ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಫಿಟ್ ಇಂಡಿಯಾ ಅಭಿಯಾನದ ಮೊದಲನೇ ವಾರ್ಷಿಕೋತ್ಸವದ ಅಂಗವಾಗಿ ಇಂದು ವಯಸ್ಸಿಗನುಗುಣವಾಗಿ ದೈಹಿಕ ಕ್ಷಮತೆ ಕಾಯ್ದುಕೊಳ್ಳುವ ಕುರಿತಾದ ಮಾರ್ಗಸೂಚಿಗಳನ್ನು ವರ್ಚುಯಲ್ ಕಾನ್ಫರೆನ್ಸ್ ಮೂಲಕ ಇಂದು ಬಿಡುಗಡೆ ಮಾಡಿದರು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಹಲವು ಕ್ರೀಡಾ ವ್ಯಕ್ತಿಗಳು, ದೈಹಿಕ ಕ್ಷಮತಾ ತಜ್ಞರು ಮತ್ತು ಇತರರೊಂದಿಗೆ ಫಿಟ್ ಇಂಡಿಯಾ ಸಮಾಲೋಚನೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಂವಾದ ನಡೆಸಿದರು. ಈ ವರ್ಚುಯಲ್ ಸಂವಾದವನ್ನು ಸಾಮಾನ್ಯ ರೀತಿಯಲ್ಲಿ ಅನೌಪಚಾರಿಕವಾಗಿ ಆಯೋಜಿಸಲಾಗಿತ್ತು. ಅವರು ಪ್ರಧಾನಮಂತ್ರಿಯವರೊಂದಿಗೆ ತಮ್ಮ ಜೀವನಾನುಭವ ಮತ್ತು ಫಿಟ್ನೆಸ್ ಮಂತ್ರಗಳನ್ನು ಹಂಚಿಕೊಂಡರು.
ಜಾವ್ಲಿನ್ ಥ್ರೊ ಕ್ರೀಡೆಯಲ್ಲಿ ಪ್ಯಾರಾ ಒಲಿಂಪಿಕ್ ಚಿನ್ನದ ಪದಕ ವಿಜೇತ ದೇವೇಂದ್ರ ಜಜರಿಯಾ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ
ಹಲವು ವಿಶ್ವ ಪ್ಯಾರಾ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಭಾರತಕ್ಕೆ ಗೌರವವನ್ನು ತಂದುಕೊಟ್ಟ ಶ್ರೀ ದೇವೇಂದ್ರ ಅವರ ಕಾರ್ಯವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು. ದೇವೇಂದ್ರ ಅವರಿಂದ ಹೇಗೆ ಸವಾಲುಗಳಿಂದ ಹೊರಬರುವುದು ಮತ್ತು ವಿಶ್ವ ವಿಖ್ಯಾತ ಅಥ್ಲೀಟ್ ಆಗಿ ಬದಲಾದರು ಎಂಬ ಬಗ್ಗೆ ಪ್ರಧಾನಿ ಮಾಹಿತಿ ಪಡೆದುಕೊಂಡರು.
ವಿದ್ಯುತ್ ಆಘಾತದಲ್ಲಿ ತಮ್ಮ ತೋಳು ಕಳೆದುಕೊಂಡ ನಂತರ ತಾವು ಅನುಭವಿಸಿದ ಕಷ್ಟವನ್ನು ದೇವೇಂದ್ರ ಜಜರಿಯಾ ವಿವರಿಸಿದರು ಮತ್ತು ಹೇಗೆ ತಮ್ಮ ತಾಯಿ ತಮಗೆ ಸ್ಫೂರ್ತಿ ನೀಡಿ ಸಾಮಾನ್ಯ ಮಗುವಿನಂತೆ ವರ್ತಿಸಲು ಹಾಗೂ ಕ್ಷಮತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಸಹಕರಿಸಿದರು ಎಂದು ತಿಳಿಸಿದರು.
ಇತ್ತೀಚಿನ ಭುಜದ ಗಾಯದಿಂದ ಹೇಗೆ ಹೊರಬಂದರು ಎಂಬ ಬಗ್ಗೆ ಪ್ರಧಾನಮಂತ್ರಿ ಪ್ರಶ್ನಿಸಿದರು ಮತ್ತು ಕ್ರೀಡೆಯಿಂದ ನಿವೃತ್ತರಾಗುವ ಮನೋಭಾವದಿಂದ ಹೊರಬಂದಿರುವ ಬಗ್ಗೆ ವಿಚಾರಿಸಿದರು. ಮಾನಸಿಕ ಹಾಗೂ ದೈಹಿಕ ಸವಾಲುಗಳಿಂದ ಹೊರಬರಲು ಪ್ರತಿಯೊಬ್ಬರು ಮೊದಲಿಗೆ ತಮ್ಮ ಮೇಲೆ ತಾವು ವಿಶ್ವಾಸ ಇಟ್ಟುಕೊಳ್ಳಬೇಕು ಎಂದು ದೇವೇಂದ್ರ ಜಜರಿಯಾ ಹೇಳಿದರು.
