ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ತಮ್ಮ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ಆಧಾರದ ಮೇಲೆ ಅನುಷ್ಠಾನಗೊಳಿಸಬೇಕಾದ ಯೋಜನೆಗಳ ಪ್ರಗತಿ ಕುರಿತು ಚರ್ಚಿಸಲು ಉನ್ನತ ಮಟ್ಟದ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು.
2 ಕೋಟಿ ಲಖ್ ಪತಿ ದೀದಿಗಳನ್ನು ಅಂದರೆ 2 ಕೋಟಿ ಮಹಿಳೆಯರನ್ನು ಸ್ವಸಹಾಯ ಗುಂಪುಗಳು ಅಥವಾ ಅಂಗನವಾಡಿಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಬಗ್ಗೆ ಪ್ರಧಾನಿ ಮಾತನಾಡಿದ್ದರು. ಈ ಗುರಿಯನ್ನು ಸಾಧಿಸಲು ಯೋಜಿಸಲಾಗಿರುವ ವಿವಿಧ ಜೀವನೋಪಾಯ ಮಧ್ಯಸ್ಥಿಕೆಗಳ ಬಗ್ಗೆ ಅವರು ಮಾಹಿತಿ ಪಡೆದರು.
ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 15,000 ಮಹಿಳಾ ಸ್ವಸಹಾಯ ಗುಂಪುಗಳನ್ನು ಕೃಷಿ ಮತ್ತು ಸಂಬಂಧಿತ ಉದ್ದೇಶಗಳಿಗಾಗಿ ಡ್ರೋನ್ ಗಳೊಂದಿಗೆ ಸಜ್ಜುಗೊಳಿಸುವ ಬಗ್ಗೆ ಮಾತನಾಡಿದ್ದರು. ಮಹಿಳಾ ಎಸ್ ಎಚ್ ಜಿ ಗಳ ತರಬೇತಿಯಿಂದ ಹಿಡಿದು ಚಟುವಟಿಕೆಯ ಮೇಲ್ವಿಚಾರಣೆಯವರೆಗೆ ಇದನ್ನು ಕಾರ್ಯಗತಗೊಳಿಸುವ ಯೋಜನೆಗಳ ಅವಲೋಕನವನ್ನು ಪ್ರಧಾನಮಂತ್ರಿಯವರಿಗೆ ನೀಡಲಾಯಿತು.
ಕೈಗೆಟುಕುವ ದರದಲ್ಲಿ ಔಷಧಿಗಳ ವ್ಯಾಪ್ತಿಯನ್ನು ಹೆಚ್ಚಿಸಲು ಭಾರತದಲ್ಲಿ ಜನೌಷಧಿ ಮಳಿಗೆಗಳ ಸಂಖ್ಯೆಯನ್ನು ಪ್ರಸ್ತುತ 10,000 ದಿಂದ 25,000 ಕ್ಕೆ ಹೆಚ್ಚಿಸುವ ಬಗ್ಗೆಯೂ ಪ್ರಧಾನಿ ಮಾತನಾಡಿದ್ದರು. ಈ ವಿಸ್ತರಣೆಯ ಅನುಷ್ಠಾನ ಕಾರ್ಯತಂತ್ರವನ್ನು ಪ್ರಧಾನಿ ಪರಿಶೀಲಿಸಿದರು.