ಜರ್ಮನಿಯ ಫೆಡರಲ್ ಚಾನ್ಸೆಲರ್ ಗೌರವಾನ್ವಿತ ಶ್ರೀ ಓಲಾಫ್ ಸ್ಕೋಲ್ಜ್ ಅವರ ಆಹ್ವಾನದ ಮೇರೆಗೆ ನಾನು 2022ರ ಮೇ 2ರಂದು ಜರ್ಮನಿಯ ಬರ್ಲಿನ್‌ಗೆ ಭೇಟಿ ನೀಡಲಿದ್ದೇನೆ. ನಂತರ 2022ರ ಮೇ 3-4ರಂದು ಡೆನ್ಮಾರ್ಕ್ ಪ್ರಧಾನ ಮಂತ್ರಿ ಗೌರನ್ವಾನಿತ ಮೆಟ್ಟೆ ಫೆಡ್ರಿಕ್ಸನ್ ಅವರ ಆಹ್ವಾನದ ಮೇರೆಗೆ ಡೆನ್ಮಾರ್ಕ್‌ನ ಕೋಪನ್ ಹೇಗನ್‌ಗೆ ಪ್ರಯಾಣಿಸುತ್ತೇನೆ, ಅಲ್ಲಿ ಪ್ರಧಾನಮಂತ್ರಿ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸುತ್ತೇನೆ ಮತ್ತು ಎರಡನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಸುತ್ತೇನೆ. ಭಾರತಕ್ಕೆ ಹಿಂತಿರುಗುವಾಗ, ಫ್ರಾನ್ಸ್‌ನ ಅಧ್ಯಕ್ಷ ಶ್ರೀ ಇಮ್ಯಾನುಯೆಲ್ ಮ್ಯಾಕ್ರೋನ್ ಅವರೊಂದಿಗಿನ ಮಾತುಕತೆಗಾಗಿ ನಾನು ಪ್ಯಾರೀಸ್ ನಲ್ಲಿ ಕೆಲ ಕಾಲ ನಿಲುಗಡೆ ಮಾಡುತ್ತೇನೆ.
ನನ್ನ ಬರ್ಲಿನ್ ಭೇಟಿಯು ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ವಿಸ್ತೃತ ದ್ವಿಪಕ್ಷೀಯ ಮಾತುಕತೆ ನಡೆಸಲು ಒಂದು ಅವಕಾಶವಾಗಿದೆ, ಅವರನ್ನು ನಾನು ಕಳೆದ ವರ್ಷ ಜಿ-20 ಶೃಂಗಸಭೆಯಲ್ಲಿ ಅವರ ಹಿಂದಿನ ವೈಸ್ ಚಾನ್ಸಲರ್ ಮತ್ತು ಹಣಕಾಸು ಮಂತ್ರಿಯಾಗಿ ಹುದ್ದೆಯಲ್ಲಿ ಭೇಟಿಯಾಗಿದ್ದೆ. ಅಲ್ಲದೆ, ಭಾರತವು ಜರ್ಮನಿಯೊಂದಿಗೆ ಮಾತ್ರ ನಡೆಸುವ ವಿಶಿಷ್ಟ ದ್ವೈವಾರ್ಷಿಕ ಸ್ವರೂಪದ 6ನೇ ಭಾರತ-ಜರ್ಮನಿ ಅಂತರ ಸರ್ಕಾರಿ ಸಮಾಲೋಚನೆಗಳ (ಐಜಿಸಿ)ಲ್ಲಿ ನಾವು ಸಹ-ಅಧ್ಯಕ್ಷರಾಗುತ್ತವೆ. ಅದಕ್ಕಾಗಿ ಹಲವು ಭಾರತೀಯ ಸಚಿವರು ಜರ್ಮನಿಗೆ ಪ್ರಯಾಣಿಸುತ್ತಾರೆ ಮತ್ತು ಅವರು ಜರ್ಮನಿಯ ತಮ್ಮ ಸಹವರ್ತಿಗಳೊಂದಿಗೆ ಸಮಾಲೋಚನೆ ನಡೆಸುವರು.
