"ಬುಡಕಟ್ಟು ಸಮುದಾಯದ ಪ್ರತಿಯೊಬ್ಬ ಸದಸ್ಯರೂ ಸರ್ಕಾರಿ ಯೋಜನೆಗಳಿಂದ ಪ್ರಯೋಜನ ಪಡೆಯುವಂತಾಗುವುದು ಪಿಎಂ-ಜನಮನ ಮಹಾ ಅಭಿಯಾನದ ಗುರಿಯಾಗಿದೆ”
"ದೇಶದಲ್ಲಿ ಇಂದು ಬಡವರ ಬಗ್ಗೆ ಮೊದಲು ಯೋಚಿಸುವ ಸರ್ಕಾರವಿದೆ"
"ಮಾತೆ ಶಬರಿ ಇಲ್ಲದೆ ಶ್ರೀ ರಾಮನ ಕಥೆ ಇಲ್ಲ"
"ಇದುವರೆಗೂ ನಿರ್ಲಕ್ಷ್ಯಕ್ಕೆ ಒಳಗಾಗಿದ್ದವರ ಬಳಿಗೆ ಇಂದು ಮೋದಿ ತಲುಪಿದ್ದಾರೆ"
"ನನ್ನ ಬುಡಕಟ್ಟು ಸಹೋದರ- ಸಹೋದರಿಯರು ಕೇಂದ್ರ ಸರ್ಕಾರ ನಡೆಸುತ್ತಿರುವ ʻಮಹತ್ವಾಕಾಂಕ್ಷೆಯ ಜಿಲ್ಲೆʼ ಕಾರ್ಯಕ್ರಮದ ಅತಿದೊಡ್ಡ ಫಲಾನುಭವಿಗಳಾಗಿದ್ದಾರೆ"
"ಬುಡಕಟ್ಟು ಸಂಸ್ಕೃತಿ ಮತ್ತು ಬುಡಕಟ್ಟು ಜನತೆಯ ಘನತೆಗಾಗಿ ನಮ್ಮ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಇಂದು ಬುಡಕಟ್ಟು ಸಮಾಜವು ನೋಡುತ್ತಿದೆ ಮತ್ತು ಅರ್ಥಮಾಡಿಕೊಳ್ಳುತ್ತಿದೆ"

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ʻಪ್ರಧಾನಮಂತ್ರಿ ಜನಜಾತಿ ಆದಿವಾಸಿ ನ್ಯಾಯ ಮಹಾ ಅಭಿಯಾನ’ದ (ಪಿಎಂ-ಜನಮನ) ಅಡಿಯಲ್ಲಿ ʻಪ್ರಧಾನ ಮಂತ್ರಿ ಗ್ರಾಮೀಣ ಆವಾಸ್ ಯೋಜನೆʼಯ(ಪಿಎಂಎವೈ-ಜಿ)ʼ 1 ಲಕ್ಷ ಫಲಾನುಭವಿಗಳಿಗೆ ಮೊದಲ ಕಂತನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ʻಪಿಎಂ-ಜನಮನʼ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.

ತನ್ನ ಪತಿಯೊಂದಿಗೆ ಕೃಷಿ ಕೆಲಸದಲ್ಲಿ ತೊಡಗಿರುವ ಛತ್ತೀಸ್‌ಗಢದ ಜಶ್ಪುರ್ ಜಿಲ್ಲೆಯ ಶ್ರೀಮತಿ ಮನ್‌ಕುನ್ವಾರಿ ಬಾಯಿ ಅವರು, ಸ್ವಸಹಾಯ ಗುಂಪುಗಳೊಂದಿಗೆ ತೊಡಗಿಸಿಕೊಳ್ಳುವ ಮೂಲಕ ʻಡೋನಾ ಪಟ್ಟಾಲ್ʼ ತಯಾರಿಸಲು ತರಬೇತಿ ಪಡೆಯುತ್ತಿರುವುದಾಗಿ ಪ್ರಧಾನಿಯವರಿಗೆ ಮಾಹಿತಿ ನೀಡಿದರು. ಇದೇ ವೇಳೆ, ʻಜನಮನ ಸಂಘಿʼಯಾಗಿ, ಮನೆ-ಮನೆ ಪ್ರಚಾರ ಕೈಗೊಳ್ಳುವ ಮೂಲಕ ʻಪಿಎಂ-ಜನಮನʼ ಯೋಜನೆಯ ಬಗ್ಗೆ ಅರಿವು ಮೂಡಿಸುತ್ತಿರುವುದಾಗಿ ಅವರು ತಿಳಿಸಿದರು. ಮನ್‌ಕುನ್ವಾರಿ ಅವರು 12 ಸದಸ್ಯರನ್ನು ಒಳಗೊಂಡಿರುವ ʻದೀಪ್ ಸಮುಹ್ʼ ಎಂಬ ಸ್ವಸಹಾಯ ಗುಂಪಿನ ಭಾಗವಾಗಿದ್ದಾರೆ. ಸ್ವಸಹಾಯ ಗುಂಪುಗಳಲ್ಲಿ ರಚಿಸಲಾದ ಉತ್ಪನ್ನಗಳನ್ನು ʻವನ್ ಧನ್ʼ ಕೇಂದ್ರಗಳಲ್ಲಿ ಮಾರಾಟ ಮಾಡುವ ತಮ್ಮ ಯೋಜನೆಗಳ ಬಗ್ಗೆ ಶ್ರೀಮತಿ ಮನ್‌ಕುನ್ವಾರಿ ಅವರು ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ಶಾಶ್ವತ ಮನೆ, ನೀರು, ಅಡುಗೆ ಅನಿಲ, ವಿದ್ಯುತ್ ಸಂಪರ್ಕ ಮತ್ತು ʻಆಯುಷ್ಮಾನ್ ಕಾರ್ಡ್ʼ ಬಗ್ಗೆ ಪ್ರಸ್ತಾಪಿಸಿದ ಅವರು, ʻಆಯುಷ್ಮಾನ್‌ ಕಾರ್ಡ್‌ʼ ಮೂಲಕ ತಮ್ಮ ಪತಿ ಕಿವಿ ಸಮಸ್ಯೆಗೆ ಉಚಿತ ಚಿಕಿತ್ಸೆ ಪಡೆದ ಬಗ್ಗೆ ಹಾಗೂ ತಮ್ಮ ಮಗಳು 30,000 ರೂ.ಗಳ ಚಿಕಿತ್ಸೆಯನ್ನು ಉಚಿತವಾಗಿ ಪಡೆದ ಬಗ್ಗೆ ಮಾಹಿತಿ ನೀಡಿದರು. ʻಅರಣ್ಯ ಹಕ್ಕುಗಳ ಕಾಯ್ದೆʼ (ಎಫ್ಆರ್‌ಎ), ʻಕಿಸಾನ್ ಕ್ರೆಡಿಟ್ ಕಾರ್ಡ್ʼ ಮತ್ತು ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಗೆ ಸಂಬಂಧಿಸಿದ ಪ್ರಯೋಜನಗಳನ್ನು ತಾವು ಪಡೆದದ್ದನ್ನು ಅವರು ಉಲ್ಲೇಖಿಸಿದರು. ನಲ್ಲಿ ನೀರಿನ ಸಂಪರ್ಕದಿಂದಾಗಿ ಕಲುಷಿತ ನೀರು ಸೇವನೆಯ ಸಮಸ್ಯೆ ತಪ್ಪಿದೆ ಮತ್ತು ಆ ಮೂಲಕ ತಮ್ಮ ಹಾಗೂ ಇಡೀ ಕುಟುಂಬವು ನೀರಿನಿಂದ ಹರಡುವ ರೋಗಗಳಿಂದ ರಕ್ಷಣೆ ಪಡೆದಿದೆ.  ಅಡುಗೆ ಅನಿಲ ಸಂಪರ್ಕವು ಸಮಯವನ್ನು ಉಳಿಸಲು ಸಹಾಯ ಮಾಡುತ್ತಿದೆ ಮತ್ತು ಉರುವಲಿನಿಂದ ಹೊರಸೂಸುವ ಹೊಗೆಯಿಂದ ಮುಕ್ತಿ ನೀಡಿದೆ ಎಂದು ಶ್ರೀಮತಿ ಮನ್‌ಕುನ್ವಾರಿ ತಿಳಿಸಿದರು. "ಕಳೆದ 75 ವರ್ಷಗಳಲ್ಲಿ ಕೈಗೊಳ್ಳದ ಕೆಲಸವು ಈಗ 25 ದಿನಗಳಲ್ಲಿ ಪೂರ್ಣಗೊಂಡಿದೆ" ಎಂದು ಹೇಳಿದ ಅವರು, ಪ್ರಧಾನಿಗೆ ಧನ್ಯವಾದ ಅರ್ಪಿಸಿದರು. ಶ್ರೀ ಮೋದಿ ಅವರು ಕ್ರೀಡೆಯಲ್ಲಿ ಆಸಕ್ತಿಯ ಬಗ್ಗೆಯೂ ಮನ್‌ಕುನ್ವಾರಿ ಅವರನ್ನು ವಿಚಾರಿಸಿದರು. ಯುವತಿಯರು ಮತ್ತು ಹುಡುಗಿಯರು ಕೈ ಎತ್ತುವಂತೆ ಜನಸಮೂಹದಲ್ಲಿ ಕೇಳಿಕೊಂಡರು. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದನ್ನು ಒತ್ತಿ ಹೇಳಿದ ಪ್ರಧಾನಿ, ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಕ್ರೀಡಾ ಪ್ರಶಸ್ತಿಗಳನ್ನು ಬುಡಕಟ್ಟು ಸಮುದಾಯದ ಕ್ರೀಡಾಪಟುಗಳು ಪಡೆಯುತ್ತಿರುವ ಬಗ್ಗೆ ಪ್ರಸ್ತಾಪಿಸಿದರು. ಶ್ರೀಮತಿ ಮನ್‌ಕುನ್ವಾರಿ ಅವರು ಹಲವಾರು ಯೋಜನೆಗಳ ಅಡಿಯಲ್ಲಿ ಪ್ರಯೋಜನಗಳನ್ನು ಪಡೆಯುತ್ತಿದ್ದಾರೆ ಮತ್ತು ಅವು ಅವರ ಜೀವನವನ್ನು ಸುಲಭಗೊಳಿಸುತ್ತಿವೆ ಎಂದು ಪ್ರಧಾನಿ ಸಂತಸ ವ್ಯಕ್ತಪಡಿಸಿದರು. "ನೀವು ಪ್ರಯೋಜನಗಳನ್ನು ಪಡೆದಿರುವುದು ಮಾತ್ರವಲ್ಲದೆ ಸಮುದಾಯದಲ್ಲಿ ಜಾಗೃತಿ ಮೂಡಿಸಿದ್ದೀರಿ," ಎಂದು ಹೇಳಿದ ಪ್ರಧಾನಮಂತ್ರಿಯವರು, ಜನಸಾಮಾನ್ಯರ ಭಾಗವಹಿಸುವಿಕೆ ಇದ್ದಾಗ ಸರ್ಕಾರದ ಯೋಜನೆಗಳ ಪರಿಣಾಮವು ಅನೇಕ ಪಟ್ಟು ಹೆಚ್ಚಾಗುತ್ತದೆ ಎಂದು ಒತ್ತಿ ಹೇಳಿದರು. ಪ್ರತಿಯೊಬ್ಬ ಫಲಾನುಭವಿಯನ್ನು ಸೇರಿಸುವ ಮತ್ತು ಯಾರನ್ನೂ ಹಿಂದೆ ಬಿಡದಿರುವ ಸರ್ಕಾರದ ಪ್ರಯತ್ನವನ್ನು ಪುನರುಚ್ಚರಿಸುವ ಮೂಲಕ ಅವರು ತಮ್ಮ ಸಂವಾದವನ್ನು ಮುಕ್ತಾಯಗೊಳಿಸಿದರು.

