚೆಚ್ಚು ವಿಷಯಗಳ ಬಗ್ಗೆ ಸೂಕ್ತ ಮಾಹಿತಿಯೊಂದಿಗೆ ಓದಲು ಪುಸ್ತಕಗಳು ಸಿಗುವಂತೆ ಮಾಡುವುದು ಇವರ ಪ್ರಯತ್ನವಾಗಿದೆ. ಬಿಹಾರದಲ್ಲಿ, ಗೋಪಾಲ್‌ಗಂಜ್‌ನ 'ಪ್ರಯೋಗ್ ಲೈಬ್ರರಿ' ಬಗ್ಗೆ ಸುತ್ತಮುತ್ತಲ ಅನೇಕ ನಗರಗಳಲ್ಲಿ ಚರ್ಚಿಸಲಾಗುತ್ತಿದೆ. ಈ ಗ್ರಂಥಾಲಯದಿಂದ ಸುಮಾರು 12 ಗ್ರಾಮಗಳ ಯುವಕರು ಪುಸ್ತಕಗಳನ್ನು ಓದುವ ಸೌಲಭ್ಯವನ್ನು ಪಡೆಯಲಾರಂಭಿಸಿದ್ದು, ಇದರೊಂದಿಗೆ ಗ್ರಂಥಾಲಯವು ಅಧ್ಯಯನಕ್ಕೆ ನೆರವಾಗುವ ಇತರ ಅಗತ್ಯ ಸೌಲಭ್ಯಗಳನ್ನು ಒದಗಿಸುತ್ತಿದೆ. ಕೆಲವು ಗ್ರಂಥಾಲಯಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತವಾಗಿವೆ. ಇಂದು ಗ್ರಂಥಾಲಯವು ಸಮಾಜವನ್ನು ಸಬಲೀಕರಣಗೊಳಿಸುವಲ್ಲಿ ಉತ್ತಮ ರೀತಿಯಲ್ಲಿ ಬಳಕೆಯಾಗುತ್ತಿರುವುದು ನಿಜಕ್ಕೂ ಬಹಳ ಸಂತಸದ ಸಂಗತಿ. ನೀವೂ ಪುಸ್ತಕಗಳೊಂದಿಗೆ ಸ್ನೇಹವನ್ನು ಬೆಳೆಸಿ ಮತ್ತು ನಿಮ್ಮ ಜೀವನವು ಹೇಗೆ ಬದಲಾವಣೆಗಳಾಗುತ್ತವೆ ಎಂಬುದನ್ನು ಗಮನಿಸಿ.

ನನ್ನ ಪ್ರಿಯ ದೇಶವಾಸಿಗಳೇ, ನಾನು ಮೊನ್ನೆ ರಾತ್ರಿಯಷ್ಟೆ ದಕ್ಷಿಣ ಅಮೆರಿಕಾದ ಗಯಾನಾದಿಂದ ಹಿಂದಿರುಗಿದ್ದೇನೆ. ಭಾರತದಿಂದ ಸಾವಿರಾರು ಕಿಲೋಮೀಟರ್ ದೂರದಲ್ಲಿರುವ ಗಯಾನಾದಲ್ಲಿಯೂ 'ಮಿನಿ ಇಂಡಿಯಾ' ಇದೆ. ಸುಮಾರು 180 ವರ್ಷಗಳ ಹಿಂದೆ, ಹೊಲಗಳಲ್ಲಿ ಕೆಲಸ ಮಾಡಲು ಮತ್ತು ಇತರ ಕೆಲಸಗಳಿಗಾಗಿ ಭಾರತದಿಂದ ಜನರನ್ನು ಗಯಾನಾಕ್ಕೆ ಕರೆದೊಯ್ಯಲಾಗಿತ್ತು. ಇಂದು, ಗಯಾನಾದಲ್ಲಿರುವ ಭಾರತೀಯ ಮೂಲದ ಜನರು ರಾಜಕೀಯ, ವ್ಯಾಪಾರ, ಶಿಕ್ಷಣ ಮತ್ತು ಸಂಸ್ಕೃತಿ ಹೀಗೆ ಪ್ರತಿಯೊಂದು ಕ್ಷೇತ್ರದಲ್ಲೂ ಗಯಾನಾದ ನೇತೃತ್ವವಹಿಸಿದ್ದಾರೆ. ಗಯಾನಾ ರಾಷ್ಟ್ರಪತಿಗಳಾದ ಡಾ. ಇರ್ಫಾನ್ ಅಲಿ ಕೂಡ ಭಾರತೀಯ ಮೂಲದವರಾಗಿದ್ದು, ತಮ್ಮ ಭಾರತೀಯ ಪರಂಪರೆಯ ಬಗ್ಗೆ ಹೆಮ್ಮೆ ಪಡುತ್ತಾರೆ. ನಾನು ಗಯಾನಾದಲ್ಲಿದ್ದಾಗ, ನನ್ನ ಮನಸ್ಸಿನಲ್ಲಿ ಒಂದು ಆಲೋಚನೆ ಬಂದಿತು - ಅದನ್ನು ನಾನು ನಿಮ್ಮೊಂದಿಗೆ 'ಮನದ ಮಾತಿನಲ್ಲಿ' ಹಂಚಿಕೊಳ್ಳುತ್ತಿದ್ದೇನೆ. ಗಯಾನಾದಂತೆ, ಪ್ರಪಂಚದ ಹಲವಾರು ದೇಶಗಳಲ್ಲಿ ಲಕ್ಷಾಂತರ ಭಾರತೀಯರಿದ್ದಾರೆ. ದಶಕಗಳ ಹಿಂದೆ, 200-300 ವರ್ಷಗಳ ಹಿಂದೆ ಅವರ ಪೂರ್ವಜರು ತಮ್ಮದೇ ಆದ ಕಥೆಗಳನ್ನು ಹೊಂದಿದ್ದಾರೆ. ಭಾರತೀಯ ವಲಸಿಗರು ವಿವಿಧ ದೇಶಗಳಲ್ಲಿ ತಮ್ಮ ಛಾಪು ಮೂಡಿಸಿದ ಕಥೆಗಳನ್ನು ನೀವು ಹುಡುಕಬಹುದೇ? ಅಲ್ಲಿನ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಅವರು ಹೇಗೆ ಭಾಗವಹಿಸಿದ್ದರು? ಅವರು ತಮ್ಮ ಭಾರತೀಯ ಪರಂಪರೆಯನ್ನು ಹೇಗೆ ಜೀವಂತವಾಗಿಟ್ಟರು? ನೀವು ಅಂತಹ ನೈಜ ಕಥೆಗಳನ್ನು ಶೋಧಿಸಬೇಕು ಮತ್ತು ಅವುಗಳನ್ನು ನನ್ನೊಂದಿಗೆ ಹಂಚಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಈ ಕಥೆಗಳನ್ನು NaMo ಅಪ್ಲಿಕೇಶನ್‌ನಲ್ಲಿ ಅಥವಾ MyGov ನಲ್ಲಿ #IndianDiasporaStories ನಲ್ಲೂ ಹಂಚಿಕೊಳ್ಳಬಹುದು.