ಈ ಐಜಿಸಿಯನ್ನು ನಾನು ಜರ್ಮನಿಯ ಹೊಸ ಸರ್ಕಾರದೊಂದಿಗೆ ಆರಂಭಿಕ ಮಾತುಕತೆಯಾಗಿ ನೋಡುತ್ತೇನೆ. ಅಲ್ಲಿ ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳಾಗುತ್ತಿದೆ, ಇದು ಮಧ್ಯಮ ಮತ್ತು ದೀರ್ಘಾವಧಿಗೆ ನಮ್ಮ ಆದ್ಯತೆಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
ಭಾರತ ಮತ್ತು ಜರ್ಮನಿ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯಾಗಿ 2021ಕ್ಕೆ 70 ವರ್ಷಗಳು ಪೂರ್ಣಗೊಂಡು, ಅದರ ಆಚರಣೆ ಮಾಡಿದ್ದೇವೆ ಮತ್ತು 2000ರಿಂದ ಉಭಯ ದೇಶಗಳು ಕಾರ್ಯತಂತ್ರಿಕ ಪಾಲುದಾರ ರಾಷ್ಟ್ರಗಳಾಗಿವೆ. ನಮ್ಮಿಬ್ಬರಿಗೂ ಸಂಬಂಧಿಸಿದ ಕಾರ್ಯತಂತ್ರದ, ಪ್ರಾದೇಶಿಕ ಮತ್ತು ಜಾಗತಿಕ ಬೆಳವಣಿಗೆಗಳ ಕುರಿತು ಚಾನ್ಸೆಲರ್ ಸ್ಕೋಲ್ಜ್ ಅವರೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ನಾನು ಎದುರು ನೋಡುತ್ತಿದ್ದೇನೆ.
ಭಾರತ ಮತ್ತು ಜರ್ಮನಿ ನಡುವಿನ ದೀರ್ಘಕಾಲದ ವಾಣಿಜ್ಯ ಸಂಬಂಧಗಳು ನಮ್ಮ ಕಾರ್ಯತಂತ್ರದ ಸಹಭಾಗಿತ್ವದ ಆಧಾರ ಸ್ತಂಭಗಳಲ್ಲಿ ಒಂದಾಗಿವೆ ಮತ್ತು ಚಾನ್ಸೆಲರ್ ಸ್ಕೋಲ್ಜ್ ಮತ್ತು ನಾನು ಜಂಟಿಯಾಗಿ ಉದ್ಯಮದ ಸಹಕಾರಕ್ಕೆ ನಮ್ಮ ಉದ್ಯಮವನ್ನು ಶಕ್ತಿಯುತಗೊಳಿಸುವ ಗುರಿಯೊಂದಿಗೆ ವ್ಯಾಣಿಜ್ಯ ದುಂಡುಮೇಜಿನ ಸಭೆ ನಡೆಸಲು ಉದ್ದೇಶಿಸಿದ್ದೇವೆ, ಇದು ಕೋವಿಡ್ ನಂತರ ಎರಡೂ ದೇಶಗಳಲ್ಲಿ ಆರ್ಥಿಕ ಬಲವರ್ಧನೆಗೆ ಸಹಾಯ ಮಾಡುತ್ತದೆ.
ಭಾರತೀಯ ಮೂಲದ ಒಂದು ದಶಲಕ್ಷಕ್ಕೂ ಅಧಿಕ ಜನರಿಗೆ ಕಾಂಟಿನೆಂಟಲ್ ಯುರೋಪ್ ನೆಲೆ ಒದಗಿಸಿದೆ ಮತ್ತು ಜರ್ಮನಿಯಲ್ಲಿ ಈ ಅನಿವಾಸಿ ಭಾರತೀಯರು ಗಮನಾರ್ಹ ಪ್ರಮಾಣದಲ್ಲಿರುವುದನ್ನು ಕಾಣಬಹುದು. ಯುರೋಪ್‌ನೊಂದಿಗಿನ ನಮ್ಮ ಸಂಬಂಧಗಳಲ್ಲಿ ಅನಿವಾಸಿ ಭಾರತೀಯರು ಪ್ರಮುಖ ಆಧಾರವಾಗಿದ್ದಾರೆ ಮತ್ತು ಆದ್ದರಿಂದ ನಾನು ಖಂಡದ ಪ್ರವಾಸದ ವೇಳೆ ಅಲ್ಲಿನ ನಮ್ಮ ಸಹೋದರ ಸಹೋದರಿಯರನ್ನು ಭೇಟಿಯಾಗುವ ಅವಕಾಶ ಬಳಸಿಕೊಳ್ಳುತ್ತೇನೆ.
