ಸೇನಾ ಪಡೆಗಳ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರಿಂದು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿದ್ದರು. ಅವರಿಬ್ಬರೂ ಸಾಂಕ್ರಾಮಿಕದ ನಿರ್ವಹಣೆಗೆ ಸಶಸ್ತ್ರಪಡೆಗಳು ಮಾಡುತ್ತಿರುವ ಕಾರ್ಯಾಚರಣೆ ಮತ್ತು ಸಿದ್ಥತೆಯ ಪರಾಮರ್ಶೆ ನಡೆಸಿದರು.
ಕಳೆದ 2 ವರ್ಷಗಳಲ್ಲಿ ನಿವೃತ್ತರಾಗಿರುವ ಅಥವಾ ಅವಧಿಗೆ ಮೊದಲೇ ನಿವೃತ್ತಿ ಪಡೆದಿರುವ ಸಶಸ್ತ್ರ ಪಡೆಗಳ ಎಲ್ಲ ವೈದ್ಯಕೀಯ ಸಿಬ್ಬಂದಿಗೆ ಪ್ರಸ್ತುತ ಅವರು ವಾಸವಿರುವ ಪ್ರದೇಶಕ್ಕೆ ಹತ್ತಿರದಲ್ಲಿರುವ ಕೋವಿಡ್ ಸೌಲಭ್ಯಗಳಲ್ಲಿ ಕಾರ್ಯನಿರ್ವಹಿಸಲು ಮರಳಿ ಕರೆಸಿಕೊಳ್ಳಲಾಗುತ್ತಿದೆ ಎಂದು ಸೇನಾ ಪಡೆಗಳ ಮುಖ್ಯಸ್ಥರು, ಪ್ರಧಾನಮಂತ್ರಿಯವರಿಗೆ ತಿಳಿಸಿದರು. ಈ ಹಿಂದೆ ನಿವೃತ್ತರಾದ ಇತರ ವೈದ್ಯಾಧಿಕಾರಿಗಳಿಗೂ ತುರ್ತು ವೈದ್ಯಕೀಯ ಸಹಾಯವಾಣಿಯ ಮೂಲಕ ಸಮಾಲೋಚನೆಗೆ ಸೇವೆ ಲಭಿಸುವಂತೆ ಮಾಡಲು ಮನವಿ ಮಾಡಲಾಗಿದೆ ಎಂದೂ ತಿಳಿಸಿದರು.
ಕಮಾಂಡ್ ಕೇಂದ್ರ ಕಚೇರಿ, ಕಾರ್ಪ್ಸ್ ಕೇಂದ್ರ ಕಚೇರಿ, ವಿಭಾಗೀಯ ಕೇಂದ್ರ ಕಚೇರಿ ಮತ್ತು ನೌಕಾಪಡೆ ಮತ್ತು ವಾಯುಪಡೆಯ ಇದೇ ರೀತಿಯ ಕೇಂದ್ರ ಕಚೇರಿಗಳಲ್ಲಿ ಸಿಬ್ಬಂದಿಯಾಗಿ ನೇಮಕಗೊಂಡಿರುವ ಎಲ್ಲಾ ವೈದ್ಯಕೀಯ ಅಧಿಕಾರಿಗಳನ್ನೂ ಆಸ್ಪತ್ರೆಗಳಲ್ಲಿ ನಿಯುಕ್ತಿಗೊಳಿಸಲಾಗುವುದು ಎಂದೂ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು.
ನರ್ಸಿಂಗ್ ಸಿಬ್ಬಂದಿಯನ್ನೂ ದೊಡ್ಡ ಸಂಖ್ಯೆಯಲ್ಲಿ ನೇಮಿಸಿಕೊಳ್ಳಲಾಗಿದ್ದು, ಅವರು ಆಸ್ಪತ್ರೆಗಳಲ್ಲಿ ವೈದ್ಯರಿಗೆ ನೆರವಾಗಲಿದ್ದಾರೆ ಎಂದು ಪ್ರಧಾನಮಂತ್ರಿಯವರಿಗೆ ಬಿಪಿನ್ ರಾವತ್ ತಿಳಿಸಿದರು. ಸಶಸ್ತ್ರ ಪಡೆಗಳ ವಿವಿಧ ಸ್ಥಾಪನೆಗಳಲ್ಲಿ ಲಭ್ಯವಿರುವ ಆಕ್ಸಿಜನ್ ಸಿಲಿಂಡರ್ ಗಳನ್ನು ಆಸ್ಪತ್ರೆಗಳಿಗೆ ಬಿಡುಗಡೆ ಮಾಡುತ್ತಿರುವುದಾಗಿಯೂ ಪ್ರಧಾನಮಂತ್ರಿಯವರಿಗೆ ತಿಳಿಸಲಾಯಿತು.
ಸೇನಾ ಪಡೆಗಳು ದೊಡ್ಡ ಸಂಖ್ಯೆಯಲ್ಲಿ ವೈದ್ಯಕೀಯ ಸೌಲಭ್ಯಗಳನ್ನು ರೂಪಿಸುತ್ತಿದ್ದು, ಎಲ್ಲಿ ಸಾಧ್ಯವೋ ಅಲ್ಲೆಲ್ಲಾ ನಾಗರಿಕರಿಗೆ ಈ ವೈದ್ಯಕೀಯ ಮೂಲಸೌಕರ್ಯ ಲಭಿಸುವಂತೆ ಮಾಡಲಾಗುತ್ತಿದೆ ಎಂದು ಸೆನಾಪಡೆಗಳ ಮುಖ್ಯಸ್ಥರು ತಿಳಿಸಿದರು.
ಭಾರತೀಯ ವಾಯು ಪಡೆ ಆಕ್ಸಿಜನ್ ಮತ್ತು ಇತರ ಅಗತ್ಯ ವಸ್ತುಗಳನ್ನು ಭಾರತ ಮತ್ತು ವಿದೇಶಗಳಿಂದ ಸಾಗಣೆ ಮಾಡುವ ಕಾರ್ಯಾಚರಣೆ ನಡೆಸುತ್ತಿರುವುದನ್ನೂ ಪ್ರಧಾನಮಂತ್ರಿ ಪರಾಮರ್ಶಿಸಿದರು.
ಕೇಂದ್ರ ಮತ್ತು ರಾಜ್ಯ ಸೈನಿಕ ಕಲ್ಯಾಣ ಮಂಡಳಿಗಳು ಮತ್ತು ವಿವಿಧ ಹಿರಿಯರ ಕೋಶಗಳ ಕೇಂದ್ರ ಕಚೇರಿಗಳಲ್ಲಿ ನೇಮಕಗೊಂಡಿರುವ ನಿವೃತ್ತ ಅಧಿಕಾರಿಗಳ ಸೇವೆಯನ್ನು ದೂರದ ಪ್ರದೇಶಗಳೂ ಒಳಗೊಂಡಂತೆ ಸಾಧ್ಯವಾದಷ್ಟೂ ವಿಸ್ತರಿಸಲು ಸಮನ್ವಯಗೊಳಿಸಲು ಸೂಚಿಸುವ ಕುರಿತಂತೆ ಪ್ರಧಾನಮಂತ್ರಿ ಚರ್ಚಿಸಿದರು.