ಸ್ನೇಹಿತರೇ, ಒಮನ್‌ನಲ್ಲಿ ನಡೆಯುತ್ತಿರುವ ಅಸಾಧಾರಣ ಯೋಜನೆಯೊಂದು ನಿಮಗೆ ಬಹಳ ಆಸಕ್ತಿಕರವೆನಿಸಬಹುದು. ಶತಮಾನಗಳಿಂದ ಅನೇಕ ಭಾರತೀಯ ಕುಟುಂಬಗಳು ಓಮನ್‌ನಲ್ಲಿ ವಾಸಿಸುತ್ತಿವೆ. ಅವರಲ್ಲಿ ಹೆಚ್ಚಿನವರು ಗುಜರಾತ್‌ನ ಕಚ್‌ ಮೂಲದವರಾಗಿದ್ದಾರೆ. ಈ ಜನರು ವ್ಯಾಪಾರದ ಪ್ರಮುಖ link ಗಳನ್ನು ರಚಿಸಿದ್ದರು. ಇಂದಿಗೂ ಅವರು ಒಮಾನಿ ಪೌರತ್ವವನ್ನು ಹೊಂದಿದ್ದಾರೆ.  ಆದರೆ ಅವರ ರೋಮ ರೋಮಗಳಲ್ಲಿ  ಭಾರತೀಯತೆ ತುಂಬಿದೆ. ಒಮನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮತ್ತು ಭಾರತೀಯ ರಾಷ್ಟ್ರೀಯ ದಾಖಲೆಗಳ ಸಹಯೋಗದಲ್ಲಿ ಒಂದು ತಂಡವು ಈ ಕುಟುಂಬಗಳ ಇತಿಹಾಸವನ್ನು ಸಂರಕ್ಷಿಸುವ ಕೆಲಸವನ್ನು ಆರಂಭಿಸಿದೆ. ಈ ಅಭಿಯಾನದಡಿ ಇದುವರೆಗೆ ಸಾವಿರಾರು ದಾಖಲೆಗಳನ್ನು ಸಂಗ್ರಹಿಸಲಾಗಿದೆ. ಇವುಗಳಲ್ಲಿ ಡೈರಿ, ಖಾತೆ ಪುಸ್ತಕ, ಲೆಡ್ಜರ್‌ಗಳು, ಪತ್ರಗಳು ಮತ್ತು ಟೆಲಿಗ್ರಾಮ್‌ಗಳು ಒಳಗೊಂಡಿವೆ. ಇವುಗಳಲ್ಲಿ ಕೆಲವು ದಾಖಲೆಗಳು 1838 ರ ವರ್ಷದ್ದು ಕೂಡಾ ಇವೆ. ಈ ದಾಖಲೆಗಳು ಭಾವನೆಗಳಿಂದ ಕೂಡಿವೆ. ವರ್ಷಗಳ ಹಿಂದೆ ಅವರು ಓಮನ್ ತಲುಪಿದಾಗ, ಯಾವ ರೀತಿಯ ಜೀವನ ನಡೆಸಿದರು, ಯಾವ ರೀತಿಯ ಸುಖ ದುಃಖಗಳನ್ನು ಎದುರಿಸಿದರು, ಮತ್ತು ಓಮನ್ ಜನರೊಂದಿಗೆ ಅವರ ಸಂಬಂಧಗಳು ಹೇಗೆ ಮುಂದುವರಿದವು - ಇವೆಲ್ಲವೂ ಈ ದಾಖಲೆಗಳಲ್ಲಿವೆ. ‘Oral history project’ ಕೂಡ ಈ ಅಭಿಯಾನದ ಪ್ರಮುಖ ಆಧಾರವಾಗಿದೆ. ಅಲ್ಲಿನ ಹಿರಿಯರು ಈ ಅಭಿಯಾನದಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿನ ಜನರು ತಮ್ಮ ಜೀವನಕ್ಕೆ ಸಂಬಂಧಿಸಿದ ವಿಷಯಗಳನ್ನು ವಿವರವಾಗಿ ತಿಳಿಸಿದ್ದಾರೆ.

ಸ್ನೇಹಿತರೆ ಇಂತಹದ್ದೆ ಒಂದು Oral History Project’ ಭಾರತದಲ್ಲೂ ನಡೆಯುತ್ತಿದೆ. ಈ  ಯೋಜನೆಯಡಿ ಇತಿಹಾಸದ ಬಗ್ಗೆ ಒಲವುಳ್ಳವರು ದೇಶದ ವಿಭಜನೆಯ ಕಾಲಘಟ್ಟದಲ್ಲಿ ಪೀಡಿತರ ಅನುಭವಗಳನ್ನು ಸಂಗ್ರಹಿಸುತ್ತಿದ್ದಾರೆ. ವಿಭಜನೆಯ ಭೀಕರತೆಯನ್ನು ಕಂಡಂತಹ ಜನರು ಇಂದು ದೇಶದಲ್ಲಿ ಕೆಲವರು ಮಾತ್ರ ಉಳಿದಿದ್ದಾರೆ. ಇಂತಹ ಸಮಯದಲ್ಲಿ ಈ  ಪ್ರಯತ್ನ ಮತ್ತಷ್ಟು ಮಹತ್ವಪೂರ್ಣವಾಗಿದೆ.    

ಸ್ನೇಹಿತರೇ, ಯಾವ ದೇಶ, ಯಾವ ಸ್ಥಳ, ತನ್ನ ಇತಿಹಾಸವನ್ನು ಉಳಿಸಿಕೊಳ್ಳುತ್ತದೆಯೋ, ಅದರ ಭವಿಷ್ಯ ಕೂಡಾ ಸುರಕ್ಷಿತವಾಗಿ ಇರುತ್ತದೆ. ಇದೇ ಚಿಂತನೆಯೊಂದಿಗೆ ಒಂದು ಪ್ರಯತ್ನ ನಡೆದಿದ್ದು, ಇದರಲ್ಲಿ ಗ್ರಾಮದ ಇತಿಹಾಸವನ್ನು ಸಂರಕ್ಷಿಸುವುದಕ್ಕಾಗಿ ಒಂದು ಡೈರೆಕ್ಟರಿ ಸಿದ್ಧಪಡಿಸಲಾಗಿದೆ. ಭಾರತದ ಪ್ರಾಚೀನ ಸಾಗರ ಪಯಣದ ಸಾಮರ್ಥ್ಯಕ್ಕೆ ಸಂಬಂಧಿಸಿದ ಪುರಾವೆಗಳನ್ನು ಸಂರಕ್ಷಿಸುವ ಅಭಿಯಾನ ಕೂಡಾ ದೇಶದಲ್ಲಿ ನಡೆಯುತ್ತಿದೆ.  ಈ ನಿಟ್ಟಿನಲ್ಲಿ, ಲೋಥಲ್ ನಲ್ಲಿ ಒಂದು ಬಹಳ ದೊಡ್ಡ ಸಂಗ್ರಹಾಲಯವನ್ನು ಕೂಡಾ ನಿರ್ಮಿಸಲಾಗುತ್ತಿದೆ, ಇದಲ್ಲದೇ ನಿಮ್ಮ ಬಳಿ ಯಾವುದೇ ಹಸ್ತಪ್ರತಿ, ಯಾವುದೇ ಐತಿಹಾಸಿಕ ಕಾಗದಪತ್ರ, ಯಾವುದೇ ಲಿಖಿತ ಪ್ರತಿಯಿದ್ದರೆ, ನೀವು ಕೂಡಾ  National Archives of India ನ ಸಹಾಯದಿಂದ ಅವುಗಳನ್ನು ಸಂರಕ್ಷಿಸಬಹುದು.

