11 ಸಂಪುಟಗಳ ಸರಣಿಯ ಪೈಕಿ ಮೊದಲ ಸಂಪುಟವನ್ನು ಬಿಡುಗಡೆ ಮಾಡಿದರು
"ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಮಗ್ರ ಕೃತಿ ಸಂಕಲನ ಪುಸ್ತಕದ ಬಿಡುಗಡೆ ಬಹಳ ಮಹತ್ವದ್ದಾಗಿದೆ"
"ಮಹಾಮಾನ ಅವರು ಆಧುನಿಕ ಚಿಂತನೆ ಮತ್ತು ಸನಾತನ ಸಂಸ್ಕೃತಿಯ ಸಂಗಮವಾಗಿದ್ದರು"
"ಮಾಳವೀಯ ಅವರ ಆಲೋಚನೆಗಳ ಪರಿಮಳದ ಅನುಭವವನ್ನು ನಮ್ಮ ಸರ್ಕಾರದಲ್ಲಿ ಕಾಣಬಹುದಾಗಿದೆ"
"ಮಹಾಮಾನರಿಗೆ ʻಭಾರತ ರತ್ನʼ ನೀಡಿ ಗೌರವಿಸಿದ್ದು ನಮ್ಮ ಸರ್ಕಾರದ ಸುಯೋಗ"
"ಮಾಳವೀಯ ಅವರ ಪ್ರಯತ್ನಗಳು ದೇಶದ ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯಲ್ಲಿಯೂ ಪ್ರತಿಬಿಂಬಿತವಾಗಿವೆ"
"ಉತ್ತಮ ಆಡಳಿತ ಎಂದರೆ ಅದು ಅಧಿಕಾರ ಕೇಂದ್ರಿತವಾಗಿರದೆ ಸೇವಾ ಕೇಂದ್ರಿತವಾಗಿರಬೇಕು"
"ಭಾರತವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ಸಂಸ್ಥೆಗಳನ್ನು ಹುಟ್ಟಿಹಾಕುತ್ತಿದೆ"

ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ 162ನೇ ಜನ್ಮ ದಿನಾಚರಣೆಯ ಸಂದರ್ಭದಲ್ಲಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ʻಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಮಗ್ರ ಕೃತಿ ಸಂಕಲನʼದ  11 ಸಂಪುಟಗಳ ಸರಣಿಯ ಪೈಕಿ ಮೊದಲ ಸಂಪುಟವನ್ನು ಲೋಕಾರ್ಪಣೆ ಮಾಡಿದರು. ಶ್ರೀ ಮೋದಿ ಅವರು ಪಂಡಿತ್ ಮದನ್ ಮೋಹನ್ ಮಾಳವೀಯ ಅವರಿಗೆ ಪುಷ್ಪ ನಮನವನ್ನೂ ಸಲ್ಲಿಸಿದರು. ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಪ್ರಖ್ಯಾತ ಸ್ಥಾಪಕ ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಪ್ರಮುಖ ಸ್ಥಾನ ಪಡೆದಿದ್ದಾರೆ. ಜನರಲ್ಲಿ ರಾಷ್ಟ್ರೀಯ ಪ್ರಜ್ಞೆಯನ್ನು ಜಾಗೃತಗೊಳಿಸಲು ಅವಿರತವಾಗಿ ಶ್ರಮಿಸಿದ ಶ್ರೇಷ್ಠ ವಿದ್ವಾಂಸ ಹಾಗೂ ಸ್ವಾತಂತ್ರ್ಯ ಹೋರಾಟಗಾರರಾಗಿ ಮಾಳವೀಯ ಅವರನ್ನು ಸ್ಮರಿಸಲಾಗುತ್ತದೆ.

ಪ್ರಧಾನಮಂತ್ರಿಯವರು ಎಲ್ಲರಿಗೂ ʻಕ್ರಿಸ್ ಮಸ್ʼ ಹಬ್ಬದ ಶುಭಾಶಯ ಕೋರುವ ಮೂಲಕ ತಮ್ಮ ಮಾತು ಆರಂಭಿಸಿದರು. ಇಂದು ʻಅಟಲ್ ಜಯಂತಿʼ ಮತ್ತು ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಜನ್ಮ ದಿನಾಚರಣೆಯಾಗಿರುವುದರಿಂದ ಇಂದಿನ ಸಂದರ್ಭವು ಭಾರತ ಮತ್ತು ಭಾರತೀಯತೆಯನ್ನು ನಂಬುವ ಜನರಿಗೆ ಸ್ಫೂರ್ತಿಯ ಹಬ್ಬವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಮತ್ತು ಮಾಜಿ ಪ್ರಧಾನಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ನಮನ ಸಲ್ಲಿಸಿದರು. ಅಟಲ್ ಜಯಂತಿಯ ಸಂದರ್ಭದಲ್ಲಿ ʻಉತ್ತಮ ಆಡಳಿತ ದಿನʼದ ಆಚರಿಸುತ್ತಿರುವುದನ್ನು ಅವರು ಉಲ್ಲೇಖಿಸಿದರು ಮತ್ತು ಭಾರತದ ಪ್ರತಿಯೊಬ್ಬ ನಾಗರಿಕರಿಗೆ ತಮ್ಮ ಶುಭಾಶಯಗಳನ್ನು ತಿಳಿಸಿದರು.