ಅವರು ಕೆಲವು ದೈಹಿಕ ವ್ಯಾಯಾಮಗಳನ್ನು ಪ್ರದರ್ಶಿಸಿದರು ಮತ್ತು ಗಾಯದಿಂದ ಹೊರಬರಲು ತಾವು ಅನುಸರಿಸಿದ ದೈಹಿಕ ಕಟ್ಟುಪಾಡುಗಳನ್ನು ವಿವರಿಸಿದರು.
ಪ್ರಧಾನಮಂತ್ರಿ ಅವರು, ಪ್ಯಾರಾ ಒಲಿಂಪಿಕ್ ಚಿನ್ನದ ಪದಕ ವಿಜೇತರನ್ನು ಅಭಿನಂದಿಸಿ, ಅವರು ಮಾಡುತ್ತಿರುವ ಸ್ಫೂರ್ತಿದಾಯಕ ಕೆಲಸವನ್ನು ಶ್ಲಾಘಿಸಿದರು ಹಾಗೂ 80ರ ವಯಸ್ಸಿನಲ್ಲೂ ಸದೃಢತೆ ಕಾಯ್ದುಕೊಂಡಿರುವ, ಹಲವು ಪುರಸ್ಕಾರ ಪಡೆದಿರುವ ದೇವೇಂದ್ರ ಅವರ ತಾಯಿಗೆ ನಮನ ಸಲ್ಲಿಸಿದರು.
ಫುಟ್ಬಾಲ್ ಪಟು ಅಫ್ಸಾನ್ ಆಷಿಕ್ ಜೊತೆ ಪ್ರಧಾನಮಂತ್ರಿ ಸಂವಾದ
ಪ್ರತಿಯೊಬ್ಬ ಮಹಿಳೆಯು ತನ್ನನ್ನು ತಾನು ಸದೃಢವಾಗಿಟ್ಟುಕೊಳ್ಳಬೇಕು. ಏಕೆಂದರೆ ಆಕೆ ತಾಯಿ ಮತ್ತು ಇಡೀ ಕುಟುಂಬದ ಪೋಷಕಿಯ ಪಾತ್ರವನ್ನು ನಿರ್ವಹಿಸಲಿದ್ದಾಳೆ ಎಂದು ಜಮ್ಮು–ಕಾಶ್ಮೀರದ ಗೋಲ್ ಕೀಪರ್ ಹೇಳಿದರು. ಎಂ.ಎಸ್. ಧೋನಿಯ ತಾಳ್ಮೆಯಿಂದ ಕಾರ್ಯ ನಿರ್ವಹಿಸುವ ವಿಧಾನದಿಂದ ಸ್ಫೂರ್ತಿ ಪಡೆದ ಬಗ್ಗೆ ವಿವರ ನೀಡಿದ ಅವರು, ತನ್ನನ್ನು ತಾನು ಸಮಾಧಾನ ಮತ್ತು ತಾಳ್ಮೆಯಿಂದಿರಲು ಪ್ರತಿ ದಿನ ಬೆಳಗ್ಗೆ ಧ್ಯಾನ ಮಾಡುವುದಾಗಿ ಹೇಳಿದರು.
ಜಮ್ಮು–ಕಾಶ್ಮೀರದ ಜನರು ಪ್ರತಿಕೂಲ ಹವಾಮಾನದ ನಡುವೆಯೂ ತಮ್ಮನ್ನು ತಾವು ಸದೃಢವಾಗಿಟ್ಟುಕೊಳ್ಳಲು ಯಾವ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುತ್ತಾರೆ ಎಂದು ಪ್ರಧಾನಮಂತ್ರಿ ಅವರು ವಿಚಾರಿಸಿದರು. ಅಫ್ಸಾನ್ ತಾವು ಹೇಗೆ ಚಾರಣ ಮಾಡುತ್ತೇವೆ ಮತ್ತು ಅದು ಹೇಗೆ ಕ್ಷಮತಾ ಮಟ್ಟವನ್ನು ಸುಧಾರಿಸುತ್ತದೆ ಎಂದು ಚರ್ಚಿಸಿದರು. ಜಮ್ಮು–ಕಾಶ್ಮೀರದ ಮುಂಚೂಣಿ ಪ್ರದೇಶಗಳಲ್ಲಿ ವಾಸಿಸುವ ಜನರ ಶ್ವಾಸಕೋಶ ಉತ್ತಮ ಸಾಮರ್ಥ್ಯ ಹೊಂದಿದ್ದು ಅವರು ದೈಹಿಕ ಚಟುವಟಿಕೆಗಳಲ್ಲಿ ಹೆಚ್ಚು ತೊಡಗುವುದರಿಂದ ಉಸಿರಾಟದ ಸಮಸ್ಯೆಗಳಾಗುವುದಿಲ್ಲ ಎಂದು ಹೇಳಿದರು.