ನಾನು ಬರ್ಲಿನ್‌ನಿಂದ ಕೋಪನ್‌ಹೇಗನ್‌ಗೆ ಪ್ರಯಾಣಿಸುತ್ತೇನೆ, ಅಲ್ಲಿ ನಾನು ಪ್ರಧಾನ ಮಂತ್ರಿ ಫ್ರೆಡೆರಿಕ್ಸೆನ್ ಅವರೊಂದಿಗೆ ದ್ವಿಪಕ್ಷೀಯ ಸಭೆಯನ್ನು ನಡೆಸುತ್ತೇನೆ, ಇದು ಡೆನ್ಮಾರ್ಕ್‌ನೊಂದಿಗಿನ ನಮ್ಮ ವಿಶಿಷ್ಟವಾದ ‘ಹಸಿರು ಕಾರ್ಯತಂತ್ರ ಪಾಲುದಾರಿಕೆ’ (ಗ್ರೀನ್ ಸ್ಟ್ರಾಟೆಜಿಕ್ ಪಾಲುದಾರಿಕೆ) ಮತ್ತು ನಮ್ಮ ದ್ವಿಪಕ್ಷೀಯ ಸಂಬಂಧಗಳ ಇತರ ಅಂಶಗಳನ್ನು ಪರಿಶೀಲಿಸಲು ಅವಕಾಶ ಒದಗಿಸುತ್ತದೆ. ನಾನು ಭಾರತ-ಡೆನ್ಮಾರ್ಕ್ ವಾಣಿಜ್ಯ ದುಂಡುಮೇಲಿನ ಸಭೆಯಲ್ಲಿ ಭಾಗವಹಿಸುತ್ತೇನೆ ಮತ್ತು ಡೆನ್ಮಾರ್ಕ್‌ನಲ್ಲಿರುವ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದೇನೆ.
ಡೆನ್ಮಾರ್ಕ್‌ನೊಂದಿಗಿನ ದ್ವಿಪಕ್ಷೀಯ ಮಾತುಕತೆ ಮಾತ್ರವಲ್ಲದೆ, ನಾನು ಡೆನ್ಮಾರ್ಕ್, ಐಸ್‌ಲ್ಯಾಂಡ್, ಫಿನ್‌ಲ್ಯಾಂಡ್, ಸ್ವೀಡನ್ ಮತ್ತು ನಾರ್ವೆಯ ಪ್ರಧಾನ ಮಂತ್ರಿಗಳೊಂದಿಗೆ 2ನೇ ಭಾರತ-ನಾರ್ಡಿಕ್ ಶೃಂಗಸಭೆಯಲ್ಲಿ ಭಾಗವಹಿಲಿದ್ದೇನೆ, ಅಲ್ಲಿ ನಾವು 2018ರಲ್ಲಿ ನಡೆದ ಮೊದಲ ಭಾರತ-ನಾರ್ಡಿಕ್ ಶೃಂಗಸಭೆಯ ನಂತರದ ಸಹಕಾರ ಸಂಬಂಧದ ಸ್ಥಿತಿಗತಿಯನ್ನು ಪರಾಮರ್ಶೆ ನಡೆಸಲಿದ್ದೇವೆ. ಸಾಂಕ್ರಾಮಿಕ ನಂತರದ ಆರ್ಥಿಕ ಚೇತರಿಕೆ, ಹವಾಮಾನ ಬದಲಾವಣೆ, ನಾವೀನ್ಯತೆ ಮತ್ತು ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ವಿಕಸನಗೊಳ್ಳುತ್ತಿರುವ ಜಾಗತಿಕ ಭದ್ರತಾ ಸ್ಥಿತಿಗತಿ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ಭಾರತ-ನಾರ್ಡಿಕ್ ಸಹಕಾರದಂತಹ ವಿಷಯಗಳ ಮೇಲಿನ ಚರ್ಚೆಗೆ ಶೃಂಗಸಭೆಯಲ್ಲಿ ಹೆಚ್ಚಿನ ಒತ್ತು ನೀಡಲಾಗುವುದು.
ಶೃಂಗಸಭೆಯ ವೇಳೆ, ನಾನು ಇತರ ನಾಲ್ಕು ನಾರ್ಡಿಕ್ ದೇಶಗಳ ನಾಯಕರನ್ನು ಭೇಟಿ ಮಾಡುತ್ತೇನೆ ಮತ್ತು ಅವರೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳ ಪ್ರಗತಿ ಪರಿಶೀಲಿಸುತ್ತೇನೆ.
ಸುಸ್ಥಿರತೆ, ನವೀಕರಿಸಬಹುದಾದ ಇಂಧನ, ಡಿಜಿಟಲೀಕರಣ ಮತ್ತು ನಾವೀನ್ಯತೆಗಳಲ್ಲಿ ನಾರ್ಡಿಕ್ ದೇಶಗಳು ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರಗಳಾಗಿವೆ, ನಾರ್ಡಿಕ್ ಪ್ರದೇಶದೊಂದಿಗೆ ನಮ್ಮ ಬಹುಮುಖಿ ಸಹಕಾರವನ್ನು ವಿಸ್ತರಿಸಲು ಈ ಭೇಟಿಯು ಸಹಾಯ ಮಾಡುತ್ತದೆ.