 

ಯುವ ಪೀಳಿಗೆ ಮತ್ತು ಸಂಶೋಧನಾ ವಿದ್ವಾಂಸರಿಗೆ ʻಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಮಗ್ರ ಕೃತಿ ಸರಣಿʼಯ ಮಹತ್ವವನ್ನು ಪ್ರಧಾನಿ ಒತ್ತಿ ಹೇಳಿದರು. ಈ ಸಂಕಲಿತ ಕೃತಿಗಳು ಬನಾರಸ್‌ ಹಿಂದೂ ವಿಶ್ವವಿದ್ಯಾಲಯಕ್ಕೆ ಸಂಬಂಧಿಸಿದ ವಿಷಯಗಳು, ಕಾಂಗ್ರೆಸ್ ನಾಯಕತ್ವದೊಂದಿಗೆ ಮಹಾಮಾನ ಅವರ ಸಂವಾದ ಹಾಗೂ ಬ್ರಿಟಿಷ್ ನಾಯಕತ್ವದ ಬಗ್ಗೆ ಅವರ ಮನೋಭಾವದ ಮೇಲೆ ಬೆಳಕು ಚೆಲ್ಲುತ್ತವೆ ಎಂದು ಪ್ರಧಾನಿ ಹೇಳಿದರು. ಮಹಾಮಾನ ಅವರ ಡೈರಿಗೆ ಸಂಬಂಧಿಸಿದ ಸಂಪುಟವು ಸಮಾಜ, ರಾಷ್ಟ್ರ ಮತ್ತು ಆಧ್ಯಾತ್ಮಿಕತೆಯ ಆಯಾಮಗಳಲ್ಲಿ ದೇಶದ ಜನರಿಗೆ ಮಾರ್ಗದರ್ಶನ ನೀಡುತ್ತದೆ ಎಂದು ಪ್ರಧಾನಿ ಮೋದಿ ಹೇಳಿದರು. ಈ ಕೃತಿಗಳ ಸಂಕಲನ ಕೆಲಸದ ಹಿಂದಿರುವ ತಂಡದ ಕಠಿಣ ಪರಿಶ್ರಮವನ್ನು ಪ್ರಧಾನಮಂತ್ರಿಯವರು ಶ್ಲಾಘಿಸಿದರು. ಇದೇ ವೇಳೆ, ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ʻಮಹಾಮಾನ ಮಾಳವೀಯ ಮಿಷನ್ʼ ಮತ್ತು ಶ್ರೀ ರಾಮ್ ಬಹದ್ದೂರ್ ರಾಯ್ ಅವರನ್ನು ಅಭಿನಂದಿಸಿದರು.

