ಪ್ರಧಾನಮಂತ್ರಿ ಅವರಿಗೆ ಸೆರಾವೀಕ್ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿ ಪ್ರದಾನ
ಭಾರತೀಯ ಸಂಪ್ರದಾಯ ಮತ್ತು ಜನತೆಗೆ ಪ್ರಶಸ್ತಿ ಸಮರ್ಪಣೆ
ಇದುವರೆಗಿನ ಶ್ರೇಷ್ಠ ಪರಿಸರ ಚಾಂಪಿಯನ್ ಗಳಲ್ಲಿ ಮಹಾತ್ಮಾಗಾಂಧಿ ಒಬ್ಬರು - ಪ್ರಧಾನಮಂತ್ರಿ
ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಅತ್ಯಂತ ಶಕ್ತಿಯುತ ಮಾರ್ಗವೆಂದರೆ ಅದು ವರ್ತನೆಗಳ ಬದಲಾವಣೆ – ಪ್ರಧಾನಮಂತ್ರಿ

ಈಗ ಪರಿಸರ ದೃಷ್ಟಿಯಿಂದ ಮತ್ತು ತಾರ್ಕಿಕವಾಗಿ ಯೋಚಿಸುವ ಸಮಯ: ಇದೆಲ್ಲದರ ನಂತರವೂ ನನ್ನ ಅಥವಾ ನಿಮ್ಮ ಬಗ್ಗೆ ಅಲ್ಲ. ಇದು ನಮ್ಮ ಗ್ರಹದ ಭವಿಷ್ಯದ ಬಗ್ಗೆ : ಪ್ರಧಾನಮಂತ್ರ 

ಪರಿಚಯಿಸಿದ್ದಕ್ಕಾಗಿ ಡಾಕ್ಟರ್ ದಾನ್ ಯೆರ್ಗಿನ್ ನಿಮಗೆ ಧನ್ಯವಾದ. ಇಲ್ಲಿರುವ ಗೌರವಾನ್ವಿತ ಅತಿಥಿಗಳೆಲ್ಲರಿಗೂ ಧನ್ಯವಾದ.

ನಮಸ್ಕಾರ ! 

ನಾನು ಅತ್ಯಂತ ವಿನೀತನಾಗಿ ಸೆರಾ ಸಪ್ತಾಹ ಜಾಗತಿಕ ಇಂಧನ ಮತ್ತು ಪರಿಸರ ನಾಯಕತ್ವ ಪ್ರಶಸ್ತಿಯನ್ನು ಸ್ವೀಕರಿಸುತ್ತಿದ್ದೇನೆ. ನಾನು ಈ ಪ್ರಶಸ್ತಿಯನ್ನು ನಮ್ಮ ಭಾರತದ ಜನರಿಗೆ ಸಮರ್ಪಿಸುತ್ತೇನೆ. ಪರಿಸರಕ್ಕೆ ಸಂಬಂಧಿಸಿ ರಕ್ಷಣೆಯ ಕೆಲಸ ಮಾಡುವ ವಿಷಯ ಬಂದಾಗ ನಮಗೆ ದಾರಿ ತೋರಿಸಿದ ನಮ್ಮ ನೆಲದ  ಖ್ಯಾತ ಪರಂಪರೆಗೆ ಈ ಪ್ರಶಸ್ತಿಯನ್ನು ಅರ್ಪಿಸುತ್ತೇನೆ.