ಮಧ್ಯಪ್ರದೇಶದ ಶಿವಪುರಿಯ ಸಹರಿಯಾ ಜನ್‌ಜಾತಿಯ ಶ್ರೀಮತಿ ಲಲಿತಾ ಆದಿವಾಸಿ ಅವರು 3 ಮಕ್ಕಳ ತಾಯಿಯಾಗಿದ್ದು, ʻಆಯುಷ್ಮಾನ್ ಕಾರ್ಡ್ʼ, ಪಡಿತರ ಚೀಟಿ, ʻಪಿಎಂ ಕಿಸಾನ್ ನಿಧಿʼಯ ಫಲಾನುಭವಿಯಾಗಿದ್ದಾರೆ. ಅವರ ಮಗಳು 6ನೇ ತರಗತಿಯಲ್ಲಿ ಓದುತ್ತಿದ್ದಾಳೆ ಮತ್ತು ʻಲಾಡ್ಲಿ ಲಕ್ಷ್ಮಿʼ ಯೋಜನೆಯ ಪ್ರಯೋಜನದೊಂದಿಗೆ ವಿದ್ಯಾರ್ಥಿವೇತನ, ಸಮವಸ್ತ್ರ ಮತ್ತು ಪುಸ್ತಕಗಳನ್ನು ಪಡೆಯುತ್ತಾಳೆ. 2ನೇ ತರಗತಿಯಲ್ಲಿ ಓದುತ್ತಿರುವ ಅವರ ಮಗ ಸಹ ವಿದ್ಯಾರ್ಥಿವೇತನ ಮತ್ತು ಇತರ ಸೌಲಭ್ಯಗಳನ್ನು ಪಡೆಯುತ್ತಿದ್ದಾನೆ. ಶ್ರೀಮತಿ ಲಲಿತಾ ಅವರ ಕಿರಿಯ ಮಗ ಅಂಗನವಾಡಿ ಶಾಲೆಗೆ ಹೋಗುತ್ತಾನೆ. ಲಲಿತಾ ಅವರು ʻಶೀತ್ಲಾ ಮೈಯಾ ಸ್ವಯಂ ಸಹಾಯತಾ ಸಮೂಹ್ʼ ಎಂಬ ಸ್ವಸಹಾಯ ಗುಂಪಿನ ಭಾಗವಾಗಿದ್ದಾರೆ. ಅವರಿಗೆ ಅಬಕಾರಿʼ ನೇಮಕಾತಿ ಕೇಂದ್ರವು ಬೆಂಬಲ ನೀಡುತ್ತಿದೆ. ಶಾಶ್ವತ ಮನೆಯ ಮೊದಲ ಕಂತಿನ ಬಿಡುಗಡೆ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಅವರನ್ನು ಅಭಿನಂದಿಸಿದರು. ಬುಡಕಟ್ಟು ಸಮಸ್ಯೆಗಳ ಬಗ್ಗೆ ತುಂಬಾ ಸೂಕ್ಷ್ಮವಾಗಿ ಯೋಚಿಸಿದ್ದಕ್ಕಾಗಿ ಶ್ರೀಮತಿ ಲಲಿತಾ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು ಮತ್ತು ಈಗ ಬುಡಕಟ್ಟು ಸಮುದಅಯದ ಜನರು ಲಭ್ಯವಿರುವ ಯೋಜನೆಗಳ ಎಲ್ಲಾ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗುತ್ತಿರುವುದರಿಂದ ʻಜನಮನ ಅಭಿಯಾನʼವು ತಂದಿರುವ ಕ್ರಾಂತಿಕಾರಿ ಪರಿವರ್ತನೆಯ ಬಗ್ಗೆ ಮಾಹಿತಿ ನೀಡಿದರು. ತಮ್ಮ ಸ್ವಸಹಾಯ ಗುಂಪಿನ ಸಭೆಗಳಲ್ಲಿ ʻಜನಮನ ಅಭಿಯಾನʼ ಮತ್ತು ಇತರ ಯೋಜನೆಗಳ ಬಗ್ಗೆ ತಮಗೆ ತಿಳಿಸಲಾಯಿತು. ಇದರಿಂದ ಮನೆ ಹಂಚಿಕೆಯಂತಹ ಪ್ರಯೋಜನಗಳನ್ನು ಪಡೆಯಲು ಪ್ರಾರಂಭಿಸಿದೆ. ತಮ್ಮ ಮಾವನವರು ʻಕಿಸಾನ್ ಕ್ರೆಡಿಟ್ ಕಾರ್ಡ್‌ʼನ ಪ್ರಯೋಜನಗಳನ್ನು ಪಡೆದಿದ್ದಾರೆ ಎಂದು ಶ್ರೀ ಲಲಿತಾ ಅವರು ಪ್ರಧಾನಿಗೆ ತಿಳಿಸಿದರು. ʻಜನಮನ ಅಭಿಯಾನʼದ ಅವಧಿಯಲ್ಲಿ 100 ಹೆಚ್ಚುವರಿ ʻಆಯುಷ್ಮಾನ್ ಕಾರ್ಡ್ʼ ಗಳನ್ನು ಮಾಡಲಾಗಿದೆ. ತಮ್ಮ ಗ್ರಾಮವು ಸಂಪೂರ್ಣವಾಗಿ ʻಉಜ್ವಲʼ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿದೆ. ಜೊತೆಗೆ ಹೊಸ ಮನೆಗಳನ್ನು ಸಹ ಅಭಿಯಾನದ ವ್ಯಾಪ್ತಿಗೆ ತರಲಾಗಿದೆ ಎಂದು ಪ್ರಧಾನಿಯವರಿಗೆ ಲಲಿತಾ ಅವರು ಮಾಹಿತಿ ನೀಡಿದರು. ಬುಡಕಟ್ಟು ಮತ್ತು ಗ್ರಾಮೀಣ ಮಹಿಳೆಯರ ನಾಯಕತ್ವದ ಗುಣಗಳ ಬಗ್ಗೆ ಪ್ರಧಾನಮಂತ್ರಿಯವರು ಮೆಚ್ಚುಗೆ ವ್ಯಕ್ತಪಡಿಸಿದರು. ಸ್ಥಳೀಯ ಪಂಚಾಯತ್ ಸದಸ್ಯೆ ವಿದ್ಯಾ ಆದಿವಾಸಿ ಅವರು ಗ್ರಾಮದ ನಕ್ಷೆ ಮತ್ತು ಅಭಿವೃದ್ಧಿ ಯೋಜನೆಯನ್ನು ಗ್ರಾಮದ ಮಾದರಿಯೊಂದಿಗೆ ಪ್ರಧಾನಿಯವರಿಗೆ ವಿವರಿಸಿದರು. ʻಪ್ರಧಾನಮಂತ್ರಿ ಜನಮನ ಯೋಜನೆʼಯ ಪರಿಣಾಮದ ಬಗ್ಗೆ ತೃಪ್ತಿ ವ್ಯಕ್ತಪಡಿಸಿದ ಪ್ರಧಾನಮಂತ್ರಿಯವರು, ಪ್ರತಿಯೊಬ್ಬ ಅರ್ಹ ಫಲಾನುಭವಿಯನ್ನೂ ತಲುಪುವ ಸರ್ಕಾರದ ಸಂಕಲ್ಪವನ್ನು ಪುನರುಚ್ಚರಿಸಿದರು.