"ಮಹಾಮಾನರಂತಹ ವ್ಯಕ್ತಿಗಳು ಶತಮಾನಗಳಿಗೊಮ್ಮೆ ಜನಿಸುತ್ತಾರೆ ಮತ್ತು ಭವಿಷ್ಯದ ಹಲವಾರು ಪೀಳಿಗೆಗಳ ಮೇಲೆ ಅವರ ಪ್ರಭಾವವನ್ನು ಕಾಣಬಹುದು," ಎಂದು ಹೇಳಿದ ಪ್ರಧಾನಿಯವರು,  ಜ್ಞಾನ ಮತ್ತು ಸಾಮರ್ಥ್ಯದ ವಿಷಯದಲ್ಲಿ ಮಾಳವೀಯ ಅವರು ಆಗಿನ ಶ್ರೇಷ್ಠ ವಿದ್ವಾಂಸರಿಗೆ ಸಮಾನರಾಗಿದ್ದರು ಎಂದರು. "ಮಹಾಮಾನವು ಆಧುನಿಕ ಚಿಂತನೆ ಮತ್ತು ಸನಾತನ ಸಂಸ್ಕೃತಿಯ ಸಂಗಮವಾಗಿತ್ತು," ಎಂದು ಪ್ರಧಾನಿ ಹೇಳಿದರು. ಮಾಳವೀಯ ಅವರು ಸ್ವಾತಂತ್ರ್ಯ ಹೋರಾಟಕ್ಕೆ ಸಮಾನ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ರಾಷ್ಟ್ರದ ಆಧ್ಯಾತ್ಮಿಕ ಆತ್ಮವನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದು ಪ್ರಧಾನಿ ಮೋದಿ ಒತ್ತಿಹೇಳಿದರು. ಮಾಳವೀಯ ಅವರು ಇಂದಿನ ಸವಾಲುಗಳ ಮೇಲೆ ಒಂದು ಕಣ್ಣು ಮತ್ತು ರಾಷ್ಟ್ರೀಯ ಹಿತಾಸಕ್ತಿಗಳಿಗೆ ಆದ್ಯತೆ ಹೊಂದಿರುವ ಭವಿಷ್ಯದ ಬೆಳವಣಿಗೆಗಳ ಮೇಲೆ ಎರಡನೇ ಕಣ್ಣಿನ ದೃಷ್ಟಿಯನ್ನು ನೆಟ್ಟಿದ್ದರು. ಮಹಾಮಾನರು ದೇಶಕ್ಕಾಗಿ ಅತ್ಯಂತ ಸಂಪೂರ್ಣ ಶಕ್ತಿಯೊಂದಿಗೆ ಹೋರಾಡಿದರು ಮತ್ತು ಅತ್ಯಂತ ಕಷ್ಟಕರ ವಾತಾವರಣದಲ್ಲಿಯೂ ಸಾಧ್ಯತೆಗಳ ಹೊಸ ಬೀಜಗಳನ್ನು ಬಿತ್ತಿದರು ಎಂದು ಪ್ರಧಾನಿ ಶ್ಲಾಘಿಸಿದರು. ಇಂದು ಲೋಕಾರ್ಪಣೆಯಾಗುತ್ತಿರುವ ಸಮಗ್ರ ಸಂಕಲನ ಕೃತಿಯ 11 ಸಂಪುಟಗಳ ಮೂಲಕ ಮಹಾಮಾನರ ಇಂತಹ ಅನೇಕ ಕೊಡುಗೆಗಳನ್ನು ಈಗ ಅಧಿಕೃತವಾಗಿ ಬಹಿರಂಗಪಡಿಸಲಾಗುವುದು ಎಂದು ಅವರು ಒತ್ತಿ ಹೇಳಿದರು. "ಮಹಾಮಾನರಿಗೆ ಭಾರತ ರತ್ನವನ್ನು ನೀಡಿದ್ದು ನಮ್ಮ ಸರ್ಕಾರದ ಸೌಭಾಗ್ಯ" ಎಂದು ಪ್ರಧಾನಿ ಹೇಳಿದರು. ಮಹಾಮಾನನಂತೆ ತಮಗೆ ಕಾಶಿಯ ಜನರ ಸೇವೆ ಮಾಡುವ ಅವಕಾಶ ದೊರೆತಿದೆ ಎಂದೂ ಶ್ರೀ ಮೋದಿ ಹೇಳಿದರು. ತಾವು ಕಾಶಿಯಿಂದ ಚುನಾವಣೆಗೆ ಸ್ಪರ್ಧಿಸಲು ಬಂದಾಗ ಮಾಳವೀಯ ಅವರ ಕುಟುಂಬ ಸದಸ್ಯರು ತಮ್ಮ ಹೆಸರನ್ನು ಪ್ರಸ್ತಾಪಿಸಿದ್ದರು ಎಂದು ಪ್ರಧಾನಿ ನೆನಪಿಸಿಕೊಂಡರು. ಮಹಾಮಾನರಿಗೆ ಕಾಶಿಯ ಮೇಲೆ ಅಪಾರ ನಂಬಿಕೆ ಇತ್ತು. ಇಂದು ನಗರವು ಅಭಿವೃದ್ಧಿಯ ಹೊಸ ಎತ್ತರವನ್ನು ಮುಟ್ಟುತ್ತಿದೆ ಮತ್ತು ಇಂದು ಕಾಶಿಯ ಪರಂಪರಿಕ ವೈಭವವನ್ನು ಪುನಃಸ್ಥಾಪಿಸುತ್ತಿದೆ ಎಂದು ಅವರು ಒತ್ತಿ ಹೇಳಿದರು.

 

