ಸುಡಾನ್ ದೇಶದಲ್ಲಿನ ಭದ್ರತಾ ಪರಿಸ್ಥಿತಿಯನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಇಂದು ಉನ್ನತ ಮಟ್ಟದ ಸಭೆ ನಡೆಸಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪರಿಶೀಲಿಸಿದರು. ಸಭೆಯಲ್ಲಿ, ವಿದೇಶಾಂಗ ಸಚಿವರು, ರಾಷ್ಟ್ರೀಯ ಭದ್ರತಾ ಸಲಹೆಗಾರರು, ಸುಡಾನ್‌ನಲ್ಲಿರುವ ಭಾರತದ ರಾಯಭಾರಿ ಮತ್ತು ಹಲವಾರು ಹಿರಿಯ ಅಧಿಕಾರಿಗಳು ಹಾಜರಿದ್ದರು.
ಸಭೆಯಲ್ಲಿ, ಪ್ರಧಾನಿ ಮೋದಿಯವರು ಸುಡಾನ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಅಂದಾಜು ಮಾಡಿದರು. ಪ್ರಸ್ತುತ ಸೂಡಾನ್ ನಲ್ಲಿ ನೆಲೆಸಿರುವ 3,000 ಕ್ಕೂ ಹೆಚ್ಚು ಭಾರತೀಯ ನಾಗರಿಕರ ಸುರಕ್ಷತೆಯ ಮೇಲೆ ನಿರ್ದಿಷ್ಟ ಗಮನ ಹರಿಸುವ ಮೂಲಕ ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಸ್ಪಷ್ಟ ಚಿತ್ರಣ ಮತ್ತು ವರದಿಗಳನ್ನು ಪಡೆದುಕೊಂಡರು.
ಕಳೆದ ವಾರ ಗುಂಡಿನ ದಾಳಿಗೆ ಬಲಿಯಾದ ಭಾರತೀಯ ನಾಗರಿಕರೊಬ್ಬರ ಸಾವಿಗೆ ಪ್ರಧಾನ ಮಂತ್ರಿ ಸಂತಾಪ ಸೂಚಿಸಿದರು.
ಸುಡಾನ್‌ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ನಿರಂತರವಾಗಿ ಮೌಲ್ಯಮಾಪನ ಮಾಡಲು ಮತ್ತು ಅವರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡುವಂತೆ, ಅಲ್ಲಿನ ಪರಿಸ್ಥಿತಿ ಮತ್ತು ಬೆಳವಣಿಗೆಗಳನ್ನು ನಿರಂತರವಾಗಿ ಗಮನಿಸುತ್ತಾ, ಮೇಲ್ವಿಚಾರಣೆ ನಡೆಸುತ್ತಾ ಜಾಗೃತವಾಗಿರುವಂತೆ ಪ್ರಧಾನಿ ಮೋದಿ ಎಲ್ಲಾ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲಿ ಕ್ಷಿಪ್ರವಾಗಿ ಬದಲಾಗುತ್ತಿರುವ ಭದ್ರತಾ ಸ್ಥಿತಿಗತಿ, ಅಲ್ಲಿನ ಪರಿಸ್ಥಿತಿಗೆ ಅನುಗುಣವಾಗಿ ವಿವಿಧ ಆಯ್ಕೆಗಳ ಕಾರ್ಯಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಆಕಸ್ಮಿಕವಾಗಿ ಭಾರತೀಯರನ್ನು ಅಗತ್ಯಬಿದ್ದರೆ ಸ್ಥಳಾಂತರಿಸುವ ಯೋಜನೆಗಳನ್ನು ರೂಪಿಸಲು ಪ್ರಧಾನಮಂತ್ರಿಯವರು ಇನ್ನಷ್ಟು ನಿರ್ದೇಶನವನ್ನು ಅಧಿಕಾರಿಗಳಿಗೆ ನೀಡಿದರು.
ಈ ಸಂದರ್ಭದಲ್ಲಿ ನೆರೆಯ ರಾಷ್ಟ್ರಗಳೊಂದಿಗೆ ಮತ್ತು ಸೂಡಾನ್‌ನಲ್ಲಿ ಗಮನಾರ್ಹ ಸಂಖ್ಯೆಯ ನಾಗರಿಕರನ್ನು ಹೊಂದಿರುವವರೊಂದಿಗೆ ನಿಕಟ ಸಂಪರ್ಕವನ್ನು ಕಾಪಾಡಿಕೊಳ್ಳುವ ಪ್ರಾಮುಖ್ಯತೆಯನ್ನು ಪ್ರಧಾನ ಮಂತ್ರಿಗಳು ಸಭೆಯಲ್ಲಿ ಅಧಿಕಾರಿಗಳಿಗೆ ಒತ್ತಿ ಹೇಳಿದರು.