ಸ್ನೇಹಿತರೇ,

ಈ ಪ್ರಶಸ್ತಿಯು ಪರಿಸರ ನಾಯಕತ್ವವನ್ನು ಗುರುತಿಸುತ್ತದೆ. ನಾಯಕತ್ವಕ್ಕೆ ಸಂಬಂಧಿಸಿದಂತೆ ಮಾತನಾಡುವಾಗ, ಸಾಮಾನ್ಯವಾಗಿ ಹೇಳಲಾಗುತ್ತಿದೆ ಏನೆಂದರೆ ಕೃತಿಯ ಮೂಲಕ ಮಾಡಿ ತೋರಿಸುವುದು ಉತ್ತಮ ಎಂದು. ಪರಿಸರದ ರಕ್ಷಣೆಯ ವಿಷಯ ಬಂದಾಗ, ಅಲ್ಲಿ ಸಂಶಯವೇ ಬೇಡ, ಭಾರತದ ಜನತೆ ನಾಯಕತ್ವ ವಹಿಸುತ್ತಾರೆ. ಇದು ಶತಮಾನಗಳಿಂದಲೂ ನಡೆದುಕೊಂಡು ಬಂದಿದೆ. ನಮ್ಮ ಸಂಸ್ಕೃತಿಯಲ್ಲಿ, ಪ್ರಕೃತಿಯಲ್ಲಿ ಮತ್ತು ದೈವಿಕತೆಯಲ್ಲಿ ಪರಸ್ಪರ ಅವಿನಾಭಾವ ಸಂಬಂಧವಿದೆ. ನಮ್ಮ ದೇವರು ಮತ್ತು ದೇವತೆಗಳು ಯಾವುದಾದರೊಂದು ಮರ ಅಥವಾ ಪ್ರಾಣಿಯ ಜೊತೆಯಲ್ಲಿ ಗುರುತಿಸಲ್ಪಟ್ಟಿರುತ್ತಾರೆ. ಈ ಮರಗಳು ಮತ್ತು ಪ್ರಾಣಿಗಳು ಪವಿತ್ರ ಎಂದು ಪರಿಗಣಿಸಲ್ಪಡುತ್ತವೆ. ನೀವು ಯಾವುದೇ ರಾಜ್ಯದ ಸಾಹಿತ್ಯ ತೆಗೆದು ನೋಡಿ, ಯಾವುದೇ ಭಾಷೆಯಲ್ಲಿರುವುದನ್ನು ಬೇಕಿದ್ದರೂ ನೋಡಿ. ನಿಮಗೆ ಜನತೆ ಮತ್ತು ನಿಸರ್ಗದ ಜೊತೆ ನಿಕಟ ಸಂಬಂಧ ಇರುವುದಕ್ಕೆ ಹಲವಾರು ಉದಾಹರಣೆಗಳು ದೊರೆಯುತ್ತವೆ.

ಸ್ನೇಹಿತರೇ,

ಮಹಾತ್ಮಾ ಗಾಂಧಿ ಅವರಲ್ಲಿ ನಾವು ಬಹಳ ದೊಡ್ಡ ಪರಿಸರವಾದಿಯನ್ನು ಕಾಣಬಹುದು. ಮನುಕುಲವು ಅವರು ತೋರಿದ ದಾರಿಯನ್ನು ಅನುಸರಿಸಿದರೆ, ನಾವಿಂದು ಕಾಣುತ್ತಿರುವ  ಅನೇಕ ಸಮಸ್ಯೆಗಳನ್ನು ಎದುರಿಸುವ ಪರಿಸ್ಥಿತಿ ಬರುತ್ತಿರಲಿಲ್ಲ. ನಾನು,  ನೀವೆಲ್ಲರೂ ಗುಜರಾತಿನ ಕರಾವಳಿ ನಗರಿ ಪೋರಬಂದರಿನಲ್ಲಿರುವ ಮಹಾತ್ಮಾ ಗಾಂಧಿ ಅವರ ಮನೆಗೆ  ಭೇಟಿ ನೀಡಬೇಕು ಎಂದು ಮನವಿ ಮಾಡುತ್ತೇನೆ. ಅವರ ಮನೆಯ ಹತ್ತಿರವೇ, ಜಲ ಸಂರಕ್ಷಣೆಗೆ ಸಂಬಂಧಿಸಿದಂತೆ ನಿಮಗೆ ಪ್ರಾಯೋಗಿಕ ಪಾಠ ದೊರೆಯುತ್ತದೆ. ಅಲ್ಲಿ 200 ವರ್ಷಗಳ ಹಿಂದೆ ರಚಿಸಲಾದ ಭೂಗತ ಟ್ಯಾಂಕುಗಳಿವೆ. ಅವುಗಳನ್ನು ಮಳೆ ನೀರು ಹಿಡಿದಿಡಲು ನಿರ್ಮಾಣ ಮಾಡಲಾಗಿತ್ತು.