ʻಸ್ವಾತಂತ್ರ್ಯದ ಅಮೃತಕಾಲʼದಲ್ಲಿ ಭಾರತವು ಗುಲಾಮಗಿರಿಯ ಮನಸ್ಥಿತಿಯನ್ನು ತೊರೆದು ಮುನ್ನಡೆಯುತ್ತಿದೆ ಎಂದು ಪ್ರಧಾನಿ ಗಮನ ಸೆಳೆದರು. "ಮಾಳವೀಯ ಅವರ ಚಿಂತನೆಗಳ ಪರಿಮಳದ ಅನುಭವವನ್ನು ನಮ್ಮ ಸರ್ಕಾರಗಳ ಕೆಲಸಗಳಲ್ಲಿಯೂ ನೀವು ಎಲ್ಲೋ ಒಂದು ಕಡೆ ಪಡೆಯಬಹುದಾಗಿದೆ. ಮಾಳವೀಯ ಅವರು ನಮಗೆ ರಾಷ್ಟ್ರದ ದೃಷ್ಟಿಕೋನವನ್ನು ನೀಡಿದ್ದಾರೆ. ಈ ದೃಷ್ಟಿಕೋನದಲ್ಲಿ ದೇಶದ ಪ್ರಾಚೀನ ಆತ್ಮವು, ಅದರ ಆಧುನಿಕ ದೇಹದಲ್ಲಿ ಸುರಕ್ಷಿತವಾಗಿದೆ,ʼʼ ಎಂದು ಶ್ರೀ ಮೋದಿ ಹೇಳಿದರು. ಭಾರತೀಯ ಮೌಲ್ಯಗಳು ಹಾಸುಹೊಕ್ಕಾಗಿರುವ ಶಿಕ್ಷಣವನ್ನು ಮಾಳವೀಯ ಅವರು ಬೆಂಬಲಿಸಿದ್ದರು ಎಂದು ಮಾಹಿತಿ ನೀಡಿದ ಪ್ರಧಾನಿಯವರು, ಬನಾರಸ್ ಹಿಂದೂ ವಿಶ್ವವಿದ್ಯಾಲಯದ ರಚನೆ ಹಾಗೂ  ಭಾರತೀಯ ಭಾಷೆಗಳ ಬಗ್ಗೆ ಮಾಳವೀಯ ಅವರ ಸಮರ್ಥನೆಯನ್ನು ಉಲ್ಲೇಖಿಸಿದರು. "ಮಹಾಮಾನರ ಪ್ರಯತ್ನದಿಂದಾಗಿ, ʻನಾಗರಿʼ ಲಿಪಿ ಬಳಕೆಗೆ ಬಂದಿತು ಮತ್ತು ಭಾರತೀಯ ಭಾಷೆಗಳಿಗೆ ಗೌರವ ಸಿಕ್ಕಿತು. ಇಂದು, ಮಾಳವೀಯ ಜೀ ಅವರ ಈ ಪ್ರಯತ್ನಗಳು ದೇಶದ ʻಹೊಸ ರಾಷ್ಟ್ರೀಯ ಶಿಕ್ಷಣ ನೀತಿʼಯಲ್ಲಿಯೂ ಪ್ರತಿಬಿಂಬಿತವಾಗಿವೆ", ಎಂದು ಪ್ರಧಾನಿ ಹೇಳಿದರು.

"ಯಾವುದೇ ರಾಷ್ಟ್ರವನ್ನು ಬಲಪಡಿಸಬೇಕಾದರೆ, ಅದರ ಸಂಸ್ಥೆಗಳ ಬಲವರ್ಧನೆಯೂ ಸಮಾನ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಮಾಳವೀಯ ಅವರು ತಮ್ಮ ಜೀವನದಲ್ಲಿ ಇಂತಹ ಅನೇಕ ಸಂಸ್ಥೆಗಳನ್ನು ಸ್ಥಾಪಿಸಿದರು. ʻಬನಾರಸ್‌ ಹಿಂದೂ ವಿಶ್ವವಿದ್ಯಾಲಯʼದ ಜೊತೆಗೆ, ಹರಿದ್ವಾರದ ʻಋಷಿಕುಲ ಬ್ರಹ್ಮಾಶ್ರಮʼ, ಪ್ರಯಾಗ್ ರಾಜ್‌ನ ʻಭಾರತಿ ಭವನ ಪುಸ್ತಕಾಲಯʼ, ʻಸನಾತನ ಧರ್ಮ ಮಹಾವಿದ್ಯಾಲಯʼಗಳನ್ನು ಪ್ರಧಾನಮಂತ್ರಿ ಉಲ್ಲೇಖಿಸಿದರು. ಸಹಕಾರ ಸಚಿವಾಲಯ, ಆಯುಷ್ ಸಚಿವಾಲಯ, ʻಸಾಂಪ್ರದಾಯಿಕ ಔಷಧಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಜಾಗತಿಕ ಕೇಂದ್ರʼ, ʻಸಿರಿಧಾನ್ಯ ಸಂಶೋಧನಾ ಸಂಸ್ಥೆʼ, ʻಜಾಗತಿಕ ಜೈವಿಕ ಇಂಧನ ಮೈತ್ರಿಕೂಟʼ, ʻಅಂತಾರಾಷ್ಟ್ರೀಯ ಸೌರಶಕ್ತಿ ಮೈತ್ರಿಕೂಟʼ ʻವಿಪತ್ತು ಸ್ಥಿತಿಸ್ಥಾಪಕ ಮೂಲಸೌಕರ್ಯಗಳ ಒಕ್ಕೂಟʼ, ಜಾಗತಿಕ ದಕ್ಷಿಣದ ದೇಶಗಳಿಗಾಗಿ ʻದಕ್ಷಿಣ್ʼ, ʻಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ʼ, ಬಾಹ್ಯಾಕಾಶದಲ್ಲಿ ಮತ್ತು ಕಡಲ ಕ್ಷೇತ್ರದಲ್ಲಿ ʻಸಾಗರ್‌ʼ ಸೇರಿದಂತೆ ಪ್ರಸ್ತುತ ಸರ್ಕಾರದ ಅಡಿಯಲ್ಲಿ ಅಸ್ತಿತ್ವಕ್ಕೆ ಬರುತ್ತಿರುವ ಸಂಸ್ಥೆಗಳ ಪಟ್ಟಿಯನ್ನು ಪ್ರಧಾನಿ ಮೋದಿ ಉಲ್ಲೇಖಿಸಿದರು. "ಭಾರತವು ಇಂದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ಅನೇಕ ಸಂಸ್ಥೆಗಳನ್ನು ಹುಟ್ಟಿಹಾಕುತ್ತಿದೆ. ಈ ಸಂಸ್ಥೆಗಳು 21ನೇ ಶತಮಾನದ ಭಾರತಕ್ಕೆ ಮಾತ್ರವಲ್ಲದೆ 21ನೇ ಶತಮಾನದ ಜಗತ್ತಿಗೆ ಹೊಸ ದಿಕ್ಕನ್ನು ನೀಡುವ ಕೆಲಸ ಮಾಡುತ್ತವೆ," ಎಂದು ಅವರು ಹೇಳಿದರು.

