ಘನತೆವೇತ್ತರೇ,
ನಿಮ್ಮ ಕಲ್ಪನೆಗಳು ಮತ್ತು ನಿಮ್ಮ ಸಮಯಕ್ಕಾಗಿ ಮತ್ತೊಮ್ಮೆ ಧನ್ಯವಾದಗಳು. ನಾವು ಇಂದು ಇಲ್ಲಿ ರಚನಾತ್ಮಕ ಮತ್ತು ಫಲಪ್ರದವಾದ ಸಂವಾದ ನಡೆಸಿದ್ದೇವೆ.
ಇಂಥ ಸವಾಲುಗಳನ್ನು ನಿರ್ವಹಣೆ ಮಾಡಲು ಸಮಾನವಾದ ಕಾರ್ಯತಂತ್ರ ಮಹತ್ವದ್ದು ಎಂದು ನಾವೆಲ್ಲರೂ ಒಪ್ಪಿದ್ದೇವೆ.
ನಾವು ಸಹಕಾರದಿಂದ ಪರಿಹಾರ ಪಡೆದುಕೊಳ್ಳಲೂ ಸಮ್ಮತಿಸಿದ್ದೇವೆ – ನಾವು ಜ್ಞಾನ, ಉತ್ತಮ ರೂಢಿ, ಸಾಮರ್ಥ್ಯ ಮತ್ತು ಅಗತ್ಯವಿರುವೆಡೆ ಸಂಪನ್ಮೂಲವನ್ನೂ ವಿನಿಮಯ ಮಾಡಿಕೊಳ್ಳಲಿದ್ದೇವೆ.
ಕೆಲವು ಸಹಯೋಗಿಗಳು ಔಷಧ ಮತ್ತು ಸಲಕರಣ ಸೇರಿದಂತೆ ನಿರ್ದಿಷ್ಟ ಮನವಿಗಳನ್ನು ಮಾಡಿದ್ದಾರೆ. ನನ್ನ ತಂಡ ಇದನ್ನು ಎಚ್ಚರಿಕೆಯಿಂದ ತೆಗೆದುಕೊಂಡಿದೆ. ನಾವು ನಮ್ಮ ನೆರೆಯವರಿಗೆ ಸಾಧ್ಯವಾದಷ್ಟೂ ಉತ್ತಮವಾದ್ದನ್ನು ಮಾಡುತ್ತೇವೆಂಬ ಭರವಸೆ ನೀಡುತ್ತೇನೆ.
ನಾವು ನಮ್ಮ ಅಧಿಕಾರಿಗಳಿಗೆ ಆಪ್ತ ಸಂಪರ್ಕ ನಿರ್ವಹಣೆ ಮಾಡುವಂತೆ ತಿಳಿಸೋಣ ಮತ್ತು ಪಾಲುದಾರಿಕೆ ಮತ್ತು ಒಗ್ಗೂಡಿ ಶ್ರಮಿಸುವ ಉತ್ಸಾಹದೊಂದಿಗೆ ಸಮಾನವಾದ ಕಾರ್ಯತಂತ್ರವನ್ನು ರೂಪಿಸೋಣ.
ನಮ್ಮ ಪ್ರತಿ ರಾಷ್ಟ್ರದಿಂದಲೂ ನೋಡಲ್ ತಜ್ಞರನ್ನು ಗುರುತಿಸೋಣ ಮತ್ತು ಅವರೂ ಕೂಡ ನಮ್ಮ ಇಂದಿನ ನಿರ್ಧಾರಗಳ ಕುರಿತಂತೆ ಮುಂದಿನ ಕ್ರಮಗಳಿಗಾಗಿ ಇದೇ ರೀತಿಯ ವಿಡಿಯೋ ಸಂವಾದವನ್ನು ಇಂದಿನಿಂದ ಒಂದು ವಾರ ಕಾಲ ನಡೆಸಲಿ.
ಘನತೆವೇತ್ತರೇ,
ನಾವೆಲ್ಲರೂ ಒಗ್ಗೂಡಿ ಇದರ ವಿರುದ್ಧ ಹೋರಾಡೋಣ, ಮತ್ತು ಒಗ್ಗೂಡಿ ಜಯ ಸಾಧಿಸೋಣ.
ನಮ್ಮ ನೆರೆಹೊರೆಯವರ ಸಹಯೋಗ ವಿಶ್ವಕ್ಕೇ ಮಾದರಿಯಾಗಬೇಕು.
ನಾನು ನಮ್ಮ ಎಲ್ಲ ನಾಗರಿಕರಿಗೆ ಉತ್ತಮ ಆರೋಗ್ಯ ಮತ್ತು ನಮ್ಮ ವಲಯದಲ್ಲಿ ಈ ಸಾಂಕ್ರಾಮಿಕವನ್ನು ಎದುರಿಸುವ ನಮ್ಮ ಸಂಘಟಿತ ಪ್ರಯತ್ನಕ್ಕೆ ಯಶಸ್ಸು ಕೋರುತ್ತಾ ನನ್ನ ಮಾತು ಮುಗಿಸುತ್ತೇನೆ.
ಧನ್ಯವಾದಗಳು
ತುಂಬಾ ತುಂಬಾ ಧನ್ಯವಾದಗಳು