ತಾವು ಗೋಲ್ ಕೀಪರ್ ಆಗಿ ಹೇಗೆ ದೈಹಿಕವಾಗಿ ಹೊಂದಿಕೊಳ್ಳುವ ಮತ್ತು ಮಾನಸಿಕವಾಗಿ ಗಮನ ಕೇಂದ್ರೀಕರಿಸಲು ಸಾಧ್ಯವಾಗಿದೆ ಎಂಬುದರ ಕುರಿತು ಮಾತನಾಡಿದರು.
ರೂಪದರ್ಶಿ, ನಟ ಮಿಲಿಂದ್ ಸೋಮನ್ ಜೊತೆ ಪ್ರಧಾನಮಂತ್ರಿ ಸಂವಾದ
ಮಿಲಿಂದ್ ಸೋಮನ್ ರನ್ನು ‘ಮೇಡ್ ಇನ್ ಇಂಡಿಯಾ ಮಿಲಿಂದ್’ ಎಂದು ಬಣ್ಣಿಸಿದ ಪ್ರಧಾನಮಂತ್ರಿ ಅವರು, ಸೋಮನ್ ತಮ್ಮದೇ ಆದ ರೀತಿಯಲ್ಲಿ ಮೇಕ್ ಇನ್ ಇಂಡಿಯಾಗೆ ಬೆಂಬಲದ ಧ್ವನಿಯಾಗಿದ್ದಾರೆ ಎಂದರು. ಮಿಲಿಂದ್ ಸೋಮನ್, ಹೆಚ್ಚಿನ ಜನರಿಗೆ ತಮ್ಮ ದೈಹಿಕ ಮತ್ತು ಮಾನಸಿಕ ಸಾಮರ್ಥ್ಯದ ಅರಿವಿರುವುದಿಲ್ಲ. ಆದರೆ ಫಿಟ್ ಇಂಡಿಯಾ ಚಳವಳಿ, ಜನರಲ್ಲಿ ಜಾಗೃತಿಯನ್ನು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದರು. ಅವರು ತಮ್ಮ ತಾಯಿಯ ದೈಹಿಕ ಕ್ಷಮತೆ ಕುರಿತು ಮಾತನಾಡಿದರು. ಹಿಂದೆ ಜನರು ಅತ್ಯಂತ ಸದೃಢವಾಗಿರುತ್ತಿದ್ದರು, ಅದಕ್ಕೆ ಕಾರಣ ಗ್ರಾಮಗಳಲ್ಲಿ ನೀರಿಗಾಗಿ ಸುಮಾರು 40 ರಿಂದ 50 ಕಿಲೋಮೀಟರ್ ನಡೆಯುತ್ತಿದ್ದರು ಎಂದು ಸೋಮನ್ ಹೇಳಿದರು. ಆದರೆ ನಗರಗಳಲ್ಲಿ ತಂತ್ರಜ್ಞಾನದ ಲಭ್ಯತೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಜಡ ಜೀವನಶೈಲಿಯಿಂದಾಗಿ ನಾವು ಹಲವು ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.
ಪ್ರಧಾನಮಂತ್ರಿ ಅವರು, ದೈಹಿಕ ಕ್ಷಮತೆಗೆ ಯಾವುದೇ ವಯಸ್ಸು ತಿಳಿದಿರುವುದಿಲ್ಲ ಮತ್ತು 81ರ ವಯಸ್ಸಿನಲ್ಲೂ ಪುಷ್–ಅಪ್ ಸೇರಿದಂತೆ ದೈಹಿಕ ಕ್ಷಮತೆಯನ್ನು ಕಾಯ್ದುಕೊಳ್ಳುತ್ತಿರುವ ಮಿಲಿಂದ್ ಸೋಮನ್ ಅವರ ತಾಯಿಯನ್ನು ಶ್ಲಾಘಿಸಿದರು.
ಯಾರೊಬ್ಬರೂ ತಮ್ಮಲ್ಲಿರುವುದನ್ನೇ ಬಳಸಿ, ದೈಹಿಕವಾಗಿ ಸದೃಢ ಮತ್ತು ಆರೋಗ್ಯವಂತರಾಗಿರಲು ಸಾಧ್ಯ. ಅದಕ್ಕೆ ಅಗತ್ಯವಿರುವುದು ವಿಶ್ವಾಸ ಮತ್ತು ಮಾಡಬೇಕೆನ್ನುವ ಬದ್ಧತೆ ಎಂದು ಮಿಲಿಂದ್ ಸೋಮನ್ ಹೇಳಿದರು.