 

ಮಹಾಮಾನ ಮತ್ತು ಅಟಲ್ ಜೀ ಇಬ್ಬರ ಮೇಲೂ ಪ್ರಭಾವ ಬೀರಿದ ಸಿದ್ಧಾಂತಗಳ ನಡುವೆ ಹೋಲಿಕೆ ಮಾಡಿದ ಪ್ರಧಾನಮಂತ್ರಿಯವರು, ʻಮಹಾಮಾನʼ ಅವರ ಕುರಿತಾಗಿ ಅಟಲ್ ಜೀ ಅವರ ಮಾತುಗಳನ್ನು ಸ್ಮರಿಸಿದರು. "ಒಬ್ಬ ವ್ಯಕ್ತಿಯು ಸರ್ಕಾರದ ಸಹಾಯವಿಲ್ಲದೆ ಏನನ್ನಾದರೂ ಮಾಡಲು ಹೊರಟರೆ, ಅಂಥವರ ಹಾದಿಯನ್ನು ಮಹಾಮಾನರ ವ್ಯಕ್ತಿತ್ವ ಮತ್ತು ಅವರ ಕೆಲಸವು ದಾರಿದೀಪದಂತೆ ಬೆಳಗಿಸುತ್ತದೆ" ಎಂಬ ಅಟಲ್‌ ಜೀ ಅವರ ಮಾತುಗಳನ್ನು ಶ್ರೀ ಮೋದಿ ಉಲ್ಲೇಖಿಸಿದರು. ಉತ್ತಮ ಆಡಳಿತಕ್ಕೆ ಒತ್ತು ನೀಡುವ ಮೂಲಕ ಸರ್ಕಾರವು ಮಾಳವೀಯ ಜೀ, ಅಟಲ್ ಜೀ ಮತ್ತು ಪ್ರತಿಯೊಬ್ಬ ಸ್ವಾತಂತ್ರ್ಯ ಹೋರಾಟಗಾರರ ಕನಸುಗಳು ಹಾಗೂ ಆಕಾಂಕ್ಷೆಗಳನ್ನು ನೆರವೇರಿಸಲು ಶ್ರಮಿಸುತ್ತಿದೆ ಎಂದು ಪ್ರಧಾನಿ ಪುನರುಚ್ಚರಿಸಿದರು. "ಉತ್ತಮ ಆಡಳಿತ ಎಂದರೆ ಅಧಿಕಾರ ಕೇಂದ್ರಿತವಾಗಿರದೆ ಅದು ಸೇವಾ ಕೇಂದ್ರಿತವಾಗಿರಬೇಕು" ಎಂದು ಶ್ರೀ ಮೋದಿ ಮಾತು ಮುಂದುವರಿಸಿದರು, "ಸ್ಪಷ್ಟ ಉದ್ದೇಶಗಳು ಮತ್ತು ಸೂಕ್ಷ್ಮತೆಯೊಂದಿಗೆ ನೀತಿಗಳನ್ನು ರೂಪಿಸಿದಾಗ ಮತ್ತು ಪ್ರತಿಯೊಬ್ಬ ಅರ್ಹ ವ್ಯಕ್ತಿಯು ಯಾವುದೇ ತಾರತಮ್ಯವಿಲ್ಲದೆ ತನ್ನ ಸಂಪೂರ್ಣ ಹಕ್ಕುಗಳನ್ನು ಪಡೆದಾಗ ಅದೇ ಉತ್ತಮ ಆಡಳಿತ" ಎಂದು ಶ್ರೀ ಮೋದಿ ವಿವರಿಸಿದರು. ಉತ್ತಮ ಆಡಳಿತದ ತತ್ವವು ಇಂದು ಪ್ರಸ್ತುತ ಸರ್ಕಾರದ ಹೆಗ್ಗುರುತಾಗಿ ಮಾರ್ಪಟ್ಟಿದೆ. ಈಗ ದೇಶದ ಜನರು ತಮಗೆ ದೊರೆಯಬೇಕಾದ ಮೂಲಭೂತ ಸೌಲಭ್ಯಗಳಿಗಾಗಿ ಕಚೇರಿಯಿಂದ ಕಚೇರಿಗೆ ಅಲೆಯುವ ಅಗತ್ಯವಿಲ್ಲ. ಬದಲಾಗಿ, ಫಲಾನುಭವಿಗಳ ಮನೆ ಬಾಗಿಲಿಗೇ ಸರ್ಕಾರ ತಲುಪುವ ಮೂಲಕ ಸಮಾಜದ ಅಂಚಿನಲ್ಲಿರುವ ಜನರಿಗೂ ಸೇವೆ-ಸೌಲಭ್ಯಗಳನ್ನು ತಲುಪಿಸಲು ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಒತ್ತಿ ಹೇಳಿದರು. ಸರ್ಕಾರದ ಎಲ್ಲ ಯೋಜನೆಗಳ ಪರಿಪೂರ್ಣತೆಯನ್ನು ಸಾಧಿಸುವ ಗುರಿಯನ್ನು ಹೊಂದಿರುವ ʻವಿಕಸಿತ ಭಾರತ ಸಂಕಲ್ಪ ಯಾತ್ರೆʼಯ ಬಗ್ಗೆ ಶ್ರೀ ಮೋದಿ ಪ್ರಸ್ತಾಪಿಸಿದರು. 'ಮೋದಿ ಅವರ ಗ್ಯಾರಂಟಿ' ವಾಹನದ ಪರಿಣಾಮವನ್ನು ಒತ್ತಿ ಹೇಳಿದ ಪ್ರಧಾನಮಂತ್ರಿಯವರು, ಕೇವಲ 40 ದಿನಗಳಲ್ಲಿ ಈ ಹಿಂದೆ ಅವಕಾಶವಂಚಿತರಾಗಿದ್ದವರಿಗೆ ಒಂದು ಕೋಟಿ ಹೊಸ ಆಯುಷ್ಮಾನ್ ಕಾರ್ಡ್‌ಗಳನ್ನು ಹಸ್ತಾಂತರಿಸಿದ ಬಗ್ಗೆ ಅವರು ಮಾಹಿತಿ ನೀಡಿದರು.