 

ಪಿಂಪ್ರಿಯ ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿರುವ ಭಾರತಿ ನಾರಾಯಣ್ ರಾಣ್ ಮಹಾರಾಷ್ಟ್ರದ ನಾಸಿಕ್ ಮೂಲದವರಾಗಿದ್ದು, ತಮ್ಮ ಹಿಂದಿ ಭಾಷಾ ಕೌಶಲ್ಯದಿಂದ ಪ್ರಧಾನಿಯವರ ಮೆಚ್ಚುಗೆಗೆ ಪಾತ್ರರಾದರು. ತಮ್ಮ ಶಾಲೆಯಲ್ಲಿ ಲಭ್ಯವಿರುವ ಸೌಲಭ್ಯಗಳ ಬಗ್ಗೆ ವಿಚಾರಿಸಿದ ಪ್ರಧಾನಿಯವರಿಗೆ ಈ ಬಗ್ಗೆ ಮಾಹಿತಿ ನೀಡಿದ ಭಾರತಿ  ದೊಡ್ಡ ಆಟದ ಮೈದಾನ, ವಸತಿ ಹಾಸ್ಟೆಲ್ ಮತ್ತು ಆರೋಗ್ಯಕರ ಆಹಾರದ ಬಗ್ಗೆ ಉಲ್ಲೇಖಿಸಿದರು. ಐಎಎಸ್ ಅಧಿಕಾರಿಯಾಗಬೇಕೆಂಬ ತನ್ನ ಆಕಾಂಕ್ಷೆಗಳನ್ನು ಹಂಚಿಕೊಂಡ ಭಾರತಿ, ಆಶ್ರಮ ಶಾಲೆಯಲ್ಲಿ ಶಾಲಾ ಶಿಕ್ಷಕರಾಗಿರುವ ತನ್ನ ಹಿರಿಯ ಸಹೋದರನಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದರು. ಭಾರತಿ ಅವರ ಸಹೋದರ ಶ್ರೀ ಪಾಂಡುರಂಗ ಅವರು 6 ರಿಂದ 12 ನೇ ತರಗತಿಯವರೆಗೆ ಸಿಬಿಎಸ್‌ಇ ಶಿಕ್ಷಣ ಮಂಡಳಿಯಡಿಯ ಏಕಲವ್ಯ ಮಾದರಿ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ನಾಸಿಕ್‌ನಿಂದ ಪದವಿ ಪಡೆದರು ಎಂದು ಪ್ರಧಾನಮಂತ್ರಿಯವರಿಗೆ ಭಾರತಿ ಮಾಹಿತಿ ನೀಡಿದರು. ಏಕಲವ್ಯ ಮಾದರಿ ಶಾಲೆಯಲ್ಲಿ ಅಧ್ಯಯನ ಮಾಡಲು ಇತರ ಮಕ್ಕಳಿಗೆ, ವಿಶೇಷವಾಗಿ ದೊಡ್ಡ ನಗರಗಳಿಗೆ ವಲಸೆ ಹೋಗಲು ಬಯಸುವವರಿಗೆ ಪ್ರೇರಣೆ ನೀಡುವ ಬಗ್ಗೆಯೂ ಅವರು ಮಾಹಿತಿ ನೀಡಿದರು. ಈವರೆಗೆ ಪಡೆದ ಪ್ರಯೋಜನಗಳ ಬಗ್ಗೆ ಮಾತನಾಡಿದ ಶ್ರೀ ಪಾಂಡುರಂಗ ಅವರು, ʻಪಿಎಂಎವೈʼ ಅಡಿಯಲ್ಲಿ ಶಾಶ್ವತ ಮನೆ, ಶೌಚಾಲಯಗಳು, ʻಎಂಎನ್ಆರ್‌ಇಜಿಎʼ ಅಡಿಯಲ್ಲಿ ಉದ್ಯೋಗ, ʻಉಜ್ವಲʼ ಎಲ್‌ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ, ನಲ್ಲಿ ನೀರು ಸರಬರಾಜು, ʻಒಂದು ದೇಶ, ಒಂದು ಪಡಿತರ ಚೀಟಿʼ ಮತ್ತು ʻಆಯುಷ್ಮಾನ್ ಕಾರ್ಡ್ʼ ಬಗ್ಗೆ ಪ್ರಸ್ತಾಪಿಸಿದರು. ʻಪಿಎಂ-ಜನಮನʼ ಅಡಿಯಲ್ಲಿ ಇಂದು ವರ್ಗಾವಣೆಯಾಗಲಿರುವ ಮೊದಲ ಕಂತಿನ 90,000 ರೂ.ಗಳನ್ನು ಅವರು ಉಲ್ಲೇಖಿಸಿದರು. ಎಲ್ಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವ ಬಯಕೆಯನ್ನು ಅವರು ವ್ಯಕ್ತಪಡಿಸಿದರು, ಇದರಿಂದ ಅಂತಹ ವಿದ್ಯಾರ್ಥಿಗಳು ದೇಶದ ಮೂಲೆ ಮೂಲೆಗೂ ತೆರಳಿ ತಮ್ಮ ದಾರಿಯನ್ನು ಕಂಡುಕೊಳ್ಳಬಹುದು ಮತ್ತು ರಾಷ್ಟ್ರಕ್ಕೆ ಸೇವೆ ಸಲ್ಲಿಸಬಹುದು ಎಂದರು. ಎಲ್ಲಾ ದೇವಾಲಯಗಳಲ್ಲಿ ಸ್ವಚ್ಚತಾ ಅಭಿಯಾನಗಳನ್ನು ಕೈಗೊಳ್ಳುವಂತೆ ತಮ್ಮ ಕರೆಯನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿಯವರು, ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರದೇಶದಲ್ಲಿ ಉತ್ಸಾಹದಿಂದ ಈ ಅಭಿಯಾನದಲ್ಲಿ ಭಾಗವಹಿಸುವಂತೆ ಒತ್ತಾಯಿಸಿದರು. ಪ್ರಧಾನಿ ಮೋದಿ ಅವರು ಇಬ್ಬರು ವಿದ್ಯಾರ್ಥಿಗಳಿಗೆ ತಮ್ಮ ಆಶೀರ್ವಾದವನ್ನು ತಿಳಿಸಿದರು. ಜೊತೆಗೆ, ಮಕ್ಕಳಿಗೆ ಶಿಕ್ಷಣ ನೀಡುವ ವಿಚಾರದಲ್ಲಿ ಬದ್ಧತೆಗಾಗಿ ಪೋಷಕರಿಗೆ ನಮಸ್ಕರಿಸಿದರು. ಭಾರತಿ ತನ್ನ ಕನಸನ್ನು ನನಸಾಗಿಸುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಪ್ರಧಾನಿ, ದೇಶದಲ್ಲಿ ʻಏಕಲವ್ಯ ಶಾಲೆʼಗಳ ಸಂಖ್ಯೆಯನ್ನು ಮತ್ತಷ್ಟು ವಿಸ್ತರಿಸಲು ಸರ್ಕಾರ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಹಾಜರಿದ್ದ ವಿದ್ಯಾರ್ಥಿಗಳನ್ನು ʻಏಕಲವ್ಯ ಶಾಲೆʼಗಳ ಭಾಗವಾಗುವಂತೆ ಪಿಎಂ ಮೋದಿ ಒತ್ತಾಯಿಸಿದರು.