ಸ್ನೇಹಿತರೇ,

ವಾತಾವರಣ ಬದಲಾವಣೆ ಮತ್ತು ಪ್ರಾಕೃತಿಕ ವಿಕೋಪಗಳು ಇಂದು ಬಹು ದೊಡ್ಡ ಸವಾಲುಗಳಾಗಿವೆ. ಇವೆರಡೂ ಪರಸ್ಪರ ಸಂಬಂಧಿಯಾಗಿವೆ. ಅವುಗಳ ವಿರುದ್ಧ ಹೋರಾಡಲು ಎರಡು ದಾರಿಗಳಿವೆ. ಒಂದನೆಯದ್ದು ನೀತಿಗಳು, ನಿಯಮಗಳು ಮತ್ತು ಆದೇಶಗಳ ಮೂಲಕ ಇರುವ ದಾರಿ. ಇವುಗಳು ತಮ್ಮದೇ ಆದ ಮಹತ್ವ ಹೊಂದಿವೆ ಎಂಬುದರಲ್ಲಿ ಸಂಶಯ ಇಲ್ಲ. ನಾನು ನಿಮ್ಮೊಂದಿಗೆ ಕೆಲವು ಉದಾಹರಣೆಗಳನ್ನು ಹಂಚಿಕೊಳ್ಳಲು ಇಚ್ಚಿಸುತ್ತೇನೆ. ಭಾರತದಲ್ಲಿ ಪಳೆಯುಳಿಕೆಯೇತರ ಇಂಧನ  ಮೂಲಗಳ ಮೂಲಕ ವಿದ್ಯುತ್ ಉತ್ಪಾದನೆಯ ಸ್ಥಾಪಿತ ಸಾಮರ್ಥ್ಯದ ಪಾಲು ಈಗ ಶೇ.38 ರಷ್ಟಾಗಿದೆ. ನಾವು 2020ರ ಏಪ್ರಿಲ್ ತಿಂಗಳಿಂದ ಭಾರತ್ -6 ಹೊರಸೂಸುವಿಕೆ ಮಾನದಂಡಗಳನ್ನು ಜಾರಿಗೊಳಿಸಿದ್ದೇವೆ. ಇದು ಯುರೋ-6 ಇಂಧನಕ್ಕೆ ಸಮನಾದುದಾಗಿದೆ. ಭಾರತವು ನೈಸರ್ಗಿಕ ಅನಿಲದ ಪಾಲನ್ನು 2030ರ ವೇಳೆಗೆ ಈಗಿರುವ 6% ನಿಂದ 15% ಗೇರಿಸಲು ನಿರ್ಧರಿಸಿದೆ. ಎಲ್.ಎನ್.ಜಿ.ಯನ್ನು ಇಂಧನವಾಗಿ ಪ್ರಚುರಪಡಿಸಲಾಗುತ್ತಿದೆ. ನಾವು ಜಲಜನಕವನ್ನು ಇಂಧನವಾಗಿ ಬಳಸುವುದಕ್ಕೆ ಸಂಬಂಧಿಸಿ ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಕಳೆದ ತಿಂಗಳಷ್ಟೇ ಆರಂಭಿಸಿದ್ದೇವೆ. ಇತ್ತೀಚೆಗೆ ಪಿ.