ಮಿಲಿಂದ್ ಸೋಮನ್, ಪ್ರಧಾನಮಂತ್ರಿ ಅವರನ್ನು ತಾವು ಹೇಗೆ ಟೀಕೆಗಳನ್ನು ಎದುರಿಸುತ್ತೀರಿ ಎಂದು ಕೇಳಿದರು. ಅದಕ್ಕೆ ಪ್ರಧಾನಮಂತ್ರಿ, ಪ್ರತಿಯೊಬ್ಬರಿಗೂ ಸೇವೆ ಸಲ್ಲಿಸುವ ಭಾವನೆಯೊಂದಿಗೆ ಸಂಪೂರ್ಣ ಏಕಾಗ್ರತೆಯೊಂದಿಗೆ ಕೆಲಸವನ್ನು ಮಾಡಲಾಗುವುದು. ಕರ್ತವ್ಯದ ಪ್ರಜ್ಞೆ ತಮಗೆ ಒತ್ತಡ ಎನಿಸುವುದಿಲ್ಲ ಎಂದರು. ಸ್ಪರ್ಧೆ ಆರೋಗ್ಯಕರ ಚಿಂತನೆಯ ಸಂಕೇತ. ಆದರೆ ಪ್ರತಿಯೊಬ್ಬರೂ ತಮ್ಮಲ್ಲೇ ತಾವು ಸ್ಪರ್ಧೆಗೆ ಒತ್ತು ನೀಡಬೇಕೆ ಹೊರತು ಬೇರೆಯವರೊಂದಿಗೆ ಸ್ಪರ್ಧಿಸಲು ಮುಂದಾಗಬಾರದು ಎಂದು ಪ್ರಧಾನಮಂತ್ರಿ ಹೇಳಿದರು.
ಪೌಷ್ಟಿಕ ತಜ್ಞ ರುಜುಟಾ ದಿವೇಕರ್ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ
ರುಜುಟಾ ದಿವೇಕರ್, ಹಿಂದಿನ ಕಾಲದ ಆಹಾರ ಪದ್ಧತಿಗಳು ಅಂದರೆ ಬೇಳೆ, ಅನ್ನ ಮತ್ತು ತುಪ್ಪದ ಸಂಸ್ಕೃತಿಗೆ ಹೋಗುವ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ನಾವು ಸ್ಥಳೀಯ ಉತ್ಪನ್ನಗಳನ್ನು ಸೇವಿಸಿದರೆ ನಮ್ಮ ರೈತರು ಮತ್ತು ನಮ್ಮ ಸ್ಥಳೀಯ ಆರ್ಥಿಕತೆಗೂ ಪ್ರಯೋಜನವಾಗಲಿದೆ ಎಂದು ಹೇಳಿದರು. ಸ್ಥಳೀಯ ಉತ್ಪನ್ನಗಳಿಗೆ ಧ್ವನಿಯಾಗುವ ಮನೋಭಾವ ಅತ್ಯಂತ ಪ್ರಮುಖವಾದುದು.
ತುಪ್ಪ ಹೇಗೆ ತಯಾರಿಸುವುದು ಮತ್ತು ಹಳದಿ ಹಾಲು ತಯಾರಿಸುವ ಪ್ರಾಮುಖ್ಯತೆಯನ್ನು ಕಲಿಯಲು ಜನರು ಮುಂದಾಗುತ್ತಿರುವ ಅಂತಾರಾಷ್ಟ್ರೀಯ ಟ್ರೆಂಡ್ ಕುರಿತು ಅವರು ಮಾತನಾಡಿದರು.
ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾನಿ ಮಾಡುವಂತಹ ಆಹಾರಗಳ ಸೇವನೆಯನ್ನು ಕೈಬಿಡುವುದು ಒಳ್ಳೆಯದು ಎಂದು ರುಜುಟಾ ದಿವೇಕರ್ ಮಾತನಾಡಿದರು. ಪ್ರತಿಯೊಂದು ಪ್ರದೇಶದಲ್ಲೂ ವಿಶೇಷ ಆಹಾರ ಉತ್ಪನ್ನಗಳಿರುತ್ತವೆ ಮತ್ತು ಮನೆಯಲ್ಲೇ ಮಾಡಿದ ಆಹಾರ ಸದಾ ಒಳ್ಳೆಯದು ಎಂದು ಹೇಳಿದರು. ಪ್ಯಾಕ್ ಮಾಡಿದ ಮತ್ತು ಸಂಸ್ಕರಿಸಿದ ಆಹಾರ ಸೇವನೆ ನಿಲ್ಲಿಸುವುದರಿಂದ ಆಗುವ ಪ್ರಯೋಜನಗಳ ಕುರಿತು ಅವರು ಮಾತನಾಡಿದರು.