ಆಂಧ್ರಪ್ರದೇಶದ ಅಲ್ಲೂರಿಸೀತಾರಾಮ ರಾಜು ಜಿಲ್ಲೆಯ ಶ್ರೀಮತಿ ಸ್ವಾವಿ ಗಂಗಾ ಅವರು ಇಬ್ಬರು ಮಕ್ಕಳ ತಾಯಿಯಾಗಿದ್ದು, ʻಜನಮನʼ ಯೋಜನೆಯಡಿ ಶಾಶ್ವತ ಮನೆ, ಎಲ್‌ಪಿಜಿ ಸಂಪರ್ಕ, ವಿದ್ಯುತ್ ಸಂಪರ್ಕ ಮತ್ತು ನೀರಿನ ಸಂಪರ್ಕವನ್ನು ಅವರಿಗೆ ಮಂಜೂರು ಮಾಡಲಾಗಿದೆ. ಗಂಗಾ ಅವರ ನೆಲೆಸಿರುವ ಪ್ರದೇಶವಾದ ʻಅರಕು ಕಣಿವೆʼಯು ಕಾಫಿಗೆ ಹೆಸರುವಾಸಿಯಾಗಿದೆ ಮತ್ತು ಅವರು ಕಾಫಿ ತೋಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಸರ್ಕಾರದ ಯೋಜನೆಗಳಿಂದಾಗಿ, ಅವರು ತಮ್ಮ ಉತ್ಪನ್ನಗಳಿಗೆ ಉತ್ತಮ ದರವನ್ನು ಪಡೆಯಲು ಸಾಧ್ಯವಾಗಿದೆ. ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಪ್ರಯೋಜನಗಳ ಜೊತೆಗೆ ಕೃಷಿ, ಸಂಸ್ಕರಣೆ, ಪ್ಯಾಕೇಜಿಂಗ್ ಮತ್ತು ಮಾರುಕಟ್ಟೆಗಾಗಿ ಕೌಶಲ್ಯ ಅಭಿವೃದ್ಧಿ ಯೋಜನೆಗಳ ಪ್ರಯೋಜನಗಳನ್ನು ಪಡೆಯುತ್ತಿರುವುದಾಗಿ ಅವರು ಪ್ರಧಾನಿಗೆ ತಿಳಿಸಿದರು. ʻವನ್ ಧನ್ʼ ಯೋಜನೆಯು ತಮ್ಮ ಆದಾಯವನ್ನು ಹೆಚ್ಚಿಸಿರುವುದು ಮಾತ್ರವಲ್ಲದೆ, ಮಧ್ಯವರ್ತಿಗಳಿಂದ ರಕ್ಷಿಸಿದೆ ಎಂದು ಅವರು ಮಾಹಿತಿ ನೀಡಿದರು. ʻಲಕ್ಷಾಧಿಪತಿ ದೀದಿʼ ಯಾಗಿರುವುದಕ್ಕಾಗಿ ಗಂಗಾ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದರು. ಇದೇ ವೇಳೆ, ದೇಶದಲ್ಲಿ 2 ಕೋಟಿ ʻಲಕ್ಷಾಧಿಪತಿ ದೀದಿʼಯರನ್ನು ಸೃಷ್ಟಿಸುವ ತಮ್ಮ ಪ್ರಯತ್ನಗಳ ಬಗ್ಗೆ ಪ್ರಧಾನಿ ಮಾಹಿತಿ ನೀಡಿದರು. ಶ್ರೀಮತಿ ಸ್ವಾವಿ ಗಂಗಾ ಅವರು ಹಳ್ಳಿಯ ಹೊಸ ರಸ್ತೆಗಳು, ನೀರು ಮತ್ತು ವಿದ್ಯುತ್ ಸೌಲಭ್ಯಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದರು. ತಮ್ಮ ಕಣಿವೆಯ ಅತ್ಯಂತ ಶೀತ ವಾತಾವರಣದಲ್ಲಿ, ಶಾಶ್ವತ ಮನೆಯು ತಮ್ಮ ಜೀವನದಲ್ಲಿ ನಿಜವಾದ ಪರಿವರ್ತನೆಯನ್ನು ತರುತ್ತದೆ ಎಂದು ಅವರು ಹೇಳಿದರು. ಗಂಗಾ ಅವರೊಂದಿಗೆ ಮಾತನಾಡಿದ ಬಳಿಕ ಪ್ರಧಾನಮಂತ್ರಿಯವರು, 2047ರ ವೇಳೆಗೆ ʻವಿಕಸಿತ ಭಾರತʼದ ಸಂಕಲ್ಪವನ್ನು ಖಂಡಿತವಾಗಿಯೂ ಸಾಧಿಸಲಾಗುವುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಕುಟುಂಬದಲ್ಲಿ 7 ಜನರನ್ನು ಹೊಂದಿರುವ ಜಾರ್ಖಂಡ್‌ನ ಗುಮ್ಲಾ ಜಿಲ್ಲೆಯ ಶ್ರೀಮತಿ ಶಶಿ ಕಿರಣ್ ಬಿರ್ಜಿಯಾ ಅವರೊಂದಿಗೂ ಪ್ರಧಾನಿ ಸಂವಾದ ನಡೆಸಿದರು. ಈ ವೇಳೆ ಬಿರ್ಜಿಯಾ ಅವರು ತಾವು ಸ್ವಸಹಾಯ ಗುಂಪಿನೊಂದಿಗೆ ತೊಡಗಿಸಿಕೊಂಡಿರುವ ಬಗ್ಗೆ, ʻಫೋಟೋಕಾಪಿʼ ಯಂತ್ರ ಮತ್ತು ಹೊಲಿಗೆ ಯಂತ್ರವನ್ನು ಖರೀದಿಸಿರುವ ಬಗ್ಗೆ ಹಾಗೂ ಕೃಷಿ ಕೆಲಸದಲ್ಲೂ  ತೊಡಗಿಸಿಕೊಂಡಿರುವುದರ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದರು. ತಾವು ಪಡೆದ ಪ್ರಯೋಜನಗಳ ಬಗ್ಗೆ ಪ್ರಧಾನಮಂತ್ರಿಯವರಿಗೆ ಮಾಹಿತಿ ನೀಡಿದ ಅವರು, ನಲ್ಲಿ ನೀರಿನ ಸಂಪರ್ಕ, ವಿದ್ಯುತ್, ʻಪಿಎಂ ಕಿಸಾನ್ ಸಮ್ಮಾನ್ ನಿಧಿʼ ಪ್ರಯೋಜನ ದೊರೆತಿದೆ ಎಂದರು. ತಮ್ಮ ತಾಯಿಯನ್ನು ʻಪಿಎಂ-ಜನಮನʼ ಅಡಿಯ ʻಪಿಎಂಎವೈ(ಜಿ)ʼ ಅಡಿಯಲ್ಲಿ ಶಾಶ್ವತ ಮನೆ ಫಲಾನುಭವಿಗಳ ಪಟ್ಟಿಗೆ ಅಂಗೀಕರಿಸಲಾಗಿದೆ ಎಂದು ಮಾಹಿತಿ ನೀಡಿದ ಬಿರ್ಜಿಯಾ ಅವರು ತಮಗೆ ʻಕಿಸಾನ್ ಕ್ರೆಡಿಟ್ ಕಾರ್ಡ್ʼ ದೊರೆತಿದ್ದು, ʻವನ್ ಧನ್ʼ ಕೇಂದ್ರಗಳೊಂದಿಗೂ ನಿರಂತರ ಸಂಬಂಧ ಹೊಂದಿರುವುದಾಗಿ ಉಲ್ಲೇಖಿಸಿದರು. ಸ್ವಸಹಾಯ ಗುಂಪುಗಳ ಮೂಲಕ ಸಾಲ ಪಡೆಯುವ ಬಗ್ಗೆ ಪ್ರಧಾನಮಂತ್ರಿಯವರು ವಿಚಾರಿಸಿದಾಗ, ಶ್ರೀಮತಿ ಬಿರ್ಜಿಯಾ ಅವರು ಇತ್ತೀಚೆಗೆ ತಮ್ಮ ಗ್ರಾಮದಲ್ಲಿ ಲಭ್ಯವಿಲ್ಲದ  ʻಫೋಟೋಕಾಪಿಯರ್ʼ ಯಂತ್ರವನ್ನು ಖರೀದಿಸಿದ್ದಾಗಿ  ಮಾಹಿತಿ ನೀಡಿದರು. 12 ಸದಸ್ಯರನ್ನು ಒಳಗೊಂಡ ʻಏಕ್ತಾ ಅಜೀವಿಕಾ ಸಖಿ ಮಂಡಲ್ʼ ಎಂದು ಕರೆಯಲಾಗುವ ತಮ್ಮ ಸ್ವಸಹಾಯ ಗುಂಪಿನ ಮೂಲಕ, ʻಪಿಎಂ ಕೌಶಲ್ ವಿಕಾಸ್ ಯೋಜನೆʼ ಅಡಿಯಲ್ಲಿ ʻಡೋನಾ ಪಟ್ಟಾಲ್ʼ ಮತ್ತು ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ತಯಾರಿಸಲು ತರಬೇತಿ ಪಡೆದಿರುವುದಾಗಿ ಮತ್ತು ಆ ಉತ್ಪನ್ನಗಳನ್ನು ʻವನ್ ಧನ್ʼ ಕೇಂದ್ರಗಳ ಮೂಲಕ ಮಾರಾಟ ಮಾಡುತ್ತಿರುವುದಾಗಿ ತಿಳಿಸಿದರು. ಅದುಜ ಕೌಶಲ್ಯ ಅಭಿವೃದ್ಧಿಯೇ ಆಗಿರಲಿ, ಮೂಲಭೂತ ಸೌಲಭ್ಯಗಳು ಅಥವಾ ಪಶುಸಂಗೋಪನೆಯೇ ಆಗಿರಲಿ ಸರ್ಕಾರದ ಯೋಜನೆಗಳು ತಳಮಟ್ಟದಲ್ಲಿ ಫಲಾನುಭವಿಗಳನ್ನು ತಲುಪುವುದರ ಪರಿಣಾಮವನ್ನು ಕಾಣಬಹುದು ಎಂದು ಪ್ರಧಾನಿ ತೃಪ್ತಿ ವ್ಯಕ್ತಪಡಿಸಿದರು. ʻಪಿಎಂ ಜನಮನʼ ಅನುಷ್ಠಾನದೊಂದಿಗೆ ಈ ಪರಿಣಾಮದ ವೇಗ ಮತ್ತು ಪ್ರಮಾಣವು ಅನೇಕ ಪಟ್ಟು ಹೆಚ್ಚಾಗಿದೆ ಎಂದು ಅವರು ಹೇಳಿದರು. "ಕಳೆದ 10 ವರ್ಷಗಳಿಂದ, ನಮ್ಮ ಸರ್ಕಾರವು ಎಲ್ಲಾ ಸರ್ಕಾರಿ ಯೋಜನೆಗಳನ್ನು ಎಲ್ಲಾ ಫಲಾನುಭವಿಗಳಿಗೆ ಸುಲಭ ಮತ್ತು ಕಾಲಮಿತಿಯೊಳಗೆ ತಲುಪಿಸಲು ಬದ್ಧವಾಗಿದೆ,ʼʼ ಎಂದು ಪ್ರಧಾನಿ ಹೇಳಿದರು. ಇದೇ ವೇಳೆ, ಸರ್ಕಾರದ ಯೋಜನೆಗಳು ಎಲ್ಲಾ ಫಲಾನುಭವಿಗಳನ್ನು ತಲುಪುತ್ತವೆ. ಇದು ಮೋದಿ ಅವರ ಗ್ಯಾರಂಟಿ,ʼʼ ಎಂದರು. ʻಪಿಎಂ-ಜನಮನʼ ಮತ್ತು ಇತರ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕಾಗಿ ಗುಮ್ಲಾ ಜಿಲ್ಲೆಯ ಎಲ್ಲ ನಿವಾಸಿಗಳ ಪರವಾಗಿ ಶ್ರೀಮತಿ ಶಶಿ ಅವರು ಪ್ರಧಾನಮಂತ್ರಿಯವರಿಗೆ ಧನ್ಯವಾದ ಅರ್ಪಿಸಿದರು.