ಉತ್ತಮ ಆಡಳಿತದಲ್ಲಿ ಪ್ರಾಮಾಣಿಕತೆ ಮತ್ತು ಪಾರದರ್ಶಕತೆಯ ಪಾತ್ರವನ್ನು ಒತ್ತಿ ಹೇಳಿದ ಪ್ರಧಾನಿ, ಕಲ್ಯಾಣ ಯೋಜನೆಗಳಿಗಾಗಿ ಲಕ್ಷಾಂತರ ಕೋಟಿಗಳನ್ನು ಖರ್ಚು ಮಾಡುತ್ತಿರುವ ಬಗ್ಗೆ ಹಾಗೂ ಹಗರಣ ಮುಕ್ತ ಆಡಳಿತದ ಬಗ್ಗೆ ವಿವರಿಸಿದರು. ಬಡವರಿಗೆ ಉಚಿತ ಪಡಿತರಕ್ಕಾಗಿ 4 ಲಕ್ಷ ಕೋಟಿ ರೂ., ಬಡವರಿಗೆ ಶಾಶ್ವತ ಮನೆಗಳ ನಿರ್ಮಾಣಕ್ಕಾಗಿ 4 ಲಕ್ಷ ಕೋಟಿ ರೂ.ಗಳು ಮತ್ತು ಪ್ರತಿ ಮನೆಯಲ್ಲೂ ಕೊಳವೆ ನೀರಿಗಾಗಿ 3 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ಖರ್ಚು ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. "ಪ್ರಾಮಾಣಿಕ ತೆರಿಗೆದಾರರ ಪ್ರತಿ ಪೈಸೆಯನ್ನು ಸಾರ್ವಜನಿಕ ಹಿತಾಸಕ್ತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಗಾಗಿ ಖರ್ಚು ಮಾಡಿದರೆ, ಅದು ಉತ್ತಮ ಆಡಳಿತವೆನಿಸುತ್ತದೆ. ಉತ್ತಮ ಆಡಳಿತದ ಪರಿಣಾಮವಾಗಿ 13.5 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ," ಎಂದು ಅವರು ಹೇಳಿದರು.

ಸೂಕ್ಷ್ಮತೆ ಮತ್ತು ಉತ್ತಮ ಆಡಳಿತದ ಮಹತ್ವವನ್ನು ಒತ್ತಿ ಹೇಳಿದ ಪ್ರಧಾನಿ ಮೋದಿ, ʻಮಹತ್ವಾಕಾಂಕ್ಷೆಯ ಜಿಲ್ಲೆʼ ಕಾರ್ಯಕ್ರಮವು ತೀವ್ರ ಹಿಂದುಳಿದಿದಿದ್ದ 110 ಜಿಲ್ಲೆಗಳಲ್ಲಿ ಹೊಸ ಪರಿವರ್ತನೆ ತಂದಿದೆ ಎಂದು ಹೇಳಿದರು. ಈಗ ʻಮಹತ್ವಾಕಾಂಕ್ಷೆಯ ಬ್ಲಾಕ್ʼಗಳಿಗೆ ಅದೇ ಗಮನವನ್ನು ನೀಡಲಾಗುತ್ತಿದೆ  ಎಂದು ಅವರು ಹೇಳಿದರು.