ನಾನು ಭಾರತಕ್ಕೆ ವಾಪಸ್ಸಾಗುವಾಗ,ನನ್ನ ಸ್ನೇಹಿತ, ಅಧ್ಯಕ್ಷ ಮ್ಯಾಕ್ರನ್ ಅವರನ್ನು ಭೇಟಿ ಮಾಡಲು ಪ್ಯಾರಿಸ್‌ನಲ್ಲಿ ಕೆಲ ಕಾಲ ನಿಲುಗಡೆ ಮಾಡಲಿದ್ದೇನೆ. ಅಧ್ಯಕ್ಷ ಮ್ಯಾಕ್ರನ್ ಇತ್ತೀಚೆಗೆ ಮರು ಆಯ್ಕೆಯಾಗಿದ್ದಾರೆ ಮತ್ತು ಫಲಿತಾಂಶ ಹೊರಬಿದ್ದ ಕೇವಲ ಹತ್ತು ದಿನಗಳ ನಂತರ ನನ್ನ ಭೇಟಿಯು ವೈಯಕ್ತಿಕವಾಗಿ ಅಭಿನಂದನೆಗಳನ್ನು ತಿಳಿಸಲು ಅವಕಾಶ ನೀಡುತ್ತದೆ. ಜೊತೆಗೆ ಇದು ಎರಡು ದೇಶಗಳ ನಡುವಿನ ನಿಕಟ ಸ್ನೇಹ ಸಂಬಂಧವನ್ನು ಪುನರುಚ್ಚರಿಸುತ್ತದೆ. ಇದು ಭಾರತ-ಫ್ರಾನ್ಸ್ ಕಾರ್ಯತಂತ್ರದ ಪಾಲುದಾರಿಕೆಯ ಮುಂದಿನ ಹಂತಕ್ಕೆ ಕಾರ್ಯಸೂಚಿ ನಿಗದಿಗೆ ನಮಗೆ ಅವಕಾಶ ನೀಡುತ್ತದೆ.
ನಾನು ಮತ್ತು ಅಧ್ಯಕ್ಷ ಮ್ಯಾಕ್ರನ್ ಹಲವು ಪ್ರಾದೇಶಿಕ ಮತ್ತು ಜಾಗತಿಕ ವಿಷಯಗಳ ಬಗ್ಗೆ ಸ್ಥಿತಿಗತಿಗಳನ್ನು ವಿನಿಮಯ ಮಾಡಿಕೊಳ್ಳುತ್ತೇವೆ ಮತ್ತು ಸದ್ಯ ನಡೆಯುತ್ತಿರುವ ದ್ವಿಪಕ್ಷೀಯ ಸಹಕಾರ ಸಂಬಂಧಗಳನ್ನು ಪರಿಶೀಲನೆ ನಡೆಸಲಿದ್ದೇವೆ. ಜಾಗತಿಕ ಸುಸ್ಥಿರತೆಗಾಗಿ ಸಮಾನ ದೂರದೃಷ್ಟಿ ಮತ್ತು ಮೌಲ್ಯಗಳನ್ನು ಹಂಚಿಕೊಳ್ಳುವ ಎರಡು ದೇಶಗಳು ಪರಸ್ಪರ ನಿಕಟ ಸಹಕಾರದಿಂದ ಕೆಲಸ ಮಾಡಬೇಕೆಂಬುದು ನನ್ನ ದೃಢ ನಂಬಿಕೆಯಾಗಿದೆ.
ಯುರೋಪ್ ಪ್ರದೇಶವು ಅನೇಕ ಸವಾಲುಗಳು ಮತ್ತು ಆಯ್ಕೆಗಳನ್ನು ಎದುರಿಸುತ್ತಿರುವ ಸಮಯದಲ್ಲಿ ನಾನು ಯುರೋಪ್‌ಗೆ ಭೇಟಿ ನೀಡುತ್ತಿದ್ದೇನೆ. ನನ್ನ ಮಾತುಕತೆಗಳ ಮೂಲಕ, ಶಾಂತಿ ಮತ್ತು ಸಮೃದ್ಧಿಗಾಗಿ ಭಾರತದ ಹುಡುಕಾಟಯಲ್ಲಿ ಪ್ರಮುಖ ಒಡನಾಡಿಗಳಾದ ನಮ್ಮ ಯುರೋಪಿಯನ್ ಪಾಲುದಾರರೊಂದಿಗೆ ಸಹಕಾರದ ಮನೋಭಾವ ಬಲವರ್ಧನೆ ನನ್ನ ಉದ್ದೇಶವಾಗಿದೆ.