ಸ್ನೇಹಿತರೇ, ನನಗೆ ಸ್ಲೋವೇಕಿಯಾದಲ್ಲಿ ನಡೆಯುತ್ತಿರುವ ಇಂತಹುದೇ ಮತ್ತೊಂದು ಪ್ರಯತ್ನದ ಬಗ್ಗೆ ತಿಳಿದುಬಂದಿದ್ದು, ಇದು ನಮ್ಮ ಸಂಸ್ಕೃತಿಯನ್ನು ಸಂರಕ್ಷಿಸುವ ಮತ್ತು ಅದನ್ನು ಮುಂದುವರಿಸಿಕೊಂಡು ಹೋಗುವ ಕಾರ್ಯವಾಗಿದೆ.  ಇಲ್ಲಿ ಮೊದಲಬಾರಿಗೆ ನಮ್ಮ ಉಪನಿಷತ್ ಗಳನ್ನು ಸ್ಲೋವಾಕ್ ಭಾಷೆಗೆ ಅನುವಾದ ಮಾಡಲಾಗಿದೆ. ಇಂತಹ ಪ್ರಯತ್ನಗಳಿಂದ ಭಾರತೀಯ ಸಂಸ್ಕೃತಿ ಜಾಗತಿಕವಾಗಿ ಬೀರುವ ಪ್ರಭಾವ ಎಂತಹದ್ದೆಂದು ತಿಳಿದುಬರುತ್ತದೆ. ವಿಶ್ವಾದ್ಯಂತ ಕೋಟ್ಯಂತರ ಜನರ ಮನಮಾನಸದಲ್ಲಿ ಭಾರತ ನೆಲೆಸಿದೆ ಎನ್ನುವುದು ನಮ್ಮೆಲ್ಲರಿಗೂ ಬಹಳ ಹೆಮ್ಮೆಯ ವಿಷಯವಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ಈಗ ನಾನು ದೇಶದ ಅಂತಹ ಸಾಧನೆಯ ಕುರಿತಂತೆ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ,  ಈ ವಿಷಯ ಕೇಳಿ ನೀವು ಸಂತೋಷಪಡುವುದು ಮಾತ್ರವಲ್ಲದೇ ಹೆಮ್ಮೆ ಕೂಡಾ ಪಡುತ್ತೀರಿ, ಹಾಗೊಮ್ಮೆ ನೀವು ಮಾಡದೇ ಇದ್ದಲ್ಲಿ ಬಹುಶಃ ಪಶ್ಚಾತ್ತಾಪ ಕೂಡಾ ಪಡುತ್ತೀರಿ. ಕೆಲವು ತಿಂಗಳ ಹಿಂದೆ ನಾವು ಒಂದು ಸಸಿ ತಾಯಿಯ ಹೆಸರಿನಲ್ಲಿ ಎಂಬ ಅಭಿಯಾನ ಆರಂಭಿಸಿದ್ದೆವು. ಈ ಅಭಿಯಾನದಲ್ಲಿ ದೇಶದೆಲ್ಲೆಡೆಯಿಂದ ಜನರು ಅತ್ಯಂತ ಉತ್ಸಾಹದಿಂದ ಪಾಲ್ಗೊಂಡಿದ್ದರು. ಈ ಅಭಿಯಾನವು 100 ಕೋಟಿ ಗಿಡಗಳನ್ನು ನೆಡುವ ಮಹತ್ವದ ಮೈಲಿಗಲ್ಲನ್ನು ಮೀರಿದೆ ಎಂದು ಹೇಳಲು ನನಗೆ ಬಹಳ ಹರ್ಷವೆನಿಸುತ್ತದೆ. ನೂರು ಕೋಟಿ ಗಿಡಗಳು,  ಅದೂ ಕೇವಲ ಐದು ತಿಂಗಳುಗಳಲ್ಲಿ, ನಿಜಕ್ಕೂ ಇದು ಸಾಧ್ಯವಾಗಿದ್ದು ನಮ್ಮ ದೇಶವಾಸಿಗಳ ಅವಿರತ ಪ್ರಯತ್ನದಿಂದ. ಇದಕ್ಕೆ ಸಂಬಂಧಿಸಿದ ಮತ್ತೊಂದು ವಿಷಯವಿದೆ, ನೀವು ಅದನ್ನು ಕೇಳಿದರೆ ಮತ್ತಷ್ಟು ಹೆಮ್ಮೆ ಪಡುತ್ತೀರಿ. ‘ಒಂದು ಸಸಿ ತಾಯಿಯ ಹೆಸರಿನಲ್ಲಿ’ ಅಭಿಯಾನ ಈಗ ಜಗತ್ತಿನ ಇತರ ದೇಶಗಳಲ್ಲೂ ಹಬ್ಬುತ್ತಿದೆ. ನಾನು ಗಯಾನಾಗೆ ಹೋಗಿದ್ದಾಗ ಅಲ್ಲಿಯೂ ಈ ಅಭಿಯಾನಕ್ಕೆ ನಾನು ಸಾಕ್ಷಿಯಾದೆ. ಅಲ್ಲಿ ನಾನು ಗಯಾನಾ ಅಧ್ಯಕ್ಷ ಡಾ. ಇರ್ಫಾನ್ ಅಲಿ, ಅವರ ಪತ್ನಿಯ ತಾಯಿ ಮತ್ತು ಕುಟುಂಬದ ಇತರ ಸದಸ್ಯರು  ಒಂದು ಸಸಿ ತಾಯಿಯ ಹೆಸರಿನಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