 

ಇಂದಿನ ದಿನದ ಸಂದರ್ಭದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಉತ್ತರಾಯಣ, ಮಕರ ಸಂಕ್ರಾಂತಿ, ಪೊಂಗಲ್ ಮತ್ತು ಬಿಹು ಆಚರಣೆಗಳನ್ನು ಉಲ್ಲೇಖಿಸುವ ಮೂಲಕ ಇಡೀ ರಾಷ್ಟ್ರದಲ್ಲಿನ ನೆಲೆಸಿರುವ ಹಬ್ಬದ ವಾತಾವರಣದ ಬಗ್ಗೆ ಗಮನ ಸೆಳೆದರು. ಇಂದಿನ ಸಂದರ್ಭವು ಹಬ್ಬದ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ. ಫಲಾನುಭವಿಗಳೊಂದಿಗಿನ ಸಂವಾದವು ತಮ್ಮ ಸಂತೋಷವನ್ನು ಮತ್ತಷ್ಟು ಹೆಚ್ಚಿಸಿದೆ ಪ್ರಧಾನಿ ಹೇಳಿದರು. "ಒಂದೆಡೆ, ಅಯೋಧ್ಯೆಯಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತಿದ್ದರೆ, ಮತ್ತೊಂದೆಡೆ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯದ 1 ಲಕ್ಷ ಜನರು ದೀಪಾವಳಿಯನ್ನು ಆಚರಿಸುತ್ತಿದ್ದಾರೆ," ಎಂದು ಉದ್ಗರಿಸಿದ ಪ್ರಧಾನಿ, ಶಾಶ್ವತ ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾಯಿಸಿರುವುದನ್ನು ಉಲ್ಲೇಖಿಸಿದರು.  ಇದಕ್ಕಾಗಿ ಫಲಾನುಭವಿಗಳನ್ನು ಪ್ರಧಾನಿ ಅಭಿನಂದಿಸಿದರು.

ಫಲಾನುಭವಿಗಳು ಈ ವರ್ಷದ ದೀಪಾವಳಿಯನ್ನು ತಮ್ಮ ಸ್ವಂತ ಮನೆಗಳಲ್ಲಿಯೇ ಆಚರಿಸಲಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಶುಭ ಸಂದರ್ಭವನ್ನು ಉಲ್ಲೇಖಿಸಿದ ಪ್ರಧಾನಿ, ಇಂತಹ ಐತಿಹಾಸಿಕ ಸಂದರ್ಭದ ಭಾಗವಾಗಲು ಅವಕಾಶ ಸಿಕ್ಕಿದ್ದಕ್ಕಾಗಿ ಕೃತಜ್ಞತೆ ಸಲ್ಲಿಸಿದರು. ರಾಮ ಮಂದಿರದ ಪ್ರತಿಷ್ಠಾಪನೆಯನ್ನು ಗೌರವಿಸಲು ತಾವು ಕೈಗೊಂಡ 11 ದಿನಗಳ ಉಪವಾಸ ಆಚರಣೆಯ ಸಮಯದಲ್ಲಿ ಮಾತೆ ಶಬರಿಯನ್ನು ಸ್ಮರಿಸುವುದು ಸರಿಯಷ್ಟೇ ಎಂದು ಪ್ರಧಾನಿ ಮೋದಿ ಹೇಳಿದರು.

"ಮಾತೆ ಶಬರಿ ಇಲ್ಲದೆ ಶ್ರೀ ರಾಮನ ಕಥೆ ಇಲ್ಲ, " ಎಂದು ಹೇಳಿದ ಪ್ರಧಾನಮಂತ್ರಿಯವರು, ರಾಜಕುಮಾರ ರಾಮನನ್ನು ʻಮರ್ಯಾದಾ ಪುರುಷೋತ್ತಮʼ ರಾಮನಾಗಿ ಪರಿವರ್ತಿಸುವಲ್ಲಿ ಶಬರಿಯ ದೊಡ್ಡ ಪಾತ್ರವನ್ನು ಒತ್ತಿ ಹೇಳಿದರು. "ದಶರಥನ ಮಗ ರಾಮ, ಬುಡಕಟ್ಟು ಜನಾಂಗದ ಶಬರಿಯ ಹಣ್ಣುಗಳನ್ನು ತಿಂದಾಗ ಮಾತ್ರ ʻದೀನಬಂಧು ರಾಮʼ ಆಗಲು ಸಾಧ್ಯ" ಎಂದು ಅವರು ಹೇಳಿದರು. ರಾಮಚರಿತ ಮಾನಸರನ್ನು ಉಲ್ಲೇಖಿಸಿದ ಪ್ರಧಾನಮಂತ್ರಿಯವರು, ಭಗವಾನ್ ಶ್ರೀ ರಾಮನ ಭಕ್ತಿಯು ಶ್ರೇಷ್ಠವಾದುದು ಎಂದು ಹೇಳಲಾಗುತ್ತದೆ ಎಂದು ವಿವರಿಸಿದರು. "ತ್ರೇತಾಯುಗದಲ್ಲಿ ರಾಜಾರಾಮನ ಕಥೆಯಾಗಿರಲಿ ಅಥವಾ ಪ್ರಸ್ತುತ ಪರಿಸ್ಥಿತಿಯಾಗಿರಲಿ, ಬಡವರು, ಅವಕಾಶ ವಂಚಿತರು ಮತ್ತು ಬುಡಕಟ್ಟು ಜನಾಂಗದವರಿಲ್ಲದೆ ಕಲ್ಯಾಣ ಸಾಧ್ಯವಿಲ್ಲ," ಎಂದು ಹೇಳಿದ ಶ್ರೀ ಮೋದಿ ಅವರು ಕಳೆದ 10 ವರ್ಷಗಳಲ್ಲಿ ಬಡವರಿಗೆ 4 ಕೋಟಿ ಶಾಶ್ವತ ಮನೆಗಳನ್ನು ನಿರ್ಮಿಸಿರುವುದನ್ನು ಉಲ್ಲೇಖಿಸಿದರು. "ಇದುವರೆಗೂ ಕಾಳಜಿ ವಹಿಸದ, ನಿರ್ಲಕ್ಷ್ಯಕ್ಕೆ ಒಳಗಾದವರನ್ನು ಮೋದಿ ತಲುಪಿದ್ದಾರೆ," ಎಂದು ಅವರು ಹೇಳಿದರು.

ಸರ್ಕಾರದ ಯೋಜನೆಗಳ ಮೂಲಕ ಬುಡಕಟ್ಟು ಸಮುದಾಯದ ಪ್ರತಿಯೊಬ್ಬ ಸದಸ್ಯರಿಗೆ ಪ್ರಯೋಜನ ಒದಗಿಸುವುದು ʻಪಿಎಂ-ಜನಮನ ಮಹಾ ಅಭಿಯಾನʼದ ಗುರಿ ಎಂದು ಪ್ರಧಾನಿ ಹೇಳಿದರು. ಎರಡು ತಿಂಗಳಲ್ಲಿ, ʻಪಿಎಂ-ಜನಮನ ಮೆಗಾ ಅಭಿಯಾನʼವು ಇತರರು ಬರೀ ಕನಸು ಕಾಣಬಹುದಾದ ಫಲಿತಾಂಶಗಳನ್ನು ವಾಸ್ತವವಾಗಿ ಸಾಧಿಸಿದೆ ಎಂದು ಅವರು ಮಾಹಿತಿ ನೀಡಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ಜಯಂತಿಯಂದು ಪಿಎಂ-ಜನಮನ ಉದ್ಘಾಟನೆಯ ಸಂದರ್ಭದಲ್ಲಿ ಎದುರಾಗಿದ್ದ ಸವಾಲುಗಳನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ಬುಡಕಟ್ಟು ಸಮುದಾಯಗಳಿಗೆ ನೆಲೆಯಾಗಿರುವ ದೇಶದ ದೂರದ ಮತ್ತು ಗಡಿ ಪ್ರದೇಶಗಳಿಗೆ ಇದರ ಪ್ರಯೋಜನಗಳನ್ನು ತಲುಪಿಸುವಲ್ಲಿನ ತೊಂದರೆಗಳನ್ನು ಉಲ್ಲೇಖಿಸಿದರು. ಅಂತಹ ಪ್ರದೇಶಗಳ ಸವಾಲುಗಳಾದ ಕಲುಶಿತ ನೀರು, ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ ಇಲ್ಲದಿರುವುದು, ಕಡಿದಾದ ಪ್ರದೇಶಗಳಿಗೆ ರಸ್ತೆ ಮತ್ತು ಸಂಪರ್ಕದ ಕೊರತೆಯ ಬಗ್ಗೆ ಒತ್ತಿ ಹೇಳಿದರು. ಈ ಯೋಜನೆಯನ್ನು ʻಜನಮನʼ ಎಂದು ಏಕೆ ಕರೆಯಲಾಯಿತು ಎಂಬುದನ್ನು ವಿವರಿಸಿದ ಪ್ರಧಾನಿ, "ಜನ ಎಂದರೆ ಜನರು ಮತ್ತು 'ಮನ್' ಎಂದರೆ ಅವರ 'ಮನ್ ಕಿ ಬಾತ್' ಅಥವಾ ಜನರ ಆಂತರಿಕ ಧ್ವನಿ" ಎಂದು ಹೇಳಿದರು. ʻಪಿಎಂ-ಜನಮನ ಮಹಾ ಅಭಿಯಾನʼಕ್ಕಾಗಿ 23,000 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಲು ಸರ್ಕಾರ ಯೋಜಿಸಿರುವುದರಿಂದ ಬುಡಕಟ್ಟು ಸಮುದಾಯಗಳ ಎಲ್ಲಾ ಆಸೆಗಳು ಈಗ ಈಡೇರಲಿವೆ ಎಂದು ಅವರು ಪುನರುಚ್ಚರಿಸಿದರು.