 

ಗಡಿ ಪ್ರದೇಶಗಳ ಅಭಿವೃದ್ಧಿಗೆ ಆದ್ಯತೆ ನೀಡುವ ʻರೋಮಾಂಚಕ ಗ್ರಾಮ ಯೋಜನೆʼಯ ಬಗ್ಗೆ ಉಲ್ಲೇಖಿಸುತ್ತಾ, "ಚಿಂತನೆ ಮತ್ತು ಕಾರ್ಯವಿಧಾನ ಬದಲಾದಾಗ, ಫಲಿತಾಂಶಗಳೂ ಬದಲಾಗುತ್ತವೆ," ಎಂದು ಪ್ರಧಾನಿ ಹೇಳಿದರು. ನೈಸರ್ಗಿಕ ವಿಪತ್ತುಗಳು ಅಥವಾ ತುರ್ತು ಸಂದರ್ಭಗಳಲ್ಲಿ ಪರಿಹಾರ ಕಾರ್ಯಗಳನ್ನು ಒದಗಿಸುವಲ್ಲಿ ಸರ್ಕಾರದ ದೃಢವಾದ ಕಾರ್ಯವಿಧಾನವನ್ನು ಅವರು ಎತ್ತಿ ತೋರಿದರು. ಕೋವಿಡ್ ಸಾಂಕ್ರಾಮಿಕ ಮತ್ತು ಉಕ್ರೇನ್ ಯುದ್ಧದ ಸಮಯದಲ್ಲಿ ಪರಿಹಾರ ಕ್ರಮಗಳ ಉದಾಹರಣೆಯನ್ನು ನೀಡಿದರು. "ಆಡಳಿತದಲ್ಲಿನ ಬದಲಾವಣೆ ಈಗ ಸಮಾಜದ ಚಿಂತನೆಯನ್ನೂ ಬದಲಾಯಿಸುತ್ತಿದೆ," ಎಂದು ಪ್ರಧಾನಿ ಹೇಳಿದರು. "ಈ ನಂಬಿಕೆಯು ದೇಶದ ಜನರ ಆತ್ಮವಿಶ್ವಾಸದಲ್ಲಿ ಪ್ರತಿಫಲಿಸುತ್ತದೆ. ಜೊತೆಗೆ, ʻಸ್ವಾತಂತ್ರ್ಯದ ಅಮೃತ್ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತವನ್ನು ನಿರ್ಮಿಸಲು ಈ ನಂಬಿಕೆಯೇ ಪ್ರಬಲ ಶಕ್ತಿಯಾಗುತ್ತಿದೆ," ಎಂದು ಶ್ರೀ ಮೋದಿ ಹೇಳಿದರು.

ತಮ್ಮ ಭಾಷಣವನ್ನು ಮುಗಿಸುವ ಮುನ್ನ ಪ್ರಧಾನಮಂತ್ರಿಯವರು, ಮಹಾಮಾನ ಮತ್ತು ಅಟಲ್ ಜೀ ಅವರ ಚಿಂತನೆಗಳನ್ನು ಆಧಾರಸ್ತಂಭವಾಗಿ ಪರಿಗಣಿಸುವ ಮೂಲಕ ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸು ಮಾಡುವಂತೆ ಕರೆ ನೀಡಿದರು. ದೇಶದ ಪ್ರತಿಯೊಬ್ಬ ನಾಗರಿಕರು ದೃಢನಿಶ್ಚಯದಿಂದ ಯಶಸ್ಸಿನ ಹಾದಿಗೆ ಕೊಡುಗೆ ನೀಡುತ್ತಾರೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಶ್ರೀ ಅನುರಾಗ್ ಸಿಂಗ್ ಠಾಕೂರ್, ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಶ್ರೀ ಅರ್ಜುನ್ ರಾಮ್ ಮೇಘವಾಲ್, ʻಮಹಾಮಾನ ಮಾಳವೀಯ ಮಿಷನ್ʼ ಕಾರ್ಯದರ್ಶಿ ಶ್ರೀ ಪ್ರಭುನಾರಾಯಣ್ ಶ್ರೀವಾಸ್ತವ್ ಮತ್ತು ʻಪಂಡಿತ್ ಮದನ್ ಮೋಹನ್ ಮಾಳವೀಯ ಸಮಗ್ರ ಕೃತಿ ಸಂಕಲನʼ ಮುಖ್ಯ ಸಂಪಾದಕ ಶ್ರೀ ರಾಮ್ ಬಹದ್ದೂರ್ ರಾಯ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಹಿನ್ನೆಲೆ

ದೇಶ ಸೇವೆಗೆ ಅಪಾರ ಕೊಡುಗೆ ನೀಡಿದ ಸ್ವಾತಂತ್ರ್ಯ ಹೋರಾಟಗಾರರಿಗೆ ʻಸ್ವಾತಂತ್ರ್ಯದ ಅಮೃತ ಕಾಲʼದಲ್ಲಿ ಸೂಕ್ತ ಮಾನ್ಯತೆ ನೀಡುವುದು ಪ್ರಧಾನ ಮಂತ್ರಿಯವರ ಆಶಯವಾಗಿದೆ. 'ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಸಮಗ್ರ ಕೃತಿ ಸಂಕಲನʼ ಈ ದಿಕ್ಕಿನಲ್ಲಿ ಒಂದು ಪ್ರಯತ್ನವಾಗಿದೆ.