ಸ್ನೇಹಿತರೇ, ದೇಶದ ಬೇರೆ ಬೇರೆ ಭಾಗಗಳಲ್ಲಿ ಈ ಅಭಿಯಾನ ನಿರಂತರವಾಗಿ ನಡೆಯುತ್ತಿದೆ. ಮಧ್ಯಪ್ರದೇಶದ ಇಂದೌರ್ ನಲ್ಲಿ ಒಂದು ಸಸಿ ತಾಯಿಯ ಹೆಸರಿನಲ್ಲಿ ಅಭಿಯಾನದ ಅಡಿಯಲ್ಲಿ ಗಿಡ ನೆಡುವ ದಾಖಲೆ ನಿರ್ಮಾಣವಾಗಿದೆ – ಇಲ್ಲಿ 24 ಗಂಟೆಗಳಲ್ಲಿ 12 ಲಕ್ಷಕ್ಕಿಂತ ಅಧಿಕ ಗಿಡಗಳನ್ನು ನೆಡಲಾಯಿತು. ಈ ಅಭಿಯಾನದ ಕಾರಣದಿಂದಾಗಿ, ಇಂದೌರ್ ನ ರೇವತಿ ಹಿಲ್ಸ್ ನ ಬಂಜರು ಭೂಮಿಯು ಈಗ ಹಸಿರು ವಲಯವಾಗಿ ಪರಿವರ್ತನೆಯಾಗುತ್ತದೆ. ರಾಜಸ್ತಾನದ ಜೈಸಲ್ಮೇರ್ ನಲ್ಲಿ ಈ ಅಭಿಯಾನದ ಮೂಲಕ ಒಂದು ವಿಶಿಷ್ಟ ದಾಖಲೆ ಸೃಷ್ಟಿಯಾಗಿದೆ – ಇಲ್ಲಿ ಮಹಿಳೆಯರ ತಂಡವೊಂದು ಒಂದು ಗಂಟೆಯಲ್ಲಿ 25 ಸಾವಿರ ಗಿಡಗಳನ್ನು ನೆಟ್ಟಿದೆ. ತಾಯಂದಿರು ತಾಯಿಯ ಹೆಸರಿನಲ್ಲಿ ಗಿಡ ನೆಟ್ಟರು ಮತ್ತು ಇತರರಿಗೆ ಕೂಡಾ ಪ್ರೇರಣೆಯಾದರು. ಇಲ್ಲಿ ಒಂದೇ ಸ್ಥಳದಲ್ಲಿ ಐದು ಸಾವಿರಕ್ಕೂ ಅಧಿಕ ಮಂದಿ ಒಂದುಗೂಡಿ ಗಿಡಗಳನ್ನು ನೆಟ್ಟರು ಇದು ಕೂಡಾ ಒಂದು ದಾಖಲೆಯೇ ಆಗಿದೆ. ‘ಒಂದು ಸಸಿ ತಾಯಿಯ ಹೆಸರಿನಲ್ಲಿ’ ಅಭಿಯಾನದ ಅಡಿಯಲ್ಲಿ ಹಲವು ಸಾಮಾಜಿಕ ಸಂಸ್ಥೆಗಳು ಸ್ಥಳೀಯ ಅಗತ್ಯತೆಗಳಿಗೆ ಅನುಗುಣವಾಗಿ ಗಿಡ ನೆಡುತ್ತಿವೆ. ಮರಗಳನ್ನು ಎಲ್ಲಿಯೇ ನೆಡಲಿ, ಆ ಸಂಪೂರ್ಣ ಪರಿಸರ ವ್ಯವಸ್ಥೆಯು ಪರಿಸರ ಸ್ನೇಹಿಯಾಗಿ ಅಭಿವೃದ್ಧಿ ಹೊಂದಬೇಕು ಎಂಬುದೇ ಅವುಗಳ ಪ್ರಯತ್ನವಾಗಿದೆ. ಅದಕ್ಕಾಗಿಯೇ ಈ ಸಂಸ್ಥೆಗಳು ಕೆಲವೆಡೆ ಔಷಧೀಯ ಗಿಡಗಳನ್ನು ನೆಟ್ಟರೆ, ಮತ್ತೆ ಕೆಲವೆಡೆ ಪಕ್ಷಿಗಳಿಗೆ ಗೂಡು ನಿರ್ಮಿಸಲು ಗಿಡಗಳನ್ನು ನೆಡುತ್ತಿವೆ. ಬಿಹಾರದಲ್ಲಿ 'ಜೀವಿಕಾ ಸ್ವಸಹಾಯ ಸಂಘದ' ಮಹಿಳೆಯರು 75 ಲಕ್ಷ ಗಿಡಗಳನ್ನು ನೆಡುವ ಅಭಿಯಾನವನ್ನು ನಡೆಸುತ್ತಿದ್ದಾರೆ. ಭವಿಷ್ಯದಲ್ಲಿ ಆದಾಯ ಗಳಿಸಬಹುದಾದ ಹಣ್ಣಿನ ಮರಗಳನ್ನು ನೆಡುವುದರ ಮೇಲೆ ಈ ಮಹಿಳೆಯರ ಗಮನ ಕೇಂದ್ರೀಕೃತವಾಗಿದೆ.

ಸ್ನೇಹಿತರೇ, ಈ ಅಭಿಯಾನಕ್ಕೆ ಸೇರಿಕೊಳ್ಳುವ ಮೂಲಕ ಯಾವುದೇ ವ್ಯಕ್ತಿ ತನ್ನ ತಾಯಿಯ ಹೆಸರಿನಲ್ಲಿ ಗಿಡ ನೆಡಬಹುದು. ನಿಮ್ಮ ತಾಯಿ ನಿಮ್ಮೊಂದಿಗಿದ್ದರೆ ನೀವು ಆಕೆಯನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ ಗಿಡ ನೆಡಬಹುದು ಅಥವಾ ಆಕೆಯ ಭಾವಚಿತ್ರ ಇರಿಸಿಕೊಂಡು ಗಿಡ ನೆಟ್ಟು ಈ ಅಭಿಯಾನದ ಭಾಗವಾಗಬಹುದು. ನೀವು mygov.in ನಲ್ಲಿ ನೀವು ನೆಟ್ಟ ಗಿಡದೊಂದಿಗೆ ನಿಮ್ಮ ಸೆಲ್ಫಿಯನ್ನು ಪೋಸ್ಟ್ ಮಾಡಬಹುದು. ತಾಯಿಯ ಋಣವನ್ನು ತೀರಿಸಲು ನಮಗೆ ಎಂದಿಗೂ ಸಾಧ್ಯವಿಲ್ಲ, ಆದರೆ ಆಕೆಯ ಹೆಸರಿನಲ್ಲಿ ಗಿಡವೊಂದನ್ನು ನೆಡುವ ಮೂಲಕ ನಾವು ಅವರ ಅಸ್ತಿತ್ವವನ್ನು ಸದಾ ಜೀವಂತವಾಗಿ ಇರಿಸಬಹುದು.