ಸಮಾಜದಲ್ಲಿ ಯಾರೂ ಹಿಂದೆ ಬೀಳದಂತೆ ನೋಡಿಕೊಂಡಾಗ ಮತ್ತು ಸರ್ಕಾರದ ಯೋಜನೆಗಳ ಪ್ರಯೋಜನಗಳು ಎಲ್ಲರಿಗೂ ತಲುಪುವಂತಾದಾಗ ಮಾತ್ರ ದೇಶವು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಪ್ರಧಾನಿ ಹೇಳಿದರು. ದೇಶದ ಸುಮಾರು 190 ಜಿಲ್ಲೆಗಳಲ್ಲಿ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳು ವಾಸಿಸುತ್ತಿವೆ ಎಂದು ಮಾಹಿತಿ ಪ್ರಧಾನಿ, ಎರಡು ತಿಂಗಳಲ್ಲಿ 80,000ಕ್ಕೂ ಹೆಚ್ಚು ʻಆಯುಷ್ಮಾನ್ ಕಾರ್ಡ್ʼಗಳನ್ನು ವಿತರಿಸುವ ಸರ್ಕಾರದ ಕಾರ್ಯವಿಧಾನವನ್ನು ಒತ್ತಿ ಹೇಳಿದರು. ಅಂತೆಯೇ, ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳ ಸುಮಾರು 30,000 ರೈತರನ್ನು ʻಪಿಎಂ ಕಿಸಾನ್ ಸಮ್ಮಾನ್ ನಿಧಿʼಗೆ ಸರ್ಕಾರ ಸಂಪರ್ಕಿಸಿದೆ ಮತ್ತು ಅಂತಹ 40,000 ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ ಎಂದು ಪ್ರಧಾನಿ ಮಾಹಿತಿ ನೀಡಿದರು. 30,000ಕ್ಕೂ ಹೆಚ್ಚು ದೀನದಲಿತ ಜನರಿಗೆ ʻಕಿಸಾನ್ ಕ್ರೆಡಿಟ್ ಕಾರ್ಡ್‌ʼಗಳನ್ನು ನೀಡಲಾಗಿದೆ ಮತ್ತು ಸುಮಾರು 11,000 ಜನರಿಗೆ ʻಅರಣ್ಯ ಹಕ್ಕುಗಳ ಕಾಯ್ದೆʼಯಡಿ ಭೂಮಿ ಗುತ್ತಿಗೆ ನೀಡಲಾಗಿದೆ ಎಂದು ಅವರು ಹೇಳಿದರು. ಇದು ಕೆಲವೇ ವಾರಗಳ ಸಾಧಿಸಲಾದ ಪ್ರಗತಿಯಾಗಿದ್ದು, ಪ್ರತಿದಿನ ಫಲಾನುಭವಿಗಳ ಸಂಖ್ಯೆ ಹೆಚ್ಚುತ್ತಿದೆ ಎಂದು ಅವರು ತಿಳಿಸಿದರು. ಸರ್ಕಾರದ ಪ್ರತಿಯೊಂದು ಯೋಜನೆಯೂ ನಮ್ಮ ಅತ್ಯಂತ ಹಿಂದುಳಿದ ಬುಡಕಟ್ಟು ಸಮುದಾಯಗಳನ್ನು ಆದಷ್ಟು ಬೇಗ ತಲುಪುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ತನ್ನಿಂದ ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. "ನಾನು ನಿಮಗೆ ಭರವಸೆ ನೀಡುತ್ತೇನೆ, ಇದು ಮೋದಿಯವರ ಗ್ಯಾರಂಟಿ. ಮೋದಿಯವರ ʻಗ್ಯಾರಂಟಿʼ ಎಂದರೆ ಅದು ಈಡೇರಿಕೆಯ ʻಗ್ಯಾರಂಟಿʼ ಎಂದು ನಿಮಗೆ ಗೊತ್ತಿದೆ," ಎಂದು ಪ್ರಧಾನಿ ಉದ್ಗರಿಸಿದರು.

ʻವಿಶೇಷ ದುರ್ಬಲ ಬುಡಕಟ್ಟು ಗುಂಪುʼಗಳಿಗೆ(ಪಿವಿಟಿಜಿ) ಶಾಶ್ವತ ಮನೆಗಳನ್ನು ಒದಗಿಸುವ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಬುಡಕಟ್ಟು ಸಮುದಾಯದ ಫಲಾನುಭವಿಗಳ ಖಾತೆಗಳಿಗೆ ನೇರವಾಗಿ ಹಣವನ್ನು ವರ್ಗಾಯಿಸಲಾಗಿದೆ ಎಂದರು. ವಿದ್ಯುತ್ ಮತ್ತು ಅಡುಗೆ ಅನಿಲ ಸಂಪರ್ಕ, ನಲ್ಲಿ ನೀರು ಮತ್ತು ಶೌಚಾಲಯ ಸೌಲಭ್ಯಗಳೊಂದಿಗೆ ಗೌರವಯುತ ಜೀವನಕ್ಕೆ  ಮೂಲವಾಗಿರುವ ಶಾಶ್ವತ ಮನೆಗಾಗಿ ಫಲಾನುಭವಿಗಳು 2.5 ಲಕ್ಷ ರೂಪಾಯಿಗಳನ್ನು ಪಡೆಯುತ್ತಾರೆ. ಈ ಒಂದು ಲಕ್ಷ ಫಲಾನುಭವಿಗಳು ಕೇವಲ ಆರಂಭವಷ್ಟೇ. ಸರ್ಕಾರವು ಪ್ರತಿಯೊಬ್ಬ ಅರ್ಹ ಅಭ್ಯರ್ಥಿಯನ್ನು ತಲುಪಲಿದೆ ಎಂದು ಪ್ರಧಾನಿ ಹೇಳಿದರು. ಈ ಪ್ರಯೋಜನಗಳನ್ನು ಪಡೆಯಲು ಯಾರಿಗೂ ಲಂಚ ನೀಡುವ ಅಗತ್ಯವಿಲ್ಲ ಎಂದು ಭರವಸೆ ನೀಡಿದ ಪ್ರಧಾನಿ, ಕಟ್ಟುನಿಟ್ಟಾಗಿ ಲಂಚ ನೀಡಿಕೆಯಿಂದ ದೂರವಿರಿ ಎಂದು ಫಲಾನುಭವಿಗಳಿಗೆ ಮನವಿ ಮಾಡಿದರು.

ಬುಡಕಟ್ಟು ಸಮುದಾಯಗಳೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಪ್ರಧಾನಮಂತ್ರಿಯವರು, ʻಪ್ರಧಾನಮಂತ್ರಿ ಜನಮನ ಮಹಾ ಅಭಿಯಾನʼದಲ್ಲಿ ತಮ್ಮ ವೈಯಕ್ತಿಕ ಅನುಭವದ ಮೇಲೆ ತಾವು ಅವಲಂಬಿತರಾಗಿರುವುದಾಗಿ ಹೇಳಿದರು. ಅಲ್ಲದೆ, ಈ ನಿಟ್ಟಿನಲ್ಲಿ ಮಾರ್ಗದರ್ಶನಕ್ಕಾಗಿ ರಾಷ್ಟ್ರಪತಿ ಶ್ರೀಮತಿ ದ್ರೌಪದಿ ಮುರ್ಮು ಅವರನ್ನು ಪ್ರಧಾನಿ ಶ್ಲಾಘಿಸಿದರು.