ಸ್ವಾಮಿ ಶಿವಧ್ಯಾನಮ್ ಸರಸ್ವತಿ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ
ಸರ್ವರ ಕಲ್ಯಾಣ ಮತ್ತು ಸರ್ವರ ಸಂತೋಷ सर्वजन हिताय, सर्वजन सुखाय (ಸರ್ವಜನ ಹಿತಾಯ, ಸರ್ವಜನ ಸುಖಾಯ) ಎಂಬ ಜನಪ್ರಿಯ ಹೇಳಿಕೆಯಿಂದ ತಾವು ಸ್ಫೂರ್ತಿ ಪಡೆದಿರುವುದಾಗಿ ಸ್ವಾಮಿ ಶಿವಧ್ಯಾನಮ್ ಸರಸ್ವತಿ ಹೇಳಿದರು.
ಅವರು ತಮ್ಮ ಗುರುಗಳ ಬಗ್ಗೆ ಮತ್ತು ಅವರಿಂದ ಯೋಗದ ಪ್ರಾಮುಖ್ಯತೆ ಹರಡುವ ಕುರಿತು ಸ್ಫೂರ್ತಿ ಪಡೆದಿರುವುದನ್ನು ತಿಳಿಸಿದರು. ಅವರು ಪುರಾತನ ಶಿಕ್ಷಕ – ಶಿಷ್ಯ ಗುರುಕುಲ ಪರಂಪರೆ ಪದ್ಧತಿ ಮತ್ತು ವಿಧಾನಗಳು ಹಾಗೂ ಅದರಲ್ಲಿ ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒತ್ತು ನೀಡುವ ಕುರಿತು ಉಲ್ಲೇಖಿಸಿದರು.
ಯೋಗ ಕೇವಲ ಒಂದು ಜೀವನ ಪದ್ಧತಿಯಲ್ಲ, ಅದು ಗುರುಕುಲದ ದಿನಗಳಲ್ಲೂ ಇತ್ತು ಮತ್ತು ಹಿಂದಿನ ಕಾಲದಲ್ಲೂ ಇತ್ತು ಎಂದು ಬಣ್ಣಿಸಿದರು.
ಬದಲಾಗುತ್ತಿರುವ ಜೀವನಶೈಲಿಗೆ ಅನುಗುಣವಾಗಿ ಯೋಗಾಭ್ಯಾಸವನ್ನು ರೂಢಿಸಿಕೊಳ್ಳುವ ಕುರಿತು ಪ್ರಧಾನಮಂತ್ರಿ ಅವರು ಮಾತನಾಡಿದರು.
ವಿರಾಟ್ ಕೊಹ್ಲಿ ಅವರೊಂದಿಗೆ ಪ್ರಧಾನಮಂತ್ರಿ ಸಂವಾದ
ಪ್ರಧಾನಮಂತ್ರಿ ಅವರು, ವಿರಾಟ್ ಕೊಹ್ಲಿ ಅವರೊಂದಿಗೆ ಅವರ ಫಿಟ್ನೆಸ್ ಕುರಿತು ಸಮಾಲೋಚಿಸಿದರು. ವಿರಾಟ್ ಮಾನಸಿಕ ಸಾಮರ್ಥ್ಯದ ಜೊತೆ ಜೊತೆಗೆ ನಮ್ಮ ದೈಹಿಕ ಸಾಮರ್ಥ್ಯವೂ ಸಾಗುತ್ತದೆ ಎಂದು ಹೇಳಿದರು.
ದೆಹಲಿಯ ಜನಪ್ರಿಯ ಛೊಲೆ ಭತುರೆ ತಿನ್ನುವುದನ್ನು ಹೇಗೆ ಬಿಟ್ಟಿರಿ ಎಂದು ಪ್ರಧಾನಮಂತ್ರಿ ವಿರಾಟ್ ಕೊಹ್ಲಿಯನ್ನು ಪ್ರಶ್ನಿಸಿದರು. ವಿರಾಟ್, ಮನೆಯಲ್ಲೇ ಸಿದ್ಧಪಡಿಸಿದ ಸರಳ ಆಹಾರ ಸೇವನೆಯಿಂದ ತಮ್ಮ ಆಹಾರ ಪದ್ಧತಿಯಲ್ಲಿ ಶಿಸ್ತು ಮೂಡಿದ ಜೊತೆಗೆ ದೈಹಿಕ ಕ್ಷಮತಾ ಮಟ್ಟ ಹೆಚ್ಚಿಸಿಕೊಳ್ಳಲು ನೆರವಾಯಿತು ಎಂದು ಹೇಳಿದರು.
