ಆಮ್ಲಜನಕದ ಪೂರೈಕೆ ಮತ್ತು ಲಭ್ಯತೆಯನ್ನು ಹೆಚ್ಚಿಸಲು ನಾವಿನ್ಯಪೂರ್ಣ ಮಾರ್ಗಗಳನ್ನು ಅನ್ವೇಷಿಸುವ ನಿಟ್ಟಿಗೆ ಅನುಗುಣವಾಗಿ, ಪ್ರಧಾನಮಂತ್ರಿ ಮೋದಿ ಅವರಿಂದು ಅನಿಲ ಆಮ್ಲಜನಕದ ಬಳಕೆಯ ಪರಾಮರ್ಶೆಗಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಹಲವು ಕೈಗಾರಿಕೆಗಳಾದ ಉಕ್ಕು ಸ್ಥಾವರಗಳು, ಪೆಟ್ರೋಲಿಯಂ ಘಟಕಗಳನ್ನೊಳಗೊಂಡ ಶುದ್ಧೀಕರಣ ಘಟಕಗಳು, ಉಜ್ವಲ ದಹನ ಪ್ರಕ್ರಿಯೆಯನ್ನು ಬಳಸುವ ಕೈಗಾರಿಕೆಗಳು, ವಿದ್ಯುತ್ ಸ್ಥಾವರಗಳು ಆಮ್ಲಜನಕ ಸ್ಥಾವರಗಳನ್ನು ಹೊಂದಿದ್ದು ಅವು ಅನಿಲ ಆಮ್ಲಜನಕವನ್ನು ಉತ್ಪಾದಿಸುತ್ತಿದ್ದು, ಇವುಗಳನ್ನು ಪ್ರಕ್ರಿಯೆಗೆ ಬಳಸಲಾಗುತ್ತದೆ. ಈ ಆಮ್ಲಜನಕವನ್ನು ವೈದ್ಯಕೀಯ ಬಳಕೆಗಾಗಿ ಪರಿವರ್ತನೆ ಮಾಡಬಹುದು.
ಅಗತ್ಯವಾದ ಶುದ್ಧತೆ ಇರುವ ಅನಿಲ ಆಮ್ಲಜನಕವನ್ನು ಉತ್ಪಾದಿಸುವ ಕೈಗಾರಿಕಾ ಘಟಕಗಳನ್ನು ಗುರುತಿಸುವುದು, ನಗರಗಳು/ಜನದಟ್ಟಣೆಯ ಪ್ರದೇಶಗಳು/ಬೇಡಿಕೆ ಕೇಂದ್ರಗಳಿಗೆ ಹತ್ತಿರವಿರುವಂತಹವುಗಳನ್ನು ಪಟ್ಟಿ ಮಾಡುವುದು ಮತ್ತು ಆ ಮೂಲವಿರುವ ಜಾಗದ ಬಳಿ ತಾತ್ಕಾಲಿಕ ಆಮ್ಲಜನಕ ಇರುವ ಹಾಸಿಗೆಗಳ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಇದರ ಹಿಂದಿರುವ ತಂತ್ರಗಾರಿಕೆಯಾಗಿದೆ. ಅಂತಹ 5 ಸೌಲಭ್ಯಗಳನ್ನು ಪ್ರಾಯೋಗಿಕವಾಗಿ ಈಗಾಗಲೇ ಪ್ರಾರಂಭಿಸಲಾಗುತ್ತಿದ್ದು, ಈ ನಿಟ್ಟಿನಲ್ಲಿ ಉತ್ತಮ ಪ್ರಗತಿಯಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸ್ಥಾವರ ನಿರ್ವಹಿಸುವ ಪಿಎಸ್ಯುಗಳು ಅಥವಾ ಖಾಸಗಿ ಕೈಗಾರಿಕೆಗಳ ಮೂಲಕ ಇದನ್ನು ಸಾಧಿಸಲಾಗುತ್ತಿದೆ.
ಇಂಥ ಸ್ಥಾವರಗಳ ಸಮೀಪದಲ್ಲಿ ತಾತ್ಕಾಲಿಕ ಆಸ್ಪತ್ರೆಗಳನ್ನು ಮಾಡುವ ಮೂಲಕ ಅತ್ಯಂತ ಅಲ್ಪ ಅವಧಿಯಲ್ಲಿ 10 ಸಾವಿರ ಆಕ್ಸಿಜನ್ ಸಹಿತ ಹಾಸಿಗೆಗಳು ಲಭ್ಯವಾಗುವಂತೆ ಮಾಡಬಹುದು ಎಂದು ನಿರೀಕ್ಷಿಸಲಾಗಿದೆ.
ಸಾಂಕ್ರಾಮಿಕದ ಪರಿಸ್ಥಿತಿ ಎದುರಿಸಲು ಆಕ್ಸಿಜನ್ ಸಹಿತ ಹಾಸಿಗೆಗಳ ಇಂಥ ಹೆಚ್ಚಿನ ಸೌಲಭ್ಯಗಳನ್ನು ಸ್ಥಾಪಿಸಲು ರಾಜ್ಯ ಸರ್ಕಾರಗಳಿಗೆ ಪ್ರೋತ್ಸಾಹಿಸಲಾಗುವುದು.
ಪ್ರಧಾನಮಂತ್ರಿಯವರು ಪಿ.ಎಸ್.ಎ. ಸ್ಥಾವರಗಳ ಸ್ಥಾಪನೆಯ ಕುರಿತಂತೆಯೂ ಪರಾಮರ್ಶೆ ನಡೆಸಿದರು. 1500 ಪಿ.ಎಸ್.ಎ. ಸ್ಥಾವರಗಳನ್ನು ಪಿ.ಎಂ. ಕೇರ್ಸ್, ಪಿ.ಎಸ್.ಯುಗಳು ಮತ್ತು ಇತರರ ದೇಣಿಗೆಯೊಂದಿಗೆ ಸ್ಥಾಪಿಸುವ, ಪ್ರಕ್ರಿಯೆ ನಡೆದಿದೆ ಎಂದು ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು. ಅವರು ಅಧಿಕಾರಿಗಳಿಗೆ ಈ ಸ್ಥಾವರಗಳನ್ನು ಶೀಘ್ರ ಪೂರ್ಣಗೊಳ್ಳುವುದನ್ನು ಖಾತ್ರಿಪಡಿಸಿಕೊಳ್ಳುವಂತೆ ತಿಳಿಸಿದರು.
ಪ್ರಧಾನಮಂತ್ರಿಯವರ ಪ್ರಧಾನ ಕಾರ್ಯದರ್ಶಿ, ಗೃಹ ಕಾರ್ಯದರ್ಶಿ, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಕಾರ್ಯದರ್ಶಿ, ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.