"ಯೋಜನೆಗಳು ಬರೀ ಕಾಗದದ ಮೇಲಷ್ಟೇ ಇದ್ದರೆ, ನಿಜವಾದ ಫಲಾನುಭವಿಗೆ ಅಂತಹ ಯಾವುದೇ ಯೋಜನೆಯ ಅಸ್ತಿತ್ವದ ಬಗ್ಗೆ ಎಂದಿಗೂ ತಿಳಿಯುವುದಿಲ್ಲ," ಎಂದು ಹೇಳಿದ ಪ್ರಧಾನಿ ಅವುಗಳನ್ನು ಪಡೆಯುವಲ್ಲಿನ ಸವಾಲುಗಳನ್ನು ಎತ್ತಿ ತೋರಿದರು. ʻಪಿಎಂ-ಜನಮನ ಮಹಾ ಅಭಿಯಾನʼದ ಅಡಿಯಲ್ಲಿ, ಅಡೆತಡೆಗಳನ್ನು ಸೃಷ್ಟಿಸಿದ್ದ ಎಲ್ಲಾ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ ಎಂದು ಒತ್ತಿ ಹೇಳಿದ ಅವರು, ಹಿಂದುಳಿದ ಬುಡಕಟ್ಟು ಜನಾಂಗದ ಗ್ರಾಮಗಳಿಗೆ ಸುಗಮ ರಸ್ತೆ ಸಂಪರ್ಕ ಒದಗಿಸಿದ ʻಪಿಎಂ ಗ್ರಾಮ ಸಡಕ್ʼ ಯೋಜನೆಯ ಉದಾಹರಣೆಯನ್ನು ನೀಡಿದರು. ಸಂಚಾರಿ ವೈದ್ಯಕೀಯ ಘಟಕಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ, ಪ್ರತಿ ಬುಡಕಟ್ಟು ಮನೆಗೂ ವಿದ್ಯುತ್ ಸೌಲಭ್ಯ ಖಚಿತಪಡಿಸಿಕೊಳ್ಳಲು ಸೌರ ವಿದ್ಯುತ್ ಸಂಪರ್ಕ, ನೂರಾರು ಹೊಸ ಮೊಬೈಲ್ ಟವರ್‌ಗಳನ್ನು ಸ್ಥಾಪಿಸುವ ಮೂಲಕ ವೇಗದ ಇಂಟರ್ನೆಟ್ ಸಂಪರ್ಕವನ್ನು ಖಚಿತಪಡಿಸುವುದು ಮುಂತಾದ ಕ್ರಮಗಳನ್ನೂ ಅವರು ಉದಾಹರಣೆಯಾಗಿ ಪ್ರಸ್ತಾಪಿಸಿದರು. 

ಆಹಾರ ಭದ್ರತೆಗಾಗಿ, ಉಚಿತ ಪಡಿತರ ಯೋಜನೆಯನ್ನು 5 ವರ್ಷಗಳವರೆಗೆ ವಿಸ್ತರಿಸಿರುವುದನ್ನು ಪ್ರಧಾನಿ ಪ್ರಸ್ತಾಪಿಸಿದರು. ದುರ್ಬಲ ಬುಡಕಟ್ಟು ಗುಂಪುಗಳಿಗೆ ಲಸಿಕೆ, ತರಬೇತಿ ಮತ್ತು ಅಂಗನವಾಡಿಯಂತಹ ಎಲ್ಲಾ ಸೌಲಭ್ಯಗಳನ್ನು ಒಂದೇ ಸೂರಿನಡಿ ಒದಗಿಸುವಂತಹ 1000 ಕೇಂದ್ರಗಳನ್ನು ಸ್ಥಾಪಿಸುವ ಯೋಜನೆಯ ಬಗ್ಗೆಯೂ ಅವರು ಮಾಹಿತಿ ನೀಡಿದರು. ಬುಡಕಟ್ಟು ಯುವಕರಿಗಾಗಿ ಹಾಸ್ಟೆಲ್‌ಗಳ ಸ್ಥಾಪನೆ ಬಗ್ಗೆಯೂ ಅವರು ಉಲ್ಲೇಖಿಸಿದರು. ಹೊಸ ʻವನ್ ಧನ್ʼ ಕೇಂದ್ರಗಳು ಸಹ ತಲೆ ಎತ್ತಲಿವೆ ಎಂದು ಪ್ರಧಾನಿ ಹೇಳಿದರು.

'ಮೋದಿ ಕಿ ಗ್ಯಾರಂಟಿ' ವಾಹನಗಳ ಮೂಲಕ  ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯು ದೇಶದ ಪ್ರತಿ ಹಳ್ಳಿಯನ್ನು ತಲುಪುತ್ತಿದೆ ಎಂದು ಹೇಳಿದ ಪ್ರಧಾನಿ, ಸರ್ಕಾರದ ವಿವಿಧ ಯೋಜನೆಗಳೊಂದಿಗೆ ಜನರನ್ನು ಸಂಪರ್ಕಿಸುವ ಏಕೈಕ ಉದ್ದೇಶದಿಂದ ಈ ವಾಹನವನ್ನು ಓಡಿಸಲಾಗುತ್ತಿದೆ ಎಂದು ಹೇಳಿದರು. ʻಮಹತ್ವಾಕಾಂಕ್ಷೆಯ ಜಿಲ್ಲೆʼ ಕಾರ್ಯಕ್ರಮದ ಬಗ್ಗೆ ಮಾತನಾಡಿದ ಅವರು, ಬುಡಕಟ್ಟು ಸಮುದಾಯದ ಸದಸ್ಯರು ಇದರ ಗರಿಷ್ಠ ಫಲಾನುಭವಿಗಳಾಗಿದ್ದಾರೆ ಎಂದರು. ವಿದ್ಯುತ್ ಸಂಪರ್ಕ, ʻಒಂದು ದೇಶ-ಒಂದು ಪಡಿತರ ಕಾರ್ಡ್‌ʼ ಮತ್ತು ʻಆಯುಷ್ಮಾನ್ ಭಾರತ್ʼ ಯೋಜನೆಯನ್ನು ಅವರು ಉಲ್ಲೇಖಿಸಿದರು.

ಕುಡಗೋಲು ಕೋಶ ರಕ್ತಹೀನತೆಯ ಅಪಾಯಗಳ ಬಗ್ಗೆಯೂ ಪ್ರಸ್ತಾಪಿಸಿದ ಪ್ರಧಾನಮಂತ್ರಿಯವರು, ಬುಡಕಟ್ಟು ಸಮಾಜದ ಹಲವು ತಲೆಮಾರುಗಳು ಈ ರೋಗದಿಂದ ಬಾಧಿತವಾಗಿವೆ ಎಂದು ಗಮನ ಸೆಳೆದರು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಹರಡುವ ಈ ರೋಗವನ್ನು ನಿರ್ಮೂಲನೆ ಮಾಡಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಮಾಹಿತಿ ನೀಡಿದರು. "ವಿಕಾಸ ಭಾರತ ಸಂಕಲ್ಪ ಯಾತ್ರೆಯ ಸಂದರ್ಭದಲ್ಲಿ ಕುಡಗೋಲು ಕೋಶ ರಕ್ತಹೀನತೆಯ ತಪಾಸಣೆಯನ್ನೂ ನಡೆಸಲಾಗುತ್ತಿದೆ. ಕಳೆದ 2 ತಿಂಗಳಲ್ಲಿ 40 ಲಕ್ಷಕ್ಕೂ ಹೆಚ್ಚು ಜನರನ್ನು ಈ ಸಮಸ್ಯೆಗಾಗಿ ಪರೀಕ್ಷಿಸಲಾಗಿದೆ," ಎಂದು ಅವರು ಮಾಹಿತಿ ನೀಡಿದರು.

ಪರಿಶಿಷ್ಟ ಪಂಗಡಗಳಿಗೆ ಸಂಬಂಧಿಸಿದ ಯೋಜನೆಗಳ ಬಜೆಟ್ ಅನ್ನು ಸರ್ಕಾರ 5 ಪಟ್ಟು ಹೆಚ್ಚಿಸಿದೆ ಎಂದು ಶ್ರೀ ಮೋದಿ ಮಾಹಿತಿ ನೀಡಿದರು. ಬುಡಕಟ್ಟು ಮಕ್ಕಳ ಶಿಕ್ಷಣಕ್ಕಾಗಿ ಈ ಹಿಂದೆ ಲಭ್ಯವಿದ್ದ ವಿದ್ಯಾರ್ಥಿವೇತನದ ಒಟ್ಟು ಬಜೆಟ್ ಅನ್ನು ಈಗ ಎರಡೂವರೆ ಪಟ್ಟು ಹೆಚ್ಚಿಸಲಾಗಿದೆ. 10 ವರ್ಷಗಳ ಹಿಂದೆ, ದೇಶದಲ್ಲಿ ಬುಡಕಟ್ಟು ಮಕ್ಕಳಿಗಾಗಿ ಕೇವಲ 90 ʻಏಕಲವ್ಯ ಮಾದರಿ ಶಾಲೆʼಗಳನ್ನು ನಿರ್ಮಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರವು ಕಳೆದ 10 ವರ್ಷಗಳಲ್ಲಿ 500 ಕ್ಕೂ ಹೆಚ್ಚು ಹೊಸ ʻಏಕಲವ್ಯ ಮಾದರಿ ಶಾಲೆʼಗಳನ್ನು ನಿರ್ಮಿಸುವ ಕೆಲಸವನ್ನು ಪ್ರಾರಂಭಿಸಿದೆ ಎಂದು ಪ್ರಧಾನಿ ಗಮನಸೆಳೆದರು. ಬುಡಕಟ್ಟು ವಿದ್ಯಾರ್ಥಿಗಳು ಉನ್ನತ ಶಿಕ್ಷಣವನ್ನು ಪಡೆಯುತ್ತಿದ್ದಾರೆ ಮತ್ತು ದೊಡ್ಡ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು. ಇದಕ್ಕಾಗಿ, ಬುಡಕಟ್ಟು ಪ್ರದೇಶಗಳಲ್ಲಿ ತರಗತಿಗಳನ್ನು ಆಧುನೀಕರಿಸಲಾಗುತ್ತಿದೆ ಮತ್ತು ಉನ್ನತ ಶಿಕ್ಷಣ ಕೇಂದ್ರಗಳನ್ನು ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