ಸೇವನೆ ಮಾಡುವ ಕ್ಯಾಲೊರಿ ಕಾಯ್ದುಕೊಳ್ಳುವ ಕುರಿತು ಶ್ರೀ ಮೋದಿ ಸಮಾಲೋಚಿಸಿದರು. ವಿರಾಟ್ ಸೇವಿಸುವ ಆಹಾರ ಪಚನಗೊಳ್ಳಲು ದೇಹಕ್ಕೆ ಸಾಕಷ್ಟು ಸಮಯ ನೀಡಬೇಕು ಎಂದರು. ಪ್ರಧಾನಮಂತ್ರಿ ಅವರು ಯೊ ಯೊ ಟೆಸ್ಟ್ ಮತ್ತು ಫಿಟ್ ನೆಸ್ ಸಂಸ್ಕೃತಿಯನ್ನು ತರಲು ಪ್ರಾಮುಖ್ಯತೆ ನೀಡಬೇಕು ಎಂದು ಮಾತನಾಡಿದರು.
ಶಿಕ್ಷಣ ತಜ್ಞ ಮುಕುಲ್ ಕಾನಿಟ್ಕರ್ ಜೊತೆಗೆ ಪ್ರಧಾನಮಂತ್ರಿ ಸಂವಾದ
ದೈಹಿಕ ಕ್ಷಮತೆ ಕೇವಲ ದೇಹಕ್ಕೆ ಮಾತ್ರವಲ್ಲ, ಅದು ಮಾನಸಿಕ ಮತ್ತು ಸಾಮಾಜಿಕ ಆರೋಗ್ಯಕ್ಕೂ ಕೂಡ ಮುಖ್ಯವಾಗಿದೆ ಎಂದು ಮುಕುಲ್ ಕಾನಿಟ್ಕರ್ ಹೇಳಿದರು. ಅವರು ಆರೋಗ್ಯ ಸಂಸ್ಕೃತಿ ನಿರ್ಮಾಣದ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಪ್ರಧಾನಮಂತ್ರಿ ಅವರು ಸೂರ್ಯ ನಮಸ್ಕಾರ ಮಾಡುವುದನ್ನು ಬಲವಾಗಿ ಪ್ರತಿಪಾದಿಸುತ್ತಿರುವ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಭಗವದ್ಗೀತೆ ಇಬ್ಬರು ಸದೃಢ ಜನರೊಂದಿಗಿನ ಸಂವಾದ ಎಂದು ಅವರು ಬಣ್ಣಿಸಿದರು.
ದೈಹಿಕ ಕ್ಷಮತೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ – 2020ಯ ಪಠ್ಯ ಕ್ರಮದ ಭಾಗವನ್ನಾಗಿ ಮಾಡಿರುವ ಪ್ರಧಾನಮಂತ್ರಿಗಳ ಕಾರ್ಯವನ್ನು ಅವರು ಶ್ಲಾಘಿಸಿದರು ಮತ್ತು ಇದರಿಂದ ಫಿಟ್ ಇಂಡಿಯಾ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲು ಪ್ರತಿಯೊಬ್ಬರಿಗೂ ಸ್ಫೂರ್ತಿ ದೊರಕಲಿದೆ ಎಂದರು. ದೈಹಿಕ ಕ್ಷಮತೆ(ಫಿಟ್ನೆಸ್) ಮನ್(ಭಾವನೆ), ಬುದ್ಧಿ(ಜ್ಞಾನ) ಮತ್ತು ಭಾವನೆ(ಚಿಂತನೆ)ಗಳ ಸಮ್ಮಿಲನ ಎಂದು ಅವರು ವಿವರಿಸಿದರು.
ಪ್ರಧಾನಮಂತ್ರಿಗಳ ಸಮಾರೋಪ ನುಡಿ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಫಿಟ್ ಇಂಡಿಯಾ ಸಂವಾದದಲ್ಲಿ ಪ್ರತಿಯೊಂದು ವಯೋಮಾನದ ದೈಹಿಕ ಕ್ಷಮತಾ ಆಸಕ್ತಿಗಳಿಗೆ ಒತ್ತು ನೀಡಲಾಗಿದೆ ಮತ್ತು ಅದು ದೈಹಿಕ ಕ್ಷಮತೆಯ ನಾನಾ ಆಯಾಮಗಳನ್ನು ಪ್ರದರ್ಶಿಸಲಿದೆ ಎಂದರು.