ನನ್ನ ಪ್ರೀತಿಯ ದೇಶಬಾಂಧವರೇ, ನೀವೆಲ್ಲರೂ ನಿಮ್ಮ ಬಾಲ್ಯದಲ್ಲಿ ಗುಬ್ಬಚ್ಚಿಯನ್ನು ನಿಮ್ಮ ಮನೆಗಳ ತಾರಸಿಯ ಮೇಲೆ,  ಮರಗಿಡಗಳ ಮೇಲೆ, ಚಿಲಿಪಿಲಿಗುಟ್ಟತ್ತಾ ಹಾರಾಡುತ್ತಿದ್ದುದನ್ನು ನೋಡಿಯೇ ಇರುತ್ತೀರಿ. ಗುಬ್ಬಚ್ಚಿಯನ್ನು ತಮಿಳು ಮತ್ತು ಮಲೆಯಾಳಂ ಭಾಷೆಯಲ್ಲಿ ಕುರುವಿ, ತೆಲುಗಿನಲ್ಲಿ ಪಿಚ್ಚುಕ ಮತ್ತು ಕನ್ನಡದಲ್ಲಿ ಗುಬ್ಬಿ ಎಂದು ಕರೆಯುತ್ತಾರೆ. ಪ್ರತಿಯೊಂದು ಭಾಷೆ, ಸಂಸ್ಕೃತಿಯಲ್ಲಿ ಗುಬ್ಬಿಯ ಕುರಿತ ಅನೇಕ ಕತೆಗಳನ್ನು ಕೇಳಿದ್ದೇವೆ. ನಮ್ಮ ಸುತ್ತಮುತ್ತ ಜೀವವೈವಿಧ್ಯತೆಯನ್ನು ಉಳಿಸುವಲ್ಲಿ ಗುಬ್ಬಿಯ ಕೊಡುಗೆ ಮಹತ್ವಪೂರ್ಣವಾಗಿರುತ್ತಿತ್ತು. ಆದರೆ ಇಂದು ನಗರಗಳಲ್ಲಿ ಈ ಗುಬ್ಬಚ್ಚಿಗಳು ಬಹಳ ವಿರಳವಾಗಿವೆ. ಹೆಚ್ಚುತ್ತಿರುವ ನಗರೀಕರಣದಿಂದಾಗಿ, ಗುಬ್ಬಿಗಳು ನಮ್ಮಿಂದ ದೂರ ಹೋಗಿಬಿಟ್ಟಿವೆ. ಇಂದಿನ ಪೀಳಿಗೆಯ ಬಹಳಷ್ಟು ಮಕ್ಕಳು ಕೇವಲ ಚಿತ್ರಗಳಲ್ಲಿ ಅಥವಾ ವಿಡಿಯೋಗಳಲ್ಲಿ ಗುಬ್ಬಿಯನ್ನು ನೋಡಿದ್ದಾರೆ. ಮಕ್ಕಳ ಜೀವನದಲ್ಲಿ ಈ ಮುದ್ದಾದ ಪಕ್ಷಿಯನ್ನು ಹಿಂದಕ್ಕೆ ತರಲು ಕೆಲವು ವಿಶಿಷ್ಟ ಪ್ರಯತ್ನಗಳು ನಡೆಯುತ್ತಿವೆ. ಚೆನ್ನೈನ ಕೂಡುಗಲ್ ಟ್ರಸ್ಟ್ ಗುಬ್ಬಿಗಳ ಸಂಖ್ಯೆಯನ್ನು ಹೆಚ್ಚಿಸುವುದಕ್ಕಾಗಿ ಶಾಲೆಯ ಮಕ್ಕಳನ್ನು ತಮ್ಮ ಅಭಿಯಾನದಲ್ಲಿ ಸೇರಿಸಿಕೊಂಡಿದೆ. ಸಂಸ್ಥೆಯ ಜನರು ಶಾಲೆಗಳಿಗೆ ಹೋಗಿ ದೈನಂದಿನ ಜೀವನದಲ್ಲಿ ಗುಬ್ಬಿಯ ಪಾತ್ರ ಎಷ್ಟು ಮುಖ್ಯ ಎಂಬುದನ್ನು ಮನಗಾಣಿಸುತ್ತಾರೆ. ಈ ಸಂಸ್ಥೆ ಮಕ್ಕಳಿಗೆ ಗುಬ್ಬಿಗಳ ಗೂಡು ಕಟ್ಟುವ ವಿಧಾನದ ತರಬೇತಿ ನೀಡುತ್ತದೆ. ಇದಕ್ಕಾಗಿ ಸಂಸ್ಥೆಯ  ಸದಸ್ಯರು ಮಕ್ಕಳಿಗೆ ಮರದಿಂದ ಒಂದು ಪುಟ್ಟದಾದ ಮನೆ ನಿರ್ಮಿಸುವುದನ್ನು ಕಲಿಸಿದರು. ಇದರಲ್ಲಿ ಗುಬ್ಬಚ್ಚಿ ವಾಸಕ್ಕೆ ಮತ್ತು ಆಹಾರಕ್ಕೆ ವ್ಯವಸ್ಥೆ ಮಾಡಲಾಯಿತು. ಇವು ಯಾವುದೇ ಕಟ್ಟಡದ ಹೊರಗೋಡೆಯ ಮೇಲೆ ಅಥವಾ ಮರದ ಮೇಲೆ ನೆಲೆಗೊಳಿಸಬಹುದಾದ ಮನೆಗಳಾಗಿರುತ್ತವೆ.  ಮಕ್ಕಳು ಈ ಅಭಿಯಾನದಲ್ಲಿ ಬಹಳ ಉತ್ಸಾಹದಿಂದ ಪಾಲ್ಗೊಂಡರು ಮತ್ತು ಗುಬ್ಬಿಗಳಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಗೂಡು ಸಿದ್ಧಪಡಿಸುವ ಕೆಲಸ ಆರಂಭಿಸಿದರು. ಕಳೆದ ನಾಲ್ಕು ವರ್ಷಗಳಲ್ಲಿ ಸಂಸ್ಥೆಯು ಗುಬ್ಬಿಗಳಿಗಾಗಿ ಇಂತಹ ಹತ್ತು ಸಾವಿರ ಗೂಡುಗಳನ್ನು ಸಿದ್ಧಪಡಿಸಿದೆ. ಕೂಡುಗಲ್ ಟ್ರಸ್ಟ್ ನ ಈ ಉಪಕ್ರಮದಿಂದಾಗಿ, ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗುಬ್ಬಿಗಳ ಸಂಖ್ಯೆ ಹೆಚ್ಚಾಗತೊಡಗಿದೆ. ನೀವು ಕೂಡಾ ನಿಮ್ಮ ಸುತ್ತಮುತ್ತಲೂ ಇಂತಹ ಪ್ರಯತ್ನಗಳನ್ನು ಕೈಗೊಂಡಲ್ಲಿ, ಖಂಡಿತವಾಗಿಯೂ ಗುಬ್ಬಚ್ಚಿಗಳು ಪುನಃ ನಮ್ಮ ಜೀವನದ ಭಾಗವಾಗುತ್ತವೆ.