 

ಸುಮಾರು 4,000 ಪುಟಗಳನ್ನು ಹೊಂದಿರುವ, 11 ಸಂಪುಟಗಳ ಈ ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಕೃತಿಯು ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಬರಹಗಳು ಮತ್ತು ಭಾಷಣಗಳ ಸಂಗ್ರಹವಾಗಿದೆ. ಇವುಗಳನ್ನು ದೇಶದ ಮೂಲೆ ಮೂಲೆಗಳಿಂದ ಸಂಗ್ರಹಿಸಲಾಗಿದೆ. ಮಾಳವೀಯ ಅವರ ಟಿಪ್ಪಣಿಗಳು ಸೇರಿದಂತೆ ಅಪ್ರಕಟಿತ ಪತ್ರಗಳು, ಲೇಖನಗಳು ಮತ್ತು ಭಾಷಣಗಳು; 1907ರಲ್ಲಿ ಅವರು ಪ್ರಾರಂಭಿಸಿದ ಹಿಂದಿ ವಾರಪತ್ರಿಕೆ 'ಅಭ್ಯುದಯ'ದ ಸಂಪಾದಕೀಯ; ಅವರು ಕಾಲಕಾಲಕ್ಕೆ ಬರೆದ ಲೇಖನಗಳು, ಕರಪತ್ರಗಳು ಮತ್ತು ಕಿರುಪುಸ್ತಕಗಳು; 1903 ಮತ್ತು 1910ರ ನಡುವೆ ಆಗ್ರಾ ಮತ್ತು ಅವಧ್ ಸಂಯುಕ್ತ ಪ್ರಾಂತ್ಯಗಳ ವಿಧಾನ ಪರಿಷತ್ತಿನಲ್ಲಿ ಅವರು ಮಾಡಿದ ಎಲ್ಲಾ ಭಾಷಣಗಳು; ʻರಾಯಲ್ ಕಮಿಷನ್ʼ ಮುಂದೆ ನೀಡಿದ ಹೇಳಿಕೆಗಳು; 1910 ಮತ್ತು 1920ರ ನಡುವೆ ʻಇಂಪೀರಿಯಲ್ ಲೆಜಿಸ್ಲೇಟಿವ್ ಕೌನ್ಸಿಲ್‌ʼನಲ್ಲಿ ಮಸೂದೆಗಳನ್ನು ಮಂಡಿಸುವಾಗ ಮಾಡಿದ ಭಾಷಣಗಳು; ಬನಾರಸ್ ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯ ಮೊದಲು ಮತ್ತು ನಂತರ ಬರೆದ ಪತ್ರಗಳು, ಲೇಖನಗಳು ಮತ್ತು ಭಾಷಣಗಳು; ಮತ್ತು 1923 ಮತ್ತು 1925 ರ ನಡುವೆ ಅವರು ಬರೆದ ಡೈರಿ ಎಲ್ಲವನ್ನೂ ಈ ಸಂಪುಟಗ ಸರಣಿಯು ಒಳಗೊಂಡಿದೆ.

ಪಂಡಿತ್ ಮದನ್ ಮೋಹನ್ ಮಾಳವೀಯ ಅವರು ಬರೆದ ಮತ್ತು ಮಾತನಾಡಿದ ದಾಖಲೆಗಳನ್ನು ಸಂಶೋಧಿಸುವ ಮತ್ತು ಸಂಕಲಿಸುವ ಕೆಲಸವನ್ನು ʻಮಹಾಮಾನ ಮಾಳವೀಯ ಮಿಷನ್ʼ ಮಾಡಿದೆ. ಇದು ಮಹಾಮಾನ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಆದರ್ಶಗಳು ಮತ್ತು ಮೌಲ್ಯಗಳನ್ನು ಪ್ರಚಾರ ಮಾಡಲು ಮೀಸಲಾಗಿರುವ ಸಂಸ್ಥೆಯಾಗಿದೆ. ಖ್ಯಾತ ಪತ್ರಕರ್ತ ಶ್ರೀ ರಾಮ್ ಬಹದ್ದೂರ್ ರಾಯ್ ನೇತೃತ್ವದ ಈ ಸಂಸ್ಥೆಯ ಸಮರ್ಪಿತ ತಂಡವು ಭಾಷೆ ಮತ್ತು ಪಠ್ಯವನ್ನು ಬದಲಾಯಿಸದೆ ಪಂಡಿತ್ ಮದನ್ ಮೋಹನ್ ಮಾಳವೀಯ ಅವರ ಮೂಲ ಸಾಹಿತ್ಯದ ಮೇಲೆ ಕೆಲಸ ಮಾಡಿದೆ. ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಡಿಯಲ್ಲಿ ಬರುವ ಪ್ರಕಾಶನ ವಿಭಾಗವು ಈ ಪುಸ್ತಕಗಳನ್ನು ಪ್ರಕಟಿಸಿದೆ.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ನವೆಂಬರ್ 2024
November 21, 2024

PM Modi's International Accolades: A Reflection of India's Growing Influence on the World Stage