2014ಕ್ಕೆ ಮೊದಲು, ಸುಮಾರು 10 ಅರಣ್ಯ ಉತ್ಪನ್ನಗಳಿಗೆ ಮಾತ್ರ ʻಕನಿಷ್ಠ ಬೆಂಬಲ ಬೆಲೆʼಯನ್ನು ನಿಗದಿಪಡಿಸಲಾಗಿತ್ತು. ಆದರೆ ಪ್ರಸ್ತುತ ಸರ್ಕಾರವು ಸುಮಾರು 90 ಅರಣ್ಯ ಉತ್ಪನ್ನಗಳನ್ನು ʻಕನಿಷ್ಠ ಬೆಂಬಲ ಬೆಲೆʼ ವ್ಯಾಪ್ತಿಗೆ ತಂದಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. "ಅರಣ್ಯ ಉತ್ಪನ್ನಗಳಿಗೆ ಹೆಚ್ಚಿನ ಬೆಲೆ ಖಾತರಿಪಡಿಸಲು, ನಾವು ʻವನ್ ಧನ್ʼ ಯೋಜನೆಯನ್ನು ಆರಂಭಿಸಿದ್ದೇವೆ," ಎಂದು ಹೇಳಿದ ಶ್ರೀ ಮೋದಿ ಅವರು, ಇದರ ಲಕ್ಷಾಂತರ ಫಲಾನುಭವಿಗಳಲ್ಲಿ ಹೆಚ್ಚಿನ ಸಂಖ್ಯೆಯ ಮಹಿಳೆಯರೇ ಇರುವುದನ್ನು ಒತ್ತಿ ಹೇಳಿದರು. ಕಳೆದ 10 ವರ್ಷಗಳಲ್ಲಿ ಬುಡಕಟ್ಟು ಕುಟುಂಬಗಳಿಗೆ 23 ಲಕ್ಷ ಪಟ್ಟಾಗಳನ್ನು ನೀಡಲಾಗಿದೆ. ನಾವು ಬುಡಕಟ್ಟು ಸಮುದಾಯದ ʻಹಾತ್ ಬಜಾರ್ʼಗಳನ್ನು ಉತ್ತೇಜಿಸುತ್ತಿದ್ದೇವೆ. ನಮ್ಮ ಬುಡಕಟ್ಟು ಸಹೋದರರು ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಅದೇ ಸರಕುಗಳನ್ನು ದೇಶದ ಇತರ ಮಾರುಕಟ್ಟೆಗಳಲ್ಲಿ ಮಾರಾಟ ಮಾಡಲು ಅನೇಕ ಅಭಿಯಾನಗಳನ್ನು ನಡೆಸಲಾಗುತ್ತಿದೆ," ಎಂದು ಅವರು ಹೇಳಿದರು.

ಭಾಷಣವನ್ನು ಮುಕ್ತಾಯಗೊಳಿಸುವ ಮುನ್ನ ಪ್ರಧಾನಮಂತ್ರಿಯವರು, "ನನ್ನ ಬುಡಕಟ್ಟು ಸಹೋದರ ಸಹೋದರಿಯರು ದೂರದ ಪ್ರದೇಶಗಳಲ್ಲಿ ವಾಸಿಸುತ್ತಿರಬಹುದು, ಆದರೆ ಅವರು ಅದ್ಭುತ ದೂರದೃಷ್ಟಿಯನ್ನು ಹೊಂದಿದ್ದಾರೆ. ಇಂದು ಬುಡಕಟ್ಟು ಸಂಸ್ಕೃತಿ ಮತ್ತು ಬುಡಕಟ್ಟು ಜನರ ಗೌರವಕ್ಕಾಗಿ ನಮ್ಮ ಸರ್ಕಾರ ಹೇಗೆ ಕೆಲಸ ಮಾಡುತ್ತಿದೆ ಎಂಬುದನ್ನು ಬುಡಕಟ್ಟು ಸಮುದಾಯವು ನೋಡುತ್ತಿದೆ ಮತ್ತು ಅರ್ಥಮಾಡಿಕೊಳ್ಳುತ್ತಿದೆ,ʼʼ ಎಂದು ಹೇಳಿದರು. ಭಗವಾನ್ ಬಿರ್ಸಾ ಮುಂಡಾ ಅವರ ಜನ್ಮ ದಿನಾಚರಣೆಯನ್ನು ʻಜನ್‌ಜಾತೀಯ ಗೌರವ್ ದಿವಸ್ʼ ಎಂದು ಆಚರಿಸಲು ಸರ್ಕಾರ ಘೋಷಿಸಿದ್ದನ್ನು ಹಾಗೂ ದೇಶಾದ್ಯಂತ ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ 10 ಬೃಹತ್‌ ವಸ್ತುಸಂಗ್ರಹಾಲಯಗಳ ಸ್ಥಾಪನೆಯನ್ನು ಪ್ರಧಾನಿ ಉಲ್ಲೇಖಿಸಿದರು. ಬುಡಕಟ್ಟು ಸಮುದಾಯದ ಗೌರವ ಮತ್ತು ಸೌಕರ್ಯಕ್ಕಾಗಿ ಸರ್ಕಾರ ನಿರಂತರವಾಗಿ ಕೆಲಸ ಮಾಡುತ್ತದೆ ಎಂದು ಭರವಸೆ ನೀಡುವ ಮೂಲಕ ಪ್ರಧಾನಿ ಮೋದಿ ತಮ್ಮ ಮಾತು ಮುಗಿಸಿದರು.

ಹಿನ್ನೆಲೆ

ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ʻಅಂತ್ಯೋದಯʼ ಆಶಯದಡಿ ಪ್ರಧಾನಮಂತ್ರಿಯವರ ಪ್ರಯತ್ನಗಳಿಗೆ ಅನುಗುಣವಾಗಿ, 2023ರ ನವೆಂಬರ್ 15ರಂದು ʻಜನಜಾತೀಯ ಗೌರವ್ ದಿವಸ್ʼ ಸಂದರ್ಭದಲ್ಲಿ ʻವಿಶೇಷ ದುರ್ಬಲ ಬುಡಕಟ್ಟು ಗುಂಪುʼಗಳ(ಪಿವಿಟಿಜಿ) ಸಾಮಾಜಿಕ-ಆರ್ಥಿಕ ಕಲ್ಯಾಣಕ್ಕಾಗಿ ʻಪಿಎಂ-ಜನಮನʼ ಯೋಜನೆಯನ್ನು ಪ್ರಾರಂಭಿಸಲಾಯಿತು.

ಸುಮಾರು 24,000 ಕೋಟಿ ರೂ.ಗಳ ಬಜೆಟ್ ಹೊಂದಿರುವ ʻಪಿಎಂ-ಜನಮನʼ ಯೋಜನೆಯು, 9 ಸಚಿವಾಲಯಗಳ ಮೂಲಕ 11 ನಿರ್ಣಾಯಕ ಉಪಕ್ರಮಗಳ ಮೇಲೆ ಗಮನ ಕೇಂದ್ರೀಕರಿಸುತ್ತದೆ. ʻಪಿವಿಟಿಜಿʼ ಕುಟುಂಬಗಳು ಮತ್ತು ನೆಲೆಗಳನ್ನು ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕಾಂಶ, ವಿದ್ಯುತ್, ರಸ್ತೆ ಮತ್ತು ದೂರಸಂಪರ್ಕ ಸಂಪರ್ಕದಂತಹ ಮೂಲಭೂತ ಸೌಲಭ್ಯಗಳೊಂದಿಗೆ ಸಜ್ಜುಗೊಳಿಸುವ ಮೂಲಕ ಮೂಲಕ ʻಪಿವಿಟಿಜಿʼಗಳ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುವ ಹಾಗೂ ಆ ಸಮುದಾಯಕ್ಕೆ ಸುಸ್ಥಿರ ಜೀವನೋಪಾಯದ ಅವಕಾಶಗಳನ್ನು ಒದಗಿಸುವ ಗುರಿಯನ್ನು ಈ ಯೋಜನೆಯು ಹೊಂದಿದೆ. 

 

 

 

 

 

 

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s organic food products export reaches $448 Mn, set to surpass last year’s figures

Media Coverage

India’s organic food products export reaches $448 Mn, set to surpass last year’s figures
NM on the go

Nm on the go

Always be the first to hear from the PM. Get the App Now!
...
Prime Minister lauds the passing of amendments proposed to Oilfields (Regulation and Development) Act 1948
December 03, 2024

The Prime Minister Shri Narendra Modi lauded the passing of amendments proposed to Oilfields (Regulation and Development) Act 1948 in Rajya Sabha today. He remarked that it was an important legislation which will boost energy security and also contribute to a prosperous India.

Responding to a post on X by Union Minister Shri Hardeep Singh Puri, Shri Modi wrote:

“This is an important legislation which will boost energy security and also contribute to a prosperous India.”