ಫಿಟ್ ಇಂಡಿಯಾ ಅಭಿಯಾನ ಆರಂಭಿಸಿದ ನಂತರ ದೇಶದಲ್ಲಿ ದೈಹಿಕ ಕ್ಷಮತೆ ಮತ್ತು ಜನರಲ್ಲಿ ಹೆಚ್ಚಿನ ಪ್ರಮಾಣದ ಒಲವು ಉಂಟಾಗಿದೆ ಎಂದು ಶ್ರೀ ಮೋದಿ ಹೇಳಿದರು. ಜನರಲ್ಲಿ ಆರೋಗ್ಯ ಮತ್ತು ಕ್ಷಮತೆ ಬಗ್ಗೆ ಜಾಗೃತಿ ಹೆಚ್ಚುತ್ತಿರುವಂತೆ ನಿರಂತರವಾಗಿ ಮತ್ತು ಕ್ರಿಯಾಶೀಲ ಚಟುವಟಿಕೆಗಳೂ ಕೂಡ ಹೆಚ್ಚಾಗುತ್ತವೆ ಎಂದರು.
ಯೋಗ, ಅಭ್ಯಾಸ, ನಡಿಗೆ, ಓಟ, ಆರೋಗ್ಯಕರ ಆಹಾರ ಅಭ್ಯಾಸಗಳು, ಆರೋಗ್ಯಕರ ಜೀವನಶೈಲಿ ನಮ್ಮ ಆತ್ಮ ಪ್ರಜ್ಞೆಯ ಭಾಗವಾಗಿರುವುದು ಸಂತೋಷಕರ ಸಂಗತಿ ಎಂದು ಪ್ರಧಾನಮಂತ್ರಿ ಹೇಳಿದರು. ಫಿಟ್ ಇಂಡಿಯಾ ಅಭಿಯಾನ ತನ್ನ ಪ್ರಭಾವ ಮತ್ತು ಪ್ರಸ್ತುತತೆಯನ್ನು ಪ್ರಸಕ್ತ ಕೋವಿಡ್ ಸಂದರ್ಭದ ನಿರ್ಬಂಧಗಳ ನಡುವೆಯೂ ಸಾಬೀತಾಗಿದೆ ಎಂದು ಅವರು ಹೇಳಿದರು.
ಬಲಿಷ್ಠ ಮನಸ್ಸು, ಬಲಿಷ್ಠ ದೇಹದಲ್ಲಿ ಇರುತ್ತದೆ ಎಂದು ಹೇಳಲಾಗುತ್ತದೆ. ಅದೇ ರೀತಿ ಬಲಿಷ್ಠ ದೇಹ ಬಲಿಷ್ಠ ಮನಸ್ಸನ್ನು ಒಳಗೊಂಡಿರುತ್ತದೆ ಎಂಬುದು ಕೂಡ ಅಷ್ಟೇ ನಿಜವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ನಮ್ಮ ದೇಹ ಸಂಪೂರ್ಣವಾಗಿ ಸದೃಢವಾಗಿರಬೇಕಾದರೆ ನಮ್ಮ ಮನಸ್ಸು ಕೂಡ ಅಷ್ಟೇ ಸದೃಢವಾಗಿರಬೇಕು ಎಂದು ಅವರು ಹೇಳಿದರು.
ಸದೃಢವಾಗಿರುವುದು ನಾವು ಯೋಚಿಸಿದಷ್ಟು ಸುಲಭದ ಕೆಲಸವಲ್ಲ, ಅದಕ್ಕೆ ಒಂದಿಷ್ಟು ಶಿಸ್ತು ಮತ್ತು ಸ್ವಲ್ಪ ಪರಿಶ್ರಮ ಬೇಕಾಗುತ್ತದೆ. ಅವೆರಡು ಇದ್ದರೆ ನೀವು ಸದಾ ಆರೋಗ್ಯದಿಂದಿರಬಹುದು ಎಂದರು. ಅವರು ಪ್ರತಿಯೊಬ್ಬರ ಆರೋಗ್ಯಕ್ಕಾಗಿ(ಸದೃಢತೆಗಾಗಿ ನಾವು ಪ್ರತಿ ದಿನ ಅರ್ಧ ಗಂಟೆ ದೈಹಿಕ ಕಸರತ್ತು ನಡೆಸಬೇಕು) 'फिटनेस की डोज़, आधा घंटा रोज’ ಅವರು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡಬೇಕು ಅಥವಾ ಬ್ಯಾಡ್ಮಿಂಟನ್, ಟೆನಿಸ್ ಅಥವಾ ಫುಟ್ಬಾಲ್, ಅಥವಾ ಕರಾಟೆ, ಅಥವಾ ಕಬಡ್ಡಿಯನ್ನು ಪ್ರತಿ ದಿನ ಕನಿಷ್ಠ 30 ನಿಮಿಷಗಳ ಕಾಲ ಆಡಬೇಕು ಎಂದು ಕರೆ ನೀಡಿದರು. ಯುವಜನ ಸಚಿವಾಲಯ ಮತ್ತು ಆರೋಗ್ಯ ಸಚಿವಾಲಯ ಇಂದು ಸದೃಢತೆಯ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ ಎಂದು ಅವರು ಹೇಳಿದರು.