ಸ್ನೇಹಿತರೆ, ಕರ್ನಾಟಕದ ಮೈಸೂರಿನಲ್ಲಿ ಒಂದು ಸಂಸ್ಥೆಯು ಮಕ್ಕಳಿಗಾಗಿ ಅರ್ಲಿ ಬರ್ಡ್ ಎಂಬ ಹೆಸರಿನ ಅಭಿಯಾನ ಆರಂಭಿಸಿದೆ.  ಈ ಸಂಸ್ಥೆಯು ಮಕ್ಕಳಿಗೆ ಪಕ್ಷಿಗಳ ಕುರಿತು ಅರಿವು ಮೂಡಿಸುವುದಕ್ಕಾಗಿ ವಿಶೇಷ ರೀತಿಯ ಗ್ರಂಥಾಲಯ ನಡೆಸುತ್ತದೆ. ಅಷ್ಟೇ ಅಲ್ಲದೇ, ಮಕ್ಕಳಿಗೆ ಪ್ರಕೃತಿಯ ಬಗ್ಗೆ ಜವಾಬ್ದಾರಿಯ ಭಾವನೆ ಮೂಡಿಸುವುದಕ್ಕಾಗಿ ‘Nature Education Kit’ ಸಿದ್ಧಪಡಿಸಿದೆ. ಈ ಕಿಟ್ ನಲ್ಲಿ ಮಕ್ಕಳಿಗಾಗಿ ಕತೆ ಪುಸ್ತಕ, ಆಟಗಳು, ಆಕ್ಟಿವಿಟಿ ಹಾಳೆಗಳು ಮತ್ತು ಜಿಗ್ ಸಾ ಒಗಟುಗಳು ಇರುತ್ತವೆ. ಈ ಸಂಸ್ಥೆ ನಗರದ ಮಕ್ಕಳನ್ನು ಹಳ್ಳಿಗಳಿಗೆ ಕರೆದುಕೊಂಡು ಹೋಗುತ್ತದೆ ಮತ್ತು ಆ ಮಕ್ಕಳಿಗೆ ಪಕ್ಷಿಗಳ ಕುರಿತು ತಿಳಿಸಿಹೇಳುತ್ತದೆ. ಈ ಸಂಸ್ಥೆಯ ಪ್ರಯತ್ನಗಳ ಕಾರಣದಿಂದಾಗಿ ಮಕ್ಕಳು ಪಕ್ಷಿಗಳ ಅನೇಕ ಪ್ರಭೇದಗಳನ್ನು ಗುರುತಿಸಲು ಶಕ್ತರಾಗುತ್ತಿದ್ದಾರೆ. ‘ಮನದ ಮಾತಿನ’ ಶ್ರೋತೃಗಳು ಕೂಡಾ ಇಂತಹ ಪ್ರಯತ್ನಗಳಿಂದ ಮಕ್ಕಳಲ್ಲಿ ತಮ್ಮ ಸುತ್ತಮುತ್ತಲಿನ ಆಗುಹೋಗುಗಳನ್ನು ನೋಡುವ, ಅರಿತುಕೊಳ್ಳುವ ವಿವಿಧ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳುವಂತೆ ಮಾಡಬಹುದಾಗಿದೆ.

ನನ್ನ ಪ್ರೀತಿಯ ದೇಶಬಾಂಧವರೇ, ಸರ್ಕಾರದ ಕಚೇರಿ ಎಂದಾಕ್ಷಣ ನಿಮ್ಮ ಮನಸ್ಸಿನಲ್ಲಿ ಕಡತಗಳ ರಾಶಿಯ ಚಿತ್ರ ಕಂಡುಬರಬಹುದು. ನೀವು ಚಲನಚಿತ್ರಗಳಲ್ಲಿ ಕೂಡಾ ಇಂತಹದ್ದೇ ದೃಶ್ಯಗಳನ್ನು ನೋಡಿರುತ್ತೀರಿ. ಸರ್ಕಾರಿ ಕಚೇರಿಗಳಲ್ಲಿ ಇಂತಹ ಕಡತಗಳ ರಾಶಿಯ ಬಗ್ಗೆ ಅದೆಷ್ಟೋ ಹಾಸ್ಯ ಚಟಾಕಿಗಳು ಹುಟ್ಟಿವೆ, ಅದೆಷ್ಟೋ ಕತೆಗಳನ್ನೂ ಬರೆಯಲಾಗಿದೆ. ಹಲವಾರು ವರ್ಷಗಳ ಕಾಲ ಈ ಕಡತಗಳು ಕಚೇರಿಯಲ್ಲಿ ಧೂಳು ತುಂಬಿಕೊಂಡು ಬಿದ್ದಿರುತ್ತಿದ್ದವು, ಕೊಳಕು ತುಂಬಲು ಕಾರಣವಾಗುತ್ತಿದ್ದವು, ಇಂತಹ ದಶಕಗಳಷ್ಟು ಹಳೆಯದಾದ ಕಡತಗಳು ಮತ್ತು ಸ್ಕ್ರಾಪ್ ಗಳನ್ನು ತೊಲಗಿಸುವುದಕ್ಕಾಗಿ ವಿಶೇಷ ಸ್ವಚ್ಛತಾ ಅಭಿಯಾನ ನಡೆಸಲಾಯಿತು. ಸರ್ಕಾರದ ಇಲಾಖೆಗಳಲ್ಲಿ ಈ ಅಭಿಯಾನದ ಅದ್ಭುತ ಪರಿಣಾಮ ಕಂಡುಬಂದಿರುವುದು ತಿಳಿದು ನಿಮಗೆ ಸಂತೋಷವಾಗಬಹುದು. ಸ್ವಚ್ಛಗೊಳಿಸಿದ ಕಾರಣದಿಂದಾಗಿ ಕಚೇರಿಗಳಲ್ಲಿ ಸಾಕಷ್ಟು ಸ್ಥಳಾವಕಾಶವಾಗಿದೆ. ಇದರಿಂದಾಗಿ ಕಚೇರಿಗಳಲ್ಲಿ ಕೆಲಸ ಮಾಡುವವರಲ್ಲಿ ಒಂದು ಮಾಲೀಕತ್ವದ ಭಾವನೆ ಕೂಡಾ ಮೂಡಿದೆ. ತಾವು ಕೆಲಸ ಮಾಡುವ ಸ್ಥಳವನ್ನು ಸ್ವಚ್ಛವಾಗಿ ಇರಿಸಿಕೊಳ್ಳುವ ಅರಿವು ಅವರಲ್ಲಿ ಮೂಡಿದೆ.