ಎಂ. ಕುಸುಮ್ ಎಂಬ ಯೋಜನೆಯನ್ನು ಘೋಷಿಸಲಾಗಿದೆ. ಇದು ಸೌರ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿ ವಿಕೇಂದ್ರಿತ ಮಾದರಿಯನ್ನು ಪ್ರಚುರಪಡಿಸಲಿದೆ. ಆದರೆ ಆಲ್ಲಿ ನೀತಿಗಳಿಗೆ ಹೊರತಾದ, ಕಾನೂನುಗಳು ಮತ್ತು ಆದೇಶಗಳನ್ನು ಮೀರಿದ ಕೆಲವು ಸಂಗತಿಗಳಿವೆ. ವಾತಾವರಣ ಬದಲಾವಣೆ ನಿಟ್ಟಿನಲ್ಲಿ ಹೋರಾಟಕ್ಕೆ ಬಹಳ ಶಕ್ತಿಶಾಲಿ ದಾರಿ ಎಂದರೆ ವರ್ತನೆ ಬದಲಾವಣೆ. ಇಲ್ಲೊಂದು ಬಹಳ ಪ್ರಖ್ಯಾತವಾದ ಕಥೆ ಇದೆ, ನಿಮ್ಮಲ್ಲಿ ಬಹಳಷ್ಟು ಮಂದಿ ಕೇಳಿರಬಹುದು. ಸಣ್ಣ ಮಗುವಿಗೆ ಹರಿದ ಮ್ಯಾಪೊಂದನ್ನು ಕೊಡಲಾಯಿತು. ಆ ಮಗುವಿಗೆ ಅದನ್ನು ಮಾಡಲಾಗದು ಎಂಬ ಭಾವನೆಯಲ್ಲಿ ಆ ಹರಿದ ಮ್ಯಾಪನ್ನು ಜೋಡಿಸಲು ತಿಳಿಸಲಾಯಿತು. ಆದರೆ ಆ ಮಗು ಅದನ್ನು ಯಶಸ್ವಿಯಾಗಿ ಜೋಡಿಸಿತು. ಅದನ್ನು ಮಗು ಹೇಗೆ ಮಾಡಿತು ಎಂದು ಕೇಳಿದಾಗ, ಆ ಮಗು ಹೇಳಿತು ಆ ಹರಿದ ಜಗತ್ತಿನ ನಕಾಶೆಯ ಹಿಂಭಾಗದಲ್ಲಿ ಮನುಷ್ಯನ ಚಿತ್ರವಿತ್ತು. ಆ ಮಗು ಮನುಷ್ಯನ ಚಿತ್ರವನ್ನು ಜೋಡಿಸಿತು. ಮತ್ತು ಅದರಿಂದಾಗಿ ಜಗತ್ತಿನ ನಕಾಶೆ ಕೂಡಾ ಜೋಡಣೆಯಾಯಿತು. ಸಂದೇಶ ಬಹಳ ಸ್ಪಷ್ಟ- ನಮ್ಮನ್ನು ನಾವು ಸರಿಪಡಿಸಿಕೊಳ್ಳೋಣ ಮತ್ತು ಆಗ ಜಗತ್ತು ಬಹಳ ಉತ್ತಮ ಸ್ಥಳವಾಗುತ್ತದೆ.