ಸ್ಪರ್ಧೆ, ಆರೋಗ್ಯಕರ ಚಿಂತನೆಯ ಸಂಕೇತವಾಗಿದೆ. ಪ್ರತಿಯೊಬ್ಬರೂ ತಮ್ಮಲ್ಲೇ ತಾವು ಸ್ಪರ್ಧೆ ಮಾಡಿಕೊಳ್ಳಲು ಒತ್ತು ನೀಡಬೇಕೆ ಹೊರತು ಬೇರೆಯವರೊಂದಿಗೆ ಸ್ಪರ್ಧೆಗಿಳಿಯಬಾರದು ಎಂದು ಪ್ರಧಾನಮಂತ್ರಿ ಹೇಳಿದರು.
ಇಡೀ ವಿಶ್ವ ಇದೀಗ ದೈಹಿಕ ಕ್ಷಮತೆ ಅಗತ್ಯತೆ ಬಗ್ಗೆ ಜಾಗೃತವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ದೇಶದಲ್ಲಿ ಸದೃಢತೆಯ ಬಗ್ಗೆ ಜಾಗೃತಿ ಹೆಚ್ಚಾಗಿರುವುದಕ್ಕೆ ತೃಪ್ತಿ ವ್ಯಕ್ತಪಡಿಸಿದ ಅವರು, “ಸಾಮಾನ್ಯವಾಗಿ ನಮ್ಮ ಪೋಷಕರು ಎಲ್ಲ ಒಳ್ಳೆಯ ಅಭ್ಯಾಸಗಳನ್ನು ಹೇಳಿಕೊಡುತ್ತಾರೆ. ಆದರೆ ಸದೃಢತೆಗೆ ಈ ಟ್ರೆಂಡ್ ಸ್ವಲ್ಪ ಅದಲು ಬದಲಾಗಿದೆ. ಯುವಜನರು ಈ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು ತಮ್ಮ ಪೋಷಕರಿಗೆ ಸದೃಢ ಜೀವನ ಶೈಲಿ ರೂಪಿಸಿಕೊಳ್ಳಲು ನೆರವಾಗುತ್ತಿದ್ದಾರೆ” ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದ ಅವರನ್ನು ಉಲ್ಲೇಖಿಸಿ ಮಾತನಾಡಿದ ಪ್ರಧಾನಮಂತ್ರಿ ‘ಸಾಮರ್ಥ್ಯವೇ ಜೀವನ, ದೌರ್ಬಲ್ಯವೇ ಮರಣ, ವಿಸ್ತರಣೆಯ ಜೀವನ ಮತ್ತು ವೈರುಧ್ಯವೇ ಮರಣ’ ಎಂದು ಹೇಳಿದರು. ನಮ್ಮ ಸುತ್ತಲು ಹಲವು ಸ್ಫೂರ್ತಿದಾಯಕ ಕತೆಗಳಿವೆ ಎಂದು ಅವರು ಹೇಳಿದರು. ನಾವು ದೃಢತೆಯಿಂದ ಕೆಲವು ಕೆಲಸಗಳನ್ನು ಮಾಡುವುದನ್ನು ಮುಂದುವರಿಸಬೇಕು ಎಂದು ಹೇಳಿದರು.
ಈ ಅಭಿಯಾನಕ್ಕೆ ಇನ್ನೂ ಹೆಚ್ಚಿನ ಜನರು ಕೈಜೋಡಿಸುತ್ತಾರೆ ಎಂದು ಪ್ರಧಾನಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು. ಅವರು ಫಿಟ್ ಇಂಡಿಯಾ ಅಭಿಯಾನವನ್ನು ‘ಹಿಟ್ ಇಂಡಿಯಾ ಅಭಿಯಾನ’ ಎಂದು ಬಣ್ಣಿಸಿದರು. ಏಕೆಂದರೆ ದೇಶದಲ್ಲಿ ಹೆಚ್ಚಿನ ಜನರು ಸದೃಢರಾದರೆ ಅದು ದೊಡ್ಡ ಸಾಧನೆಯೇ ಎಂದು ಹೇಳಿದರು.
ದೃಢ ಸಂಕಲ್ಪದೊಂದಿಗೆ ಫಿಟ್ ಇಂಡಿಯಾ ಅಭಿಯಾನಕ್ಕೆ ಮತ್ತಷ್ಟು ಒತ್ತು ನೀಡಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಜನರಿಗೆ ಕರೆ ನೀಡಿದರು.