ಸ್ನೇಹಿತರೆ, ಎಲ್ಲಿ ಸ್ವಚ್ಛತೆ ಇರುತ್ತದೆಯೋ ಅಲ್ಲಿ ಲಕ್ಷ್ಮಿ ನೆಲೆಸಿರುತ್ತಾಳೆಂದು ಹಿರಿಯರು ಹೇಳುವುದನ್ನು ನೀವು ಆಗಾಗ್ಗೆ ಕೇಳಿಸಿಕೊಂಡಿರಬಹುದು.  ನಮ್ಮಲ್ಲಿ ಕಸದಿಂದ ರಸ ಎಂಬ ವಿಷಯ ಬಹಳ ಹಳೆಯದ್ದು. ದೇಶದ ಅನೇಕ ಭಾಗಗಳಲ್ಲಿ ಯುವಜನತೆ ಬೇಡವೆಂದು ಬಿಸಾಡಿದ ವಸ್ತುಗಳನ್ನು ಉಪಯೋಗಿಸಿ ಕಸದಿಂದ ರಸ ಮಾಡುತ್ತಿದ್ದಾರೆ. ವಿವಿಧ ಆವಿಷ್ಕಾರಗಳನ್ನು ಮಾಡುತ್ತಿದ್ದಾರೆ. ಇದರಿಂದ ಅವರು ಹಣ ಗಳಿಸುತ್ತಿದ್ದಾರೆ, ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತಿದ್ದಾರೆ. ಈ ಯುವಜನತೆ ತಮ್ಮ ಪ್ರಯತ್ನಗಳಿಂದ ಸುಸ್ಥಿರ ಜೀವನಶೈಲಿಗೆ ಕೂಡಾ ಉತ್ತೇಜನ ನೀಡುತ್ತಿದ್ದಾರೆ. ಮುಂಬೈನ ಇಬ್ಬರು ಹೆಣ್ಣುಮಕ್ಕಳ ಇಂತಹ ಪ್ರಯತ್ನ, ನಿಜಕ್ಕೂ ಬಹಳ ಪ್ರೇರಣಾದಾಯಕವಾಗಿದೆ. ಅಕ್ಷರಾ ಮತ್ತು ಪ್ರಕೃತಿ ಎಂಬ ಹೆಸರಿನ ಈ ಇಬ್ಬರು ಹೆಣ್ಣುಮಕ್ಕಳು, ಕತ್ತರಿಸಿ ಎಸೆದ ಬಟ್ಟೆಯ ಚೂರುಗಳಿಂದ ಫ್ಯಾಶನ್ ವಸ್ತುಗಳನ್ನು ತಯಾರಿಸುತ್ತಿದ್ದಾರೆ. ಬಟ್ಟೆಗಳನ್ನು ಹೊಲಿದು ಸಿದ್ಧಪಡಿಸುವಾಗ ಕತ್ತರಿಸಿದ ಕೆಲವು ಚೂರುಗಳನ್ನು ಎಸೆಯಲಾಗುತ್ತದೆಂದು ನಿಮಗೆ ತಿಳಿದಿದೆ. ಅಕ್ಷರಾ ಮತ್ತು ಪ್ರಕೃತಿಯ ತಂಡ ಅದೇ ಕತ್ತರಿಸಿ ಎಸೆಯಲಾದ ಬಟ್ಟೆಯ ತುಂಡುಗಳನ್ನು Fashion ಉತ್ಪನ್ನವಾಗಿ ಪರಿವರ್ತಿಸುತ್ತದೆ. ಈ ಬಟ್ಟೆಯ ತುಂಡುಗಳಿಂದ ತಯಾರಿಸಲಾದ ಟೋಪಿಗಳು, ಚೀಲಗಳು ಆಗಿಂದಾಗಲೇ ಮಾರಾಟವೂ ಆಗುತ್ತಿವೆ.

ಸ್ನೇಹಿತರೇ, ಸ್ವಚ್ಛತೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ಕೂಡಾ ಉತ್ತಮ ಉಪಕ್ರಮ ನಡೆಯುತ್ತಿದೆ. ಇಲ್ಲಿ ಕೆಲವರು ಪ್ರತಿದಿನ ಬೆಳಿಗ್ಗೆ ಮುಂಜಾನೆಯ ನಡಿಗೆಗಾಗಿ ಹೋಗುತ್ತಾರೆ ಮತ್ತು ಗಂಗೆಯ ತಟದಲ್ಲಿ ಹರಡಿರುವ ಪ್ಲಾಸ್ಟಿಕ್ ಮತ್ತು ಇತರ ತ್ಯಾಜ್ಯ ವಸ್ತುಗಳನ್ನು ತೆಗೆದುಹಾಕುತ್ತಾರೆ. ಈ ಗುಂಪಿಗೆ ‘Kanpur Ploggers Group’ ಎಂದು ಹೆಸರಿಸಲಾಗಿದೆ. ಈ ಅಭಿಯಾನವನ್ನು ಕೆಲವು ಸ್ನೇಹಿತರು ಒಂದುಗೂಡಿ ಆರಂಭಿಸಿದರು. ಕ್ರಮೇಣ ಇದು ಸಾರ್ವಜನಿಕ ಸಹಭಾಗಿತ್ವದ ದೊಡ್ಡ ಅಭಿಯಾನವಾಗಿಬಿಟ್ಟಿತು. ನಗರದ ಅನೇಕರು ಇದರೊಂದಿಗೆ ಕೈಜೋಡಿಸಿದರು. ಇದರ ಸದಸ್ಯರು ಈಗ ಅಂಗಡಿಗಳು ಮತ್ತು ಮನೆಗಳಿಂದ ಕೂಡಾ ತ್ಯಾಜ್ಯ ಸಂಗ್ರಹಿಸಲು ಆರಂಭಿಸಿದ್ದಾರೆ. ಈ ತ್ಯಾಜ್ಯ ವಸ್ತುಗಳಿಂದ ರೀಸೈಕಲ್ ಘಟಕದಲ್ಲಿ ಟ್ರೀ ಗಾರ್ಡ್ ತಯಾರಿಸಲಾಗುತ್ತದೆ ಅಂದರೆ ಈ ಗುಂಪಿನ ಜನರು ತ್ಯಾಜ್ಯದಿಂದ ತಯಾರಿಸಲಾದ ಟ್ರೀ ಗಾರ್ಡ್ ನಿಂದ ಗಿಡಗಳನ್ನು ಕೂಡಾ ರಕ್ಷಿಸುತ್ತಾರೆ.