ಸ್ನೇಹಿತರೇ,

ಈ ವರ್ತನೆ ಬದಲಾವಣೆಯ ಸ್ಪೂರ್ತಿ ನಮ್ಮ ಸಾಂಪ್ರದಾಯಿಕ ಅಭ್ಯಾಸಗಳ ಪ್ರಮುಖ ಭಾಗ, ಅದು ಅನುಭೂತಿಯೊಂದಿಗೆ ಬಳಕೆಯನ್ನು ಮಾಡುವಂತೆ ಪ್ರೇರೇಪಿಸುತ್ತದೆ. ಇಚ್ಛಾನುಸಾರ ಬಿಸಾಡುವ ಸಂಸ್ಕೃತಿ ನಮ್ಮದಲ್ಲ. ನಮ್ಮ ಕೃಷಿ ವಿಧಾನಗಳತ್ತ ಅಥವಾ ನಮ್ಮ ಆಹಾರದತ್ತ ನೋಡಿ. ನಮ್ಮ ಸಂಚಾರದ ಮಾದರಿಗಳನ್ನು ಅಥವಾ ಇಂಧನ ಬಳಕೆಯ ಮಾದರಿಗಳನ್ನು ನೋಡಿ. ನಾನು ನನ್ನ ರೈತರ ಬಗೆಗೆ ಹೆಮ್ಮೆಪಡುತ್ತೇನೆ. ಅವರು ನಿರಂತರವಾಗಿ ನೀರಾವರಿಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸುತ್ತಿದ್ದಾರೆ. ಮಣ್ಣಿನ ಆರೋಗ್ಯ ಸುಧಾರಣೆಯ ಬಗ್ಗೆ ಜಾಗೃತಿ ಹೆಚ್ಚುತ್ತಿದೆ ಮತ್ತು ಕೀಟನಾಶಕಗಳ ಬಳಕೆ ಕಡಿಮೆಯಾಗುತ್ತಿದೆ. ಇಂದು ಜಗತ್ತು ದೇಹ ಕ್ಷಮತೆ ಮತ್ತು ಕ್ಷೇಮದ ಬಗ್ಗೆ ಗಮನ ಕೊಡುತ್ತಿದೆ. ಆರೋಗ್ಯಪೂರ್ಣ ಮತ್ತು ಸಾವಯವ ಆಹಾರಕ್ಕೆ ಬೇಡಿಕೆ ಸತತ ಹೆಚ್ಚುತ್ತಿದೆ. ನಮ್ಮ ಸಾಂಬಾರು ಪದಾರ್ಥಗಳು, ನಮ್ಮ ಆಯುರ್ವೇದ ಉತ್ಪನ್ನಗಳು ಮತ್ತು ಇತರ ಹಲವು ಉತ್ಪನ್ನಗಳ ಮೂಲಕ ಭಾರತ ಈ ಜಾಗತಿಕ ಪರಿವರ್ತನೆಯಲ್ಲಿ ಮುಂಚೂಣಿಯಲ್ಲಿರಬಹುದು. ಅದೇ ರೀತಿ ಪರಿಸರ ಸ್ನೇಹಿ ಸಂಚಾರವನ್ನು ಗಮನಿಸಿ. ಭಾರತದಲ್ಲಿ 27 ನಗರಗಳು ಮತ್ತು ಪಟ್ಟಣಗಳಲ್ಲಿ ನಾವು ಮೆಟ್ರೋ ಜಾಲ ನಿರ್ಮಾಣದಲ್ಲಿ ತೊಡಗಿಕೊಂಡಿದ್ದೇವೆ ಎಂದು ತಿಳಿದರೆ ತಾವು ಸಂತೋಷಪಡುತ್ತೀರಿ.

ಸ್ನೇಹಿತರೇ,

ಬೃಹತ್ ಪ್ರಮಾಣದ ವರ್ತನೆ ಬದಲಾವಣೆಗೆ ನಾವು ನವೀನ, ಕೈಗೆಟಕುವ ದರದಲ್ಲಿ ಲಭ್ಯವಾಗುವ ಮತ್ತು ಸಾರ್ವಜನಿಕ ಸಹಭಾಗಿತ್ವದ ಪರಿಹಾರಗಳನ್ನು ಒದಗಿಸಬೇಕಾದ ಅಗತ್ಯವಿದೆ. ನಾನು ನಿಮಗೆ ಒಂದು ಉದಾಹರಣೆ ಕೊಡುತ್ತೇನೆ. ಭಾರತದ ಜನರು ಹಿಂದೆಂದೂ ಇಲ್ಲದ ಪ್ರಮಾಣದಲ್ಲಿ  ಎಲ್.ಇ.ಡಿ. ಬಲ್ಬುಗಳನ್ನು ಬಳಸಿಕೊಳ್ಳಲು ನಿರ್ಧರಿಸಿದರು. 2021ರ ಮಾರ್ಚ್ ಮೊದಲನೇ ದಿನದವರೆಗೆ ಸುಮಾರು 37 ಮಿಲಿಯನ್ ಎಲ್.ಇ.ಡಿ. ಬಲ್ಬುಗಳನ್ನು ಬಳಸಲಾಗಿದೆ. ಇದರಿಂದ ವೆಚ್ಚ ಮತ್ತು ವಿದ್ಯುತ್ ಕೂಡಾ ಉಳಿತಾಯವಾಗಿದೆ. ವರ್ಷವೊಂದಕ್ಕೆ 38 ಮಿಲಿಯನ್ ಟನ್ ಕಾರ್ಬನ್ ಡೈಯಾಕ್ಸೈಡ್ ಪ್ರಮಾಣ ಕಡಿಮೆಯಾಗಿದೆ. ಅಲ್ಲಿ ಭಾರತದ ಇನ್ನೊಂದು ಉದಾಹರಣೆ ’ಗಿವ್ ಇಟ್ ಅಪ್’ನಲ್ಲಿದೆ. ಬಡವರಿಗೆ ಮತ್ತು ಬಹಳಷ್ಟು ಅಗತ್ಯ ಇರುವವರಿಗಾಗಿ ಪ್ರಯೋಜನಗಳನ್ನು ಒದಗಿಸುವುದಕ್ಕಾಗಿ ಎಲ್.ಪಿ.ಜಿ. ತೊರೆಯುವಂತೆ ಭಾರತದ ಜನರಲ್ಲಿ ಸಾಮಾನ್ಯ ಕೋರಿಕೆಯೊಂದನ್ನು ಮಾಡಲಾಯಿತು. ಭಾರತದ ಉದ್ದಗಲಕ್ಕೂ ಹಲವಾರು ಜನರು ಅವರ ಸಹಾಯಧನವನ್ನು ತಾವಾಗಿಯೇ ಬಿಟ್ಟುಕೊಟ್ಟರು. ಇದು ಭಾರತದ  ಲಕ್ಷಾಂತರ ಮನೆಗಳಲ್ಲಿ ಹೊಗೆ ರಹಿತ ಅಡುಗೆ ಮನೆಗಳನ್ನು ರೂಪಿಸುವುದರ ನಿಟ್ಟಿನಲ್ಲಿ ಪ್ರಮುಖ ಪಾತ್ರವಹಿಸಿತು. 2014ರಲ್ಲಿ ಎಲ್.ಪಿ.ಜಿ. ವ್ಯಾಪ್ತಿ 55% ಇದ್ದದ್ದು ಇದರಿಂದಾಗಿ ಇಂದು 99.6% ಗೇರಿದೆ. ಇದರಿಂದ ಮಹಿಳೆಯರಿಗೆ ಬಹಳ ಪ್ರಯೋಜನವಾಗಿದೆ. ಈ ದಿನಗಳಲ್ಲಿ ನಾನು ಮತ್ತೊಂದು ಧನಾತ್ಮಕ ಬದಲಾವಣೆಯನ್ನು ಕಾಣುತ್ತಿದ್ದೇನೆ. ಭಾರತದಲ್ಲಿ ಕಸದಿಂದ ತ್ಯಾಜ್ಯ ಎಂಬುದು ಈಗ ಬಹಳ ಕೆಲಸ ಮಾಡುತ್ತಿದೆ. ವಿವಿಧ ವಲಯಗಳಲ್ಲಿ ವಿಶಿಷ್ಟ  ಮರುಬಳಕೆ ಸಂಸ್ಕರಣಾ ತಂತ್ರಜ್ಞಾನಗಳೊಂದಿಗೆ ನಮ್ಮ ಜನತೆ ಮುಂದುವರಿಯುತ್ತಿದ್ದಾರೆ. ಇದು  ವೃತ್ತಾಕಾರದ ಆರ್ಥಿಕತೆಗೆ ಉತ್ತೇಜನ ನೀಡುತ್ತಿದೆ. ಸುಸ್ಥಿರ ಪರ್ಯಾಯ ಪದ್ಧತಿ ಅಡಿಯಲ್ಲಿ ನಮ್ಮ ದೇಶವು ಕಸದಿಂದ ಸಂಪತ್ತು ಚಿಂತನೆಯನ್ನು ಉತ್ತೇಜಿಸುತ್ತದೆ. ಕೈಗೆಟಕುವ ದರದಲ್ಲಿ ಸಾರಿಗೆ ಉಪಕ್ರಮಗಳತ್ತ ಅದು ಸಾಗುತ್ತಿದೆ.