ಸ್ನೇಹಿತರೆ, ಸಣ್ಣ ಸಣ್ಣ ಪ್ರಯತ್ನಗಳಿಂದ ಕೂಡಾ ಎಷ್ಟು ದೊಡ್ಡ ಯಶಸ್ಸು ದೊರೆಯುತ್ತದೆ ಎನ್ನುವುದಕ್ಕೆ ಅಸ್ಸಾಂನ ಇತಿಶಾ ಕೂಡಾ ಒಂದು ಉದಾಹರಣೆ. ಇತಿಶಾ ಅವರ ಶಿಕ್ಷಣ ದೆಹಲಿ ಮತ್ತು ಪುಣೆಯಲ್ಲಿ ನಡೆಯಿತು. ಇತಿಶಾ ಕಾರ್ಪೋರೇಟ್ ಜಗತ್ತಿನ ಥಳುಕು ಬಿಟ್ಟು ಅರುಣಾಚಲದ ಸಾಂಗತಿ ಕಣಿವೆಯನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿಕೊಂಡಿದ್ದಾರೆ. ಪ್ರವಾಸಿಗರಿಂದಾಗಿ ಅಲ್ಲಿ ಬಹಳಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹವಾಗುತ್ತಿತ್ತು. ಒಂದೊಮ್ಮೆ ಸ್ವಚ್ಛವಾಗಿದ್ದ ಅಲ್ಲಿನ ನದಿಯು ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಕಲುಷಿತವಾಗಿಬಿಟ್ಟಿತ್ತು. ಇದನ್ನು ಸ್ವಚ್ಛಗೊಳಿಸುವುದಕ್ಕಾಗಿ ಇತಿಶಾ ಅವರು ಸ್ಥಳೀಯರೊಂದಿಗೆ ಸೇರಿ ಕೆಲಸ ಮಾಡುತ್ತಿದ್ದಾರೆ. ಅವರ ಗುಂಪಿನ ಸದಸ್ಯರು ಅಲ್ಲಿಗೆ ಆಗಮಿಸುವ ಪ್ರವಾಸಿಗರಿಗೆ ಜಾಗರೂಕತೆ ಮೂಡಿಸುತ್ತಾರೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸುವುದಕ್ಕಾಗಿ ಸಂಪೂರ್ಣ ಕಣಿವೆಯಲ್ಲಿ ಬಿದಿರಿನಿಂದ ತಯಾರಿಸಿದ ಕಸದ ಬುಟ್ಟಿಗಳನ್ನು ಇರಿಸುತ್ತಾರೆ.

ಸ್ನೇಹಿತರೇ, ಈ ಪ್ರಯತ್ನಗಳಿಂದ ಭಾರತದ ಸ್ವಚ್ಛತಾ ಅಭಿಯಾನಕ್ಕೆ ವೇಗ ದೊರೆಯುತ್ತದೆ. ಇದು ನಿರಂತರವಾಗಿ ಸಾಗುತ್ತಲೇ ಇರುವ ಅಭಿಯಾನವಾಗಿದೆ. ನಿಮ್ಮ ಸುತ್ತಮುತ್ತ ಕೂಡಾ ಇಂತಹ ಪ್ರಯತ್ನಗಳು ಖಂಡಿತವಾಗಿಯೂ ನಡೆಯುತ್ತಿರಬಹುದು. ಅಂತಹ ಪ್ರಯತ್ನಗಳ ಬಗ್ಗೆ ನೀವು ನನಗೆ ಖಂಡಿತವಾಗಿಯೂ ಬರೆದು ತಿಳಿಸುತ್ತಿರಿ.

ಸ್ನೇಹಿತರೇ, ಮನದ ಮಾತಿನ ಈ ಸಂಚಿಕೆಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ. ನನಗೆ ಇಡೀ ತಿಂಗಳು ನಿಮ್ಮ ಪ್ರತಿಕ್ರಿಯೆಗಳ, ಕಾಗದಗಳ ಮತ್ತು ಸಲಹೆ ಸೂಚನೆಗಳ ನಿರೀಕ್ಷೆ ಇದ್ದೇ ಇರುತ್ತದೆ. ಪ್ರತಿ ತಿಂಗಳು ಬರುವ ನಿಮ್ಮ ಸಂದೇಶಗಳು ನನಗೆ ಮತ್ತಷ್ಟು ಉತ್ತಮವಾಗಿ ಕೆಲಸ ಮಾಡುವ ಪ್ರೇರಣೆ ನೀಡುತ್ತವೆ. ಮನ್ ಕಿ ಬಾತ್ ನ ಮತ್ತೊಂದು ಸಂಚಿಕೆಯಲ್ಲಿ ದೇಶ ಮತ್ತು ದೇಶವಾಸಿಗಳ ಹೊಸ ಯಶೋಗಾಥೆಗಳೊಂದಿಗೆ, ಮುಂದಿನ ತಿಂಗಳು ನಾವು ಪುನಃ ಭೇಟಿಯಾಗೋಣ. ಅಲ್ಲಿಯವರೆಗೆ ಎಲ್ಲಾ ದೇಶವಾಸಿಗಳಿಗೆ ನನ್ನ ಅನಂತಾನಂತ ಶುಭ ಹಾರೈಕೆಗಳು. ಅನೇಕಾನೇಕ ಧನ್ಯವಾದ.

 

 

 

 

 

 

 

 

 

 

  • Jayanta Kumar Bhadra February 10, 2025

    om 🕉 🕉 🕉 🕉 namaste namaste namaste
  • parmar hitesh January 31, 2025

    jay shree ram🚩🙏
  • Yash Wilankar January 30, 2025

    Namo 🙏
  • Vivek Kumar Gupta January 22, 2025

    नमो ..🙏🙏🙏🙏🙏
  • Vivek Kumar Gupta January 22, 2025

    नमो ..................................🙏🙏🙏🙏🙏
  • Dheeraj Thakur January 15, 2025

    जय श्री राम जय श्री राम
  • Dheeraj Thakur January 15, 2025

    जय श्री राम
  • Jayanta Kumar Bhadra January 14, 2025

    om Shanti 🕉
  • krishangopal sharma Bjp January 02, 2025

    नमो नमो 🙏 जय भाजपा 🙏🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷
  • krishangopal sharma Bjp January 02, 2025

    नमो नमो 🙏 जय भाजपा 🙏🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷🌷
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 28 lakh companies registered in India: Govt data

Media Coverage

Over 28 lakh companies registered in India: Govt data
NM on the go

Nm on the go

Always be the first to hear from the PM. Get the App Now!
...
Prime Minister pays homage to Chhatrapati Shivaji Maharaj on his Jayanti
February 19, 2025

The Prime Minister, Shri Narendra Modi has paid homage to Chhatrapati Shivaji Maharaj on his Jayanti.

Shri Modi wrote on X;

“I pay homage to Chhatrapati Shivaji Maharaj on his Jayanti.

His valour and visionary leadership laid the foundation for Swarajya, inspiring generations to uphold the values of courage and justice. He inspires us in building a strong, self-reliant and prosperous India.”

“छत्रपती शिवाजी महाराज यांच्या जयंतीनिमित्त मी त्यांना अभिवादन करतो.

त्यांच्या पराक्रमाने आणि दूरदर्शी नेतृत्वाने स्वराज्याची पायाभरणी केली, ज्यामुळे अनेक पिढ्यांना धैर्य आणि न्यायाची मूल्ये जपण्याची प्रेरणा मिळाली. ते आपल्याला एक बलशाली, आत्मनिर्भर आणि समृद्ध भारत घडवण्यासाठी प्रेरणा देत आहेत.”