ಸ್ನೇಹಿತರೇ,

ಭಾರತಾದ್ಯಂತ ಇಥೆನಾಲ್ ಬಗ್ಗೆ ಒಲವು ಹೆಚ್ಚುತ್ತಿದೆ. ನಾವು ಪೆಟ್ರೋಲಿನಲ್ಲಿ 20 % ಇಥೆನಾಲ್ ಮಿಶ್ರಣ ಮಾಡುವ ಗುರಿ ಈ ಮೊದಲು 2030ಕ್ಕೆ ಸಾಧಿಸಬೇಕು ಎಂದು ನಿಗದಿಯಾಗಿತ್ತು. ಜನರ ಪ್ರತಿಕ್ರಿಯೆ ಆಧರಿಸಿ, ಅದನ್ನೀಗ 2025ರ ವೇಳೆಗೆ ಸಾಧಿಸಲು ತೀರ್ಮಾನಿಸಲಾಗಿದೆ.

ಸ್ನೇಹಿತರೇ,

ಕಳೆದ ಏಳು ವರ್ಷಗಳಲ್ಲಿ ಭಾರತದ ಅರಣ್ಯ ವ್ಯಾಪ್ತಿ ಗಮನಾರ್ಹ ರೀತಿಯಲ್ಲಿ ಹಿಗ್ಗಿದೆ ಎಂಬ ಸಂಗತಿ ತಮಗೆ ಸಂತೋಷ ತರಬಹುದು. ಸಿಂಹಗಳು, ಹುಲಿಗಳು, ಚಿರತೆಗಳು ಮತ್ತು ಜಲಪಕ್ಷಿಗಳ ಸಂಖ್ಯೆ ವೃದ್ಧಿಸಿದೆ.ಇವು  ಧನಾತ್ಮಕ ವರ್ತನೆ ಬದಲಾವಣೆಯ ಬಹಳ ದೊಡ್ಡ ಸೂಚನೆಗಳು. ಈ ಬದಲಾವಣೆಗಳು ಭಾರತವು ಪ್ಯಾರಿಸ್ ಒಪ್ಪಂದದ ಗುರಿಗಳನ್ನು ಅಂತಿಮ ಗಡುವಾದ 2030ಕ್ಕೇ ಮೊದಲೇ ಸಾಧಿಸುವುದಕ್ಕೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ.

ಸ್ನೇಹಿತರೇ

ಪರಿಸರ ಪರಿವರ್ತನೆಯ ಕುರಿತಾಗಿ ಭಾರತದ ಮುಂಗಾಣ್ಕೆ ಅಥವಾ ಚಿಂತನೆಯಲ್ಲಿ  ಸಮಾನ ಮನಸ್ಕ ದೇಶಗಳ ಜೊತೆಗೂಡಿ ಕೆಲಸ ಮಾಡುವುದೂ ಸೇರಿದೆ. ಈ ಭೂಗ್ರಹವನ್ನು ಉತ್ತಮಪಡಿಸುವ ನಿಟ್ಟಿನಲ್ಲಿ ಭಾರತವು ಎಷ್ಟು ಗಂಭೀರವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು  ಅಂತಾರಾಷ್ಟ್ರೀಯ ಸೌರ ಮಿತ್ರಕೂಟದ ಆರಂಭಿಕ ಯಶಸ್ಸು ತೋರಿಸಿಕೊಟ್ಟಿದೆ. ಭವಿಷ್ಯದಲ್ಲಿಯೂ ನಾವು ಇಂತಹ ಪ್ರಯತ್ನಗಳನ್ನು ಮಾಡುತ್ತಿರುತ್ತೇವೆ. ಇದು ಮಹಾತ್ಮಾ ಗಾಂಧಿ ಅವರ ವಿಶ್ವ ತತ್ವವನ್ನು ಅನುಸರಿಸಿರುತ್ತದೆ. ಈ ವಿಶ್ವಸ್ತದ ತಿರುಳು ಸಾಮೂಹಿಕ, ಅನುಭೂತಿ ಮತ್ತು ಜವಾಬ್ದಾರಿಗಳನ್ನು ಒಳಗೊಂಡಿರುತ್ತದೆ. ವಿಶ್ವಸ್ತ ಎಂದರೆ ಸಂಪನ್ಮೂಲಗಳನ್ನು ಜವಾಬ್ದಾರಿಯುತವಾಗಿ ಬಳಸುವುದು ಎಂಬರ್ಥವನ್ನೂ ಒಳಗೊಂಡಿದೆ. ಮಹಾತ್ಮಾ ಗಾಂಧಿ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ, ಅದನ್ನು ನಾನು ಉಲ್ಲೇಖಿಸುತ್ತೇನೆ “ ನಾವು ನಿಸರ್ಗದ ಕೊಡುಗೆಯನ್ನು ನಮ್ಮ ಇಚ್ಛಾನುಸಾರ ಬಳಸಬಹುದು, ಆದರೆ ಆಕೆಯ ಪುಸ್ತಕದಲ್ಲಿ ಮುಂಗಡ  ಮತ್ತು ಉಳಿಕೆ ಶಿಲ್ಕು ಸದಾ ಸಮಾನವಾಗಿರುತ್ತದೆ “.  ಪ್ರಕೃತಿಯು ಸರಳ ಬ್ಯಾಲೆನ್ಸ್ ಶೀಟನ್ನು ನಿರ್ವಹಿಸುತ್ತದೆ. ಲಭ್ಯ ಇರುವ ಯಾವುದನ್ನೇ ಆದರೂ ಬಳಸಬಹುದು ಅಥವಾ ಮುಂದಕ್ಕೆ ಕಾಪಿಡಬಹುದು. ನಾವು ಸಂಪನ್ಮೂಲಗಳನ್ನು ಅಧಿಕ ಪ್ರಮಾಣದಲ್ಲಿ ಬಳಸಿದರೆ ನಾವದನ್ನು ಇನ್ನೊಬ್ಬರಿಂದ ಕಸಿದುಕೊಂಡಂತೆ. ಇದೇ ರೀತಿಯಲ್ಲಿ ಭಾರತವು ವಾತಾವರಣ ಬದಲಾವಣೆಯ ವಿರುದ್ಧದ ಹೋರಾಟಕ್ಕೆ ಸಹಾಯ ಮಾಡಲು ವಾತಾವರಣ ನ್ಯಾಯದ ಬಗ್ಗೆ ಮಾತನಾಡುತ್ತಿದೆ.

ಸ್ನೇಹಿತರೇ,

ತರ್ಕಬದ್ಧವಾಗಿ ಮತ್ತು ಪರಿಸರದ ಬಗೆಗೆ ಕಾಳಜಿಯುಕ್ತವಾಗಿ ಚಿಂತಿಸಲು ಇದು ಸಕಾಲ. ಮೇಲಾಗಿ ಇದು ನನಗೆ ಅಥವಾ ನಿಮಗೆ ಮಾತ್ರ ಸಂಬಂಧಿಸಿದ್ದು ಎಂದು ಭಾವಿಸಬೇಕಿಲ್ಲ. ಇದು ನಮ್ಮ ಭೂಮಿಯ ಭವಿಷ್ಯಕ್ಕೆ ಅವಶ್ಯಕ. ನಾವು ಇದನ್ನು ಭವಿಷ್ಯದ ತಲೆಮಾರುಗಳಿಗೆ ಕಾಪಿಡಬೇಕಾಗಿದೆ. ನಾನು ಪ್ರಶಸ್ತಿಗಾಗಿ ಮತ್ತೊಮ್ಮೆ ನಿಮಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ.

ನಮಸ್ತೇ.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi